ಕುಂ ವೀ ಅವರು ಹೊಸದಾಗಿ ಬರೆದಿರುವ ಕಾದಂಬರಿ ‘ಒಳಚರಂಡಿ’. ಅವಧಿಯ ಮೇಲಿನ ಪ್ರೀತಿಯಿಂದ ಆ ಕೃತಿಯ ಆಯ್ದ ಭಾಗವನ್ನು ಬಿಡುಗಡೆಗೆ ಮುಂಚೆಯೇ ನೀಡಿದ್ದಾರೆ. ಕುಂ ವೀ ಅವರಿಗೆ ವಂದನೆಗಳು.
ಈ ಸಮಕಾಲೀನ ಕಾಲ್ಪನಿಕ ರಾಜಕೀಯ ಕಾದಂಬರಿಯ ಒಂದು ತುಣುಕು ಈಗಾಗಲೇ ನೀಡಿದ್ದೆವು. ಅದನ್ನೇ ಈಗ ಪುನರಾವರ್ತಿಸುತ್ತಿದ್ದೇವೆ. ಇಂದಿನಿಂದ ಸತತವಾಗಿ ಕಾದಂಬರಿ ಮುಂದುವರೆಯಲಿದೆ..
ಮುಖ್ಯಮಂತ್ರಿ ಜಗದುದರ ನಿಷ್ಪತ್ತಿ ತಲೆಯನ್ನು ಎರಡೂ ಕೈಗಳಿಂದ ಒತ್ತಿ ಹಿಡಿದರು. ಗೋಡೆಯಲ್ಲಿದ್ದ ಗಡಿಯಾರದ ಮುಳ್ಳುಗಳ ಚಲನೆಯ ಸದ್ದು ಕರ್ಕಶವೆನ್ನಿಸಿತು. ಅದರ ಕಡೆ ತೀಕ್ಷ್ಣನೋಟ ಬೀರಿದರು. ಹನ್ನೆರಡರ ಸಂಖ್ಯೆಯನ್ನು ಚಿಕ್ಕಮುಳ್ಳು ಸಮೀಪಿಸಿತ್ತು. ಅದು ಸದ್ದು ಮಾಡದ ನಿರುಪದ್ರವಿ. ಆದರೆ ದೊಡ್ಡ ಮುಳ್ಳು ಮಾತ್ರ ಉಪದ್ರವಿ ಎನ್ನಿಸಿತು. ಪ್ರತಿ ಸೆಕೆಂಡಿಗೂ ಟಿಕ್ ಟಿಕ್ ಎಂದು ಸದ್ದು ಮಾಡಿ ತಮ್ಮ ಸಹನೆಯನ್ನು ಪರೀಕ್ಷಿಸುತ್ತಿತ್ತು. ತಮ್ಮ ಅಧಿಕಾರದ ಅವನತಿಯ ಕ್ಷಣಗಣನೆಯನ್ನು ನೆನಪಿಸುತ್ತಿತ್ತು. ಅದರ ಚಲನೆಯನ್ನು ಕೂಡಲೆ ನಿಷ್ಕ್ರಿಯಗೊಳಿಸುವಂತೆ ಜವಾನನಿಗೆ ಆಜ್ಞಾಪಿಸಿದರು. ತೂಕಡಿಸುತ್ತಿದ್ದ ಕಕ್ಕೋಲ ಬೆಚ್ಚಿದ, ಎಚ್ಚರವಾಗಿ ವಾಸ್ತವಕ್ಕೆ ಮರಳಿದ. ಕಣ್ಣುಗಳನ್ನ ಉಜ್ಜಿಕೊಳ್ಳಲು ಎರಡೂ ಕೈಗಳನ್ನು ಒಟ್ಟುಗೂಡಿಸಿದ. ಅಷ್ಟರಲ್ಲಿ ಮುಖ್ಯಮಂತ್ರಿಗಳು ಪುನಃ ಗದರಿಸಿದರು, ಅಶ್ಲೀಲ ಪದಗಳಿಂದ ಥಳಿಸಿದರು. ಅಂಥ ಪದಗಳ ಬಳಕೆ ಅವರ ಜಾಯಮಾನವಾಗಿರಲಿಲ್ಲ.
ನೀಳಕಾಯದ ಕಕ್ಕೋಲ ಕೆಲವು ವರ್ಷಗಳಿಂದ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಗಳಿಂದ ನರಳುತ್ತಿದ್ದ. ತಲೆ ಒಂದುಕ್ಷಣ ಸುತ್ತಿ ಎರಡನೇ ಕ್ಷಣದಲ್ಲಿ ಮೊದಲ ಸ್ಥಿತಿಗೆ ಮರಳಿತು. ರಾಜ್ಯದ ಪ್ರಥಮಪ್ರಜೆ ಕಡೆ ದೈನ್ಯತೆಯಿಂದ ನೋಡಿದ. ಅಲ್ಲದೆ ತನ್ನಂಥ ಸಾಮಾನ್ಯ ನೌಕರರ ಕ್ಷೇಮಾಭಿಲಾಷಿಗಳಾದ ರಾಜಕೀಯ ವಿಶ್ಲೇಷಕರ ಕಡೆಗೂ, ಅರ್ಥಶಾಸ್ತ್ರಜ್ಞರ ಕಡೆಗೂ ಆರ್ತತೆಯಿಂದ ನೋಡಿದ. ಅವರೀರ್ವರು ಆ ಕ್ಷಣದಲ್ಲಿ ಬಿಟ್ಟ ನಿಟ್ಟುಸಿರನ್ನು ಕೇಳಿಸಿಕೊಳ್ಳುತ್ತ ಗೋಡೆಯತ್ತ ಧಾವಿಸಿದ. ತಲೆ ಎತ್ತಿನೋಡಿದ. ತನ್ನ ದೇಹದ ಎತ್ತರಕ್ಕಿಂತ ಮೂರರಷ್ಟು ಎತ್ತರದ ಸಮಸ್ಥಿತಿಯಲ್ಲಿರುವ ಗಡಿಯಾರ! ಹಲವು ಮುಖ್ಯಮಂತ್ರಿಗಳ ಆಗಮನ ನಿರ್ಗಮನವನ್ನು ಗಮನಿಸಿರುವ ಗಡಿಯಾರ! ಮುಂಬರುವ ಮುಖ್ಯಮಂತ್ರಿಗಳ ನಿರೀಕ್ಸೆಯಲ್ಲಿರುವ ಗಡಿಯಾರ! ರಾಜಕಾರಣಿಗಳ ಸಾವುಗಳನ್ನು ಕಣ್ಣಾರೆ ನೋಡಿರುವ ಗಡಿಯಾರ! ಭುವನವಿಜಯ ಜನಿಸಿದ ಕ್ಷಣದಿಂದ ಇರುವ ಗಡಿಯಾರ, ಸಕರ್ಾರಗಳು ಬದಲಾದರೂ ತಾನು ಬದಲಾಗದಿರುವ ಗಡಿಯಾರ, ಸ್ಥಿತಪ್ರಜ್ಞ ಯೋಗಿಯಂತೆ ಧ್ಯಾನಸ್ಥಸ್ಥಿತಿಯಲ್ಲಿರುವ ಗಡಿಯಾರ! ತನ್ನ ಚಲನೆಯನ್ನು ಸ್ಥಗಿತಗೊಳಿಸುವವರ ಯೋಗ್ಯತೆಯನ್ನು ಪ್ರಶ್ನಿಸುತ್ತಿರುವ ಗಡಿಯಾರ!
ಕೈಗಳನ್ನು ಅದರತ್ತ ಚಾಚಿದ. ಕಾಲ ಬೆರಳುಗಳ ಮೇಲೆ ನಿಲ್ಲಲು ಪ್ರಯತ್ನಿಸಿದ. ಮಂತ್ರಾಲೋಚನ ಭವನದಲ್ಲಿ ನಿಚ್ಚಣಿಕೆಗಳು ಎಲ್ಲಿರಲು ಸಾಧ್ಯ? ಇದ್ದರೂ ಅವುಗಳ ನೆರವಿನಿಂದ ಅದರ ಚಲನೆಯನ್ನು ಸ್ಥಗಿತಗೊಳಿಸುವ ಸಾಮಥ್ರ್ಯ ತನಗಿಲ್ಲ. ನಿವೃತ್ತಿ ಹೊಸ್ತಿಲಲ್ಲಿದ್ದ ಕಕ್ಕೋಲ ಅಸಹಾಯಕತೆಯಿಂದ ಗಣ್ಯರ ಅತಿಗಣ್ಯರ ಕಡೆ ನೋಡಿದ. ನ್ಯಾಯಮೂರ್ತಿ ಕಾನಕುಡಿ ತಮ್ಮ ಕಣ್ಣುಗಳಿಂದ ನೆರವು ಕಲ್ಪಿಸಿದರು. ಅದರಿಂದ ಪುನಃಶ್ಚೇತನಗೊಂಡ. ನಿರ್ಧರಿತ ಸ್ಥಾನದಲ್ಲಿ ಪರಮವಿಧೇಯತೆಯಿಂದ ನಿಂತ ನೇರವಾಗಿ. ಸರ್ಕಾರಿ ಸಮವಸ್ತ್ರವನ್ನು ಸರಿಪಡಿಸಿಕೊಳ್ಳುತ್ತ. ಗಡಿಯಾರ ಕ್ರಿಯಾಕಲಾಪ ಮುಂದುವರಿಸಿತು.
ಸನ್ಮಾನ್ಯ ನಿಷ್ಪತ್ತಿಯವರು ದೀರ್ಘವಾಗಿ ಉಸಿರಾಡಲಾರಂಭಿಸಿದರು. ಮುಂದಿದ್ದ ವರದಿಯ ಮೇಲೆ ತಮ್ಮೆರಡೂ ಕೈಗಳನ್ನಿರಿಸಿದರು. ವಿರೋಧಪಕ್ಷದ ಧುರೀಣ ಶ್ರೀಯುತ ಕ್ಷೇತ್ರಪಾಲ್ ಉಕ್ಕಡಿಯವರ ಆವೇಶಭರಿತ ಮಾತುಗಳನ್ನು ನೆನಪಿಸಿಕೊಂಡರು. ಸರ್ಕಾರವನ್ನು ಅಸ್ಥಿರಗೊಳಿಸಲು ತಮ್ಮ ಪಕ್ಷದ ಸದಸ್ಯರು ವಿರೋಧಪಕ್ಷಗಳೊಂದಿಗೆ ಕೈಜೋಡಿಸಬಹುದೆಂದು ತಾವು ಊಹಿಸಿರಲಿಲ್ಲ. ಆಹಾರ ಸರಬರಾಜು ಖಾತೆ ಸಚಿವ ಕಾಕಬಲಿ, ಆರೋಗ್ಯ ಖಾತೆ ಸಚಿವ ಧರ್ಮದತ್ ತಮ್ಮ ವಿರುದ್ದ ಷಡ್ಯಂತ್ರ ರೂಪಿಸಬಹುದೆಂದು ತಾವು ನಿರೀಕ್ಷಿಸಿರಲಿಲ್ಲ. ಒಳಚರಂಡಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಹ ತಮ್ಮ ಆಡಳಿತಕ್ಕೆ ಹಿನ್ನಡೆ. ಸಹಸ್ರಾರು ಕೋಟಿ ಮೌಲ್ಯದ ಟೆಂಡರ್ ಅಧಿವೇಶನದ ಬಳಿಕ ಕರೆದಿದ್ದರೆ ಸರಿ ಇರುತ್ತಿತ್ತೇನೊ! ಅದರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ಗುತ್ತೆದಾರರ ನಡುವಿನ ಅನಾರೋಗ್ಯಕರ ಪೈಪೋಟಿಯೂ ಇನ್ನೊಂದು ಕಾರಣ. ಗುತ್ತೇದಾರರಲ್ಲಿ ಆಪೋಶ್ಕರ್ ಮೇಹು ಹದಿನೈದು ಶಾಸಕರನ್ನು ಖರೀದಿಸಿರುವುದಾಗಿ ದಿನಪತ್ರಿಕೆ ಲಗೌಕಸ ವರದಿ ಮಾಡಿರುವುದು. ಜರಾಸಂಧ ಹೆಸರಿನ ಟ್ಯಾಬ್ಲಾಯ್ಡ್ ಸಂಪಾದಕ ಇನ್ನೊಬ್ಬ ಗುತ್ತಿಗೆದಾರ ಅರಗೀಲ್ ನಿಷಾಧ್ನ ಸಂದರ್ಶನ ಪ್ರಕಟಿಸಿದ್ದಾನೆ. ನಿಷಾಧ್ ಹದಿನೆಂಟು ಶಾಸಕರು ತನ್ನ ಬ್ರಿಫ್ಕೇಸ್ನಲ್ಲಿರುವುದಾಗಿ ಹೇಳಿದ್ದಾನೆ. ಇನ್ನು ಅಂತರ್ರಾಷ್ಟ್ರೀಯ ಕಾರ್ಷಿಕ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ ಕೌಶಿಕ್ ಉದಗ್ರ, ಗಣಿ ಗ್ರಾನೈಟ್ ಕಂಪನಿಗಳ ಒಡೆಯ ಶಿಶುಪಾಲ್ ಹರಿಕೇನ್ ಇವರಿಬ್ಬರು ಕ್ಷೇತ್ರಪಾಲ್ ಉಕ್ಕಡ್ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿರುವರು. ದಕ್ಷಿಣಾತ್ಯ ರಾಜ್ಯಗಳ ಕುಖ್ಯಾತ ಮಾಫಿಯಾ ಡಾನ್ ದುಮಂಗಲ ರಾಜ್ಯದ ಹಲವು ಶಹರಗಳಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಿ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದಾನೆ. ಆ ದುರಳನಿಗೆ ಕೇಂದ್ರ ಸಚಿವ ಪಟವಾಸು ಬಚ್ಚು ಅವರ ಬೆಂಬಲ ಬೇರೆ.
ಈ ಎಲ್ಲಾ ಸಮಸ್ಯೆಗಳು ಒಂದು ತೂಕವಾದರೆ ಭುವನವಿಜಯದಲ್ಲಿನ ಕಡತಗಳ ಮೂಲಸ್ವರೂಪವನ್ನೇ ಹಾಳುಗೆಡಿಸಿರುವ ವಿದ್ವಂಸಕ ಪ್ರಾಣಿಕ್ರಿಮಿಕೀಟಗಳ ಸಮಸ್ಯೆ ಇನ್ನೊಂದು ತೂಕ. ಇವುಗಳೊಂದೇ ಅಲ್ಲದೆ ರಾಜ್ಯದ ದಕ್ಷಿಣಾತ್ಯದಲ್ಲಿ ಅತಿವೃಷ್ಟಿ, ಉತ್ತರಾತ್ಯ ಜಿಲ್ಲೆಗಳಲ್ಲಿ ಅನಾವೃಷ್ಟಿ. ಈ ಕಡೆ ನೆರೆಹಾವಳಿ! ಆ ಕಡೆ ಜಲಕ್ಷಾಮ! ತಾವು ಮುಖ್ಯಮಂತ್ರಿ ಪದಗ್ರಹಣ ಮಾಡಿದ ವೇಳೆ ಸರಿ ಇಲ್ಲವೇನೊ! ಅಂಥ ನೈಸರ್ಗಿಕ ಮುನಿಸನ್ನೂ ವಿರೋಧಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುವವೆಂದರೆ! ಸುಗಮ ಆಡಳಿತಕ್ಕೆ ಪ್ರತಿಪಕ್ಷಗಳು ಹಾಗೂ ನೌಕರಶಾಹಿ ಸಹಕರಿಸದಿದ್ದರೆ ಹೇಗೆ! ವಿರೋಧಪಕ್ಷಗಳು ತಮ್ಮ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ನಿರ್ಧರಿಸದೇ ಇದ್ದಿದ್ದರೆ! ತಾವು ಅಧಿಕಾರದ ಅವಧಿ ಪೂರೈಸದೆ ಇರುತ್ತಿರಲಿಲ್ಲ. ಸಮಸ್ಯೆಗಳನ್ನು ಬಗೆಹರಿಸಲು ತ್ರಿಕರಣಪೂರ್ವಕ ಶ್ರಮಿಸದೆ ಇರುತ್ತಿರಲಿಲ್ಲ. ಆದರೆ ಸದ್ಯದ ದಿನ ಪೂರ್ಣಗೊಂಡಿತೆಂದರೆ ಅವಿಶ್ವಾಸ ಗೊತ್ತುವಳಿ. ಪಕ್ಷದೊಳಗಿನ ಭಿನ್ನಮತೀಯ ಸದಸ್ಯರು ಗೈರು ಹಾಜರಾಗುವುದು ಖಚಿತ. ತಮಗೆ ಸೋಲು ಸಂಭವಿಸುವುದೂ ಖಚಿತ. ಅದಕ್ಕೂ ಮೊದಲು ಸಹೋದ್ಯೋಗಿಗಳ ಸಂಗಡ ರಾಜಭವನಕ್ಕೆ ತೆರಳಿ ಘನವೆತ್ತ ರಾಜ್ಯಪಾಲರಿಗೆ ತಮ್ಮ ರಾಜಿನಾಮೆ ಸಲ್ಲಿಸಿದರೆ ಹೇಗೆ! ಶಾಸನಸಭೆಯ ವಿಸರ್ಜನೆಗೆ ಶಿಪಾರಸ್ಸು ಮಾಡಿದರೆ ಹೇಗೆ! ಅದರ ಸಾಧಕ ಬಾಧಕಗಳ ಕುರಿತು ಚಚರ್ಿಸಲೆಂದು ತಮ್ಮ ವಿಶ್ವಾಸಪಾತ್ರರನ್ನು!
ಸಾರ್ ತಾವು ಅನ್ಯಥಾ ಭಾವಿಸದಿದ್ದರೆ ಎಂದು ಹೇಳಿದ ಮುಖ್ಯಕಾರ್ಯದರ್ಶಿ ಓಘವಂತ್ ಸಿವಂಗಿ ಪ್ರೊ ದಕ್ಷಾರಿ ಕಡೆ ಪ್ರಶ್ನಾರ್ಥಕ ನೋಟಬೀರಿದರು. ಅವರು ಕಣ್ಣುಮಿಟುಕಿಸಿ ಸಮ್ಮತಿ ಸೂಚಿಸಿದರು. ಬಳಿಕ ಸಿವಂಗಿ ಹೇಗೋ ನ್ಯಾಯಮೂರ್ತಿ ಕಾನಕುಡಿ ಸಲ್ಲಿಸಿರುವ ವರದಿ ಮಂಡನೆಯ ನಿರೀಕ್ಷೆಯಲ್ಲಿದೆ, ಅದನ್ನು ಮಂಡಿಸಿ ಚರ್ಚೆ ಆರಂಭಿಸುವುದು ಒಳಿತು, ಇದರಿಂದ ಕೆಲವು ದಿವಸ ತಾವು ಅಧಿಕಾರದಲ್ಲಿರಲು ಸಾಧ್ಯವಾಗುವುದು. ಇದು ನನ್ನ ಸಲಹೆ ಎಂದರು ತಗ್ಗಿದ ಸ್ವರದಲ್ಲಿ.
ಪಕ್ಷದ ರಾಜ್ಯ ಅಧ್ಯಕ್ಷ ಈರ್ಮ ತಮ್ಮೆರಡೂ ಕೈಗಳನ್ನು ಟೇಬಲ್ ಮೇಲೂರಿ ನಿಟ್ಟುಸಿರುಬಿಟ್ಟರು. ಡಾ ಹಸನ್ಮುಖ್ ಬಂಚ್ ಪ್ರೊ ಪುಣ್ಯಾಂಗನ್ ಅಕುಲ್ ಕಡೆ ನೋಡಿದರು. ಬಳಿಕ ಅವರೆಲ್ಲ ಒಟ್ಟಿಗೆ ಶ್ರೀಯುತ ನಿಷ್ಪತ್ತಿ ಅವರ ಕಡೆ ನೋಡಿದರು. ಅ ಹೊತ್ತಿಗಾಗಲೆ ಅವರ ಮುಖ ರಕ್ತದ ಕೊರತೆಯನ್ನು ಅನುಭವಿಸಲಾರಂಭಿಸಿತ್ತು. ಶ್ರೀಯುತರು ಎರಡೂ ಕೈಗಳಿಂದ ಮುಖದ ಮಾಂಸಖಂಡಗಳನ್ನು ಉಜ್ಜಿಕೊಳ್ಳುತ್ತಿರುವುದನ್ನು ಗಮನಿಸಿದ ದಕ್ಷಾರಿ
ನಿಮ್ಮ ಸಲಹೆ ಭಾಗಶಃ ಉಪಯುಕ್ತ ಮಿ ಸಿವಂಗಿ. ವರದಿಯನ್ನು ನೀವು ಓದಿಲ್ಲವೆಂದು ಭಾವಿಸುತ್ತೇನೆ. ಕಾನಕುಡಿ ಸಾಹೇಬರ ವರದಿಯಲ್ಲಿ ನ್ಯಾಯಮೂರ್ತಿ ಉದೀರ್ಣರ ಭೂತದಯೆಯನ್ನು ತನ್ಮಯತೆಯಿಂದ ಶ್ಲಾಘಿಸಿದ್ದಾರೆ. ಆದರೆ ಪರಿಹಾರ ಸೂಚಿಸಿಲ್ಲ. ಆ ವರದಿಯ ಆಧಾರದಿಂದ ಸೂಕ್ತ ಪರಿಹಾರ ಕಂಡುಕೊಳ್ಳಲು ಇನ್ನೊಬ್ಬ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಹೊಸ ಆಯೋಗ ರಚಿಸುವ ಅನಿವಾರ್ಯತೆ ಸೃಷ್ಠಿಯಾಗಬಹುದು, ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ವರದಿಯ ಗೋಪ್ಯತೆ ಕಾಪಾಡುವುದೇ ಸೂಕ್ತ ಎಂದು ವಿನಮ್ರತೆಯಿಂದ ಹೇಳಿದರು. ಅದಕ್ಕೆ ಪ್ರಕ್ರಿಯಿಸಲು ಅಕುಲ್ ಸೂಕ್ತಪದಗಳ ಅನ್ವೇಷಣೆಯಲ್ಲಿದ್ದಾಗ ಸಿವಂಗಿ
ಇಲಿಹೆಗ್ಗಣಗಳಂಥ ವಿದ್ವಂಸಕ ಪ್ರಾಣಿಗಳಿಗೆ ಬದುಕುವ ಅರ್ಹತೆ ಇಲ್ಲ, ಅವುಗಳನ್ನು ಕೊಂದರೆ ತಪ್ಪಿಲ್ಲ. ಅವುಗಳನ್ನು ಕಾನೂನು ರೀತ್ಯಾ ಕೊಂದರೆ ಇನ್ನೂ ಒಳ್ಳೆಯದು. ಆದ್ದರಿಂದ ಸನ್ಮಾನ್ಯರು ಕೊಲ್ಲಲು ಆಜ್ಞಾಪಿಸಿ ದೂರದ ಋಷ್ಯಮೂಕ ಆಶ್ರಮದಲ್ಲಿ ತಲೆಮರೆಸಿಕೊಂಡರೆ ಹೇಗೆ! ಎಂದರು ಉತ್ಸಾಹಭರಿತರಾಗಿ. ಅದರಿಂದ ಬೆಚ್ಚಿದ ಈರ್ಮ
ಕೊಲ್ಲು! ಈ ಕ್ರಿಯಾಪದ ಅಸಂವೈದಾನಿಕ ಸಿವಂಗಿ. ಅಹಿಂಸೆ ನಮ್ಮ ಪಕ್ಷದ ತಳಹದಿ, ದಯವಿಟ್ಟು ಈ ಸಲಹೆಯನ್ನು ವಾಪಸ್ಸು ಪಡೆಯಿರಿ ಎಂದರು ಭಾವಾವೇಶದಿಂದ. ಅವರ ಮಾತಿಗೆ ಪೂರಕವಾಗಿ
ನಮ್ಮ ಸಮಾಜ ಮನುಷ್ಯ ಮನುಷ್ಯನನ್ನು ಕೊಂದರೆ ಕ್ಷಮಿಸುತ್ತದೆ, ಆದರೆ ವಿದ್ವಂಸಕ ಪ್ರವೃತ್ತಿಯ ಪ್ರಾಣಿಗಳನ್ನು ಕೊಂದರೆ ಮಾತ್ರ ಕ್ಷಮಿಸುವುದಿಲ್ಲ. ಇದು ಜಂಭೂದ್ವೀಪವಾಸಿಗಳ ಬೇಸಿಕ್ ಇನ್ಸ್ಟಿಂಕ್ಟ್. ಇನ್ನೊಂದು ಮಾತು ಗೆಳೆಯರೆ, ಋಷ್ಯಮೂಕಾಶ್ರಮದ ಆಡಳಿತ ಮಂಡಳಿಯ ಸದಸ್ಯನಾಗಿ ಹೇಳುತ್ತಿರುವೆ, ಶ್ರೀಶ್ರೀವಿದುರಥಾನಂದರ ಸಾನ್ನಿಧ್ಯದಲ್ಲಿ ಹಿಂಸೆ ಎಂಬ ಪದಕ್ಕೆ ಪ್ರವೇಶವಿಲ್ಲ. ಅಲ್ಲದೆ ಸನ್ಮಾನ್ಯ ಜಗದುದರ ನಿಷ್ಪತ್ತಿಯವರು ಮೂಲತಃ ಆಧ್ಯಾತ್ಮಜೀವಿಗಳು, ಅಹಿಂಸಾವಾದಿಗಳು. ಕೊಲ್ಲು ಎಂಬ ಕ್ರೂರಶಬ್ದ ಅವರ ಅಂತರಂಗದ ನಿಘಂಟಲ್ಲಿ ಇಲ್ಲವೇ ಇಲ್ಲ ಎಂದ ಪ್ರೊ ದಕ್ಷಾರಿಯವರ ಮುಖದಲ್ಲಿ ಮಂದಹಾಸ ನಿಧಾನವಾಗಿ ಆವರಿಸಿತು. ಅದಕ್ಕೆ ಉಳಿದವರು ಸಹಮತ ವ್ಯಕ್ತಪಡಿಸಿದರು. ಪುನಃ ಸಿವಂಗಿ
ತುಟಿ ಜಾರಿದ ಮಾತು, ಕ್ಷಮೆ ಇರಲಿ ಗಣ್ಯರೆ, ಇನ್ನೊಂದು ಸಲಹೆ, ಗೊಂದಲದ ಹಿಂದಿರುವುದು ಭಿನ್ನಮತೀಯರ ಮುಖಂಡ ಛಲದಂಕ ಕಿರುಕುಳ್! ಅವರ ಸಂಗಡ ಮುಖ್ಯಮಂತ್ರಿಗಳು ಒಂದು ಸುತ್ತು ಮಾತುಕತೆ ನಡೆಸುವುದು ಉತ್ತಮ ಎಂದರು. ಕೇಳಿಸಿಕೊಂಡ ಸನ್ಮಾನ್ಯ ನಿಷ್ಪತ್ತಿ ವಿಷಣ್ಣವದನರಾದರು. ಅದನ್ನು ಗ್ರಹಿಸಿದ ಬಂಚ್
ಹಾಗೆ ಮಾಡಿದರೆ ಎರಡು ಸಮಸ್ಯೆಗಳು ಉದ್ಭವಿಸುವವು ಸಿವಂಗಿ, ಮೊದಲೆಯದಾಗಿ ಶ್ರೀಯುತ ನಿಷ್ಪತ್ತಿಯವರು ರಾಜಕಾರಣದಿಂದ ದೂರಸರಿಯುವರು, ಎರಡನೆಯದಾಗಿ ಕಿರುಕುಳ್ ದುಷ್ಟ ದುಮಂಗಲನ ಕೀಲುಗೊಂಬೆ, ಅವನು ಸುಮ್ಮನಿರಲಾರ. ಸನ್ಮಾನ್ಯರ ಆಡಳಿತದಲ್ಲಿ ಸಕಾರಾತ್ಮಕ ಅಂಶಗಳಿಲ್ಲ, ಒಳಚರಂಡಿ ದುರಸ್ತಿ ಕಾರ್ಯಕೆಲಸಗಳಿಗೆ ಸಂಬಂಧಿಸಿದಂತೆ ಕೋಟ್ಯಾಂತರ ಅವ್ಯವಹಾರ ನಡೆದಿದೆ ಎನ್ನುವುದು ವಿರೋಧಪಕ್ಷಗಳ ಆಪಾದನೆ, ಒಡಗು ಜಲಾಶಯ ನಿಮರ್ಾಣ ಯೋಜನೆಯ ಅವ್ಯವಹಾರದಲ್ಲಿ ಶ್ರೀಯುತರ ಖಾಸಾ ಅಳಿಯಂದಿರು ಶ್ರೀಶಕಟ ವ್ಯಾಸಘಟ್ ಅವರ ಪಾತ್ರ ನಿಚ್ಚಳವಾಗಿದೆ. ಕಿರುಕುಳ್ ಸುಮ್ಮನಿರುವುದಿಲ್ಲ, ಇದು ವೈಯಕ್ತಿಕ ಅಭಿಪ್ರಾಯವಲ್ಲ ರಾಜಕೀಯ ವಿಶ್ಲೇಷಕನಾಗಿ ಮಾಹಿತಿಗಳನ್ನು ಆಧರಿಸಿ ಹೇಳಿದೆ ಎಂದರು. ಅವರ ಮಾತುಗಳು ಮಂಜುಗಡ್ಡೆ ಸದೃಶವಾಗಿದ್ದವು.
ಪ್ರೊ ದಕ್ಷಾರಿ ಬಂಚ್ ನಿಷ್ಕಲ್ಮಷ ಹೃದಯವಂತರು. ನೇರಮಾತುಗಾರಿಕೆಗೆ ಹೆಸರಾದವರು. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಸನ್ಮಾನ್ಯ ಮುಖ್ಯಮಂತ್ರೀಜಿ ಒಂದು ವೇಳೆ ರಾಜಿನಾಮೆ ಸಲ್ಲಿಸಬಹುದೆಂದು ಭಾವಿಸೋಣ, ಶಾಸನಸಭೆಯನ್ನು ವಿಸಜರ್ಿಬಹುದೆಂದೇ ಊಹಿಸೋಣ. ಮಧ್ಯಂತರ ಚುನಾವಣೆ ಸಂಭವಿಸಿದರೂ ಕಿರುಕುಳ್ ಜಯಶಾಲಿಯಾಗುವುದು ಅಸಂಭವ. ದುಮಂಗಲನ ಮಾಫಿಯಾ ಕೃತ್ಯಗಳಲ್ಲಿ ನಿಕಟ ಸಂಪರ್ಕವಿರುವ ಅವನ ಮೇಲೆ ನೂರಾರು ಕ್ರಿಮಿನಲ್ ಖಟ್ಲೆಗಳು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿವೆ. ಅವೆಲ್ಲ ವಿಚಾರಣೆ ಹಂತದಲ್ಲಿವೆ. ಅವನು ನಾಳೆಯೇ ಜೈಲಿಗೆ ಹೋದರೂ ಆಶ್ಚರ್ಯವಿಲ್ಲ. ಆದ್ದರಿಂದ ಕಿರುಕುಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದರು, ಬಂಚ್ ಕಡೆ ಅಭಿಮಾನಪೂರ್ವಕ ನೋಟಬೀರಿದರು.
ಇನ್ನು ನಾಳೆಗೆ..
ಸೂಪರ್, ಬಹಳ ದಿನಗಳ ನಂತರ ‘ಅವಧಿ’ಯಲ್ಲಿ ಮತ್ತೆ ಕಾದಂಬರಿ…
Waiting..!!
Dr. Vimala Puranik
there is ever rewarding Kum.Ve touch. fine engaging narrative .keep it up!
ಕಾದಂಬರಿಯ ಒಳ ಹರಿವು ರಾಜಕೀಯ ತೊಳಲಾಟದ ಸಾಗುತ್ತಿದೆ.ಬಹುಶಃ ಮುಂದೆ ಒಳಚರಂಡಿಯು ಮಾಡುವ ಅವಾಂತರದಿಂದ ಪದವಿಗಳು ಉರುಳಿ ಹೋಗುವ ಸಂಭವವಿರಬಹುದು ಕಾದು ನೋಡಬೇಕಿದೆ.ಕಾದಂಬರಿಯ ಮೊದಲ ಪಾದವು ಓದುವ ಉತ್ಸಾಹ ಮೂಡಿದೆ.
ಅವಧಿಗೆ ಮತ್ತು ಕುಂವೀ ಸರ್ ಧನ್ಯವಾದಗಳು