ಬಾಬುಕೋಡಿ ವೆಂಕಟರಮಣ ಕಾರಂತ ನನಗೆ ಸದಾ ನೆನಪಿನಲ್ಲಿ ಇರಲೇಬೇಕು. ಏಕೆಂದರೆ ಅವರ ನಿರ್ದೇಶನದ ‘ಇಸ್ಪೀಟ್ ರಾಜ್ಯ’ ನೋಡಲೆಂದೇ ನಾನು ಕಲಾಕ್ಷೇತ್ರದ ಮೆಟ್ಟಿಲು ಹತ್ತಿದ್ದು. ಅವರ ನಿರ್ದೇಶನದ ನಾಟಕಗಳಿಗಾಗಿಯೇ ನಾನು ಕಲಾಕ್ಷೇತ್ರದ ಬಯಲು ರಂಗಮಂದಿರದಲ್ಲಿ ಕುಳಿತವನು. ಇವರ ನಾಟಕಕ್ಕಾಗಿಯೇ ಕೈಲಾಸಂ ಕಲಾಕ್ಷೇತ್ರ ಹೊಕ್ಕವನು. ಹೀಗಾಗಿ ಬಿ ವಿ ಕಾರಂತ್ ನನಗೆ ಗೊತ್ತಿಲ್ಲದೆಯೇ ನನ್ನನ್ನು ಕೈಹಿಡಿದು ರಂಗಭೂಮಿಯ ಒಳಗೆ ಕರೆದುಕೊಂಡಿದ್ದಾರೆ.
ನಾನು ಧಾರವಾಡದ ಬಯಲು ರಂಗಮಂದಿರದಲ್ಲಿ ಕುಳಿತು ಇವರು ಹಿಂದಿಯಲ್ಲಿ ಯಕ್ಷಗಾನದ ಮಾದರಿಯಲ್ಲಿ ನಿರ್ದೇಶಿಸಿದ ಮ್ಯಾಕ್ ಬೆತ್’ ನಾಟಕವನ್ನು ನೋಡಿದ್ದೇನೆ.
ಇಂತಹ ಬಿ ವಿ ಕಾರಂತರನ್ನು ಮತ್ತೆ ಮತ್ತೆ ಭೆಟ್ಟಿಯಾಗಬೇಕಾಗಿ ಬಂದದ್ದು ಪತ್ರಕರ್ತನಾಗಿ. ‘ಕರ್ಮವೀರ’ ದೀಪಾವಳಿ ವಿಶೇಷಾಂಕಕ್ಕಾಗಿ ನಾನು ಬಿ ವಿ ಕಾರಂತರ ರಂಗ ಸಂಗೀತದ ಬಗ್ಗೆ ಸಂದರ್ಶನ ಮಾಡಿಕೊಟ್ಟೆ, ನನ್ನ ರಂಗ ಉತ್ಸಾಹವನ್ನು ಕಂಡೇ ಅವರು ರಂಗಾಯಣ ಹೊರತಂದ ರಂಗ ಪತ್ರಿಕೆಯ ಸಂಪಾದಕನಾಗಲು ಪತ್ರ ಬರೆದಿದ್ದರು. ಆ ವೇಳೆಗೆ ನಾನು ಮಂಗಳೂರು ಸೇರಿಕೊಂಡು ಪತ್ರ ಕೈ ಸೇರುವ ವೇಳೆಗಾಗಲೇ ಪತ್ರಿಕೆಯ ಸಾಕಷ್ಟು ಸಂಚಿಕೆಗಳೇ ಹೊರಬಂದಿದ್ದವು.
ಬಿ ವಿ ಕಾರಂತರ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎನ್ನುವ ಆತ್ಮ ಕಥನವನ್ನು ಎಲ್ಲರೂ ಓದಿರುತ್ತಾರೆ ಆದರೆ ನನಗೆ ಕಾರಂತರು ಇನ್ನೂ ಹೆಚ್ಚು ಅರ್ಥ ಆದದ್ದು ಬಿ ಎಸ್ ಕೇಶವ ರಾವ್ ಅವರು ನಿರೂಪಿಸಿದ ‘ಸೂತ್ರಧಾರ ಬಿ ವಿ ಕಾರಂತ’ ಕೃತಿ ಓದಿ. ಹೆಚ್ಚು ಸದ್ದು ಮಾಡದೆ ಹೋದ ಪುಸ್ತಕ ಇದು.
ಬಿ ವಿ ಕಾರಂತರನ್ನು ಸಾಕಷ್ಟು ಸಲ ಭೇಟಿ ಮಾಡಿದ್ದೇನೆ. ಮಾತನಾಡಿದ್ದೇನೆ. ರಂಗ ಚರ್ಚೆ ನಡೆದಿದೆ.
‘ಈಟಿವಿ’ಯ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದಾಗ ‘ಸಂಚಾರಿ’ಯ ಮಂಗಳ ಎನ್ ಫೋನಾಯಿಸಿ ಕಾರಂತರು ಹಾರ್ಮೋನಿಯಂ ಮೀಟುತ್ತಿದ್ದ ಒಂದು ವಿಶುಯಲ್ ಬೇಕು ಎಂದು ಕೇಳಿದ್ದೂ, ಹಾಗೂ ಬಿಟ್ಟೂ ಬಿಡದೆ ಬೆನ್ನತ್ತಿ ಅದನ್ನು ಪಡೆದುಕೊಳ್ಳುವವರೆಗೂ ಸುಮ್ಮನೆ ಇರದಿದ್ದುದು ನನಗೆ ಅವರ ಅಸಂಖ್ಯಾತ ಶಿಷ್ಯರ ಪ್ರೀತಿಯ ಪರಿಚಯ ಮಾಡಿಕೊಟ್ಟಿದೆ.
ಕಾರಂತರು ನಲುಗಬಾರದಿತ್ತು.
ಬದುಕು ಅವರನ್ನು ಚೆನ್ನಾಗಿ ನೋಡಿಕೊಳ್ಳಬಹುದಿತ್ತು.
ಚಿತ್ರಗಳು: ಸಂಚಾರಿ ಥಿಯೇಟರ್
0 ಪ್ರತಿಕ್ರಿಯೆಗಳು