ಕುಂ ವೀ ಬರೆದ ನೀಳ್ಗತೆ ’ಪಿಂಚಣಿ’

ಕುಂ ವೀರಭದ್ರಪ್ಪ

(ಇಲ್ಲಿಯವರೆಗೆ)


ತನ್ನತ್ತ ಹೆಜ್ಜೆ ಸದ್ದು ಕೇಳಿಸಿದಂತೆಯೂ, ಸಿಲವಾರ ತಟ್ಟೆಯನ್ನು ಕುಕ್ಕಿದಂತೆಯೂ, ಈ ಮೀನನ್ನ ನೀನೇ ತಿಂದ್ಕಾ ಎಂದಂತೆಯೂ, ಅಲ್ಲಿತನಕ ನೀರು ಚುಮುಕಿಸ್ತಾ ಇರು ಎಂದಂತೆಯೂ, ಲಟ್ಟಿಗೆ ಮುರಿದು ಹೋದಂತೆಯೂ ಕಂಡ ದೃಶ್ಯ ಕನಸೋ ನನಸೋ ಎಂದು ತಿಳಿಯಲಾರದೆ ಸೊಲುಪ ಹೊತ್ತು ಒದ್ದಾಡಿತು, ಬಳಿಕ ಕಣ್ಣು ತೆರೆದು ನೋಡುತ್ತದೆ ತನ್ನೆದುರಿಗೆ ಮೀನಿರುವುದು, ಅದಿನ್ನೂ ಬದುಕಿರುವುದು! ಯಾರು ತಂದಿಟ್ಟು ಹೋದರು ಎಂದು ಕತ್ತು ಚಾಚಿ ನೋಡುವ ಮೊದಲು ಹುಬ್ಬಿನ ಮೇಲೆ ಬಲಂಗೈಯನ್ನಿರಿಸಿಕೊಂಡಿತು. ಅಡುಗೆ ಮಾಡಿ ಮಕ್ಕಳಿಗಿಡು ಎಂದು ಹೇಳಲೆಂದು ತೆರೆದ ಬಾಯಿ ಹಾಗೆಯೇ ತೆರೆದಿತ್ತು. ಕೆಂದಾಕಳ ಬಣ್ಣದ ಸೀರೆಯಷ್ಟೇ ಕಾಣಿಸಿತು, ಜೊತೆಗೆ ರಪ್ಪನೆ ಮುಚ್ಚಿಕೊಂಡ ಬಾಗಿಲು. ಬಿಡಲಿದ್ದ ನಿಟ್ಟುಸಿರನ್ನು ಉಪಕ್ರಮಿಸಿಕೊಳಂಡಿತು, ತಾಟಿನ ಕಡೆ ದೃಷ್ಟಿ ಹಾಯಿಸಿತು, ಇನ್ನೇನದರ ಪ್ರಾಣಪಕ್ಷಿ ಹಾರಿ ಹೋಗಲಿರುವುದನ್ನು ಗ್ರಹಿಸಿ ಕೂಡಲೆ ತಂಬಿಗೆಯೊಳಗಿದ್ದ ನೀರನ್ನು ಅದರ ಮೇಲೆ ಚಿಮುಕಿಸಿತು, ಪ್ರಾಣವನ್ನು ಆವಹಿಸಿಕೊಂಡ ಗೌರಿ ದಣಿದಿರುವಂತೆ ಗೋಚರಿಸಿತು, ಪುಣ್ಯ ಬರಲಿ ತಾಯಿ ಎಂದು ಹೇಳಿದಂತೆಯೂ, ಪಿಳಿಪಿಳಿ ಕಣ್ಣುಬಿಟ್ಟು ನೋಡಿ ತನ್ನ ಕಡೆ ಹರಸಿದಂತೆಯೂ! ಗೌರಿಯ ಹಸಿವನ್ನು ಅರ್ಥಮಾಡಿಕೊಂಡ ನಾಯಿಗಳೂ ಹಸಿದಿದ್ದವು, ಸಚರಾಚರವೂ ಹಸಿದಿತ್ತು, ಎಲ್ಲಾ ಬಗೆಯ ಹಸಿವು ಮುದುಕಿಯನ್ನು ಸಂತೈಸುತ್ತಿರುವುದೆಂದು ಅರ್ಥಮಾಡಿಕೊಂಡ ವಾತಾವರಣ ತನ್ನ ಬಿಗುವನ್ನು ತಿಳಿಗೊಳಿಸಿಕೊಂಡ ಕಾರಣಕ್ಕೆ ಗಾಳಿಯೂ ಬೀಸಿತು, ಹಿಂಬದಿಯಲ್ಲಿದ್ದ ಬೇವಿನಮರದ ಕೊಂಬೆರೆಂಬೆಗಳು ಮೆಲ್ಲಗೆ ಅಲುಗಾಡಲಾರಂಭಿಸಿದವು. ತನ್ನ ಮೊಮ್ಮಕ್ಕಳು ಉಂಡವೋ ಉಪವಾಸವಿರುವವೋ! ಫಳಾರದ ಪೊಟ್ಟಣವನ್ನಾದರೂ! ಅಯ್ಯೋ ಶಿವನೆ! ಆದರೆ ಈ ಕಾಮನ್ ಸೆನ್ಸ್!
ಹಿಂದಲ ಮನೆಯವರು ಮುಂದಿನ ಮನೆಯವರನ್ನೂ ಮುಂದಿನ ಮನೆಯವರು ಹಿಂದಲ ಮನೆಯವರನ್ನೂ! ಸಾಪಳಿಕೆಯ ಶಬ್ದಗಳೂ ನಾಚಿದವು ತಮ್ಮನ್ನು ಹೀನಾಯವಾಗಿ ಬಳಸುತ್ತಿರುವ ರೀತಿಗೆ!
ಮುದುಕಿ ಇರದಿದ್ದ ನೀರನ್ನು ಕಣ್ಣಲ್ಲಿ ತುಂಬಿಕೊಳ್ಳಲು ಪ್ರಯತ್ನಿಸಿತು,ಹಳಿದರೆಲ್ಲಿ ತನ್ನ ಪ್ರಾರಾಬ್ಧ ತನ್ನ ಮೇಲೆ ಮುನಿಸಿಕೊಳ್ಳುವುದೋ ಎಂದು ಹೆದರಿದಳು,ಈಗಲಾದರೂ ತಮ್ಮನ್ನು ನೆನಪಿಸಿಕೊಂಡು ಹಗುರಾಗುವಂತೆ ನೆನಪುಗಳು ಮನವಿ ಮಾಡಿಕೊಂಡವು,ಹೌದು! ಆದರೆ ಆ ಒಂದೊಂದು ನೆನಪಿನ ಮೊಟ್ಟೆಯಲ್ಲಿ ಹತ್ತಾರು ಸಂಕಟಗಳಿವೆ, ಹಳೆಗಾಯಗಳಿವೆ, ಎಷ್ಟು ಪ್ರಯತ್ನಿಸಿದರೂ ಅವುಗಳ ಒತ್ತಾಯಕ್ಕೆ ಮಣಿಯದಿರಲು ಮುದುಕಿಗೆ ಸಾಧ್ಯವಾಗಲಿಲ್ಲ. ತನ್ನ ತವರಾದ ತುಂಬರಗುದ್ದಿಯನ್ನೂ, ತನ್ನ ಹೆತ್ತವರನ್ನೂ, ತನ್ನ ಒಡಹುಟ್ಟಿದವರನ್ನೂ, ಉಪವಾಸ ವನವಾಸದ ದಿವಸಗಳನ್ನೂ, ತನ್ನನ್ನು ಕೊಟ್ಟ ಮನೆಯನ್ನೂ, ವರ್ತಮಾನದ ಸಿಟ್ಟನ್ನು ಹೊಡೆಯುವುದರ ಮೂಲಕ ತೀರಿಸಿಕೊಳ್ಳುತ್ತಿದ್ದ ತನ್ನ ಗಂಡನನ್ನೂ, ಬಡತನದ ಮೇಲೆ ಸೇಡು ತೀರಿಸಿಕೊಳ್ಳಲೆಂದೇ ಹುಟ್ಟಿದ ಮಕ್ಕಳನ್ನೂ, ಎವ್ವೋ ನೀನು ನಮ್ಮನ್ನು ಕೈಬಿಡಬ್ಯಾಡ ಎಂಬ ಮಕ್ಕಳ ಮೊರೆಯನ್ನೂ, ಅವುಗಳಿರುವ ಊರುಗಳನ್ನೂ, ಒಂದು ಹೊತ್ತಿನ ಕೂಳಿನ ಸಲುವಾಗಿ ನಾನಾ ತಿಪ್ಪಲು ಅನುಭವಿಸುತ್ತಿರುವ ಅವರವರ ಗಂಡಂದಿರನ್ನೂ,ಅಕಾಲ ಮರಣಕ್ಕೆ ತುತ್ತಾಗಲು ಸನ್ನದ್ದರಾಗಿರುವ ತನ್ನ ಮೊಮ್ಮಕ್ಕಳನ್ನೂ, ಹೀಗೆ ಗೋಚರಿಸಿ ಹಾಗೆ ಮರೆಯಾಗುವ ಸಾವನ್ನೂ!
ಕರುಳು ಕಿತ್ತು ಬಾಯಿಗೆ ಬಂದಂತಾಯಿತು ಮುದುಕಿಗೆ, ತನ್ನ ಶರೀರದಲ್ಲಿ ಅಳಿದುಳಿದಿದ್ದ ಒಂದು ಹಿಡಿ ರಕ್ತ ಕಣ್ಣೀರಾಗಿ ಮಾರ್ಪಟ್ಟಿತು, ಹೋ ಎಂದು ಅಳಲುಪಕ್ರಮಿಸಿತು ತನಗರಿವಿಲ್ಲದಂತೆ, ದುಕ್ಕ ಕೇಳಿಸಿಕೊಂಡರೆಲ್ಲಿ ನೆರೆಹೊರೆಯವರ ನೆಮ್ಮದಿಗೆ ಭಂಗವೊದಗುವುದೋ! ಮಕ್ಕಳು ಸೊಸೆಯಂದಿರು,ತಾನು ಬದುಕಿರುವುದನ್ನು ಖಾತ್ರಿಪಡಿಸಿಕೊಂಡು ನಿರಾಶರಾಗುವರೋ! ತನ್ನ ತಿಂಡಿಯ ಫಲಾನುಭವಿಗಳಾದ ಮೊಮ್ಮಕ್ಕಳು ಭವಿಷ್ಯದ ಮೇಲೆ ಭರವಸೆ ಕಳೆದುಕೊಂಡು ಮಂಕಾಗುವರೋ ಎಂಬ ಅಂಜಿಕೆಯಿಂದ. ದುಕ್ಕವನ್ನು ಒಡನೆಯೇ ಉಪಸಂಹರಿಸಿಕೊಂಡಿತು.
ತನ್ನ ಅಸ್ತಿತ್ವ ಮೀನಿನ ಅಳಿವು ಉಳಿವನ್ನು ಅವಲಂಭಿಸಿರುವುದು! ಯಾಕೋ ಅನ್ನಿಸಿತು ತನಗೆ, ಅಂಥ ದುಕ್ಕದಲ್ಲೂ ಬೆಚ್ಚಿಬಿತ್ತು, ಪರಾವರ್ತಿತ ಪ್ರತಿಕ್ರಿಯೆಗೆ ಒಳಪಟ್ಟಿತು, ತನ್ನೊಂದು ಕೈಯಿಂದ ನೀರು ತಗೊಂಡಿತು, ಸಾಯಲಿದ್ದ ಮತ್ಸ್ಯದ ಮೇಲೆ ಸಿಂಪಡಿಸಿತು, ಮಿಸುಕಲಾರಂಭಿಸಿದ ಅದರ ಬಾಲವೋ, ಅರುಂಧತಿ ನಕ್ಷತ್ರದಂಥ ಅದರ ಪಿಳಿಪಿಳಿ ಕಣ್ಣುಗಳೋ! ಅದು ರಸೂಲನ ಪ್ರತಿನಿಧಿಯಂತೆ ಭಾಸವಾಯಿತು, ಬೇಟೆಯಾಡಲು ಹೋಗಿ ಹಂದಿಯ ಕೋರೆ ಹಲ್ಲುಗಳ ತಿವಿತಕ್ಕೆ ಕಾಡಿನಲ್ಲಿ ಸತ್ತು ಕಾಡಿನಲ್ಲಿಯೇ ಕಾಣೆಯಾದ ತನ್ನ ಕೊನೆ ಮೈದುನ ಚಂದ್ರನೂ ರಸೂಲನೂ ಸೊಲುಪ ಹೆಚ್ಚು ಕಡಿಮೆ ಒಂದೇ ವಾರಿಗೆಯವರು, ಅದ್ಯಾವ ಜಲುಮದಲ್ಲಿ ತನ್ನ ಗಂಡ ರಸೂಲನ ರಿಣದಲ್ಲಿದ್ದನೋ, ರಸೂಲನೇ ತನ್ನ ಗಂಡನ ರಿಣದಲ್ಲಿದ್ದನೋ! ಈತನೇ ಹೋದ ಜಲುಮದಲ್ಲಿ ತುರುಕನಾಗಿದ್ದನೋ, ಆತನೇ ಹೋದ ಜಲುಮದಲ್ಲಿ ತಮ್ಮ ಜಾತಿಯವನಾಗಿದ್ದನೋ! ಬಡೇಲಡಕಿಗೆ ಬಂದಾಗಲೆಲ್ಲ ಈತ ತನ್ನ ಕಷ್ಟುಸುಖ ಹೇಳಿಕೊಳ್ಳುವುದು, ಹಗರಿ ಸಾಲಿಗೆ ಹೋದಾಗಲೆಲ್ಲ ಆತ ತನ್ನ ಕಷ್ಟಸುಖ ಹೇಳಿಕೊಳ್ಳುವುದು! ನೋಡಿದೋರು ಯ್ಯೋನ್ರಪ್ಪೋ ನೀವಿಬ್ರು ಒಂದೇ ಹೊಟ್ಟೀಲಿ ಹುಟ್ಟಿದೋರಿದ್ದಂಗದೀರಲ್ಲ, ಏನಿದರ ಮರುಮ ಎಂದು ಕೇಳಿ ಬೆರಗಾಗುತ್ತಿದ್ದುಂಟು. ಹ್ಹಾಹ್ಹಾ ರಸೂಲನೇ ನೀನೇನಾರ ಇರದಿದ್ದ ಪಕ್ಸದಲ್ಲಿ ನಾನ್ ಸತ್ ಏಸು ವರುಸಾಗಿರುತ್ತಿದ್ವೋ, ಈ ಜಲುಮದಾಗ ನಿನ್ನ ರಿಣ ಹೆಂಗಪ್ಪಾ ತೀರಿಸೋದು, ಎಂದು ಮುದುಕಿ ಪುನಃ ಕಣ್ಣುಗಳನ್ನು ತೇವ ಮಾಡಿಕೊಳ್ಳಲು ಪ್ರಯತ್ನಿಸಿತು,ಆ ಧಡೂತಿ ಸರೀರಿಯನ್ನು ಎದೆಯಲ್ಲಿ ಮೂಡಿಸಿಕೊಂಡು ನಿಟ್ಟುಸಿರು ಬಿಟ್ಟಿತು, ತನ್ನ ಬದುಕನ್ನು ಹಾರೈಸುತ್ತಿರುವ ಮೀನಿದ್ದ ಚರಕಲಿಗೆ ತಾನು ಕುಡಿಯಬೇಕೆಂದಿದ್ದ ನೀರನ್ನು ಸುರಿಯಿತು.
ಆ ದಿವಸ ತನಗೆಂದೇ ತಂದಿದ್ದ ಬಿರಿಯಾನಿಯನ್ನು ಕೊಟ್ಟ ಬಳಿಕ “ಅವ್ವಾ ಈ ತುರುಕರೋನು ಹಿಂಗ ಹೇಳ್ತಾನಂತ ತೆಪ್ ತಿಳೀಬ್ಯಾಡ, ನೀನ್ ಗಂಡ ಸತ್ತಾಕಿ, ಮದ್ವಿ ಆದ ಮ್ಯಾಕೆ ಮಕ್ಳು ಮಕ್ಳಲ್ಲವ್ವ, ಅವರವ್ರ ಹೆಂಡ್ರ ಗಂಡ್ರು,ನಮ್ಮಂಥ ಮುದುಕ್ರು ಯಾವಾಗ ಸಾಯ್ತಾರಂತ ಕಾಯ್ತಾರೆ, ನಮ ಕೈಯಾಗೆ ನಾಕ್ಕಾಸಿದ್ರೆ ದಾರೀಲಿ ಹೋಗೋ ಹೆಣಾನು ಮಾತಾಡಿಸ್ತದೆ, ಅದ್ಕೆ ನಾನೊಂದು ಪಿಲಾನ್ ಮಾಡೀನಿ” ಎಂದು ಕರುಳು ಚುರುಕ್ನೆನ್ನುವಂತೆ ಹೇಳಿದ್ದಿನ್ನೂ! ಇನ್ನೊಂದಿನ ತನ್ನ ಕೂಡೆ ಕರಕೊಂಡು ಬಂದಿದ್ದವರು ಕೊಳವೆ ಚಲ್ಲಾಣ ಉಟುಕೊಂಡಿದ್ದರು, ಯಾವ್ಯಾವುದೋ ಹಾಳೆಗಳ ಮೂಲೆಮುರುಕಟ್ಟುಗಳಲ್ಲಿ ತನ್ನಿಂದ ಹೆಬ್ಬೆಟ್ಟು ಗುರುತು ಒತ್ತಿಸಿಕೊಂಡರು,
ನಾಕಾರು ದಿವಸ ಕಳೆದಾದ ಬಳಿಕ ತನ್ನ ವಾರಿಗೆಯವರಾದ ಸುಂಕಲಿ ಕಂದಾರಿ, ಚವುಡಿ ಸಿದ್ದಿ ನಿಂಗಿ ಒಬ್ಬರ ಹಿಂದೊಬ್ಬರಂತೆ ಬಂದು ಹಸಿಹಸಿ ಮಸಿಗುರುತು ಇದ್ದ ತಮ್ಮತಮ್ಮ ಹೆಬ್ಬೊಟ್ಟುಗಳನ್ನು ತೋರಿಸಿದರು, ನೂರಾರ್ರುಪಾಯಿ ಬತ್ತದವ್ವಾ ಎಂದು ಕಿವಿಯಾಗ ಬಾಯಿಟ್ಟು ಪಿಸುಗುಟ್ಟಿದರು, ರೊಕ್ಕ ಕಂಡ್ರೆ ಬಾಡ್ಯಾರು ಸುಮ್ಮಕಿದ್ದಾರ, ನಮ್ ಗುಟ್ಟು ನಮ್ಮಲ್ಲಿರಲಿ, ಯಾರಿಗೂ ಹೇಳೋದು ಬ್ಯಾಡ, ಯಾರನ್ನೂ ಕೇಳೋದು ಬ್ಯಾಡ ಎಂದು ತಮಗೆ ತಾವೆ ಬುದ್ದಿ ಹೇಳಿಕೊಂಡರು.
ಇಷ್ಟುದ್ದ ಅಷ್ಟಗಲವಿರೋ ಬಡೇಲಡಕಿನಲ್ಲಿ ಒಬ್ಬರು ಹೂಸುಬಿಟ್ಟರೆ ಸಮಸ್ತ ಮಂದಿ ಮೂಗು ಮುಚ್ಚಿಕೊಂತಾರೆ, ಅಂಥಾದ್ದರಲ್ಲಿ ಗೋರುಮೆಂಟಿನ ರೊಕ್ಕದ ಗುಟ್ಟು ಗುಟ್ಟಾಗಿರುವುದು ಹೇಗೆ ಸಾಧ್ಯ? ಸಮಸ್ತ ಬಾಯಿಗಳು ಮಾತಾಡಿಕೊಂಡವು, ಸಮಸ್ತ ಕಿವಿಗಳು ಕೇಳಿಸಿಕೊಂಡವು, ಆಯಾ ವಾರಸುದಾರರು ಸಂಭವನೀಯ ವೃದ್ದ ಫಲಾನುಭವಿಗಳನ್ನು ತಮ್ಮತಮ್ಮ ನಾಲಗೆಗಳೆಂಬ ಕರಿಗಂಬಳಿ ಗದ್ದುಗೆಗಳ ಮೇಲೆ ಕುಂಡ್ರಿಸಿಕೊಂಡರು, ಹೆಸರುಗಳನ್ನು ಮೆರೆಸಿದರು, ಸಂಬಂಧವಾಚಕಗಳು ಹುಗ್ಗಿಯ ಹೊಳೆಯೋಪಾದಿಯಲ್ಲಿ ಹರಿದಾಡಿತು. ಆ ಒಂದು ದಿವಸ..
ಕರಿಗಡಬಿನೊಂದಿಗೆ ದೊಡ್ಡ ಸೊಸೆ ಈರಕ್ಕ ಒಂದು ಕಡೆಯಿಂದಲೂ, ಉಪ್ಪಿಟ್ಟು ಚಿತ್ರಾನ್ನದೊಂದಿಗೆ ಸಣ್ಣಸೊಸೆ ಮಾಯಿಯೂ, ಇನ್ನು ಮುಂದ ನೀನೊಬ್ಬಾಕಿನೆ ಈ ನೆರಕಿ ಸಂದ್ಯಾಗ ಇರೋದು ಬ್ಯಾಡ, ನಮ್ಮೊಟ್ಟಿಗಿರು ಎಂದನಕಂತ ಒಂದು ಕಡೆಯಿಂದ ಹಿರೇಮಗ ಕೆಂಚನೂ, ನಾವುಪಾಸ ಇದ್ದಾದ್ರು ನಿನ್ ಹೊಟ್ಟಿಬಟ್ಟಿ ನೋಡ್ಕಂತೀವಿ, ಮಮ್ಮಕ್ಕಳ ಕೂಡೆ ಆಡ್ಕಂತ ಬೇಸಿರುವಂತಿ ನಮ್ಮನೀಗೆ ಬಾ ಎವ್ವಾ ಎಂದನಕಂತ ಇನ್ನೊಂದು ಕಡೆಯಿಂದ ಕೊನಿ ಹುಟ್ಲು ಅಟುಬಿಯೂ ಬಂದರು, ಹೇಳೋಕ್ಕೂ ಕೇಳೋಕ್ಕೂ ಮೊದಲೆ ಒಬ್ಬರಿಗೊಬ್ಬರು ಕಿತ್ತಾಡಿದರು, ತನ್ನ ಸವಕಲು ಕೈಹಿಡಿದು ಎಳೆದಾಡಿದರು, ಸತ್ತುಗಿತ್ತೇನು, ನನ್ ಪಾಡಿಗೆ ನನ್ನ ಬುಡ್ರೋ ಎಂದು ಗೋಗೆರೆದರೂ ಕೇಳಿಸಿಕೊಳ್ಳಲಿಲ್ಲ. ಕೊನೀಕೆ ಅವರವರ ನಡುವೆ ರಾಜಿಕಬೂಲಿಗೆ ಬಂದವರೆ..
ಒಂದು ವಾರ ಕೆಂಚನ ಮನೆಯಲ್ಲೂ, ಇನ್ನೊಂದು ಅಟುಬಿಯ ಮನೆಯಲ್ಲೂ! ಅತ್ತ ಅವರಷ್ಟಕ್ಕ ಅವರೇ ಹೋಗೋದು, ಅಂಬಣ್ಣಾಚಾರಿಯನ್ನು ಕಂಡು ಪಿಂಚಣಿ ಕುರಿತು ವಿಚಾರಿಸೋದು, ಇತ್ತ ಸೊಸ್ತೇರು ಎತ್ತೇ ನಮಗೇಟು ಕೊಡುತಿ, ನಿನ್ನ ಮಮ್ಮಕ್ಕಳಿಗೇಟು ಕೊಡುತಿ ಎಂದು ತಲೆ ತಿನ್ನೋದು!

ಆ ಮುದುಕಿಗಾಟು ಬಂತು, ಈ ಮುದುಕಿಗೀಟು ಬಂತು! ಇನ್ನು ತನ್ನದೊಂದೆ ಬರೋದು ಬಾಕಿ ಉಂಟೆನ್ನುವಾಗ ಅಲಬೂರಿನಿಂದ ಗಂಡ ಸತ್ತ ಮಗಳು ಚಂದ್ರಿಯೂ, ಕಣಕುಪ್ಪಿಯಿಂದ ಗಂಡ ಬಿಟ್ಟ ಇನ್ನೊಬ್ಬ ಮಗಳು ರುದ್ರಿಯೂ ಬಂದಬಂದವರೆ ಕಣ್ಣೀರ ಕೋಡಿ ಹರಿಸಿದರು, ಹಡದಾಕಿ ಆಸರೆಯಾಗದಿದ್ರ ನಾವ್ ನಮ್ಮಕ್ಕಳಮರಿ ಕಟಕೊಂಡು ಹಾಳುಭಾವಿ ನೋಡಕಂತೀವಿ ಎಂದು ದುಕ್ಕ ತೋಡಿಕೊಂಡರು.ಅವರ ದುಕ್ಕದ ಹೇಳಿಕೆಯಲ್ಲಿ ತಾರಾತಿಗಡಿ ಇರಲಿಲ್ಲ,ಗಂಡಂದಿರಿಲ್ಲದ ಹೆಣುಮಕ್ಕಳು ಇಟ್ಟ ಮನೆಯಲ್ಲಾಗಲೀ ಕೊಟ್ಟ ಮನೆಯಲ್ಲಾಗಲೀ ಸುಖವಾಗಿಲ್ಲದ ಆ ತನ್ನ ಹೆಣ್ಣುಮಕ್ಕಳು ಮಾಡಿರುವ ಪಾಪವಾದರೂ ಏನು ದೇವರೆ! ಮಮ್ಮಲನೆ ಮರುಗಿದಳು,, ಯಾರು ಏನೇ ಅಂದುಕೊಂಡರೂ ಸರಿಯೆ!
ಅದಾದ ಮಾರನೆ ದಿವಸ ಆಂಜನೇಯ ದೇವಸ್ಥಾನದಲ್ಲಿ ತನ್ನ ಕೈಗೆ ಪ್ರಸಾದ ಹಾಕುತ್ತ ಅಂಬಣ್ಣಾಚಾರಿ “ಅಜ್ಜೀ ಸ್ವಲ್ಪದಿವಸದಲ್ಲಿ ಒಟ್ಟಿಗೆ ಐದಾರು ತಿಂಗಳ ಪಿಂಚಣಿ ಬರತದೆ, ಬಡಬ್ರಾಹ್ಮಣ, ಮಕ್ಕಳೊಂದಿಗ, ನನ್ ಕಮಿಷನ್ ಕೊಡೋದು ಮರೀಬ್ಯಾಡವ್ವಾ” ಎಂದು ಹೇಳಿದ್ದನ್ನು ಯಾರು ಕೇಳಿಸಿಕೊಂಡರೋ, ಕೇಳಿಸಿಕೊಂಡು ಯಾರಿಗೆ ಹೇಳಿದರೋ! ಮನೆ ಸೇರಿಕೊಂಡೊಡನೆ ಪೋಸ್ಟಾಪೀಸಿಗೆ ತಮ್ಮನ್ನೂ ಜೊತೆಯಲ್ಲಿ ಕರಕೊಂಡು ಹೋಗೆಂದು ಮುಗಿಬಿದ್ದರು. ಅವರ ಮಾತಿಗೆ “ನಿಮ್ಮನ್ಯಾಕೆ ಅಲ್ಲಿಗೆಲ್ಲ ಕರಕೊಂಡ್ ಹೋಗ್ಲಿ, ನಾನೇ ಹೊಕ್ಕೀನಿ, ನಾನೇ ತರತೀನಿ ಎಂದು ತಾನು ಹೇಳಿದ್ದು ರೋಸಿ, ಅದಕ್ಕೆ ಅವರು ನಮಗೀಟೀಟು ಕೊಡಬೇಕು ನೋಡು” ಎಂದು ಜುಲುಮೆ ಮಾಡಿದರು, ಅದೇ ಹೊತ್ತಿಗೆ ಬಂದ ಮಕ್ಕಳು “ಎವ್ವೋ ನಿಂಗೆ ಬುದ್ದಿ ಐತೋ ಇಲ್ಲೋ,ಪಿಂಚಣೀನ ಚಂದ್ರಿಗೂ ರುದ್ರಿಗೂ ಕೊಡ್ತೀನಂತ ಹೇಳಿದ್ದೀಯಾ?”, ಹೌದು ಕನಪ್ಪ, ಆ ಹೆನುಮಕ್ಕಳು ಉಸ್ರು ಬಿಟ್ರೆ ನಿಮಗೆ ಒಳ್ಳೇದಾಗಾಕಿಲ್ಲ,,ನೀನು ಸತ್ರೆ ಮಣ್ಣು ಮಾಡೋರು ನಾವು,ಅದೆಲ್ಲ ಸತ್ತ ಮ್ಯಾಕೆ, ಹಂಗಾದ್ರೆ ನೀನು! ಇದೊಂದ್ಸಲ ಅವರಿಗೆ ಕೊಡ್ತೀನಿ,ಮುಂದಿನ ಸಲ.. ಅಲ್ಲಿತನಕ ನೀನ್ ಬದುಕಿರತೀಯಂತ ಏನ್ ಗ್ಯಾರಂಟಿ? ಥೂ ದರಿದ್ರದೋಳೆ ಅಂತ ಕೆಂಚನೂ,ನಿನಗಿಂತ ಹಾವೇ ಎಸ್ಟೋ ವಾಸಿ ಎಂದು ಅಟುಬಿಯೂ, ನೀನಮ್ಮನ್ಯಾಗ ಇರೋದೂ ಬ್ಯಾಡ, ನಿಂಗೆ ನಾವ್ ಕೂಳು ಕುಚ್ಚಿ ಹಾಕೋದೂ ಬ್ಯಾಡ ಎಂದು ಸೊಸೆಯಂದಿರೂ..

***

ಯಾರು ಹೇಳಿದರೋ ಎಲ್ಲೆಲ್ಲಿಂದ ಬಂದರೋ, ಏನೇನು ತಿಂದಿದ್ದರೋ ಏನೇನು ಕುಡಿದಿದ್ದರೋ! ಕೆಂಚನ ಮಾವ ಅಯ್ಯಾಳಿ ಅಟುಬಿಯ ಮೇಲೂ,,ಅಟುಬಿಯ ಮಾವ ಮಾಬಲಿ ಕೆಂಚನ ಮೇಲೂ ತಮ್ಮತಮ್ಮ ಚಪ್ಪಲಿಗಳನ್ನು ಝಳಪಿಸಿದರು. ಅವರವರ ಹೆಂಡಂದಿರು ಹಾಕೂ ಹಾಕು ಎಂದು ಪ್ರೋತ್ಸಾಹಿಸಲಾರಂಭಿಸಿದರು. ಅದರ ಹಿಂದೆಯೇ ಆಕೆಯ ತುರುಬನ್ನು ಈಕೆಯೂ, ಈಕೆಯ ತುರುಬನ್ನು ಆಕೆಯೂ! ಅದೆಲ್ಲಿಂದಲೋ ಆಗಮಿಸಿದ ಊರ ಶುನಕಗಳು ಸಾಮೂಹಕವಾಗಿ ಬೊಗಳುವುದರ ಮೂಲಕ ಆ ನರಮಾನ್ನವರನ್ನು ಶಪಿಸಲಾರಂಭಿಸಿದವು. ಅದೇ ಸಮಯಕ್ಕೆ ಸರಿಯಾಗಿ ರೇಣುಕಾಳ ತೆಕ್ಕೆಯಿಂದ ಬಿಡಿಸಿಕೊಂಡು ಬಂದ ದಪೇದಾರ್ ಇಕ್ಬಾಲನನ್ನುದ್ದೇಶಿಸಿ ಇವನು ನನ್ ಮಗಳ ಸೀರೆ ಹರಿದಿರುವನೆಂದು ಅವನೂ,, ಇವನು ತನ್ನ ಮಗಳ ಕುಬುಸ ಹರಿದಿರುವನೆಂದು ಇವನೂ, ಅದಕ್ಕೆ ಪ್ರತಿಯಾಗಿ ನೀವೆಲ್ಲ ಹೊಟ್ಟೆಗೇನು ತಿಂಥೀರಿ ಎಂದು ಇಕ್ಬಾಲನೂ..
ಇನ್ನೇನೆಲ್ಲ ಬಗೆಹರಿಯಿತೆನ್ನುವಷ್ಟರಲ್ಲಿ ಒಂದೇ ದಿಕ್ಕಿನಿಂದ ಅಂದರೆ ಮಹಾದೇವಿಯಿಂದಿಳಿದ ಚಂದ್ರಿಯು ಬಿರುಗಾಳಿಯೋಪಾದಿಯಲ್ಲೂ, ರುದ್ರಿಯು ಚಂಡಮಾರುತದೋಪಾದಿಯಲ್ಲೂ ಬಂದಬಂದವರೆ ತಮ್ಮನ್ನು ಹೆತ್ತಾಕಿಯನ್ನು ತಬ್ಬಿಕೊಂಡು ಯಾವ ಭೋಸೂಢಿ ನಿನ್ನನ್ನೀ ಸ್ತಿತಿಗೆ ತಂದದ್ದು, ಯ್ಯೋಳಾಕಿ ಯಾರೂಂತ ಎಂದನಕಂತ ಬಾಯಿಬಾಯಿ ಬಡಿದುಕೊಂಡರು, ಹೇಳದಿದ್ದರೂ ತಾವೇ ಕಲುಪಿಸಿಕೊಂಡು ಈರಕ್ಕನ ಮೇಲೆ ಚಂದ್ರಿಯೂ, ಮಾಯಿಯ ಮೇಲೆ ರುದ್ರಿಯೂ ಏಕಕಾಲಕ್ಕೆ ದಾಳಿ ನಡೆಸಿದ ಪರಣಾಮವಾಗಿ…ಅದರ ಹಿಂದೆಯೇ ಚಂದ್ರಿಯ ಮಿಂಡನಾದ ನಂಜುಂಡಿಯೂ, ರುದ್ರಿಯ ಮಿಂಡನಾದ ದೇವದಾಸೂ ಬಂದಬಂದವರೆ ಅವನೇ ಇವನೆಂದೂ, ಇವನೇ ಅವನೆಂದೂ ಅನ್ಯಥಾ ಭಾವಿಸಿ ಹೆಣ್ಣುಕೊಟ್ಟ ಮಾವಂದಿರ ಮೇಲೆ ಬಿದ್ದು ತದುಕಲಾರಂಭಿಸಿದರು
ಸುತ್ತ ಪರಿಶೆಯೋಪಾದಿಯಲ್ಲಿ ನೆರೆದಿದ್ದ ಸ್ಥಳೀಕರಿಗೆ ಪರಿಸ್ಥಿತಿ ಜಟಿಲವೆನ್ನಿಸಿತು. ಸಂದರ್ಭ ಸ್ವಾರಸ್ಯ ತಿಳಿಯದಾಯಿತು. ಎಲ್ಲರೂ ಅವರವರ ಯೋಗ್ಯತಾನುಸಾರ ಕುಡಿದಿದ್ದ ಕಾರಣದಿಂದಾಗಿ ಯಾರನ್ನು ಯಾರೂ ಬಿಡಿಸುವ ಸ್ಥಿತಿಯಲ್ಲಿರಲಿಲ್ಲ ಯಾರೊಬ್ಬರೂ!ಚದರಂಗದ ಮನೆಯಲ್ಲಿ ಸರಸರನೆ ಸರಿದಾಡುವ ಕಾಯಿಗಳಂತಾಗಿದ್ದರು ಜಗಳದ ಫಲಾನುಭವಿಗಳು. ಯಾರು ಯಾರೆಂದು ಗುರುತಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.ಕ್ರಮೇಣ ಒಬ್ಬನಿಗೆ ಏನನ್ನಿಸಿತೋ! ಗಾಯಗೊಂಡಿರುವಳೆಂಬ ಹಾಗೂ ಮುದುಕಿಯೆಂಬ ಖಬರಿರದಿದ್ದ ಓರ್ವವ್ಯಕ್ತಿ ಅಯ್ಯೋ ನಿನ್ನೀ ಸ್ಥಿತಿಗೆ ತಂದವರೆದುರು ನೀನ್ಯಾಕ ಬೊದುಕಿದ್ದೀಯೇ ಎಕ್ಕಾ, ನೀನೀಗ್ಲೇ ಸತ್ತು ಈ ಬಾಡ್ಯಾರಿಗೆ ಬುದ್ದಿ ಕಲ್ಸು ಎನ್ನುತ್ತ ಧಾವಿಸುತ್ತಿರುವಷ್ಟರಲ್ಲಿ ಅಲ್ಲಿಯೇ ದಿಕ್ಕು ತೋಚದಂತಿದ್ದ ಇಕಬಾಲು ಬಂದಬಂದವನೆ ಹೊಟ್ಟೆಗೇನು ತಿಂಥಿ ಎನ್ನುತ್ತ ಆ ವ್ಯಕ್ತಿಯ ಕಪಾಳಕ್ಕೆ ಛಟೀರನೆ ಏಟು ನೀಡಿದನು, ಆ ಏಟಿಗೆ ತತ್ತರಿಸಿದ ಕಾರಣಕ್ಕೆ ಅಮಲಿಳಿದು ಪರಿಪೂರ್ಣ ಸ್ಥಿತಿ ತಲುಪಿದ ಆ ವ್ಯಕ್ತಿಯು ಎಲಾ ಸೂಳ್ಯಾಮಗ್ನೆ ನೀನ್ಯಾರ ಮ್ಯಾಲ ಕೈ ಮಾಡಿದಿ ಗೊತ್ತಾ ಎಂದು ಧಮಕಿ ಹಾಕಲು ಪ್ರಯತ್ನಿಸಿದನು. ಅದಕ್ಕೆ ಪ್ರತಿಯಾಗಿ ಇನ್ನೊಂದು ಏಟು ನೀಡಿದ ಇಕಬಾಲು ಭೋಸೂಡ್ಕೆ ಒದ್ದು ಒಳಗಾಕ್ತೀನಿ ಹುಷಾರ್ ಎನ್ನುವುದರ ಮೂಲಕ ತಾನು ದಪೇದಾರನೆಂದು ಸಾಬೀತು ಪಡಿಸಿದನು. ಅಂಗಲಾಚಿದ್ದನ್ನು ಪುರಸ್ಕರಿಸಿದ ಅಜ್ಜುನ ಮೀನನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡುತ್ತಿದ್ದುದನ್ನು ಗಮನಿಸಿದ ಕೆಲವರು! ಅದೇ ಸಮಯಕ್ಕೆ ಸರಿಯಾಗಿ..
ತನ್ನೊಂದು ಕೈಯಲ್ಲಿ ಮೊನಿಯಾರ್ಡರ್ ಫಾರಮ್ಮನ್ನೂ,ತನ್ನಿನ್ನೊಂದು ಕೈಯಲ್ಲಿ ಗರಿಗರಿ ನೋಟುಗಳೊಂದಿಗೆ ಎಂಟಾಣೆ ಕಿಮ್ಮತ್ತಿನ ಲೆಕ್ಕಣಿಕೆಯನ್ನೂ ಶಸ್ತ್ರಗಳೋಪಾದಿಯಲ್ಲಿ ಹಿಡಿದುಕೊಂಡು ಚೌಡವ್ವನ ಗುಡಿ ಸಂದಿಯಲ್ಲಿ ಕಾಣಿಸಿಕೊಂಡ ಅಂಬಣ್ಣಾಚಾರಿ ಅವುಕ್ಕಾಗಿ ನಿಂತ, ತನ್ನ ಗುಳಿಬಿದ್ದ ಕಣ್ಣುಗಳಿಂದ ಪಿಳಿಪಿಳಿ ನೋಡಲಾರಂಭಿಸಿದ, ಥೆಳಗೇರಿಯಿಂದ ಮರಳಿದೊಡನೆ ತಾನು ಮಾಡಲಿರುವ ಸ್ನಾನವನ್ನು ನೆನಪಿಸಿಕೊಳ್ಲುತ್ತಲೂ, ಚೊಚ್ಚಲ ಬಾಣಂತನಕ್ಕೆಂದು ಮನೆಗೆ ಬಂದಿರುವ ತನ್ನ ಹಿರಿಯ ಮಗಳು ರುಕುಮಿಣಿಯ ರಕ್ತದೊತ್ತಡವನ್ನು ತಾನಿದ್ದಲ್ಲಿಂದಲೇ ಅಳೆಯುತ್ತಲೂ ಒಂದೊಂದೆ ಹೆಜ್ಜೆಯನ್ನು ಹುಷಾರಿಕೆಯಿಂದ ಇಡುತ್ತ ತಾನು ಪ್ರವೇಶಿಸಿದ್ದು ಚಕ್ರವ್ಯೂಹವೆಂದು ಕ್ರಮೇಣ ಅರ್ಥಮಾಡಿಕೊಂಡನೆನ್ನುವಷ್ಟರಲ್ಲಿ..

***

ಒಂದು ಬೀಡಿ ಸುಟ್ಟು ಮಣ್ಣು ಮಾಡುವಷ್ಟರಲ್ಲಿ! ಕೊಟ್ಟ ಅಂಬಣ್ಣಾಚಾರಿಯೂ ಕಾಣುವಲ್ಲ,! ಆತನೇನೋ ವಾಸಸ್ಥಾನ ಕಂ ಪೋಸ್ಟಾಪೀಸಿಗೆ ಹೋಗಿರಬಹುದು, ಆದರೆ ಸಂಕಲನ ವ್ಯವಕಲನ ಬಾರದಿದ್ದರೂ ಇಸಕೊಂಡ ಮುದೇದು ಕಾಣುತಾ ಇಲ್ಲಲ್ಲ ಶಿವನೆ! ಅಲ್ಲಿಲ್ಲಿ ಹುಡುಕಿ ನೋಡಿದರು, ಕೈಗೆ ಬಂದ ತುತ್ತಿನೊಡನೆ ಅದೆಲ್ಲಿ ಹೋಯಿತೆಂದು ಕೂಗಿದರು ಸಾಮೂಹಿಕವಾಗಿ. ಈ ಧ್ವನಿಗಳು ತಮ್ಮನ್ನೂ ಮೀರಿಸುತ್ತಿರುವವಲ್ಲ ಎಂದು ಗ್ರಾಮದ ಶುನಕಗಳು ಗರ್ಜಿಸಿದವು, ಗಾರ್ದಭಗಳು ಹೇಷಾರವ ಮಾಡಿದವು.ತಮ್ಮ ಕನಸುಗಳಲ್ಲಿ ಒಡವೆಗಳನ್ನು ನೆನಪಿಸಿಕೊಳ್ಳುತ್ತ ಈರಕ್ಕ, ಮಾಯಿ ಲಬೋಲಬೋ ಬಾಯಿಬಾಯಿ ಬಡಕೊಳ್ಳಲಾರಂಭಿಸಿದರು. ನಮ್ಮನ್ನೆಲ್ಲ ನಡೋನೀರಲ್ಲಿ ಬಿಟ್ಟ ಮುದೇದು ಇದ್ದರೆಷ್ಟು ಬಿಟ್ಟರೆಷ್ಟು ಅನಕಂತ ಕೆಂಚ, ಅಟುಬಿ ಎಲ್ಲೋಯ್ತಿದು ಹಾಳಾಗಿ ಅಂದನಕಂತ ಹುಡುಕಿ ಕೊಡ್ರಪ್ಪ, ಪುನ್ಯ ಬರತದೆ ಎಂದು ಅವರಿವರ ಕೈಕಾಲು ಹಿಡಕೊಳ್ಳಲಾರಂಭಿಸಿದರು. ಕಿಲುಬು ಕಾಸಿನ ಭಾರ ತಡಕೊಳ್ಳುವ ಶಕ್ತಿ ಇಲ್ಲದ ಅದು, ಇನ್ನು ಸಾವ್ರಾರ್ರೂಪಾಯಿ ಭಾರಾನ ಹೆಂಗ ತಡಕೊಳ್ಳಲು ಸಾಧ್ಯ! ರೊಕ್ಕಾನ ಇಲ್ಲೆಲ್ಲಾದರು ಇಟ್ಟಿರತೈತಿ, ಹುಡಕರಿ ಎಂದು ಸಲಹೆ ನೀಡಿದ ಕೆಲವರು ಅದರ ಸಹಿತ ಮೂಲೆಮುರುಕಟ್ಟುಗಳನ್ನು ತಲಾಷ್ ಮಾಡಿಮಾಡೀ ಸುಸ್ತಾದರು. ಕೊನೀಕೆ ಇಲ್ಲೆಲ್ಲಾದರೂ ಇರತೈತಿ ಹುಡುಕೋಣ ಬರ್ರಿ ಎಂದನಕಂತ ಅವರು ಆ ಕಡೆಗೂ, ಅದು ಕೈಗೆ ಸಿಕ್ಕರೆ ಕುತ್ತಿಗೆ ಹಿಚುಕಿ ಸಾಯಿಸಿ ಬುದ್ದಿ ಕಲಿಸಬೇಕು ಎಂದನಕಂತ ಇನ್ನೂ ಕೆಲವರು ಈ ಕಡೆಗೂ ಹೋದರು. ದಾರಿ ಎಡಬಲದಲ್ಲಿದ್ದ ಮನೆಝೋಪಡಿಗಳನ್ನು ಶೋಧಿಸಿದ್ದಾಯಿತು, ಕಣ್ಣಗಳಿಗಟೆದ ಮಂದಿಯನ್ನು ತರುಬಿ ಕೇಳಿದ್ದಾಯಿತು. ಕನ್ನೀರವ್ವನ ಬಾವಿ, ಸಾದರ ಕಣವೇ ಮುಂತಾದ ಆಯಕಟ್ಟಾದ ಜಾಗಗಳನ್ನು ಪೊಕ್ಕು ಬೆದಕಿದ್ದಾಯಿತು. ಹಂಗೇ ಹುಡುಕ್ಕಂತ ಹುಡುಕ್ಕಂತ ಅವರೆಲ್ಲ ಸೇರಿದ್ದು..
ಡಣ್ ಡಣಾರೆಂದು ಭಾರಿಸುತ್ತಿದ್ದ ಗಂಟೆಜಾಗಟೆಗಳು, ಬೊಯ್ ಬೊಯ್ಯೋ ಎಂದು ಊದುತ್ತಿದ್ದ ಶಂಕು ಕಹಳೆಗಳು ನೀವು ಸರಕಳ್ರಿ ಎನುತ್ತಿದ್ದ ಮಾತುಗಳು!ಅದೇ ಇನ್ನೂ ತಮ್ಮ ತಮ್ಮ ಸರೀರಗಳೊಳಗೆ ದೆವ್ವಗಳನ್ನು ಬಿಟುಕೊಂಡಿದ್ದ ಕೆಲವರು, ಅದೇ ಇನ್ನು ದೆವ್ವಗಳನ್ನು ಬೀಳ್ಕೊಟ್ಟು ತಮ್ಮತಮ್ಮ ಸರೀರಗಳನ್ನು ಅಳಾರ ಮಾಡಿಕೊಂಡಿದ್ದ ಕೆಲವರು, ದೆವ್ವಗಳು ಈಗ ಬಂದಾವು ಆಗ ಬಂದಾವು ಎಂಬುವ ನಿರೀಕ್ಷೆಯಲ್ಲಿದ್ದ ಕೆಲವರು, ಹಳೆಗಾಯಗಳಂಥ ನೆನಪುಗಳ ದಾಳಿಗೆ ಸಿಕ್ಕು ಚೀರಿಕೊಳ್ಳುತ್ತಿದ್ದ ಕೆಲವರು..ಹೀಗೆ ಅವರಿವರೆಲ್ಲರೂ ಬೆಂದಗೆಣಸಿನಂಥ ಹೆಣುಮಕ್ಕಳಾಗಿದ್ದರು, ಇವರವರೆಲ್ಲ ಅದೇ ತಾನೆ ವೃದ್ಯಾಪ್ಯವೆಂಬುವ ಝೋಪಡಿಯನ್ನು ಪ್ರವೇಶಿಸಿದವರಾಗಿದ್ದರು. ಅಂಥವರ ಮುಖದಲ್ಲಿ ಮುಖವಿರಿಸಿ ಮುದುಕಿಯನ್ನು ಬೆದಕಿ ಸುಸ್ತಾದ ವಾರಸುದಾರರು ಉಫೆಂದು ತಮ್ಮತಮ್ಮ ಎದೆಗಳ ಮೇಲೆ ಊದಿಕೊಳ್ಳುತ್ತಿರುವಷ್ಟರಲ್ಲಿ..
ಗರುಬಗುಡಿಯೊಳಗಿಂದ ಮೂಡಿ ಕಾಣಿಸಿಕೊಂಡ ಪೂಜಾರಿ ಎಲ್ಲಪ್ಪನ ಒಂದು ಕೈಯಲ್ಲಿ ಪರಸಾದದ ತಳಿಗೆಯಿತ್ತು, ತನ್ನಿನ್ನೊಂದು ಕೈಯಲ್ಲಿ ತೀರುತವಿದ್ದ ಗಿಂಡಿಯಿತ್ತು. ತಮ್ಮೆಲ್ಲರ ಕರುಳುಬಳ್ಳಿಗೆ ಯಾವ ಕಾಲದಲ್ಲೋ ತೊಡರಿದ್ದ ಆ ಪುಣ್ಯಾತುಮನು ಏನು ಹೇಳಿದನೆಂದರೆ..
“”ಸಾವ್ರಾರ್ರುಪಾಯಿಗಳನ ಅವ್ವನ ಹುಂಡಿಗಡಿಗೆಯೊಳಗೆ ಹಾಕಿ ನಮ್ಮನ್ನೆಲ್ಲ ಹಾಳು ಮಾಡಿದಿಯಲ್ಲೇ ಮುದೇದೆ ಎಂದು ಹೆಣುಮಕ್ಕಳು ಲಬೋಲಬೋ ಬಾಯಿಬಾಯಿ ಬಡಿದುಕೊಂಡಾದ ಬಳಿಕ.
ಅದಕ್ಕೊಂದು ಗತಿ ಕಾಣಿಸಬೇಕೆಂದು ನಿರ್ಧರಿಸಿದ ಕೆಲವರು ಕೇಳಿದ್ದಕ್ಕೆ ಪೂಜಾರಿಯು..
ಚಂಜೆ ಮುಂದುಗಡೆ ಅದು ಮುಲುಕ್ಕೋತ ತೆವಳಿಕೋತ ಹೋದ ದಿಕ್ಕು ಪಡುವಣವೆಂದು ಹೇಳಿದನು. ಅವರೆಲ್ಲರೂ ತಮ್ಮತಮ್ಮ ಹುಬ್ಬುಗಳಿಗೆ ಕೈಹಚ್ಚಿ ನೋಡಿದಾಗ ಚೌಡಿಕೆ ಮನೆತನ ಮುದುಕಿಯನ್ನು ಅವುಚಿಕೊಂಡು ಸೂರ್ಯಪರಮಾತುಮ ಪಡುವಣದ ಕಡೆ ಓಡುತ್ತಿರುವುದು ಗೋಚರಿಸಿತೆನ್ನುವಲ್ಲಿಗೆ..
 

‍ಲೇಖಕರು G

April 7, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Jayashree

    ತುಂಬಾ ಚೆನ್ನಾಗಿದೆ ಕಥೆ . ನಿಮ್ಮ ಶೈಲಿ, ಪದ ಭಂಡಾರ ಬೆರಗು ಹುಟ್ಟಿಸುತ್ತದೆ. ಕತೆಯ ವಸ್ತು ಮನಕಲಕುವoತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: