ಕಿರಣ ಭಟ್
ಚಂದ್ರಶೇಖರ ಕಂಬಾರರ ಪುಟ್ಟ ಕಾದಂಬರಿ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ಸಾಕಷ್ಟು ಚರ್ಚಿತವಾದ ಸಾಹಿತ್ಯ ಕೃತಿ. ಹಾಗೆಯೇ ತನ್ನ ನಾಟಕೀಯ ಗುಣಗಳಿಂದ ಸಾಕಷ್ಟು ರಂಗಕರ್ಮಿಗಳನ್ನು ಆಕರ್ಶಿಸಿದ ಕಾದಂಬರಿಯೂ ಹೌದು. ಈ ಕಾದಂಬರಿಯನ್ನೆತ್ತಿಕೊಂಡು ಅನೇಕ ನಿರ್ದೇಶಕರು ತಮ್ಮದೇ ರೀತಿಯಲ್ಲಿ ರಂಗಪ್ರಯೋಗವನ್ನು ಹಿಂದೆ ಕಟ್ಟಿದ್ದುಂಟು. ಇತ್ತೀಚೆಗೆ ಕೆರೆಕೋಣ ದ ‘ಸಹಯಾನ’ ದಲ್ಲಿ ಪ್ರದರ್ಶಿತವಾದ ಈ ನಾಟಕ ಇಂಥದೊಂದು ಹೊಸ ಪ್ರಯತ್ನ.
ಕುತೂಹಲದ ವಿಷಯವೆಂದರೆ ಈ ನಾಟಕ ಅಭಿನಯಿಸಿದವರು ಮುಂದೆ ‘ಮಾಸ್ತರು’ಗಳಾಗಲಿರುವ ಕುಮಟಾ ದ ಎ.ವಿ.ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಮಕ್ಕಳು. ಕಾಲೇಜು ವಿದ್ಯಾರ್ಥಿಗಳ ರಂಗಶಿಕ್ಷಣ ತರಬೇತಿ ಶಿಬಿರದಲ್ಲಿ ಸಿದ್ಧವಾದ ನಾಟಕವಿದು.
ಕಾದಂಬರಿಯಂತೂ ಹೆಚ್ಚಿನ ಜನಗಳಿಗೆ ಪರಿಚಿತವೇ. ಘೋರ ಶಿಸ್ತಿನ, ಖಡಕ್ ಮಾಸ್ತರ್ರು ಜೀಕೆ ಮಾಸ್ತರು. ಅವರ ಸಂಸಾರವೆಂದರೆ ಸದಾ ದೇವರು ದಿಂಡ್ರು ಅಂತ ಅಂದ್ಕೊಳ್ತಾ ಆ ಕಾರಣಕ್ಕಾಗೇ ಮಗನನ್ನೂ ಕಳೆದುಕೊಂಡ ಅವರ ಹೆಂಡ್ತಿ. ಹಾಗಾಗಿಯೇ ಅವರದೊಂಥರಾ ಒಂಟಿ ಜೀವ. ಭಾವಳಿಗೇ ಜಾಗವಿಲ್ಲದ ಯಾಂತ್ರಿಕ ಬದುಕು.
ಸರಾಗವಾಗಿ, ತಣ್ಣಗೆ ನಡೆದುಕೊಂಡು ಹೋಗ್ತಿದ್ದ ಕಾಲೇಜಲ್ಲಿ ನಿಧಾನಕ್ಕೆ ಹುಡುಗ್ರು ಉಡಾಳರಾಗ್ತಾರೆ. ಪೋಕ್ರಿ ಹುಡುಗ ಗಿರಿಯಪ್ಪ ಕಾಲೇಜು ಯೂನಿಯನ್ ಲೀಡರ್ ಆಗ್ತಾನೆ. ಸದಾ ಜಗಳ, ಕಿರಿಕಿರಿ. ಹೀಗಿರೋವಾಗ ಈ ಹುಡ್ಗ ‘ರೋಜಾ ಎನ್ನೋ ಹುಡ್ಗಿಗೆ ಕಿಸ್ ಮಾಡ್ದ’ ಎನ್ನೋ ವéಿಷಯ ಮಾಸ್ತರರಿಗೆ ಮುಟ್ತದೆ. ಮಾಸ್ತರು ಹುಡುಗ್ನನ್ನ ಡಿಬಾರ್ ಮಾಡ್ತಾರೆ. ಸ್ಟ್ರೈಕ್ ಆಗ್ತದೆ. ಒಂದಿನ, ಈ ಕೇಸಿನ ವಿಚಾರಣೆಯಲ್ಲ್ಲಿ ರೋಜಾ, ‘ನಾನು ಆ ಹುಡುಗ್ನನ್ನ ಲವ್ ಮಾಡ್ತಿಲ್ಲ’ ಎಂತಲೂ, ನಾನು ಲವ್ ಮಾಡ್ತಿರೋದು ನಿಮ್ಮನ್ನೇ ಆಂತಲೂ ಹೇಳ್ತಾ, ಮಾಸ್ತರಿಗೇನೇ
‘ಐ ಲವ್ಯೂ’ ಎಂದ್ಬಿಡ್ತಾಳೆ. ಮಾಸ್ತರು ಫುಲ್ ನರ್ವಸ್!. ಅವರ ಎದೆಯಲ್ಲೋ ತನ್ ತನ್ ಸಂಗೀತ. ಆಕೆಗೆ ಫಿದಾ ಆಗಿಹೋಗೋ ಮಾಸ್ತರ್ರು ಆಕೇನ ಮನೆಗೇ ಕರೆಸಿಕೊಂಡು ಬೇಕಾದಷ್ಟು ಮಾರ್ಕ್ ಕೊಟ್ಟು ಆಕೇನ ಪಾಸ್ ಮಾಡಿಬಿಡ್ತಾರೆ. ಆಕೆ ಇದ್ದಕ್ಕಿದ್ದಂತೆ ಮಾಯವಾಗ್ತಾಳೆ.ಕೊನೆಗೊಂದು ದಿನ ಹೆಂಡತಿಯನ್ನೂ ಕಳ್ಕೊಂಡು ಅಪರಾಧೀ ಭಾವ ಹೊತ್ತು ಊರೂರು ತಿರುಗ್ತಿದ್ದ ಮಾಸ್ತರರಿಗೆ ಆ ಜೋಡಿಯಿಂದಲೇ ಮೋಸಹೋದ ಅರಿವಾಗ್ತದೆ. ಆದರೂ ಅವರನ್ನ ಕ್ಷಮಿಸುವ ಅವರು ಕೆಲಸ ಕೊಡಿಸಲೂ ಮುಂದಾಗ್ತಾರೆ. ಆಗಲೇ ಪ್ರೀತಿ ಎಂಬ ಭಾವವೊಂದು ಮಾಸ್ತರರ ಕಠೋರ ಎದೆಯಲ್ಲಿ ಅರಳಿಬಿಟ್ಟಿರ್ತದೆ.
ಅವರು ತಣ್ಣಗೆ ಹೇಳ್ತಾರೆ.. ಈಗ ಪುಟ್ಟ ಮಕ್ಕಳನ್ನ ಕಂಡ್ರೆ ಅಪ್ಪಿ ಮುದ್ದಿಸಬೇಕು ಅನಿಸ್ತದೆ.
ಇಂಥದೊಂದು ಕತೆಯನ್ನ ನಿರ್ದೇಶಕ ಆರ್.ಕೆ.ಶಿವಕುಮಾರ್ ಕಥಾ ನಿರೂಪಣೆಯ ಶೈಲಿಯಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದಾರೆ. ಕೆಲವು ಹುಡುಗರು ಮೇಳವಾಗಿ ಕಥಾ ನಿರೂಪಣೆ ಮಾಡಿದರೆ ಮಧ್ಯೆ ಮಧ್ಯೆ ಪಾತ್ರಗಳು ಪ್ರವೇಶಿಸುತ್ತ ಮುಖ್ಯ ದೃಶ್ಯಗಳನ್ನ ಅಭಿನಯಿಸುತ್ತವೆ. ನಾಟಕ ನಡೆಯುವಷ್ಟೂ ಹೊತ್ತು ಜೀವಂತಿಕೆಯಿಂದ ತುಂಬಿದ ರಂಗ ಇಲ್ಲಿದೆ. ಕಾಲೇಜಿನ ವಾತಾವರಣ ನಿರ್ಮಿಸೋದಕ್ಕೆ, ಮಾಸ್ತರರ ಹೃದಯದಲ್ಲಿ ಪ್ರೀತಿಯರಳುವ ಕ್ಷಣಗಳನ್ನ ಅಂದಗೊಳಿಸುವದಕ್ಕೆ ಸಿನಿಮಾ ಹಾಡುಗಳ ತುಣುಕುಗಳನ್ನು ಸೇರಿಸಿಕೊಂಡಿದ್ದಾರೆ. ಹುಡುಗರು ಕೂಡ ಲವಲವಿಕೆಯಿಂದ ಚಲಿಸುತ್ತ ಒಂದು ಸುಂದರ ವಾತಾವರಣ ನಿರ್ಮಿಸುತ್ತಾರೆ ಇದ್ದ ಮಿತಿಯಲ್ಲೇ, ಅತಿ ಸರಳ ಎನ್ನಬಹುದಾದ ರಂಗಸಜ್ಜಿಕೆಯಲ್ಲೇ ಪಾತ್ರಗಳು ಚಲಿಸುತ್ತ ದೃಶ್ಯಗಳನ್ನು ಕಟ್ಟುತ್ತವೆ.
ಮಹತ್ವದ ಕಾದಂಬರಿಯೊಂದನ್ನು ರಂಗದ ಮೂಲಕ ತರುಬ ಇಂಥ ಪ್ರಯತ್ನಗಳನ್ನು ಮೆಚ್ಚಬೇಕಾದ್ದೇ.
ಅಗಲಿದ, ‘ಪ್ರೀತಿ ಪದಗಳ ಸಹಯಾನಿ- ವಿಠ್ಠಲ ಭಂಡಾರಿ’ ಯವರ ನೆನಪಿನ ಕಾರ್ಯಕ್ರಮದಲ್ಲಿ, ಶ್ರೀನಿವಾಸ ನಾಯ್ಕ ರ ನಿರ್ವಹಣೆಯಲ್ಲಿ ಈ ನಾಟಕ ಪ್ರದರ್ಶಿತವಾಯಿತು.
0 ಪ್ರತಿಕ್ರಿಯೆಗಳು