ಕಾಲದೊಳಗೆ ಅಡಗಿದ ಕನ್ನಡಿಗಳು

ಡಾ ಎಚ್.ಎಲ್‌ ಪುಷ್ಟ

‘ಅವಧಿ’ ಜಿ. ಎನ್. ಮೋಹನ್ ಮೂರು ದಿನಗಳ ಹಿಂದೆ ಕರೆಮಾಡಿ ಈ ಭಾನುವಾರದ ಸಂಚಿಕೆಗೆ ನೀವು ಅತಿಥಿ ಸಂಪಾದಕರಾಗಬೇಕು ಎಂದರು. ಸಂಪಾದಕ ಎನ್ನುವ ಪದ ಕೇಳಿದರೆ ನನಗೆ ನಿದ್ದೆಯಲ್ಲೂ ಬೆಚ್ಚಿಬೀಳುವ ಹಾಗೆ ಆಗುತ್ತದೆ.

ನನ್ನ ಗಂಡ ಆರ್. ಜಿ. ಹಳ್ಳಿ ನಾಗರಾಜ್ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಹಾಗೂ ನಮ್ಮದೇ ಸಾಹಿತ್ಯ ಪತ್ರಿಕೆ ‘ಅನ್ವೇಷಣೆ’ಯ ಸಂಪಾದಕರಾಗಿ ಕೆಲಸ ನಿರ್ವಹಿಸಿರುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಒಂದು ಸಂಚಿಕೆ ಸಿದ್ಧವಾಗುವುದರ ಹಿಂದಿನ ಅಪಾರ ಶ್ರಮ, ಸ್ವಲ್ಪವೇ ನಲಿವನ್ನು ಸಹ ಕಂಡಿದ್ದೇನೆ. ಹೀಗಾಗಿ ಮೋಹನ್ ಅವರ ಆಹ್ವಾನದಿಂದ ತಪ್ಪಿಸಿಕೊಳ್ಳಲು ನೋಡಿದೆ.

ಆದರೆ ಅವರ ಉಡದ ಹಿಡಿತದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಮೋಹನ್ ದೀರ್ಘಕಾಲದ ಕುಟುಂಬ ಸ್ನೇಹಿತರು. ಅವರ ಕುಟುಂಬದೊಂದಿಗೆ ಆಪ್ತ ಸಂಪರ್ಕದಲ್ಲಿದ್ದು ನಾವು ಒಡನಾಡಿದವರು. ಅವರ ಮನೆಗೆ ಹೋದಾಗ ಅವರ ತಾಯಿ ನೀಡುತ್ತಿದ್ದ ಕೈತುತ್ತುಗಳ ನೆನಪು ಹಾಗೆಯೇ ಉಳಿದಿದೆ. ನಮ್ಮ ಸರಳವಿವಾಹ ಮೈಸೂರಿನ ಗಾಂಧಿ ಭವನದಲ್ಲಿ ಇಳಿಸಂಜೆ ಹಿ.ಶಿ. ರಾಮಚಂದ್ರೇಗೌಡ ಅವರ ಪತ್ನಿ ರತ್ನಕ್ಕ ಅವರ ನೇತೃತ್ವದಲ್ಲಿ ನಡೆದಾಗ ಲವಲವಿಕೆಯಿಂದ, ಖುಷಿಯಿಂದ ನಮ್ಮ ಕಾಲೆಳೆಯೆತ್ತಾ ಓಡಾಡಿದ್ದರು.

ಆಗ ನಮ್ಮದೆಲ್ಲಾ ಹೆಚ್ಚುಕಡಿಮೆ ಒಂದೇ ವಯೋಮಾನದ ಸಮಾನ ಮನಸ್ಕರ ಚಟುವಟಿಕೆಗಳು ನಡೆಯುತ್ತಿದ್ದ ಕಾಲ. ಆರತಿ, ಮಮತಾ ಸಾಗರ್, ಎಲ್ ಎನ್ ಮುಕುಂದರಾಜ್, ದಾವಣಗೆರೆಯ ಬಿ. ಎನ್. ಮಲ್ಲೇಶ್, ಎಂ. ಎಸ್. ಮೂರ್ತಿ, ಮಲ್ಲಿಕಾರ್ಜುನ ಸ್ವಾಮಿ, ನಾಗರಾಜಮೂರ್ತಿ ಪ್ರಸಿದ್ಧ ಕಲಾವಿದರಾದ ಹಡಪದ್ ಅವರ ಕೆನ್ ಸ್ಕೂಲ್ ನಲ್ಲಿ ಸೇರುತ್ತಿದ್ದೆವು.

ಆಗ ‘ಅನ್ವೇಷಣೆ- ಸಂಘರ್ಷ’ ವೇದಿಕೆಯಿಂದ ನಾವು ಮತ್ತು ಮಲ್ಲಿಕಾರ್ಜುನ ಸ್ವಾಮಿ ಕೂಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೆವು. ಅಲ್ಲಿ ಸೇರುತ್ತಿದ್ದ ಎಲ್ಲಾ ಕವಿ, ಕಲಾವಿದರೆಲ್ಲ ಇಂದು ಅವರವರ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದಾರೆ. ಕವಿತೆಯ ಓದು, ಒಬ್ಬರು ಇನ್ನೊಬ್ಬರ ಕಾಲೆಳೆದು ನಗುತ್ತಿದ್ದ ಕಾಲಘಟ್ಟ ಇವೆಲ್ಲವೂ ಕಣ್ಣಮುಂದೆ ಬರುತ್ತಿವೆ.

ಸಾಹಿತ್ಯ, ಸಂಘಟನೆ, ಜೀವನ ಎಲ್ಲವೂ ಒಟ್ಟೊಟ್ಟಾಗಿಯೇ ನಡೆಯುತ್ತಿದ್ದ ಕಾಲಮಾನವದು. ಅದೇ ಕಾಲಘಟ್ಟದಲ್ಲಿ ಹರಿಹರದಿಂದ ಬೆಂಗಳೂರಿಗೆ ಕಾಲಿಟ್ಟು ನರ್ಸಿಂಗ್ ಹೋಮ್ ಒಂದನ್ನು ಬೆಂಗಳೂರಿನ ಹೌಸಿಂಗ್ ಬೋರ್ಡ್ ನಲ್ಲಿ ಆರಂಭಿಸಿದ ಡಾ. ಗಿರಿಜಮ್ಮ ಪರಿಚಯವಾದರು. ಅಷ್ಟು ಹೊತ್ತಿಗಾಗಲೇ ಕಥೆ, ಕಾದಂಬರಿ, ಟೆಲಿ ಸೀರಿಯಲ್ ಮೂಲಕ ಹೆಸರು ಮಾಡಿದ್ದ ಅವರು ಸಾಹಿತ್ಯದ ಕಡು ಮೋಹಿಗಳಾಗಿದ್ದರು.

ಮದುವೆಯ ನಂತರದ ಕಾಲಘಟ್ಟವಾದ ತಾಯ್ತನದ ಸಂದರ್ಭದಲ್ಲಿ ನಮಗೆ ನೆರವಾದವರು ಡಾ. ಗಿರಿಜಮ್ಮ. ಪಡ್ಡೆ ಹುಡುಗರ ಹಾಗೆ ಆಡುತ್ತಿದ್ದ ನಮಗೆ ಆರೋಗ್ಯದ ಬಗ್ಗೆ ನಗು, ನಗುತ್ತಲೇ ಕಟುವಾಗಿ ಎಚ್ಚರಿಕೆ ಕೊಡುತ್ತಿದ್ದ ಅವರು ನಮ್ಮ ಬಸುರಿ, ಬಾಣಂತನದ ಕಾಲದಲ್ಲೂ ಹಿರಿಯಕ್ಕನಂತೆ ಬೆನ್ನಬದಿ ನಿಂತವರು. ನಮ್ಮ ಕುಟುಂಬ ಅವರಿಂದ ಉಪಕೃತವಾಗಿದೆ.

ಕಳೆದ ಕಾಲದ ಆ ಹುಡುಗಾಟದ ಜೀವನ, ಸ್ನೇಹವಲಯಗಳು ಇಂದು ಕಣ್ಣಮುಂದೆ ಗರಿಗೆದರಿದ ನವಿಲಿನಂತೆ ತೆರೆದುಕೊಳ್ಳುತ್ತಿರುವುದಕ್ಕೆ ಕಾರಣ ಮೋಹನ್ ಈ ಸಂಚಿಕೆಗೆ ಆಹ್ವಾನ ಕೊಟ್ಟಿದ್ದು.

ಇತ್ತೀಚೆಗೆ ತಾನೆ ಗಿರಿಜಮ್ಮನವರ ‘ಕಾಡುತಾವ ನೆನಪುಗಳು’ ಆತ್ಮಕಥನ ಪ್ರಕಟಗೊಂಡಿದ್ದು ಅದನ್ನು ಓದುತ್ತಾ ಹೋದಂತೆ ನಮ್ಮೊಳಗಿನ ಕಥನಗಳು ಹೊರಗೆ ಬರಲು ಚಡಪಡಿಸುತ್ತಿವೆ. ದಾವಣಗೆರೆಯ ‘ನಗರವಾಣಿ’ ಪತ್ರಿಕೆಯ ಬಿ.ಎನ್. ಮಲ್ಲೇಶ್ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದಾರೆ.

ಮಲ್ಲೇಶ್ ಒಳ್ಳೆಯ ಕವಿ ಕೂಡ. ಅವರ ಮೊದಲ ಕವನ ಸಂಕಲನ‌ ‘ಬೇರು ಒಣಗಿದ ಪ್ರೀತಿ’ ನಮ್ಮ ‘ಅನ್ವೇಷಣೆ ಪ್ರಕಾಶನ’ದಿಂದ ಪ್ರಕಟವಾಗಿತ್ತು. ಅವರು ‘ಪ್ರಜಾವಾಣಿ’ ಪತ್ರಿಕೆಯ ‘ಚುರುಮುರಿ’ ಕಾಲಂಗೆ ಬರೆಯುತ್ತಿದ್ದು ಅದು ದಾವಣಗೆರೆಯ ಜವಾರಿ ಭಾಷೆಯಿಂದಲೇ ಪ್ರಸಿದ್ದವಾಗಿದೆ. ಉದಾಹರಣೆಗೆ ಚುರುಮುರಿಯಲ್ಲಿ ಪಿತೃಪಕ್ಷದ ಬಗೆಗಿನ ಒಂದು ಸಾಲು ಈ ಮುಂದಿನಂತೆ ಬರುತ್ತದೆ – ಸ್ವರ್ಗದ ಬಾಗಿಲು ‘’….ಕ್ವಾಟ್ರು ಹಾಫು, ಪುಲ್ಲು… ಎಷ್ಟೆಷ್ಟು ತಗತೀರೋ ಅಷ್ಟಷ್ಟು ಬಾಗಿಲು ತೆಗೀತಾ ಹೋಗ್ತದೆ…!’’

ಈ ಸಂಚಿಕೆಯಲ್ಲಿ ಪ್ರೊ. ಸುಕನ್ಯಾ ಮಾರುತಿ, ಮಾಧವಿ ಭಂಡಾರಿ, ದಾದಾಪೀರ್ ಜೈಮನ್, ಶಿಲೋಕ್ ಮುಕ್ಕಾಟಿ, ಜ್ಯೋತಿ ಪಿ. ಹೆರಗು ಇವರುಗಳ ಕವಿತೆಗಳು ಸೇರಿವೆ. ಸುಕನ್ಯಾ ಮಾರುತಿ ಆಧುನಿಕ ಕನ್ನಡ ಕಾವ್ಯ ಸಂದರ್ಭದಲ್ಲಿನ ಪ್ರಮುಖ ಕವಯತ್ರಿಯಲ್ಲಿ ಒಬ್ಬರು. ಬರಹ ಮತ್ತು ಬದುಕಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದವರು. ಮಾಧವಿ ಭಂಡಾರಿ ಕಳೆದ ಸಾಲಿನಲ್ಲಿ ‘ಮೌನ ಗರ್ಭದ ಒಡಲು’ ಎಂಬ ಸಂಕಲನವನ್ನು ಪ್ರಕಟಿಸಿದ್ದು ಅದು ಹೆಣ್ಣಿನ ದೇಹ ಹಾಗೂ ಮನಸ್ಸಿನ ಭಾಷೆಯ ಬಗ್ಗೆ ಹಲವು ಗಮನ ಸೆಳೆಯುವ ಕವಿತೆಗಳನ್ನು ಒಳಗೊಂಡಿದೆ.

ಜ್ಯೋತಿ ಈಗಾಗಲೆ ಒಂದು ಸಂಕಲನ ಪ್ರಕಟಿಸಿದ್ದು ಅದು ಓದುಗರ ಗಮನ ಸೆಳೆದಿದೆ. ರಂಗಭೂಮಿ ಅವರ ಆಸಕ್ತ ಕ್ಷೇತ್ರ. ದಾದಾಪೀರ್ ಜೈಮನ್ ಇತ್ತೀಚೆಗೆ ಕವಿತೆ ಬರೆಯುತ್ತಿರುವವರಲ್ಲಿ ಗಮನ ಸೆಳೆಯುತ್ತಾರೆ. ಕವಯತ್ರಿ ಶಿಲೋಕ್ ಮುಕ್ಕಾಟಿಯವರ ಒಂದು ಕವಿತೆ ಇಲ್ಲಿ ತೆಗೆದುಕೊಳ್ಳಲಾಗಿದೆ. ಯುವ ಲಿಂಗತ್ವ ಅಲ್ಪಸಂಖ್ಯಾತರ ಬದುಕಿನ ಅಸ್ಮಿತೆಗಾಗಿ ಹೋರಾಟ ನಡೆಸುತ್ತಿರುವ ಇವರು ಒಳ್ಳೆಯ ನೃತ್ಯಗಾರ್ತಿಯೂ ಹೌದು.

ಲೇಖನಗಳನ್ನು ಹೊಸತಲೆಮಾರಿನ ನೂತನ್ ದೋಶೆಟ್ಟಿ, ಡಾ. ಅನಸೂಯ ಕಾಂಬಳೆ, ಪ್ರತಿಭಾ ಸಾಗರ ಬರೆದಿದ್ದಾರೆ. ಹಾಸನದ ಆಕಾಶವಾಣಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನೂತನ್ ಪ್ರವಾಸಪ್ರಿಯರು, ಸಮಕಾಲೀನ ಬದುಕಿನ ಸ್ಪಂದನಗಳನ್ನು ಲೇಖನಗಳಲ್ಲಿ ಹಿಡಿದಿಡಬಲ್ಲವರು. ಪುರುಷಕೇಂದ್ರಿತವಾದ ಆನ್ ಲೈನ್ ಮಾರಾಟದ ವ್ಯವಸ್ಥೆಯನ್ನು ಮಹಿಳೆಯರು ತಮ್ಮದೇ ಆದ ಸಂಪರ್ಕದಲ್ಲಿ ಆರಂಭಿಸಿ ಗೆದ್ದ ಕಥೆಯನ್ನು ಕಟ್ಟಿ ಕೊಟ್ಟಿದ್ದಾರೆ. ಮುಂಬೈನಿವಾಸಿ ಕನ್ನಡತಿ ಅಪರ್ಣಾರಾವ್ ಮೇ ತಿಂಗಳಿನಲ್ಲಿ ಆರಂಭಿಸಿದ ಈ ಆನ್ಲೈನ್ ಮಾರಾಟ ವ್ಯವಸ್ಥೆಯಲ್ಲಿ ಈಗ ಸುಮಾರು 18850 ಮಹಿಳಾ ಮಾರಾಟಗಾರರಿದ್ದಾರೆ. ಈ ವ್ಯವಸ್ಥೆಯನ್ನು ದಲ್ಲಾಳಿಗಳ ಅಗತ್ಯವಿಲ್ಲದೆ ತಾವೂ ನಿರ್ವಹಿಸಬಲ್ಲೆವು ಎಂಬುದನ್ನು ಸಾಬೀತು ಮಾಡಿದ ಕತೆಯನ್ನು‌ ಇಲ್ಲಿ ಕಟ್ಟಿಕೊಡಲಾಗಿದೆ.

ಡಾ. ಅನಸೂಯಾ ಕಾಂಬಳೆ ಒಳ್ಳೆಯ ಕವಯತ್ರಿ ಹಾಗೂ ವೈಚಾರಿಕಾ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳಲ್ಲಿ ಗುರ್ತಿಸಿ ಕೊಂಡವರು. ಕರೋನಾ ಕಾಲದ ಸಂಕಟಗಳು ಜನಸಾಮಾನ್ಯರ ಜೀವನದಲ್ಲಿ ಉಂಟುಮಾಡಿರುವ ತಲ್ಲಣಗಳ ಬಗ್ಗೆ ವಿಶೇಷವಾಗಿ ಆನ್ಲೈನ್ ತರಗತಿಗಳು ಬಡವರ ಬದುಕಿನಲ್ಲಿ ತಂದ ತೊಡಕುಗಳನ್ನು ಕುರಿತು ಅವರ ಲೇಖನವಿದೆ.

ಸಾಗರದ ಪ್ರತಿಭಾ ವೃತ್ತಿಯಿಂದ ವಕೀಲರು, ಪ್ರವೃತ್ತಿಯಿಂದ ರಂಗಕರ್ಮಿ. ವಿಶೇಷವಾಗಿ ಮಕ್ಕಳ ರಂಗಭೂಮಿಯನ್ನು ಕುರಿತು ಕೆಲಸ ಮಾಡುತ್ತಿದ್ದಾರೆ. ಪ್ರಸಿದ್ಧ ರಂಗಕರ್ಮಿ ಕಟ್ಟಿದ ‘ಚರಕ’ ದ ಜವಾಬ್ದಾರಿಯನ್ನು ಈಗ ಹೆಗಲಗೇರಿಸಿಕೊಂಡಿದ್ದಾರೆ. ಈ ಕುರಿತಂತೆ ತಮ್ಮ ಆಲೋಚನೆಗಳನ್ನು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಡಾ. ಎಂ. ಎಸ್. ಆಶಾದೇವಿ ಮಹಿಳಾ ಕಾವ್ಯ, ವಿಶೇಷವಾಗಿ ಮಹಿಳೆಯ ಸಾಹಿತ್ಯ ಚರಿತ್ರೆಯ ಕಡೆಗೆ ಗಮನ ಹರಿಸಿರುವ ಸೂಕ್ಷ್ಮಸಂವೇದನೆಗಳ ವಿಮರ್ಶಕಿ. ವಿಮರ್ಶಕರಿಗೆ ಇರಬೇಕಾದ ಸಂವೇದನೆಗಳ ಬಗ್ಗೆ ಒಂದು ಉತ್ತಮ ಉದಾಹರಣೆಯಾಗಿ ಅವರು ಕಂಡುಬರುತ್ತಾರೆ.

ಕಾವ್ಯದ ಶಕ್ತಿ ಎಂತಹದೆಂದರೆ ಅದು ಎಂತಹ ಬಿಕ್ಕಟ್ಟಿನ ಕಾಲದಲ್ಲೂ ಮರುಜೇವಣಿಯಾಗಿ ಕೆಲಸ ಮಾಡಬಲ್ಲದು ಎಂದು ಕಂಡುಕೊಂಡಿದ್ದಾರೆ. ಆ ಸತ್ಯಗಳನ್ನು ಇಲ್ಲಿನ ಲೇಖನದಲ್ಲಿ ಕಟ್ಟಿಕೊಟ್ಟದ್ದಾರೆ. ನಿವೃತ್ತಿಯ ನಂತರ ತೆರೆದುಕೊಂಡ ತಮ್ಮ ಆಯ್ಕೆಯ ಬದುಕನ್ನು ಲೀಲಾ ಅಪ್ಪಾಜಿಯವರು ಉತ್ಸಾಹ ಹಾಗೂ ಉಲ್ಲಾಸದಿಂದ ಕಟ್ಟಿ ಕೊಡುತ್ತಾರೆ. ನಿವೃತ್ತಿಯ ನಂತರದ ಬದುಕು ವಿಶೇಷವಾಗಿ ಮಹಿಳೆಯರಿಗೆ ಬಂಧನದಿಂದ ಬಿಡುಗಡೆಯೆಡೆಗೆ ಎಂಬಂತೆಯೇ ತೋರುತ್ತದೆ.

ಹಲವು ಬಾರಿ ಮುಖತೋರುವ ಮೊಳಕೆಗಳನ್ನು ಗಮನಿಸಲೂ ಪುರಸೊತ್ತಿಲ್ಲದಂತೆ, ಕುಡಿಗಳನ್ನು ಚಿಗುರಲಾರದಂತೆ ತಡೆಹಿಡಿದು ಬದುಕಬೇಕಾದ ಅನಿವಾರ್ಯತೆಯಲ್ಲಿ ಬದುಕಿನ ಬೇಕು, ಬೇಡಗಳು ಮರೆತೇ ಹೋಗಿರುತ್ತವೆ. ನಿವೃತ್ತಿಯೆಂಬ ಬಿಡುಗಡೆಯ ಮಹಾಪರ್ವದಲ್ಲಿ ಈಡೇರಿದ ಕ್ಯಾಮರಾದೊಂದಿಗಿನ ಬದುಕನ್ನು ಆಪ್ತವಾಗಿ ಲೀಲಾ ಕಟ್ಟಿಕೊಟ್ಟಿದ್ದಾರೆ. ಅಸಂಖ್ಯಾತವಾದ ಪಕ್ಷಿಗಳ ಚಿತ್ರವನ್ನು ಅವರ ಕ್ಯಾಮರಾ ಹಿಡಿದಿಟ್ಟಿದೆ. ಕ್ಯಾಮರಾದೊಂದಿಗೆ ಕನಸುಗಳ ಬೆಂಬತ್ತಿದ ಹಾಗೂ ನನಸಾಗಿಸಿಕೊಂಡ ಲೀಲಾ ಅವರ ಅನುಭವ ಕಥನ ಇತರರ ಅಸಹಾಯಕ ಕನಸುಗಳಿಗೆ ಜೀವಕೊಡುತ್ತದೆ ಎಂಬುದರ ಬಗೆಗೆ ಖಂಡಿತಾ ಸಂಶಯವನ್ನು ಹುಟ್ಟಿಸುವುದಿಲ್ಲ.

ಇನ್ನು ಪಿಚ್ಚಳ್ಳಿ ಶ್ರೀನಿವಾಸ್ ಅವರಂತೂ ತಮ್ಮ ದನಿಯಲ್ಲಿ ಶತಮಾನದ ತುಳಿತದ ನೋವನ್ನು ಹೊಂದಿದವರು. ಅವರ ಹಾಡುಗಳು ನಾವು ಸದಾ ಸಮಾಜದ ಬಗ್ಗೆ ಎಚ್ಚರ ಇಟ್ಟುಕೊಳ್ಳುವಂತೆ ಮಾಡಿದೆ. ‘ಹಾಡಲ್ಲ ನನ್ನ ಒಡಲುರಿ..’ ಎನ್ನುತ್ತದೆ ಜಾನಪದ. ಹಾಗೆಯೇ ಪಿಚ್ಚಳ್ಳಿ ಶ್ರೀನಿವಾಸ್ ನಮ್ಮ ಮುಂದಿಡುವುದು ಹಾಡಲ್ಲ, ಈ ಸಮಾಜದ ಒಡಲುರಿ. ಅವರ ಹೆಜ್ಜೆ ಗುರುತಿನ ಒಂದು ತುಣುಕು ಇಲ್ಲಿನ ಬರಹ.

ಮೋಹನ್ ಕೊಟ್ಟ ಜವಾಬ್ದಾರಿಯನ್ನು ಒತ್ತಡದ ನಡುವೆ ಪೂರ್ತಿಯಾಗಿ ನಿರ್ವಹಿಸಿದ್ದೇನೆ ಎಂದು ಹೇಳಲಾಗದು. ಇಲ್ಲಿನ ಎಲ್ಲಾ ಲೇಖನಗಳು ಕೂಡ ಒತ್ತಡದ ನಡುವೆ ಹುಟ್ಟಿದರೂ ಇಂದಿನ ನಮ್ಮ ಕರೋನಾ ಕಾಲದ ಸಂಕಷ್ಟದ ಬದುಕಿನ ಹಲವು ಮುಖಗಳನ್ನು ಚಿತ್ರಿಸುತ್ತಲಿವೆಯೆಂದೇ ನಾನು ನಂಬಿದ್ದೇನೆ. ಕವಿತೆಗಳನ್ನು ಹೊರತು ಪಡಿಸಿ ಎಲ್ಲಾ ಲೇಖನಗಳನ್ನು ಬೆನ್ನಹಿಂದೆ ಬಿದ್ದೇ ಬರೆಸಿದ್ದೇನೆ. ನನ್ನ ಕಾಟವನ್ನು ಸಹಿಸಿಯೂ ಸ್ಪಂದಿಸಿ ಕವಿತೆ/ ಸಂದರ್ಶನ/ ಲೇಖನಗಳನ್ನು ಕೊಟ್ಟ ಎಲ್ಲಾ ಲೇಖಕರಿಗೂ, ನನ್ನಿಂದ ಈ ಕೆಲಸ ಆಗುಮಾಡಿದ ‘ಅವಧಿ’ಯ ಜಿ. ಎನ್. ಮೋಹನ್ ಅವರಿಗೂ ನನ್ನ ಕೃತಜ್ಞತೆಗಳು.

‍ಲೇಖಕರು Avadhi

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: