ಇವರು ರಂಗ ‘ಕಿರಣ’-
ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.
ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.
ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.
ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.
ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.
ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.
ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.
ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ
-ಜಿ ಎನ್ ಮೋಹನ್
‘ರಂಗ ಕೈರಳಿ‘ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
8
Rather Rashi
Troup: Budangduppa, Assam
Director: Sukracharya Rabha
ಸಂಜೆ ಕೆಂಪಾಗ್ತಾ ಬಂದಿತ್ತು. ಆವರಣದೊಳಗಿಂದ ಜೋರಾದ ತುತ್ತೂರಿಯ ಆವಾಜ್ ಗೇಟ್ ತನಕವೂ ಕೇಳ್ತಿತ್ತು. ಸದಾ ಒಂದಿಲ್ಲೊಂದು ಚಟುವಟಿಕೆಗಳಿಂದ ತುಂಬಿರೋ ಆವರಣದಲ್ಲಿ ಇಂಥದೆಲ್ಲ ಮಾಮೂಲೇ. ಕುತೂಹಲದಿಂದ ಒಳಹೊಕ್ಕೆ. ಅರೆ! ಇಲ್ಲ. ಇಂದು ಮಾಮೂಲಿನಂತಿಲ್ಲ. ಕೆಂಪು, ಗುಲಾಬಿ ಬಣ್ಣದ ಚಿತ್ರಗಳ ಆಟೋವೊಂದರ ಮೇಲೆ ಕೋಳಿಯೊಂದು ಕೂತ್ಕೊಂಡು ‘ ಪೇಂ ಪೇಂ ‘ ಅಂತ ತುತ್ತೂರಿ ಬಾರಿಸ್ತಿದೆ. ಸುತ್ತ ಮುತ್ತ ಜನ ತುಂಬಿದಾರೆ. ಕೋಳಿ ಜೊತೆ ಸೆಲ್ಫಿ ತಗೊಳ್ಳೋರ ಸಾಲೇ ಇದೆ.
ಈ ಕೋಳಿ ಬಂದಿದ್ದು ತ್ರಿಷೂರ್ ನ ರಸ್ತೆಗಳ ನಡುವಿನಿಂದ. ಇಟ್ಫಾಕ್ ನ ಅಂಗವಾಗಿ ಒಂದು ತಿಂಗಳ ಕಾಲ ನಡೆದ ಬೀದಿ ಕಲಾ ಉತ್ಸವದ ಭಾಗ ಇದು.ಹಲವಾರು ಕಲಾವಿದರು ಸೇರಿ ಇಡಿಯ ಊರ ತುಂಬಾ ಗೋಡೆ ಚಿತ್ರಗಳನ್ನ ಬಿಡಿಸಿದ್ದಾರೆ. ಬೀದಿ ನಾಟಕದ ಕಲಾವಿದರೂ ಅವರಿಗೆ ಸಾಥ್ ಕೊಟ್ಟಿದ್ದಾರೆ. ಚಿತ್ರಕಲಾವಿದರ, ರಂಗ ಕಲಾವಿದರ ಮೇಳಾಮೇಳಿಯಿಂದ ಒಂದು ತಿಂಗಳು ಬೀದಿ ಕಲಾ ಉತ್ಸವ ನಡೆಸಿದಾರೆ. ಹಾಗಾಗಿ ಊರೆಲ್ಲ ಉತ್ಸವದ ವಾತಾವರಣ. ಓತರಾ ‘ತ್ರಷೂರ್ ಪೂರಂ’ ನಂತೆ. ನಾನೂ ತಡೆಯಲಾರದೇ ಕೋಳಿಯ ಒಂದು ಫೊಟೋ ತಗೊಂಡೆ.
ಬುಕ್ ಮಾಡಿದ ನಾಟ್ಕಗಳೆಲ್ಲ ಮುಗಿದು ಇನ್ನು ಆಸ್ಸಾಮಿನ ಒಂದು ನಾಟ್ಕ ಉಳ್ಕೊಂಡಿತ್ತು.
ಈ Budangduppa ಎನ್ನೋದು ಆಸ್ಸಾಮಿನ ಆದಿವಾಸಿಗಳ ತಂಡ. ಈ ನಾಟ್ಕದ ನಿರ್ದೇಶಕ Sukracharya Rabha. ಸುಮಾರು ಇಪ್ಪತ್ಮೂರು ವರ್ಷ ಆದಿವಾಸಿಗಳ ನಡುವೆಯೇ ಇದ್ಕೊಂಡು ಕೆಲಸ ಮಾಡಿದವ್ರು. ಚಿಕ್ಕ ಪ್ರಾಯದಲ್ಲೇ ನಿಧನರಾದ ಅವರು ಇಪ್ಪತ್ಮೂರು ವರ್ಷಗಳಲ್ಲಿ ಈ ಅದಿವಾಸಿಗಳ ಜೊತೆ ಇಪ್ಪತ್ನಾಲ್ಕು ನಾಟ್ಕ ಆಡಿದಾರೆ.
ಪ್ರಸ್ತುತ ನಾಟ್ಕ ಮೂಲದಲ್ಲಿ ರವೀಂದ್ರನಾಥ ಟಾಗೋರರ ಒಂದು ಕಥಯನ್ನ ಆಧರಿಸಿದ್ದು. ಈ ಕಥೆಯನ್ನ ನಾಟಕಕ್ಕಳವಡಿಸಿ ನಿರ್ದೇಶಿಸಿದವರು Sukracharya Rabha
ರಂಗದ ಮಧ್ಯೆ ಪ್ಲಾಟ್ಫಾರ್ಮ್ ಒಂದರ ಮೇಲೆ ದೊಡ್ಡ ಚಕ್ರವನ್ನಿಟ್ಟ ಸರಳ ರಂಗಸಜ್ಜಿಕೆಯ ಮೇಲೆ ನಾಟ್ಕ ಪ್ರಾರಂಭವಾಗ್ತದೆ. ‘ಮಹಾಕಾಲ’ ನ ರಥಯಾತ್ರೆ ಪ್ರಾರಂಭವಾಗಿದೆ. ರಥ ಎಳೆಯುವ ಸಮಯವಿದು. ಪವಿತ್ರ ಜಲ ಸಿಂಪಡಿಸುತ್ತಾ ಬ್ರಾಹ್ಮಣರು ಬರ್ತಾರೆ. ರಥ ಎಳೆಯೋದಕ್ಕೆ ಅನುವಾಗ್ತಾರೆ. ರಥ ಒಂಚೂರೂ ಮುಂದೆ ಹೋಗೋದಿಲ್ಲ. ಕ್ಷತ್ರಿಯರೂ ಸೇರಿಕೊಳ್ತಾರೆ. ಕದಲೋದಿಲ್ಲ ರಥ. ವೈಶ್ಯರೂ ಜೊತೆಯಾಗ್ತಾರೆ. ನೋ. ರಥ ಅಲ್ಲಾಡ್ತಿಲ್ಲರಿಡೀ ಊರಿಗೇ ಚಿಂತೆ ಶುರುವಾಗ್ತದೆ. ರಥವೇ ಜರುಗದೇ ರಥಯಾತ್ರೆ ಮಾಡೋದಾದ್ರೂ ಹೇಗೇ? ಕೊನೆಗೆ ಶೂದ್ರರಿಗೆ ಕರೆಯ ಹೋಗ್ತದೆೆ. ಅವರು ಬಂದು ಕೈ ಹಾಕಿದವರೇ ದರ ದರ ಅಂತ ಸಲೀಸಾಗಿ ರಥ ಎಳೆದು ಹಾಕಿಬಿಡ್ತಾರೆ. ಜೈಕಾರ ಮೊಳಗ್ತದೆ.
ರಥವನ್ನೂ ಹಗ್ಗವನ್ನೂ ರೂಪಕವಾಗಿಟ್ಕೊಂಡು ಹೆಣೆದ ನಾಟ್ಕ ಇದು. ನಿಶ್ಚಲವಾಗಿ ನಿಂತಿರೋ ರಥ ಸಮಾಜದ ರೂಪಕವಾದ್ರೆ, ಒಬ್ಬರನ್ನೊಬ್ಬರನ್ನ ಸೇರಿಸುವ ರೂಪಕವಾಗ್ತದೆ ಹಗ್ಗ. ಇಂಥದೊಂದು ವಿಚಾರವನ್ನ ನಿರ್ದೇಶಕರು ಸರಳವಾಗಿ, ದೈಹಿಕ ಚಲನೆಗಳ ಮೂಲಕವೇ ಹೇಳ್ತಾ ಹೋಗ್ತಾರೆ. 1932 ರಲ್ಲಿ ರಚಿತವಾದ ಕಥೆಯಿದು. ಆ ಕಾಲದ ಜಾತ್ಯಾಧಾರಿತ, ವರ್ಗಾಧಾರಿತ ಶೋಷಣೆಗಳನ್ನ ತೋರಿಸುತ್ತಲೇ ಪ್ರಸ್ತುತ ಸನ್ನಿವೇಷಕ್ಕೆ ಬರುತ್ತಾರೆ. ಆಗಿನಿಂದ ಈಗಿನವರೆಗೂ ಒಳಿದುಕೊಂಡಿರುವ ಅಸ್ಪೃಶ್ಯತೆಯಎಂಬ ಅನಿಷ್ಟವನ್ನ ಟೀಕಿಸ್ತಾರೆ. ನಾಟಕದ ಕೊನೆಯಲ್ಲಿ ಸಮಾಜ ಸುಧಾರಕನೊಬ್ಬ ಶೂದ್ರರನ್ನೆಲ್ಲ ಅಕ್ಷರದೆಡೆಗೆ ಒಯ್ಯುತ್ತ, ವಿಮೋಚನೆಯ ಹಾದಿ ತೋರುತ್ತ ನಾಟಕ ಮುಗಿಸುತ್ತಾನೆ.
ಸಂಪೂರ್ಣವಾಗಿ ಆದಿವಾಸಿಗಳ ನಡುವೆಯೇ ಬದುಕಿ, ಅವರು ರಂಗಭೂಮಿಯನ್ನ ವಿಮೋಚನೆಯ ಹಾದಿಯನ್ನಾಗಿಸಿಕೊಳ್ಳುವಂತೆ ಮಾಡಿದ Sukracharya Rabha ರಿಗೆ ವಂದನೆಗಳು ಸಲ್ಲುತ್ತವೆ.
। ನಾಳೆಗೆ ಇನ್ನೊಂದು ನಾಟಕ ।
0 ಪ್ರತಿಕ್ರಿಯೆಗಳು