ಕುಂ ವೀ ಅನುವಾದಿಸಿದ ‘ಶ್ರೀ ರಾಮಾಂಜನೇಯ ಯುದ್ದ’

ತೆಲುಗು ಮೂಲ: ಕುಶಲಂಬೆ ಗದಾ ಆಂಜನೇಯ- ಮಾರುತಿ ಪೌರೋಹಿತ್ಯಂ

ಕನ್ನಡಕ್ಕೆ- ಕುಂ ವೀ       

‘ಯಾವಾಗ ನೋಡಿದ್ರೂ ಹಾರ್ಮೋನಿಯಂ ಪೆಟ್ಟಿಗೇನ ಹಿಡಕೊಂಡು ಕುಂಡ್ರುತೀಯಲ್ಲ! ಹಾಡಿಕಂತ ಇದ್ರೆ ಮನೆ ಬಾಳ್ವೆ ನಡೀತೈತ! ಹಗಲು ರಾತ್ರಿ ನಾನೊಬ್ಳೆ ದುಡೀತೀನಿ, ಹೊಟ್ಟೆಗಿದ್ರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲ. ನಿನ್ನೆ ದಿವಸ ಸಣ್ಣ ಮಲ್ಲಾರೆಡ್ಡಿ ಕೂಲಿ ಮಂದಿ ಲೆಕ್ಕ ಬರೆಯುವಂತಿ ಬಾ ಅಂತ ಕರೆದದ್ದು ನೆನಪಿಲ್ಲವೇನು! ಆತನ ಮಾತನ ಕಿವಿ ಮ್ಯಾಲ ಹಾಕ್ಕೊಂಡಿ ಏನು! ಮಕ್ಕಳಿಬ್ರು ಹಾಸ್ಟೇಲ್ ಸೇರಿಕೊಳ್ಳದಿದ್ರೆ ನಮ್ಮ ಗತಿ ಏನಿತ್ತು!’ ಎಂದು ಸುಂಕಮ್ಮ ಸಿಟ್ಟಿನ ಭರದಲ್ಲಿ ಹೇಳಿದಳು.

ಪಾಂಡುರಂಗಯ್ಯ ತನ್ನ ಪತ್ನಿಯ ಮಾತನ ಕಿವೀಲಿ ಹಾಕ್ಕೊಂಡರೆ ತಾನೆ! ಎಂದಿನಂತೆ ಪೆಟ್ಟಿಗೇನ ಕೈಲಿಡುಕೊಂಡು ಮನೆ ಮುಂದಿನ ಚಪ್ಪರ ಪ್ರವೇಶಿಸಿದ. ಅಲ್ಲಿ ಕುರ್ಚಿನ ಹಾಕ್ಕೊಂಡು ಕೂತನು.

ಅದನ್ನು ಆಕೆ ನೋಡಿದಳು, ‘ನಾನೇಳಿದ್ದು ನಿನ್ನ ಕಿವಿ ಮ್ಯಾಲ ಬೀಳಲಿಲ್ಲೇನು! ಬಾವಿ ಕಡೆ ಲೆಕ್ಕ ಬರಕೊಳ್ಳೋಕೆ ಹೋಗಬಾರದೆ!’ ಎಂದು ಪುನಃ ನೆನಪಿಸಿದಳು.

‘ಹಂಗ್ಯಾಕೆ ಅರಚ್ತಿ, ಮೊನ್ನೆ ದಿವಸ ಹಾಲ್ವಿ ಕಡೆಯೋರು ಡ್ರಾಮನ ಕಲಿಸಿರಿ ಅಂತ ಬಂದಿದ್ರಲ್ಲ! ವಾರಾದ ಮ್ಯಾಲೆ ಬರತೀವಂತ ಹೇಳಿದ್ದರಲ್ಲವೆ! ನಾನು ಹಾಲ್ವಿಗೆ ಹೋಗ್ತೀನಿ, ನೀನೊಬ್ಬಳೆ ಮನೇಲಿ ಉಳ್ಳಾಡಿಕಂತ ಇರುವಂತಿ’ ಎಂದು ಆತ ಕುರ್ಚಿನ ಕೆಳಕ್ಕೆ ಎಸೆದ.

‘ಅಲಲಾ ಇರೋ ಸಂಗತೀನ ಹೇಳಿದ್ರೆ ಹಂಗ್ಯಾಕೆ ಸಿಟ್ಟು ಮಾಡಿಕಂತಿ. ಅವರು ಹೋಗೇ ಐದಾರು ದಿನಗಳಾದವು, ಅವರ ಸುಳಿವಿಲ್ಲ’ ಎಂದು ಪುನಃ ನೆನಪಿಸಿದಳು.

‘ಅವರು ಬರದೆ ಎಲ್ಲಿಗೋತಾರೆ! ಡ್ರಾಮ ಅಂದರೆ ಸುಮ್ಮನೇನಾ! ಎಲ್ಲಾನು ಹೊಂದಿಕೆ ಆಗಬೇಕಲ್ಲ. ಅದಕ ಏರುಪಾಟು ಮಾಡಿಕೊಳ್ಳಬೇಕೋ ಬ್ಯಾಡವೊ! ಡ್ರಾಮ ಅಂದರೆ ಊರೆಲ್ಲ ಮಾತಾಡಿಕೊಳ್ಳಬೇಕು, ಎಲ್ರೂ ಕೈ ಜೋಡಿಸಬೇಕು’ ಎಂದನಕಂತ ಕುರ್ಚಿನ ದರ ದರ ಎಳಕೊಂಡು ಹೊರಗಡೆ ಹೋದ.

ಮದುವೆ ಮಾಡಿಕೊಂಡು ಈಸು ದಿನಗಳಾದರು ಈತ ನನ್ನ ಮಾತನ ಕಿವಿ ಮೇಲೆ ಹಾಕ್ಕೊಂಡಿಲ್ಲ ಇದುವರೆಗೆ. ಎಂದು ಮನಸ್ಸಲ್ಲಿ ಅನಕಂತ ಆಕೆ ಬುತ್ತಿಗಂಟನ ಹಿಡಕೊಂಡು ಮನೆಯಿಂದ ಹೊರಗೆ ಬಂದಳು. ‘ಬಾನ ಬ್ಯಾಳೀನ ನಗಂದಿ ಮ್ಯಾಲ ಇಟ್ಟೀನಿ, ಮನೇಲಿ ಕುಡಿಯಾಕೆ ಒಂದ್ತೊಟ್ಟು ನೀರಿಲ್ಲ ನೆನಪರಲಿ ಬಾವಿ ನೀರನ ತಂದು ಹಾಕೋದು ಮರಿಬ್ಯಾಡ. ಹೊತ್ತಾಗೇತಿ, ನಾನು ಕೂಲಿಗೆ ಹೋಗಿ ಬರತೀನಿ, ಮನಿ ಕಡೆ ಹುಷಾರು’ ಎಂದು ಹೇಳಿ ಹೊರಟು ಹೋದಳು. ಆಕೆ ತನ್ನೊಂದು ಕೈಲಿ ಅದನ್ನು, ತನ್ನ ಇನ್ನೊಂದು ಕೈಲಿ ಇದನ್ನು ಹಿಡಕೊಳ್ಳೋದನ ಮರಿಲಿಲ್ಲ. ಸ್ವಲ್ಪ ಹೊತ್ತಲ್ಲಿ ಆಕೆ ಈಡಿಗರ ಹೊಲ ಸೇರಿಕೊಳ್ಳಬೇಕಿತ್ತು. ಪಾಂಡುರಂಗಯ್ಯಗೆ ಇವೆಲ್ಲ ಮಾಮೂಲು. ತಾನು ಎಂದಿನಂತೆ ಪೆಟ್ಟಿಗೆನ ತಗೊಂಡು ಚಪ್ಪರದ ಕೆಳಗೆ ಕುಳಿತು ಬಾರಿಸಲಾರಂಭಿಸಿದ.

‘ಸಮಸ್ತ ರಾಜ್ಯವನ್ನು ತೃಣ ಸಮಾನವೆಂದು ಭಾವಿಸಿ ನೀನು’ ಎಂಬ ಪದ್ಯವನ್ನು ಶುರು ಮಾಡಿದ. ಈ ರೀತಿ ಆತ ರಾಗಾಲಾಪನೆಯಲ್ಲಿ ಮೈಮರೆತಿರುವಾಗಲೇ….

ಅಲ್ಲೆಲ್ಲೊ ಅಂದರೆ ಕರ್ನೂಲಿನ ಕಲ್ಕೂರ ಹೋಟಲ್ ಹಿಂಭಾಗದಲ್ಲಿ ನಾಟಕ ಕಲಾವಿದೆ ರಂಗೂಬಾಯಿ ಮನೇಲಿ ಪಲುಕೂರು ತಿಮ್ಮಯ್ಯ ಕಾಫಿ ಕುಡಿತ್ತಿದ್ದ. ಆಕೆ ಇದ್ದಲ್ಲಿ ತಾನು, ತಾನಿದ್ದಲ್ಲಿ ಆಕೆ ಇರುವುದು ಮಾಮೂಲು. ಆಕೆ ಎಲ್ಲೆ, ಯಾವುದೆ ನಾಟಕದಲ್ಲಿ ಅಭಿನಯಿಸಲಿ, ಆಕೆಯ ಹಾಡುಗಳಿಗೆ ಹಾರ್ಮೋನಿಯಂ ಆತನೆ ನುಡಿಸುವುದು ವಾಡಿಕೆ. ಆಕೆಯ ಶೃತಿ ಲಯ ಆರೋಹಣ ಅವರೋಹಣ ಇನ್ನಿತರರಿಗೆ ಅರ್ಥವಾಗುವುದಿಲ್ಲವೆನ್ನುವುದು ತನ್ನ ಅಭಿಪ್ರಾಯ.

ಕುಡಿದ ಕಾಫಿ ಕಪ್ಪನ್ನು ತಾನೆ ಶುಭ್ರಗೊಳಿಸಿ ಮೂಲೆಯಲ್ಲಿ ಇಟ್ಟ. ‘ಎಲ್ಲಿಂದಲಾದರು ಕರೆ ಬಂತೇನಮ್ಮಾ!’ ಎಂದು ಕೇಳಿದ. ಅದಕ್ಕೆ ಆಕೆ ಒಂದಿಬ್ಬರು ಬಂದು ಹೋದರು, ನಾಳೆ ನಾಡಿದ್ದು ಬಂದು ಅಡ್ವಾನ್ಸ್ ಕೊಡ್ತೀವಂತ ಹೇಳ್ಯಾರ. ಮಳೆ ಇಲ್ಲ, ರೈತರ ಕೈಯಲ್ಲಿ ಹಣವಿಲ್ಲ, ಅದೇ ಸಮಸ್ಯೆ’ ಎಂದಳು.

ಕೇಳಿ ತಿಮ್ಮಯ್ಯ ನಿಡಿದಾದ ಉಸಿರುಬಿಟ್ಟ, ‘ನೀನೇಳೋದು ಖರೆ ಬಿಡಮ್ಮ, ಮಳೆ ಬೆಳೆ ಚೆನ್ನಾಗಿದ್ದರೇನೆ ನಮ್ಮಂಥ ಕಲಾವಿದರ ಹೊಟ್ಟೆಗೆ ಅನ್ನ’ ಎಂದು ಹೇಳುತ್ತ ಹೆಗಲ ಮೇಲಿದ್ದ ವಲ್ಲಿಯನ್ನು ಕೊಡವಿ ಸರಿಪಡಿಸಿಕೊಂಡ.

‘ಮುಂದಿನ ವಾರ ಬಿಡುವು ಮಾಡಿಕೊಂಡು ಬಂದು ಹೋಗು, ಏನಾದರು ಇದ್ದರೆ ಹೇಳ್ತೀನಿ’ ಎಂದಳು ರಂಗಾಬಾಯಿ.

‘ಏನಾದರೊಂದು ಮಾಡಮ್ಮ, ನಾನು ನಿನ್ನನ್ನೆ ನಂಬಿದ್ದೀನಿ, ವಯಸ್ಸಾಯ್ತು. ದೂರದೂರುಗಳಿಗೆ ಹೋಗಿ ನಾಟಕ ಕಲಿಸೋಣವೆಂದರೆ ಮೈಯಲ್ಲಿ ಕಸುವಿಲ್ಲ. ಮನೇಲಿ ಮಕ್ಕಳು ಎಲ್ಲಿಗೂ ಹೋಗಬೇಡಾಂತ ಹೇಳ್ತಾರೆ. ಈ ವಿದ್ಯೆ ಕಲಿತಿರೋದೆ ಹಣ ಸಂಪಾದಿಸೋಕೆ ಅಂತ ಅಂತಿರ್ತಾರೆ. ನಮ್ಮ ಸಮಸ್ಯೆ ಅವರಿಗೆ ಅರ್ಥವಾದರೆ ತಾನೆ!’ ಎಂದು ನೋವಿನಿಂದ ಮಾತಾಡಿದ.

‘ಕೆಲವರಿಗೆ ಇಸ್ಪೀಟಾಡೋ ಚಟ, ಕೆಲವರಿಗೆ ಕುಡಿಯೋ ಅಭ್ಯಾಸ, ನಮಗೆ ನಾಟಕಗಳಲ್ಲಿ ಅಭಿನಯಿಸೋ ಅಭ್ಯಾಸ, ಇದರ ಬಗ್ಗೆ ಬೇರೆಯವರಿಗೆ ಅರ್ಥ ಮಾಡಿಸೋ ಅಗತ್ಯವಿಲ್ಲ ತಿಮ್ಮಯ್ಯ, ನಮ್ಮ ಕೆಲಸ ನಾವು ಮಾಡಿಕೊಂಡು ಹೋಗಬೇಕು ಅಷ್ಟೆ. ನಾವೆಲ್ಲರು ಕಲೆನ ನಂಬಿರೋರಲ್ಲವೆ! ಆದರೆ ಕಲೆನ ನಾವು ಮಾರಿಕೊಳ್ಳಬಾರದು’ ಎಂದಳು ಬಾಯಿ.

‘ಬಂಗಾರದಂಥ ಮಾತು ಹೇಳಿದಿ ರಂಗಮ್ಮ’ ಎಂದು ಆತ ಆಕೆಯ ಮಾತನ್ನು ಶ್ಲಾಘಿಸಿದ ವೇಳೆಯಲ್ಲೆ..

ಗುವ್ವೆಲದೊಡ್ಡಿ ಎಂಬ ಹೆಸರಿನ ಗ್ರಾಮ, ಅಲ್ಲೆ ಜಾಡರ ನೆಟ್ಟೆಕಲ್ಲಪ್ಪನ ಚಹಾ ದುಕಾನು. ಆತ ಅದೇ ತಾನೆ ವಗ್ಗರಣೆ ಹಾಕುವ ಪ್ರಯತ್ನದಲ್ಲಿದ್ದ. ಆತನ ಮಗ ಕಡಾಯಿಯೊಳಕ್ಕೆ ಹೆಚ್ಚಿದ್ದ ಮೆಣಸಿನಕಾಯಿ, ಈರುಳ್ಳಿ ಹಾಕುತ್ತಿದ್ದ. ಇನ್ನು ತನ್ನ ಹೆಂಡತಿ ಮಂಡಾಳನ್ನು ನೀರಲ್ಲಿ ನೆನೆಸುವುದರಲ್ಲಿ ಮಗ್ನಳಿದ್ದಳು. ರಸೂಲು, ವಡ್ಡರ ವೆಂಕಟಪ್ಪ, ಗೊರವರ ನಾಗಣ್ಣ, ನಾಯಕರ ಗಿಡ್ಡಪ್ಪ ಈಡಿಗರ ಸಣ್ಣಕಾಜಣ್ಣ ಬಿಸಿ ಬಿಸಿ ವಗ್ಗರಣಿ ತಯಾರಾಗುವುದನ್ನೆ ಕಾಯುತ್ತ ಕುಳಿತಿದ್ದರು.

‘ಲೇ ಗಿಡ್ಡಪ್ಪ, ಮೊನ್ನೆ ದಿವಸ ಪೆದ್ದೂರಲ್ಲಿ ದೇವರ ಹಬ್ಬ ನಡೀತು, ಅಲ್ಲಿ ನಾಟಕ ನಡೀತು. ಅದರಲ್ಲಿ ನಮ್ಮೋನು ನಾರದನ ಪಾರ್ಟು ಮಾಡಿದ್ದ, ನೋಡಿದೆ, ಆ ನಾಟಕ ಏನೇನು ಚೆನ್ನಾಗಿರಲಿಲ್ಲ’ ಎಂದ ಎಂಟೇಸು.

‘ನೀನೇಳಿದ್ದು ಖರೆ ಐತಿ ನೋಡು, ಮೊನ್ನೆ ದಿವಸ ಗದ್ದೇಲಿದ್ದಾಗ ಪೆದ್ದೂರ ಅಗಸರಾತ ಸಿಕ್ಕಿದ್ದ. ಆತ ಕೂಡ ಅದೇ ಮಾತು ಹೇಳಿದ’ ಎಂದ ಗಿಡ್ಡಪ್ಪ.

ನಾಟಕಗಳೆಂದರೆ ಬಿದ್ದು ಸಾಯುವ ಗೊರವರ ನಾಗಣ್ಣ, ‘ಆ ಊರಿನ ವಿಷಯ ನಮಗ್ಯಾಕೆ, ಅವರು ಹೆಂಗಾರ ಆಡಕಳ್ಳಿ, ಇಲ್ಲಿ ನಾವೂ ಒಂದು ನಾಟಕಾನ ಆಡಿದರೆ ಹೇಗೆ! ಶೇಷಾವಲಿ ಉರುಸುಗೆ ಆಡಿದರೆ ಹೇಗೆ!’ ಎಂದ.

‘ನನ್ನ ಮನಸ್ಸಲ್ಲಿದ್ದುದನ್ನು ಹೇಳಿದಿ ನೋಡು ನಾಗಪ್ಪ, ನನಗೂ ನಾಟಕದಲ್ಲಿ ಪಾರ್ಟು ಮಾಡಬೇಕೆಂಬಾಸೆ ಇದೆ ಕಣಣ್ಣ’ ಎಂದ ವಡ್ಡರ ಎಂಕಟಪ್ಪ.

ಅದುವರೆಗೆ ಈಡಿಗರ ಕಾಜಣ್ಣ ಅವರ ಮಾತುಕತೆನ ಆಲಿಸುತ್ತಿದ್ದ. ದೊಡ್ಡಮನುಷ್ಯ ಅನ್ನಿಸಿಕೊಳ್ಳಲು ಆಸೆ ಪಡುತ್ತಿದ್ದ ವ್ಯಕ್ತಿ ಆತ, ‘ಎಲ್ಲಾದನು ನಿಮ್ಮಷ್ಟಕ್ಕೆ ನೀವೆ ಮಾತಾಡಿಕೊಂಡರೆ ಹೇಗೆ! ದೊಡ್ಡೋರ ಸಣ್ಣೋರು ಅಂತ ಊರಲ್ಲಿಲ್ಲವೇನು! ಗ್ರಾಮದ ಹಿರಿಯರನ ಒಂದು ಮಾತು ಕೇಳೋದು ಬೇಡವೇನು! ನಾಟಕ ಅಂದರೆ ಊರಿಗೇನೆ ಹಬ್ಬ. ಅದು ನಿಮಗು ನನಗು ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲರು ಕೈಜೋಡಿಸಿದರೇನೆ ನಾಟಕ, ಇಲ್ಲಾಂದರೆ ದೊಂಬರರಾಟ ಆಗ್ತದೆ’ ಎಂದು ಎಚ್ಚರಿಸಿದ.

‘ಏಯ್ ಚಿಗಪ್ಪ, ಇದನ್ನೆಲ್ಲ ಊರ ಹಿರಿಯರ ಗಮನಕ್ಕೆ ತಾರದೆ ಮಾಡಲಿಕ್ಕಾಗುವುದೆ! ಅಷ್ಟು ನಮಗೆ ತಿಳಿಯದೆ! ನಾಟಕಂದರೆ ಊರೋರೆಲ್ಲರು ಸಂಭ್ರಮಿಸಬೇಕು, ನೀನೇ ಹೇಳಿದಂತೆ ಮಾಡೋಣ ಬಿಡು’ ಎಂದ ಎಂಟೇಸು.

ಅಷ್ಟರಲ್ಲಿ ನೆಟ್ಟಕಲ್ಲು ವಗ್ಗರಣೆ ರೆಡಿ ಮಾಡಿದ. ಪೇಪರಲ್ಲಿ ಎಲ್ಲರಿಗೆ ಹಾಕಿ ಕೊಟ್ಟ. ನೆಟ್ಟಕಲ್ಲು ಹೋಟಲ್ ವಗ್ಗರಣೆ ಮಿರ್ಚಿ ಅಂದರೆ ಊರವರಿಗೆಲ್ಲ ಇಷ್ಟ.

‘ನಾಟಕದ್ದಿವಸ ವಗ್ಗಾಣಿ ಟೀ ಸಪಲೈ ಮಾಡೋದು ನಿನ್ನ ಜವಾಬ್ದಾರಿ ಮಾವ, ಬೇರೆ ಊರವರನ್ನ ನಾವ್ಯಾರು ನಮ್ಮೂರೊಳಿಕ್ಕೆ ಬಿಟ್ಟುಕೊಳ್ಳಲ್ಲ’ ಎಂದು ಹೇಳಿದ ರಸೂಲು.

‘ನಾನು ಬದುಕಿರೋವರೆಗೆ ಬೇರೆ ಊರೋರನ ನಾನು ಊರೊಳ್ಳಕ್ಕೆ ಬಿಟ್ಟುಕೊಳ್ಳುವೆನೇನು!’ ಎಂದ ನೆಟ್ಟಕಲ್ಲು.

‘ಇನ್ನು ಸರಿ ಬುಡ್ರಪೊ, ಉರುಸು ಏನು ದೂರ ಇಲ್ಲ, ಇನ್ನು ಉದ್ರಿ ಮಾತಾಡೋದು ಬಿಟ್ಟು ನಮ್ಮ ನಮ್ಮ ಹೊಲಗಳ ಕಡೆ ಹೋಗೋಣ, ನಾಳೆ ತಳವಾರ ಬಜಾರಿ ಕೈಲಿ ಟಾಂ ಟಾಂ ಹಾಕಿಸಿ ಊರಿಗೆಲ್ಲ ತಿಳಿಸಿದರಾಯಿತು. ಬರೋ ಶನಿವಾರ ಊರೋರೆಲ್ಲರನ್ನು ಗುಡಿ ಕಡೆ ಸೇರಿಸೋಣ, ನಾಟಕ ಬಗ್ಗೆ ಅವರ ಜೊತೆ ಚರ್ಚೆ ನಡೆಸೋಣ’ ಎಂದು ಹೇಳಿದ ಈಡಿಗರ ಕಾಜಣ್ಣ, ಮೀಸೆಗಂಟಿದ್ದ ಚಹಾ ಗುರುತುಗಳನ್ನು ವಲ್ಲಿಯಿಂದ ಒರೆಸಿಕೊಳ್ಳುತ್ತ.

***

ಟಾಂಟಾಂ ಹಾಕಿಸಿದ ಪರಿಣಾಮ ಊರೆಲ್ಲ ಸಂಭ್ರಮಿಸಿತು. ಗ್ರಾಮದ ಪ್ರಮುಖರು ಮಾತ್ರವಲ್ಲದೆ ನಾಟಕದಲ್ಲಿ ಪಾರ್ಟು ಮಾಡಲಿಚ್ಚಿಸಿದ್ದವರೆಲ್ಲರು ಗುಡಿ ಕಟ್ಟೆ ಕಡೆ ನಡೆದರು, ಆಗ ಸಂಜೆ ಏಳು ಗಂಟೆ ಹೊತ್ತಾಗಿತ್ತು. ಮೊದಲಿಗೆ ಈಡಿಗರ ಕಾಜಣ್ಣ ಮಾತು ಆರಂಭಿಸಿದ. ನಾಟಕ ಆಡೋಕೆ ಊರಿನ ಬಹುಪಾಲು ಯುವಕರು ಸಜ್ಜಿದ್ದರು. ಆ ವಿಷಯ ಕುರಿತಂತೆ ಮಾತಾಡುವುದಕ್ಕೆ ಅಲ್ಲವೆ ತಾವೆಲ್ಲರು ಕಟ್ಟೆ ಮೇಲೆ ಜಮಾಯಿಸಿರುವುದು!

ಗೊರವರ ದೊಡ್ಡಮಲ್ಲಪ್ಪ, ‘ನೋಡ್ರಪ್ಪಾ, ಇದು ಮಳೆಗಾಲ, ಮಂದಿಗೆ ಕೈಕಾಲು ಆಡಿಸೋದಕ್ಕು ಪುರಸೊತ್ತಿಲ್ಲ, ಬ್ಯಾರೆ ಊರುಗಳಿಗೆ ಹೋಲಿಕೆ ಮಾಡಿದರೆ ನಮ್ಮೂರು ಸಾವ್ರ ಪಾಲು ಮೇಲು, ಮಳೆಗಾಲಕ್ಕೊಂದು ಬೆಳೆ, ಕಾಲುವೆ ನೀರಿಗೊಂದು ಬೆಳೆ. ಇನ್ನು ಈಗ ಆಗಸ್ಟ್ ತಿಂಗಳು, ಉರುಸು ಇರೋದು ಫೆಬ್ರವರೀಲಿ, ಆಗ ಬೇಸಿಗೆ ಬೆಳೆ ಸುಗ್ಗಿ ಟೈಮು, ನೀವು ನಾಟಕದ ಗೀಳು ಹಚ್ಚುಕೊಂಡು ಹೊಲಗಳನ ನಿರ್ಲಕ್ಷಿಸುವಿರೊ ಏನೊ! ಹೊಲಗಳು ಕೆಡದಂಗ ಆಡತೀವಿ ಅಂದರೇನೆ ನಾವೊಪ್ಪಿಕೊಳ್ಳೋದು’ ಎಂದು ಷರತ್ತು ವಿಧಿಸಿದ.

‘ಹಂಗೆಲ್ಲ ಅಂದುಕೋ ಬ್ಯಾಡ ತಾತ, ಹಂಗ್ಯೆಲ್ಲ ಯಾಕ ಮಾಡತೀವಿ, ಹೊಲಗಳ ಕೆಲಸ ಮುಗಿಸಿ ರಾತ್ರಿ ಟೈಮಲ್ಲಿ ನಾಟಕ ಪ್ರಾಕ್ಟೀಸನ ಇಟ್ಟುಕೋತೀವಿ’ ಎಂದು ರಸೂಲು ಮಾತು ಕೊಟ್ಟ.

‘ಯಾವ ನಾಟಕನ ಆಡಬೇಕೂಂತ ಇದ್ದೀರಿ!’ ಎಂದು ಕೇಳಿದ್ದು ಗಿಡ್ಡಯ್ಯ.

ಅಲ್ಲೆ ಇದ್ದ ಕುಲಕರ್ಣಿ ‘ರಾಮಾಂಜನೇಯ ಯುದ್ದ ಆಡಿರಿ, ಚಲೋ ಇರ್ತದ ಅದನಾಡಿದರೆ ಊರ ದೇವರು ಇಷ್ಟಪಡತಾನೆ, ಅದರಿಂದ ಊರಿಗ್ಗೂಡ ಒಳ್ಳೇದಾಗ್ತದ’ ಎಂದು ಸಲಹೆ ನೀಡಿದ.

‘ಓಹ್! ರಾಮಾಂಜನೇಯ ಯುದ್ದಾನ! ಅದಕ್ಕೆ ಹದಿಮೂರು ಮಂದಿ ಬೇಕು. ಅದರಲ್ಲಿರೋದು ಒಂದೇ ಹೆಣ್ಣು ಪಾತ್ರ, ಅದು ಶಾಂತಿಮತಿದು. ಆ ಪಾರ್ಟನ ನಮ್ಮ ಪೈಕಿ ಯಾರು ಮಾಡಬಹುದು! ಇಲ್ಲದಿದ್ದರೆ ಕರ್ನೂಲಿನಿಂದ ರಂಗಮ್ಮನ್ನ ಕರೆಸಿದರಾಯಿತು’ ಎಂದು ಹೇಳಿದ ವಡ್ಡರ ವೆಂಕಟಪ್ಪ, ಆದರೆ ನಾಟಕ ಅಂದರೆ ತುಂಬಾನೆ ಇಷ್ಟ. ತನಗು ಆಕೆ ಜೊತೆ ವೇಷ ಹಾಕಬೇಕೂಂತ ಆಸೆ ಇದ್ದ ಮನುಷ್ಯ. ಆ ಚಾನ್ಸ್ ತನಗೆ ಸಿಕ್ಕರೆ! ಯೋಚಿಸಿಯೆ ತಾನು ಪ್ರಸ್ತಾಪಿಸಿದ್ದು.

‘ಏನೇ ಅಗಲಿ ಹೆಣ್ಣು ಪಾತ್ರನ ಹೆಣ್ಮಕ್ಕಳೆ ಹಾಕೋದೆ ಸೂಕ್ತ. ಆಕೇನ ಕರೆಸಿದರಾಯಿತು’ ಎಂದ ಅಂಜಿನಯ್ಯ.

‘ಉಳಿದಂತೆ ಇನ್ನು ಹನ್ನೆರಡು ಮಂದಿ ಸಜ್ಜಾಗಬೇಕು’ ಎಂದ ಕಾಜಣ್ಣ.

‘ನಾಟಕದಲ್ಲಿ ಆಂಜನೇಯನ ವೇಷಕ್ಕೆ ನಮ್ಮ ದೊಡ್ಡ ಮಗ ರೆಡಿ ಅದಾನ’ ಎಂದ ಕುರುಬರ ಮಲ್ಲಣ್ಣ.

‘ಎಲ್ಲಾ ವಿಷಯಾನ ನಾವು ನಾವೆ ಮಾತಾಡಿದರೆ ಹೆಂಗೆ! ಯಾವ ಪಾತ್ರಕ್ಕೆ ಯಾರು ಸೂಕ್ತ ಅಂತ ನಿರ್ಧರಿಸೋದು ನಾಟಕನ ಕಲಿಸೋ ಮಾಸ್ತರು. ಆತನಾದರೆ ಮನುಷ್ಯರ ಧ್ವನಿ ಎತ್ತರ ಚುರುಕು ನೋಡಿ ಆಯ್ಕೆ ಮಾಡುತಾನೆ. ನಾವು ಹೇಳಿದ್ದಕ್ಕೆಲ್ಲ ಮಾಸ್ತರು ಒಪ್ಪೊಲ್ಲ’ ಎಂದು ಎಂಟೇಸು.

ಅದಕ್ಕೆ ಉಳಿದವರು ‘ನೀನು ಹೇಳಿದ್ದು ಸರಿ ತಾತ’ ಎಂದು ಸಮ್ಮತಿ ಸೂಚಿಸಿದರು.

‘ಎಲ್ಲಾ ಸರಿ, ನಾಟಕ ಕಲಿಸೋ ಮೇಸ್ಟುç ಯಾರು! ಎಲ್ಲಿಂದ ಕರೆಸೋದು!’ ಎಂದು ಕೇಳಿದ, ಈಡಿಗರ ಅಂಜಿನಯ್ಯ.

‘ಪಲುಕೂರು ತಿಮ್ಮಯ್ಯ ವಾಸಿ, ಆತನನ್ನೇ ಕರೆಸಿದರಾಯಿತು’ ಎಂದು ತಕ್ಷಣ ತಿಳಿಸಿದ ಕುರುಬರ ಗಿಡ್ಡಯ್ಯ.

‘ಓಹ್ ಆತನೇನು! ಆತಗೆ ವಯಸ್ಸಾಗೈತೆ, ಇನ್ನೊಬ್ಬ ಮಾಸ್ತರನಿದ್ದ, ಆತ ಇತ್ತೀಚಿಗೆ ಎಲ್ಲೂ ಹೋಗ್ತಿಲ್ಲ. ಆತ ಬಂದರೆ ರಂಗಮ್ಮಗೆ ಮಾತ್ರ ಹಾರ್ಮೋನಿಯಂ ನುಡಿಸತಾನಂತೆ! ಆದ್ದರಿಂದ ತಿಮ್ಮಯ್ಯ ಏನು ಉಪಯೋಗವಿಲ್ಲ’ ಎಂದು ತಿಳಿಸಿದ ಎಂಟೇಸು.

‘ಹಾಗಿದ್ದರೆ ಎಲ್ಲ ತಿಳಿದೋನಾದ ನೀನೆ ಹೇಳು ಇಂಥೋರಂತ!’ ಎಂದ ಗಿಡ್ಡಪ್ಪ.

‘ಪಾಂಡುರಂಗಯ್ಯಾಂತ ಇದ್ದಾನೆ, ಆತ ಒಳ್ಳೆ ಮನುಷ್ಯ. ಕೊಟ್ಟಷ್ಟು ಇಸಕೊಳ್ತಾನೆ, ಆತನನ್ನೇ ಕರೆಸೋಣ’ ಎಂದ ಎಂಕಟೇಸು.

‘ಆತ ಎಷ್ಟು ತಗೋತಾನೇನೊ!’ ಎಂದು ಅನುಮಾನ ವ್ಯಕ್ತಪಡಿಸಿದ ಗೊರವರ ವiಲ್ಲಯ್ಯ.

‘ಕಳೆದ ವಾರ ಅಲ್ಲೊಂದು ಹಳ್ಳೀಲಿ ಜಾತ್ರೆಗೆ ಹೋಗಿದ್ದೆ. ಅಲ್ಲೊಂದು ನಾಟಕ ನಡೀತು, ನೋಡಿದೆ. ಅವರಿವರನ್ನು ವಿಚಾರಿಸಿ ಕೇಳಿ ತಿಳಕೊಂಡೆ, ಒಟ್ಟು ಎರಡು ಸಾವ್ರ ತಗೋತಾನಂತೆ, ದಿನದ ಪಾಡ ಖರ್ಚುಬಿಟ್ಟು. ಒಬ್ಬೊಬ್ಬರ ಮನೇಲಿ ಒಂದೊಂದು ದಿವಸ ಊಟ ಟಿಫಿನ್ ಕೊಟ್ಟರಾಯಿತು’ ಎಂದ ಎಂಟೇಸು.

‘ಸರೆ ಬುಡು, ನಾವೂ ಹಂಗೆ ಮಾಡಿದರಾತು’ ಎಂದ ಗಿಡ್ಡಯ್ಯ.

ಈಡಿಗರ ಅಂಜಿನಯ್ಯ ನಡುವೆ ಬಾಯಿ ಹಾಕಿ, ‘ನೋಡ್ರಪ್ಪಾ, ನಾಟಕ ಅಂದ್ರೆ ಖರ್ಚು ಇರತದೆ. ಪಾರ್ಟು ಮಾಡಿದೋರೆ ಎಲ್ಲಾ ಖರ್ಚೂನು ಹಾಕ್ಕೊಂಡರೆ ವಜ್ಜಿ ಆಗತದೆ, ಅದಕೆ ಊರವರೆಲ್ಲರು ತಲಾ ಇಷ್ಟಿಷ್ಟು ಹಾಕ್ಕೊಂಡರಾಯಿತು’ ಎಂದು ತಿದ್ದುಪಡಿ ಸೂಚಿಸಿದ.

‘ನೀನೇಳಿದ್ದು ಖರೆ ಬಿಡು, ಸ್ಟೇಜ್ ಹಾಕಬೇಕು, ಕರೆಂಟಿನೋರಿಗೆ, ಬಂದೋಬಸ್ತಿಗೆ ಬರೋ ಪೋಲಿಸರಿಗೆ ಕೊಡೋದ ಇರ್ತದೆ. ಹಿಂಗಾಗಿ ಒಂದಲ್ಲಾ ಒಂದು ಖರ್ಚು ಇರತದೆ. ಆದಕೆ ಎಲ್ಲಾರು ವಂತಿಗೆ ಹಾಕಿದರೆ ಪಾಡು’ ಎಂದ ನಾಗಣ್ಣ.

‘ಸರೆ ಬಿಡು ತಲೆಗೆ ನೂರರಂತೆ ಪಟ್ಟಿ ಹಾಕಿದರಾತು’ ಎಂದ ಅಂಜಯ್ಯ.

‘ಅದೆಲ್ಲ ಸರಿ, ಆದರೆ ನಾಟಕದ ಮೇಸ್ಟೂçಗೆ ಎರಡು ಸಾವ್ರ, ಪಾರ್ಟು ಮಾಡೋರೆ ಆತಗೆ ಊಟ ಟಿಫಿನ್ ಹಾಕಬೇಕು’ ಎಂದ ಮೇಗಳಗೇರಿ ಗಿಡ್ಡಯ್ಯ,

‘ಹಾಗಿದ್ದರೆ ನಾಳೆ ದಿವಸ ಯಾರು ಹೋಗೋದು ಆತನೂರಿಗೆ. ಪಾಂಡುರಂಗಯ್ಯನ ಜೋಡಿ ಮಾತಾಡೋಕೆ!’ ಎಂದ ಅಂಜಿನಯ್ಯ.

‘ನಾನೂ ಭೀಮಣ್ಣ ಹೋಗ್ತೀವಿ’ ಎಂದ ಎಂಟೇಸು.

‘ಒಂದೆ ಸಾರಿಗೆ ಅಷ್ಟು ಹೇಳೋದು ಬ್ಯಾಡ. ಹದಿನೈದು ನೂರರಿಂದ ಚೌಕಾಸಿ ಸುರು ಮಾಡಿರಿ, ಕೊನೆಗೆ ಎರಡು ಸಾವಿರಕ್ಕೆ ಒಪ್ಪಿಸಿರಿ’ ಎಂದು ಸೂಚಿಸಿದ ಗಿಡ್ಡಯ್ಯ.

‘ಇನ್ನೊಂದು ಮಾತು, ಮಾತುಕತೆ ಮುಗಿದ ಮ್ಯಾಲ ಆತಗೆ ಒಂದೆರಡು ನೂರು ಅಡ್ವಾನ್ಸ್ ಕೊಡೋದನ ಮರೀಬ್ಯಾಡಿರಿ. ನಿಮ್ಮ ಪಾಡಾ ಖರ್ಚಿಗೆ ಒಂದೈವತ್ತು ಇಟ್ಟುಕೊಳ್ಳಿರಿ, ಒಟ್ಟು ಇನ್ನೂರಾ ಐವತ್ತು ರೂಪಾಯಿ ತಗೊಳ್ಳಿರಿ’ ಎಂದನಕಂತ ಜೇಬಿನಿಂದ ಕೆಲವು ನೋಟುಗಳನ್ನು ತೆಗೆದು ಅವರ ಕೈಗೆ ನೀಡಿದ. ಪುನಃ ಅದೇ ಅಂಜಿನಯ್ಯ ಏನನ್ನೋ ನೆನಪಿಸಿಕೊಂಡು, ‘ಪರಸ್ಥಳ ಸಾಲದು ಬಿದ್ದರೆ ಫಜೀತಿ, ಇನ್ನೊಂದೈವತ್ತು ಇಟುಕೊಳ್ಳಿರಿ’ ಎಂದು ಕೊಟ್ಟ.

ಈ ಪ್ರಕಾರವಾಗಿ ಐಕ್ಯರಾಜ್ಯ ಸಮಿತಿ ಸಮಾವೇಶ ಕಟ್ಟೆಮೇಲೆ ನಡೆಯಿತು. ಮುಂದಿನ ಉರುಸುಗೆ ರಾಮಾಂಜನೇಯ ಯುದ್ದ ಎಂಬ ನಾಟಕವನ್ನು ಪ್ರದರ್ಶಿಸುವುದು ಎಂದು ನಿರ್ಧರಿಸಿದ ಬಳಿಕ ಅವರೆಲ್ಲರು ಊಟ ಮಾಡಲೆಂದು ತಮ್ಮ ತಮ್ಮ ಮನೆಗಳಿಗೆ ತೆರಳಿದರು.

***

ಹಾಲ್ವಿಯೋರು ಇನ್ನಾದರು ಬರಲಿಲ್ಲವಲ್ಲವೆ! ಇನ್ನಾದರು ನನ್ನ ಮಾತನ ಕಿವಿ ಮ್ಯಾಲಾಕ್ಕೊ! ಮಲ್ಲಾರೆಡ್ಡಿ ಬಾವಿ ಕಡೆ ಕೂಲಿಯಾಳುಗಳ ಲೆಕ್ಕ ಬರೆಯಾಕ ಹೊರಡು. ದಸರಾ ರಜೆಗೆ ಮಕ್ಕಳು ಬ್ಯಾರೆ ಬರುತಾರೆ. ದೊಡ್ಡ ಹಬ್ಬ, ಮಕ್ಕಳಿಗೆ ಬಟ್ಟೆಬರೆ ತರೋದೈತಿ, ಈ ಖರ್ಚೆಗೆ ನನ್ನ ಕೂಲಿ ರೊಕ್ಕ ಯಾತಕ್ಕು ಸಾಲೋದಿಲ್ಲ’ ಎಂದು ಸುಂಕಮ್ಮ ಬುತ್ತಿ ಗಂಟು ರೆಡಿ ಮಾಡಿಕೊಳ್ಳುತ್ತ ತನ್ನ ಗಂಡಗೆ ಹೇಳಿದಳು.

‘ಅಯ್ಯೋ ನಿಂದೊಳ್ಳೆ ಕಥೆಯಾಯ್ತಲ್ಲ, ನಾನ್ಯಾವ ಕೆಲಸಕ್ಕೆ ಹೋಗೋದಿಲ್ಲ. ಕಲೆನ ನಂಬಿರೋ ಕಲಾವಿದ. ಇವತ್ತಲ್ಲದಿದ್ದರೆ ನಾಳೆ ದಿವಸ ಯಾರಾದರು ಬಂದೇ ಬರುತಾರೆ. ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರತೇನಿ’ ಎಂದು ಆ ಮಾಸ್ತರ ತನ್ನ ಪತ್ನಿಗೆ ಹೇಳುತ್ತಿರುವಾಗ..

ಅತ್ತ ಎಂಟೇಸು, ಭೀಮಣ್ಣ ಇಬ್ಬರು ಆ ಹಳ್ಳಿಗೆ ಇದ್ದ ಹಾದಿಯಲ್ಲಿ ನಡೆದು ಬರುತ್ತಿದ್ದರು. ಹಾದಿಯಲ್ಲಿ ಕೂಲಿ ಕೆಲಸಕ್ಕೆ ಹೊರಟಿದ್ದ ಹೆಂಗಸರ ಕೈಯಲ್ಲಿ ಬುತ್ತಿಗಂಟುಗಳಿದ್ದವು. ಎದುರಾದ ಒಂದಿಬ್ಬರು ತಮ್ಮನ್ನು ನೋಡಿ, ‘ಯಾವೂರಿಗೆ ಯಾರ ಮನೆಗೆ! ಎಂದು ವಿಚಾರಿಸಿದರು. ಅದಕ್ಕೆ ಇವರು ‘ನಾಟಕದ ಮಾಸ್ಟಾರು ಪಾಂಡುರಂಗಯ್ಯನ ಮನೆಗೆ ಎಂದು ಹೇಳಿದರು.

ಊರ ಮೇರೆಯಲ್ಲಿ ಅಲ್ಯಾವುದೋ ಗುಡಿ ಇತ್ತು, ಗುಡಿ ಮುಂದೆ ಬೇವಿನಮರವಿತ್ತು, ಅದಕ್ಕಿದ್ದ ಕಟ್ಟೆ ಮೇಲೆ ನಾಲ್ಕಾರು ಮಂದಿ ಕುಳಿತಿದ್ದರು. ಅವರಲ್ಲಿ ಕೆಲವರು ಅದ್ಯಾವುದೋ ಆಟ ಆಡುವುದರಲ್ಲಿ ಮಗ್ನರಿದ್ದರು. ಉಳಿದವರು ಅವರ ಆ ಆಟವನ್ನು ಆಸಕ್ತಿಯಿಂದ ನೋಡುತ್ತಿದ್ದರು. ಅಲ್ಲದೆ ಅವರು ಆಟಗಾರರಿಗೆ ಸಲಹೆ ಸೂಚನೆ ನೀಡುತ್ತಿದ್ದರು.

ಈ ಸೋಂಬೇರಿಗಳು ಆಟ ಆಡಿ ಕಾಲಕ್ಷೇಪ ಮಾಡುತ್ತಿರುವರು ಎಂದು ಎಂಟೇಸು ಮನಸ್ಸಿನಲ್ಲೆ ಗೊಣಗಿದ. ಹಾದಿ ಮೇಲಿದ್ದೇ, ‘ಅಣ್ಣಾ.. ಪಾಂಡುರಂಗಯ್ಯನ ಮನೆಗೆ ಹೆಂಗ ಹೋಗಬೇಕು!’ ಎಂದು ಕೇಳಿದ.

ಕೇಳಿದ್ದಕ್ಕೆ ಉತ್ತರ ಕೊಡುವುದು ಬಿಟ್ಟು, ‘ನಿಮ್ಮದ್ಯಾವ ಊರು!’ ಎಂದು ಮರು ಪ್ರಶ್ನೆ ಹಾಕಿದ.

‘ನಮ್ಮದು ಗುವ್ವೆಲದೊಡ್ಡಿ ಕಣಣ್ಣಾ, ಎಮ್ಮಿಗನೂರು ಕಡೆ ಐತಿ’ ಎಂದ ಭೀಮಣ್ಣ.

‘ಓಹೋ ಅಲ್ಲಿ ನಾಟಕ ಆಡ್ತಿರೇನು! ಯಾವ ಡ್ರಾಮ!’ ಎಂದು ಆಶ್ಚರ್ಯ ವ್ಯಕ್ತಪಡಿಸಿದ.

‘ರಾಮಾಂಜನೇಯ ಯುದ್ದ’ ಎಂದ ಎಂಕಟೇಸು.

‘ಆ ನಾಟಕ ನಮ್ಮ ಪಾಂಡುರಂಗಯ್ಯಗೆ ನೀರು ಕುಡಿದಷ್ಟು ಸಲೀಸು, ಆ ಡ್ರಾಮಾ ಆತನ ನಾಲಗೆ ಮೇಲೈತೆ ಬಿಡು’ ಎಂದು ಶ್ಲಾಘನೆಯ ಮಾತು ಹೇಳಿದ ಬಳಿಕ, ಆತನ ಮನೆ ಇಂಥಲ್ಲಿ! ಇಂಥ ಕಡೆ ಇರುವುದು ಎಂದು ಪಕ್ಕ ತಿಳಿಸಿದ.

ಅವರಿಬ್ಬರು ಅವರು ಹೇಳಿದ ರಸ್ತೆ ಹಿಡಿದರು. ಕೊನೆಗು ಆತನ ಮನೆ ಪತ್ತೆ ಹಚ್ಚಿ ತಲುಪಿದರು. ಆ ಮನೆಯ ಚಪ್ಪರದ ನೆರಳಲ್ಲಿ ಓರ್ವ ವ್ಯಕ್ತಿ ಪೆಟ್ಟಿಗೆನ ರಿಪೇರಿ ಮಾಡುವುದರಲ್ಲಿ ತಲ್ಲೀನನಾಗಿದ್ದ. ಅದೇ ಸಮಯಕ್ಕೆ ಅಂಗಳದಲ್ಲಿ ಅಪರಿಚಿತರನ್ನು ನೋಡಿ ‘ಯಾರಪ್ಪ ನೀವು!’ ಎಂದು ಪ್ರಶ್ನಿಸಿದ.

ಓಹ್ ಆತನೇ ಈತನು! ಅವರು ತಾವು ಬಂದ ಉದ್ದೇಶ ತಿಳಿಸಿದರು. ಕುಳಿತ ಬಳಿಕ ನಾಟಕ ವಿಷಯ ಪ್ರಸ್ತಾಪಿಸಿದರು. ಮಾಸ್ತರ ಅಲ್ಲೆ ಇದ್ದ ತನ್ನ ಪತ್ನಿ ಸುಂಕಮ್ಮನ ಕಡೆ ಒಂದು ರೀತಿ ನೋಡಿದ. ಇನ್ನು ನೀನು ಹೊರಡು ಎಂದು ಆಕೆಗೆ ಸಂಜ್ಙೆ ಮಾಡಿ ತಿಳಿಸಿದ. ಆಕೆ ಮನಸ್ಸಲ್ಲೆ ದೇವರಿಗೆ ಕೈ ಮುಗಿದು ‘ಅಂತೂ ಕೊನೆಗೂ ನೀನು ನಮ್ಮನ್ನು ಕೈಬಿಡಲಿಲ್ಲ’ ಎಂದನಕಂತ ಹೊಲದ ಕಡೆ ಹೆಜ್ಜೆ ಹಾಕಿದಳು. ಬಳಿಕ ಆತ ಮತ್ತು ಅವರ ನಡುವೆ ಮಾತುಕತೆ ನಡೆಯಿತು.

‘ಯಾವ ನಾಟಕ!’ ‘ರಾಮಾಂಜನೇಯ ಯುದ್ದ’, ‘ಆಡೋದು ಯಾವಾಗ!’ ‘ಉರುಸುಗೆ’ ‘ಉರುಸು ಯಾವಾಗ!’ ‘ಶಿವರಾತ್ರಿಯಾದ ಹದಿನೈದು ದಿವಸಕ್ಕೆ’ ‘ಅಂದರೆ ಉಳಿದಿರೋದು ಕೇವಲ ಏಳು ತಿಂಗಳು ಮಾತ್ರ’ ‘ಹೌದು ಸಾರೂ, ನಾಟಕನ ತಾಲೀಮು ಮಾಡೋದೈತಲ್ಲ, ಅದಕ್ಕೆ ಗ್ರಾಮದ ಪ್ರಮುಖರು ಹೇಳಿದಕೆ ಬಂದೀವಿ’ ‘ಅದೇನೊ ಖರೆ, ಹಾಲ್ವಿಯೋರು ಬಂದು ಹೇಳಿ ಹೋಗ್ಯಾರಲ್ಲ! ಏನು ಮಾಡೋದು! ‘ಅವರೇನಾದರು ನಿಮಗೆ ಅಡ್ವಾನ್ಸು ಕೊಟ್ಟಾರೇನು ಸಾರೂ’ ‘ಇಲ್ಲ, ಆದರೆ ವಾರಾದ ಮ್ಯಾಲ ಬರತೀವಿ ಅಂತ ಹೇಳಿದ್ದರು, ಆದರೆ ಇನ್ನೂ ಬಂದಿಲ್ಲ’ ‘ಅಂದರೆ ಈಗಾಗಲೆ ವಾರ ದಾಟಿ ಹೋಗಿರಬಹುದಲ್ಲವೆ!’ ‘ಹೌದು ಹತ್ತು ದಿನಗಳಾದವು’ ‘ಅಂದ ಬಳಿಕ ಯೋಚಿಸುವುದ್ಯಾಕೆ! ನಮ್ಮ ನಾಟಕನ ಒಪ್ಪಿಕೊಂಡು ಬಿಡರಿ’ ಎಂದು ಕೇಳಿದರು.

ರಂಗಯ್ಯ ತುಸು ಹೊತ್ತು ಯೋಚಿಸಿದ ಬಳಿಕ, ‘ನಿಮ್ಮ ಮಾತಿನಂಗೆ ಆಗಲಿ, ಯಾವ ನಾಟಕ ಆಡಬೇಕಂತದೀರಿ!’ ‘ರಾಮಾಂಜನೇಯ ಯುದ್ದ ಸಾರು’, ಅವರ ಮಾತಿಗೆ ನಕ್ಕು ರಂಗಯ್ಯ, ‘ಹಂಗ ಏಕವಚನದಲ್ಲಿ ಅನ್ನಬಾರದು, ಶ್ರೀ ರಾಮಾಂಜನೇಯ ಯುದ್ದ ಅನಬೇಕ್ರಪ್ಪಾ’ ಎಂದು ಸೂಚಿಸಿದನು, ಅದಕ್ಕೆ ಅವರು ತಲೆ ಅಲ್ಲಾಡಿಸಿದರು, ಬಳಿಕ ಮಾಸ್ತಾರೆ, ‘ಅಲ್ರಪ್ಪಾ ನಿಮಗೆ ಒಂದು ಪದನ ಸರಿಯಾಗಿ ಉಚ್ಚಾರಣೆ ಮಾಡೋಕೆ ಬರೋದಿಲ್ಲ, ನಾಳೆ ದಿವಸ ಹೆಚ್ಚುಕಡಿಮೆಯಾದರೆ ಯಾರು ಹೊಣೆ’ ಎಂದು ಉಸಿರುಬಿಟ್ಟನು. ಅದಕ್ಕೆ ಅವರು ಹಿಂದಲೆ ಕೆರೆದುಕೊಳ್ಳುತ್ತ, ‘ನಮ್ಮೆದೆ ಸೀಳಿದರು ಎರಡಕ್ಸರ ಇಲ್ಲ, ನೀವೆಂಗ ಹೇಳಿದರೆ ಹಂಗ ಕೇಳತೀವಿ, ನೀವು ಕಲಿಸಿದಂಗ ಕಲಿತೀವಿ’ ಎಂದು ವಿಧೇಯತೆಯಿಂದ ಹೇಳಿದರು. ಅದಕ್ಕೆ ರಂಗಯ್ಯ, ‘ನೀವು ಹೇಳೋದು ಸರಿ ಐತಿ, ನಾನು ಕೋಪಿಷ್ಟ, ಸರಿಯಾಗಿ ಹೇಳಲಿಲ್ಲಾಂದರ ನಿಮ್ಮನ್ನು ಬಯ್ಯಬಹುದು, ಹೊಡಿಬಹುದು, ಅದೆಲ್ಲ ಸಹಿಸಿಕೊಳ್ಳಬೇಕಪ್ಪಾ, ಹಂಗಿದ್ದರೆ ಮಾತ್ರ ಕಲಿಸೋಕೆ ಒಪ್ಪಿಕೊಳ್ತೀನಿ’ ಎಂದು ನಿಷ್ಠುರವಾಗಿ ಹೇಳಿದ.

ಅದಕ್ಕೆ ಅವರು ತುಸು ಯೋಚಿಸಿ ಬಳಿಕ, ‘ಗುರು ಬಾಯಿಯಿಂದ ಕಲಿತ ವಿದ್ಯೇನೆ ವಿದ್ಯೆ ಸಾರು, ಗುರು ಅಂದ ಮ್ಯಾಲ ಬಯ್ಯೋದು ಹೊಡಿಯೋದು ಇರತದ, ನಮ್ಮ ಮಂದಿ ಒಳ್ಳೆಯೋರು ಸ್ವಾಮಿ, ನೀವು ಹೇಳಿದಂಗೆ ಕೇಳೋ ಮಂದಿ ಅವರು’ ಎಂದು ವಿನಮ್ರತೆಯಿಂದ ಹೇಳಿದರು.

‘ಮತ್ತೆ ನನ್ನ ವಿಷ್ಯ ಏನು!’

ಅದಕ್ಕೆ ಅವರು ಪರಸ್ಪರ ಮುಖಗಳನ್ನು ನೋಡಿಕೊಂಡರು, ‘ಊರ ಯಜಮಾನರು ಹದಿನೈದು ನೂರಕ್ಕೆ ಒಪ್ಪಿಸಿರಿ ಎಂದು ಹೇಳಿ ಕಳಿಸ್ಯಾರೆ, ಊಟ ಟಿಫಿನ್ ಮಾಮೂಲು ಇರತದೆ’

ಅವರ ಮಾತಿಗೆ ರಂಗಯ್ಯ ತುಸು ಹೊತ್ತು ಯೋಚಿಸಿದ, ‘ಹದಿನೈದು ನೂರಂದ್ರೆ ಹೆಂಗೆ! ನಾನು ಊರು ಹೆಂಡತಿ ಮಕ್ಕಳನ ಬಿಟ್ಟು ತಿಂಗಳ ದಿನಮಾನ ನಿಮ್ಮ ಜೊತೆ ಇರಬೇಕಲ್ಲವೆ!’ ಎಂದು ದೈನ್ಯತೆಯಿಂದ ಹೇಳಿದ, ಅದಕ್ಕೆ ಅವರು, ‘ನಿಮ್ಮ ಹತ್ರ ಮುಚ್ಚುಮರೆ ಯಾಕೆ ಸಾರೂ, ಎರಡು ಸಾವ್ರಕ ಒಪ್ಪಿಕೊಳ್ಳಿರಿ’ ಎಂದರು, ಅದಕ್ಕೆ ಮಾಸ್ತರು, ‘ಸರೆ ಬಿಡ್ರಪ್ಪಾ, ಆದರೆ ಒಂದು ಕಂಡಷನ್ನು, ನಾಟಕನ ಆಡೋ ದಿವಸ ನನಗು ನನ್ ಹೆಣ್ತಿ ಮಕ್ಕಳಿಗೂ ಬಟ್ಟೆಬರೆ ಆಯಿರು ಮಾಡಬೇಕು’ ಎಂದು ಹೇಳಿದ. ಅದಕ್ಕೆ ಅವರು ನಕ್ಕು, ‘ಅದನ ನೀವು ಹೇಳಬೇಕೇನು! ನಿಮಗೆ ಮರ್ಯಾದಿ ಮಾಡೋದು ನಮಗ ಬಿಟ್ಟದ್ದು, ಏನೇನು ಮಾಡಬೇಕೋ ಅದೆಲ್ಲ ಮಾಡತೀವಿ, ಆದರೆ ನೀವು ಮಾತ್ರ ಒಪ್ಪಿ ಬಂದು ಕಲಿಸರಿ’ ಎಂದು ಕೈ ಮುಗಿದರು.

ಅವರ ಮಾತಿಗೆ ರಂಗಯ್ಯನ ಮುಖ ಪ್ರಸನ್ನವಾಯಿತು, ‘ಸರೆ ಒಪ್ಪಿಕೊಳ್ತೀನಿ, ಬರೋ ಬೇಸ್ತವಾರ ದಶಮಿ ಒಳ್ಳೆಯ ದಿವಸ. ನಾಟಕ ಕಲಿಯೋಕೆ ಕಲಿಸೋಕೆ ಪ್ರಶಸ್ತöವಾದ ದಿನ, ಆ ದಿನವೇ ಪೆಟ್ಟಿಗೆಗೆ ಪೂಜೆ ಮಾಡೋಣ’ ಎಂದು ಮುಹೂರ್ತ ನಿಗದಿ ಪಡಿಸಿದ ರಂಗಯ್ಯ.

‘ನೀವೆಂಗ ಹೇಳುವಿರೊ ಹಂಗೆ ಆಗಲಿ ಸಾರೂ, ಈ ಸದ್ಯಕ್ಕ ಎರಡು ನೂರನ್ನು ಅಡ್ವಾನ್ಸಾಗಿ ತಕ್ಕೊಳ್ಳಿರಿ’ ಎಂದು ನೂರರ ಎರಡು ನೋಟುಗಳನ್ನು ಅವರ ಕಡೆ ಚಾಚಿದರು.

ಅವರು ಮಾಸ್ತರನ ಸೂಚನೆ ಮೇರೆಗೆ ನೋಟುಗಳನ್ನು ಮೇಲಿರಿಸಿ ಪೆಟ್ಟಿಗೆ ಮುಟ್ಟಿ ನಮಸ್ಕಾರ ಮಾಡಿದರು. ಬಳಿಕ ಅವರು ಹೊರಡಲು ಅನುವಾದರು, ಅದಕ್ಕೆ ಮಾಸ್ತರ ‘ಊಟ ಮಾಡಿಕೊಂಡು ಹೋಗಿರಿ’ ಎಂದು ಔಪಚಾರಿಕವಾಗಿ ಕೇಳಿದ.

ಅದಕ್ಕೆ ಅವರು, ‘ಬುತ್ತಿ ಕಟಕೊಂಡು ಬಂದೀವಿ ಸಾರೂ, ಅಲ್ಲದೆ ಇನ್ನೂ ಉಣ್ಣೋ ಹೊತ್ತಾಗಿಲ್ಲ ಬೇರೆ. ಹಾದೀಲೆಲ್ಲಾದರು ತಿಂದು ಹೋಗತೀವಿ’ ಎಂದ ಭೀಮಣ್ಣ.

ಬಳಿಕ ಮಾಸ್ತರು, ‘ಕ್ರಾಸಿಗೆ ಬಂಡಿ ಕಳಿಸಿರಿ, ಹಾರ್ಮೋನಿಯಂ ಪೆಟ್ಟಿಗೇನ ಹೊತ್ತು ಬರೋಕಾಗೋದಿಲ್ಲ’ ಎಂದು ಹೇಳುವುದನ್ನು ಮರೆಯಲಿಲ್ಲ. ಆತನ ಮಾತಿಗೆ ಅವರು ಒಪ್ಪಿ ಅಲ್ಲಿಂದ ಮರಳಿದರು.

***

ಶ್ರಾವಣ ಶುದ್ದ ಬಹುಳ ಪಂಚಮಿ ಗುರುವಾರ ಮುಹೂರ್ತ ನಿಗದಿಯಾಗಿತ್ತಲ್ಲವೆ! ಊರ ಪ್ರಮುಖರು ಮಾತ್ರವಲ್ಲದೆ ನಾಟಕದಲ್ಲಿ ಪಾರ್ಟು ಮಾಡುವ ಆಸೆ ಇದ್ದವರೆಲ್ಲರು, ದುಡ್ಡಿದ್ವವರು, ದುಡ್ಡಿಲ್ಲದಿದ್ದವರು, ಕುಲಕರ್ಣಿ ಸೇರಿದಂತೆ ಹಲವರು ಆ ದಿವಸ ಅಲ್ಲಿ ಹಾಜರಿದ್ದರು. ಈಡಿಗರ ಅಂಜಿನಪ್ಪ ತನ್ನ ಹೊಸಮನೆಯನ್ನು ನಾಟಕ ತಾಲೀಮಿಗೆ ಬಿಟ್ಟುಕೊಟ್ಟಿದ್ದ. ಮುಹೂರ್ತಕ್ಕೆ ಸರಿಯಾಗಿ ಪೂಜೆ ಶಾಸ್ತ್ರೋಕ್ತ ಆರಂಭವಾಗಿ ಮಂಗಳಕರವಾಗಿ ಮುಗಿಯಿತು. ಎಲ್ಲರು ಪೆಟ್ಟಿಗೆ ಹಿಂದಿದ್ದ ಶ್ರೀರಾಮಚಂದ್ರನ ಪೋಟೋಕ್ಕೆ ನಮಸ್ಕರಿಸಿದರು. ಭಕ್ತಿಪೂರ್ವಕವಾಗಿ ಹಲವರು ಒಂದರಿಂದ ಐದು ರೂಪಾಯಿವರೆಗೆ ದಕ್ಷಿಣೆಯನ್ನು ಪೆಟ್ಟಿಗೆ ಮೇಲಿರಿಸಿದರು.

ಬಳಿಕ ರಂಗಯ್ಯ ಪೆಟ್ಟಿಗೆಯನ್ನು ತೆರೆದು ಸೊಗಸಾಗಿ ನುಡಿಸುತ್ತ, ‘ಪರಬ್ರಹ್ಮ ಪರಮೇಶ್ವರ ಪುರುಷೋತ್ತಮ ಸದಾನಂದ’ ಎಂದು ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಅಲ್ಲಿದ್ದವರನ್ನು ಪರವಶಗೊಳಿಸಿದ. ಬಳಿಕ ಸಿಹಿ ಹಂಚಿದ್ದಾಯಿತು, ಅದನ್ನು ತಿಂದು ನೀರು ಕುಡಿದದ್ದಾಯಿತು. ಬಳಿಕ ಅಲ್ಲಿದ್ದವರನ್ನುದ್ದೇಶಿಸಿ ರಂಗಯ್ಯ,

‘ಯಾರ್ಯಾರು ನಾಟಕದಲ್ಲಿ ಪಾರ್ಟು ಮಾಡಲು ಆಸೆ ಇಟುಕೊಂಡಿದ್ದೀರಿ, ಅವರೆಲ್ಲರು ಮುಂದೆ ಸಾಲಾಗಿ ನಿಂತುಕೊಳ್ಳಿರಿ’ ಎಂದು ಸೂಚಿಸಿದ. ಅದರಂತೆ ಕೆಲವು ಯುವಕರು ಮುಂದೆ ನಿಂತರು. ರಂಗಯ್ಯ ಅವರೆಲ್ಲರನ್ನು ಪ್ರತ್ಯೇಕವಾಗಿ ನೋಡಿ ಪರಿಶೀಲಿಸಿದ. ಆಡಿಯೋ ಟೆಸ್ಟ್ ಮಾಡಬೇಕಲ್ಲವೆ! ಅವರಲ್ಲಿ ಒಬ್ಬೊಬ್ಬರನ್ನು ಕರೆದು ಶಬ್ಧೋಚ್ಚಾರಣೆ ಪರಿಶೀಲಿಸಲು ನಿರ್ಧರಿಸಿದ.

ಒಬ್ಬ ‘ಪಕ್ಷಪಾತಿ’ ಎಂಬ ಪದವನ್ನು ‘ಪಚ್ಚಪಾತಿ’ ಎಂದರೆ ಇನ್ನೊಬ್ಬ ಬ್ರಹ್ಮರ್ಷಿ ಎಂಬ ಪದವನ್ನು ‘ಬಮ್ಮರ್ಸಿ’ ಎಂದು ಉಚ್ಚರಿಸಿ ನಿರಾಸೆಗೊಳಿಸಿದ ಆ ಅವರ ಭಾಷೋಚ್ಚಾರಣೆ ಕೇಳಿ ಉಳಿದವರೆಲ್ಲ ನಕ್ಕರು.. ಅವರೆಲ್ಲರಿಗಿಂತ ಸ್ಪಷ್ಟವಾಗಿ ಉಚ್ಚರಿಸಿ ಗಮನ ಸೆಳೆದದ್ದು ರಸೂಲು ಸಾಬು.

ರಂಗಯ್ಯ ಹೇಳಿದ ಒಂದು ಪದ್ಯವನ್ನು ಸಾಬು ಕೇಳಿದ್ದು ಒಂದೇ ಒಂದು ಸಾರಿ ಮಾತ್ರ. ಆದರೆ ಆತ ಅದನ್ನು ಮರು ಹೇಳಿ ದಿಗ್ಭçಮೆಗೊಳಿಸಿದ. ಎಲ್ಲರು ಆತನನ್ನು ಶ್ಲಾಘಿಸಿದರು. ಈ  ಎಲ್ಲಾ ಪರೀಕ್ಷೆಗಳು ಮುಗಿದ ಬಳಿಕ ಯಾರು ಯಾವ್ಯಾವ ಪಾತ್ರಗಳನ್ನು ನಿರ್ವಹಿಸುವುದು! ತೀರ್ಮಾನಿಸಲಾಯಿತು. ಶ್ರೀರಾಮನ ಪಾತ್ರವನ್ನು ರಸೂಲೂ, ಆಂಜನೇಯನ ಪಾತ್ರವನ್ನು ದೇವೇಂದ್ರ ಎಂದೂ.. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಪಾತ್ರವನ್ನು ನಿಗದಿಪಡಿಸಲಾಯಿತು. ಆ ಆಯ್ಕೆ  ಸರ್ವಸಮ್ಮತವಾಯಿತು.

‘ನಮ್ಮ ಎಂಕಟಪ್ಪಗೆ ಒಳ್ಳೆ ಹಾಡು ಹಾಕಿರಿ’ ಎಂದು ಸಭಿಕರಲ್ಲಿ ಒಬ್ಬ ಕೂಗಿ ಹೇಳಿದ. ಅದಕ್ಕೆ ರಂಗಯ್ಯ ಬೇಸರಿಸಿಕೊಳ್ಳದೆ ಹಂಗೆ ಆಗಲಿ ಎಂದು ಹೇಳಿದ. ಅದಕ್ಕೆ ಎಂಟಪ್ಪ ನಕ್ಕ. ಈ ಪ್ರಕಾರವಾಗಿ ಪೂಜೆ ಪಾತ್ರಗಳ ಆಯ್ಕೆ ಅಡ್ಡಿ ಆತಂಕಗಳಿಲ್ಲದೆ ಆರಂಭವಾಗಿ ಮುಕ್ತಾಯಗೊಂಡಿತು. ಬಳಿಕ ಈಡಿಗರ ಅಂಜಯ್ಯ ನಾಟಕದ ಮಾಸ್ತರರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ. ಈ ದಡ್ಡ ಶಿಖಾಮಣಿಗಳ ಕೈಲಿ ಆ ನಾಟಕವನ್ನು ಹೇಗೆ ಮಾಡಿಸುವುದು! ಎಂದು ರಂಗಯ್ಯ ಚಿಂತಿಸುತ್ತ ಅಲ್ಲಿಂದ..

***

ಈಡಿಗ ಅಂಜಯ್ಯ ಹೊಸ ಮನೆ ಕಟ್ಟಿಸಿದ್ದ, ಕೆಲವು ಕಾರಣಗಳಿಂದ ಅದು ಖಾಲಿ ಇತ್ತು. ಆತ ಅದನ್ನು ನಾಟಕದ ಪ್ರಾಕ್ಟೀಸಿಗೆ ಮತ್ತು ರಂಗಯ್ಯಗೆ ಬಿಟ್ಟುಕೊಟ್ಟ. ಪಾತ್ರಧಾರಿಗಳಿಗಿಂತ ಹೆಚ್ಚಾಗಿ ಆ ಮನೆಯ ಗೋಡೆಗಳೆಲ್ಲಿ ಮಾತುಗಳನ್ನು ಕಲಿಯುವವೋ ಎಂದು ರಂಗಯ್ಯ ಯೋಚಿಸಿದ, ಉದಾಹರಣೆಗೆ ವಡ್ಡರ ಎಂಕಟಪ್ಪ ‘ತಾಪಸೇಂದ್ರ’ ಎಂಬ ಪದವನ್ನು ತಪಸೇಂದ್ರ ಎಂದು ಉಚ್ಚರಿಸಿದನೆಂದ ಬಳಿಕ!

ಆ ಯಯಾತಿ ಪಾತ್ರಧಾರಿಯ ತಪ್ಪು ತಪ್ಪು ಉಚ್ಚಾರಣೆಯಿಂದ ರಂಗಯ್ಯಗೆ ಹಣೆ ಹಣೆ ಚಚ್ಚಿಕೊಳ್ಳಬೇಕೆನಿಸಿದ್ದು ನಿಜ, ‘ಪುಣ್ಯಾತ್ಮ ನಾಟಕದಲ್ಲಿ ನಿನ್ನ ಪಕ್ಕ ಇರೋದು ರಂಗೂಬಾಯಿ ಎನ್ನುವುದು ನೆನಪಿಟ್ಟುಕೊ. ನೀನೇನಾದರು ಸಂಭಾಷಣೇನ ತಪ್ಪು ತಪ್ಪು ಹೇಳಿದರೆ ಆಕೆ ಸುಮ್ಮನಿರೋದಿಲ್ಲ. ಆಕೆ ತನ್ನೆಡಗಾಲಿಂದ ಒದೆಯೋದು ಖಚಿತ’ ಎಂದು ಬೇಸರದಿಂದ ಹೇಳಿದ.

ಇನ್ನು ಗೊರವರ ನಾಗಪ್ಪನದ್ದು ವಿಶ್ವಾಮಿತ್ರನ ಪಾತ್ರ. ಹೇಳಿಕೊಟ್ಟಿದ್ದಕ್ಕೆ ಆತ, ‘ಯಯಾತಿ ವಶಿಷ್ಟ ಪಕ್ಷಪಾತಿ’ ಎಂದು ಹೇಳಬೇಕಿತ್ತು, ಆದರೆ ಆತ ಅದನ್ನು ‘ಏಏತಿ ವೊಸಿಸ್ಟ ಪಚ್ಚಪಾತಿ’ ಎಂದು ಹೇಳುವುದೆ! ಅವರೆಲ್ಲರ ಶಬ್ದೋಚ್ಛಾರಣೆನ ಸರಿಪಡಿಸುವುದರಲ್ಲಿ ರಂಗಯ್ಯಗೆ ಸಾಕು ಸಾಕಾಗಿ ಹೋಯಿತು. ಅವರೆಲ್ಲರಿಗಿಂತ ಮುಖ್ಯವಾಗಿ ತುರುಕರೆಡ್ಡಿಯದು ಅಂಗದನ ಪಾತ್ರ. ಆತನ ನಾಲಗೆಯ ಹಣೆ ಬರಹ ಸಹ ಅಷ್ಟೆ.

ಉಳಿದೆಲ್ಲ ಪಾತ್ರಧಾರಿಗಳಿಗಿಂತ ದತ್ತಪ್ಪ ಇದ್ದುದರಲ್ಲಿ ಪರವಾಯಿಲ್ಲ, ಕಾರಣ ಆತ ಹತ್ತನೆ ತರಗತಿಯಲ್ಲಿ ಓದುತ್ತಿದ್ದ. ಆ ನಾಟಕದಲ್ಲಿ ಆತನದ್ದು ನಾರದನ ಪಾತ್ರ. ಶಾಲಾ ಪಠ್ಯಗಳನ್ನು ಮೂಲೆಗೆಸೆದು ನಾಟಕ ಪಠ್ಯವನ್ನು ಕೈಗೆತ್ತಿಕೊಂಡಿದ್ದ. ಎಲ್ಲಿ ತಮ್ಮ ಮಗ ಪರೀಕ್ಷೆಯಲ್ಲಿ ಡುಮುಕಿ ಹೊಡೆಯುವನೋ ಎಂಬ ಆತಂಕಕ್ಕೊಳಗಾದರು ತಂದೆ ತಾಯಿ. ದತ್ತಪ್ಪನನ್ನು ಆ ಪಾತ್ರಕ್ಕೆ ಸೂಚಿಸಿದ್ದು ಒಪ್ಪಿಸಿದ್ದು ಕುಲಕರ್ಣಿಯೆ. ಅವರ ಮನೆಯಲ್ಲಿ ಉಳಿದೆಲ್ಲರು ವಿರೋಧಿಸಿದರು ತಾಯಿ ಮಾತ್ರ ಮಗನನ್ನು ಬೆಂಬಲಿಸಿದಳು. ಆತನನ್ನು ಹುರಿದುಂಬಿಸಿದಳು. ಮೇಲ್ಜಾತಿ ಸಂಜಾತನೂ ಅಕ್ಷರ ಬಲ್ಲಾತನೂ ಆದ ದತ್ತಪ್ಪ ಉಳಿದ ಪಾತ್ರಗಳಿಗಿಂತ ತುಸು ವಾಸಿ ಅನ್ನಿಸಿತು ರಂಗಯ್ಯಗೆ.

ಶ್ರೀರಾಮಾಂಜನೇಯ ಯುದ್ದ ನಾಟಕದ ಅತಿ ಮುಖ್ಯ ಪಾತ್ರವೆಂದರೆ ಆಂಜನೇಯ. ದೇವೇಂದ್ರ ಆ ಪಾತ್ರಕ್ಕೆ ಆಯ್ಕೆಯಾಗಿದ್ದ. ಆತ ತನ್ನ ಗೆಳೆಯರ ಬಳಗದಲ್ಲಿ ತಲೆಹರಟೆ ಅಧಿಕ ಪ್ರಸಂಗಿ ಎಂದೇ ಹೆಸರಾಗಿದ್ದ. ಈಗ ಇಲ್ಲಿದ್ದರೆ ಇನ್ನೊಂದು ಸ್ವಲ್ಪ ಹೊತ್ತಿಗೆ ಇನ್ನೆಲ್ಲೊ ಇರುತ್ತಿದ್ದ.. ಸುಖಾ ಸುಮ್ಮನೆ ಈ ಮರದಿಂದ ಆ ಮರಕ್ಕೆ, ಆ ಮರದಿಂದ ಈ ಮರಕ್ಕೆ ಜಿಗಿದಾಡುತ್ತಿದ್ದ. ಅಗತ್ಯವಿರದಿದ್ದರು ‘ರಾಮಾ ರಾಮಾ’ ಎಂದು ಕೂಗಿ ತನ್ನ ಗೆಳೆಯರನ್ನು ರಂಜಿಸುತ್ತಿದ್ದ. ಈ ಚಂಚಲ ಸ್ವಭಾವದ ಆತನನ್ನು ಕೋತಿ ಎಂದೇ ಕರೆಯುತ್ತಿದ್ದರು. ಈ ಕಾರಣಕ್ಕೆ ನಾಟಕದಲ್ಲಿ ಅವನನ್ನು ಆಂಜನೇಯನ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು.

ಗಿಡ್ಡಯ್ಯ ಸ್ವಾಮಿ ಗುಡಿ ಆ ಪುಟ್ಟ ಗ್ರಾಮದಲ್ಲಿ ಹೆಸರಾಂತ ದೇವಸ್ಥಾನ. ಅಲ್ಲಿ ಪ್ರತಿ ಹುಣ್ಣುಮೆ ರಾತ್ರಿ ಭಜನೆ ನಡೆಯುತ್ತಿತ್ತು. ಆ ಗುಡಿಗೆ ಮೈಕ್ ಸೆಟ್ ಇತ್ತು. ಭಜನೆ ರಾತ್ರಿ ಹತ್ತು ಗಂಟೆವರೆಗೆ ನಡೆಯುತ್ತಿತ್ತು. ನಾಟಕ ಪಾತ್ರಧಾರಿಗಳು ತಾವು ಕಲಿತ ಸಂಭಾಷಣೆ, ಪದ್ಯಗಳನ್ನು ಆ ಮೈಕಲ್ಲಿ ಹೇಳುವುದು ಹಾಡುವುದು ನಡೆಯಿತು. ಅವರ ಶಾಬ್ಧಿಕ ದಾಂಧಲೆಗೆ ಊರಿಗೆ ಊರೇ ಬೆಚ್ಚಿತು. ಹುಣ್ಣುಮೆ ಯಾಕಾದರು ಬರುವುದೋ ಎಂದು ಮಂದಿ ಆತಂಕಕ್ಕೊಳಗಾದರು.

ನಾಟಕದ ಮಾಸ್ತರ ಅಂದ ಬಳಿಕ ಪಾತ್ರಧಾರಿಗಳ ತಪ್ಪು ಒಪ್ಪುಗಳನ್ನು ತಿದ್ದದೆ ಇರಲಾದೀತೆ! ಕೆಲವೊಮ್ಮೆ ಗಟ್ಟಿಯಾಗಿ, ಕೆಲವೊಮ್ಮೆ ಮೆಲ್ಲಗೆ ಹೇಳುವುದು ಮಾಮೂಲು ಅಲ್ಲವೆ!

ಹಾಗೆ ಸಲಹೆ ಸೂಚನೆ ನೀಡುವುದು ಕೆಲ ಪಾತ್ರಧಾರಿಗಳಿಗೆ ಸರಿ ಅನ್ಜಿಸಲಿಲ್ಲ, ಅದೂ ತಮ್ಮ ಪತ್ನಿಯರ ಎದುರು. ಹಾಗಾಗಿ ಅಂಥವರು ರಂಗಯ್ಯನನ್ನು ಮರೆಗೆ ಕರೆದು, ‘ಸಾರೂ ನಮ್ಮನೆ ಹೆಂಗಸರ ಎದುರು ನನ್ನ ತಪ್ಪುಗಳನ್ನು ಎತ್ತಿ ಹೇಳಬೇಡರಿ, ಅದರಿಂದ ನಮ್ಮ ಮರ್ಯಾದೆ ಹೋಗ್ತದೆ. ನಿಮಗೆ ಬೇಕಾದರೆ ನೆಟ್ಟೆಕಲ್ಲು ಹೂಟ್ಲಲ್ಲಿ ವಗ್ಗಾಣಿ ಮಿರ್ಚಿ ತಿನ್ನಿಸ್ತೀನಿ, ವಾರಕ್ಕೊಮ್ಮೆ ಕೋಳಿ ಕೊಯ್ದು ಉಣಸ್ತೀನಿ’ ಎಂದು ಗುಟ್ಟಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಪಾಂಡುರಂಗ ಸ್ವಂತ ಊರು ಬಿಟ್ಟು ಬಂದು ಬಹಳ ದಿವಸಗಳಾಗಿದ್ದವಲ್ಲವೆ! ಹಾಗಾಗಿ ಆತನಿಗೆ ಇಂಥ ಒಪ್ಪಂದಗಳು ಇಷ್ಟವಾಗುತ್ತಿದ್ದವು.

ಒಂದು ದಿವಸ ಏನಾಯಿತೆಂದರೆ ದೇವೇಂದ್ರ ತನ್ನ ಇಷ್ಟದ ಹುಡುಗಿ ನೋಡಲೆಂದು ಬಂದಿದ್ದ. ನೋಡಿದಾಕ್ಷಣ ತನ್ನ ಆಕೃತಿಗೆ ತಕ್ಕಂತೆ ಚೇಷ್ಟೆ ಮಾತುಗಳನ್ನು ಶುರು ಹಚ್ಚಿದ. ‘ರಾಮ ನೀಲ ಮೇಘ ಶ್ಯಾಮ ಕೋದಂಡ ರಾಮ’ ಎಂದು ಹಾಡಲಾರಂಭಿಸಿದ. ರಾಮ ಧ್ಯಾನ ಮಾಡುತ್ತ ಕಣ್ಣು ಮುಚ್ಚಿ ಕುಳಿತ. ದೇವರೆ ಭುವಿಗಿಳಿದು ಬಂದAತಿದೆ ಎಂದು ಒಬ್ಬ ಮಹಿಳೆ ಅನ್ಯಥಾ ಭಾವಿಸಿದಳು. ಅವರ ಪಾದಗಳಿಗೆ ನಮಸ್ಕರಿಸಿ ಎಂದು ಒಬ್ಬ ಸಲಹೆ ನೀಡಿದ. ಇನ್ನೊಬ್ಬ ಮಹಿಳೆ ತುಂಬಿದ ಕೊಡ ತಂದು ಆತನ ಕಾಲಿಗೆ ಸುರುವಿದಳು. ದೇವೇಂದ್ರನಲ್ಲಿ ಆಂಜನೇಯಸ್ವಾಮಿ ಅವಿರ್ಭವಿಸಿರುವನೆಂದೆ ಹಲವರು ತಿಳಿದರು. ಆದರೆ ದೇವೇಂದ್ರ ಆಗಾಗ್ಗೆ ಎತ್ತುತ್ತಿದ್ದ ಅವತಾರಗಳನ್ನು ಪಾಂಡುರಂಗಯ್ಯ ಗುರುತಿಸಿದ್ದ. ವಿಶೇಷವೆಂದರೆ ರಸೂಲು ಸಹ ಎಲ್ಲರಿಗಿಂತ ಭಿನ್ನ ರೀತಿಯಲ್ಲಿ ‘ಆಂಜನೇಯ ಆಂಜನೇಯ’ ಎಂದು ತನ್ಮಯತೆಯಿಂದ ಭಜಿಸುವುದನ್ನು ಆರಂಭಿಸಿದ.

ಮಾಸ್ತಾರು ರಂಗಯ್ಯ ರಸೂಲನ ಬಳಿಗೆ ಹೋದ. ಅವನಿಗಷ್ಟೆ ಕೇಳಿಸುವಂತೆ, ‘ಏನ್ರೋ ಎಲ್ಲಾದರು ರಾಮನ ಭಕ್ತ ಆಂಜನೇಯ ಯಾರ ಮೈಯೊಳಗಾದರು ಬರಬಹುದು, ಆದರೆ ರಾಮನೊಳಗೆ ಮಾತ್ರ ಬರೋದಿಲ್ಲೋ ಬೆಪ್ಪೆ’ ಎಂದು ಹೇಳಿದ.

‘ಹಾ ಅಂದ ಹಾಗೆ ಆಂಜನೇಯ ಸಹ ದೇವರಲ್ಲವೆ! ಮೈಯೊಳಗೆ ಯಾಕ ಬರೋದಿಲ್ಲ’ ಎಂದು ಒಂದು ಕಣ್ಣನ್ನು ಮಾತ್ರ ತೆರೆದು ಲಾ ಪಾಯಿಂಟು ತೋರಿಸಿದ ರಸೂಲು.

‘ಯಪ್ಪಾ ತಂದೆ ಕೈಮುಗಿತೀನಿ, ಸ್ವಲ್ಪ ಸುಮ್ಮನಿರ್ತಿಯಾ! ಆಂಜನೇಯ ರಾಮನ ನಿಷ್ಠಾವಂತ ಭಕ್ತ. ಅವನು ಬೇರೆ ಯಾರ ಮೇಲಾದರು ಬರಬಹುದು, ಆದರೆ ರಾಮನ ಮೇಲೆ ಮಾತ್ರ ಬರೋದಿಲ್ಲಪ್ಪಾ’ ಎಂದು ಹೇಳಿದ. ಅದಕ್ಕೆ ರಸೂಲು ಸ್ವಲ್ಪ ಹೊತ್ತು ಯೋಚಿಸಿ ‘ಸರೆ ಬುಡು ಸ್ವಾಮಿ’ ಎಂದು ಒಪ್ಪಿಕೊಂಡ. ಅದರಿಂದ ರಂಗಯ್ಯನ ಮನಸ್ಸಿಗೆ ಸಮಾಧಾನವಾಯಿತು.

ನಾಟಕದಲ್ಲಿ ಪಾರ್ಟು ಮಾಡುವ ಆಕಾಂಕ್ಷಿಗಳಿಗೆ ಊರಲ್ಲಿ ಕೊರತೆ ಇರಲಿಲ್ಲ. ಆದರೆ ಅವರಿಗೆ ಅದರಲ್ಲಿ ಅವಕಾಶ ದೊರಕಿರಲಿಲ್ಲ, ಆದ್ದರಿಂದ ಅವು ಡ್ರಾಮಾ ತಾಲೀಮು ನಡೆಸುವ ಮನೆ ಸುತ್ತ ಗಿರಕಿ ಹೊಡೆಯುತ್ತಿದ್ದವು. ಏಕಲವ್ಯನ ಥರ ಅವುಗಳಲ್ಲಿ ಕೆಲವು ನೋಡೀ ನಾಟಕದ ಸಂಭಾಷಣೆಯನ್ನು ಕಂಠಸ್ಥ ಮಾಡಿಕೊಂಡಿದ್ದವು. ಉದಾಹರಣೆಗೆ ಯಾರಾದರು ಹೋಗಿ ಬರುವೆ ಎಂದು ಹೇಳಿದರೆ ‘ಶುಭ ಪ್ರಾಪ್ತಿರಸ್ತು ಅಂಗದಾ’ ಎಂದು ಬೀಳ್ಕೊಡುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಇನ್ನು ಹಾಡುಗಳನ್ನು ಸೊಗಸಾಗಿ ಹಾಡುವುದನ್ನು ರೂಢಿಸಿಕೊಂಡಿದ್ದವು. ಹೀಗಾಗಿ ಗ್ರಾಮದಲ್ಲಿ ಎಲ್ಲಿ ನೋಡಿದರು ನಾಟಕದ ಸಂಭಾಷಣೆ ಹಾಡುಗಳು ವಿಜೃಂಭಿಸಲಾರAಭಿಸಿದವು. ಹಾಡುಗಳಲ್ಲಿ ‘ಕ್ಷೇಮವೇ ಆಂಜನೇಯ’ ಎಂಬ ಹಾಡು ಎಲ್ಲರ ಬಾಯಿಯಲ್ಲಿ ನಿನದಿಸುತ್ತಿತ್ತು. ಒಂದೆ ಮಾತಲ್ಲಿ ಹೇಳುವುದಾದರೆ ಊರಿಗೆ ಊರೇ ನಾಟಕದಲ್ಲಿ ಮುಳುಗೇಳಲಾರಂಭಿಸಿತ್ತು.

ಈ ಸಾಮೂಹಿಕ ಉತ್ಸಾಹ ನಾಟಕದ ಮೇಸ್ಟುç ಪಾಂಡುರಂಗಯ್ಯನ ಮೇಲೆ ಗುಣಾತ್ಮಕ ಪ್ರಭಾವ ಬೀರಿತ್ತು. ಇವತ್ತು ಆ ಪಾತ್ರಧಾರಿ ಮನೆಯಲ್ಲಿ ಅದನ್ನು ಮಾಡಿದ್ದರೆ ನಾಳೆ ಇನ್ನೊಬ್ಬ ಪಾತ್ರಧಾರಿ ಮನೆಯಲ್ಲಿ ಇನ್ನೊಂದು ವಿಶೇಷ ಅಡುಗೆ ಮಾಡುತ್ತಿದ್ದರು. ಹೀಗಾಗಿ ಆತನ ಮುಖದಲ್ಲಿ ವರ್ಚಸ್ಸು ಪ್ರಾಪ್ತವಾಗಿತ್ತು. ಈ ಸತ್ಕಾರದಿಂದ ರಂಗಯ್ಯಗೆ ಪಾತ್ರಧಾರಿಗಳಲ್ಲಿನ ಕೆಲವು ಲೋಪ ದೋಷಗಳನ್ನು ಕ್ಷಮಿಸುವುದು ಅನಿವಾರ್ಯವಾಗಿತ್ತು. ಈ ಸತ್ಕಾರದ ಪ್ರಭಾವದಿಂದ ಪಾತ್ರಧಾರಿಗಳೆ ನಾಟಕದ ಮಾಸ್ತರನ ಮೇಲೆ ಸವಾರಿ ಮಾಡಲಾರಂಭಿಸಿದರು.

ರಂಗಯ್ಯ ಕೆಲವೊಮ್ಮೆ ಬೇಸರದಿಂದ, ‘ನಿಮ್ಮ ಊಟೋಪಚಾರ ನನಗೆ ಮುಖ್ಯವಲ್ಲ ಮಾರಾಯ್ರ. ನೀವು ನಾಕು ಮಂದಿ ಮೆಚ್ಚೋಹಂಗ ನಾಟಕ ಆಡೋದು ಮುಖ್ಯ’ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದ.

***

ನಾಟಕನ ಪ್ರದರ್ಶಿಸುವ ದಿನ ಹತ್ತಿರಕ್ಕೆ ಬಂತು. ಅಬ್ಬಬ್ಬಾ ಅಂದರೆ ನಾಲ್ಕಾರು ದಿವಸಗಳು ಮಾತ್ರ. ಕರ್ನೂಲಿಗೆ ಹೋಗಬೇಕು, ಅಲ್ಲಿನ ನಟಿ ರಂಗೂಬಾಯಿ ಜೊತೆ ಮಾತಾಡಬೇಕು, ಆಕೆನ ಒಪ್ಪಿಸಿ ನೂರಿನ್ನೂರು ಅಡ್ವಾನ್ಸ್ ಕೊಡಬೇಕು, ಆಕೆ ಏನಾದರು ಬೇರೆಯವರಿಗೆ ಮಾತು ಕೊಟ್ಟಿದ್ದರೆ ಕಷ್ಟವಾಗುವುದು ತಮ್ಮ ನಾಟಕಕ್ಕೆ.

ರಂಗಯ್ಯನ ಮಾತು ಉಳಿದವರಿಗೆ ಸರಿ ಅನ್ನಿಸಿತು. ಅಲ್ಲಿಗೆ ಹೋಗಿ ಆಕೆನ ಒಪ್ಪಿಸುವ ಜವಾಬ್ದಾರಿಯನ್ನು ಆತಗೆ ವಹಿಸಿದರು. ದಾರಿ ಖರ್ಚಿಗೆ ಒಂದಿಷ್ಟು, ಅಡ್ವಾನ್ಸಿಗೆ ಒಂದಿಷ್ಟು ಹಣನ ಆತನ ಕೈಗಿತ್ತರು. ವಡ್ಡರ ವೆಂಕಟಪ್ಪ, ‘ಸಾರೂ ಒಂದೆಲ್ಡು ಡ್ಯಾನ್ಸು ಮಾಡಬೇಕೂಂತ ಆಯಮ್ಮಗೆ ಹೇಳೋದನ ಮರೀಬ್ಯಾಡ’ ಎಂದು ಹೇಳುವುದನ್ನು ಮರೆಯಲಿಲ್ಲ.

ಮರು ದಿವಸ ಬೆಳೆಗ್ಗೆ ಮಾಸ್ತರ ಮದುಮಗನಂತೆ ಶೃಂಗರಿಸಿಕೊಂಡು ಸಜ್ಜಾದ. ಕೆಲವು ಪಾತ್ರಧಾರಿಗಳು ಆತನನ್ನು ಕರ್ನೂಲು ಬಸ್ಸು ಹತ್ತಿಸಿ ಊರಿಗೆ ಮರಳಿದರು. ಅವರೆಲ್ಲರು ಆತನ ಆಗಮನಕ್ಕಾಗಿ ಕಾಯಲಾರಂಭಿಸಿದರು. ಆತ ನಾಲ್ಕು ದಿವಸಗಳು ಕಳೆದರು ಮರಳಲಿಲ್ಲ. ಆದ್ದರಿಂದ ಅವರಲ್ಲಿ ಆತಂಕ ಹೆಚ್ಚಿತು. ಎಂಟಪ್ಪ ‘ರಂಗೂಬಾಯಿ ಒಪ್ಪಿದಳೊ ಇಲ್ಲವೊ!’ ಎಂದು ಅನುಮಾನಿಸಿದ. ಅವರ್ಯಾರು ಸರಿಯಾಗಿ ನಿದ್ದೆ ಮಾಡದಾದರು. ತಮ್ಮ ಪುಣ್ಯಕ್ಕೆ ಪಾಂಡುರಂಗಯ್ಯ ಊರಿಗೆ ಮರಳಿದ್ದು ಐದನೆ ದಿವಸ.

ಆಕೆನ ಒಪ್ಪಿಸಿದಿರಾ! ಆಕೆ ಒಪ್ಪಿದಳಾ! ಎಲ್ಲರ ಬಾಯಿಯಲ್ಲಿ ಒಂದೇ ಮಾತು. ಅದಕ್ಕೆ ಮಾಸ್ತರ ನಕ್ಕು ಆಕೆ ತನ್ನ ಮಾತನ ಮೀರುವುದಿಲ್ಲ ಎಂದು ತಿಳಿಸಿದ. ಕೇಳಿದ್ದಕ್ಕೆ ಮೊದಲು ಆಕೆ, ‘ಇಲ್ಲಣ್ಣಾ ನಾನು ತಿರುಪತಿಗೆ ಹೋಗೋದೈತೆ ಬರೋದಿಲ್ಲ’ ಎಂದಳು. ಅದಕ್ಕೆ ನಾನು ‘ನಾಟಕ ಮುಗಿದ ಮ್ಯಾಲ ಹೋಗುವಿಯಂತೆ, ತಿರುಪತಿ ತಿಮ್ಮಪ್ಪ ಎಲ್ಲಿಗು ಓಡಿ ಹೋಗೋದಿಲ್ಲ ಅಂತ ಹೇಳಿ ಒಪ್ಪಿಸಿದೆ. ನೀವು ಮಾತ್ರ ಆಕೆಗೆ ಒಂಚೂರು ಕೊರತೆ ಆಗದಂತೆ ನೋಡಿಕೊಳ್ಳಬೇಕು. ಇದು ನಾಟಕ ಕಲಿಸಿದವನ ಮರ್ಯಾದೆ ಪ್ರಶ್ನೆ’ ಎಂದು ಒತ್ತಿ ಹೇಳಿದ.

ಆತನ ಮಾತಿಗೆ ಎಲ್ಲರು ಒಪ್ಪಿದರು. ಅವರಲ್ಲಿ ವಡ್ಡರ ಎಂಕಟಪ್ಪ, ‘ನಮ್ಮ ಅಂಜಿನಪ್ಪನದ್ದು ದೊಡ್ಡಮನೆ, ಆ ಮನೇಲಿ ಆಕೆ ವಸ್ತಿ ಇರಲಿ, ಊಟೋಪಚಾರನ ನಾನೋಡಿಕೊಳ್ತೀನಿ’ ಎಂದ.

‘ಹಂಗಿದ್ದರೆ ನನ್ನನ್ನು ನೋಡಿಕೊಳ್ಳೋದಿಲ್ಲವೇನೊ ಎಂಟಾ!’ ಎಂದು ರಂಗಯ್ಯ ತಮಾಷೆ ಮಾಡಿದ. ಅದಕ್ಕೆ ಆತ, ‘ಅಯ್ಯೋ ನಿಮ್ಮನ್ನು ನೋಡಿಕೊಳ್ಳೋಕೆ ಹತ್ತಾರು ಮಂದಿ ಅದಾರ ಸ್ವಾಮಿ, ಪಾಪ ಆಕೇನ ನೋಡಿಕೊಳ್ಳೋಕೆ ಯಾರಿದ್ದಾರೆ!’ ಎಂದು ಹೇಳಿ ನಕ್ಕ.

***

ನಾಟಕನ ಕಲಿಸೋದು ಕಲಿಯೋದೆಲ್ಲ ಮುಕ್ತಾಯವಾಯಿತು. ಗುಡಿ ಬಳಿ ಹುಣ್ಣುಮೆ ದಿವಸ ಗೆಜ್ಜೆ ಪೂಜೆ ಆಡುವುದೆಂದು ತಿಳಿಸಲಾಯಿತು. ಆ ಸಂಜೆ ವೇಳೆ ಸರಿಯಾಗಿ ಗ್ರಾಮ ಪ್ರಮುಖರು, ನಾಟಕದ ಪಾತ್ರಧಾರಿಗಳು, ಅವರ ಆಟನ ನೋಡುವವರು ಎಲ್ಲರು ಬಂದು ಸೇರಿದರು.

ಶ್ರೀರಾಮನ ಪಾತ್ರಧಾರಿ ಪದ್ಯನ ಹಾಡಬೇಕೆಂದು ಎಲ್ಲರು ಒಕ್ಕೊರಲಿನಿಂದ ಒತ್ತಾಯಿಸಿದರು, ಅದೂ ಶಿಳ್ಳೆ ಹಾಕಿ! ಪ್ರೇಕ್ಷಕರಲ್ಲಿದ್ದ ಹಿರಿಯ ವ್ಯಕ್ತಿ ಒಗಾಯಪ್ಪ, ‘ರಾಮನಿಗೆ ಗಡ್ಡ ಇರಬಾರದಲ್ಲವೆ!’ ಎಂದು ತಕರಾರೆತ್ತಿದ. ಆತನ ಮಾತಿನಿಂದ ಸಾಬು ಆತಂಕಕ್ಕೊಳಗಾದ, ಮರುಕ್ಷಣ ಚೇತರಿಸಿಕೊಂಡು, ‘ತಾತ ಇದು ದೇವರ ಗಡ್ಡ, ತೆಗೆಯೋಕೆ ಬರೋದಿಲ್ಲ’ ಎಂದು ಹೇಳಿದ. ಅದಕ್ಕೆ ಮಾಸ್ತರ ನಗುತ್ತ, ‘ಲೇ ರಸೂಲು ಆತ ಹೇಳಿದ್ದು ಖರೆ ಐತಿ, ಈಗ ಇದ್ದರೆ ಪರವಾಯಿಲ್ಲ, ಆದರೆ ನಾಟಕದ ದಿವಸ ತೆಗೆಯಲೇಬೇಕು’ ಎಂದು ತಿದ್ದುಪಡಿ ಸೂಚಿಸಿದ. ಮಾಸ್ತರ ಸಹ ಆತಗೆ ಸಪೋರ್ಟ ಮಾಡುವುದೆ! ರೋಸಿ ರಸೂಲು, ‘ಇಲ್ಲ, ನಾನು ನಾಟಕನಾರ ಬಿಡ್ತೀನಿ, ಆದರೆ ಗಡ್ಡನ ಮಾತ್ರ ತೆಗೆಯೋದಿಲ್ಲ’ ಎಂದು ನಿರ್ದಾಕ್ಷಿಣ್ಯ ತಿಳಿಸಿದ. ಅದಕ್ಕೆ ಒಬ್ಬ ನಕ್ಕು, ‘ಅದೇನು ದೊಡ್ಡ ವಿಷ್ಯ ಸಾಬು, ಇವತ್ತು ಬೋಳಿಸಿದರೆ ವಾರದೊಳಗೆ ಮತ್ತೆ ಬರತದೆ. ಅದಕ್ಯಾಕೆ ಚಿಂತೆ ಮಾಡುವಿ!’ ಎಂದು ಮಾಸ್ತರು ಬುದ್ದಿ ಹೇಳಿದ, ಅದಕ್ಕೆ ಸಾಬು, ‘ಇದು ದೇವರ ಗಡ್ಡ ಸ್ವಾಮಿ! ಹೆಂಗ ತೆಗೆಯೋದು!’ ಎಂದು ಮುಖ ಸಪ್ಪಗೆ ಮಾಡಿಕೊಂಡ.

ನೋಡಲೆಂದು ಅಲ್ಲಿಗೆ ಬಂದಿದ್ದ ಒಬ್ಬೊಬ್ಬರು ಒಂದೊಂದು ಮಾತು ಹೇಳಿದರು. ಬಳಿಕ ಎಂಟೇಸು, ‘ಹಂಗ್ಯಾಕ ತಲೆಗೊಬ್ಬೊಬ್ಬರು ಮಾತಾಡತೀರಿ, ಸ್ಲಲ್ಪ ಹೊತ್ತು ಸುಮ್ಮಕ್ಕಿರ್ರಿ. ಹೇಳೋದಕು, ಕೇಳೋದಕು ದೊಡ್ಡಮನುಷ್ಯರು ಅದಾರಲ್ಲ, ಅವರೇನು ಹೇಳತಾರೊ, ನೋಡೋಣ’ ಎಂದು ಹೇಳಿದ.

ಮಲ್ಲಯ್ಯ, ‘ರಸೂಲು ಬಾಳ ನಿಷ್ಠೆಯಿಂದ ನಾಟಕಾನ ಅಭ್ಯಾಸ ಮಾಡ್ಯಾನ, ಕಳೆದೇಳು ತಿಂಗಳುಗಳಿಂದ ಒಂಚೂರು ಮಾಂಸದ ತುಂಡನ ಮುಟ್ಟಿಲ್ಲ. ದೇವರ ಪಾರ್ಟು ಮಾಡಿರೋ ಕಾರಣಕ್ಕ ಕಟ್ಟುನಿಟ್ಟಾಗದೀನಂತ ಹೇಳುತ್ತಿದ್ದ. ಮನೇ ಮಂದಿ ಒತ್ತಾಯಕ್ಕು ಮಣಿಲಿಲ್ಲವಂತೆ. ಯಾವ ದೇವರಾದರು ಒಂದೆ ಎಂದು ಹೇಳಿದನಂತೆ. ಸಾಬು ನಮ್ಮ ದೇವರಿಗೆ ಈಟೊಂದು ಭಕ್ತಿ ತೋರಿಸಿರುವಾಗ ನಾವೂ ಯಾಕ ಅವನ ದೇವರಿಗೆ ಭಕ್ತಿ ತೋರಿಸಬಾರದು!’ ಎಂದು ಸಲಹೆ ನೀಡಿದ.

‘ರಸೂಲು ಬಾಯಿಯಿಂದ ಪದ್ಯ ಕೇಳೋದೆ ಒಂದು ಚಂದ. ಅದು ಆ ದೇವರು ಹಾಡಿದಾಂಗ ಇರತದ. ರಾಮನ ಪಾತ್ರಕ್ಕೆ ರಸೂಲು ಹೇಳಿ ಮಾಡಿಸಿದ ವ್ಯಕ್ತಿ’ ಎಂದು ದುಬ್ಬಮ್ಮ ಹೇಳಿದಳು.

‘ಸರೆ ಬುಡು, ರಾಮನಿಗೆ ಗಡ್ಡ ಇದ್ದರು ಒಂದೆ ಇರದಿದ್ದರು ಒಂದೆ’ ಎಂದ ಕುಲಕರ್ಣಿ.

ಆ ಸನ್ನಿವೇಶ ಗಮನಿಸುತ್ತಿದ್ದ ದರೇಸಾಬು, ‘ರಸೂಲು ಯಾವುದಕ್ಕು ಇನ್ನೊಮ್ಮೆ ಆಲೋಚಿಸು’ ಎಂದು ಹೇಳಿದ.

‘ದರೇಸಾಬು, ಅವನಿಗೆನು ಅನ್ನೋದು ಬ್ಯಾಡ, ಆಡೋದು ಬ್ಯಾಡ. ಆಲೋಚನೆ ಮಾಡಬೇಕಿರೋದು ಅವನಲ್ಲ, ನಾವು, ಮಲ್ಲಯ್ಯ ಹೇಳಿದ್ದು ಖರೇ ಐತಿ’ ಎಂದು ಗಿಡ್ಡಯ್ಯ ದರೇಸಾಬುನ ಮೇಲೆ ಕೋಪಿಸಿಕೊಂಡ.

ಆದರೆ ಉಳಿದವರೆಲ್ಲರು ರಸೂಲು ರಾಮನ ಪಾರ್ಟು ಮಾಡಲೇಬೇಕೆಂದು ಪಟ್ಟು ಹಿಡಿದರು. ಗಡ್ಡ ಇದ್ದರೇನು! ಗಡ್ಡ ಇರದಿದ್ದರೇನು! ಅವನ ಪರ ವಾದಿಸಿದರು.

ಯಾರೋ ಗುಂಪೊಳಗಿಂದ ‘ಗಡ್ಡದ ರಾಮಾ’ ಎಂದು ಕೂಗಿದ್ದನ್ನು ಎಲ್ಲರು ಕೇಳಿಸಿಕೊಂಡರು.

***

ನಾಟಕ ಪ್ರದರ್ಶಿಸುವ ದಿನ ಬಂದೇಬಿಟ್ಟಿತು. ಊರು ತುಂಬೆಲ್ಲ ಹಬ್ಬದ ವಾತಾವರಣ. ಕುಲ ಮತ ಭೇದವೆಣಿಸದೆ ಎಲ್ಲರು ತಮ್ಮ ತಮ್ಮ ಮನೆಗಳನ್ನು ಶೃಂಗರಿಸಿಕೊAಡರು. ತಮ್ಮ ತಮ್ಮ ಮನೆಯಂಗಳಗಳಲ್ಲಿ ಮಾತ್ರವಲ್ಲದೆ ಹೆಣ್ಣುಮಕ್ಕಳು ಸ್ಟೇಜ್ ಮುಂದೆ ಹಲವು ವಿಧದ ಸುಂದರ ರಂಗೋಲಿಗಳನ್ನು ರಚಿಸಿದರು. ದರೇಸಾಬುನ ಮಗಳು ಫಾತೀಮಳ ರಂಗೋಲಿಯನ್ನು ಊರಿಗೆ ಊರೆ ಶ್ಲಾಘಿಸಿತು. ಅಲ್ಲದೆ ಸ್ಟೇಜ್‌ನ ಒಳ ಹೊರಗೆ ಮಾವಿನ ತೋರಣ ಕಟ್ಟಿದರು. ಡ್ರೆಸ್ ಕಂಪನಿಯವರು ಬಂದು ಸ್ಟೇಜ್‌ನಲ್ಲಿ ಸೀನರಿಗಳನ್ನು ಅಳವಡಿಸಿದರು. ಹೀಗೆ ಒಬ್ಬೊಬ್ಬರು ಒಂದೊಂದು ಕೆಲಸ ಕಾರ್ಯಗಳನ ಮಾಡಿ ಮುಗಿಸಿದರು.

ಸಂಜೆ ಐದು ಗಂಟೆಗೆ ಸರಿಯಾಗಿ ಕಲಾವಿದೆ ರಂಗೂಬಾಯಿ ಕುಳಿತಿದ್ದ ಬಂಡಿ ಊರು ಪ್ರವೇಶಿಸಿತು. ಆಕೆ ಕಣ್ಣಿಗಡ್ಡ ಬಣ್ಣದ ಚಾಳೇಸು ಧರಿಸಿದ್ದಳು. ಬಳಿಕ ಆಕೆ ಕುಳಿತಿದ್ದ ಬಂಡಿಯನ್ನು ಎಂಕಟಪ್ಪ ಅಂಜಿನಯ್ಯನ ಹೊಸಮನೆಗೆ ನಡೆಸಿದ. ಚಕ್ಕಡಿ ಹಿಂದೆ ಮುಂದೆ ಜನವೋ ಜನ. ಬಂಡಿಯಿAದ ಆಕೆ ನಿಧಾನವಾಗಿ ಇಳಿದು ಮನೆ ಪ್ರವೇಶಿಸಿದಳು. ಆಕೆ ಸಂಗಡ ಆಕೆಗೆ ಸಂಬಂಧಿಸಿದ ಕೆಲವರು ಇದ್ದರು. ಆಕೆ ಪಡಸಾಲೆಯಲ್ಲಿದ್ದ ಕಟ್ಟೆ ಮೇಲೆ ವಿರಾಜಮಾನಳಾದಳು. ಆಕೆಯ ಆಗಮನದಿಂದ ಊರು ಸಂಭ್ರಮಿಸಿತು. ಕರ್ನೂಲು ನಗರದಲ್ಲಿ ತನಗೆ ಸಿಗದ ಗೌರವ ಈ ಪರಸ್ಥಳದಲ್ಲಿ ಸಿಕ್ಕುವುದೆ ಅಭಿಮಾನದ ಸಂಗತಿ ಎಂದು ಭಾವಿಸಿದಳು.

ಆ ದಿವಸ ಆ ಸಮಯದಂದು ಸ್ಟೇಜ್ ಮುಂದೆ ಜಮಖಾನ ಚಾಪೆ, ತಾಡಪಲ್ಲುಗಳನ್ನು ಹಾಸಿ ತಮ್ಮ ತಮ್ಮ ಸೀಟುಗಳನ್ನು ಕಾಯ್ದಿರಿಸಲಾಯಿತು. ಹೆಣ್ಣು ಗಂಡು ಆದಿಯಾಗಿ ಸರ್ವರೂ ಬಂದಲ್ಲಿ ಕಿಕ್ಕಿರಿದರು. ಪಾಂಡುರಂಗಯ್ಯನ ಪತ್ನಿ ಸುಂಕಮ್ಮ ಸಹ ಬಂದಳು. ಆ ದಂಪತಿಗಳನ್ನು ವೇದಿಕೆ ಮ್ಯಾಲೆ ಆಹ್ವಾನಿಸಿ ಬಟ್ಟೆಬರೆ ಆಯಿರು ಮಾಡಲಾಯಿತು. ಅಲ್ಲದೆ ಬಾಕಿ ಇದ್ದ ಹಣವನ್ನು ಚುಕ್ತಾ ಮಾಡಿದರು. ಆ ಎಲ್ಲ ಸಾಮಾನುಗಳನ್ನು ಸುಂಕಮ್ಮ ಜೊತೆಯಲ್ಲಿರಿಸಿಕೊಂಡಳು. ರಂಗಯ್ಯ ಹಾರ್ಮೋನಿಯಂ ಪೆಟ್ಟಿಗೆ ಮುಂದೆ ಮಟ್ಟಸ ರೀತಿಯಲ್ಲಿ ಕುಳಿತ.

ನಾಟಕ ಪ್ರಯುಕ್ತ ನೆಟ್ಟಕಲ್ಲಪ್ಪನ ಹೋಟಲ್‌ನಲ್ಲಿ ವಗ್ಗರಣಿ ಮಿರ್ಚಿ ರೆಡಿಯಾಯಿತು. ನಾಟಕದ ವೇಷಧಾರಿಗಳು ತಮ್ಮ ತಮ್ಮ ಬಂಧು ಬಳಗದವರನ್ನು ವಿಶೇಷ ರೀತಿಯಲ್ಲಿ ಬರಮಾಡಿಕೊಂಡಿದ್ದರು. ಅನುಮೇಸಪ್ಪ ಕಂಕುಳಲ್ಲಿ ನಾಟಕ ಕೃತಿಯನ್ನು ಇಟ್ಟುಕೊಂಡು ಸ್ಟೇಜ್ ಹತ್ತುವುದು ಇಳಿಯುವುದು ಮಾಡುತ್ತಿದ್ದ. ಪಾತ್ರಧಾರಿಗಳಿಗೆ ಸಂಭಾಷಣೆ ಮಾತುಗಳನ್ನು ನೆನಪಿಸುವದಕ್ಕೆಂದೆ ಆತನನ್ನು ನೇಮಿಸಿದ್ದರು. ಸ್ಟೇಜ್ ಹಿಂಬದಿಯಲ್ಲಿದ್ದ ಡ್ರೆಸ್ಸಿಂಗ್ ಕೋಣೆಯ ಒಂದು ಪಕ್ಕ ಹನ್ನೆರಡು ಮಂದಿ ಗಂಡು ಪಾತ್ರಧಾರಿಗಳಿದ್ದರೆ ಇನ್ನೊಂದು ಮಗ್ಗುಲು ರಂಗೂಬಾಯಿ ಮೇಕಪ್ ಮಾಡಿಕೊಂಡು ಸಜ್ಜಾದಳು.

ಮೇಕಪ್ ಮ್ಯಾನ್ ಎಮ್ಮಿಗನೂರಿನಿಂದ ಬಂದಿದ್ದನಲ್ಲವೆ! ಆತ ಅಲ್ಲಿ ಅವರಿಗೆ ಮೇಕಪ್ ಮಾಡುತ್ತಿದ್ದನಲ್ಲವೆ! ಆತ ‘ರಾಮನ ಪಾತ್ರಧಾರಿ ಬೇಗ ಬರಬೇಕು’ ಎಂದು ಕೂಗಿದನು. ಐದು ಸಾರಿ ಕೂಗಿಸಿಕೊಂಡ ಬಳಿಕ ರಸೂಲು ಬಂದು ಆತನ ಮುಂದೆ ಕುಳಿತ. ನಖಶಿಖಾಂತ ನೋಡಿ, ‘ಮೊದಲು ಗಡ್ಡ ಬೋಳಿಸಿಕೊಂಡು ಬಾ ಹೋಗು’ ಎಂದು ಗದರಿದ. ಅದಕ್ಕೆ ಸಾಬು, ‘ಬೋಳಿಸುವುದಕ್ಕೆ ಇದು ಸಾಮಾನ್ಯ ಗಡ್ಡವಲ್ಲ, ದೇವರ ಗಡ್ಡ, ಈ ಗಡ್ಡದ ವಿಷಯದಲ್ಲಿ ದೊಡ್ಡ ಪಂಚಾತಿ ನಡೆಯಿತು. ಗಡ್ಡವಿಟ್ಟುಕೊಂಡೆ ಪಾರ್ಟು ಮಾಡೂಂತ ಹಿರಿಯರು ಹೇಳಿದ್ದಾರೆ’ ಎಂದು ವಿವರಿಸಿದ.

ಅದರಿಂದ ಮೇಕಪ್ ಮ್ಯಾನ್ ಮತ್ತಷ್ಟು ಕೆರಳಿದ, ‘ನನಗದೆಲ್ಲ ಗೊತ್ತಿಲ್ಲ, ಮೊದಲು ನಾಟಕದ ಮಾಸ್ತರನ ಕರೀರಿ’ ಎಂದು ಕೂಗಿದ. ರಂಗಯ್ಯ ಬಂದು, ‘ಇದು ಊರ ತೀರ್ಮಾನ, ಯೋಚಿಸೋದು ಬ್ಯಾಡ. ಗಡ್ಡ ಇರಲಿ ಪರವಾಯಿಲ್ಲ, ಹಂಗೆ ಮೇಕಪ್ ಮಾಡು’ ಎಂದು ಹೇಳಿ ವಾಪಸ್ಸಾದ. ಎಂದಿನಂತೆ ತಾನು ಪೆಟ್ಟಿಗೆ ಮುಂದೆ ಕುಳಿತು ನಾಂದಿ ಪದ ನುಡಿಸಲಾರಂಭಿಸಿದ. ವಶಿಷ್ಟ ವೇಷಧಾರಿ ಎಂಟೇಸು ತನಗೆ ಬಿಳಿಗಡ್ಡ ಬೇಡ ಕರಿಗಡ್ಡವೇ ಬೇಕೆಂದು ಮೇಕಪ್ ಕೋಣೆಯಲ್ಲಿ ಪಟ್ಟು ಹಿಡಿದಿದ್ದ. ಆತನ ತರ್ಕ ವಿಚಿತ್ರವಿತ್ತು. ಅದೆಂದರೆ ತನ್ನ ಪ್ರತಿಸ್ಪರ್ಧಿ ವಿಶ್ವಾಮಿತ್ರನಿಗ್ಯಾಕೆ ಕಪ್ಪು ಗಡ್ಡ! ತನಗ್ಯಾಕೆ ಬಿಳಿ ಬಣ್ಣದ ಗಡ್ಡ! ಇದು ತನ್ನ ವಿತಂಡವಾದ. ಅದು ಮಾತಿಗೆ ಮಾತು ಬೆಳೆದು ನಿರ್ಣಾಯಕ ಹಂತ ತಲುಪಿತು. ಆತನ ವಾದ ಸಕಾರಣವಿತ್ತು. ತನಗಿಂತ ಹಿರಿಯನಿದ್ದ ವಿಶ್ವಾಮಿತ್ರ ಪಾತ್ರಧಾರಿಯ ಗಡ್ಡ ಕಪ್ಪು ಎಂದರೇನು! ಕಿರಿಯ ವಯಸ್ಸಿನ ತನ್ನ ಗಡ್ಡ ಬಿಳಿಬಣ್ಣದ್ದೆಂದರೇನು! ಅಲ್ಲದೆ ಪ್ರೇಕ್ಷಕರಲ್ಲಿರುವ ತನ್ನ ಪತ್ನಿ ತನ್ನ ಕುರಿತು ತಪ್ಪು ತಿಳಿದರೇನು ಗತಿ!

ಆತನ ವಾದದಿಂದ ಮೇಕಪ್ ಮ್ಯಾನ್ ನಾಗಪ್ಪ ರೋಸಿದ. ಈ ಗುವ್ವೆಲದೊಡ್ಡಿ ಜನ ಶುದ್ದ ದಡ್ಡ ಮುಂಡೇವು ಎಂದು ಶಪಿಸಿಕೊಂಡ. ಬಳಿಕ ‘ಹಾಳಾಗಿ ಹೋಗಲಿ, ನನ್ನ ಗಂಟು ಹೋಗೋದಾದರು ಏನು!’ ಎಂದನಕಂತ ಆತನ ಗಡ್ಡವನ್ನು ಸಹ ಕಪ್ಪಾಗಿಸಿದ.

ಇಷ್ಟು ಹೊತ್ತಾದರು ನಾಟಕ ಆರಂಭವಾಗಲಿಲ್ಲವಲ್ಲ! ನೆರೆದಿದ್ದ ಪ್ರೇಕ್ಷಕರಲ್ಲಿ ಅಸಹನೆ ಹೆಚ್ಚಿತು. ಅದಕ್ಕೆಂದೆ ಅವರು ತಮ್ಮ ತಮ್ಮ ಸ್ಥಳಗಳನ್ನು ಕಾಯ್ದಿರಿಸಿಕೊಂಡು ಎಷ್ಟೋ ಹೊತ್ತಾಗಿತ್ತು. ಅಂತು ತಮ್ಮ ಅದೃಷ್ಟಕ್ಕೆ ನಾಟಕದ ಮೊದಲ ದೃಶ್ಯ ಆರಂಭವಾಯಿತು. ತೆರೆ ಸರಿದಾಕ್ಷಣ ನಾರದ ವೇಷಧಾರಿ ದತ್ತಪ್ಪ, ‘ಶ್ರೀರಾಮಚಂದ್ರ ಈ ದಿವಸವಲ್ಲವೆ ಶಾಂತಿಮಯ ವಸುಧೈವಿಕ ಸರ್ಕಾರವನ್ನು ಸ್ಥಾಪಿಸಿದ್ದು’ ಎಂದು ತನ್ನ ಡೈಲಾಗನ್ನು ಆರಂಭಿಸಿದ. ಆತ ಒಂಚೂರು ಭಯ ಆತಂಕವಿಲ್ಲದೆ ನಿರರ್ಗಳವಾಗಿ  ಹೇಳಿದ್ದು ಕೇಳಿ ಪ್ರೇಕ್ಷಕರು ಕರತಾಡನ ಮಾಡಿದರು. ಅದರಿಂದ ಮಾಸ್ತರ ರಂಗಯ್ಯ ಒಂದು ಕ್ಷಣ ಭಾವೋದ್ವೇಗಕ್ಕೆ ಒಳಗಾದ.

ಇನ್ನು ವಡ್ಡರ ವೆಂಕಟಪ್ಪ ರಂಗಾಬಾಯಿ ಜೋಡಿ ರಂಗ ಪ್ರವೇಶಿಸಿತು. ಆತನ ಹಾಡಿಗೆ ಆಕೆ ನರ್ತಿಸಲಾರಂಭಿಸಿದಳು. ಅದೇ ಛಾನ್ಸೂಂತ ಆತ ಆಕೆಯ ಕೈ ಹಿಡಿದು ಗರಗರನೆ ತಿರುಗಿಸಿದ, ಅದಕ್ಕೆ ಪ್ರೇಕ್ಷಕರು ಕೇಕೆ ಶಿಳ್ಳೆ ಹಾಕಿ ಪ್ರೋತ್ಸಾಹಿಸಿದರು. ಬಳಿಕ ಕೆಲವು ಪಾತ್ರಧಾರಿಗಳಿಂದ ಅಪಸವ್ಯಗಳು ಸಂಭವಿಸಿದವು. ಉದಾಹರಣೆಗೆ ಭರತನ ಪಾತ್ರಧಾರಿ ಹಾಡಿದ್ದೇ ಬೇರೆ, ಅದರ ಮೂಲ ಇದ್ದದ್ದೇ ಬೇರೆ. ಅಲ್ಲದೆ ಅವರಲ್ಲಿ ಸುಗ್ರೀವ ಪಾತ್ರಧಾರಿ ಅನುಮೇಸಪ್ಪ ಕುಡಿದ ಅಮಲಲ್ಲಿ ಸ್ಟೇಜ್ ಪ್ರವೇಶಿಸಿದ. ತೂರಾಡುತ್ತ ತನ್ನ ಡೈಲಾಗುಗಳನ್ನು ತಪ್ಪು ತಪ್ಪಾಗಿ ಉಚ್ಚರಿಸಿ ನಗೆಪಾಟಲಾದ. ಆದರು ಪರ ಊರುಗಳಿಂದ ಆಗಮಿಸಿದ್ದ ನೆಂಟರಿಷ್ಟರು ಆತಗೆ ನೂರು ಐನೂರು ಆಯಿರು ಮಾಡಿ ಸೈ ಅನ್ನಿಸಿಕೊಂಡರು. ಮಾವನ ನಾಟಕ ಅಂದ ಬಳಿಕ ತಾನು ಕಂಠದವರೆಗೆ ಕುಡಿಯದೆ ಇರಲಾದೀತೆ! ಆತನ ಸ್ವಂತ ಅಳಿಯ ಸ್ಟೇಜ್ ಮೇಲೆ ಹುಚ್ಚು ಹುಚ್ಚಾಗಿ ಡ್ಯಾನ್ಸ್ ಮಾಡಲಾರಂಭಿಸಿದ. ಆತನ ವರ್ತನೆಗೆ ಪ್ರೇಕ್ಷಕರು ರೋಸಿ ಕೇಕೆ ಹಾಕಿದರು. ರಂಗಯ್ಯನ ಸಲಹೆ ಮೇರೆಗೆ ಆತನನ್ನು ಸ್ಟೇಜ್ ಮೇಲಿಂದ ಸಾಹಸ ಪ್ರದರ್ಶಿಸಿ ಕೆಳಕ್ಕಿಳಿಸುವಲ್ಲಿ ಸಫಲರಾದರು.

ಇನ್ನು ಏನೇನೊ ಹುಚ್ಚಾಟಗಳು ಸ್ಟೇಜ್ ಮೇಲೆ ಎಗ್ಗಿಲ್ಲದೆ ನಡೆದವು. ಅವ್ಯಾವಕ್ಕು ತಾಳ ಮೇಳವಿರಲಿಲ್ಲ. ಈ ಪ್ರಕಾರವಾಗಿ ರಾಮಾಂಜನೇಯ ಯುದ್ದ ನಾಟಕ ಬೆಳಗಾ ಮುಂಜಾನೆ ನಾಲ್ಕೂವರೆ ಐದು ಗಂಟೆವರೆಗೆ ಸಾಗಿತು. ಅವರಲ್ಲಿ ಕೆಲವು ಪಾತ್ರಧಾರಿಗಳು ಕುಡಿದ ಅಮಲಲ್ಲಿ ಧರಿಸಿದ್ದ ಡ್ರೆಸ್ ಜೊತೆ ತಮ್ಮ ತಮ್ಮ ಮನೆಗಳಿಗೆ ಹೋಗಿದ್ದರು. ಇನ್ನು ಕೆಲವು ಪಾತ್ರಧಾರಿಗಳು ತಮ್ಮ ತಮ್ಮ ಹೆಂಡರಿಗೆ ಧರಿಸಿದ್ದ ವೇಷ ತೋರಿಸಲೆಂದೆ ಹೋಗಿದ್ದರು. ಹುಡುಕಿಕೊಂಡು ಅವರಿದ್ದಲ್ಲಿಗೆ ಹೋಗಿ ಅವರ ಮೈ ಮೇಲಿದ್ದ ಡ್ರೆಸ್ ಕಳಚಿ ತರುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು.

ಡ್ರೆಸ್ ಮಾಲಕ, ಹಾಗು ಸ್ತ್ರೀ ಪಾತ್ರಧಾರಿ ರಂಗೂಬಾಯಿ ಊರನ್ನೂ, ನಾಟಕದ ಪಾತ್ರಧಾರಿಗಳನ್ನು ವಾಚಾಮಗೋಚರ ಬಯ್ಯುತ್ತ ತಮ್ಮ ತಮ್ಮ ಊರುಗಳಿಗೆ ಮರಳಿದರು. ಆದರೆ ತನ್ನ ಶಿಷ್ಯೋತ್ತಮರ ಒತ್ತಾಯದ ಮೇರೆಗೆ ನಾಟಕ ಕಲಿಸಿದ ಮೇಸ್ಟುç ಪಾಂಡುರಂಗಯ್ಯ ಮುಂದೆ ನಾಲ್ಕಾರು ದಿವಸ ಗುವ್ವೆಲದೊಡ್ಡಿಯಲ್ಲೆ ಉಳಿದ. ಆತಗೆ ಕೃತಜ್ಙತಾಪೂರ್ವಕವಾಗಿ ದವಸ ಧಾನ್ಯ, ಹೆಚ್ಚುವರಿ ಸಂಭಾವನೆಗಳಿತ್ಯಾದಿ ನೀಡಿ ಗೌರವಿಸಿದರು. ಅಲ್ಲದೆ ಆತನನ್ನು ಸವಾರಿ ಬಂಡಿಯಲ್ಲಿ ಕುಂಡ್ರಿಸಿ ಬೀಳ್ಕೊಟ್ಟರು.

***

ಪಾಂಡುರಂಗಯ್ಯನ ತನ್ನ ಸ್ವಗ್ರಾಮದಲ್ಲಿ ತನ ಮನೆ ಮುಂದಿನ ಚಪ್ಪರದ ಕೆಳಗೆ ಹಾರ್ಮೋನಿಯಂ ನುಡಿಸುವುದು, ಅದಕ್ಕೆ ಪತ್ನಿ ಸುಂಕಮ್ಮ ಯಾವುದೋ ಒಂದು ಹಾಡು ಗುನುಗುವುದು, ನಡುನಡುವೆ ನಗುವುದುಗಳಿತ್ಯಾದಿ ಎಂದಿನಂತೆ ಮುಂದುವರೆಯಿತು.

ಇನ್ನು ಕರ್ನೂಲಿನ ತನ್ನ ಮನೆಯಲ್ಲಿ ಕಲಾವಿದೆ ರಂಗೂಬಾಯಿ ನೆಟ್ಟೆಕಲ್ಲು ಹೋಟಲ್‌ನ ವಗ್ಗರಣಿ ಮಿರ್ಚಿ ನೆನಪಿಸಿಕೊಳ್ಳುತ್ತ, ತಿಮ್ಮಪ್ಪನ ಜೊತೆ ಅಲ್ಲಿನ ಅನುಭವಗಳನ್ನು ಹಂಚಿಕೊಳ್ಳುತ್ತ…..

       

‍ಲೇಖಕರು avadhi

November 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kengara Mohan

    Kum vee Sir Avarige matthu Maruthi Powrohitam Avarige Thumba Dannyawadagalu…
    Kengara Mohan

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: