ಕಾಡಿದ ನಾಟಕ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’

-ಎಂ.ಎಸ್.ಪ್ರಕಾಶ್ ಬಾಬು

**

ಕನ್ನಡ ರಂಗಭೂಮಿಯ ಸಂದರ್ಭದಲ್ಲಿ ಪ್ರಸ್ತುತ, ಸಮಕಾಲೀನ ವಿಷಯಗಳನ್ನಿಟ್ಟುಕೊಂಡು ನೇರವಾಗಿ ರಂಗದ ಮೇಲೆ ಆಡಿದ ನಾಟಕಗಳು ಕಡಿಮೆ ಅಂತಾನೇ ಹೇಳಬಹುದು. ಆದರೆ ಇತ್ತೀಚಿಗೆ ಪ್ರದರ್ಶನಕೊಂಡ, ಪ್ರದರ್ಶನಕೊಳ್ಳುತ್ತಿರುವ, ಕೆ.ಪಿ. ಲಕ್ಷ್ಮಣ ನಿರ್ದೇಶಿಸಿರುವ ನಾಟಕ “ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ” ಕನ್ನಡ ರಂಗಭೂಮಿಯ ತನ್ನೆಲ್ಲಾ ಮಿತಿಗಳನ್ನು ಮೀರಲು, ಆ ಮೂಲಕ ತನ್ನ ಆಂತರ್ಯವನ್ನು ಬಾಹ್ಯಕ್ಕೆ ಒಡ್ಡಲು ಕಟ್ಟಿಕೊಂಡ ಫಾರ್ಮ್ ಅಚ್ಚರಿಯ ಜೊತೆಗೆ ಹೊಸತನದ ನಾಟಕ ಭಾಷೆಗೆ ನಾಂದಿ ಹಾಡುತ್ತಿದೆ.

ಕೆ.ಪಿ.ಲಕ್ಷ್ಮಣ ಅವರು ಈಗಾಗಲೇ ತಮ್ಮ ‘ದಕ್ಲಕಥಾ ದೇವಿಕಾವ್ಯ’ದಲ್ಲಿ ಅದರ ಕುರುಹುಗಳನ್ನು ಕೊಟ್ಟಿದ್ದರು. ಆ ನಾಟಕದ ಬಗ್ಗೆ ಈ ಹಿಂದೆ ಬರೆದಿದ್ದೆ. ಅದರ ಮುಂದುವರೆದ ಮತ್ತು ತುಂಬಾ ಸಂಸ್ಕರಿಸಿದ ದೃಷ್ಟಿಕೋನವನ್ನು ಇಲ್ಲಿ ಕಾಣಬಹುದಾಗಿದೆ. ಈ ಲೋಕದೃಷ್ಟಿ ಹಾಗೇ ಸೌಂದರ್ಯಕ್ಕಾಗಿಯೋ, ಪಂಚಿಗ್ ಡೈಲಾಗ್ ಗಳಿಗಾಗಿಯೋ, ರಂಗದ ಮೇಲಿನ ಪರಿಕರಗಳಿಗಾಗಿಯೋ, ಸೆಟ್ ಡಿಸೈನಿಗಾಗಿಯೋ ಅಥವಾ ಪ್ರೇಕ್ಷಕರನ್ನು ಮೆಚ್ಚಿಸಲೋ ಕಟ್ಟಿದ ರಂಗ ಸಂಯೋಜನೆಯಲ್ಲ.

ಇದು ತಳ ಸಮುದಾಯಗಳು ಅನುಭವಿಸಿದ, ಅನುಭವಿಸುತ್ತಿರುವ ಅವಮಾನ, ಶೋಷಣೆ, ಅನ್ಯಾಯಗಳ ಕಥನಗಳನ್ನು, ತನ್ನ ಒಡಲಿನ ಯಾತನೆಯನ್ನು ಹಾಡು ಹಾಸ್ಯಗಳ ಮೂಲಕ, ಸಾಮಾಜಿಕ ರಾಜಕೀಯ ವಿಡಂಬನೆಗಳ ಮೂಲಕ, ತಳ ಸಮುದಾಯಗಳ ಆಚಾರ, ವಿಚಾರ, ಪ್ರತಿಮೆಗಳ ಮೂಲಕ ಜಡಗೊಂಡ ಪ್ರೇಕ್ಷಕರನ್ನು ತಿವಿದು ಎಚ್ಚರಿಸುವ ಅನಿವಾರ್ಯತೆಯಿಂದ ಕಟ್ಟಿದ ನಾಟಕ “ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ” ರಂಗದ ಮೇಲೆ ಸಮರ್ಥವಾಗಿ ಪ್ರಸ್ತುತಪಡಿಸಿದೆ ಎಂದು ಹೇಳಲು ಇಚ್ಚಿಸುತ್ತೇನೆ.

ಭಾರತೀಯ ಸಮಾಜ ಹಿಂದೆಂದಿಗಿಂತಲೂ ಇಂದು ಜಾತಿ ವ್ಯವಸ್ಥೆಯ ಕ್ರೌರ್ಯದ ಬಹು ಮುಖಗಳನ್ನು ಹೊರಹಾಕಿದೆ. ಅದಕ್ಕೆ ಪ್ರಭುತ್ವದ ಬೆಂಬಲವೂ ಇರುವುದು ಕಣ್ಣಿಗೆ ರಾಚುವಂತೆ ಕಾಣುತ್ತಿದ್ದರೂ ಅದನ್ನು ಪ್ರತಿರೋಧಿಸುವ, ಅದರ ವಿರುದ್ಧ ದನಿ ಎತ್ತುವ ಬೌದ್ಧಿಕ ವರ್ಗಗಳಾಗಲಿ, ಪ್ರಜ್ಞಾವಂತ ಮನಸ್ಸುಗಳಾಗಲಿ ಇಂದಿನ ಸಮಾಜದಲ್ಲಿ ಕಾಣೆಯಾಗಿರುವುದು ಇಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿವೆ.

ಕರ್ನಾಟಕವನ್ನು ಕೇಂದ್ರೀಕರಿಸಿ ಹೇಳುವುದಾದರೂ ಇಲ್ಲಿ ನಡೆದ ರೈತ ಚಳುವಳಿಗಳಿಂದಾಗಲಿ, ದಲಿತ ಚಳುವಳಿಗಳಿಂದಾಗಲಿ, ಬಂಡಾಯ ಚಳುವಳಿಗಳಿಂದಾಗಲಿ ನಾವು ಕಲಿತದ್ದೇನು? ಇವುಗಳಿಗೆ ಏನಾದರೂ ಅರ್ಥವಿದೆಯಾ? ಹಾಗಾದರೆ ಲಂಕೇಶ್, ತೇಜಸ್ವಿ, ಡಿ.ಆರ್.ನಾಗರಾಜ್, ದೇವನೂರು ಮಹದೇವ, ಸಿದ್ದಲಿಂಗಯ್ಯ, ಪ್ರೊ. ನಂಜುಂಡಸ್ವಾಮಿ ನಮ್ಮಗಳ ಪ್ರಜ್ಞೆಯನ್ನು ವಿಸ್ತರಿಸಲಿಲ್ಲವೇಕೆ? ಅಥವಾ ನಾವುಗಳು ಅವರಿಂದ ಏನನ್ನೂ ಕಲಿಯಲಿಲ್ಲವೇ? ಅವರ ನಡೆ, ವಿಚಾರ, ಪಠ್ಯ ನಮಗೆ ದಾರಿದೀಪವಾಗಲಿಲ್ಲವೇಕೆ? ಏಕೆ ನಾವು ಹಿಂದೆಂದಿಗಿಂತಲೂ ಇಂದು ಮೌಡ್ಯದೆಡೆಗೆ ಚಲಿಸುತ್ತಿದ್ದೇವೆ?, ಏಕೆ ತಾರತಮ್ಯವನ್ನು ಹೇರಿಕೊಳ್ಳುತ್ತಿದ್ದೇವೆ?, ಹಿಂದೆಂದಿಗಿಂತಲೂ ಇಂದು ಏಕೆ ಜಾತಿಯ ಗುರುತುಗಳು ನಮ್ಮನ್ನು ಬದುಕಲಾರದಷ್ಟು ಅಸಹ್ಯವಾಗಿಸುತ್ತಿವೆ? ಇದಕ್ಕೆಲ್ಲಾ ಪ್ರಭುತ್ವವನ್ನು ಹೊಣೆಯಾಗಿಸುವುದು ಸುಲಭ, ಆದರೆ ಅದರಲ್ಲಿ ನಮ್ಮ ಪಾಲು ಇದೆ ಎನ್ನುವ ಪಾಪಪ್ರಜ್ಞೆ ಮೂಡಬೇಕಾಗಿದೆ.

ಆ ಪಾಪಪ್ರಜ್ಞೆ ಪ್ರೇಕ್ಷಕರಲ್ಲಿ ಮೂಡುವಂತೆ ಮಾಡಲು ನಾಟಕ ಯಶಸ್ವಿಯಾಗಿದೆ ಎಂದು ಹೇಳಬಹುದೇನೊ ಎಂದೆನಿಸಿದರೂ ಒಂದು ಅನುಮಾನ ನಮ್ಮೊಳಗೇ ಉಳಿಯುವುದು ಶತ ಶತಮಾನಗಳ ನಮ್ಮ ದಾಸ್ಯದ ಫಲ, ರಂಗದಿಂದ ಹೊರ ನಡೆದ ಮೇಲೆ ಈ ಪ್ರಜ್ಞೆ ಉಳಿಯುವುದೋ ಇಲ್ಲವೋ ಹೇಳುವುದು ಕಷ್ಟ. ಇಂದಿನ ಭಾರತೀಯ ಮನಸ್ಸು ಅಷ್ಟು ಕಲುಷಿತಗೊಂಡಿದೆ, ಜಾತಿ ಎಂಬೋ ವಿಷಬಳ್ಳಿ ಭಾರತೀಯ ಮೇಲ್ಜಾತಿಗಳ ಮೆದುಳನ್ನು ಹೇಗೆ ಆವರಿಸಿಕೊಂಡಿದೆ ಅಂದರೆ ಮೇಲು ಕೀಳೆಂಬ ಗಾಯದ ಗುರುತುಗಳು ಮಾಯದಂತೆ ಎಚ್ಚರವಹಿಸಿಕೊಂಡು ಬಂದ ಮೇಲ್ಜಾತಿಗಳ ಮನಸ್ಸನ್ನು ಒರೆಗೆ ಹಚ್ಚುವ ಅನಿವಾರ್ಯತೆಯನ್ನು ನಾಟಕ ಒತ್ತಿ ಒತ್ತಿ ಹೇಳುತ್ತದೆ.

ಕವಿ ಎನ್.ಕೆ.ಹನುಮಂತಯ್ಯ ಅವರ ಕಾವ್ಯದ ಸಾಲುಗಳಿಂದ ಆರಂಭವಾಗುವ “ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ” ನಾಟಕ, ನಾಟಕದ ನಟರಾದ ಚಂದ್ರು, ಭರತ್ ಮತ್ತು ನಟಿ ಶ್ವೇತ ಹಾಸನ , ಹಾಡುಗಾರ್ತಿ ಮರಿಯಮ್ಮ ಅವರ ವೈಯಕ್ತಿಕ ಬದುಕಿನ ಅನುಭವಗಳನ್ನು ನಟನೆಯ ಮೂಲಕ, ಹಾಡು-ಕುಣಿತಗಳ ಮೂಲಕ, ವಿಡಂಬಾತ್ಮಕ ಹಾಸ್ಯದ ಮೂಲಕ, ಶಬ್ಧ-ಮೌನಗಳ ಮಧ್ಯೆ, ನಿಶಬ್ಧದ ತುತ್ತ ತುದಿಯಲ್ಲಿ ನಿಲ್ಲಿಸಿ, ಮತ್ತೆ ಮತ್ತೆ ಬಾಬ್ ಮಾರ್ಲಿಯ ಹೋರಾಟದ ಹಾಡುಗಳನ್ನು ನೆನೆಸುತ್ತಾ ಕೇಕೆ ಹಾಕಿ, ಪ್ರೆಕ್ಷಕರನ್ನು ಒಮ್ಮೊಮ್ಮೆ ನಗಬೇಕೋ ಅಳಬೇಕೋ ಎಂಬ ಗೊಂದಲಕ್ಕೆ ಸಿಲುಕಿಸಿ, ಕಚಗುಳಿ ಇಟ್ಟು, ಮತ್ತೆ ಭರ್ಚಿಯಿಂದ ತಿವಿದು ಎಚ್ಚರಿಸಿ ರಂಗದ ಮೇಲೆಲ್ಲಾ ಆಡಿ ಹಾಡುತ್ತಲೇ ಪಾಠ ಮಾಡುವ ಪರಿ ಅಚ್ಚರಿಯನ್ನು ಮೂಡಿಸಿತ್ತು. ನಾಟಕ ಸಿನೆಮಾಕ್ಕಿಂತ ಭಿನ್ನವಾಗುವುದು ಈ ಕಾರಣಕ್ಕಾಗಿಯೇ, ಈ ರೀತಿಯ ಸಾಧ್ಯತೆಗಳನ್ನ ಸಿನೆಮಾದಲ್ಲಿ ಮಾಡಿದ ತಕ್ಷಣ ಅದು ಸಿನೆಮಾ ಆಗುವುದಿಲ್ಲ, ಅದನ್ನು ಕಟ್ಟುವ ಭಾಷೆಯೇ ಬೇರೆ, ಇದರ ಅರಿವು ಇಲ್ಲದಿದ್ದರೆ ನಾಟಕ, ನಾಟಕವೂ ಆಗುವುದಿಲ್ಲ, ಸಿನೆಮಾ, ಸಿನೆಮಾನೂ ಆಗುವುದಿಲ್ಲ.

ರಂಗದ ಮೇಲೆ ಈ ಮೂರು ಪಾತ್ರಗಳ ಮೂಲಕ ಅವರ ಕತೆಗಳು ಅನಾವರಣಗೊಳ್ಳುತ್ತ ಸಾಗುತ್ತವೆ. ಕವಿ ಎನ್.ಕೆ.ಹನುಮಂತಯ್ಯ ಅವರ ಕಾವ್ಯ ಓದುತ್ತಿರುವ ಶಾಲಾ ಶಿಕ್ಷಕಿ, ನಾಟಕದ ಗಾಯಕ ಕೋಡಿಹಳ್ಳಿಯ ಬಾಬ್ ಮಾರ್ಲಿ, ಮತ್ತು ಇನ್ನೊಬ್ಬ ಮಹತ್ವಾಕಾಂಕ್ಷೆಯ ಸ್ಟಾಂಡಪ್ ಕಾಮಿಡಿಯನ್ ಆಗಬಯಸಿರುವ ಯುವಕ, ಇವರೆಲ್ಲರೂ ನಗರದ ಒಂದು ಬಾಡಿಗೆ ಮನೆಯಲ್ಲಿದ್ದುಕೊಂಡು ತಮ್ಮ ತಮ್ಮ ಕನಸುಗಳನ್ನು ಕಟ್ಟಿಕೊಳ್ಳುತ್ತಿರುವ ಜಾಣೆ-ಜಾಣೆಯರು, ಆ ಬಾಡಿಗೆಮನೆಯಲ್ಲಿ ಮಾಂಸಹಾರ ನಿಷಿದ್ಧ, ಗುಟ್ಟಾಗಿ ತಂದು ತಿಂದು ನಾಯಿಗೆ ಹಾಕಿದ ಮೂಳೆಯಿಂದಾಗಿ ರಾದ್ಧಾಂತವಾಗಿ ಮನೆ ಖಾಲಿ ಮಾಡುವಂತಾ ಸ್ಥಿತಿಗೆ ಬಂದು ತಲುಪುತ್ತದೆ. ರಂಗದ ಮೇಲೆ ಮಾಂಸಾಹಾರವನ್ನು ತಿನ್ನುವ ದೃಶ್ಯದ ಮೂಲಕ ಬ್ರಾಹ್ಮಣ್ಯದ, ರಂಗದ ಪ್ರಾವಿತ್ರ್ಯ ಎಂಬ ಕಲ್ಪನೆಯನ್ನು ಒಂದು ಪೊಲಿಟಿಕಲ್ ಆಕ್ಟ್ ಆಗಿ, ಒಂದು ಶಕ್ತಿಯುತ ರೂಪಕವಾಗಿ, ನಮ್ಮ ಆಹಾರ ನಮ್ಮ ಹಕ್ಕು ಎಂಬುದನ್ನು ನಿರಾಯಾಸವಾಗಿ ಪ್ರೇಕ್ಷಕರನ್ನು ತಬ್ಬಿಬ್ಬಾಗಿಸುತ್ತದೆ. ನಮ್ಮ ಸಂವಿಧಾನದ ಆಶಯಗಳನ್ನು ನಗಣ್ಯವಾಗಿ ನೋಡುತ್ತಿರುವ ಇಂದಿನ ಪ್ರಭುತ್ವದ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿಕೊಳ್ಳುವ ಅಗತ್ಯ ನಮ್ಮ ಮೇಲಿದೆ.

ನಾಟಕದ ಕೊನೆಯ ಭಾಗದಲ್ಲಿ ಬರುವ ಶಿಕ್ಷಕಿಯ ಅವ್ವನ ಕಥನ, ಹೆಣ್ಣೊಬ್ಬಳ, ಅದರಲ್ಲೂ ಒಬ್ಬ ದಲಿತ ಹೆಣ್ಣೊಬ್ಬಳ ಬದುಕಿನಲ್ಲಿ ಅವಳು ಅನುಭವಿಸುವ ಸಂಕಟ, ಯಾತನೆ, ಅವಮಾನಗಳನ್ನು ತಳ ಸಮುದಾಯಗಳ ಹಾಡು, ಕುಣಿತ, ದೈವಿಕ ಆಚರಣೆಗಳನ್ನೆ ಒಂದು ಅಸ್ತ್ರದೋಪಾದಿಯಾಗಿ, ಪ್ರತಿಭಟನಾತ್ಮಕವಾಗಿ ನಿರ್ದೇಶಕ ಇಲ್ಲಿ ಕಟ್ಟಿಕೊಡುತ್ತಾನೆ.

ಎಲ್ಲಿಯವರೆಗೆ ಮೇಲು – ಕೀಳು ಇರ್ತದೋ, ಶ್ರೇಷ್ಠ-ಕನಿಷ್ಠಗಳ ವ್ಯಸನ ಇರ್ತದೋ, ಅಲ್ಲೀಗಂಟ ಅಸಮಾನತೆ ಇರ್ತದೆ… ಪ್ರತಿಭಟನೆ ಇರ್ತದೆ…ಹೋರಾಟ ಇರ್ತದೆ…ಯುದ್ಧ ಇರ್ತದೆ ಎನ್ನುವ ಹಾಡಿನೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ಯಾವುದೇ ಒಂದು ಕಲೆಯ ಫಾರ್ಮ್ (ಆಕಾರ) ಹಾಗೇ ಹುಟ್ಟಿಕೊಳ್ಳುವುದಿಲ್ಲ, ಅದಕ್ಕೆ ಸಮಾಜದ ಸಾಮಾಜಿಕ, ರಾಜಕೀಯ, ಆರ್ಥಿಕ ಒತ್ತಡಗಳು ಕಾರಣವಾಗಿರುತ್ತವೆ, ಈ ಎಲ್ಲದರ ಅರಿವು ಒಬ್ಬ ನಿರ್ದೇಶಕನಲ್ಲಿ ಇದ್ದಾಗಲೇ ಈ ರೀತಿಯ ರಂಗ ಕೃತಿಗಳು ಸಂಭವಿಸಲು ಸಾಧ್ಯ. ಅದನ್ನು ಆಗುಮಾಡಿದ ಕೆ.ಪಿ. ಲಕ್ಷ್ಮಣ ಮತ್ತು ಅವರ ತಂಡಕ್ಕೆ ಅಭಿನಂದನೆಗಳು.

‍ಲೇಖಕರು avadhi

August 19, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: