ಕಾವ್ಯ ಓದುವ ಉದ್ದೇಶದಿಂದ ಸಮಾನ ಮನಸ್ಕ ಗೆಳೆಯರು ಕಟ್ಟಿದ ಕಾವ್ಯಸಂಜೆಗೆ ಈಗ ಹತ್ತು ವರುಷಗಳ ಪ್ರಾಯ. ಕನ್ನಡದೊಂದಿಗೆ ಇತರೆ ಭಾಷೆಯ ಪದ್ಯಗಳನ್ನು ಓದುತ್ತಾ, ತನ್ನದಾಗಿಸಿಕೊಳ್ಳುತ್ತಾ ಕಾವ್ಯ ಪಯಣ ಶುರುಮಾಡಿದ ಕಾವ್ಯಸಂಜೆಗೆ ಜೊತೆಯಾದವರು ಹಲವರು. ಸಮುದಾಯದ ನಡುವಿನ ಕಥನಗಳನ್ನು ಕಾವ್ಯವಾಗಿಸುತ್ತಾ, ಕಾವ್ಯದ ಓದನ್ನು ಸಂಭ್ರಮವಾಗಿಸುತ್ತಾ,ಹೆಜ್ಜೆಗೆ ಹೆಜ್ಜೆ ಸೇರಿ ಕಾವ್ಯಸಂಜೆ ತುಸುದೂರದವರೆಗೂ ನಡೆದಿದೆ. ಈ ಹತ್ತು ವರುಷದ ತಿಟ್ಹತ್ತಿ ತಿರುಗಿ ನೋಡಿದಾಗ ಕಾವ್ಯಸಂಜೆಗೆ ಸಿಕ್ಕಿರುವ ಪ್ರತಿಸ್ಪಂದನೆ,ಆದರತೆ,ಆತ್ಮೀಯತೆ, ಮತ್ತು ಮನ್ನಣೆಗಳು ನಮ್ಮ ನಡುವಿನ ಸಹೃದಯರ ಕಾವ್ಯಪ್ರೀತಿಗೆ ಸಾಕ್ಷಿಯಂತಿದೆ.
ಕಾವ್ಯದ ಮೂಲಕ ನಾವು ಒಬ್ಬರಿಗೊಬ್ಬರು ಅಪ್ಪಿಕೊಂಡು ಹತ್ತು ವರುಷಗಳನ್ನು ಪೂರೈಸಿರುವ ಈ ಹೊತ್ತಿನ ಸವಿನೆನಪಿಗಾಗಿ ‘ ಕಾವ್ಯಸಂಜೆ ದಶಮಾನೋತ್ಸವ’ ವನ್ನು ಆಯೋಜಿಸುವ ಮತ್ತು ಇದರ ಭಾಗವಾಗಿ ‘ ಕಾವ್ಯಸಂಜೆ ದಶಮಾನೋತ್ಸವ ಕಾವ್ಯ ಪುರಸ್ಕಾರ’ ವನ್ನು ನೀಡಲು ತೀರ್ಮಾನಿಸಲಾಗಿದೆ. ಈ ಪುರಸ್ಕಾರಕ್ಕಾಗಿ ಕನ್ನಡದ ಕವಿಗಳಿಂದ ತಮ್ಮ ಅಪ್ರಕಟಿತ ಕವನಗಳ ಹಸ್ತಪ್ರತಿಯನ್ನು ಆಹ್ವಾನಿಸಿದಾಗ,ನಮಗೆ ಖುಷಿ ಮತ್ತು ಅಚ್ಚರಿಯೆಂಬಂತೆ 118 ಹಸ್ತಪ್ರತಿಗಳು ಬಂದು ತಲುಪಿದವು.ಈ ಹಸ್ತಪ್ರತಿಗಳಲ್ಲಿ ಒಂದು ಪ್ರತಿಗೆ ಹತ್ತುಸಾವಿರಗಳ ನಗದು ಮತ್ತು ಫಲಕವನ್ನು ಪ್ರಧಾನ ಮಾಡಲಾಗುತ್ತದೆ. ಕನ್ನಡ ಮತ್ತು ಇತರೆ ಭಾಷೆಗಳ ಹಿರಿಕಿರಿಯ ಸುಮಾರು 50ಕ್ಕೂ ಹೆಚ್ಚು ಕವಿಗಳು ಮತ್ತು ನೀವು ದಿನಾಂಕ 19.11.2023, ಭಾನುವಾರದಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಕಾವ್ಯಸಂಜೆ ದಶಮಾನೋತ್ಸವ ಸಂಭ್ರಮದಲ್ಲಿ ಭಾಗಿಯಾಗಲಿದ್ದೀರಿ ಎಂಬುದನ್ನು ನವೆಂಬರ್ 01 ರ ಕನ್ನಡ ರಾಜ್ಯೋತ್ಸವದ ಈ ದಿನದಂದು ಘೋಷಿಸಲು ನಮಗೆ ಅತ್ಯಂತ ಖುಷಿಯಾಗುತ್ತಿದೆ.
ಇದೇ ವರ್ಷ ಕಾವ್ಯ ಸಂಜೆಗೆ BNP Paribas ಬೆಂಬಲದ India Foundation for the Arts ಯೋಜನೆಯು ದೊರಕಿದ್ದು ನಮ್ಮ ಸಂಭ್ರಮವನ್ನು ಹೆಚ್ಚಿಸಿದೆ.

0 ಪ್ರತಿಕ್ರಿಯೆಗಳು