ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
**
“ಕಾವ್ಯ ಸಂಸ್ಕೃತಿ ಯಾನ, ಜನರಡೆಗೆ ಕಾವ್ಯ: ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಸಂದೇಶ”.
ಸೃಷ್ಟಿಯ ಅನಾದಿ ಕಾಲದಿಂದಲೂ ಬದುಕು ಜೀವನ ಕಾವ್ಯ ಸಂಸ್ಕೃತಿಗಳು ನಿರಂತರ ಪ್ರಯಾಣ ಮಾಡುತ್ತಿರುತ್ತವೆ, ಸಂಚಾರ ಮಾಡುತ್ತಿರುತ್ತವೆ. ಅವು ಕಾಲ ಕಾಲಕ್ಕೆ ಬೇರೆ ಬೇರೆ ಹೆಸರು, ಭಾಷೆ, ಕ್ಷೇತ್ರಗಳನ್ನು ಪಡೆದುಕೊಳ್ಳುತ್ತವೆ. ಕಾಲಕ್ಕೆ ತಕ್ಕಂತೆ ತಜ್ಞರು, ವಿದ್ವಾಂಸರು ತಮ್ಮ ಸಮಕಾಲೀನ ಸಮಾಜದ ಸಾಮಾನ್ಯರಿಗೆ ಅವುಗಳ ತಿಳಿವಳಿಕೆ ನೀಡುತ್ತಾರೆ. ಕಾವ್ಯ ಸಂಸ್ಕೃತಿಯ ಯಾನದ ಅಂಥ ಪಯಣ ಈ ಸಲ ಒಂದು ವಿಶಿಷ್ಟ ಉದ್ದೇಶ, ಗುರಿಗಳನ್ನು ಹೊಂದಿಕೊಂಡು ನಾಡಿನ ತುಂಬ ಪಸರಿಸಲಿದೆ. ನಾಡು ನುಡಿಯ ಅಭಿಮಾನದ ಪರಿಮಳವನ್ನು ಬೀರುತ್ತ, ಹೊರನಾಡ ಕನ್ನಡಿಗರು, ಗಡಿನಾಡು ಮತ್ತು ಒಳಭಾಗದ ಎಲ್ಲ ಕಾವ್ಯಪ್ರೇಮಿಗಳ ಪರಿಚಯವನ್ನು ನವೀಕರಿಸಲಿದೆ. ಕಾವ್ಯಕ್ಕೆ ಹೊಸತು ಹಳತು ಎಂಬುದಿಲ್ಲ. ಅದು ನಿತ್ಯ ನವೀನವಾದುದು. ಓದುವ ಮನಸ್ಸು ಪ್ರತಿ ದಿನವೂ ಹೊಸದನ್ನು ಸ್ವೀಕರಿಸುತ್ತದೆ. ಆ ಮೂಲಕ ಮನುಕುಲದ ನೋವಿಗೆ ಮತ್ತೆ ಮತ್ತೆ ಮುಲಾಮು ಲೇಪಿಸಬೇಕಾಗುತ್ತದೆ. ಕಾವ್ಯದ ಓದು ಮತ್ತು ಪ್ರಚಾರ ಇಂದಿನ ದಿನಮಾನದಲ್ಲಿ ಸ್ವಲ್ಪ ಮಸುಕಾದಂತೆ ಕಂಡಿರಬಹುದಾದರೂ, ಸಂಗೀತ ಸಾಹಿತ್ಯ ರಂಗಭೂಮಿ ಮುಂತಾದ ವಿವಿಧ ಕಲಾಪ್ರೇಮಿಗಳ ಮನಸ್ಸನ್ನು ಮುದಗೊಳಿಸಿ ಹದಗೊಳಿಸಿ ಮತ್ತೆ ಸಂಸ್ಕೃತಿಯ ಹಾದಿಯ ಮೇಲೆ ನಡೆಯಲು ಪ್ರೇರೇಪಿಸುವುದು ಮಹಾಮನೆಯನವರ ನೇತೃತ್ವದಲ್ಲಿ ಹೆಜ್ಜೆ ಹಾಕುತ್ತಿರುವ ಸಂಗಾತಿಗಳ ಉದ್ದೇಶವಾಗಿದೆ.
ಆಧುನಿಕ ವೈಜ್ಞಾನಿಕ ಸೌಲಭ್ಯಗಳು ಮನಸ್ಸನ್ನು ಕದಡುತ್ತವೆ, ಕಾಡುತ್ತವೆ; ಮುದಗೊಳಿಸುವುದಿಲ್ಲ, ಶಾಂತಿಯ, ನೆಮ್ಮದಿಯ ತಾಣದಿಂದ ದೂರ ತಳ್ಳುತ್ತವೆ. ಇಂಥ ಆಘಾತಕರ ವಾತಾವರಣದಲ್ಲಿಯೂ ಮೂಲತಃ ಸಂಸ್ಕೃತಿಯ ಆರಾಧಕರಾದ, ಕಾವ್ಯಪ್ರೇಮಿಗಳ ಪಡೆಯೊಂದಿಗೆ ಆಹ್ಲಾದಕರ ಕಾವ್ಯದ ಹುಡುಕಾಟ ಹಾಗೂ ತಡಕಾಟದ ಸುತ್ತ ಹೊಸ ಕವಿಗಳ, ಕಾವ್ಯಗಳ, ಕಾವ್ಯಸಂಗ್ರಹಗಳ, ಚರ್ಚೆಗಳ, ಹೊಸದೊಂದು ನಾಡಿನ ಕಾವ್ಯ ಸಂಸ್ಕೃತಿಯ ಕುಟುಂಬದ ಬಗೆಯೂ ಇಲ್ಲಿ ಸೇರಿದೆ. ಕಾವ್ಯ ವ್ಯಕ್ತಿಯೊಬ್ಬನ ಹೃದಯದ ಹೃತ್ತಂತ್ರಿಯೂ ಹೌದು, ಸಾಮಾಜಿಕ ಪ್ರತಿಕ್ರಿಯೆಯೂ ಹೌದು. ಈ ಕಾರಣಕ್ಕಾಗಿಯೇ ಅದು ನಾಟಕ, ರಂಗಭೂಮಿ, ಸಂಗೀತ, ನೃತ್ಯ ಮುಂತಾದ ಅಭಿವ್ಯಕ್ತಿಗಳೊಂದಿಗೆ ಏಕಕಾಲಕ್ಕೆ ಹಾರ್ದಿಕವೂ ಆಗುತ್ತದೆ, ಸಾಮಾಜಿಕವೂ ಆಗುತ್ತದೆ. ಒಬ್ಬ ಕವಿ ಏಕ ಕಾಲಕ್ಕೆ ಕವಿ, ನಾಟಕಕಾರ, ಸಾಮಾಜಿಕ ಹಾಗೂ ಸಮಗ್ರ ನಾಡಿನ ವಿಶ್ಲೇಷಕ ಚಿಂತಕನೂ ಆಗಿ ಬಹುಮುಖೀ ವ್ಯಕ್ತಿತ್ವವನ್ನು ಪಡೆದಿರುತ್ತಾನೆ.
ಹೀಗಾಗಿ ರಾಮಾಯಣ, ಮಹಾಭಾರತ, ಗೀತೆ, ಕಾಳಿದಾಸ, ಶೇಕ್ಸಪಿಯರ್ ಮುಂತಾದ ಬಹುದೇಶಗಳ ಕವಿಗಳು ಏಕದೇಶೀಯರಾಗುತ್ತಾರೆ, ಏಕಭಾಷಿಕರೂ ಅನೇಕ ಭಾಷಿಕರೂ ಆಗುತ್ತಾರೆ. ಇದು ಕಾವ್ಯದ ಸಾಂಸ್ಕೃತಿಕ ಮನಸ್ಸುಳ್ಳ ಸಮಕಾಲೀನ ಚಿಂತಕರನ್ನು ಒಂದೆಡೆ ಸೇರುವಂತೆ ಮಾಡಿದೆ. ಕಾಲ, ಕಾವ್ಯ, ಜೀವನ, ಸಂಸ್ಕೃತಿ ಮುಂತಾದ ಅಮೂರ್ತ ಪದಗಳನ್ನು ಬದುಕಿಗೆ ಹತ್ತಿರವಾಗುವಂತೆ ಯತ್ನಿಸುತ್ತಿರುವ ಈ ಕಾವ್ಯಯಾನದ ಪ್ರಯತ್ನ ಮತ್ತು ಚಿಂತನೆ ಯಶಸ್ವಿಯಾಗಲಿ. ಕಾವ್ಯದ, ಸಂಸ್ಕೃತಿಯ ಈ ಮಹಾಯಾನ ಮತ್ತೆ ಮತ್ತೆ ನಮ್ಮ ಕವಿಗಳ, ಚಿಂತಕರ, ವಿಶ್ಲೇಷಕರ ಮನಸ್ಸನ್ನು ಚಿಗುರಿಸುವಂತಾಗಲಿ. ಕನ್ನಡ ಕಾವ್ಯ ಹಾಗೂ ಕರ್ನಾಟಕದ ಸಂಸ್ಕೃತಿ ಚಿಂತಕರು ಬಹುಶಃ ಸಮಗ್ರ ಭಾರತದಲ್ಲಿ ಇಂಥ ಆಲೋಚನೆ ಹೊಂದಿದ ಅಗ್ರಗಣ್ಯರಾಗಿದ್ದಾರೆ. ಭಾರತ, ತನ್ಮೂಲಕ ಇತರ ದೇಶದ ಚಿಂತಕರನ್ನು ಸಹ ಈ ಚಟುವಟಿಕೆಗಳು ಪ್ರೇರೇಪಿಸಲಿ, ಸೂಜಿಗಲ್ಲಿನಂತೆ ಆಕರ್ಷಿಸಲಿ, ಎಂದು ಹಾರೈಸುತ್ತೇನೆ.
- ಸಿದ್ಧಲಿಂಗ ಪಟ್ಟಣಶೆಟ್ಟಿ
ಹೂಮನೆ,
ಶ್ರೀದೇವಿನಗರ,
ಧಾರವಾಡ-4
[email protected] 20.08.2024
0 ಪ್ರತಿಕ್ರಿಯೆಗಳು