‘ಕಾಗೆ ಮುಟ್ಟಿದ ನೀರು’ ಎಂಬ ಕನ್ನಡಿಯಲ್ಲಿ ಕಂಡ
ಪುರುಷೋತ್ತಮ ಬಿಳಿಮಲೆ

-ಜಿ ಎನ್ ಮೋಹನ್

ಚಿತ್ರಗಳು: ಅವಧಿಮ್ಯಾಗ್ ಹಾಗೂ ಬಿಳಿಮಲೆ ಅವರ ಸಂಗ್ರಹದಿಂದ

ನಾನು ಚಂದ್ರಹಾಸ ಕೋಟೆಕಾರರನ್ನು ಬೆನ್ನಿಗಿಟ್ಟುಕೊಂಡು ಕೊಣಾಜೆಯ ಆ ಮನೆಯ ಬಾಗಿಲು ಬಡಿದಾಗ ರಾತ್ರಿ ಸರಿಯಾಗಿ ಎಂಟು ಗಂಟೆಯಾಗಿತ್ತು. ಬಾಗಿಲು ತೆಗೆದ ಪುರುಷೋತ್ತಮ ಬಿಳಿಮಲೆ ಹಾಗೂ ಶೋಭನಾ ನೇರವಾಗಿ ನಮ್ಮನ್ನು ಕರೆದುಕೊಂಡು ಹೋಗಿ ಕೂರಿಸಿದ್ದು ಊಟದ ಟೇಬಲ್ ಗೇ. ಇದ್ದ ಮೂರ್ನಾಲ್ಕು ಮೀನನ್ನೇ ಹೇಳದೆ ಬಾಗಿಲು ಬಡಿದ ನಮಗೂ ಹಂಚಿದರು. ನಾನು ಬೆಂಗಳೂರೆಂಬ ಮಾಯಾ ನಗರಿಗೆ ಬೆನ್ನು ಹಾಕಿ ಕಡಲ ತೀರವನ್ನು ಸೇರಿಕೊಂಡಾಗ ಮೊದಲು ತಟ್ಟಿದ ಬಾಗಿಲು ಅದು. ಹಾಗೂ ಅಲ್ಲಿ ಮೊದಲು ತಿಂದ ಮೀನೂ ಕೂಡಾ..

ಹಾಗೆ ರಾತ್ರೋರಾತ್ರಿ ಸಹಾ ಬಾಗಿಲು ತೆರೆದು ಕೂರುವವರ ಪಟ್ಟಿ ದೊಡ್ಡದಾಗೇನೂ ಇರಲಿಲ್ಲ. ಅದು ಅಂದಿಗೂ ನಿಜ, ಇಂದಿಗೂ.. ಅಂತಹ ಕೆಲವೇ ಮಂದಿಯ ಪೈಕಿ ಪುರುಷೋತ್ತಮ ಬಿಳಿಮಲೆ ಒಬ್ಬರಾಗಿದ್ದರು. ಬಿಳಿಮಲೆ ಅವರು ತೆರೆದ ಬಾಗಿಲೇ ಸೈ. ಅದು ಗೆಳೆತನದ ವಿಷಯಕ್ಕೂ ಹಾಗೂ ಜಗತ್ತಿನ ವಿದ್ಯಮಾನಗಳಿಗೂ. ತಮ್ಮೊಳಗನ್ನು ಶುದ್ಧಿ ಮಾಡಿಕೊಳ್ಳಲು, ತಮ್ಮೊಳಗೆ ಒಂದು ಜಗತ್ತನ್ನು ಕೂರಿಸಿಕೊಳ್ಳಲು, ತಮ್ಮ ಬದುಕಿನುದ್ದಕ್ಕೂ ಒಂದು ನಂಜರಿಯದ ವ್ಯಕ್ತಿತ್ವ ಕಟ್ಟಿಕೊಳ್ಳಲು ಆ ‘ತೆರೆದ ಬಾಗಿಲು’ ಅದಕ್ಕೆ ಸಹಾಯ ಮಾಡಿತ್ತು.

ರಾತ್ರಿ ತಡ ವೇಳೆಯಲ್ಲಿ ಹೋದ ಸಂಕೋಚದಲ್ಲಿಯೇ ಒಂದಿಷ್ಟು ಮಾತನಾಡಿದ ಶಾಸ್ತ್ರ ಮಾಡಿ ಹೊರಡಲು ಬಾಗಿಲಿಗೆ ಬಂದಾಗ ಬಿಳಿಮಲೆ ಅವರು ‘ನಾನು ಹಂಪಿಗೆ ಹೋಗುವ ಯೋಚನೆ ಮಾಡುತ್ತಿದ್ದೇನೆ’ ಎಂದರು. ನನಗೆ ಒಮ್ಮೆಲೇ ಶಾಕ್ ಆಯಿತು. ಕಂಬಾರರು ಕನ್ನಡ ವಿಶ್ವವಿದ್ಯಾಲಯಕ್ಕೆ ಬರಲು ಹೇಳಿದ್ದಾರೆ. ಹೋಗುವ ಬಗ್ಗೆ ಯೋಚನೆ ಮಾಡಿದ್ದೇನೆ ಎಂದರು. ನನ್ನೊಳಗೊಂದು ಬಲವಾದ ಅನಿಸಿಕೆಯಿತ್ತು. ಬಿಳಿಮಲೆಗೆ ಕಡಲ ತೀರದಲ್ಲಿ ಇನ್ನೂ ಹೆಚ್ಚು ಕೆಲಸ ಇದೆ ಎಂದು ಮತ್ತು ಆ ಕೆಲಸ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು. ನಾನು ಆ ಕಾರಣಕ್ಕಾಗಿಯೇ ಇರಬೇಕು. ‘ಬೇಡ ಅನಿಸುತ್ತೆ ಸರ್, ಇಲ್ಲೇ ಇರಬೇಕು ನೀವು’ ಅಂದೆ. 

ಅದರ ಜೊತೆಗೆ ನನಗೆ ಒಂದು ಖಾಸಗಿ ಕಾರಣವೂ ಇತ್ತು. ನಾನು ಮಂಗಳೂರಿಗೆ ಹಾರಿ ಬರಲು ಅಲ್ಲಿ ಕಡಲು ಇದೆ ಎನ್ನುವುದು ಎಷ್ಟು ಆಕರ್ಷಣೆಯಾಗಿತ್ತೋ ಅಲ್ಲಿ ವಿವೇಕ ರೈ, ಬಿಳಿಮಲೆ, ಫಣಿರಾಜ್ ಇದ್ದಾರೆ ಎನ್ನುವುದೂ ಅಷ್ಟೇ ಬಲವಾದ ಕಾರಣವಾಗಿತ್ತು. ಹಾಗಾಗಿ ಬಿಳಿಮಲೆ ಅವರು ನನ್ನ ಜೊತೆ ಈ ವಿಷಯ ಹಂಚಿಕೊಂಡಾಗ ನನಗೆ ಒಂದು ಖಾಲಿತನ ಆವರಿಸಿತು. 

ನಾನು ಬಿಳಿಮಲೆ ಅವರನ್ನು ಮಂಗಳೂರಿನಲ್ಲಿ ಆದ ಮೊದಲ ಭೇಟಿಯೇ ಕೊನೆಯದೂ ಆಯಿತು. ಅವರು ಹಂಪಿಯತ್ತ ಹೊರಟೇಬಿಟ್ಟರು.

ಅದು ೧೯೯೨.

ಇದಾದ ಒಂದೆರಡು ತಿಂಗಳಿಗೇ ಯು ಆರ್ ಅನಂತಮೂರ್ತಿ ಅವರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಬರುವವರಿದ್ದರು. ಅವರ ಉಪನ್ಯಾಸದ ವರದಿಗಾಗಿ ನಾನು ಸ್ಕೂಟರ್ ಏರಿ ನೇತ್ರಾವತಿ ನದಿಗಿದ್ದ ಬ್ರಿಡ್ಜ್ ದಾಟುವುದರಲ್ಲಿದ್ದೆ. ಆ ವೇಳೆಗೆ ಆಕಾಶದೆತ್ತರಕ್ಕೆ ಎದ್ದ ಹೊಗೆ, ಗಾಜುಗಳು ಒಡೆಯುತ್ತಿರುವ ಸದ್ದು, ಆಕ್ರಂದನ ಕೇಳಲಾರಂಭಿಸಿತು. ಒಂದು ಹೆಜ್ಜೆ ಮುಂದಿಟ್ಟರೂ ಹುಷಾರ್ ಎನ್ನುವ ವಾತಾವರಣ. ಮಂಗಳೂರು ಒಂದೆಡೆ, ವಿಶ್ವವಿದ್ಯಾಲಯವೇ ಒಂದೆಡೆ ಆಗಿಹೋದದ್ದು ಕಂಡೆ. ನಡುವೆ ಇದ್ದ ಸೇತುವೆ ಮೊದಲ ಬಾರಿಗೆ ಮಾಯವಾಗಿತ್ತು. ಆಗ ಅನಿಸಿತು. ಪುರುಷೋತ್ತಮ ಬಿಳಿಮಲೆ ಅವರಿಗೆ ಇಲ್ಲಿ ಕೆಲಸವಿತ್ತು.

ಹಾಗೆ ಅಂದುಕೊಳ್ಳಲು ನನಗೆ ಖಂಡಿತಾ ಕಾರಣವಿತ್ತು. ಇಡೀ ದಕ್ಷಿಣ ಕನ್ನಡದಲ್ಲಿ ಸುಳ್ಯಕ್ಕೆ ತನ್ನದೇ ವಿಶೇಷ ಛಾಪಿತ್ತು. ದಕ್ಷಿಣ ಕನ್ನಡ ಹಾಗೂ ಕೊಡಗು ಎರಡೂ ಜಿಲ್ಲೆಗಳ ಕ್ಲಿಪ್ ಜಾಯಿಂಟ್ ಈ ಸುಳ್ಯ ತಾಲೂಕು. ಹಾಗಾಗಿ ಈ ತಾಲೂಕಿಗೆ ಬರೀ ಕಡಲ ಜಿಲ್ಲೆಯದ್ದು ಮಾತ್ರವಲ್ಲ ಕೊಡಗಿನ ಗುಣವೂ ಇದೆ. ಹಾಗಾಗಿಯೇ ಇದು ಬೇರೆ ಅಂದುಕೊಂಡಿದ್ದೆ. ಆದರೆ ಅದು ಮಾತ್ರವೇ ಸತ್ಯವಾಗಿರಲಿಲ್ಲ. ಸುಳ್ಯಕ್ಕೆ ಒಂದು ವಿಶೇಷ ಗುಣವಿತ್ತು. ಅದು ಇದ್ದ ಬಾವಿಯಲ್ಲೇ ಕುಣಿಯುವ ಕಪ್ಪೆಯಂತಾಗದೆ ಹೊಸದರ ಕಡೆ ನೋಡುತ್ತಿತ್ತು. ಹೊಸತನ್ನು ಅರ್ಥ ಮಾಡಿಕೊಳ್ಳುತ್ತಿತ್ತು.

ಹಾಗಾಗಿಯೇ ಇಲ್ಲಿ ಆ ದಶಕದಲ್ಲಿಯೇ ಪಂಚಾಂಗಗಳನ್ನು ಸುಟ್ಟು ಹಾಕಿದ್ದರು. ಜ್ಯೋತಿಷಿಗಳ ವಿರುದ್ಧ ಆಂದೋಲನ ನಡೆಸಿದ್ದರು. ‘ಜಾತಿ ವಿನಾಶ ಜಾತಕಕ್ಕೆ ಬೆಂಕಿ’ ಆಂದೋಲನವಾಗಿ ಹೋಗಿತ್ತು. ಅಜ್ಜಾವರ ಹಾಗೂ ಮಂಡೆಕೋಲಿನ ಗುಹೆ ಹೊಕ್ಕರೆ ಒಂದು ದಾರಿ ಕಾಶಿಗೂ, ಇನ್ನೊಂದು ರಾಮೇಶ್ವರಕ್ಕೂ ಹೋಗುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದಾಗ ವಿದ್ಯಾರ್ಥಿಗಳ ಜೊತೆ ಆ ಗುಹೆ ಹೊಕ್ಕು ಬಂದು ಅಲ್ಲಿ ಪಾಂಡವರ ವಿಳಾಸವಿಲ್ಲ ಎಂದು ಸಾರಿದ್ದರು. ಪುಸ್ತಕ ಲೋಕದಲ್ಲಿ ಹೊಸ ದನಿಗಳಿಗೆ ಜಾಗ, ಬೀದಿ ನಾಟಕ, ಯಕ್ಷಗಾನ ಎಲ್ಲದರಲ್ಲಿಯೂ ಹೊಸ ಆಲೋಚನೆಗಳ ಪುಟ ತೆರೆದಾಗಿತ್ತು. ಇದೆಲ್ಲದರ ಹಿಂದೆ ಬಿಳಿಮಲೆಯವರು ಇದ್ದರು. ಹೀಗಾಗಿಯೇ ಸುಳ್ಯದಿಂದ ಹೊರಬಿದ್ದ ಪ್ರತಿಭೆಗಳನ್ನು ನೋಡಿ- ಅವರಿಗೆಲ್ಲಾ ಜಾಗತಿಕ ಕಲ್ಪನೆಯಿದೆ. 

ಸುಳ್ಯದ ಪುರುಷೋತ್ತಮ ಬಿಳಿಮಲೆ ಅವರು ಪುತ್ತೂರಿನ ಪುರುಷೋತ್ತಮರಾದಾಗಲೂ, ಪುತ್ತೂರಿನ ಪುರುಷೋತ್ತಮರು ಮಂಗಳೂರಿನ ಪುರುಷೋತ್ತಮರಾದಾಗಲೂ ಅದರಲ್ಲಿ ಏನೇನೂ ವ್ಯತ್ಯಾಸವಾಗಿರಲಿಲ್ಲ. ದಲಿತರ ಜೊತೆ ಸೇರಿ ಮಾಡಿದ ದೇವಳ ಪ್ರವೇಶ, ಸಮುದಾಯ ಸಾಂಸ್ಕೃತಿಕ ಜಾಥಾ, ದಲಿತ ಸಂಘರ್ಷ ಸಮಿತಿಯ ಜೊತೆಗಿನ ನಿರಂತರ ಸಂಪರ್ಕ, ತನ್ನ ಸಹೋದ್ಯೋಗಿಯೇ ಆಗಿದ್ದ ಡಾ ಚಂದ್ರಶೇಖರ ಐತಾಳರ ‘ಬ್ರಾಹ್ಮಣ ಬಂಡಾಯ’ ಪ್ರಕರಣ, ಕುದುರೆಮೋತಿ ಪ್ರಕರಣದ ನಾಟಕದಲ್ಲಿ ಸ್ವಾಮಿಯ ಪಾತ್ರ ವಹಿಸಿ ಭಕ್ತ ಗಣ ತಲೆ ಮೇಲೆ ಸಗಣಿ ಸುರಿದರೂ ವಿಚಲಿತರಾಗದ್ದು, ಸಾರಾ ಅಬೂಬಕರ್ ಅವರ ಮೇಲೆ ನಡೆದ ಹಲ್ಲೆ ಯತ್ನದ ವಿರುದ್ಧ, ಉಡುಪಿಯಲ್ಲಿ ‘ಸೀತಾಯಣ’ ಕಾರಣದಿಂದಾಗಿ ಪೋಲಂಕಿ ರಾಮಮೂರ್ತಿ ಅವರ ವಿರುದ್ಧ ಗಲಭೆಗೆ ಪ್ರತಿರೋಧ, ಸಂಪೂರ್ಣ ಸಾಕ್ಷರತಾ ಆಂದೋಲನ, ಹೀಗೆ ಬಿಳಿಮಲೆ ಬಿಳಿಮಲೆಯಾಗಿಯೇ ಉಳಿದರು.

ಏನಿದ್ದರೂ ಆ ಕಾಲಕ್ಕೇ ಬ್ರಿಟಿಷರ ವಿರುದ್ಧ ಸೆಡ್ಡು ಹೊಡೆದ ಕಲ್ಯಾಣಪ್ಪನ ನಾಡಿನವರಲ್ಲವೇ! ಎನ್ನುವ ನನ್ನ ವಿಸ್ಮಯಕ್ಕೆ ಇವೆಲ್ಲವೂ ಹೌದೆಂಬ ಮುದ್ರೆ ಒತ್ತಿತ್ತು.

ಅಂತಹ ಬಿಳಿಮಲೆಗೆ ಮಂಗಳೂರಿನಲ್ಲಿ ಇನ್ನೂ ಹೆಚ್ಚಿನ ಕೆಲಸವಿತ್ತು ಎನ್ನುವ ಅನಿಸಿಕೆಯ ನಡುವೆಯೇ ಅವರು ಮಂಗಳೂರು ತೊರೆದರು. ಅವರೇ ಹೇಳಿಕೊಳ್ಳುವ ಹಾಗೆ ಇದು ಅವರು ಮಂಗಳೂರಿಗೆ ಮಾತ್ರವಲ್ಲ, ಕರ್ನಾಟಕವನ್ನೇ ತೊರೆಯಲು ಕಾರಣವಾಗಿ ಹೋಯಿತು.

ಡಿಸೆಂಬರ್ ೬ರ ಮರುದಿನ ನಾನು ಹಾಗೆ ಮಂಗಳೂರಿನ ಸೇತುವೆಯ ಮೇಲೆ ಹೊಗೆಯ ಕಾರ್ಮೋಡಗಳನ್ನೂ, ಬೆಂಕಿಯ ನಾಲಿಗೆಯನ್ನೂ ನೋಡುತ್ತಾ, ಬೌದ್ಧಿಕ ನೆಲೆಗೆ ದಾರಿಯೇ ಕಡಿದು ಹೋದದ್ದನ್ನು ಅರಗಿಸಿಕೊಳ್ಳಲಾಗದೆ ನಿಂತಿದ್ದಾಗ ಯಾಕೋ ಬಿಳಿಮಲೆ, ಶೋಭನಾ ಅವರ ಮದುವೆ ಮತ್ತೆ ಮತ್ತೆ ನೆನಪಿಗೆ ಬಂತು. 

ಯಾಕೆಂದರೆ ಅವರಿಬ್ಬರೂ ಮದುವೆಯಾಗಿದ್ದು ಡಿಸೆಂಬರ್ ೬ರಂದೇ. ಜಾತಿಯ ಗೋಡೆಯನ್ನು ಕಿತ್ತು ಹಾಕಿದ ಜೋಡಿಯೊಂದು ಮದುವೆಯಾಗಲು ಆಯ್ಕೆ ಮಾಡಿಕೊಂಡದ್ದು ಅಂಬೇಡ್ಕರ್ ಮಹಾಪರಿನಿರ್ವಾಣದ ದಿನವನ್ನು. ನಾನು ಒಂದು ದೊಡ್ಡ ನಿಟ್ಟುಸಿರಿನೊಂದಿಗೆ ಅಲ್ಲಿ ನಿಂತಿದ್ದೆ. ಜಾತಿ ಇಲ್ಲವೆಂದು ಸಾರಲು ಒಂದು ಜೋಡಿ ಆರಿಸಿಕೊಂಡ ಅಂಬೇಡ್ಕರ್ ದಿನವನ್ನು ಕೋಮುವಾದದ ದಳ್ಳುರಿ ಹರಡಲು ದೇಶದ ವಿಷಕಾರಿ ಮನಸ್ಸುಗಳು ಆರಿಸಿಕೊಂಡಿದ್ದವು. 

ಬಿಳಿಮಲೆ ನನಗೆ ಮುಖ್ಯವಾಗುವುದೇ ಈ ಕಾರಣಕ್ಕೆ. ಅವರು ದೊಡ್ಡ ಘಾತಕ ಶಕ್ತಿಗಳ ವಿರುದ್ಧ ಪುಟ್ಟ ಬೆಳಕಿನ ಭರವಸೆಯಾಗಿದ್ದರು ಎನ್ನುವುದಕ್ಕೆ. ಕೋಮುವಾದದ ನಡುವೆ ಜಾತಿ ವಿನಾಶ ಮಾಡುವ ಜೀವ, ಮೌಢ್ಯದ ವಿರುದ್ಧ ಅರಿವಿನ ಬೀಜ, ಪಶ್ಚಿಮದ ವಿರುದ್ಧ ಪೂರ್ವ… ಬಿಳಿಮಲೆ ಹೇಳುತ್ತಾರೆ ನನಗೆ ತೊರೆ ಎನ್ನುವುದು ಹೊಸ ಜೀವ ನೀಡುತ್ತಿತ್ತು ಅಂತ. ನೀರಿನ ಬಗ್ಗೆ ಬರೆದೇ ಬರೆಯುವ ಅವರಿಗೆ ಗೊತ್ತಿಲ್ಲದ ಸಂಗತಿಯೂ ಒಂದಿದೆ. ಅದು ಬಿಳಿಮಲೆ ಎಂಬ ತೊರೆಯೊಳಗೆ ಅವರಂತೆಯೇ ಸಾಕಷ್ಟು ಜನ ಮೈಯೊಡ್ಡಿ, ಕಾಲು ಇಳಿಬಿಟ್ಟು, ನೀರ ಗುಟುಕರಿಸಿ ಜೀವ ತಂದು ಕೊಂಡಿದ್ದಾರೆ, ಇನ್ನಷ್ಟು ಹೆಜ್ಜೆ ಹಾಕಲು ಆಸರೆಯಾಗಿ ಬಳಸಿಕೊಂಡಿದ್ದಾರೆ. 

ಕರಾವಳಿಗೆ ಹಾಗೆ ನಾನು ಬಂದು ನಿಲ್ಲುವುದಕ್ಕೂ ಮೊದಲೇ ನಾನು ಇವರ ‘ಕರಾವಳಿ ಜಾನಪದ’ವನ್ನು ಕೈಗೆತ್ತಿಕೊಂಡಿದ್ದೆ. ಅದು ನನ್ನ ಪ್ರಜ್ಞೆಯನ್ನು ವಿಸ್ತರಿಸಿದ ಕೃತಿ. ಬಿಳಿಮಲೆ ಅವರು ಸಮುದಾಯ ಸಾಂಸ್ಕೃತಿಕ ತಂಡದ ಪರವಾಗಿ ತರುತ್ತಿದ್ದ ರಂಗ ಪತ್ರಿಕೆಯ ಚುಕ್ಕಾಣಿಯನ್ನೂ ಹಿಡಿದಿದ್ದರು. ಅದರಲ್ಲಿ ಅವರು ಬರೆದ ಲೇಖನ, ಸಂಪಾದಕೀಯಗಳೇ ನನಗೆ ರಂಗಭೂಮಿಯನ್ನು ಸದ್ದಿಲ್ಲದಂತೆ ಆವರಿಸುತ್ತಿದ್ದ ವಿದೇಶಿ ಹಣದ ಬಗ್ಗೆಯೂ ಎಚ್ಚರಿಕೆಯ ಕಣ್ಣುಗಳಿಂದ ನೋಡುವಂತೆ ಪ್ರೇರೇಪಿಸಿತ್ತು.

‘ಕರಾವಳಿ ಜಾನಪದ’ದ ಕಾರಣಕ್ಕಾಗಿ ನಾನು ಸುಳ್ಯ ಪರಿಸರದಲ್ಲಿ ನಡೆಯುತ್ತಿದ್ದ ಮರದ ಶಿಶ್ನ ಕಟ್ಟಿಕೊಂಡು ನಡೆಸುತ್ತಿದ್ದ ಕುಣಿತವನ್ನೂ, ಸುರತ್ಕಲ್ ಪರಿಸರದಲ್ಲಿ ಮೀನುಗಾರ ಮಹಿಳೆಯರ ಆಚರಣೆಯನ್ನೂ, ಕಂಬಳದ ಹಿಂದಿನ ದಿನ ಕೊರಗರ ಲೈಂಗಿಕ ಆಚರಣೆಯನ್ನೂ, ಕೂದಲು, ಉಗುರನ್ನು ಸೇರಿಸಿ ತಿನ್ನಲು ನೀಡುತ್ತಿದ್ದುದನ್ನೂ ಹೀಗೆ.. ನನ್ನ ಓದು ಭ್ರಮಾ ಲೋಕದಿಂದ ಕಟು ವಾಸ್ತವದ ಜಗತ್ತಿಗೆ ಹೊರಳಿಕೊಂಡಿತು. 

ನಾನು ಓದಿದ್ದ ಸಂವಹನ ಸ್ನಾತಕೋತ್ತರ ಪದವಿಯಲ್ಲಿ ಹೇಳಿಕೊಡುತ್ತಿದ್ದ ಅನೇಕ ಸಂವಹನ ಸೂತ್ರಗಳಲ್ಲಿ ‘ಕೆಥಾರ್ಸಿಸ್’ ಎನ್ನುವುದೂ ಒಂದು. ಒಳಗೆ ಹಿಡಿದಿಟ್ಟ ಸಿಟ್ಟಿನ ಆಸ್ಫೋಟವನು ತಣ್ಣಗಾಗಿಸಿಬಿಡಲು ಈ ವ್ಯವಸ್ಥೆ ಸೃಷ್ಟಿಸಿರುವ ಆಚರಣೆಗಳ ಆಯಾಮವನ್ನು ತಿಳಿಯುತ್ತಾ ಹೋದೆ. ನನ್ನೊಳಗೆ ಹೊಸ ಕಣ್ಣು ಕೂಡಲು ಇದೇ ನಿಮಿತ್ತವಾಗಿ ಹೋಯಿತು. 

ಬಿಳಿಮಲೆ ಏನು ಎಂದು ನನಗೆ ಯಾರಾದರೂ ಕೇಳಿದರೆ ನನ್ನ ಉತ್ತರ ತುಂಬಾ ಸರಳ. ಅವರು ಗೋಡೆಗಳಿಲ್ಲದ ವ್ಯಕ್ತಿ. ಅವರು ಜೆರುಸಲೇಮ್ ನಲ್ಲಿ ಹೆಜ್ಜೆ ಇಟ್ಟದ್ದರ ಬಗ್ಗೆ ಮಾತನಾಡುತ್ತಾ ಇದು ಗೋಡೆಗಳ ಊರು ಎನ್ನುತ್ತಾರೆ. ಬಿಳಿಮಲೆ ಗೋಡೆಗಳಿಲ್ಲದ ಊರು. ಬಿಳಿಮಲೆ ತಮ್ಮನ್ನು ಬಣ್ಣಿಸುವುದು ‘ತಾನು ಕಲ್ಲಿಲ್ಲದ ಭೂತ’ ಎಂದು. ‘ನಾನೊಂದು ಕಲ್ಲಿಲ್ಲದ ಭೂತ, ದೊಡ್ಡ ಭೂತಗಳಿಗೆ ನೆಲೆ ಸಿಗುತ್ತವೆ. ಸಣ್ಣ ಭೂತಗಳಿಗೆ ನೆಲೆಯಾಗಲು ಜಾಗವೇ ಸಿಗದ್ದರಿಂದ ಅವು ಸುತ್ತಾಡುತ್ತಲೇ ಇರುತ್ತವೆ. ಅದನ್ನು ಹಿಡಿಯುವುದೂ ಕಷ್ಟ’ ಅಂತ. ಹಾಗೆ ಬಿಳಿಮಲೆಗೆ ಕಲ್ಲು ಸಿಗದಿದ್ದುದೇ ಒಳ್ಳೆಯದಾಯಿತೇನೋ. ಅವರು ಜಗತ್ತು ಸುತ್ತಿದರು. 

ಬಿಳಿಮಲೆ ಏನು ಎನ್ನುವುದಕ್ಕೆ ಹೇಗೆ ಕನ್ನಡಿ ಹಿಡಿಯುವುದು ಎನ್ನುವುದಕ್ಕೆ ಒಂದು ಉತ್ತರವಂತೂ ನನ್ನ ಬಳಿ ಇದೆ. ಬಿಳಿಮಲೆ ಅವರು ಇದುವರೆಗೆ ಮಂಡಿಸಿದ ಪ್ರಬಂಧದ  ವಿಷಯಗಳನ್ನು ನೋಡಿ. ಬಿಳಿಮಲೆ ಏನು ಎನ್ನುವುದು ‘ತನ್ನ ಬಣ್ಣಿಸದೇ’ ಗುರುತು ಹತ್ತಿ ಬಿಡುತ್ತದೆ. 

ಹವಾಯಿಯಲ್ಲಿನ ಏಷ್ಯಾ ಸಂಶೋಧಕರ ಸಮ್ಮೇಳನದಲ್ಲಿ ಇವರು ಮಂಡಿಸಿದ್ದು ‘ಪಿತೃಗಳು ಮತ್ತು ಪುನರ್ಜನ್ಮವಿಲ್ಲದ ಭಾರತದಲ್ಲಿ’ ಎನ್ನುವ ವಿಷಯ. ಭಾರತೀಯರು ಸತ್ತವರನ್ನು ಹೇಗೆ ಮರುಹುಟ್ಟಿಗೆ ಒಳಪಡಿಸುತ್ತಾರೆ ಎನ್ನುವ ವಿಷಯ ಬಂದಾಗ ನಮಗೆ ಸಿಗುವುದು ಬ್ರಾಹ್ಮಣರ ಅಂತ್ಯ ಸಂಸ್ಕಾರದ ವಿಶ್ಲೇಷಣೆ ಮಾತ್ರ. ಅಂತಹ ಸಮಯದಲ್ಲಿ ಬಿಳಿಮಲೆ ಕೈಗೆತ್ತಿಕೊಂಡದ್ದು ಸುಳ್ಯದ ಬಳ್ಳಕ್ಕದಲ್ಲಿನ ದಲಿತ ಸಮುದಾಯದ ಆಚರಣೆಯನ್ನು. ಹೀಬ್ರೂ ವಿಶ್ವವಿದ್ಯಾಲಯಕ್ಕೆ ಆರಿಸಿಕೊಂಡದ್ದು ಕರಾವಳಿ ಕರ್ನಾಟಕ ಹಾಗೂ ಕೇರಳದಲ್ಲಿ ಜನಪ್ರಿಯವಾಗಿರುವ ‘೧೪೯ ಭಾಗವತಿಗಳು, ೪೩ ಚಾಮುಂಡಿಗಳ’ ಬಗ್ಗೆ. ಇವು ಪಾದಾಂಗರೇ ಐದು, ಚೇರಂಬಾ ನಾಲ್ಕು, ಪೊಲ್ಲುರುಳಿ ಐದು ಎಂದು ನಿರ್ದಿಷ್ಟ ಸಂಖ್ಯೆಯೊಂದಿಗೆ ಯಾಕೆ ಗುರುತಿಸಿಕೊಳ್ಳುತ್ತದೆ ಎಂದು. ಜಪಾನ್ ಫೌಂಡೇಶನ್ ಶಿಷ್ಯ ವೇತನಕ್ಕೆ ಅವರು ಆರಿಸಿಕೊಳ್ಳುವುದು ಜಪಾನಿನ ಕಾಜುರಾ ಕುಣಿತವನ್ನು ತುಳುನಾಡಿನ ಭೂತಾರಾಧನೆಯ ಜೊತೆಗೆ ಹೋಲಿಸಲು. ದೇವರುಗಳನ್ನು ನಾವೇ ಹೇಗೆ ಸೃಷ್ಟಿಸುತ್ತೇವೆ ಮತ್ತು ನಿರ್ದಿಷ್ಟ ದಿನ ಭೂಮಿಗೆ ಬಂದು ಕುಣಿಯುವಂತೆ ಮಾಡುತ್ತೇವೆ ಎನ್ನುವುದರ ಬಗ್ಗೆ.

ಹೀಗೆಲ್ಲಾ ಬಿಳಿಮಲೆ ಅವರನ್ನು ಅರ್ಥ ಮಾಡಿಕೊಳ್ಳುತ್ತಿರುವಾಗ ಜಪಾನಿನ ಅಂತಾರಾಷ್ಟ್ರೀಯ ವಿನಿಮಯ ಕೇಂದ್ರದಲ್ಲಿ ಅತಿ ಮೃದುವಾದ ಹಾಸಿಗೆಯಲ್ಲಿ ನಿದ್ದೆ ಬಾರದೆ ನೆಲದ ಮೇಲೆ ಹೊದಿಕೆ ಹಾಸಿಕೊಂಡು ಮಲಗಿ ಬಿಡುವ ಬಿಳಿಮಲೆಯೂ ಸಿಕ್ಕಿ ಹೋಗುತ್ತಾರೆ.

ಕೆಡಹುವವರ ಮಧ್ಯೆ ಕಟ್ಟುವ ಕೆಲಸ ಅತಿ ಕಷ್ಟದ್ದು. ಬಿಳಿಮಲೆ ಕಟ್ಟಿದ್ದು ಮಸ್ಸುಗಳನ್ನು, ಕಟ್ಟಡಗಳನ್ನು, ಜಾತಿ, ಧರ್ಮದ ನಡುವೆ ಸೇತುವೆಯನ್ನು, ಹೃದಯಗಳ ನಡುವೆ ಪ್ರೀತಿಯನ್ನು, ಎದೆ ಎದೆಗಳ ನಡುವೆ ಸೇತುವೆಯನ್ನು. ‘ಓದು ಎಂದಿಗೂ ದಕ್ಕುವುದಿಲ್ಲ’ ಎನ್ನುವ ಜಾತಕದ ಭಾಷ್ಯಕ್ಕೆ ಸೆಡ್ಡು ಹೊಡೆದ ಹುಡುಗ ತನ್ನಿಂದ ತಾನೇ ತನ್ನನ್ನೂ ಕಟ್ಟಿಕೊಳ್ಳುತ್ತಾ ಬೆಳೆದದ್ದು ನಮ್ಮೊಳಗೆ ಇನ್ನಷ್ಟು ವಿಶ್ವಾಸ ಆಡಲು ಕಾರಣವಾಗಿದೆ. 

ಇಷ್ಟೆಲ್ಲಾ ಹೇಳುತ್ತಾ ಇರುವಾಗಲೂ ನನಗೆ ಅವರ ಅಮ್ಮ ಹಾಗೂ ಅಜ್ಜಿ ಕಾಡುತ್ತಾರೆ. ಮಗು ಹೆತ್ತ ಬಾಣಂತಿ ಉಕ್ಕಿದ ತೊರೆ ದಾಟಲಾಗದೆ ಗಂಡನ ಮನೆಗೆ ನಿಗದಿತ ದಿನದಂದು ಬರಲಾಗುವುದಿಲ್ಲ. ಅಷ್ಟು ಮಾತ್ರಕ್ಕೆ ಗಂಡ ಆಕೆಯನ್ನು ಮನೆಯೊಳಗೆ ಬಿಟ್ಟುಕೊಳ್ಳುವುದೇ ಇಲ್ಲ. ಆಕೆ ಎಲ್ಲಿ ಹೋದಳೋ ಯಾರಿಗೂ ಗೊತ್ತಿಲ್ಲ ಎನ್ನುವುದು ಪುರುಷನ ಒಂದು ಅಹಂಕಾರವನ್ನು ತೋರಿಸಿದರೆ ಇನ್ನೊಂದೆಡೆ ಜಪಾನೀಯರಲ್ಲಿ ಸೂರ್ಯ ಗಂಡಲ್ಲ, ಹೆಣ್ಣು. ಬಂಟಮಲೆಯ ತಪ್ಪಲಿನಲ್ಲಿ ಮಲಗಿರುತ್ತಿದ್ದ ನನ್ನನ್ನು ದಿನಾ ಬೆಳಗ್ಗೆ ಎಬ್ಬಿಸುತ್ತಿದ್ದ ಅಮ್ಮನೇ ನನ್ನ ಸೂರ್ಯ ಎನ್ನುವ ಪುರುಷ ಇನ್ನೊಂದೆಡೆ…

ಇಂತಹ ಪುರುಷ ಬೇಕು ಎಂದು ಹಂಬಲಿಸಬಾರದು ಯಾಕೆ ಹೇಳಿ..??

ಕಾಗೆ ಮುಟ್ಟಿದ ನೀರು

ಪುರುಷೋತ್ತಮ ಬಿಳಿಮಲೆ

ಅಹರ್ನಿಶಿ ಪ್ರಕಾಶನ

ದೂರವಾಣಿ: 94491 74662

94486 28511

‍ಲೇಖಕರು Avadhi

August 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: