ಮಧು ವೈ ಎನ್
**
ಖ್ಯಾತ ಸಾಹಿತಿ ಗುರುಪ್ರಸಾದ್ ಕಂಟಲಗೆರೆ ಅವರ ಹೊಸ ಕಾದಂಬರಿ ‘ಅಟ್ರಾಸಿಟಿ’.
‘ಆದಿಜಂಬೂ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಸಾಹಿತಿ ಮಧು ವೈ ಎನ್ ಅವರು ಈ ಕಾದಂಬರಿ ಕುರಿತು ಬರೆದ ಬರಹ ಇಲ್ಲಿದೆ.
**
ಕಂಟಲಗೆರೆ ಸುಮಾರು ಎರಡು ವರ್ಷಗಳ ಹಿಂದೆ ಒಂದು ಕ್ಲಬ್ ಹೌಸ್ ಟಾಕ್ ನಲ್ಲಿ ಅತಿಥಿಯಾಗಿದ್ದರು. ಮಾತಾಡ್ತಾ ‘ಏನು ಬರೆದರೆ ಪ್ರಶಸ್ತಿ ಬರುತ್ತೆ ಅನ್ನೋದೂ ನನಗೆ ಗೊತ್ತಾಗಿಬಿಟ್ಟಿದೆ..’ ಎಂಬರ್ಥದಲ್ಲಿ ಹೇಳಿದ್ದರು. ಲೇಖಕನಿಗೆ ಈ ಪ್ರಜ್ಞೆ ಬಂದಾಗ ಉಂಟಾಗುವ ಕಸಿವಿಸಿ ಅಷ್ಟಿಷ್ಟಲ್ಲ. ಜಾಗೃತ, ಪ್ರಾಮಾಣಿಕ ಲೇಖಕ ಅಂತಹ ಕಸಿವಿಸಿಯಿಂದ ಹೊರಗೆ ಬರಲು ಸದಾ ಪ್ರಯತ್ನಿಸ್ತಿರುತ್ತಾನೆ. ಒಂದೆರಡು ಬಹುಮಾನಗಳಿಗೆ ವಾಕರಿಕೆ ಅನ್ನಿಸಿಬಿಡುತ್ತದೆ. ಎರಡು ಒಬ್ಬಟ್ಟುಗಳಿಗಿಂತ ಹೆಚ್ಚಿಗೆ ಒಳಗೆ ಇಳಿಯಲ್ಲ ಎಂಬಂತಹ ಅಲರ್ಜಿ ಅದು. ಇನ್ನೊಂದು ಘಟನೆ. ಬೆಂಗಳೂರು ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮ. ಸಮಯ ರಾತ್ರಿ ಸುಮಾರು ಒಂಭತ್ತೂವರೆ ಅನಿಸುತ್ತೆ. ಮದುವೆ ಮುಗಿಸಿಕೊಂಡು ಹೊರಟು ಒಂದಷ್ಟು ದೂರ ಬಂದಿದ್ದೆ. ಕಾಲ್ ಬಂತು. ಆ ಕಡೆಯಿಂದ ಕಂಟಲಗೆರೆ. ‘ನೀವು ಕಂಡ್ರಿ, ವಾಪಸ್ ಬರ್ತೀರ ನನ್ನೊಂಚೂರು ಹಂಗೆ ತುಮ್ಕೂರು ರೋಡಿಗೆ ಬಿಡುರಂತೆ’. ವಾಪಸ್ ಹೋದಾಗ ಅಲ್ಲಿ ಅವರ ಮಗನೂ ಇದ್ದ. ದಾರಿ ಉದ್ದಕ್ಕೂ ಚಂದದ ಮಾತುಕತೆ. ಅವರು ಸಂಜೆ ನಾಲ್ಕಕ್ಕೊ ಐದಕ್ಕೊ ಆಫೀಸು ಕೆಲಸ ಮುಗಿಸಿಕೊಂಡು ಬೆಂಗಳೂರಿನ ಬಸ್ಸು ಹಿಡಿದಿದ್ದಾರೆ. ಎಂಟಕ್ಕೆ ಮದುವೆಗೆ ಬಂದಿದ್ದಾರೆ. ರಾತ್ರಿ ಒಂದು ಹನ್ನೊಂದು ಗಂಟೆಯಷ್ಟೊತ್ತಿಗೆ ರಿಟರ್ನ್ ಬಸ್ಸು ಹತ್ತಿದರೆ ಮನೆ ತಲುಪುವುದು ಇರುಳು ಎರಡಾಗುತ್ತದೆ. ‘ಬೇಸ್ಗೆ ರಜಾ ಮನೇಲಿ ಒಬ್ನೇ ಇರ್ತಾನೆ, ಬೆಂಗ್ಳೂರು ತಿರುಗಾಡ್ಲಿ ಅಂತ ಕರ್ಕೊಬಂದೆ’ ಅಂತಿದ್ದರು, ಈಗ ಕತ್ಲಾಗಿಬಿಟ್ಟಿದ್ದರಿಂದ ಮಗನಿಗೆ ಬರುವಾಗ ಬಸ್ಸಿನ ಕಿಟಕಿಯಿಂದಷ್ಟೇ ಒಂದರ್ಧ ತಾಸು ಬೆಂಗಳೂರು ದರ್ಶನ.
ಕಾದಂಬರಿಕಾರ ಗುರುಪ್ರಸಾದ್ ಕಂಟಲಗೆರೆ
ನನಗೆ ಅಂದು ಅವರ ಜೀವನ ಪ್ರೀತಿ ಕಂಡು ಸೋಜಿಗವಾಗಿತ್ತು. ಆ ಮದುವೆ ಇದ್ದದ್ದು ಕನಕಪುರ ರಸ್ತೆಯಲ್ಲಿ. ಮೆಜೆಸ್ಟಿಕ್ಕಿಳಿದು ಬಸ್ಸತ್ತಿ ತಲುಪಿದ್ದರು. ಸಂಬಂಧದೆಡೆಗಿನ ಅವರ ಮುತುವರ್ಜಿ! ಜೊತೆಗೆ ಮಗನನ್ನೂ ಕರ್ಕೊಂಡು ಬಂದಿದ್ದರು. ಎಂಥಾ ಸಂಸಾರಸ್ಥ ಲೇಖಕ ಇವರು ಎಂದನಿಸಿತ್ತು. ಬದುಕಿನ ಹೊರಗೆ ನಿಂತು ಬರೆವ ಸಾಹಿತ್ಯಕ್ಕೂ ಬದುಕಿನ ಒಳಗೇನೆ ಇದ್ದು ಸೃಷ್ಟಿಸುವ ಸಾಹಿತ್ಯಕ್ಕೂ ಬಹಳ ಬಹಳ ಅಂತರ. ಮೇಲಿನ ಎರಡು ಘಟನೆಗಳು ನಿಮಗೆ ಮನವರಿಕೆಯಾಗಿದ್ದಲ್ಲಿ ‘ಅಟ್ರಾಸಿಟಿ’ಯಂತಹ ಕಾದಂಬರಿ ಹೇಗೆ ಹುಟ್ಟುತ್ತದೆ, ಯಾಕೆ ಹುಟ್ಟುತ್ತದೆ, ಕಂಟಲಗೆರೆಯವರಿಂದ ಯಾಕೆ ಬರೆಸಿಕೊಳ್ಳುತ್ತದೆ ಎಂದು ಅರ್ಥವಾಗುತ್ತದೆ. ಈ ಕಾದಂಬರಿಯ ಟೈಟಲ್ ನಿಮ್ಮನ್ನು ದಾರಿ ತಪ್ಪಿಸುತ್ತದೆ. ಇದು ಚಳುವಳಿಯದ್ದಲ್ಲ, ಹೋರಾಟದ್ದಲ್ಲ, ಸ್ಲೋಗನ್ನಿದಲ್ಲ. ಇದು ಮೂಲತಃ ಒಂದು ಹಟ್ಟಿಯ, ಅಣ್ಣತಮ್ಮಂದಿರ ಬದುಕಿನ ಕತೆ. ಇಲ್ಲಿ ನೀತಿಯ ಉದ್ಘೋಷಗಳಿಲ್ಲ. ಕಳೆದುಕೊಂಡಿದ್ದರ ಹಳಹಳಿಯಿಲ್ಲ. ಯಾರ ಬಗ್ಗೆಯೂ ಕಹಿಯಿಲ್ಲ. ಕಂಟಲಗೆರೆಯ ಗಂಟಲು ನಿಮಗೆ ಪರಿಚಯವಿದ್ದಲ್ಲಿ ಪಕ್ಕದಲ್ಲಿಯೇ ಕುಳಿತು ಮೌಖಿಕವಾಗಿ ಕಥೆ ಹೇಳುತ್ತಿದ್ದಾರೇನೋ ಅನಿಸುತ್ತದೆ. ಒಬ್ಬ ವ್ಯಕ್ತಿ ತಾತ್ವಿಕವಾಗಿ ಪ್ರಬುದ್ಧಗೊಂಡ ನಂತರ ಬದುಕಿನ ಬಗ್ಗೆ ಹಗೂರತನ ಬೆಳೆದಿರುತ್ತದೆ. ಆಗ ಬದುಕಿನ ನಿರೂಪಣೆಯೂ ಸಹ ಮಜಮಜವಾಗಿರುತ್ತದೆ.
ಈ ಕಾದಂಬರಿ ಒಂದರ್ಥದಲ್ಲಿ ‘ಎಂಟರ್ಟೇನಿಂಗ್’ ಕಾದಂಬರಿಯೇ ಹೌದು. ಪ್ರತಿ ಪುಟದಲ್ಲಿಯೂ ವಿಟ್ ಇದೆ. ನದಿ ತಳದಲ್ಲಿ ನಿಧಾನವಾಗಿ ಹರಿದಂತೆ ಕಾದಂಬರಿಯ ತಳದಲ್ಲಿ ನೋವು ಮೆಲ್ಲಗೆ ಹರಿಯುತ್ತದೆ. ಕಾದಂಬರಿಯ ಒಂದು ಸಣ್ಣ ಝಲಕ್ ನೊಂದಿಗೆ ಮುಕ್ತಾಯಗೊಳಿಸುವೆ. ಸುಬ್ರಾಯ ಅನ್ನುವ ಕೆಳವರ್ಗದ ವ್ಯಕ್ತಿ ಸಹಕಾರ ಸಂಘದ ವತಿಯಿಂದ ಊರಿನ ಮಹಿಳೆಯರಿಗೆಲ್ಲಾ ಸಾಲ ಕೊಡಿಸಿದ್ದಾನೆ. ಹೆಂಗಸರ ಕೈಗೆ ಬಂದ ದುಡ್ಡು ತರಹೇವಾರಿ ವಿಧದಲ್ಲಿ ಕರಗಿಹೋಗಿರುತ್ತೆ. ತಿಂಗಳ ತಿಂಗಳ ಕಂತಿನ ಮೂಲಕ ತೀರಸಬೇಕು. ಆರಂಭದಲ್ಲಿ ಒಂದೆರಡು ಕಂತು ಕಟ್ಟುತ್ತಾರೆ. ಆಮೇಲೆ ಕಷ್ಟವಾಗುತ್ತದೆ. ಮನೆಯ ಗಂಡಸರೂ ಕೈಯೆಯುತ್ತಾರೆ. ಕಂತು ಕಟ್ಟುವುದು ನಿಲ್ಲಿಸ್ತಾರೆ. ಬ್ಯಾಂಕಿನವರು ಸುಬ್ರಾಯನ ಹಿಂದೆ ಬೀಳ್ತಾರೆ, ವಸೂಲಿ ಮಾಡ್ಕೊಂಡು ಬಾ ಅಂತ. ‘ಅಸಲಿಗೆ ಮೊದಲ ಪ್ರತಿನಿಧಿ ಎನಿಸಿದ್ದ ಕಾಂತಮ್ಮಳೇ ಕೈಕೊಡತೊಡಗಿದಳು. ಸುಬ್ರಾಯ ತಾನು ಪ್ರತಿವಾರವೂ ಸಂಗ್ರಹಿಸಿ ಕಂಪನಿಗೆ ಕಟ್ಟಬೇಕಾದ ಹಣದಲ್ಲಿ ನಿಗದಿತ ಮೊತ್ತ ತಲುಪದಿದ್ದಾಗ ತಾನೇ ತನ್ನ ಸಂಬಳದಲ್ಲಿ ಕಟ್ಟಬೇಕಾಗಿ ಬಂತು. ಹೆಂಡತಿ ಜಯಲಕ್ಷ್ಮಿ ‘ಆ ಊರ ಮುಂಡೆರು ಹಲ್ಲು ಗಿಂಜಿರು ಅಂತ ತಗೊಂಡೋಗಿ ಸಾಲ ಕೊಡ್ಸಿ ಈ ಗತಿ ತಂದ್ಕಂಡಿದಿಯ, ನಡಿ ಅದ್ಯಾವಳು ಕಟ್ಟಲ್ಲ ನಾನು ಬತ್ತಿನಿ’ ಎಂದು ಒಂದಿಸ ಹೊರಟೇ ಬಿಟ್ಟಳು. ಬೈಕು ಕಾಂತಮ್ಮನ ಮನೆಯ ಮುಂದೆ ನಿಂತಾಗ ಕೆಲ ಹೆಂಗಸರು ಸುಬ್ರಾಯನ ಪರವಾಗಿ ಕಾಂತಮ್ಮನ ಮನೆ ಮುಂದೆ ನೆರೆದರು. ಅಂದು ಕಾಂತಮ್ಮ ಆಚೆ ಬರದೆ ಅವಳ ಅತ್ತೆ, ‘ಯಾರಪ್ಪ ನೀನು ಏನಾಗ್ಬೇಕಿತ್ತು, ನನ್ನ ಸೊಸೆ ಉಡಿಕ್ಕಂಡು ಬಂದಿದೀಯಾ, ಅವ್ಳಿಗು ನಿಂಗು ಏನು ಸಂಬಂಧ’ ಎಂದು ಆಚೆ ಬಂದಳು. ‘ಮೊ, ಕಟ್ಟಬೇಕಾಗಿರ ಕಂತು ಕಟ್ಟಿಲ್ಲ ಕಣಮ್ಮೋ, ಕೇಳಕೆ ಬಂದ್ರೆ ಏನೇನೊ ಮಾತಾಡ್ತೀಯಾ’, ಅಂತ ಜೋರು ಮಾಡಲು ನೋಡಿದನು. ‘ಗಾಡಿಲಿ ಬೈಕಿನಲ್ಲಿ ಎಲ್ಲೆಂದ್ರಲ್ಲಿ ಕುಂಣ್ರಿಸ್ಕಂಡು ತಿರ್ಗಾಡ್ಬೇಕಾರೆ ಅರಾಸು ಇರ್ಲಿಲ್ವ, ಅವ್ಳು ನಿನಿಗೆ ಕೊಡಬೇಕಿತ್ತ, ನೀನೇ ಅವ್ಳಿಗೆ ಕೊಡಬೇಕಿತ್ತ ಕಂಡಿರೋರು ಯಾರು? ನಡಿ ನಡಿ ತಿರ್ಗ ನಮ್ಮನೆತಕೆ ಬಂದು ಗಿಂದೀಯ’ ಅಂತ ಬಾಗಿಲು ದೂಡಿಕೊಂಡಳು.
ಜೊತೆಗೆ ಹೆಂಡತಿಯೂ ಇದ್ದಿದ್ರಿಂದ ಸುಬ್ರಾಯನಿಗೆ ಕಸಿವಿಸಿ. ‘ಮೋ ಮಂಜಮ್ಮ, ರಂಗಮ್ಮ, ನೀವಾನ ಹೇಳ್ರಮ್ಮ’ ಎಂದು ಹೆಂಡತಿಯ ಕಡೆ ಮುಖ ಮಾಡುತ್ತ ಕೇಳಿದನು. ‘ಸಾ ಕಂತು ಕಟ್ಬೇಕು ಸರಿ, ಆದ್ರೆ ನಿಮ್ಗೂ ಅವ್ಳಿಗೂ ಏನೇನು ನಡ್ದೈತ ನಮಿಗೆ ಗೊತ್ತಿಲ್ಲ’ ಎಂದು ಒಬ್ಬೊಬ್ಬರೆ ಕಾಲ್ಕಿತ್ತರು. ತಲೆ ಮೇಲೆ ಕೈಹೊತ್ತುಕೊಂಡ ಸುಬ್ರಾಯ ಬರಿಗೈಲಿ ಮನೆಗೆ ತಲುಪುವಾಗ ಜಯಲಕ್ಷಮಿ ಮಖ ದುಮುಗುಡಿಸಿಕೊಂಡು ಒಂದೂ ಮಾತಾಡದೆ ಹಿಂದೆ ಕೂತಿದ್ದಳು’. ಇದೆಲ್ಲ ಕಾಂತಮ್ಮನ ಗಂಡಂಗೆ ಗೊತ್ತಾಗುತ್ತೆ. ಅವನೂ ಸುಬ್ರಾಯನನ್ನ ಹುಡಿಕ್ಕೊಂಡು ಹೋಗ್ತಾನೆ. ಸ್ವಲ್ಪ ಏರಿಸಿಕೊಂಡೇ ಹೋಗಿರ್ತಾನೆ. ‘ನಿನ್ನಮ್ಮನ್ ಆಫೀಸರ್ ನಾ ಕ್ಯಾಯ.. ನನ್ ಹೆಂಡ್ತಿ ಹುಡಿಕ್ಕೊಂಡು ಮಂತಕೆ ಬಂದಿದಯ, ಗಂಡ ಅನ್ನನು ನಾನ್ಯಾಕೆ ತರಿಯಾಕೆ ಇದ್ದೀನ’ಎನ್ನುತ್ತ ಸುಬ್ರಾಯನ ಕೊಳ್ ಪಟ್ಣಿ ಹಿಡಿದು ನಾಲ್ಕು ಏಟು ಹಾಕೇ ಬಿಡ್ತಾನೆ. ಅಷ್ಟರಲ್ಲಿ ಹೆಂಗಸರ ಗುಂಪು ಬಿಡ್ರಿ ಬಿಡ್ರಿ ಅಂತ ಸೇರುತ್ತೆ. ಸುಬ್ರಾಯ ‘ನೀವೇನು ಅಂತಾ, ನಿಮ್ಜಾತಿ ಬುದ್ದಿ ತೋರ್ಸೇ ಬಿಟ್ರಿ’ ಎಂದು ಸಿಟ್ಟಿನಲ್ಲಿ ಅಂದು ಬಿಡ್ತಾನೆ. ‘ನಮ್ ಜಾತಿ ಹಿಡಿದು ಮಾತಾಡ್ತಿಯೇನೋ ಬೋಳಿ ಮಗನೇ ನಡೀ ಪೊಲೀಸ್ ಸ್ಟೇಶನ್ನಿಗೆ‘ ಅಂತಾನೆ ಕಾಂತಮ್ಮನ ಗಂಡ. ‘ಸಾಲ ವಸೂಲಿ ಮಾಡಲು ನಿಂದು ಎಷ್ಟೈತ ಅಷ್ಟ ನೋಡ್ಕಬೇಕು ಜಾತಿ ಸುದ್ದಿ ಇವ್ನಿಗೆ ಯಾಕಂತೆ’, ಸಂಘದ ಇತರೆ ಪ್ರತಿನಿಧಿಗಳೂ ರಿವರ್ಸ್ ಹೊಡಿತಾರೆ.
0 ಪ್ರತಿಕ್ರಿಯೆಗಳು