ಮ ಶ್ರೀ ಮುರಳಿ ಕೃಷ್ಣ
**
ಸೂರ್ಯನ ಬೆಳಕು ಒಂದೆಡೆಯಾದರೆ ಇನ್ನೊಂದೆಡೆ ಅಮಾಸ್ಯೆಯ ಕಾರಿರುಳು. ಕೆಲವೆಡೆ ಬೆಳಕಿನ ಪ್ರಖರತೆಯ ಅನುಭವ ಮತ್ತು ಕೆಲವೆಡೆ ಬೆಳಕನ್ನು ನಿರ್ಬಂಧಿಸುವ ಅಂಧಕಾರ. ಬರೀ ಬೆಳಕನ್ನು ವಿಜೃಂಭಿಸುತ್ತ ಅದು ಇತ್ಯಾತ್ಮಕವಾದದ್ದು ಎಂದು ಉಸುರುತ್ತ, ಸಾರುವುದು ಇದೆಯಲ್ಲ, ಅದು ಒಂದು ತೆರನಾದ ಎಲಿಟಿಸಂನ ಅಭಿವ್ಯಕ್ತಿ ; ಪ್ರತಿಫಲನ. ನಿಜ, ನಮ್ಮ ಸುತ್ತ ಎಷ್ಟೊಂದು ವೈಭವದ ಕಥೆಗಳಿವೆ. ಜೊತೆ ಜೊತೆಯಲ್ಲೇ ಮನಸ್ಸನ್ನು ತರಗುಟ್ಟಿಸುವ, ಮ್ಲಾನತೆಗೆ ದೂಡುವ ಕಥೆಗಳು ಕೂಡ. ಎಷ್ಟೊಂದು ಮಂದಿ, ಕುಟುಂಬಗಳು ಎರಡು ಹೊತ್ತಿನ ಕೂಳಿಗಾಗಿ ಹರಸಾಹಸ ಪಡುತ್ತ ದಾರುಣನ ಪರಿಸ್ಥಿತಿಯಲ್ಲಿದ್ದಾರೆ. ಒಬ್ಬಬ್ಬರದ್ದು, ಒಂದೊಂದು ಕುಟುಂಬದ್ದು ಭಿನ್ನ ಕಥೆ; ವ್ಯಥೆ.
ಅವುಗಳಲ್ಲಿ ಢಾಳಾಗಿ ಕಾಣುವುದು ಮನಸ್ಸನ್ನು ಹಿಂಡಿ ಹಿಪ್ಪೆ ಮಾಡುವ ವೃತ್ತಾಂತಗಳು. ಸಣ್ಣ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿಯನ್ನು ಎಳೆಯ ಭುಜಗಳು ಹೊತ್ತುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯ ಹಿಂದೆ ಅನೇಕ ಗಹನ ಕಾರಣಗಳಿರುತ್ತವೆ. ತೀವ್ರ ಬಡತನ, ಸಾಲಗಳ ಶೂಲ, ಅಪ್ಪನ ಕುಡಿತ, ಬೇರ್ಪಟ್ಟ ತಂದೆ-ತಾಯಿಯರು, ಮುಂದುವರೆಸಲಾಗದ ವಿದ್ಯೆ, ದಿನಕ್ಕೆ ಹನ್ನೆರಡು ಗಂಟೆ ದೈಹಿಕವಾಗಿ ಹೆಚ್ಚು ತ್ರಾಸನ್ನು ನೀಡುವ ಕೆಲಸವನ್ನು ಮಾಡಿದರೂ ತುಂಬದ ಹೊಟ್ಟೆಗಳು, ನಾನಾ ಬಗೆಯ ಶೋಷಣೆಗಳು ಇತ್ಯಾದಿಗಳಿಂದ ಕಂಡ ಕನಸುಗಳು ಧೂಳೀಪಟವಾಗುತ್ತವೆ; ಉರಿದು ಹೋಗುತ್ತವೆ. ಸಣ್ಣ, ಸಣ್ಣ ಆಸೆಗಳು ಗಗನಕುಸುಮಗಳಾಗುತ್ತವೆ. ನೆಮ್ಮದಿ ಮೂರಾಬಟ್ಟೆಯಾಗಿ ಬಾಳನ್ನು ನಡೆಸುವುದೇ ಒಂದು ದೊಡ್ಡ ಗೋಳಾಗಿ ಬಿಡುತ್ತದೆ.
ಮೇಲ್ಗಡೆಯದು ನಾಣ್ಯದ ಒಂದು ಮುಖ. ಪ್ರಭುತ್ವ-ಸರ್ಕಾರ-ವ್ಯವಸ್ಥೆಯ ನೀತಿಗಳಿಂದ ಶ್ರೀಸಾಮಾನ್ಯನ ಬಾಳಿನ ಹಾದಿಯಲ್ಲಿ ಅಡರುವ ಮುಳ್ಳು ಕಂಟಿಗಳು, ಅಡ್ಡಿ-ಆತಂಕಗಳು, ಅವುಗಳ ವಿರುದ್ಧದ ದನಿಗಳ ದಮನ ಇತ್ಯಾದಿಗಳು ನಾಣ್ಯದ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತವೆ. ಅನೇಕ ವರ್ಷಗಳಿಂದ ಸಮಸಮಾಜದ ಆಶಯವನ್ನು ಹೊತ್ತು, ಪ್ರಜ್ಞಾಪೂರ್ವಕವಾಗಿ ಮಧ್ಯಪ್ರವೇಶವನ್ನು ಮಾಡಿ, ಅನೇಕ ಸ್ತರಗಳಲ್ಲಿ ಸಕ್ರಿಯವಾಗಿದ್ದರೂ, ನೋವಿನ ಕಥೆಗಳ ಅಗಾಧತೆಗೆ ಪ್ರಜ್ಞಾವಂತ ಕಾರ್ಯಕರ್ತರ ಮನಸ್ಸುಗಳು ಮುದುಡುತ್ತವೆ; ಕನಲುತ್ತವೆ. ಏನೂ ಬದಲಾಗುತ್ತಿಲ್ಲವಲ್ಲ ಎಂಬ ಹತಾಶೆಯ ಮೋಡಗಳು ದಾಂಗುಡಿಯಿಡುತ್ತವೆ. ಕೈ ಹೊಸಕಿಕೊಳ್ಳುತ್ತಲೇ ಇರಬೇಕೇ ಎಂಬ ಬೃಹತ್ ಪ್ರಶ್ನೆ ಕಾಡುತ್ತಿರುತ್ತದೆ.
ಕತ್ತಲೆಯ ದಾರಿ ದೂರ ಎಂದೆನಿಸಿದರೂ, ಕತ್ತಲಲ್ಲಿ, ಕಾರ್ಗತ್ತಲಲ್ಲಿ ಮಿಂಚು ಹುಳುಗಳು ಹೊಳೆಯುತ್ತವೆ; ಮಾಯವಾಗಿಬಿಡುತ್ತವೆ! ಪುನಃ ಅವುಗಳ ದರ್ಶನವಾಗಿ, ಮನಸ್ಸುಗಳಲ್ಲಿ ಒಂದು ಸಣ್ಣ ಆಶಾಭಾವನೆ ಕುಡಿಯೊಡೆಯುತ್ತದೆ. ಇದು ಒಂದು ತೆರನಾದ ವೃತ್ತೀಯ ರೀತಿಯಲ್ಲಿ ಜರಗುತ್ತಿರುತ್ತವೆಯೇನೋ ಎಂದು ಭಾಸವಾಗುತ್ತದೆ. ಕೆಸರಿನಲ್ಲಿ ಸಿಲುಕಿದ ಕಾಲುಗಳು ಎಷ್ಟು ಸಮಯ ಅಲ್ಲೇ ಇರುತ್ತವೆ? ಹೊರಗೆಳೆದು, ನಿಂತು, ದಾಪುಗಾಲು ಹಾಕುತ್ತ ಸಾಗುವುದೇ ಕಾಲುಗಳ ಸಹಜ ಗುಣ, ಅಲ್ಲವೇ?
0 ಪ್ರತಿಕ್ರಿಯೆಗಳು