ಕಾವ್ಯಾ ಕಡಮೆ ಓದಿದ ‘ನಟನೆಯ ಕೈಪಿಡಿ’

ಹಕ್ಕಿಯೊಂದು ಕೇವಲ ರೆಕ್ಕೆಯಾಗುವುದು ಹೇಗೆ?

ಕಾವ್ಯಾ ಕಡಮೆ

ಆಗಸದಲ್ಲಿ ಹಕ್ಕಿಯೊಂದು ತನ್ಮಯತೆಯಿಂದ ಹಾರಾಡುವಾಗ ನಮಗೆ ಕಾಣಿಸುವುದೇನು? ನರ್ತಕಿಯೊಬ್ಬಳು ಮೈಮರೆತು ಕುಣಿವಾಗ ನಾವು ನೋಡುವುದು ಯಾರನ್ನು? ಹಾಗೆಯೇ ನಟನೊಬ್ಬನನ್ನು ಅಥವಾ ನಟಿಯೊಬ್ಬಳನ್ನು ಆತನ/ ಆಕೆಯ ನಟನೆಯಿಂದ ಬೇರ್ಪಡಿಸಿ ಹೇಳುವುದು ಹೇಗೆ? ಕ್ರಿಯೆಯನ್ನು ‘ಸ್ವ’ದಲ್ಲಿ ಮಿಳಿತವಾಗಿಸದೇ ಹಕ್ಕಿಗೂ, ನರ್ತಕಿಗೂ, ನಟ- ನಟಿಯರಿಗೂ ಮುಕ್ತಿಯಿಲ್ಲವೇನೋ!

ಇಂಥದೊಂದು ಪ್ರಯಾಣದಲ್ಲಿ ಹೊಸ ತಲೆಮಾರಿನ ನಟ- ನಟಿಯರಿಗೆ ಕೈ-ಮರವಾಗುವಂತಹಕಿರು ಹೊತ್ತಿಗೆಯನ್ನು ರಂಗಭೂಮಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಕ್ರಿಯಾಶೀಲರಾಗಿರುವ ಡಾ. ಶ್ರೀಪಾದ್ ಭಟ್ ಅವರು ರಚಿಸಿದ್ದಾರೆ. ‘ನಟನೆಯ ಕೈಪಿಡಿ’ ಎಂಬ ಈ ಹೊತ್ತಿಗೆ, ಪುಟ್ಟದೊಂದು ಚುಕ್ಕೆಯಲ್ಲಿ ಬ್ರಹ್ಮಾಂಡವನ್ನು ತೋರಿಸಬಲ್ಲಷ್ಟು ಸಶಕ್ತವಾಗಿದೆ.

ಸಾವಿರಾರು ರೂಪಾಯಿಗಳ ಫೀಸು ತೆಗೆದುಕೊಂಡು, ಸೆಲೆಬ್ರಿಟಿಗಳನ್ನು ಕರೆದು ನಟನೆಯ ಪಾಠ ಹೇಳಿಸುವುದಕ್ಕಿಂಥ ಭಿನ್ನವಾಗಿದೆ ಶ್ರೀಪಾದ್ ಭಟ್ ಅವರು ತೋರಿಸುವ ಪಥ. ಅಲ್ಲೆಲ್ಲೋ ದೂರದಲ್ಲಿರುವ ‘ಸ್ಟಾರ್’ಗೆ ಬೊಟ್ಟು ಮಾಡಿ ತೋರಿಸುವುದಲ್ಲ, ಬದಲಿಗೆ ಹಿರಿಯಣ್ಣನಂತೆ ಕೈ ಹಿಡಿದು ನಡೆಸುವ ಛಾತಿಯ ಪುಸ್ತಕ ಇದು. ಇನ್ನೇನು ನಟನೆಯ ಹೊಸ್ತಿಲಲ್ಲಿ ಕಾಲಿಡುತ್ತಿರುವವರಿಗೂ, ಆಗಲೇ ಮೇರು ನಟರೆಂದು ಗುರುತಿಸಿಕೊಂಡವರಿಗೂ ಸಮಾನವಾಗಿ ಉಪಯುಕ್ತವಾಗುವ ಕೃತಿ ಇದು.

ನಾವು ಶಾಲೆಯಲ್ಲಿ ಗಣಿತ ಓದುತ್ತಿದ್ದಾಗ ಕಲಿಯಬೇಕಾದ ‘ಥೇರಮ್’ಗಳನ್ನುನೆನಪಿಸಿಕೊಳ್ಳಿ. ಈ ಪ್ರಮೇಯಗಳು ಸಣ್ಣವು. ಆದರೆ ಇವುಗಳ ಸಾರವೊಂದನ್ನು ತಿಳಿದುಬಿಟ್ಟರೆ ನಂತರ ಎಂಥ ದೊಡ್ಡ ದೊಡ್ಡ ಗಣಿತವನ್ನೂ ಬಿಡಿಸಬಹುದಾಗಿತ್ತು. ಅದೇ ರೀತಿ, ಡಾ. ಶ್ರೀಪಾದ್ ಭಟ್ ಅವರು ಈ ಪುಸ್ತಕದಲ್ಲಿ ನಟ-ನಟಿಯರಿಗೆ ಹೇಳಿಕೊಡುವ ಪಾಠವೆಲ್ಲ ಮೂಲ ರೂಪದಲ್ಲಿವೆ. ಒಮ್ಮೆ ಮನನ ಮಾಡಿಕೊಂಡರೆ ನಂತರ ಎಂಥದೇ ಸವಾಲಿನ ನಟನೆಯ ಬೇಡಿಕೆಗಳಿಗೂ ನಟ-ನಟಿಯರು ಇವುಗಳನ್ನು ಅಳವಡಿಸಿಕೊಳ್ಳಬಹುದು.

ಈ ಕೈಪಿಡಿಯಲ್ಲಿ ನಟನೆಯ ಅಭ್ಯಾಸಕ್ಕಾಗಿ ಬೇಕಾದ ಹತ್ತು ಟಿಪ್ಪಣಿಗಳನ್ನು ಲೇಖಕರು ಪಟ್ಟಿ ಮಾಡಿದ್ದಾರೆ. ಪುಸ್ತಕದ ಮೊದಲ ಭಾಗವಾದ ‘ಜ್ಞಾನರಂಗ’ ನಟನೆಯ ಅಂತರಂಗಕ್ಕೆ ಸಂಬಂಧಿಸಿದ್ದಾದರೆ ಎರಡನೆಯ ಭಾಗವಾದ ‘ಕ್ರಿಯಾರಂಗ’ ಬಹಿರಂಗಕ್ಕೆ ಸಂಬಂಧಿಸಿದ್ದು. ಜ್ಞಾನರಂಗ ನಟರಿಗೆ ಅಗತ್ಯವಿರುವ ತಾತ್ವಿಕ ಗ್ರಹಿಕೆಗಳಿಗೆ ಸಂಬಂಧಿಸಿದ್ದಾದರೆ, ಕ್ರಿಯಾರಂಗವು ರಂಗಪಠ್ಯವೊಂದನ್ನು ನಟರು ಅಭ್ಯಾಸ ಮಾಡುವಾಗ ಕೈಗೊಳ್ಳಬಹುದಾದ ಚಟುವಟಿಕೆಗಳಿಗೆ ಸಂಬಂಧಿಸಿದೆ.ಲೇಖಕರೇ ತಮ್ಮ ಮೊದಲ ಮಾತಿನಲ್ಲಿ ಹೇಳುವಂತೆ ನಟನೆಗೆ ಸಂಬಂಧಿಸಿದಂತೆ ನೂರಾರು ಗ್ರಂಥಗಳು, ಶಿಬಿರಗಳು ಬೇರೆ ಬೇರೆ ಮಟ್ಟಗಳಲ್ಲಿ ಚಾಲ್ತಿಯಲ್ಲಿವೆ. ಈ ಪುಸ್ತಕದ ಟಿಪ್ಪಣಿಗಳಿರುವುದು, ಅಂತಹ ಅವಕಾಶ ಸಿಗದ ಅಥವಾ ಪ್ರಾಥಮಿಕ ತಿಳಿವಳಿಕೆಗಳೊಂದಿಗೆ ಅಂತಹ ತರಬೇತಿಗೆ ಹೋಗಬಯಸುವವರಿಗೆ ನೆರವಾಗಬಹುದು ಎಂದಿದ್ದಾರೆ.

ನಟನೆಯೆಂಬ ವೃತವನ್ನು ಪಾಲಿಸುವವರು ಆಟವನ್ನು ಅರಿಯಲು ಮಾಡಬೇಕಾದ ತಾಲೀಮಿನಿಂದ ಶ್ರೀಪಾದ ಭಟ್ ಅವರು ಪಾಠ ಆರಂಭಿಸುತ್ತಾರೆ. ದೇಹವನ್ನೇ ದೇಗುಲವಾಗಿ ಕಂಡು ಧೇನಿಸುವುದು, ಹೊಸ ರುಚಿ, ಅಭಿರುಚಿಗಳನ್ನು ಬೆಳೆಸಿಕೊಳ್ಳುವುದು, ಕಾವ್ಯವನ್ನು ಓದುವುದು, ಸುತ್ತಲಿನ ಪರಿಸರವನ್ನು ಗಮನಿಸುತ್ತ, ಪ್ರಕೃತಿಯ ಬೇರುಗಳಲ್ಲಿ ನಟನೆಯ ಸೂರನ್ನು ಕಾಣುವುದು ಜ್ಞಾನರಂಗದ ಅಧ್ಯಾಯಗಳು. ಪ್ರತೀ ತಲೆಬರಹದ ಕೆಳಗೂ ಗುರುಗಳು ಸಹಜವಾದ, ಭಾರವಾಗದ ಉದಾಹರಣೆಗಳನ್ನು ಕೊಡುತ್ತ ಸಾಗುತ್ತಾರೆ.

‘ರಂಗಭೂಮಿಯೆಂದರೆ ಒಂದು ಆಟ. ನಾವೆಲ್ಲರೂ ಆಟಗಾರರು. ಈ ಆಟದಲ್ಲಿ ಆಡುವವರು ಮಾತ್ರ ಇಲ್ಲ, ನೋಡುವವರೂ ಇದ್ದಾರೆ; ಅವರೂ ಆಟದಲ್ಲಿ ಪಾಲ್ಗೊಳ್ಳುತ್ತಾರೆ… ಯಾರೋ ಒಬ್ಬರು ಗೆದ್ದರು ಎಂದರೆ ನಾಟಕ ಸೋತಿತು ಅಂತರ್ಥ… ಎಲ್ಲವೂ ರೂಪಾಂತರಗೊಳ್ಳುವುದು ಈ ಆಟದ ನಿಯಮ. ಅದು ಎಂಬುದು ಇನ್ನೊಂದಾಗುವುದು ಇಲ್ಲಿಯ ಮೂಲ ತತ್ವ. ನಟ ಪಾತ್ರವಾಗುತ್ತ, ನಿಂತ ನೆಲ ರಂಗಸ್ಥಳವಾಗುತ್ತ, ವಸ್ತುಗಳು ಪರಿಕರವಾಗುತ್ತ, ಪರಿಸರವೇ ಭಾವಾವರಣವಾಗುತ್ತ ರೂಪಾಂತರಗೊಳ್ಳುತ್ತದೆ. ಹೀಗಾಗಿ ಇದರಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳು ಒಂದಿಂಚಾದರೂ ಒಳಹೊರಗೆ ಕದಲಿರುತ್ತಾರೆ.’ ಇಂಥ ಎಷ್ಟೊಂದು ಅನುಭವದ ನುಡಿಗಳ ಸವಿಯನ್ನು ಈ ಪುಸ್ತಕ ಓದಿಯೇ ತಿಳಿಯಬೇಕು.

ನಟ-ನಟಿಯರು ಕವಿತೆಗಳನ್ನು, ಇತರ ಸಾಹಿತ್ಯ ಕೃತಿಗಳನ್ನೂ, ವಿಚಾರ ಧಾರೆಗಳನ್ನೂ ಓದುವುದರ ಜೊತೆಗೆ ಸಂಗೀತ, ನಾಟ್ಯ, ಚಿತ್ರಕಲೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ ಅವರ ಸೃಜನಾತ್ಮಕ ಅಭಿವ್ಯಕ್ತಿಯನ್ನು ಹರಿತಗೊಳಿಸಬಹುದು ಎಂಬ ಬಗ್ಗೆ ಉದಾಹರಣೆಗಳ ಸಮೇತ ವಿವರಣೆಯಿದೆ. ಎಲ್ಲಕ್ಕಿಂಥ ಮುಖ್ಯವಾಗಿ ರಂಗಕಲೆಯಲ್ಲಿ ತೊಡಗುವ ಇಚ್ಛೆಯಿರುವವರಿಗೆ ತಾಳ್ಮೆಯೆಷ್ಟು ಮುಖ್ಯ ಎಂದು ತಿಳಿಸುತ್ತಾರೆ.

ಎರಡನೆಯ ಭಾಗದಲ್ಲಿ ಹೊಸ ನಟ-ನಟಿಯರನ್ನು ಸಮೀಪ ಕುಳ್ಳಿರಿಸಿಕೊಂಡು ನಾಟಕದ ಸ್ಕ್ರಿಪ್ಟಿಗೆ ಸರಿಯಾಗಿ ತಮ್ಮನ್ನು ತಾವು ಹೇಗೆ ಪಳಗಿಸಿಕೊಳ್ಳಬೇಕು ಎಂಬ ಕುರಿತು ಆತ್ಮೀಯವಾದ, ಆದರೆ ಅಷ್ಟೇ ಪ್ರಾಕ್ಟಿಕಲ್ ಆದ ಮಾಹಿತಿಗಳಿವೆ. ಈ ಭಾಗವು ರಿಲ್ಕ್ ಕವಿ ಯುವಕವಿಗೆ ಬರೆದ ಪತ್ರಗಳಷ್ಟೇ ತೀವ್ರವಾಗಿವೆ, ಆಪ್ತವಾಗಿವೆ. ದಿನಚರಿಗಳನ್ನು ಬರೆಯುತ್ತ ಇರುವುದು, ನಾಟಕದ ಕತೆಯನ್ನು ಮತ್ತೆ ಮತ್ತೆ ಹೇಳುವುದು, ಪ್ರತೀ ಪಾತ್ರದ ಜೊತೆಗೆ ಅನುಸಂಧಾನದಲ್ಲಿ ತೊಡಗುವುದು ಮತ್ತು ಅದರ ಜೊತೆಗೆ ನಾನಲ್ಲದ ನಾನಾಗುವುದು, ನಮ್ಮ ಸುತ್ತಲ ಜೀವಗಳನ್ನೇ ಗಮನಿಸಿ ಪಾತ್ರಕ್ಕೆ ಹೊಂದುವ ಕ್ರಿಯೆಗಳನ್ನು ಹುಡುಕಿಕೊಳ್ಳುವುದು ಮತ್ತು ಕೊನೆಗೆ ನಾಟಕದ ತಮ್ಮ ಪಾತ್ರಕ್ಕನುಗುಣವಾಗಿ ತಮ್ಮದೇ ಒಂದು ಸ್ಕ್ರಿಪ್ಟ್ ರಚಿಸಿಕೊಳ್ಳುವುದು ಅತ್ಯವಶ್ಯಕ ಪಾಠಗಳು.

ಈ ಪುಸ್ತಕಕ್ಕೆ ಪ್ರಸನ್ನ ಹೆಗ್ಗೋಡು ಮತ್ತು ಬಿ. ಸುರೇಶ್ ಅವರ ಮಹತ್ವದ ಬೆನ್ನುಡಿ- ಮುನ್ನುಡಿಗಳಿವೆ. ಚಿಂತನ ಪುಸ್ತಕ ಪ್ರಕಟಿಸಿದೆ. ನಭಾ ವಕ್ಕುಂದ ಅವರ ಚಿತ್ರ ಬಳಸಿ ಅನಿಲ್ ಕಶ್ಯಪ್ ಆಕರ್ಷಕ ಮುಖಪುಟ ರಚಿಸಿದ್ದಾರೆ. ಗಿರಿಧರ ಕಾರ್ಕಳ ಒಳಪುಟಗಳ ರೇಖಾಚಿತ್ರಗಳನ್ನು ಒದಗಿಸಿದ್ದಾರೆ.
ಪ್ರತಿಗಳು ಬೇಕಿದ್ದರೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಇಂತಿವೆ.

‍ಲೇಖಕರು Admin

October 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: