‘ಕಾಟೇರ’ದ ಯಶಸ್ಸಿನಿಂದ ಕನ್ನಡ ಚಿತ್ರರಂಗ ಮತ್ತೆ ಎದ್ದುಬರಲಿ

ಜಯರಾಮಾಚಾರಿ

**

ಈ ‘ಬಾಸುಗಳ’ ಹಾವಳಿ ಶುರುವಾದ ಮೇಲೆ, ಬಾಸುಗಳು ಸ್ಟಾರುಗಳು ಅನಿಸಿಕೊಳ್ಳುವ ನಟರು ತಮ್ಮ ಇಮೇಜಿಗೆ ತಕ್ಕಂತೆ, ತಮ್ಮ ಅಭಿಮಾನಿಗಳಿಗೆ ನಿರಾಶೆ ಮಾಡದಂತೆ ಸಿನಿಮಾ ಮಾಡುವ ಟ್ರೆಂಡಿಂಗ್ ಶುರುವಾದದ್ದು, ಅಲ್ಲಿವರೆಗೂ ನಟ ನಟಿಸುವುದಷ್ಟೇ ಕೆಲಸವಾಗಿತ್ತು, ಎಲ್ಲ ತರಹದ ಪಾತ್ರಗಳನ್ನು ನಿಭಾಯಿಸಿದ ಡಾ.ರಾಜಕುಮಾರ್ ಅವರಿಗೆ ತಮ್ಮ ಇಮೇಜಿನ ಬಗ್ಗೆ ಕೇಳಿದಾಗ ‘ಅಯ್ಯೋ ನಂದೇನಿಲ್ಲ, ನಿರ್ದೇಶಕರು ಮಾಡಿಸಿದ್ದು’ ಎಂದು ಹೇಳುತ್ತಿದ್ದರು, ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು, ನಿರ್ಮಾಪಕರನ್ನ ಅನ್ನ ನೀಡುವವರು ಎನ್ನುತ್ತಿದ್ದರು. ಆದರೆ ಇವತ್ತಿನ ಸ್ಟಾರುಗಳು ಆಡಿಯೋ ಲಾಂಚ್ ಟ್ರೈಲರ್ ಗಳಲ್ಲಿ ಬೇರೆ ನಟರನ್ನ ಬೇರೆ ನಟರ ಅಭಿಮಾನಿಗಳನ್ನ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಈ ಸೊ ಕಾಲ್ಡ್ ಸ್ಟಾರ್ ಅಭಿಮಾನಿಗಳು ಫ್ಯಾನ್ ವಾರ್ ಮಾಡುವಲ್ಲಿಗೆ ಬಂದು ನಿಂತಿದ್ದಾರೆ. ಹಿರಿಯ ನಟ ಜಗ್ಗೇಶರನ್ನು ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಕ್ಷಮೆ ಕೇಳಿಸಿದ್ದು ಇತ್ತೀಚೆಗೆ ನೋಡಿರಬಹುದು. ನಟರು ಕೂಡ ತಮ್ಮ ಸಿನಿಮಾಗಳಲ್ಲಿ ಡೈಲಾಗು ಮೂಲಕ ಬೇರೆ ನಟರಿಗೆ ಟಾಂಗ್ ಕೊಡುವಲ್ಲಿಗೆ ‘ಮೆಚೂರ್ಡ್’ ಆಗಿದ್ದಾರೆ. ಇವೆಲ್ಲ ಶುರುವಾಗಿದ್ದು ನಟರು ಸ್ಟಾರುಗಳಾಗಿ, ಸ್ಟಾರುಗಳು ಬಾಸುಗಳು ಆದ ಮೇಲೆ, ಆಯಾ ಬಾಸುಗಳಿಗೆ ಅವರದೇ ಅಭಿಮಾನಿ ವರ್ಗ ಮತ್ತು ಮಾರ್ಕೆಟ್. ಬಾಕ್ಸ್ ಆಫೀಸ್ ಮೂಲಕ ಚಿತ್ರದ ಸಕ್ಸಸ್ ಅಳೆಯುವ ಕಾಲದಲ್ಲಿ ಪ್ರಯೋಗಗಳಿಗೆ, ಇಮೇಜುಗೆ ಧಕ್ಕೆಯಾಗುವ ಒಳ್ಳೆಯ ಸಿನಿಮಾಗಳಿಗೆ, ಹೊಸತನಕ್ಕೆ ಸದ್ಯದ ಬಾಸುಗಳು ಬೆಚ್ಚಿಬೀಳುತ್ತಾರೆ, ಒಂದು ಸೋಲಿನ ಭಯ ಇನ್ನೊಂದು ಮಾರ್ಕೆಟ್ ಕುಸಿತ.

ಇಷ್ಟೆಲ್ಲ ಅನಿಶ್ಚಿತತೆ ಮತ್ತು ಅಭದ್ರತೆಗಳ ಮಧ್ಯೆ ಅಪಾರ ಅಭಿಮಾನಿಗಳನ್ನ ಸಂಪಾದಿಸಿರುವ, ದೊಡ್ಡ ಮಾರ್ಕೆಟ್ ಇರುವ ಚಾಲೆಂಜಿಂಗ್ ಸ್ಟಾರ್ ಜೊತೆ ಡಿ ಬಾಸ್ ಕೂಡ ಆಗಿರುವ ದರ್ಶನ್ ಎಂಬ ನಟ ‘ಕಾಟೇರ’ ಎಂಬ ಬೋಲ್ಡ್ ಆದ ಸಬ್ಜೆಕ್ಟಿಗೆ ಹಸಿರು ಸಿಗ್ನಲ್ ಕೊಟ್ಟು ಸಿನಿಮಾವನ್ನು ಬಾಕ್ಸ್ ಆಫೀಸ್ ಹಿಟ್ ಮಾಡಿರುವುದು ಕನ್ನಡ ಚಿತ್ರರಂಗದ ಹೊಸ ಭರವಸೆ ಎನ್ನಬಹುದು. 

ಹಾಗಂತ ಕಾಟೇರದಲ್ಲಿ ಅತ್ಯದ್ಭುತ ಕತೆಯನ್ನ ಭಯಂಕರ ಬೋಲ್ಡ್ ಆಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದು ಸುಳ್ಳು, ಇವತ್ತಿಗೂ ಜೀವಂತವಾಗಿರುವ ಅಸ್ಪೃಶ್ಯತೆ, ಜಾತಿ ಪದ್ಧತಿ, ರೈತರ ಸಮಸ್ಯೆಗಳು, ವ್ಯವಸ್ಥೆಯಲ್ಲಿನ ರಾಜಕೀಯ ಮಧ್ಯೆ ನ್ಯಾಯವಾಗಿ ಇರುವ ಜನರು ಪಡುವ ಸಂಕಟಗಳನ್ನ ಒಂದು ಕಮರ್ಷಿಯಲ್ ಟೆಂಪ್ಲೇಟಿನಲ್ಲಿ ಕತೆ ಹೇಳಿದ್ದಾರೆ. ಹಾಗಾಗಿ ಇಲ್ಲಿ ತೀರಾ ಇಲ್ಲಾಜಿಕಲ್ ಆದ ಫೈಟಿಂಗ್ ಗಳಿವೆ, ಅನವಶ್ಯಕವಾದ ಡುಯೆಟ್ ಹಾಡುಗಳಿವೆ, ಸೀರಿಯಲ್ ಮಟ್ಟದ ವಿ ಎಫ್ ಎಕ್ಸ್ ಜೊತೆಗೆ ಕ್ಲೀಷೆ ಎನಿಸುವಷ್ಟು ಮೇಕ್ಅಪ್ ಇದೆ, ಇದೆಲ್ಲವೂ ಇದ್ದು ಸಿನಿಮಾ ಇಷ್ಟು ಮಟ್ಟಿಗೆ ಸದ್ದು ಮಾಡಲು ಮುಖ್ಯ ಕಾರಣ ಮಾತಾಡಲು ಭಯಪಡುವ ಈ ವಾತಾವರಣದಲ್ಲಿ ಮಾತಾಡಲೇಬೇಕಿದ್ದ ಒಂದು ಕತೆಯನ್ನ, ಮಾತಾಡಲೇಬೇಕಿದ್ದ ನಮ್ಮ ಅಕ್ಕ ಪಕ್ಕದ ಸಮಸ್ಯೆಗಳನ್ನು ಯಾವ ಮುಲಾಜಿಲ್ಲದೆ ತೀರಾ ಮೆಚೂರ್ಡ್ ಆಗಿ ಕಟ್ಟಿಕೊಟ್ಟಿರುವುದಕ್ಕೆ. ಈ ಸಿನಿಮಾದ ದೊಡ್ಡ ಶಕ್ತಿ ‘ಮಾಸ್ತಿಯವರ ಸಂಭಾಷಣೆ’ ಜಡೇಶ್ ಮತ್ತು ತರುಣ್ ಸುಧೀರ್ ಅವರ ಕತೆ ಚಿತ್ರಕತೆ ಮತ್ತು ನೆನಪಿಡುವಂತಹ ಅಭಿನಯ.

ಮೊದಲ ಸಲ ದರ್ಶನ್ ನಟಿಸಿದ್ದಾರೆ ಎಂದು ಒಂದಷ್ಟು ಮಂದಿ ಮಾತಾಡುತ್ತಿದ್ದಾರೆ, ದರ್ಶನ್ ನಟಿಸಿರುವ ಮೆಜೆಸ್ಟಿಕ್, ದತ್ತ, ಗಜ, ರಾಬರ್ಟ್ ಸಿನಿಮಾ ನೋಡಿದ್ದರೆ ಅವರೊಳಗಿನ ಒಳ್ಳೆ ಪರ್ಫಾರ್ಮರನ್ನ ಖಂಡಿತ ಗುರುತಿಸಬಹುದು, ಮಾರ್ಕೆಟ್ಟಿಗೋ, ಇಮೇಜಿಗೂ ಗಂಟು ಬಿದ್ದ ದರ್ಶನ್ ಮೊದಲ ಸಲ ಮೈಚಳಿ ಬಿಟ್ಟು ಒಂದು ಒಳ್ಳೆ ಸ್ಕ್ರಿಪ್ಟ್ ಆಯ್ಕೆ ಮಾಡಿದ್ದಾರೆ ಎಂದರೆ ತಪ್ಪಾಗದು, ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು, ಕೆಲವು ಗಲಾಟೆಗಳ ನಂತರ ಮೀಡಿಯಾದವರ ಅಸಹಕಾರ, ತುಂಬಾ ಹೈಪ್ ಇದ್ದು ಬಾಕ್ಸ್ ಆಫೀಸಲ್ಲಿ ಅಷ್ಟೊಂದು ಸದ್ದು ಮಾಡದ ಕ್ರಾಂತಿ ಸಿನಿಮಾ, ಒಂದಷ್ಟು ತಗಾದೆಗಳು, ಫ್ಯಾನ್ ವಾರ್ ಮಧ್ಯದಲ್ಲಿ ದರ್ಶನ್ ಗೆ ಒಂದು ಗೆಲುವು ಬೇಕಿತ್ತು. ಆ ಗೆಲುವು ಇಲ್ಲಿ ಸಿಕ್ಕಿದೆ.

ಬಾಸುಗಳಾಗಿಯೂ ಒಳ್ಳೆ ಒಳ್ಳೆ ಸಿನಿಮಾ ಕೊಡುವುದು ಬೇರೆ ಭಾಷೆಗಳಲ್ಲಿ ಇದೆ. ಮಾರ್ಕೆಟ್ ಸಮಸ್ಯೆ ಇದ್ದರೂ ಮಲಯಾಳಂ, ಮರಾಠಿ ಸಿನಿಮಾಗಳು ಇದಕ್ಕೆ ಸಾಕ್ಷಿ. ಮಾರುಕಟ್ಟೆ ಇದ್ದರೂ ತಮಿಳು ಭಾಷೆಯ ಸಿನಿಮಾಗಳು ಕಮರ್ಷಿಯಲ್ ಚೌಕಟ್ಟಿನಲ್ಲೇ ಸಮಕಾಲೀನ ಸಂಕಟಗಳನ್ನ ಸವಾಲುಗಳನ್ನ ಸಿನಿಮಾ ಮಾಧ್ಯಮಕ್ಕೆ ಚೆನ್ನಾಗಿ ಅಡಾಪ್ಟ್ ಮಾಡಿಕೊಂಡಿದ್ದಾರೆ, ಆದರೆ ಈ ವಿಷ್ಯದಲ್ಲಿ ಚಂದನವನ ಯಾಕೋ ಇತ್ತೀಚೆಗೆ ತೀರಾ ಹಿಂದುಳಿದಿದೆ, ಎಪ್ಪತ್ತು ಎಂಭತ್ತು ತೊಂಭತ್ತರ ಅವಧಿಯಲ್ಲಿ ನಮ್ಮ ಕನ್ನಡ ಸಿನಿಮಾಗಳು ಎಲ್ಲ ತರದ ಪ್ರಯೋಗಕ್ಕೆ ಇಳಿದು ತುಂಬಾ ಒಳ್ಳೆ ಒಳ್ಳೆ ಸಿನಿಮಾಗಳ ಮೂಲಕ ಬೇರೆ ಬೇರೆ ಸಮಸ್ಯೆಗಳನ್ನು ಮುಟ್ಟಿತ್ತು. ಯಶಸ್ವಿ ಕೂಡ ಆಗಿತ್ತು.

ಡಾ ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್ ಇವರೆಲ್ಲ ಪ್ರಯೋಗಕ್ಕೆ ಇಳಿದು ಗೆದ್ದವರೇ, ಶಿವರಾಜಕುಮಾರ್ ಕೂಡ ದೊರೆ, ಚಿಗುರಿದ ಕನಸು, ಹಗಲುವೇಷ ಎನ್ನುವ ಸಿನಿಮಾಗಳ ಮೂಲಕ ಇಂತಹ ಸವಾಲನ್ನು ಸ್ವೀಕರಿಸಿ ಗೆದ್ದಿದ್ದರು ಆಮೇಲೆ ಕನ್ನಡ ಚಿತ್ರರಂಗಕ್ಕೆ ಅದ್ಯಾವ ಮಂಕು ಬಡಿಯಿತೋ, ಇವಾಗಲಂತೂ ಎಲ್ಲ ಸಿನಿಮಾಕ್ಕೂ ಪ್ಯಾನ್ ಇಂಡಿಯಾ ಲೇಬಲ್ ಹಚ್ಚುವ ತೆವಲು ಶುರುವಾಗಿದೆ, ಮೋರ್ ಲೋಕಲ್ ಇಸ್ ಮೋರ್ ಗ್ಲೋಬಲ್ ಎಂದು ರಿಷಬ್ ಶೆಟ್ಟಿ ಒಂದು ಸಂದರ್ಶನದಲ್ಲಿ ಹೇಳಿದ್ದು ನಿಜ, ನಾವು ಇಲ್ಲಿನ ಕತೆಗಳನ್ನು ಗಟ್ಟಿಯಾಗಿ ಕಟ್ಟಿಕೊಟ್ಟಾಗಲೇ ಅದು ಪ್ಯಾನ್ ಇಂಡಿಯಾ ಆಗಲಿಕ್ಕೆ ಸಾಧ್ಯ.

ಕಾಟೇರದ ಯಶಸ್ಸಿನಿಂದ ಆದರೂ ಕನ್ನಡ ಚಿತ್ರರಂಗ ಮತ್ತೆ ಎದ್ದುಬರಲಿ.

‍ಲೇಖಕರು avadhi

January 3, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: