ಕಿ’ಚೆ ಕವಿಯ ಐದು ಕವಿತೆಗಳು…

ಮೂಲ: ಉಂಬೆರ್ತೋಅಖ್ ಅಬಾಲ್

ಕನ್ನಡಕ್ಕೆ : ಎಸ್ ಜಯಶ್ರೀನಿವಾಸರಾವ್

ಉಂಬೆರ್ತೋ ಅಖ್’ಅಬಾಲ್-ರು (1952-2019) ಗ್ವಾಟೆಮಾಲಾದ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರು. ಅಖ್’ಅಬಾಲ್-ರನ್ನು ವಿಶ್ವದ ಪ್ರಧಾನ ಮಾಯಾ ಕಿ’ಚೆ ಕವಿ ಎಂದು ಪರಿಗಣಿಸಲಾಗಿದೆ ಹಾಗೂ ಯುರೋಪ್ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಹೆಸರುವಾಸಿಯಾಗಿರುವ ಗ್ವಾಟೆಮಾಲಾದ ಬರಹಗಾರರಲ್ಲಿ ಒಬ್ಬರು ಇವರು.  

ತಮ್ಮ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಅವರು ಹನ್ನೆರಡು ವರ್ಷದ ವಯಸ್ಸಿನಲ್ಲೇ ವಿದ್ಯಾಭ್ಯಾಸವನ್ನು ತ್ಯಜಿಸಿ ಹಳ್ಳಿಯಲ್ಲಿ ಕುರಿಕಾಯುವ, ನೇಯ್ಗೆಯ ಕೆಲಸಗಳನ್ನು ಮಾಡುತ್ತಿದ್ದರು.  ನಂತರ ಗ್ವಾಟೆಮಾಲಾ ಸಿಟಿಯಲ್ಲಿ ಬೀದಿವ್ಯಾಪಾರಿಯಾಗಿ, ಹಮಾಲಿಯಾಗಿ ಕೆಲಸ ಮಾಡಿದರು.  

ತಮ್ಮ ತಾಯ್ನುಡಿಯಾದ ‘ಕಿ’ಚೆ ಯಲ್ಲಿ ‘ಅನಕ್ಷರಸ್ಥ’ರಾಗಿದ್ದ ಕಾರಣ ಅವರು ಮೊದಲು ಸ್ಪಾನಿಷ್ ಭಾಷೆಯಲ್ಲಿ ಬರೆಯುತ್ತಿದ್ದರು, ಎಂದು ಅವರೇ ಹೇಳುತ್ತಾರೆ. 1980ರಿಂದ ತಮ್ಮ ತಾಯ್ನುಡಿಯಾದ ‘ಕಿ’ಚೆ ಭಾಷೆಯಲ್ಲಿ ಬರೆಯ ತೊಡಗಿದರು, ಆದರೆ 1993ರ ವರೆಗೂ ಅವರು ‘ಕಿ’ಚೆ ಭಾಷಾ ಕವನಗಳನ್ನು ಪ್ರಕಟಿಸಲು ಯಾವ ಪ್ರಕಾಶಕರು ಮುಂದೆ ಬರಲಿಲ್ಲ.  

ಅನೇಕ ಸಾಹಿತ್ಯ ವಿದ್ವಾಂಸರು ಅಖ್’ಅಬಾಲ್ ಅವರ ಕಾವ್ಯನ್ನು ಅವರ ಸ್ಥಳೀಯ ಸಂಪ್ರದಾಯದ ಅಭಿವ್ಯಕ್ತಿ ಎಂದು ಶ್ಲಾಘಿಸಿದ್ದಾರೆ.  ಸಾಹಿತ್ಯ ವಿಮರ್ಶಕ ಕಾರ್ಲೋಸ್ ಮೊಂಟೆಮಯೊರ್‌ರ ಪ್ರಕಾರ, ‘ಅಖ್’ಅಬಾಲ್ ರಂತಹ ಬರಹಗಾರರು ನಮಗೆ ಗೊತ್ತಿರದ ಇನ್ನೊಂದು ವಾಸ್ತವದ ಪ್ರಪಂಚದೊಳಗೆ ನಮ್ಮನ್ನು ತೂರಿಸುತ್ತಾರೆ; ಈ ಸಂಸ್ಕೃತಿ, ಈ ಸ್ಥಳಜನ್ಯ ಆತ್ಮ ನಮ್ಮ ವಾಸ್ತವದಲ್ಲೇ, ನಮ್ಮ ಕಾಲದಲ್ಲೇ, ನಮ್ಮ ಜೀವನದ ಹಾಗೇ ಜೀವಿಸುತ್ತಿದೆ, ಉಸಿರಾಡುತ್ತಿದೆ; ಈ ಆತ್ಮ ಅದೇ ಭೂಖಂಡವನ್ನು ಪ್ರೀತಿಸುತ್ತೆ ನಮ್ಮ ಹಾಗೇ, ಆದರೆ ಅದೇ ಭೂಖಂಡವನ್ನು ಅದು ಅರ್ಥಮಾಡಿಕೊಂಡಂತೆ ನಾವು ಅರ್ಥಮಾಡಿಕೊಂಡಿಲ್ಲ.’

ಇಲ್ಲಿ ಕನ್ನಡ ಭಾಷೆಗೆ ಅನುವಾದವಾದ ಅಖ್’ಅಬಾಲ್‌ರ ಐದು ಕವನಗಳು ಅವರ ‘ಕಿ’ಚೆ ಕಲ್ಪನೆಯ ಅಭಿವ್ಯಕ್ತಿಯ ಹಾಗೂ ಸ್ಥಳಿಯ ಜನರು ಅನುಭವಿಸಿದ ನೋವುಗಳ ಒಂದು ಸಣ್ಣ ನೋಟವಷ್ಟೇ.    

1. ನಿನ್ನ ಹೆಸರನ್ನುನಾನು ಮನದಿಂದ ತೆಗೆದೆ
ಮೂಲ: I took your name out of my mind

ನಿನ್ನ ಹೆಸರನ್ನು ನಾನು ಮನದಿಂದ ತೆಗೆದೆ
ಬೆಟ್ಟದಲ್ಲೆಲ್ಲೋ ಅದನ್ನು ಕಳೆದೆ.

ಗಾಳಿ ಅದನ್ನು ಎತ್ತಿಕೊಂಡಿತು
ಕಣಿವೆಯಲಿ ಅದು
ತನ್ನ ದಾರಿ ಕಂಡಿತು.

ನಾನದ ಮರೆಯಲು ತೊಡಗಿದೆ.

ಇದ್ದಕ್ಕಿದ್ದಂತೆ
ಅಪ್ಪಳಿಸಿತು ಅದು ಕಡಿಬಂಡೆಗಳ ಮುಖಕೆ
ಮತ್ತೆ ತಿರುಗಿ ನೆಗೆಯಿತು ಅದು:

ಮಳೆಯು ಅದನ್ನು ಹಾಡಿಸಿತು
ನಿನ್ನ ಹೆಸರು ನನ್ನ ಸೇರಿತು
ನಾನಳುತ್ತಿರುವಾಗ.

2. ನಲಿತ
ಮೂಲ:The Danc

ನಾವೆಲ್ಲರೂ ನಲಿಯುತ್ತೇವೆ
ನಾಕಾಣೆಯ ಅಂಚಿನಲ್ಲಿ

ಬಡವರು – ಅವರು ಬಡವರೆಂಬ ಕಾರಣಕ್ಕಾಗಿ –
ಹೆಜ್ಜೆತಪ್ಪಿ
ಬೀಳುತ್ತಾರೆ

ಮತ್ತೆ ಮತ್ತವರೆಲ್ಲರೂ
ಅವರ ಮೇಲೆ ಬೀಳುತ್ತಾರೆ

3. ಏನವು
ಮೂಲ:What are those thin

ಏನವು
ಆಕಾಶದಲ್ಲಿ ಹೊಳೆಯುತ್ತಿರುವುದು

ನಾನು ನನ್ನಮ್ಮನ ಕೇಳಿದೆ

ಜೇನ್ನೊಣಗಳು, ಅವಳಂದಳು

ಅಂದಿನಿಂದ, ಪ್ರತಿ ರಾತ್ರಿ
ನನ್ನ ಕಣ್ಣುಗಳು ಜೇನ ಉಣ್ಣುತ್ತವೆ

4. ಕೊಳ
ಮೂಲ: The Pool

ಕೊಳದಲ್ಲಿ ಅನೇಕ
ನಕ್ಷತ್ರಗಳಿದ್ದವು;

ಅವುಗಳನ್ನು ಹೊರತೆಗೆಯೆಂದು
ನನ್ನಪ್ಪನ ಕೇಳಿದೆ

ಅವನು ನೀರನ್ನು
ಹನಿಹನಿಯಾಗಿ ತೆಗೆದು ನನ್ನ
ಕೈಗಳಲ್ಲಿ ಹಾಕಿದ

ಬೆಳಗ್ಗೆದ್ದು
ನನ್ನಪ್ಪ ನಿಜವಾಗಿಯೂ ಅವುಗಳನ್ನು
ತೆಗೆದು ಹಾಕಿದನೇ ಎಂದು ನೋಡಬಯಸಿದೆ

ಹೌದು, ಅದು ನಿಜವೇ,
ಕೊಳದಲ್ಲಿ ಉಳಿದದ್ದು
ಆಕಾಶವೊಂದೇ

5. ಗೋರಿಗಳ ಹಳದಿ ಹೂವುಗಳು
ಮೂಲ: The Yellow Flowers of the Graves

ತೋಳಗಳು ಊಳಿಡುತ್ತವೆ, ರಾತ್ರಿಯ ನುಚ್ಚು ನೂರಾಗಿಸುತ್ತವೆ:
ಗಾಳಿಯೊಂದಿಗೆ ಜಗಳವಾಡುತ್ತವೆ.
‘ಇದು ಅಪಶಕುನ…’

ಆ ಹಿಂದಿನ ದಿನಗಳಲ್ಲಿ
ಗೂಬೆಗಳು ಯಾವಾಗಲೋ ಒಮ್ಮೆ ಕೂಗುತ್ತಿದ್ದವು,
ಈಗ ಅವು ಹೆಚ್ಚು-ಕಮ್ಮಿ ಯಾವಾಗಲೂ ಕೂಗುತ್ತವೆ.
‘ಇದು ದುರದೃಷ್ಟ…’

ಮರಣ ಗಾಳಿಯೊಂದು ಪರ್ವತ ಶಿಖರದಿಂದ ಕೆಳಗಿಳಿಯುತ್ತೆ,
ಥಂಡಿ ಗಾಳಿಯದು, ಕಡಿಯುತ್ತೆ
ರೇಬೀಸ್-ಪೀಡಿತ ನಾಯಿಯ ಹಾಗೆ …
ಹೂವುಗಳು ಹೆದರಿ ಬಾಗುತ್ತವೆ,
ಮಧ್ಯಾಹ್ನದ ಮುಂಚೆಯೇ ಬಾಡುತ್ತವೆ.

ಆ ದಿನಗಳಿಗೆ ನಾವು ಹೋಗಬಲ್ಲೆವಾದರೆ
ಭೂಮಿ ಮನುಜನ ಸಂಗ
ಹಾಡುತ್ತಿದ್ದ ಆ ದಿನಗಳಿಗೆ.

ಈಗ ಸಸಿಗಳನ್ನುಸಿಗಿದು ಹಾಕುತ್ತಾರೆ
ಶಿಶುಗಳ ಚೀತ್ಕಾರ ಪೀಡಿಸುವುದಿಲ್ಲ
ಯಾರನ್ನೂ, ಕರುಣವಿಲ್ಲ ಯಾರಿಗೂ:
ಆಕಾಶವು ತನ್ನ ಬಾಯಿ ತೆರೆದು, ಸಾವು
ಅಡಗಿಸಿದ ಚೀತ್ಕಾರವನ್ನು ನುಂಗುತ್ತದೆ.

‘ಇಂಡಿಯನ್’ರಾದ ನಮ್ಮನ್ನು ಯಾಕೆ ಪೀಡಿಸುತ್ತಾರೆ?
ನಾವು ನಿನಗೇನ ಮಾಡಿದೆವು ಗ್ವಾಟೆಮಾಲಾ?
ಯಾಕೀ ದ್ವೇಶ? ಯಾಕೀ ರಕ್ತದ ದಾಹ?

ಮೃತ್ಯುವಿಗೆ ನಾವು ಯಾವ ಋಣವೂ
ಸಂದಾಯ ಮಾಡಬೇಕಾಗಿಲ್ಲ.

‍ಲೇಖಕರು Admin

November 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: