ಕಾವ್ಯ ಎಂ.ಎನ್
———————————-
ನಮ್ಮ ನಡುವೆ ಘಟಿಸಿದ ಯಾವ ದುರಂತವೂ
ನನ್ನ ಗಣಿಕೆಯಾಚೆಯದಲ್ಲವೆಂಬುದೇನೊ ನಿಜ
ಹಾಗೆಂದು ನಾನ್ಯಾವ ಮಾಯ ವಿದ್ಯೆಯಲ್ಲೂ ಪಳಗಿದವಳಲ್ಲ
ಬದುಕೆಂದರೆ
ನನ್ನ ನಸೀಬಿನ ಕಿತಾಬು
ಎಂದಷ್ಟೆ ನಂಬಲಿಲ್ಲವಾದ್ದರಿಂದ
ಪುಟ ಮಗುಚಿದಷ್ಟು ಬಿಚ್ಚಿಕೊಳ್ಳುವ
ಇಬ್ಬರ ಖಾತೆಯ ಆಯವ್ಯಯವ
ಊಹಿಸಬಲ್ಲೆ…

ಒಂದು ಧೀರ್ಘ ಚಲನೆಯ ನಂತರ
ನೀನೀಗ ಪಾದ ಊರಿ ನಿಂತಿರುವ ಜಾಗೆ
ವಿಲೋಮ ಪ್ರೇಮ ಪ್ರಕರಣಕ್ಕೆ ದಾಖಲೆ
ನಾನಿನ್ನು ನಿನ್ನೆ ಎಂಬ ಎಲ್ಲದರ ಪುರಾವೆ..
ಇತಿಹಾಸವನ್ನ
ಯಾರು ತಾನೆ ಗಮನವಿಟ್ಟು ಓದುತ್ತಾರೆ ?
ದಾಳಿ ಆಕ್ರಮಣಗಳ ವಿಪ್ಲವ ಗೂಡು ಕಟ್ಟುವಾಗ
ಛಾವಣಿ ಹಿಂದೆ ಅವಿತ ಕಂಬನಿಯ ಲೆಕ್ಕವಿಡುತ್ತಾರೆಯೇ ?
ಈಗಲೂ ಆಗಬಹುದಾದ್ದದ್ದು ಹೀಗೆ..
ನನ್ನ ನಿಟ್ಟುಸಿರ ತೋಟದ
ಗಾಯಗೊಂಡ ಗಾಳಿ
ನಿನಗೆ ನನ್ನ ಕಬರಿನ ಸುದ್ದಿಯನ್ನು
ಮುಟ್ಟಿಸದು ಬಹುಶಃ ಇನ್ನೆಂದೂ…
ನೀನಾದರೂ ಕಾಯಲಾರೆ ನನಗಾಗಿ ಎಂದೂ…
0 ಪ್ರತಿಕ್ರಿಯೆಗಳು