ಇವರು ರಂಗ ‘ಕಿರಣ’-
ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.
ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.
ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.
ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.
ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.
ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.
ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.
ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ
-ಜಿ ಎನ್ ಮೋಹನ್
‘ರಂಗ ಕೈರಳಿ‘ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
9
ಲಾಗಾಯ್ತಿನಿಂದ್ಲೂ ಇಟ್ಫಾಕ್ ನ ವಿಶೇಷ ಅಕರ್ಷಣೆ ಅಂದ್ರೆ ಆವಾರಲ್ಲಿನ ಮರದಡಿ ನಡೆಯೋ ಗುಂಪು ಸಂಗೀತ. ಸಂಜೆ ನಸುಗತ್ತಲಾಗ್ತಿದ್ದಂತೆ ನಿಧಾನಕ್ಕೆ ಅಲ್ಲಿ ಗುಂಪು ಸೇರ್ತದೆ. ಜಂಬೆಯೋ, ತಮ್ಮಟೆಯೋ, ಚಂಡೆಯೋ ಹೀಗೆ ವಾದ್ಯಗಳನ್ನ ಹಿಟ್ಕೊಂಡ ಹುಡುಗ್ರು ಅಲ್ಲಿ ಒಬ್ಬೊಬ್ರಾಗಿ ಬರ್ತಾರೆ. ನೂರಾರು ಜನರ ಗುಂಪಾಗ್ತದೆ. ಆಗ ಶುರುವಾಗ್ತದೆ ಸಂಗೀತ ಸಮಾರಾಧನೆ. ಮಲಯಾಳೀ ಜಾನಪದ, ರಂಗಗೀತೆಗಳು, ವಾದ್ಯ ಗೋಷ್ಠಿ ಹೀಗೆ ವಿವಿಧ ಸಂಗೀತಗಳ ಮಿಸಳ್. ಸಂಜೆಯಾಗ್ತಿರೋದ್ರಿಂದ ಜೋಷ್ ಕೂಡ ಸ್ವಲ್ಪ ಜಾಸ್ತಿಯೇ. ಹುರುಪು ಹೆಚ್ಚಿದಾಂಗೆ ಕುಣಿತವೂ ಶುರುವಾಗ್ತದೆ. ಹಾಡು, ಚಪ್ಪಾಳೆ, ವಾದ್ಯದ ಬಿಡ್ತಿಗೆ, ಕುಣಿತ ಎಲ್ಲ ಸೇರಿ ಒಂದು ಜೋಷ್ ತುಂಬಿದ ವಾತಾವರಣವೇ ನಿರಆಣವಾಗ್ತದೆ. ಕ್ಯಾಂಪಸ್ ರಂಗೇರ್ತದೆ.
ಕಲಾವಿದರೊಂದಿಗೆ ಮಾತುಕತೆ:
ನಾಟ್ಕದ ಕುರಿತು ತುಂಬ ಆಸಕ್ತಿಯಿರೋರು ಕುತೂಹಲದಿಂದ ಕಾಯುವ ಕಾರ್ಯಕ್ರಮ ಇದು. ಹಿಂದಿನ ದಿನ ನಾಟ್ಕ ಪ್ರದರ್ಶಿಸಿದ ಕಲಾವಿದರೊಂದಿಗೆ, ಮುಖ್ಯವಾಗಿ ನಿರ್ದೇಶಕರ ಜೊತೆ ಮಾತುಕತೆ. ನಿನ್ನೆ ನೋಡಿದ ನಾಟ್ಕಗಳ ಕುರಿತು ಹೆಚ್ಚು ತಿಳಿದುಕೊಳ್ಳೋ ಆಸೆಯಿದ್ದವ್ರೆಲ್ಲಾ ತಪ್ಪದೇ ಭಾಗವಹಿಸ್ತಾರೆ. ಒಂದಿಷ್ಟು ವಿವರಣೆ, ಒಂದಿಷ್ಟು ಪ್ರಶ್ನೋತ್ತರ. ಚರ್ಚೆ. ತುಂಬ ಆಸಕ್ತಿದಾಯಕವಾಗಿರ್ತವೆ.
ಆರ್ಟಿಸ್ಟ್ ಸುಜಾತನ್ ಸೀನಿಕ್ ಗ್ಯಾಲರಿ.
ಪ್ರತಿ ವರ್ಷ ಮರಗಳ ಅಡಿಯಲ್ಲಿ ನಡೀತಿದ್ದ ಮಾತುಕತೆ, ಸಂವಾದ, ಮಾತು, ಚರ್ಚೆಗಳಿಗೆ ಈ ಬಾರಿ ವಿಶಿಷ್ಟವಾಗಿ ವಿನ್ಯಾಸ ಮಾಡಿದ್ದ ಗ್ಯಾಲರಿಯೊಂದು ಸಿದ್ಧವಾಗಿತ್ತು. ಒಂದಿಷ್ಟು ಲೋಹದ ಫ್ರೇಮ್ ಗಳಿಂದ ಕಟ್ಟಿದ ವಿಶೇಷ ಬಗೆಯ ವಿನ್ಯಾಸ. ಅತಿಥಿಗಳು ಮಾತಾಡೋಕೆ ಒಂದು ಕಟ್ಟೆ. ಎದುರಿಗೆ ಕುಳಿತುಕೊಳ್ಳೋದಕ್ಕೆ ಖುರ್ಚಿಗಳು. ಸುಸಜ್ಜಿತವಾದ ಆಡಿಯೋ ವಿಶುವಲ್ ನ ವ್ಯವಸ್ಥೆ. ಎಲ್ಲಕ್ಕಿಂತ ಆಕರ್ಷಕ ಎನಿಸಿದ್ದು ಅಲ್ಲಲ್ಲಿ ಕಟ್ಟಿದ ರಂಗಪರದೆಗಳ ಪೇಂಟಿಂಗ್ ಗಳು. ನೋಡಿಯೇ ಒಳಹೊಕ್ಕಬೇಕು ಅಂಥ ಆಕರ್ಷಕ ವಿನ್ಯಾಸ.
ಸಂವಾದಗಳು, ಭಾಷಣಗಳು:
ಮೊದಲ ಇಟ್ಫಾಕ್ ಹಬ್ಬದಿಂದ್ಲೂ ನಡೆದುಕೊಂಡು ಬಂದ ಕಾರ್ಯಕ್ರಮ ಇದು. ಪ್ರತಿ ವರ್ಷದ ಇಟ್ಫಾಕ್ ಗೂ ಒಂದು ಥೀಮ್ ಇರ್ತದೆ. ಈ ವರ್ಷದ ಥೀಮ್: ‘ ಮಾನವೀಯತೆ ಒಂದಾಗಲಿ’ ಇದೇ ಥೀಮ್ ನ ಸುತ್ತಲೂ, ರಂಗಭೂಮಿಯನ್ನೂ ಒಳಗೊಂಡಂತೆ ಇವೆಲ್ಲ ನಡೆಯುತ್ತವೆ. ಈ ವರ್ಷ ಗಣೇಶ್ ದೇವಿ, ಕೀರ್ತಿ ಜೈನ್, ಅಶಿಶ್ ಸೇನ್ ಗುಪ್ತ, ಎಂ.ಕೆ.ರೈನಾ, ಮಂಗೈ, ಸೋನಮ್ ಮಾನಸಿಂಗ್ ಚೌಧರಿ, ರುಸ್ತಮ್ ಭರೂಚ, ಡಾ. ಕೆ.ಪಿ. ಶಂಕರನ್, ಸುಂದರ ಸರುಕೈ, ಶಿವ ವಿಶ್ವನಾಥನ್ ಮತ್ತು ಕೆ ಸಚ್ಚಿದಾನಂದನ್ ರಂಥ ವರು ಮಾತನಾಡಿದ್ರು.
ಮಹಿಳೆಯರಿಗಾಗಿ ರಂಗಕಾರ್ಯಾಗಾರ:
ಇದು ಈ ವರ್ಷದ ಇಟ್ಫಾಕ್ ನ ವಿಶೇಷ. ಕೇರಳದಲ್ಲಿ ಕೆಲವು ಗುಂಪುಗಳಿಗೆ ಸೀಮಿತವಾದ ರಂಗಭೂಮಿಯನ್ನು ಇತರರೆಡೆಗೂ ಒಯ್ಯೋದು. ಬೇರೆ ಬೇರೆ ವಲಯಗಳಲ್ಲಿ ಕೆಲಸ ಮಾಡ್ತಿರೋ ಮಹಿಳೆಯರನ್ನ ಹೊಸದಾಗಿ ರಂಗಭೂಮಿಯ ಕ್ಷಿತಿದೊಳಕ್ಕೆ ತರೋದರ ಮೂಲಕ ಅದನ್ನು ಇನ್ನೂ ಹೆಚ್ಚು ಪ್ರಜಾಸತ್ತಾತ್ಮಕಗೊಳಿಸೋದು. ರಂಗಭೂಮಿಯಲ್ಲಿ ಕೆಲಸ ಮಾಡೀದಕ್ಕೆ ಆಸಕ್ತ ಮಹಿಳೆಯರಿಗೆ ರಂಗಭೂಮಿಯ ಕುರಿತ ತಿಳುವಳಿಕೆ, ತರಬೇತಿ ನೀಡೋದು. ಅದಕ್ಕಾಗಿ ಕೇರಳದಿಡೀ ವ್ಯಾಪಿಸಿರೋ ಮಹಿಳೆಯರ ಸಂಸ್ಥೆ ‘ಕುಟುಂಬಶ್ರೀ’ ನಿಂದ ಆಯ್ದ ಮಹಿಳೆಯರು ಇಲ್ಲಿದ್ರು. ಬೇರೆ ವಿಭಾಗದ,ಗಭೂಮಿಯಲ್ಲಿ ತೊಡಗಿಸಿಕೊಂಡಿರೋ ಬೇರೆ ರಾಜ್ಯಗಳ ಮಹಿಳೆಯರಿಗೂ ಅವಕಾಶ ಇದ್ದುದರಿಂದ ನಮ್ಮ ಅಹಲ್ಯಾ ಬಲ್ಲಾಳ್ ಕೂಡ ಅಲ್ಲಿದ್ರು. ಆಗಾಗ ಭೆಟ್ಟಿಯಾಗ್ತಿದ್ದ ಅವರ ಜೊತೆ ಪಟ್ಟಾಂಗ ಹೊಡೆಯೋದಕ್ಕೂ ನಮಗೆ ಸಾಧ್ಯವಾಯ್ತು.
ಎಂ.ಕೆ ರೈನಾ, ನೀಲಮ್ ಮಾನಸಿಂಗ್ ಚೌಧರಿ, ಅನುರಾಧಾ ಕಪೂರ್ ರಂಥ ಪ್ರಭೃತಿಗಳು ಈ ಶಿಬಿರ ನಡೆಸಿಕೊಟ್ರು. ಹೇಳೋದಕ್ಕೆ ಇನ್ನೊಂದೆರಡು ವಿಷಯ ಇದೆ. ನಾಳೆ ಹೇಳಿ ಮುಗಿಸ್ತೇನೆ.
। ನಾಳೆಗೆ ಇನ್ನೊಂದು ನಾಟಕ ।
0 ಪ್ರತಿಕ್ರಿಯೆಗಳು