ಕೆ ಆರ್ ಉಮಾದೇವಿ ಉರಾಳ
**
ಸಾಹಿತಿ ಸಿರಿಮೂರ್ತಿ ಕಾಸರವಳ್ಳಿ ಅವರ ಕಾದಂಬರಿ ಶಾಂತಿಧಾಮ.
ಈ ಕೃತಿಯನ್ನು ‘ಸಾಹಿತ್ಯ ಲೋಕ’ ಪಬ್ಲಿಕೇಷನ್ಸ್ ಪ್ರಕಟಿಸಿದೆ.
ಈ ಕೃತಿಯ ಕುರಿತು ಸಾಹಿತಿ ಕೆ ಆರ್ ಉಮಾದೇವಿ ಉರಾಳ ಅವರು ಬರೆದ ಬರಹ ಇಲ್ಲಿದೆ.
**
ಸಿರಿಮೂರ್ತಿ ಕಾಸರವಳ್ಳಿಯವರ ಎರಡನೇ ಕಾದಂಬರಿ ‘ಶಾಂತಿಧಾಮ’ ಸಾಹಿತ್ಯಲೋಕ ಪಬ್ಲಿಕೇಷನ್ಸ್ನ ಪ್ರಕಟಣೆಯಾಗಿ ಇತ್ತೀಚೆಗೆ ಪ್ರಕಟವಾಗಿದೆ. ಚಂದದ ಮುಖಪುಟ, ಅಂದದ ತಪ್ಪಿಲ್ಲದ ಮುದ್ರಣದ ನೂರಇಪ್ಪತ್ತೆಂಟು ಪುಟಗಳ ಕೃತಿಗೆ ಹಿರಿಯ ಸಾಹಿತಿ ಗಜಾನನ ಶರ್ಮರವರು ಮುನ್ನುಡಿ ಬರೆದಿದ್ದಾರೆ. ಮಲೆನಾಡಿನ ಹಿನ್ನೆಲೆಯ ಕೂಡುಕುಟುಂಬದ ಹಂದರದಲ್ಲಿ ಬದುಕಿನ ಜೀವನಮೌಲ್ಯಗಳು ಜೀವಂತಿಕೆಯಿಂದ ಹೊರಹೊಮ್ಮುತ್ತಾ ಸಮಾಜದ ಸ್ವಾಸ್ಥ್ಯಕ್ಕೆ ಆಧಾರವಾಗಿದ್ದವೆಂಬುದನ್ನು ಅಂದಿನ ಕಾಲದ ಗ್ರಾಮೀಣ ಜನರ ಕೊಡುಕೊಳ್ಳುವಿಕೆಯ ಬದುಕು, ಒಡೆಯ ಒಕ್ಕಲು ಮಕ್ಕಳ ಸಂಬಂಧ, ಕೃಷಿ ಕಾರ್ಯಗಳು, ಕೌಟುಂಬಿಕ ಸಾಮರಸ್ಯಕ್ಕೆ ಸಂಬಂಧಿಸಿದ ಸಹಜ ಘಟನಾವಳಿಗಳಿಂದ ಸಿರಿಮೂರ್ತಿಯವರು ನಿರೂಪಿಸಿದ್ದಾರೆ.
ಇಲ್ಲಿ ನಿರೂಪಿತವಾಗಿರುವ ಜೀವನ ಮೌಲ್ಯಗಳೆಂದರೆ ಅವು ಸಾಮಾಜಿಕ ಅನಿಷ್ಟಗಳು, ಸಮಸ್ಯೆಗಳನ್ನು ಮಥಿಸಿ ಹೊರಹೊಮ್ಮಿದ ಸಮಾಜಮುಖಿ ಚಿಂತನೆಗಳು. ಆದರೆ ಕಾಲದ ಗತಿಯೊಂದಿಗೆ ಅನಿವಾರ್ಯವಾದ ಸಾಮಾಜಿಕ ಕೌಟುಂಬಿಕ ಬದಲಾವಣೆಗಳಿಂದಾಗಿ ಊರಿನ ಜೀವಸೆಲೆಯಂತಿದ್ದ ಬೃಹತ್ ಕೂಡುಕುಟುಂಬಗಳು ವಿಘಟನೆಯಾಗುತ್ತಾ ಹೋದವು. ಈ ಚಿತ್ರಣವನ್ನು ಸಿರಿಮೂರ್ತಿಯವರು ಕಾದಂಬರಿಯಾದ್ಯಂತ ಹೃದಯಂಗಮವಾಗಿ ಚಿತ್ರಸಿರುವುದು ಓದುಗರನ್ನು ಸೆರೆಹಿಡಿದು ಓದಿಸಿಕೊಂಡು ಹೋಗುತ್ತದೆ. ಉಳುವವನೇ ಹೊಲದೊಡೆಯ ಎಂಬ ಭೂ ಸುಧಾರಣಾ ಕಾಯಿದೆಯ ಅನುಷ್ಠಾನದ ಸಮಯದೊಂದಿಗೆ ಚಲನಶೀಲತೆ ಪಡೆದುಕೊಳ್ಳುವ ಕಾದಂಬರಿಯಲ್ಲಿ ಆ ಸಂದರ್ಭದ ಅವಿಭಕ್ತ ಕುಟುಂಬಗಳು, ಅವು ಊರ ಹಿತಚಿಂತನೆಗೆ ಸ್ಪಂದಿಸುತ್ತಿದ್ದ ಪರಿ, ಊರವರೆಲ್ಲ ಒಂದು ದೊಡ್ಡ ಕುಟುಂಬದವರೆಂಬಂತೆ ಬಾಳುತ್ತಿದ್ದ ಸೌಹಾರ್ದತೆಯ ಚಿತ್ರಣವು ಕಾದಂಬರಿಯ ಪ್ರಾರಂಭದಲ್ಲಿದೆ.
ಶಾಂತಿಧಾಮದ ಹಿರಿಯರಾದ ಜೋಯಿಸರು ಮತ್ತು ಅವರ ಮಗ ಶ್ರೀವತ್ಸನ ಕಾಲದಲ್ಲಿ ಹಾಗೂ ನಂತರದ ತಲೆಮಾರಿನಲ್ಲೂ ಸಂಭವಿಸುವ ಸಾಮಾಜಿಕ ಕೌಟುಂಬಿಕ ಬದಲಾವಣೆಗಳೊಂದಿಗೆ ಅನೇಕ ಉತ್ತಮ ಜೀವನ ಮೌಲ್ಯಗಳು ಕೂಡ ಪತನದತ್ತ ಸಾಗುವುದರ ಚಿತ್ರಣವನ್ನು ಲೇಖಕಿ ಸಮತೋಲನದ ಕುಶಲತೆಯಿಂದ ಹೆಣೆದಿದ್ದಾರೆ. ಅಲ್ಲಿಗೆ ಮೂರು ತಲೆಮಾರುಗಳ ಜೀವನ ವಿಧಾನದ ಸನ್ನಿವೇಶಗಳು ಕಾದಂಬರಿಯಲ್ಲಿವೆ. ಜೋಯಿಸರ ತಂದೆ ತಾಯಿ, ಅವರ ಕಾಲದ ಜೀವನದ ಪ್ರಸಂಗಗಳು, ಹಿನ್ನೆಲೆಯ ಘಟನೆಗಳು, ಪ್ರಸ್ತುತ ಶ್ರೀವತ್ಸನ ಕಾಲದಲ್ಲೂ ಅದರ ಫಲಿತ ಕಣ್ಮುಂದಿರುವುದನ್ನು ಲೇಖಕಿ ಕೊಟ್ಟಿರುವುದರಿಂದ ನಾಲ್ಕು ತಲೆಮಾರುಗಳ ಕಲ್ಪನೆ ಕಾದಂಬರಿಯಲ್ಲಿ ಒಡಮೂಡುತ್ತದೆ ಎನ್ನಬಹುದು. ಕೂಡುಕುಟುಂಬದ ಚೌಕಟ್ಟಿನೊಳಗೆ ಬರುವ ಹಲವು ಆದರ್ಶಗಳ ಮಾದರಿಗಳನ್ನು ಸರಮಾಲೆಯಾಗಿ ಪೋಣಿಸಿದಂತೆ ಸಿರಿಮೂರ್ತಿ ಸಮಂಜಸವಾದ ಸನ್ನಿವೇಶಗಳ ಮೂಲಕ ಕಡೆದಿರಿಸಿದ್ದಾರೆ. ಈ ಆದರ್ಶಗಳು ಕೈಗೆಟುಕದ ಕಲ್ಪಿತ ಆದರ್ಶಗಳಲ್ಲವಾದರೂ ವಾಸ್ತವಕ್ಕಿಳಿಸಿ ಅನುಷ್ಠಾನಗೊಳಿಸುವಾಗ ಸಾಕಷ್ಟೇ ವಿರೋಧವನ್ನೆದುರಿಸಬೇಕಾದಂತಹವು.
ಅಂತಹವುಗಳಲ್ಲೊಂದು ಜೋಯಿಸರು ತಮ್ಮ ಎರಡನೇ ಮಗ ಮಾಧುವಿನ ಪ್ರೇಮವಿವಾಹಕ್ಕೆ ಸಮ್ಮತಿಸಬೇಕಾದ ಸಂದರ್ಭ. ಮನೆಯ ಹಿರಿಯರೇ ಬೆಳೆದ ಮಕ್ಕಳಿಗೆ ವಧುವರಾನ್ವೇಷಣೆ ಮಾಡಬೇಕಿದ್ದ ಕಾಲಮಾನದವರು ಅವರು. ಮನೆಯ ತೋರುಗಂಬವಾಗಿ ತಾವಿರುವಾಗ ಮಗ ತಾನೇ ಪ್ರೇಮವಿವಾಹಕ್ಕೆ ಮುಂದಾಗುವುದು ಅವರ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟೇ ಸರಿ. ಈ ಜಟಿಲತೆಯ ಸಂದರ್ಭವನ್ನು ಬೆಣ್ಣೆಯಿಂದ ಕೂದಲು ತೆಗೆದಂತೆ ನಯವಾಗಿ ಪರಿಹರಿಸುತ್ತಾನೆ, ಶ್ರೀವತ್ಸ. ಬೇಕಾದ ಜೋಯಿಸರಿಂದ ತಾಳೆಯಾಗುವ ಜಾತಕ ಬರೆಯಿಸಿ ಜಾತಕಾನುಕೂಲ ಕೂಡಿ ಬಂದ ಹಿರಿಯರಿಂದ ಪ್ರಸ್ತಾಪವಾದ ಸಂಬಂಧ ಅದು ಎಂಬಂತೆ ಬಿಂಬಿಸಿ ಯಜಮಾನರ ಸಮ್ಮತಿ ಪಡೆದೇ ಪ್ರೇಮ ವಿವಾಹ ನೆರವೇರುತ್ತದೆ. ಜಾತಿ ವರ್ಗಗಳ ತರತಮ ನೀತಿಯ ನಿರ್ಮೂಲನದ ಲೇಖಕಿಯ ಕನಸಿಲ್ಲಿ ನನಸಾಗಿದೆ. ಶಾಂತಿಧಾಮದ ಚೌಕಿಯ ಮಧ್ಯದ ಅಂಗಳದಲ್ಲಿ ಮನೆಯವರದಲ್ಲದೆ ಊರವರ ಮದುವೆಗಳೂ ನೆರವೇರುತ್ತಿರುತ್ತವೆ. ಇದರಲ್ಲಿ ಜಾತಿಯ ಗಡಿ ದಾಟಿ ತಮ್ಮ ಮನೆಯಲ್ಲಿ ಅನ್ಯ ಜಾತಿಯವರಿಗೂ ಮದುವೆ ನೆರವೇರಿಸಲು ಶ್ರೀವತ್ಸ ಮುಂದಾದಾಗ ಜೋಯಿಸರು ಮದುಮಗಳು ಹೂವಮ್ಮ ತಮ್ಮ ಮನೆ ಅಂಗಳದಲ್ಲಿ ಆಡಿ ಬೆಳೆದ ಹುಡುಗಿಯಲ್ಲವೇ ಎಂದು ಹಾರ್ದಿಕವಾಗಿ ಸಮ್ಮತಿಸುತ್ತಾರೆ.
ಇದು ಮಡಿವಂತರ, ಬಂಧುಗಳ ಕಣ್ಣು ಕೆಂಪಾಗಿಸಿದರೂ ಅದನ್ನು ತಂದೆಮಗ ನಿರ್ಲಕ್ಷಿಸುತ್ತಾರೆ. ಜೋಯಿಸರ ಒಕ್ಕಲು ಕೆಳ ವರ್ಗದ ಗಿಡ್ಡಜ್ಜ ತನ್ನ ಕೊನೆಯ ದಿನಗಳಲ್ಲಿ ತಾನೊಮ್ಮೆ ಧಣಿಗಳನ್ನು ಕಾಣಬೇಕೆಂದು ಹಂಬಲಿಸುವಾಗ ಮಗನೊಂದಿಗೆ ಸುರಿವ ಮಳೆಯಲ್ಲಿ ದೋಣಿಯಿಂದ ಹೊಳೆ ದಾಟಿ ಹೋಗಿ ಹಾಸಿಗೆ ಹಿಡಿದಿದ್ದ ಗಿಡ್ಡಜ್ಜನನ್ನು ನೋಡಲು ಬರುತ್ತಾರೆ ಜೋಯಿಸರು. ತಾವು ತಂದಿದ್ದ ಹಾಲನ್ನು ಕೈಯ್ಯಾರೆ ಕುಡಿಸಲು ಮುಂದಾಗುತ್ತಾರೆ. ಅವರಿಗೆ ಮೈಲಿಗೆಯಾಗುತ್ತದೆಂದು ಗಿಡ್ಡಜ್ಜ ಗಾಬರಿಯಾಗುವಾಗ ನಿನ್ನ ಪ್ರೀತಿ ಮುಂದೆ ಜಾತಿ ಎಲ್ಲಿದೆ? ಎಲ್ಲ ಮನುಷ್ಯರೇ. ತಕ, ಹಾಲು ಕುಡಿ ಎನ್ನುತ್ತಾರೆ.
ಕಾದಂಬರಿ ಕರತಲ ರಂಗಭೂಮಿ, ಅಂಗೈ ಮೇಲಣ ನಾಟಕ ಶಾಲೆ ಎಂಬ ಮಾತಿದೆ. ರಂಗಸ್ಥಳದ ಮೇಲಿನ ನೋಟಗಳು ಕಣ್ಸೆಳೆವಂತೆ ಕಾದಂಬರಿಯ ಓದು ಕೂಡ ಮನ ಸೆಳೆಯಬೇಕು ಎಂಬ ಅಭಿಪ್ರಾಯದಂತೆ ಕಾದಂಬರಿಯಲ್ಲಿ ಅಕ್ಷರಶ:ವಾಗಿಯೂ ಲೇಖಕಿ ಕೆಲವೊಂದು ನಾಟಕದ ಸನ್ನಿವೇಶಗಳನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಕಲಾಭಿರುಚಿಯ ಮಾಧು ತಾನೇ ಒಂದು ರಂಗತಂಡ ಹುಟ್ಟು ಹಾಕುತ್ತಾನೆ. ನಾಟಕ ಪ್ರದರ್ಶನಕ್ಕೆ ಮೈಸೂರಿನ ತನ್ನ ಕಲಾರಸಿಕ ಗೆಳೆಯರನ್ನು ಆಹ್ವಾನಿಸುತ್ತಾನೆ. ಮನೆಯಂಗಳದಲ್ಲೇ ಮೂರು ದಿನಗಳು ನಾಟಕ ಪ್ರದರ್ಶನ ಏರ್ಪಡಿಸುತ್ತಾನೆ. ಊರವರೆಲ್ಲರಿಗೂ ಒಕ್ಕಲು ಮಕ್ಕಳಿಗೂ ಕರೆ ಇರುತ್ತದೆ. ಹೊರಗಿನಿಂದ ಬಂದವರಿಗೆ ಪ್ರತಿ ಒಬ್ಬೊಬ್ಬರನ್ನೂ ಮಾಧು ಪರಿಚಯಿಸುತ್ತಾನೆ. ಬೇಧಭಾವವಿಲ್ಲದೆ ಎಲ್ಲರಿಗೂ ಸಮಾನತೆಯ ಪ್ರೀತಿಯ ಆತಿಥ್ಯ ಸಲ್ಲುತ್ತದೆ. ಭೂ ಹಿಡುವಳಿ ಕಾನೂನಿನಿಂದಾಗಿ ಎಷ್ಟೋ ಜಮೀನ್ದಾರರು ತಮ್ಮ ಗೇಣಿ ರೈತರನ್ನು ಒಕ್ಕಲೆಬ್ಬಿಸಿ ತಮ್ಮ ಆಸ್ತಿ ಉಳಿಸಿಕೊಳ್ಳುವ ಹುನ್ನಾರ ಮಾಡುತ್ತಿದ್ದಾಗ ಜೋಯಿಸರು ಮತ್ತು ಶ್ರೀವತ್ಸ ಸಂತೋಷದಿಂದ ಒಕ್ಕಲು ಮಕ್ಕಳಿಗೆ ಗೇಣಿ ಜಮೀನಿನ ಒಡೆತನ ವಹಿಸಿಕೊಟ್ಟಿರುವುದಲ್ಲದೆ ತಮಗೆ ಪರಿಹಾರವಾಗಿ ಸಿಗಲಿರುವ ಹಣವನ್ನೂ ಆ ರೈತರಿಗೆ ಭವಿಷ್ಯದಲ್ಲಿ ಲಭಿಸುವಂತೆ ಇಡುಗಂಟಾಗಿ ಇರಿಸುವ ಉದಾರತೆ ತೋರುತ್ತಾರೆ.
ಇದು ಅತಿರಂಜಿತ ಕಲ್ಪಿತ ಆದರ್ಶ ಎಂದೆನಿಸಬಹುದಾದರೂ ಮಲೆನಾಡಿನಲ್ಲಿ ಗೇಣಿ ರೈತರ ಕುರಿತು ಸಹಾನುಭೂತಿ ಹೊಂದಿದ್ದ ಜಮೀನ್ದಾರೀ ಕುಟುಂಬಗಳು ಕೈಬೆರಳೆಣಿಕೆಯಷ್ಟೇ ಆದರೂ ಆ ಕಾಲದಲ್ಲಿದ್ದವು ಎಂಬುದನ್ನು ನೆನೆದಾಗ ಅಂತಹ ಆದರ್ಶವನ್ನು ಲೇಖಕಿ ತಮ್ಮ ಆಶಯದಂತೆ ಬಿಂಬಿಸಿರುವುದರ ಔಚಿತ್ಯ ಮನದಟ್ಟಾಗುತ್ತದೆ. ಊರ ಕೇರಿಯ ಯುವಕ ಮಂಜ ಊರ ಜಮೀನ್ದಾರರಿಂದ ತಮ್ಮ ಶೋಷಣೆಯಾಗುತ್ತದೆ, ಕ್ರಾಂತಿ ಮಾಡಬೇಕು ಎಂದು ಹರಟೆಕಟ್ಟೆಯಲ್ಲಿ ಮೆರೆಯುತ್ತಿದ್ದವನು ಜೋಯಿಸರು ತೋರಿದ ಔದಾರ್ಯದಿಂದ ಮನ:ಪರಿವರ್ತನೆಗೊಳ್ಳುತ್ತಾನೆ. ಶಾಲೆ ತೊರೆದಿದ್ದವನು ವಿದ್ಯಾಭ್ಯಾಸದಲ್ಲಿ ಮಗ್ನನಾಗಿ ಮುಂದೆ ಡಾಕ್ಟರ್ ಆಗುತ್ತಾನೆ. ಮುಂದೆ ಜೋಯಿಸರ ಮೊಮ್ಮಗಳೇ ಮಂಜನನ್ನು ಪ್ರೇಮಿಸುತ್ತಾಳೆ. ಅಂದಿನ ಕಾಲಮಾನದ ಸಂಪ್ರದಾಯ ಶರಣತೆಯ ಕುಟುಂಬಗಳಿಗೆ ಕ್ರಾಂತಿಯೇ ಎನಿಸಿದ್ದ ಈ ಅಂತರ್ಜಾತೀಯ ವಿವಾಹ ಕೂಡ ನೆರವೇರುತ್ತದೆ. ಈ ಕ್ರಾಂತಿಕಾರಿ ವಿವಾಹ ನೆರವೇರಿಸಲು ಮತ್ತೆ ಲೇಖಕಿ ಶಾಂತಿಧಾಮದ ಮನೆಯಂಗಣದಲ್ಲಿ ಮಾಧು ಮತ್ತು ಶ್ರೀವತ್ಸರಿಂದ ಒಂದು ನಾಟಕ ಏರ್ಪಡಿಸುತ್ತಾರೆ.
ಹೆಸರು ಪಾಣಿಗ್ರಹಣ. ನಾಟಕದ ಸನ್ನಿವೇಶಗಳು ಅಂತರ್ಜಾತಿ ವಿವಾಹಕ್ಕೆ ಪೂರಕವಾಗುವಂತೆ ಊರವರ ಮನ:ಪರಿವರ್ತನೆ ಮಾಡಿಸುವಂತಿರುತ್ತವೆ. ಈ ನಾಟಕ ರೂಪಿಸುವಲ್ಲಿ ಲೇಖಕಿಯ ಸೃಜನಶೀಲತೆ ಹರಳುಗಟ್ಟಿದೆ. ಅಂತರ್ಜಾತಿ ವಿವಾಹವಾಗಬೇಕಾದ ಸಂದರ್ಭದಲ್ಲಿ ಸಮಾಜದ ವಿರೋಧವನ್ನೆದುರಿಸಿ ತಾವಿಬ್ಬರೂ ಒಂದಾಗಲಾರದ ಅಸಹಾಯಕ ಸನ್ನಿವೇಶದಲ್ಲಿ ನಾಯಕ ನಾಯಕಿ ಆತ್ಮಹತ್ಯೆಗೆ ಮುಂದಾಗುವ ಸನ್ನಿವೇಶ. ಆಗ ನಾಟಕದ ಮಧ್ಯೆ ಶ್ರೀವತ್ಸನ ರಂಗ ಪ್ರವೇಶ. ಪ್ರೇಕ್ಷಕರನ್ನು ಈ ಅಂತ್ಯ ಬೇಡವಾಗಿದ್ದಲ್ಲಿ ಹೇಳಿ, ಹೇಗೆ ಬದಲಿಸಬಹುದು? ಎಂದು ಪ್ರಶ್ನಿಸುತ್ತಾನೆ. ಒಂದೆರಡು ನಿಮಿಷ ಮೌನವಾಗಿದ್ದ ಪ್ರೇಕ್ಷಕರೆಲ್ಲ. ಹಾಗಾದರೆ ಮತ್ತೇನು ಮಾಡಬೇಕು ಎಂದಾಗ ಇಬ್ಬರಿಗೂ ಮದುವೆ ಮಾಡಿಸಿಬಿಡಿ ಎಂಬ ಉತ್ತರ ಪ್ರೇಕ್ಷಕರಿಂದ ಪಡೆಯುತ್ತಾನೆ, ಶ್ರೀವತ್ಸ. ಹೀಗೆ ತಮ್ಮ ಕುಟುಂಬದ ಕುಡಿ ಕೆಳ ವರ್ಗದ ಡಾ.ಮಂಜನನ್ನು ಮದುವೆಯಾಗಲು ವೇದಿಕೆ ಕಲ್ಪಿಸಿದ್ದಾರೆ, ಲೇಖಕಿ.
ಡಾ.ಮಂಜ ಆಶಾ ಮದುವೆ ಆರ್ಯ ಸಮಾಜದ ಪದ್ಧತಿಯಂತೆ ಆಗುತ್ತದೆ. ಮುಂದಿನ ಸನ್ನಿವೇಶಗಳಲ್ಲಿ ಊರ ಆರಾಧ್ಯದೈವದಂತಿದ್ದ ಜೋಯಿಸರ ಕುಟುಂಬದ ಕುಡಿಗಳೇ ದುಶ್ಚಟಗಳ ದಾಸರಾಗಿ ಊರವರನ್ನೂ ಅಪಮಾರ್ಗಗಳಿಗೆ ಸೆಳೆದು ತಾವು ಬಿತ್ತಿದ ವಿಷಬೀಜಗಳಿಗೆ ತಾವೇ ಬಲಿಯಾಗಿ ಜೈಲು ಸೇರುತ್ತಾರೆ. ಊರವರೆಲ್ಲ ಶ್ರೀಮಂತರಾಗುತ್ತಾರೆ. ತುಂಬಿದ ಕುಟುಂಬಗಳು ವಿಘಟನೆಗೊಳ್ಳುತ್ತವೆ. ಕುಟುಂಬಗಳ ಗೋಸಂಪತ್ತು ಕೂಡ ಯಾರಿಗೂ ಬೇಡವಾಗುತ್ತದೆ. ಇವೆಲ್ಲದರ ಸಾಂಕೇತಿಕತೆಯೆಂಬಂತೆ ಲೇಖಕಿ ಶ್ರೀವತ್ಸನನ್ನು ಮರೆವಿನ ರೋಗಕ್ಕೆ ತುತ್ತಾಗಿಸಿದ್ದಾರೆ. ಶ್ರೀವತ್ಸನ ಮಗಳು ಗಂಗಾ ಕೃಷಿವಿಜ್ಞಾನ ಓದಿ, ಮುಂದೆ ಶಾಂತಿಧಾಮವನ್ನು, ತೋಟವನ್ನು ನೋಡಿಕೊಳ್ಳಲೋಸುಗ ತಾನು ಅವಿವಾಹಿತೆಯಾಗುವ ನಿರ್ಧಾರ ಮಾಡುತ್ತಾಳೆ. ಅವಳ ಚಿಂತನಶೀಲ ವ್ಯಕ್ತಿತ್ವವನ್ನು ಸಮಂಜಸವಾಗಿ ಪ್ರಾರಂಭದಿಂದಲೂ ಲೇಖಕಿ ರೂಪಿಸಿದ್ದಾರೆ. ಕಾದಂಬರಿಯ ಪ್ರಾರಂಭದಲ್ಲಿ ಮುಂದಿನ ಘಟನಾವಳಿಗಳಿಗೆ ನೆಲಗಟ್ಟು ರೂಪಿಸಿದ್ದವಳು ಗಂಗಾ. ಅಂತ್ಯದಲ್ಲಿ ಕೂಡ ಗಂಗಾಳ ಶಾಂತಿಧಾಮದಲ್ಲಿನ ನೆಲೆಗೊಳ್ಳುವಿಕೆ ಮರೆಯಾಗಿದ್ದ ಜೀವನ ಮೌಲ್ಯಗಳಿಗೆ, ಸಮಾಜಮುಖಿ ಚಿಂತನೆಗಳಿಗೆ ಸತ್ಕಾರ್ಯಗಳಿಗೆ ಎಡೆಮಾಡಿಕೊಡಲಿದೆ ಎಂಬ ಆಶಾವಾದಿ ಸಂದೇಶವನ್ನು ನೀಡುವುದರೊಂದಿಗೆ ಕಾದಂಬರಿಯನ್ನು ಮುಕ್ತಾಯಗೊಳಿಸುತ್ತಾರೆ. ಸಿರಿಮೂರ್ತಿ ಕಾಸರವಳ್ಳಿಯವರು ತಮ್ಮ ಸಮಾಜಮುಖಿ ಚಿಂತನೆಗಳು, ಜೀವನಮೌಲ್ಯಗಳು, ಮಾನವೀಯ ಸಂಬಂಧಗಳ ಎಳೆಗಳನ್ನು, ಸ್ತ್ರೀ ಸಾಮರ್ಥ್ಯದ ಪಾರಮ್ಯತೆಯನ್ನು ಯಶಸ್ವಿಯಾಗಿ ನಿರೂಪಿಸಿದ ಧನಾತ್ಮಕ ಚಿಂತನೆಯ ಕಾದಂಬರಿ ಇದು.
0 Comments