ಕಾಲು ಮುರಿದು ಕೈಗೆ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ಜೋತಾಡುತ್ತಿದ್ದ ಎಡಗೈಯನ್ನ ಕಷ್ಟಪಟ್ಟ ಬಲಗೈಯಲ್ಲಿ ಹಿಡಿದುಕೊಂಡು ಮನೆಗೆ ಬಂದಾಗ ಮೊದಮೊದಲು ಯಾರಿಗೂ ಏನೂ ಗೊತ್ತಾಗಲಿಲ್ಲ. ನನಗೇ ಗೊತ್ತಿರಲಿಲ್ಲ. ಮನೆಗೆ ಬಂದವನು ಬ್ಯಾಗು ಮೂಲೆಯಲ್ಲಿಟ್ಟು ನಾನೂ ಅದಕ್ಕೆ ಒರಗಿಕೊಂಡು ಕುಸಿದು ಕುಳಿತಾಗಲೇ ಅಕ್ಕಂದಿರ ಮತ್ತು ಅಮ್ಮನ ಗಮನ ಬಿದ್ದದ್ದು.  ಮನೆಗೆ ಓಡಿ ಬಂದು ಬ್ಯಾಗು ಬಿಸಾಕಿ, ಕೈಕಾಲು ಮುಖ ತೊಳೆದ ಶಾಸ್ತ್ರ ಮಾಡಿ ಆಡಲಿಕ್ಕೆ ಓಡುತ್ತಿದ್ದವನು ಹೀಗಾದರೆ…

ʼಏನಾಯ್ತು?ʼ ಕಕ್ಕುಲತೆಯ ಪ್ರಶ್ನೆ.

‘ಕೈ ನೋವು. ಎತ್ತಕ್ಕಾಗ್ತಿಲ್ಲ.’

ʼಯಾಕೆ, ಎಲ್ಲಿ ಬಿದ್ದೆʼ

ಉತ್ತರ ಹೇಳುವುದರೊಳಗೆ ಅಮ್ಮ ಎಬ್ಬಿಸಿಕೊಂಡು ಬಚ್ಚಲಮನೆಗೆ ಒಯ್ದು ಭುಜದಿಂದ ತಣ್ಣೀರು ಸುರಿದಳು. ಸೀತಕ್ಕ ಕೊಟ್ಟ ಅಮೃತಾಂಜನವನ್ನ ತೋಳಿಗೆ ತಿಕ್ಕಲು ಹೋದರು. ಕೈಮುಟ್ಟಿದೊಡನೆಯೇ ಸೂರು ಹಾರುವಂತೆ ಕಿರುಚಿದ್ದೆ. ಅಸಾಧ್ಯ ನೋವು. ತೋಳು ಊದಿಕೊಂಡಿರುವುದು ಕಾಣುತ್ತಿತ್ತು.  

‘ಏನಾಯ್ತು…!?’ ಈ ಬಾರಿ ಸ್ವಲ್ಪ ಗಾಬರಿ, ಕೋಪ ಎರಡೂ ಸೇರಿತ್ತು ಅಮ್ಮನ ದನಿಯಲ್ಲಿ.

ಏನಾಗಿತ್ತು ಅಂದರೆ… ಮಧ್ಯಾಹ್ನ ಊಟ ಆದ ಮೇಲೆ ಗೆಳೆಯರೊಂದಿಗೆ ಒಂಟೆ ರೇಸ್‌ ಆಟ ಆಡ್ತಿದ್ದೆ. ಶಿವಕುಮಾರ, ಗುರು, ರಘು, ಬಸು, ಕೇಶವ, ಮುನಿ ಎಲ್ಲಾರೂ ಇದ್ವಿ. ನಾನು ಒಂಟೆಯಿಂದ ಬಿದ್ಬಿಟ್ಟೆ. ಅವಾಗಿಂದ ನೋವು.

ಸದ್ಯದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಡಾಕ್ಟರ್‌ ಹತ್ತಿರ ಹೋಗಬೇಕು.  ಅದಕ್ಕೆ ಅಪ್ಪ ಬರುವವರೆಗೂ ಕಾಯಬೇಕು. 

* * *

ನಾನಾಗ ೪ನೇ ತರಗತಿಯಲ್ಲಿದ್ದೆ (೧೯೭೪). ಆ ವಯಸ್ಸಿನ ಎಲ್ಲ ಮಕ್ಕಳಂತೆ ಆಟ, ಓಟ, ಪಾಠದಲ್ಲಿದ್ದವನು. ಬೆಂಗಳೂರಿನ ಗಾಯತ್ರಿ ನಗರದಲ್ಲಿದ್ದ ಪುಟ್ಟದಾದ ರಾಘವೇಂದ್ರ ಪಾಠ ಶಾಲೆಯಲ್ಲಿ ನಾವು ಎಳೆಯ ಗೆಳೆಯರು. ಶಾಲೆಯ ಮುಂದೆ ಪುಟ್ಟದೊಂದು ಬಯಲು. ಅಲ್ಲಿ ಹೆಣ್ಣುಮಕ್ಕಳು ಆಡಿಕೊಳ್ಳುವರು. ಹುಡುಗರಿಗೆ ಎದುರಿಗಿದ್ದ ಬೀದಿಯೇ ಗತಿ. ನಮ್ಮ ಆಟದಾವೇಶ ಜೋರಾಗಿ ಕಿರುಚಾಟ ದೊಡ್ಡದಾದರೆ, ಅಕ್ಕಪಕ್ಕದ ಮನೆಯವರು ಬಂದು ಗದರುತ್ತಿದ್ದರು. ನಾವು ಸ್ವಲ್ಪ ತಣ್ಣಗಾಗುತ್ತಿದ್ದೆವು.  

ಅದೇ ಶಾಲೆ ನನಗೆ ಮತ್ತು ನನ್ನ ಮೂರು ಅಕ್ಕಂದರಿಗೆ ಬಾಲಬೋಧೆ ಹೇಳಿಕೊಟ್ಟದ್ದು. ಶಾಂತಮ್ಮ ಟೀಚರ್‌, ಗಾಯತ್ರಿ ಟೀಚರ್‌ ಈಗಲೂ ನೆನಪಿರುವ ಗುರುಗಳು.. ನಮ್ಮ ಮನೆ ರಾಜಾಜಿನಗರದಲ್ಲಿ ಅಂಬಾಭವಾನಿ ದೇವಸ್ಥಾನದ ಹಿಂದಿನ ರಸ್ತೆ. ಅಲ್ಲಿಂದ ಗಾಯತ್ರಿ ನಗರದ ಮೊದಲ ತಿರುವಿನಲ್ಲಿದ್ದ ಶಾಲೆಗೆ ಬಹುಶಃ ಅರ್ಧ ಮುಕ್ಕಾಲು ಮೈಲಿ ಇರಬಹುದು. ಅಕ್ಕಂದಿರು ಶಾಲೆಗೆ ಹೊರಡುವ ವೇಳೆಗೆ ೩-೪ ವರ್ಷದ ಚಿಕ್ಕಮಗು ನಾನೂ ಅವರೊಡನೆ ಹೋಗಲು ಮೊಂಡು ಹಿಡಿಯುತ್ತಿದ್ದೆನಂತೆ. ಅಂತೂ ಇಂತೂ ನಾಲ್ಕು ವರ್ಷಕ್ಕೆ ಮೊದಲೇ ಒಂದು ರೇಷನ್ಅಕ್ಕಿ ತರುವ ಚೀಲದಲ್ಲಿ ಸ್ಲೇಟ್‌ ಹಾಕಿಕೊಂಡು ಅವರ ಹಿಂದೆ ಓಡುತ್ತಿದ್ದೆನಂತೆ.

ಶಾಲೆಯವರ ಸೌಜನ್ಯವೋ, ಅಕ್ಕರೆಯೋ ಅಂತೂ ನನ್ನನ್ನೂ ಒಪ್ಪಿಕೊಂಡಿದ್ದರು. ನಾನು ಇಡೀ ದಿನ ಅಲ್ಲಿ ಇಲ್ಲಿ ಓಡಾಡಿಕೊಂಡು, ಏನೋ ತರಲೆ ಮಾಡಿಕೊಂಡು, ಸುಸ್ತಾಗಿ ಯಾರದೋ ತೊಡೆಯೇರಿ ಮಲಗಿಬಿಡುತ್ತಿದ್ದನಂತೆ ಅಂತ ದೊಡ್ಡಕ್ಕ ಸೀತಾ ಹೇಳ್ತಿರ್ತಾಳೆ. ಎದ್ದವನನ್ನು ಅದೇ ಟೀಚರ್‌ಗಳೇ ಎತ್ತಿಕೊಂಡು ಸಮಾಧಾನಪಡಿಸುತ್ತಿದ್ದರಂತೆ. ಶಾಲೆಯಲ್ಲಿದ್ದುದೇ ಮೂರು ಕೊಠಡಿಗಳು. ಒಂದನೇ ತರಗತಿಯವರಿಗೆ ಒಂದು ಕೊಠಡಿ. ಇನ್ನೊಂದರಲ್ಲಿ ಆ ಕಡೆ ತಿರುಗಿ ಕುಳಿತರೆ ಎರಡನೇ ತರಗತಿ, ಈ ಕಡೆ ತಿರುಗಿದರೆ ಮೂರನೇ ತರಗತಿ.

ಎರಡು ಮತ್ತು ಮೂರನೇ ತರಗತಿಗೆ ನೆಲದ ಮೇಲೆ ಉದ್ದನೆ ಮಣೆಗಳು. ದೊಡ್ಡ ಕೋಣೆಯ ಮಧ್ಯದಲ್ಲಿ ಒಂದು ಮೋಟು ಗೋಡೆ. ಅದರ ಇನ್ನೊಂದು ಕಡೆ ನಾಲ್ಕನೇ ತರಗತಿಯವರಿಗೆ ಕೂರಲು ಬೆಂಚುಗಳಿದ್ದ ಕೋಣೆ. ಟೀಚರ್‌ಗಳು ಎಷ್ಟೋ ಬಾರಿ ಮೋಟು ಗೋಡೆಯ ಮಧ್ಯದಲ್ಲಿ ನಿಂತು ನಮಗೆಲ್ಲರಿಗೂ ಹಾಡು ಹೇಳಿಕೊಡುವುದು, ಕತೆ ಹೇಳುವುದು ಮಾಡುತ್ತಿದ್ದರು. ನಾನು ನಾಲ್ಕನೇ ತರಗತಿಗೆ ಬರುವ ಹೊತ್ತಿಗೆ ನನ್ನ ಮೂವರು ಅಕ್ಕಂದಿರೂ ಮುಂದಿನ ತರಗತಿಗಳಿಗೆ ಬೇರೆ ಬೇರೆ ಶಾಲೆಗಳಿಗೆ ಸೇರಿದ್ದರು.

ಮಕ್ಕಳೆಲ್ಲರನ್ನೂ ಕುರಿತು ಅತೀವ ಪ್ರೀತಿ, ಆಸಕ್ತಿ ತೋರಿಸುತ್ತಿದ್ದ ಟೀಚರ್‌ಗಳು ನಾನು ನೋವಿನಿಂದ ಕೈಹಿಡಿದುಕೊಂಡು ಕುಳಿತದ್ದನ್ನು ಯಾಕೆ ಗಮನಿಸಲಿಲ್ಲವೋ ಗೊತ್ತಿಲ್ಲ. ಅಷ್ಟು ನೋವಿನಲ್ಲೂ ನಾನು ಮಧ್ಯಾಹ್ನದ ತರಗತಿಗಳನ್ನು ಮುಗಿಸಿ ಮನೆಗೆ ನಡೆದು ಹೋಗಿದ್ದೆ. 

ಅಪ್ಪ ಬಂದ ಮೇಲೆ ಮನೆಯ ಹತ್ತಿರದಲ್ಲೇ ಇದ್ದ ಡಾ. ಕೃಷ್ಣೇಗೌಡರ ಕ್ಲಿನಿಕ್‌ಗೆ ಕರೆದೊಯ್ದರು. ತಣ್ಣೀರು ಬಟ್ಟೆ ಇನ್ನೂ ಹೆಗಲು ಭುಜದ ಮೇಲಿತ್ತು. ಎರಡನೇ ಅಕ್ಕ ವಿಜಯಾ  ಕ್ಲಿನಿಕ್‌ಗೆ ಹೋಗಿ ಸರದಿ ಟೋಕನ್‌ ತಂದಿದ್ದಳು. ನಮ್ಮ ಸರದಿ ಬಂದಾಗ ಕೈ ನೋಡಿದ ತಕ್ಷಣ ಡಾಕ್ಟರ್‌ ಹೇಳಿದ್ದು, ‘ಫ್ರಾಕ್ಚರ್‌ʼ. ಹಂಗಂದ್ರೆ? ನಮಗ್ಯಾರಿಗೂ ಅದು ಗೊತ್ತಿಲ್ಲ. ಅದೇ ಮೊದಲ ಬಾರಿಗೆ ಇಂತಹದೊಂದು ನಮ್ಮ ಕುಟುಂಬದಲ್ಲಿ ಎದುರಾಗಿದ್ದು. ‘ಕೈ ಮುರಿದಿದೆ. ಅಂದ್ರೆ, ಮೂಳೆ ಮುರಿದಿದೆ. ತಕ್ಷಣ ದೊಡ್ಡ ಆಸ್ಪತ್ರೆಗೆ ಹೋಗಿ, ಎಕ್ಸ್‌ರೇ ಮಾಡಿಸಿ, ಪ್ಲಾಸ್ಟರ್‌ ಹಾಕಿಸಬೇಕು’. ಅಂದರು ಡಾಕ್ಟರು. ಎಲ್ಲಿ? ಅಷ್ಟು ಹೊತ್ತಿನಲ್ಲಿ ಮೂಳೆ ಮುರಿತದ ಚಿಕಿತ್ಸೆಗೆ  ಹತ್ತಿರದ ಆಸ್ಪತ್ರೆಯೆಂದರೆ ಕಾರ್ಪುರೇಷನ್‌ ಹತ್ರ ಇರುವ ಮಾರ್ಥಾಸ್‌ ಆಸ್ಪತ್ರೆ.

ಬೌರಿಂಗ್‌ ಆಸ್ಪತ್ರೆಯ ಫಾರ್ಮಸಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಸೋದರಮಾವ ವೆಂಕಟಸುಬ್ಬಾ ಶಾಸ್ತ್ರಿಗಳಿಗೆ (ಬೆಣ್ಣೆ ಮಾವ) ಅದು ಹೇಗೆ ಸುದ್ದಿ ಮುಟ್ಟಿತೋ ಗೊತ್ತಿಲ್ಲ. ನಾನು ಅಪ್ಪ ಆಟೋದಲ್ಲಿ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಹೋಗುವ ಹೊತ್ತಿಗೆ ಮಾವ ಅಲ್ಲಿಗೆ ಬಂದಿದ್ದರು. ಆಗಲೇ ರಾತ್ರಿಯಾಗುತ್ತಿತ್ತು. ಡಾ. ಜ್ಞಾನ್‌ಚಂದ್‌ ನನ್ನ ಮುರಿದ ಕೈ ಪರಿಶೀಲಿಸಿದರು. ಎಕ್ಸ್‌ ರೇ ಆಯಿತು. ವಿವರವಾದ ಸೂಕ್ಷ್ಮ ಪರೀಕ್ಷೆಗೆ ಅದರ ಚಿತ್ರ ಸಿಗುವುದು ಮಾರನೇ ದಿನ ಎಂದರು. ಅದಕ್ಕಾಗಿ ಕಾಯದೆ  ಡಾಕ್ಟರ್‌ ಅವರ ನಿರ್ದೇಶನದಲ್ಲಿ ನನ್ನ ಭುಜದಿಂದ ಹಿಡಿದು ಮೊಣಕೈವರೆಗೆ ಪ್ಲಾಸ್ಟರ್‌ ಹಾಕಿಯಾಯ್ತು. ಬ್ಯಾಂಡೇಜು ಬಟ್ಟೆಗೆ ಸುಣ್ಣ ಹಾಕಿ (ಆಮೇಲೆ ಗೊತ್ತಾಯ್ತು ಅದಕ್ಕೆ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಅಂತಾರೆ ಅಂತ) ನೀರು ಸಿಂಪಡಿಸಿ ಸಿದ್ಧ ಮಾಡಿಕೊಂಡು, ನನ್ನ ಸಣಕಲ ಕೈಗೆ ಸುತ್ತಿ ಸುತ್ತಿ ಇಟ್ಟರು. ಕುತ್ತಿಗೆಗೆ ಬಟ್ಟೆಪೇಲಿಕೆಯ ಹಾರ ಹಾಕಿ (sling) ಕೈಗೆ ಕಟ್ಟಿದರು. 

ಪುಟ್ಟ ಕೈಗೆ ದೊಡ್ಡ ಬ್ಯಾಂಡೇಜು! ಅದಿನ್ನೂ ಹಸಿ ಇದ್ದಾಗ ಎಷ್ಟು ಭಾರ… ಇದು ಯಾಕಾದ್ರೂ ಹಾಕಿದ್ರೋ ಎನ್ನುವಂತೆ. ಆದರೆ ಆಸ್ಪತ್ರೆಗೆ ಹೋದ ಸಮಯದಿಂದ ಹೊರ ಬರುವವರೆಗೂ ಬೆಣ್ಣೆ ಮಾವ ತನ್ನ ಈ ಪ್ರೀತಿಯ ಅಳಿಯನಿಗೆ ಒಳ್ಳೊಳ್ಳೆಯ ಮುದ್ದಿನ ಮಾತನಾಡುತ್ತಾ ಕೈಗೆ ಬಾಯಿಗೆ ಸವಿಸವಿಯಾದ ಬಿಸ್ಕತ್‌ ಕೊಡುತ್ತಲೇ ಇದ್ದರು! ಆ ರಾತ್ರಿ ಮತ್ತೆ ಆಟೋದಲ್ಲೇ ಮನೆಗೆ ಬಂದಾಗ ಮನೆಯವರಿಗೆ ಸುತ್ತಮುತ್ತಲಿನವರಿಗೆಲ್ಲಾ  ಒಂದೆಡೆ ಗಾಬರಿ, ಕುತೂಹಲ, ಸದ್ಯ ಬಂದರಲ್ಲ ಎಂಬ ಸಂಭ್ರಮ ಒಟ್ಟುಗೂಡಿದಂತೆ… ಕೈಮುರಿದುಕೊಂಡು ಪ್ಲಾಸ್ಟರ್ ಧರಿಸಿದ ಮಹಾಪುರುಷ ನಮ್ಮ ಮನೆತನದಲ್ಲಿ  ನಾನೇ ಮೊದಲಿಗನಿರಬಹುದು !

ಮಾರನೇ ದಿನ ಮತ್ತೆ ಆಸ್ಪತ್ರೆಗೆ ರಥಯಾತ್ರೆ. ಆ ಹೊತ್ತು ಡಾಕ್ಟರ್‌ ಏನು ಹೇಳಿದ್ದರೋ ಗೊತ್ತಿಲ್ಲ. ಆಮೇಲೆ ಗೊತ್ತಾಗಿದ್ದು, ಅದು ಹೇರ್‌ಲೈನ್‌ ಫ್ರಾಕ್ಚರ್‌. ಅಂದರೆ, ಮೂಳೆಯ ಮೇಲೆ ಒಂದು ಗೆರೆಯಷ್ಟು ಸೀಳು ಆಗಿದೆ. ಹೆಚ್ಚಿನ ತೊಂದರೆಯಿಲ್ಲ. ಮಕ್ಕಳ ಕೈ, ಬೆಳೆಯುತ್ತಿರುವ ಅಂಗಗಳು. ಬೇಗ ಕೂಡಿಕೊಳ್ಳುತ್ತೆ. ಅವರು ಹೇಳಿದಂತೆ ಕ್ಯಾಲ್ಸಿಯಂ ಸಾಂಡೋಜ್‌ ಮಾತ್ರೆ, ಹೆಚ್ಚು ಹಾಲು, ತರಕಾರಿ ನನ್ನ ಪಾಲಾಯ್ತು. ಆ ಖಾಸಗಿ ಆಸ್ಪತ್ರೆಯಲ್ಲಿ ಶುಲ್ಕ ಎಷ್ಟು ಕೊಟ್ಟರೋ ನನಗೆ ಗೊತ್ತಿಲ್ಲ. 

ಕಾಲ ಸಾಗಿತು, ಇಪ್ಪತ್ತೋ ಇಪ್ಪತ್ತೈದೋ ದಿನಗಳಲ್ಲಿ ಪ್ಲಾಸ್ಟರ್‌ ಬಿಚ್ಚಿ ಆಯಿತು. ಅಷ್ಟೂ ದಿನ ಪ್ಲಾಸ್ಟರ್‌ ಒಳಗಿನ ಕೈ ನವೆ ನವೆ ಅನುಭವಿಸಿ ಸಾಕಾಗಿತ್ತು. ಮಧ್ಯ ಶಾಲೆಗೆ ಹೋದದ್ದು ಕೆಲವು ದಿನಗಳು. ಶಾಲೆಯಲ್ಲೂ ಅದೊಂದು ವಿಶೇಷ. ಹೆಚ್ಚಿನ ಜಾಗ್ರತೆ, ಕಾಳಜಿ ಇತ್ಯಾದಿ. ಪ್ಲಾಸ್ಟರ್‌ ಬಿಚ್ಚಿದಾಗ, ಮೊದಲೇ ಸಣ್ಣಗಿದ್ದ ತೋಳು, ಇನ್ನಷ್ಟು ಸಣ್ಣದಾಗಿ ಕಂಡಿತ್ತು. ಅಮ್ಮನ ಕಣ್ಣಲ್ಲಿ ನೀರಾಡಿತ್ತು. ಆದರೆ ಕೆಲವೇ ದಿನಗಳಲ್ಲಿ ಕೈ ತುಂಬಿಕೊಂಡು ಸರಿ ಹೋಯಿತು. 

ಕೈ ಸರಿಹೋದ ಮೇಲೆ ಸುಮ್ಮನಿರಲಾಗುತ್ತದೆಯೇ? ಮತ್ತೆ ಆಟ, ಆಟ, ಆಟ. 

ಅದೇ ವರ್ಷ ಮನೆಯ ಹತ್ತಿರ ಒಂದು ಸಂಜೆ ಕ್ರಿಕೆಟ್‌ ಸಂಭ್ರಮ. ಯಾರೋ ಹೊಡೆದ ಬಾಲ್‌ ಹಿಡಿಯಲು ಹೋಗಿ ಮನೆಯ ಮುಂದಿನ ಚಪ್ಪಡಿಯೊಂದರ ಮೇಲೆ ಧೊಪ್ಪೆಂದು ಬಿದ್ದೆ. ಈ ಬಾರಿ ಎಡಗೈ ಮಣಿಕಟ್ಟು ಮೂಳೆ ಮುರಿತ. ಮತ್ತೆ ಆಸ್ಪತ್ರೆ ಯಾತ್ರೆ. ಈ ಬಾರಿ ಬೌರಿಂಗ್‌ ಆಸ್ಪತ್ರೆ. ಅಲ್ಲೇ ಬೆಣ್ಣೆ ಮಾವ ಇದ್ದ ಕಾರಣ ತಪಾಸಣೆ, ಚಿಕಿತ್ಸೆ, ಎಡ ತೋಳಿನ ಭುಜದಿಂದ ಹಿಡಿದು ಅಂಗೈವರೆಗೆ ಪ್ಲಾಸ್ಟರ್‌ ಹಾಕುವುದು ಸುಲಭವಾಯಿತು. ಮತ್ತೆ ನಾಲ್ಕು ವಾರ ಹಾಗೆ ಬಂದು ಹೀಗೆ ಹೋಯಿತು. ಮಧ್ಯದಲ್ಲಿ ನಾಲ್ಕನೇ ಕ್ಲಾಸಿನ ಪರೀಕ್ಷೆಯಾಯಿತು. ಫಲಿತಾಂಶ ಬಂತು.

ಮುಂದಿನ ತರಗತಿಗೆ ಮಲ್ಲೇಶ್ವರದಲ್ಲಿರುವ ಎಂ.ಎಲ್.ಎ. ಶಾಲೆಗೆ ನನ್ನನ್ನ ಸೇರಿಸಲು ನಿರ್ಧಾರವಾಗಿತ್ತು. ಪ್ಲಾಸ್ಟರ್‌ ಹಾಕಿಕೊಂಡಿದ್ದ ಕೈನಲ್ಲೇ ಹೋಗಿ ಶಾಲೆಗೆ ಸೇರಿದ್ದಾಯ್ತು. ಆಗಲೇ ಒಬ್ಬ ಟೀಚರ್‌ ನಗುತ್ತಾ ಹೇಳಿದ್ದರು. ಕೈಮುರಿದುಕೊಳ್ಳುವಷ್ಟು ಚೇಷ್ಟೇನಾ, ಇನ್ನು ನಮ್ಮ ಸ್ಕೂಲಿನ ಮಂಗಗಳ ಜೊತೆ ಸೇರಿದರೆ ಕಾಲು ಕೂಡಾ ಮುರಿಯತ್ತೇನೋ!

ಮೂರನೇ ಮುರಿತ

ಹೊಸ ಶಾಲೆಗೆ ಸೇರಿರುವ ಉತ್ಸಾಹ ನನಗೆ. ಅಕ್ಕಂದರಿಗೂ ಹೊಸ ವರ್ಷದ ಶಾಲೆ ಆರಂಭ. ಎಲ್ಲರಿಗೂ ಸಮವಸ್ತ್ರ ಹೊಲಿಸಲು ಬಟ್ಟೆ ಕೊಳ್ಳಲು ರಾಜಾಜಿನಗರದಲ್ಲಿರುವ ಸಹಕಾರಿ ಸಂಘದ ಅಂಗಡಿಗೆ ಅಪ್ಪನೊಡನೆ ಹೊರಟಿದ್ದೆವು. ನವರಂಗ್‌ ಚಲನಚಿತ್ರ ಮಂದಿರದ ಪಕ್ಕದ ಉದ್ಯಾನವನದ ನಂತರ ಇರುವ ಆಟದ ಮೈದಾನದ ಮೂಲಕ ಹೋಗುವುದು ವಾಡಿಕೆ. ಅಲ್ಲಿ ಇನ್ನೂ ಮಣ್ಣುಗುಡ್ಡಗಳಿತ್ತು. ಅಕ್ಕಂದಿರೆಲ್ಲಾ ಎಗಗರೆಗರಿ ಹೋದರು. ಅಪ್ಪ ಒಂದು ಹೆಜ್ಜೆ ಮುಂದೆ ಇದ್ದರು. ನಾನು ಇನ್ನೂ ದಿಣ್ಣೆ ಏರದೆ ಕೆಳಗಿದ್ದವನು ಎಡಗೈ ಚಾಚಿದೆ. ಅಪ್ಪ ಹಿಡಿದರು ನಾನು ಮೇಲೆ ಹೋಗಲು ಮೈ ಭಾರ ಬಿಟ್ಟು ಜಗ್ಗಿದೆ. ಅಷ್ಟೆ… 

ಮತ್ತೆ ಎಡಗೈ ತೋಳು ಟಕ್ ಅಂತ  ಸೋತು ಬಿತ್ತು. ನನಗೆ ಕೂಡಲೆ ಗೊತ್ತಾಗಿಹೋಯ್ತು. ಮತ್ತೆ ಕೈ ಮೂಳೆ  ಮುರಿದು ಹೋಗಿತ್ತು… 

ಎಲ್ಲರಿಗೂ ಗಾಬರಿ. ಪಾಪ ಅಪ್ಪ ತಾನೆ ಮಗುವಿನ ಕೈ ಮುರಿದು ಬಿಟ್ಟೆನೇನೋ ಎಂದು ಪರಿತಪಿಸಿದರು. ಸುಮ್ಮನೆ ಕುಳಿತಿರಲು ಸಮಯವಲ್ಲ. ಮತ್ತೆ ಆಸ್ಪತ್ರೆಗೆ ಓಟ… ಎಕ್ಸ್‌ರೇ… ಪ್ಲಾಸ್ಟರು. 

ಹೊಸ ಶಾಲೆಗೆ ಹೊಸ ಪ್ಲಾಸ್ಟರ್‌ ಹೊತ್ತು ಪ್ರವೇಶ. ಆಗ ನನ್ನಕ್ಕ ವಿಜಯಾ ಅದೇ ಶಾಲೆಯಲ್ಲಿ ಹತ್ತೇನೇ ತರಗತಿಯಲ್ಲಿದ್ದಳು. ಅವಳು ಅವಳ ಗೆಳತಿ ಇಬ್ಬರೂ ನನ್ನ ಪುಸ್ತಕ ಮತ್ತು ಊಟದ ಚೀಲ ಹೊತ್ತು ಒಯ್ಯುತ್ತಿದ್ದರು. ನಾನು ಅವರೊಡನೆ ನಡೆಯುತ್ತಿದ್ದೆ. 

ಕೈಗೆ ಕಟ್ಟಿದ್ದ ಪ್ಲಾಸ್ಟರ್‌ ಎಷ್ಟು ದಿನ ಇರುತ್ತದೆ? ಅದು ಬಿಚ್ಚಿದ ಮೇಲೆ ಮತ್ತೆ ಆಟ ಓಟ… ಈ ಬಾರಿ ಹೊಸ ಗೆಳೆಯರೊಂದಿಗೆ ಭಾವಗೀತೆ, ನಾಟಕ, ನೃತ್ಯಗಳಲ್ಲಿ ಒಂದಾಗಿಬಿಟ್ಟೆ. ಶಾಲೆಯ ಪಾಠಗಳು ತನ್ನ ಪಾಡಿಗೆ ತಾವು ನಡೆದಿದ್ದೆವು. ಪ್ರಾಥಮಿಕ ಹಂತದ ರಾಘವೇಂದ್ರ ಶಾಲೆಯಲ್ಲಿಯೂ ನಮಗೆ ಪಾಠದೊಂದಿಗೆ ಸಾಕಷ್ಟು ಹಾಡು, ನೃತ್ಯ, ನಾಟಕದಲ್ಲಿ ತಾಲೀಮು ಕೊಟ್ಟಿದ್ದರಿಂದ ಈ ಹೊಸ ಶಾಲೆಯ ಹೊಸ ನೀರಿನಲ್ಲಿ ಸುಲಭವಾಗಿ ಈಜಲು ಸಾಧ್ಯವಾಯಿತು. 

ಎಡ ತೋಳು, ಮಣಿಕೈ ಮುರಿದ ಸಮಯದಲ್ಲಿ ಡಾಕ್ಟರರ ಸಲಹೆಯಂತೆ ಕೊಂಚ ಕ್ಯಾಲ್ಸಿಯಂ ಹೆಚ್ಚಾಗಿಯೇ ಹೊಟ್ಟೆ ಸೇರುತ್ತಿತ್ತು. ಸಿಹಿಯಾಗಿರತ್ತಿದ್ದ ಅವು ಜೋಬಿನಲ್ಲಿ ಕಡಲೆ ಪುರಿಯಂತೆ ಸೇರಿಸಿಕೊಂಡ ದಿನಗಳೂ ಇದ್ದವು. ತುಂಬಾ ತಿನ್ಬೇಡಾ ಎನ್ನುವ ಬೆಣ್ಣೆ ಮಾವನ ಸಲಹೆ ಕಿವಿಗೆ ಬೀಳುತ್ತಿರಲೇ ಇಲ್ಲ ! 

ನನಗೆ ಇಬ್ಬರು ಸೋದರ ಮಾವಂದಿರು. ಮುಂದಿನೆರೆಡು ವರ್ಷಗಳಲ್ಲಿ ಇಬ್ಬರೂ ಮಾವಂದಿರರ ಮಕ್ಕಳೊಡನೆ ಸೇರಿಕೊಂಡು ಬೇಕಾದಷ್ಟು ಪ್ರವಾಸ, ಬೆಟ್ಟ ಕಾಡು ಸುತ್ತಿದ್ದಾಗಿತ್ತು, ಈಜು ಕಲಿಯುವ ಸಂಭ್ರಮವೂ ಸೇರಿತ್ತು. 

ಆರನೇ ಕ್ಲಾಸ್‌ಗೆ  ಬರುವಷ್ಟರಲ್ಲಿ… ಏನು? ಇನ್ನೊಂದು ಫ್ರಾಕ್ಚರ್‌ ತಾನೆ ಎನ್ನಬೇಡಿ. ಈ ಬಾರಿ ಫ್ರಾಕ್ಚರ್‌ ಅಲ್ಲ. ಬದಲಿಗೆ ಎಡಗೈ ತೋಳು ವಿಪರೀತ ನೋವು. ಮಂಕಾಗಿ ಹೋದೆ. ಜ್ವರ. ಮತ್ತೆ ಮೂಳೆ ವೈದ್ಯರಲ್ಲಿಗೆ. ಮಾಮೂಲಿ ಎಕ್ಸ್‌ ರೇ ಆದ ಮೇಲೆ ಕೈ ಅತ್ತ ಇತ್ತ ತಿರುಗಿಸಿ ಮುರುಗಿಸಿ ಪರಿಶೀಲಿಸಿ, ವೈದ್ಯರು ಹೇಳಿದ್ದು ಒಂದು ಬಯಾಪ್ಸಿ ಮಾಡಿ ನೋಡೋಣ. ‘ಅಂದ್ರೆ?ʼ ಆಪರೇಷನ್‌ ಮಾಡಿ ಮೂಳೆಯಿಂದ ಸ್ವಲ್ಪ ಭಾಗ ತೆಗೆದು ಪರಿಶೀಲಿಸುವುದು. ಏನಾಗಿದೆ ಅಂತ ಗೊತ್ತಾಗುತ್ತೆ. 

ಆಪರೇಷನ್‌… ನಮ್ಮ ಮನೆಯಲ್ಲಿ ನನಗೇ ಮೊದಲು! 

ಆಪರೇಷನ್ನಿಗೆ ಇನ್ನೂ ಮೂರು ದಿನ ಇರುವಾಗಲೇ ಬೌರಿಂಗ್‌ ಆಸ್ಪತ್ರೆಯಲ್ಲಿ ದಾಖಲಾದೆ. ರಕ್ತ ಮತ್ತಿತರ ಪರೀಕ್ಷೆಗಳು. ಪಾಪ ಮಗು ಎಂದು ನೋಡಲು ಬಂಧುಬಳಗದ ಚಿಕ್ಕ ದೊಡ್ಡ ದಂಡು ಆಗಲೇ ಬರಲಾರಂಭಿಸಿತ್ತು. ಚಿಕ್ಕಪ್ಪ ಚಿಕ್ಕಮ್ಮಗಳು, ಅಜ್ಜಿ ತಾತಗಳು, ಮಾವ ಅತ್ತೆಗಳು, ಅಮ್ಮ ಅಪ್ಪನ ಗೆಳೆಯ ಗೆಳೆತಿಯರು, ಹತ್ತಿರದ-ದೂರದ ಬಂಧುಗಳು. ಓಹೋ ಅದೆಂತಹ ಅನುಭವ. ಬಂದವರೆಲ್ಲಾ ಹಣ್ಣುಗಳು, ಮನೆಯಲ್ಲೇ ಮಾಡಿದ ಸಿಹಿತಿಂಡಿ ತರುತ್ತಿದ್ದರು. ಮೊದಮೊದಲು ಆತಂಕದಲ್ಲಿದ್ದ ಅಮ್ಮ ಅಪ್ಪ ಅಕ್ಕಂದಿರಿಗೆ ಈ ಎಲ್ಲ ಬಂಧುಗಳ ಭೇಟಿ, ಅವರ ಸಾಂತ್ವನದ ನುಡಿಗಳು ನಿರಾಳಗೊಳಿಸಿತೇನೋ.

ನನ್ನ ಆಪರೇಷನ್‌ ದಿನದ ಹೊತ್ತಿಗೆ ಪರಿಸ್ಥಿತಿ ಕೊಂಚ ತಿಳಿಯಾಗಿತ್ತು. ಆಪರೇಷನ್‌ ಆಗಿ ಬಂದ ಫಲಿತಾಂಶ ಮಾತ್ರ ದೊಡ್ಡವರನ್ನೆಲ್ಲಾ ಸ್ವಲ್ಪ ಆತಂಕಕ್ಕೆ ಈಡು ಮಾಡಿತ್ತು. ಎಡಗೈ ತೋಳಿನ ಮೂಳೆ (ಅದರ ಹೆಸರು ಹ್ಯೂಮಸ್‌) ಮಜ್ಜೆ ಅಷ್ಟು ಆರೋಗ್ಯಕರವಾಗಿಲ್ಲ. ಯಾವುದೇ ರೀತಿಯ ಒತ್ತಡ, ಭಾರ, ಪೆಟ್ಟು ತಡೆದುಕೊಳ್ಳಲಾಗದು. ಕ್ಯಾನ್ಸರ್‌ ಅಲ್ಲ, ಆದರೆ ಹಾಗಾಗುವ ಸಾಧ್ಯತೆ ತಳ್ಳಿಹಾಕಲಾಗದು. ಮೊದಲ ಬಾರಿ ಫ್ರಾಕ್ಚರ್‌ ಆದಾಗ ಎಕ್ಸ್‌ರೇ ನೋಡಿಯೇ ಡಾ. ಜ್ಞಾನ್‌ಚಂದ್‌ ಇಂತಹದೊಂದು ಇರಬಹುದು ಎಂದು ಹೇಳಿದ್ದರಂತೆ. 

ಆಯಿತು. ಮುಂದೇನು? ಔಷಧಿ. ಬೇಕಾದಷ್ಟು ತರಕಾರಿ, ಹಾಲು, ಹಣ್ಣು, ಆಹಾರ. ಎಡಗೈಗೆ ಒತ್ತಡವಿಲ್ಲದ ಆಟೋಟ. ಕೆಲ ದಿನಗಳಲ್ಲೇ ನನ್ನ ಕೈಯ ತೊಂದರೆಯ ವಿಚಾರ ನನಗೆ ಮರೆತು ಹೋಗಿತ್ತು. ಏಳನೇ ತರಗತಿ ಮುಗಿಯಿತು. ಮಲ್ಲೇಶ್ವರದ ಎಂ.ಎಲ್.‌ಎ. ಶಾಲೆಯಿಂದ ಗಾಂಧಿನಗರ ಹೈಯರ್‌ ಸೆಕೆಂಡರಿ ಶಾಲೆಗೆ ರವಾನೆ. ಎಂಟನೇ ತರಗತಿಯಾಯಿತು. ಆಟ, ಒಟ, ಕ್ರಿಕೆಟ್, ಎನ್.ಸಿ.ಸಿ… ಒಂಭತ್ತನೇ ತರಗತಿ… ಇನ್ನೊಂದು ಫ್ರಾಕ್ಚರ್‌? ಊಹು… ಮತ್ತೆ ‘ಅಮ್ಮಾ… ಕೈ ನೋವು…’

ಈಗಾಗಲೇ ಸಾಕಷ್ಟು ಅನುಭವ ಇದ್ದಕಾರಣ ನೇರವಾಗಿ ಆಸ್ಪತ್ರೆ, ಎಕ್ಸ್‌ರೇ ,ಮತ್ತದೇ ಸಲಹೆ… ಈ ಬಾರಿಯೂ ಆಪರೇಷನ್‌. 

ಅದೇ ಬೌರಿಂಗ್‌ ಆಸ್ಪತ್ರೆಯಲ್ಲಿ ಅದೇ ವಾರ್ಡ್‌ನಲ್ಲಿ ಮಲಗಿದ್ದಾಯಿತು. ಇಷ್ಟು ಹೊತ್ತಿಗೆ ದೊಡ್ಡವನಾದ ನನ್ನನ್ನ ನೋಡಲು ಬಹಳ ಜನ ಬರಲಿಲ್ಲ. ಹತ್ತಿರದವರೆಲ್ಲರೂ ಖಂಡಿತಾ ಬಂದು ಸಾಂತ್ವನ ಹೇಳಿದ್ದರು. ಆಪರೇಷನ್‌ ಸಮಯದಲ್ಲಿ ವೈದ್ಯರು ತೋಳಿನ ಮೂಳೆಗೆ ಶಕ್ತಿ ಕೊಡಬೇಕೆಂದರೆ ಏನಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಹೇಳಿದರಂತೆ. ಸರಿ ಅಪ್ಪ ಇನ್ನೇನು ಹೇಳಿಯಾರು, ವೈದ್ಯರ ಸಲಹೆಯೇ ಅಂತಿಮ. ಲೋಹದ ಸಲಾಕೆ ಇಟ್ಟರೆ ಮೂಳೆ ತಡೆದುಕೊಳ್ಳುವ ಸಾಧ್ಯತೆ ಇಲ್ಲ ಎಂದು ನಿರ್ಧರಿಸಿದ ವೈದ್ಯರು ಸೊಂಟದ ಮೂಳೆಗಳನ್ನು ಅಲ್ಪಸ್ವಲ್ಪ ಕೆರೆದು ತೋಳಿನ ಮೂಳೆಯೊಳಗೆ ತುಂಬಿದರಂತೆ. ಸಾಧ್ಯಾಸಾಧ್ಯತೆಯ ಪರಿಶೀಲನೆ.

ಆಗ ವಾರ್ಡಿನಲ್ಲಿ ನನ್ನ ಪಕ್ಕದ ಹಾಸಿಗೆಯಲ್ಲಿ ಒಬ್ಬರು ತಮಿಳು ಮಾತನಾಡುವ ವ್ಯಕ್ತಿ.  ಹೆಸರು ಏಕಾಂಬರಂ. ಸೈನ್ಯದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದವರು. ಹಗಲು ರಾತ್ರಿ ಯಾವುದಾವುದೋ ಮಂತ್ರಗಳನ್ನು ಹೇಳಿಕೊಳ್ಳುತ್ತಿದ್ದರು. ತಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಗೆ ಬಂದರೆ, ಯಾಕೆ ಬಂದು ಸಮಯ ದಂಡ ಮಾಡ್ಕೋತೀರಿ, ಹೋಗಿ ಎಂದು ಬಿಡುತ್ತಿದ್ದರು. ನನ್ನ ಜೊತೆ ಸೈನ್ಯ, ಯುದ್ಧ, ಊರೂರುಗಳ ಓಡಾಟ ಎಂದೆಲ್ಲಾ ಬೇಕಾದಷ್ಟು ಮಾತನಾಡುತ್ತಿದ್ದರು. ನನಗೆ ಆಪರೇಷನ್‌ ಆಗಿ, ಪ್ರಜ್ಞೆ ಬರುವ ಹೊತ್ತಿಗೆ ಬೇಕಾದಷ್ಟು ಅಳುತ್ತಿದ್ದೆ. ಅದೇ ದಿನ ಅವರಿಗೂ ಏನೋ ಆಪರೇಷನ್‌, ಅವರನ್ನು ಸಂಜೆಯ ಹೊತ್ತಿಗೆ ವಾರ್ಡಿಗೆ ಕರೆತಂದರು. ಅವರು ಎಚ್ಚರಾಗಿದ್ದಾಗಿನಿಂದ ಯಾವುದೋ ಮಂತ್ರ ಹೇಳುತ್ತಿದ್ದರು. 

ಆಪರೇಷನ್‌ ನಂತರ ನಾನು ಓಡಾಡುವಂತಾದರೂ ಇನ್ನೂ ಕೆಲ ಕಾಲ ಆಸ್ಪತ್ರೆಯಲ್ಲೇ ಇರಬೇಕಿತ್ತು. ಆಗ ಶುರುವಾಗಿತ್ತು ಆಸ್ಪತ್ರೆಯ ನಿಜವಾದ ದರ್ಶನ, ಪರಿಚಯ. ಕೈಗೆ ಕಟ್ಟಿದ ಬ್ಯಾಂಡೇಜ್‌ ಇಟ್ಟುಕೊಂಡೇ ಹೋಗಿ  ಒಂಟಿಯಾಗಿದ್ದ ವಯಸ್ಸಾದ ಮುದುಕರೊಂದಿಗೆ ಮಾತುಕತೆ, ಯಾರೋ ತೊಂದರೆಯಲ್ಲಿರುವವರಿಗೆ ಅಗತ್ಯವಾದ ಯಾವುದಾದರೂ ಚಿಕ್ಕಪುಟ್ಟ ಸಹಾಯ ಮಾಡಿಕೊಡುವುದು. ಇಷ್ಟರ ಮೇಲೆ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಬೆಣ್ಣೆ ಮಾವನಿಗೆ ಹೇಳಿ ನೆರವು ಕೊಡಿಸುವುದು, ಹೀಗೆ. ವೈದ್ಯರು ವಾರ್ಡಿಗೆ ಬಂದು ಪೇಷೆಂಟ್‌ ಎಲ್ಲಿ, ಎಂದಾಗ ಅಮ್ಮ ನನ್ನನ್ನು ಹುಡುಕಿಕೊಂಡು ಬರಬೇಕಿತ್ತು!

ಇನ್ನೇನು ಈ ಮೂಳೆಪುರಾಣವನ್ನು ಮುಗಿಸಬಹುದಲ್ಲ. ಇಲ್ಲ, ಅದು ಅಷ್ಟು ಸುಲಭವಾಗಿ ಮುಗಿಯಲಿಲ್ಲ. 

ನನ್ನ ಒಂಭತ್ತನೇ ತರಗತಿಯ ಕೊನೆಯ ಹೊತ್ತಿಗೆ (೧೯೮೦) ಅಪ್ಪ ತಾನು ಉದ್ಯೋಗಿಯಾಗಿದ್ದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಹೋದ್ಯೋಗಿಗಳೊಡನೆ ಮುಂದಾಳಾಗಿ ಸೇರಿಕೊಂಡು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು  ಮುಷ್ಕರ ಹೂಡಿದ್ದರು. ನೌಕರರ ನ್ಯಾಯವಾದ ಬೇಡಿಕೆಗಳಿಗೆ ಸರ್ಕಾರ ಅನುಮೋದನೆ ನೀಡಿತೇನೋ ಸರಿ. ಆದರೆ ಅಪ್ಪ ಮತ್ತು ಅವರೊಂದಿಗಿದ್ದ ಕೆಲವು ನಾಯಕರನ್ನು ಬೆಂಗಳೂರಿನ ಕೇಂದ್ರ ಕಛೇರಿಯಿಂದ ವರ್ಗ ಮಾಡಿದರು.  ಅಪ್ಪನೊಂದಿಗೆ ನಮ್ಮ ಪಾಲಿಗೆ ಮೈಸೂರು!

ಮೈಸೂರಿನಲ್ಲಿ  ಹತ್ತನೇ ತರಗತಿಗೆ ಶಾರದಾ ವಿಲಾಸ ಹೈಸ್ಕೂಲು. ಮುಂದೆ ಪೀಯೂಸಿಗೆ ಅದರದ್ದೇ ಕಾಲೇಜು. ಪಾಠ, ಆಟ, ನಾಟಕ, ಗೆಳೆಯರ ತಂಡದೊಡನೆ ಸುತ್ತಾಟ. ಸೈಕಲ್‌ ಹತ್ತಬಾರದು ಎಂಬ ನಿಷೇಧವಿದ್ದರೂ ಕದ್ದು ಮುಚ್ಚಿ ಸೈಕಲ್‌ ಸವಾರಿ ನಡೆದಿತ್ತು. ಇಷ್ಟರ ಮಧ್ಯ ಗೆಳೆಯರೊಡನೆ ಎನ್‌.ಸಿ.ಸಿ. ಪ್ರವೇಶವಾಯಿತು.

ಮೊದಲ ಪಿಯುಸಿಯಲ್ಲಿ ಇದ್ದಾಗ ಮೂರ್ನಾಲ್ಕು ಕಿಲೋಮೀಟರ್‌ ಓಟದ ಸ್ಪರ್ಧೆಗಳಲ್ಲಿ ಬಹುಮಾನ. ಬಂದೂಕಿನಿಂದ ಗುಂಡು ಹಾರಿಸುವ ಕೌಶಲ್ಯದಲ್ಲಿ ಪರಿಣತಿ. ಕ್ಯಾಂಪ್‌ನಲ್ಲಿ ಒಳ್ಳೆಯ ಪ್ರದರ್ಶನ. ಕವಾಯತು ಮತ್ತು ಹಗ್ಗ ಹಿಡಿದು ಹತ್ತುವುದರಲ್ಲೂ ಮುಂದಾಗಿಬಿಟ್ಟೆ. ಮನೆಯಲ್ಲಿ ಇವುಗಳೆಲ್ಲಾ ವಿವರವಾಗಿ  ಗೊತ್ತಿತ್ತಾ ಇಲ್ಲವಾ… ನಾನೇ ಮುಂದಾಗಿಬಿಟ್ಟೆನಾ… ನನ್ನ ಕೈಯ್ಯಿನ ಸಮಸ್ಯೆ ಬಗ್ಗೆ ಯಾರಿಗೂ ಹೇಳಲಿಲ್ಲವಾ…

ನಮ್ಮ ಪರಿಣತಿ ಕೌಶಲ್ಯಗಳನ್ನು ಎನ್‌.ಸಿ.ಸಿ. ಬೆಟಾಲಿಯನ್‌ನವರು ಗುರುತಿಸುತ್ತಿದ್ದರು. ಅದರಂತೆ ಬೆಳಗಾವಿಯ ಆರ್ಮಿ ಅಟಾಚ್‌ಮೆಂಟ್‌ ಕ್ಯಾಂಪ್‌ಗೆ ಒಂದೇ ತರಗತಿಯವರೂ ಆತ್ಮೀಯ ಗೆಳೆಯರೂ ಆಗಿದ್ದ ನಾವು ಮೂವರು ಆಯ್ಕೆಯಾದೆವು – ಪ್ರಸಾದ್‌ ಎಸ್‌.ಎನ್‌., ಶಾಂತಪ್ರಿಯ ಮತ್ತು ನಾನು. ಕ್ಯಾಂಪ್‌ಗೆ ಹೋಗಲು ರೈಲು ಟಿಕೆಟ್‌ ಪಡೆಯಲು ಬೆಟಾಲಿಯನ್‌ ಕಛೇರಿಗೆ ಹೋಗುವುದಿತ್ತು. ನಮ್ಮ ಮನೆಗೆ ನಮ್ಮ ತಾತ (ಅಮ್ಮನ ಸೋದರ ಮಾವ) ಡಾ. ಜಿ. ರಾಮಕೃಷ್ಣ ಬಂದಿದ್ದರು. ಗೆಳೆಯರೊಡನೆ ಸೈಕಲ್‌ ಹತ್ತಿ ಹೊರಟಾಗ ಅವರು ಕುಶಾಲಿಗೆ , ʼಇನ್ನೇನಪ್ಪಾ ಹನುಮಂತರಾಯ ಈಗೇನು ಕೈಯೋ ಕಾಲೋ…?’ ಎಂದರು. ನನ್ನ ಮೂಳೆ ಮುರಿತಗಳ ಪೂರ್ವಕಥೆ ಗೊತ್ತಿದ್ದ ಮನೆಯವರೆಲ್ಲರೂ (ನನ್ನನ್ನೂ ಸೇರಿ) ನಕ್ಕಿದ್ದೆವು. 

ಮೈಸೂರು ಜಿಲ್ಲಾಧಿಕಾರಿಗಳ ಕಛೇರಿಯ ಬಳಿಯ ಬೆಟ್ಯಾಲಿಯನ್‌ ತಲುಪಿದಾಗ, ಕಮಾಂಡೆಂಟ್‌ ಇರಲಿಲ್ಲ. ಅವರು ಬಂದ ಮೇಲೆ ಟಿಕೆಟ್‌ ಮತ್ತು ಹಣ ಕೊಡುವುದಾಗಿ ಹೇಳಿದರು. ನಮಗೆ ಕೆಲಸವಿರಲಿಲ್ಲ. ಆಗಲೇ ಅಲ್ಲಿದ್ದ ದೊಡ್ಡ ಮರಕ್ಕೆ ಕಟ್ಟಿದ್ದ ರಟ್ಟೆ ಗಾತ್ರದ ಹಗ್ಗ ನಮ್ಮನ್ನು ಕರೆಯಿತು. ಗೆಳೆಯರ ಒತ್ತಾಸೆಗೆ ಮಣಿದು ಕಾಲಿನಲ್ಲಿ ಹಗ್ಗ ಹಿಡಿಯದೆ ಬರಿ ಕೈಯಲ್ಲೇ ಹಗ್ಗ ಹತ್ತುವ ಕೌಶಲ್ಯ ತೋರಲು ಮುಂದಾದೆ. ಹತ್ತುತ್ತಾ ಹೋದೆ, ಅದೇ ಕಾಲಕ್ಕೆ ಕೆಳಗೆ ನಿಂತಿದ್ದ ಗೆಳೆಯರಿಗೆ ಅದರ ತಂತ್ರಗಾರಿಕೆ ವಿವರಿಸುತ್ತಿದ್ದೆ. ಸಾಕಷ್ಟು ಮೇಲೆ ಹೋದ ಮೇಲೆ ಒಮ್ಮೆ ಎಡಗೈ ಮೇಲೆ ಮೈ ಭಾರ ಬಿಟ್ಟು ಏನೋ ತೋರಿಸಿ ಹೇಳಲು ಬಲಗೈ ಬಿಡುವು ಮಾಡಿಕೊಂಡೆ…

ʼಲಠಾರ್‌…ʼ ಕೊಂಬೆ ಮುರಿದ ಶಬ್ದ. ಎಡಗೈ ಜೋತು ಬಿದ್ದಿತು. ಆದರೆ ಹಗ್ಗ ಹಿಡಿದಿತ್ತು. ಕ್ಷಣ ಮಾತ್ರದಲ್ಲಿ ಪರಿಸ್ಥಿತಿ ಏನೆಂದು ನನಗೆ ಗೊತ್ತಾಗಿಹೋಯ್ತು. ಕಣ್ಣೆವೆ ಬಡಿಯುವಷ್ಟರಲ್ಲಿ ಬಲಗೈ ಹಗ್ಗ ಹಿಡಿದಿತ್ತು. ದೇಹ ಕೆಳ ಬೀಳಲಿಲ್ಲ. ಎಡಗೈಯ್ಯೋ ಮೇಳೇಳದೆ ಜೋಲಾಡಿತು. ಮೈ ಕೆಳಜಗ್ಗುತ್ತಿತ್ತು. ಕೆಳಗಿದ್ದವರಿಗೆ ಕೂಗಿ ಹೇಳಿದೆ ‘ನನ್ನ ಕೈ ಮುರಿದಿದೆ. ನೀವು ದೂರ ಹೋಗಿ. ನಿಮ್ಮ ಮೇಲೆ ಬೀಳುವುದು ಬೇಡ’. ಅವರು ಅದನ್ನ ನಂಬಲಿಲ್ಲ. ನಗುತ್ತಿದ್ದರು.

ನಾನು ಬಲಗೈಯಲ್ಲೇ ಕೊಂಚಕೊಂಚವೇ ಸಡಿಲ ಬಿಗುವು ಮಾಡಿಕೊಂಡು ಕೆಳಕ್ಕೆ ಜಾರುತ್ತಾ ಬಂದೆ. ಬಲ ಅಂಗೈನಲ್ಲಿ ಬೊಬ್ಬೆಗಳಂತೆ ಗಾಯವಾಗುತ್ತಿತ್ತು. ನಾನು ಕೆಳಮುಟ್ಟುವ ಪರಿ ನೋಡಿ ಗೆಳೆಯರು ಹಿಡಿದುಕೊಂಡರು, ನಾನು ಮೂರ್ಛಿತನಾಗಿದ್ದೆ. ಎಚ್ಚರವಾದಾಗ ಬೆಟಾಲಿಯನ್‌ನ ಕಮಾಂಡೆಂಟ್‌ ಬಂದಿದ್ದರು. ಏನು ಮಾಡಬೇಕೆಂಬ ಚರ್ಚೆ ನಡೆಯುತ್ತಿತ್ತು. ಕೇಳಿಸಿಕೊಂಡೆ.’ ಮನೆಗೆ ಕರೆದುಕೊಂಡು ಹೋಗಿ. ಅಲ್ಲಿ ನನ್ನ ಮೂಳೆಯ ಚರಿತ್ರೆ ಇದೆ.’ ಹೇಳಿದೆ.

ಮನೆಯಲ್ಲಿ ಎಲ್ಲರಿಗೂ ಗಾಬರಿ. ತಾತ ಬಹಳ ಬೇಸರಿಸಿಕೊಂಡರು. ಈ ಬಾರಿ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ದಾಖಲು. ಡಾ.ಯೋಗಾನರಸಿಂಹಾಚಾರ್‌ ಪರಿಶೀಲಿಸಿದರು. ಎಡಗೈ ತೋಳಿನ ಮೂಳೆ ಎರಡು ತುಂಡಾಗಿತ್ತು. ಆದರೆ ತೋಳಿನ ಮಾಂಸ, ಚರ್ಮ ಹರಿದು ಹೊರಗೆ ಬಂದಿರಲಿಲ್ಲ. ಮೂಳೆ ಕೂಡಿಸಲು ಆಪರೇಷನ್‌ ಮತ್ತು ಸ್ಟೀಲ್‌ ಸಲಾಕೆ ಇಡುವುದೇ ಸರಿ ಎಂಬ ಸಲಹೆ. ಆಪರೇಷನ್ ಮಾಡಲು ರಕ್ತ ಬೇಕು.

ನನ್ನ ಅಕ್ಕಂದಿರು, ಸ್ನೇಹಿತರು ರಕ್ತ ದಾನಿಗಳಿಗಾಗಿ ಓಡಾಡಿದರು. ಲತಾ ಅಕ್ಕ ಬಲ್ಲಾಳ್‌ ವೃತ್ತದಲ್ಲಿ ಯಾರಿಗೋ ಕಾಯನ್‌ ಭಾಕ್ಸ್‌ನಿಂದ ಫೋನ್‌ ಮಾಡಿ ರಕ್ತ ದಾನಿಗಳಿಗಾಗಿ ಕೇಳುತ್ತಿರುವುದನ್ನು ಕೇಳಿಸಿಕೊಂಡ ಎನ್.ಐ.ಇ. ಕಾಲೇಜಿನ ಶಿಕ್ಷಕರಾಗಿದ್ದ  ಕೌಸ್ತುಭನ್‌ರವರು ಪರಿಸ್ಥಿತಿಯ ತುರ್ತನ್ನು ತಿಳಿದು ತಾವಾಗಿಯೆ ಮುಂದಾಗಿ, ತಮ್ಮ ಇಬ್ಬರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ರಕ್ತ ಕೊಟ್ಟರು. ಆಗ ರಕ್ತವನ್ನು ಗಾಜಿನ ಬಾಟಲಿನಲ್ಲಿ ಇಳಿಸಿಕೊಳ್ಳುತ್ತಿದ್ದದ್ದು. ಆತ ಬಿಸಿಬಿಸಿ ರಕ್ತದ ಬಾಟಲಿಯನ್ನು ನನ್ನ ಕೈಗೇ ತಂದು ಕೊಟ್ಟಿದ್ದರು. ನಮ್ಮ ಮನೆಯವರಲ್ಲಿ ರಕ್ತ ಹಾಗೆ ಹಾಕಿಸಿಕೊಂಡವನೂ ನಾನೇ ಮೊದಲು!

ಕಾಲು ಮುರಿದು ಕೈಗೆ!

ಆಪರೇಷನ್‌ಗೆ ತಯ್ಯಾರಿ. ಅಪ್ಪನಿಂದ ಆಸ್ಪತ್ರೆಯ ಎಲ್ಲ ಪತ್ರಗಳಿಗೆ ಸಹಿ. ನನಗೆ ಎಚ್ಚರಿಕೆಯಾದಾಗ ಮತ್ತು ಎಲ್ಲವೂ ತಿಳಿಯಲಾರಂಭಿಸಿದಾಗ ಅರಿವಿಗೆ ಬಂದದ್ದು ಬಲ ಕಾಲಿಗೆ ಏನೋ ಆಗಿದೆ. ಆಪರೇಷನ್‌ ಟೇಬಲ್‌ ಮೇಲೆ ವೈದ್ಯರು ನಡೆಸಿದ ಪರಿಶೀಲನೆ ಮತ್ತು ಸಮಾಲೋಚನೆಯಲ್ಲಿ ಅವರು ನಿರ್ಧರಿಸಿದ್ದು, ಕೈ ಮೂಳೆಯಲ್ಲಿ ಸ್ಟೀಲ್‌ ಸಲಾಕೆ ಇಡಲಾಗದು. ತಡೆಯುವುದಿಲ್ಲ. ಅದಕ್ಕೆ ಪರಿಹಾರವೆಂದರೆ ಕೆಳಗಾಲಿನ ಹಿಂದಿನ ಮೂಳೆ (ಫಿಬುಲಾ)ಯನ್ನು ಉದ್ದಕ್ಕೆ ಸೀಳಿ ಒಂದು ಭಾಗವನ್ನು ಕೈಮೂಳೆಯಲ್ಲಿಟ್ಟು ಕೂಡಿಸುವುದು. ಅದು ಕೈ ಮೂಳೆಯೊಡನೆ ಕೂಡಿಕೊಳ್ಳುತ್ತದೆ.

ಅರ್ಥಾತ್‌ ಕಾಲು ಮುರಿದು ಕೈಗೆ ಕೊಟ್ಟಿದ್ದರು!  ನನಗೆ ಗೊತ್ತಿರುವವರಲ್ಲಿ ಇದು ನನಗೇ ಮೊದಲು!

ಈಗಲೂ ಯಾವುದಾದರೂ ಮಕ್ಕಳು ಫ್ರಾಕ್ಚರ್‌ ಆದ ಕೈಗೆ ಬ್ಯಾಂಡೇಜ್‌ ಹಾಕಿಕೊಂಡಿರುವುದು ಕಂಡಾಗಲೆಲ್ಲಾ ನಾನು ನನ್ನ ಬಾಲ್ಯಕ್ಕೆ ಓಡಿರುತ್ತೀನಿ. ನಮ್ಮ ಮನೆಯಲ್ಲಿ ಪ್ರೀತಿ ಆರೈಕೆಗಳಿದ್ದಾಗಲೂ ಶಾಲೆಯಲ್ಲಿ ಯಾವುದಾದರೂ ಮಕ್ಕಳು ಕುಂಟ ಎಂದಿದ್ದಾಗ, ಅಥವಾ ಬೇಕೆಂದೇ ಕೈ ತಗಲಿಸಿಕೊಂಡು ಓಡಿದಾಗ, ಬೀಳಿಸಿದಾಗ ಅಥವಾ ಯಾವುದಾದರೂ ಟೀಚರ್‌ ಫ್ರಾಕ್ಚರ್‌ ವಿಚಾರವನ್ನೇ ಇಟ್ಟುಕೊಂಡು, ನನ್ನ ಯಾವುದೋ ತಪ್ಪು ಅಥವಾ ನ್ಯೂನತೆಯನ್ನು ಎಲ್ಲ ಮಕ್ಕಳೆದುರು ಹಂಗಿಸಿದ್ದಾಗ ಅವಮಾನವಾಗುತ್ತಿದ್ದುದು, ಕಣ್ಣಲ್ಲಿ ನೀರಾಡುತ್ತಿದ್ದುದು ಸುಳ್ಳಲ್ಲ. ಅದೇ ಸಮಯದಲ್ಲಿ ಪಕ್ಕದಲ್ಲಿ ಕೂರುವ ಗೆಳೆಯ ಗೆಳತಿಯರು ಮೃದುವಾಗಿ ಬೆನ್ನಿಗೆ ತಟ್ಟಿ ನಾವಿದ್ದೀವಿ ಅಂತ ಸಾಂತ್ವನ ಹೇಳುತ್ತಿದ್ದುದು, ಹೋಗಲಿ ಬಿಡು ಎಂದು ಹೇಳುತ್ತಿದ್ದುದು, ತಾವೇ ನನ್ನ ನೋಟ್ಸ್‌ ಬರೆದುಕೊಡುತ್ತಿದ್ದುದು ನೆನಪಾಗಿ ಮನಸ್ಸು ಆರ್ದ್ರವಾಗುತ್ತದೆ. 

ಮುಂದೆ? ನನ್ನ ಕೈ ಕಾಲು ಆರೋಗ್ಯವಾಗಿದೆ. ಆದರೂ ಮನೆಮಂದಿ, ಗೆಳೆಯರು, ಬಂಧುಗಳೆಲ್ಲಾ ನನ್ನ ಕೈ ಕುರಿತು ಸದಾ ಕಾಳಜಿ ತೋರುತ್ತಲೇ ಇರುತ್ತಾರೆ. ಈಗಲೂ!

‍ಲೇಖಕರು ವಾಸುದೇವ ಶರ್ಮ

April 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: