ಕಾಸು ಕುಡಿಕೆ ಕಾಮೆಂಟ್ರಿ: ಎಲ್ಲರಿಗೂ ಸಲ್ಲುವ ಒಂದು ಬಜೆಟ್

ಜಯದೇವ ಪ್ರಸಾದ ಮೊಳೆಯಾರ.

ವಿತ್ತ ಮಂತ್ರಿ ಪ್ರಣಬ್ದಾ ಈ ಬಾರಿ ಬಜೆಟ್ ತಯಾರಿಗೆ ಕುಳಿತಿರಬೇಕಾದರೆ ದೇಶ ಒಂದು ರೀತಿಯ ವಿಚಿತ್ರ ಸಮಸ್ಯೆಯಲ್ಲಿ ಸಿಲುಕಿ ಹಾಕಿ ಕೊಂಡಿದೆ. ದೇಶದ ಒಟ್ಟು ಆದಾಯದಲ್ಲಿ ಅಥವ ಜಿ.ಡಿ.ಪಿ ಪ್ರಗತಿಯಲ್ಲಿ ನಮ್ಮ ಸಾಧನೆ ತೃಪ್ತಿಕರವಾಗಿದ್ದರೂ ಕೂಡಾ ಬೆಲೆಯೇರಿಕೆಯ ಪೆಡಂಭೂತ ಇಡೀ ದೇಶದ ವಿತ್ತ ಸ್ವಾಸ್ಥ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ‘ಸಧ್ಯಕ್ಕೆ ನಮಗೆ ಜಿಡಿಪಿಯೂ ಬೇಡ, ಗಿಡಿಪಿಯೂ ಬೇಡಾ ಈ ಹಣದುಬ್ಬರದ ಅಬ್ಬರದಿಂದ ಮುಕ್ತಿ ಕೊಟ್ಟರೆ ಸಾಕು ದಾದಾ’ ಎಂದು ಬಾಯ್ ಬಾಯ್ ಬಿಡುವ ಪರಿಸ್ಥಿತಿ ಇಡೀ ದೇಶದ್ದಾಗಿದೆ.

2008-09 ರ ರಿಸೆಶನ್ ನಲ್ಲಿ 6.8% ಗೆ ಇಳಿಕೆಯಾದ ದೇಶದ ಪ್ರಗತಿ ಬಳಿಕ 2009-10 ಮತ್ತು 2010-11 ರಲ್ಲಿ 8% ಮತ್ತು 8.6% ಕ್ಕೆ ಚೇತರಿಸಿಕೊಂಡು ಮೇಲ್ಮುಖವಾಗಿ ಏರುತ್ತಿರುವುದು ಚೇತೋಹಾರಿ ಅಂಶ. ಇದು ದೇಶದ ಆಥರ್ಿಕ ದೃಡತೆಯನ್ನು ಸೂಚಿಸುತ್ತದೆ. ಆದರೆ ಸಾಧಿಸಿದ ಪ್ರಗತಿಯನ್ನು ಮೀರಿ ಬೆಲೆಯೇರಿಕೆ ಈ ವರ್ಷ ಸರಾಸರಿ 8.6% ದಲ್ಲಿ ಅದರಲ್ಲೂ ಆಹಾರವಸ್ತುಗಳ ಬೆಲೆಯೇರಿಕೆ 16% ಮಟ್ಟದಲ್ಲಿ ಒಂದು ಗಂಭೀರ ಸವಾಲಾಗಿ ನಿಂತಿದೆ.

ಇಂತಹ ಒಂದು ಗಂಭೀರ ಮತ್ತು ರಾಜಕೀಯವಾಗಿ ಸಮಸ್ಯಾತ್ಮಕ ಹಂತದಲ್ಲಿ ವಿತ್ತ ಮಂತ್ರಿಗಳು ಇದೀಗ ಈ ವರ್ಷದ (2011-12) ಬಜೆಟ್ಟಿನಲ್ಲಿ ಮತ್ತೊಮ್ಮೆ ಬೆಲೆಯೇರಿಕೆಯನ್ನು ಮಟ್ಟ ಹಾಕುವ ಉದ್ಧೇಶವುಳ್ಳ ಆದರೆ ಜೊತೆ ಜೊತೆಗೆ ಜಿಡಿಪಿ ಪ್ರಗತಿಯನ್ನೂ 9% ದಷ್ಟರ ಮಟ್ಟಿಗೆ ಸಾಧಿಸುವಂತಹ ಒಂದು ಧ್ಯೇಯಾತ್ಮಕವಾದ ಕಷ್ಟಕರವಾದ ಬಜೆಟ್ ವ್ಯಾಯಾಮಕ್ಕೆ ಕೈಹಚ್ಚಿದ್ದಾರೆ. ಈ ತಳಹದಿಯ ಮೇಲೆ ವಿತ್ತ ಮಂತ್ರಿಗಳು ಸರಕಾರದ ಈ ವರ್ಷದ ಆಯ ಮತ್ತು ವ್ಯಯಗಳ ಪಟ್ಟಿಮಾಡಿದ್ದಾರೆ. ಅಂದರೆ ನಮ್ಮೆಲ್ಲರ ಮೆಲೆ ಹೊರುವ ಕರಭಾರ, ಇತರ ಮೂಲಗಳಿಂದ ಬರಬಹುದಾದ ಸರಕಾರೀ ಆದಾಯ ಮತ್ತು ವಿವಿಧ ಯೋಜನೆ ಮತ್ತು ಯೋಜನೆಯೇತರ ಹಣೆಪಟ್ಟಿಯಡಿಯಲ್ಲಿ ಮಾಡಬೇಕಾದ ಸರಕಾರಿ ವ್ಯಯಗಳ ಲಿಸ್ಟ್ ತಯಾರಿ ಮಾಡಿದ್ದಾರೆ. ಹಾಗೆ ಮಾಡುವಲ್ಲಿ ಪ್ರತಿವರ್ಷವೂ ಆಗುವಂತೆ ವಿತ್ತೀಯ ಕೊರತೆ ಉಂಟಾಗಿದೆ. ಆದರೆ ಆ ವಿತ್ತೀಯ ಕೊರತೆಯಲ್ಲೂ ಒಂದು ಸಂಯಮವನ್ನು ಸಾದಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಜಿ.ಡಿ.ಪಿ ಯ 6.7% ಮತ್ತು 5.50% ಇದ್ದ ಈ ಫಿಸ್ಕಲ್ ಡೆಫಿಸಿಟ್ಗೆ ಈ ಬಾರಿ 4.6% ದ ಗುರಿ ಹಾಕಿಕೊಂಡಿದ್ದಾರೆ. ಮತ್ತು ಮುಂದಿನ ವರ್ಷಕ್ಕೆ ಇದು 4.1% ಮತ್ತು ಆ ಬಳಿಕ 3.6% ಎಂದೂ ಹೇಳಿದ್ದಾರೆ. ಇದು ಒಂದು ಈತಿಯಲ್ಲಿ ಉತ್ತಮ ವಿತ್ತೀಯ ಸಂಯಮ ಎನ್ನಬಹುದು. ಯಾಕೆಂದರೆ ಈ ವಿತ್ತೀಯ ಕೊರತೆಯನ್ನು ತುಂಬಬೆಕಾದರೆ ಸರಕಾರವು ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ಸಾಲದ ಮೊರೆ ಹೋಗಬೇಕಾಗುತ್ತದೆ. ಜಾಸ್ತಿ ಕೊರತೆಯಿಂದಾಗಿ ಜಾಸ್ತಿ ಸಾಲ ಬೇಕಾದಾಗ ದೇಶದ ಬಡ್ಡಿ ದರವೂ ಏರೀತು. ಜಾಸ್ತಿ ಬಡ್ಡಿದರ ಉದ್ಯಮ/ಕೃಷಿ/ಸೇವಾ ಕ್ಷೇತ್ರಗಳ ಪ್ರಗತಿಗೆ ಮಾರಕವಾದೀತು. ಅಲ್ಲದೆ ಸರಕಾರವೇ ಮುಂಬರುವ ವರ್ಷಗಳಲ್ಲಿ ಈ ಸಾಲದ ಮೇಲಿನ ಬಡ್ಡಿಯ ಹೊರೆಯನ್ನು ಹೊರಲಾರದೆ ಕುಸಿದು ಬಿದ್ದೀತು. ಆದ್ದರಿಂದ ವಿತ್ತೀಯ ಕೊರತೆ ಯಾವತ್ತೂ ಬಜೆಟಿನ ಒಂದು ಅವಿಭಾಜ್ಯ ಹಾಗೂ ಪ್ರಾಮುಖ್ಯ ಅಂಗ. ವಿತ್ತ ಮಂತ್ರಿಗಳು ಈ ಬಾರಿ ಪ್ರಗತಿ, ಬೆಲೆಯೇರಿಕೆ ಹಾಗೂ ವಿತ್ತೀಯ ಕೊರತೆಗಳನ್ನು ಉತ್ತಮವಾಗಿ ಬ್ಯಾಲನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸರಕಾರಿ ಸಾಲದ ನಿರ್ವಹಣೆಗಾಗಿ ಈ ಬಾರಿ ಒಂದು ಹೊಸ ಕಾನೂನು ಮತ್ತು ಸಂಸ್ಥೆಯನ್ನು ತರಲಿದ್ದಾರೆ. ಅದರಿಂದಾಗಿ ಅದಕ್ಕೆ ವಿಶೇಷ ಗಮನ ಸಿಗಲಿದೆ.

ಒಂದು ಬಜೆಟ್ಟನ್ನು ಎರಡು ಸ್ತರಗಳಲ್ಲಿ ನೋಡಬಹುದು. ಒಂದು ಸ್ಥೂಲವಾಗಿ ಮೇಲಿನಿಂದ ಹಾಯಿಸುವ ವಿಹಂಗಮ ನೋಟವಾದರೆ ಇನ್ನೊಂದು ಕೆಳಕ್ಕಿಳಿದು ಸೂಕ್ಷ್ಮದರ್ಶಕ ಇಟ್ಟು ನೋಡುವ ಸೂಕ್ಷ್ಮ ನೋಟ.

ವಿಹಂಗಮ ನೋಟದಲ್ಲಿ ಈ ಬಜೆಟ್ ರಿಸೆಶನ್ ಹಿಂದಿಕ್ಕಿ ದೇಶವು ಮತ್ತೊಮ್ಮೆ ಪ್ರಗತಿಯ ಪಥದತ್ತ ಚಲಿಸುವ ಭರವಸೆ ನೀಡುತ್ತದೆ. ಬೆಲೆಯೇರಿಕೆಯನ್ನು ಆರ್.ಬಿ.ಐ ತನ್ನ ಸಕಾಲಿಕ ಪಾಲಿಸಿಗಳ ಮೂಲಕ ಹತೋಟಿಗೆ ತರುವುದೆನ್ನುವ ಭರವಸೆಯನ್ನು ನೀಡುತ್ತದೆ. ಅಲ್ಲದೆ, ಬಜೆಟ್ನಲ್ಲಿಯೂ ಆಹಾರ, ಇಂಧನ, ರಸಗೊಬ್ಬರ, ಕೃಷಿ ಸಾಲ ಸಬ್ಸಿಡಿ, ಸೂಕ್ತ ಕರವಿನಾಯತಿಗಳ ಮೂಲಕ ಹತೋಟಿಗೆ ತರುವ ಪ್ರಯತ್ನಗಳನ್ನು ತೋರಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ವಿತ್ತೀಯ ಕೊರತೆಯ ಉತ್ತಮ ನಿರ್ವಹಣೆಯ ಭರವಸೆಯನ್ನು ನೀಡಿದ್ದಾರೆ.

ಇನ್ನೂ ಸ್ವಲ್ಪ ಆಳಕ್ಕೆ ಇಳಿದು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಬಾರಿಯ ಬಜೆಟ್ ಪ್ರತಿಯೊಂದು ಕ್ಶೇತ್ರಕ್ಕೂ ಏನಾದರು ಅಲ್ಪಸ್ವಲ್ಪ ಉಪಕಾರ ಖಂಡಿತವಾಗಿ ಮಾಡಿದೆ. ಕೃಷಿ, ರಸಗೊಬ್ಬರ, ಉದ್ಯಮ, ಉದ್ಯೋಗ ಖಾತರಿ, ಆಹಾರ ಖಾತರಿ, ಹೌಸಿಂಗ್, ಇನ್ಶೂರನ್ಸ್, ವಿದೇಶೀ ಹೂಡಿಕೆ, ಮ್ಯೂಚುವಲ್ ಫಂಡು, ಕಾಪರ್ೋರೇಟ್ ಬಾಂಡು, ಮೂಲಸೌಲಭ್ಯ, ಬ್ಯಾಂಕಿಂಗ್, ವಿದ್ಯಾಕ್ಷೇತ್ರ – ಹೀಗೆ ಪ್ರತಿಯೊಂದು ಕ್ಶೇತ್ರದ ಮುಖದಲ್ಲೂ ವಿವಿಧ ಘೋಷಣೆಗಳ ಮೂಲಕ ಅಥವ ಜಾಸ್ತಿ ಧನ ವಿನಿಯೋಗದ ಮೂಲಕ ಸ್ವಲ್ಪವಾದರೂ ನಗೆ ತರಿಸುವ ಪ್ರಯತ್ನ ಈ ಬಜೆಟಿನಲ್ಲಿ ನಡೆದಿದೆ.

ಬಹುತೇಕ ನಿರೀಕ್ಷಿತ ಹಾದಿಯನ್ನು ತುಳಿದ ಈ ಬಜೆಟ್ ಎಗ್ಸೈಸ್ ತೆರಿಗೆಯ ಕ್ಷೇತ್ರದಲ್ಲಿ ಮಾತ್ರ ನಿರೀಕ್ಷಿತ ಹೆಚ್ಚಳವನ್ನು ಮಾಡದೆ ಎಲ್ಲರಿಗೂ ಖುಷಿ ನೀಡಿದ್ದಾರೆ. ಮ್ಯಾಟ್ನಲ್ಲಿ ತುಸು ಹೆಚ್ಚಳ ಮಾಡಿದರೂ ಕಾಪರ್ೋರೇಟ್ ಸಚರ್ಾಜರ್್ ಇಳಿಸಿದ್ದಾರೆ. ವೈಯಕ್ತಿಕ ಆದಾಯ ತೆರಿಗೆಯಲ್ಲೂ ಇಳಿಕೆ ಸಾಧಿಸಿದ್ದಾರೆ. ಡಿಟಿಸಿ ಅನುಷ್ಠಾನದಲ್ಲಿ ಖಚಿತತೆ ಮತ್ತು ಜಿಎಸ್ಟಿ ಅನುಷ್ಠಾನದಲ್ಲಿ ಭರವಸೆ ಮೂಡಿಸಿದ್ದಾರೆ.

ಒಟ್ಟಿನಲ್ಲಿ ಎಲ್ಲರಿಗೂ ಸಲ್ಲುವ ಒಂದು ಒಳ್ಳೆಯ ಬಜೆಟ್. ಯಾವ ಒಂದು ಕ್ಷೇತ್ರ್ರವನ್ನೂ ಅತಿಯಾಗಿ ಓಲೈಸದೆ ಒಟ್ಟಾರೆ ಎಲ್ಲರಿಗೂ ಸಲ್ಲುವ ಒಂದು ಬಜೆಟ್. ಆದರೆ ಇನ್ನೊಂದು ಮಾತು ಕೂಡಾ ಇಲ್ಲಿ ಅತಿ ಪ್ರಸ್ತುತ ಆಗಿರುತ್ತದೆ. ಒಂದು ಬೆಜೆಟ್ ಎಂಬ ಗಣಿತದ ಲೆಕ್ಕಾಚಾರ ಮಾಡುವುದು ಅತಿ ಸುಲಭ. ಅದು ನಿಜವಾಗಿ ಹಾಗೆಯೇ ಅನುಷ್ಠಾನಕ್ಕೆ ಬಂದರೇನೇ ಅದರ ಸರಿಯಾದ ಫಲ ಜನತೆಗೆ ಸಿಗುತ್ತದೆ. ಈ ಬಜೆಟ್ಟಿನಲ್ಲಿ ಏನೇ ಲೆಕ್ಕಾಚಾರಗಳಿದ್ದರೂ ಸರಕಾರವು ಬೆಲೆಯೇರಿಕೆಯನ್ನು ನಿಯಂತ್ರಣಕ್ಕೆ ತರಲು ವಿಫಲವಾದಲ್ಲಿ ಎಲ್ಲಾ ಬಣ್ಣವನ್ನೂ ಮಸಿ ನುಂಗೀತು.

ಬೆಲೆಯೇರಿಕೆಯ ವಿರುದ್ಧ ತುತರ್ು ಕ್ರಮವನ್ನು ಕೇವಲ ಆರ್.ಬಿ.ಐ ಯ ಬಡ್ಡಿದರ ನೀತಿಗೆ ಬಿಟ್ಟರೆ ಸಾಲದು. ಮತ್ತು ಬಜೆಟ್ಟಿನಲ್ಲಿ ಕೆಲವು ರಿಯಾಯಿತಿಗಳನ್ನು ಘೋಷಿಸಿದರೆ ಸಾಲದು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆಹಾರ ವಸ್ತುಗಳ ಮಾರುಕಟ್ಟೆ, ದಾಸ್ತಾನು, ಬೆಲೆ, ಭ್ರಷ್ಟಾಚಾರ, ಕಾಳಧನ ಇತ್ಯಾದಿಗಳ ಮೇಲೆ ಆಡಳಿತಾತ್ಮಕ ಹತೋಟಿ ಇಟ್ಟುಕೊಳ್ಳದೇ ಹೋದರೆ ಬಜೆಟರಿ ಕನಸುಗಳು ದುಃಸ್ವಪ್ನವಾಗಿ ನಿಮ್ಮನ್ನು ನಿಮ್ಮ ಸುಂದರ ನಿದ್ದೆಯಿಂದ ಬಡಿದೆಬ್ಬಿಸೀತು. ಈ ಇಡೀ ಬಜೆಟ್ ಸರ್ಕಸ್ಸಿನಲ್ಲಿ ಈ ಒಂದು ಟ್ರಿಕ್ ಅತ್ಯಂತ ಮುಖ್ಯ.

‍ಲೇಖಕರು G

February 28, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: