ಕಾಂಕ್ರೀಟ್ ಕಾಡಿನೊಳಗೊಂದು ಕಲಾಗ್ರಾಮ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ದಿಲ್ಲಿಯ ವಿಳಾಸವೊಂದನ್ನು ನೀಡಿ ‘ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಬನ್ನಿ’ ಎಂದಾಗ ನಮಗೇನೂ ಹೇಳಿಕೊಳ್ಳುವಷ್ಟು ಸಂತೋಷವಾಗಿರಲಿಲ್ಲ.

ನಾನು ಮತ್ತು ಮನ್ಪಾಲ್ ಸಿಂಗ್ ಒಂದೇ ಬ್ಯಾಚಿನ ಅಭ್ಯರ್ಥಿಗಳು. ನಾನು ಎನ್.ಐ.ಟಿ ಕರ್ನಾಟಕದಿಂದಾದರೆ ಆತ ಎನ್.ಐ.ಟಿ ಜೈಪುರದಿಂದ. ನನಗೆ ನೆನಪಿರುವಂತೆ ಸಿವಿಲ್ ಎಂಜಿನಿಯರಿಂಗ್ ವಿಷಯದ ಬಗ್ಗೆ ನನಗಿಂತ ಹೆಚ್ಚಿನ ಒಲವೂ, ಜ್ಞಾನವೂ ಆತನಿಗಿತ್ತು.

‘ಕೆಲಸದ ವಿಪರೀತ ಒತ್ತಡದಿಂದಾಗಿ ನಮಗೆ ತಲೆಕೆರೆದುಕೊಳ್ಳಲೂ ಪುರುಸೊತ್ತಿಲ್ಲ. ಹೀಗಾಗಿ ಇಂತಹ ತರಬೇತಿ ಕಾರ್ಯಕ್ರಮಗಳೇನಿದ್ದರೂ ಕಿರಿಯ ಅಧಿಕಾರಿಗಳಿಗೆ ಮಾತ್ರ’, ಎಂಬ ಅಲಿಖಿತ ನಿಯಮವೊಂದು ನಮ್ಮ ಸಂಸ್ಥೆಯಲ್ಲಿದ್ದ ಪರಿಣಾಮವಾಗಿ ಭಾಗವಹಿಸುವ ಅಧಿಕಾರಿಗಳ ಪಟ್ಟಿಯಲ್ಲಿ ನಮ್ಮ ಹೆಸರು ಕಾಣಿಸಿಕೊಂಡಿತ್ತು. ಆರಂಭದ ಹಂತದಲ್ಲಿ ಸಂಸ್ಥೆಯ ಇಂಥಾ ವಿಚಿತ್ರ ಲೆಕ್ಕಾಚಾರಗಳ ಬಗ್ಗೆ ಗೊಂದಲವಿದ್ದಿದ್ದು ಹೌದಾದರೂ ಆದದ್ದಾಗಲಿ ಎಂದು ನಮ್ಮ ಸವಾರಿಯು ಹೊರಟಾಯಿತು.

ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಈ ಪ್ರಯಾಣದಿಂದಾಗಿ ಎರಡು ಸ್ವಾರಸ್ಯಕರ ಸಂಗತಿಗಳು ನನ್ನ ವೃತ್ತಿ ಬದುಕಿನ ಪಯಣದಲ್ಲಿ ಶಾಶ್ವತವಾಗಿ ಸೇರಿಹೋದವು. ಅದರಲ್ಲಿ ಒಂದು ಘಟನೆಯು ಪ್ರೇರಣಾತ್ಮಕವಾಗಿದ್ದರೆ, ಮತ್ತೊಂದು ದೀರ್ಘಕಾಲ ನನ್ನ ಜೊತೆಯಲ್ಲೇ ಉಳಿಯಲಿದ್ದ ಹಿತವಾದ ಅಚ್ಚರಿಯೂ ಆಗಿತ್ತು ಎಂದರೆ ಅತಿಶಯೋಕ್ತಿಯೇನಲ್ಲ.

ಮೊಟ್ಟಮೊದಲನೆಯದಾಗಿ ಮೇಲೆ ಹೇಳಿದ ಪ್ರೇರಣಾತ್ಮಕ ಘಟನೆಗೆ ಬರುವುದಾದರೆ ನಮ್ಮನ್ನು ಕಳಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲು ಬಂದಿದ್ದವರು ಛವಿ ರಾಜವತ್ ಎಂಬಾಕೆ. ತಮ್ಮ ಹೆಸರಿಗೆ ತಕ್ಕಂತೆ ಆಕೆಯ ‘ಛವಿ’ಯು ಅದೆಷ್ಟಿತ್ತೆಂದರೆ ಅವರು ಬಂದ ಕೂಡಲೇ ಅವರಿಗಿಂತ ಅದೆಷ್ಟೋ ಹೆಚ್ಚು ಪ್ರಾಯದ ಹಿರಿಯ ಅಧಿಕಾರಿಗಳು ಕುಳಿತಲ್ಲಿಂದ ಎದ್ದು ಆಕೆಯನ್ನು ಸ್ವಾಗತಿಸಿದ್ದರು. ಅಲ್ಲಿದ್ದ ಅಷ್ಟೂ ಮಂದಿ ಅವರ ಆಗಮನಕ್ಕಾಗಿಯೇ ಕಾಯುತ್ತಿದ್ದರೇನೋ ಎಂಬಂತಿನ ಹುಮ್ಮಸ್ಸಿನಲ್ಲಿ ಎಲ್ಲರೂ ಬಂದು ಆಕೆಗೆ ಭವ್ಯ ಸ್ವಾಗತವನ್ನು ನೀಡಿದ್ದರು. ಅಂದಿನ ಸಭಾಕಾರ್ಯಕ್ರಮವು ಆರಂಭವಾಗಿದ್ದು ಹೀಗೆ.

ಸುಮಾರು ಮೂವತ್ತು ಚಿಲ್ಲರೆ ಪ್ರಾಯದ, ಎತ್ತರದ ನಿಲುವಿನ ಸ್ಫುರದ್ರೂಪಿ ಮಹಿಳೆ. ನೆರೆದ ಸಭೆಯನ್ನುದ್ದೇಶಿಸಿ ಆಂಗ್ಲಭಾಷೆಯಲ್ಲಿ ಮಾತನಾಡತೊಡಗಿದರೆ ಸುಲಲಿತ ಭಾಷೆ. ಪ್ರತೀ ಮಾತಿನಲ್ಲೂ ವಿದ್ವತ್ತಿನ ಗತ್ತು, ಲೋಕಾನುಭಾವದ ಛಾಯೆ ಮತ್ತು ಸಾಮಾಜಿಕ ಕಳಕಳಿಯ ನೋಟ. ಛವಿಯವರಿಗೆ ಅಂದು ಆರಂಭದಲ್ಲಿ ಸಿಕ್ಕ ‘ಸ್ಟಾರ್ ಸ್ವಾಗತ’ವನ್ನು ನೋಡಿದ್ದ ಬಹಳಷ್ಟು ಮಂದಿ ಆಕೆಯನ್ನು ಚಿತ್ರನಟಿಯೆಂದೇ ಭಾವಿಸಿದ್ದರು. ಮುಂದೆ ತಮ್ಮ ಭಾಷಣದಲ್ಲಿ ಛವಿಯವರು ತಮ್ಮ ಮತ್ತು ಗ್ರಾಮಸ್ಥರ ಜಂಟಿಪ್ರಯತ್ನದ ಫಲವಾಗಿ ರಾಜಸ್ಥಾನದ ಮರಳುಗಾಡು ಪ್ರದೇಶವೊಂದು ಹೇಗೆ ನೀರಿನ ವಿಚಾರದಲ್ಲಿ ಸ್ವಾವಲಂಬಿಯಾಗಿ ಬದಲಾಯಿತು ಎಂದು ತಮ್ಮ ಯಶೋಗಾಥೆಯನ್ನು ನಿರೂಪಿಸಿದಾಗಲೇ ಅವರ ಅಗಾಧಪ್ರತಿಭೆಯ ಅಸಲಿ ಪರಿಚಯವು ನಮಗಾಗಿದ್ದು.

ರಾಜಸ್ಥಾನ ಮೂಲದ ಛವಿ ರಾಜವತ್ ದಿಲ್ಲಿ ಮತ್ತು ಪುಣೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕೆಲ ಖ್ಯಾತ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಸ್ವಲ್ಪ ಕಾಲ ಉದ್ಯೋಗಿಯಾಗಿ ದುಡಿದವರು. ಎಂ.ಬಿ.ಎ ಪದವೀಧರೆಯಾದ ಛವಿ ಎಲ್ಲರಂತೆ ಬಹುರಾಷ್ಟ್ರೀಯ ಕಂಪೆನಿಗಳ ಹವಾನಿಯಂತ್ರಿತ ಕೊಠಡಿಗಳಲ್ಲಿ ಜುಮ್ಮನೆ ಕೆಲಸ ಮಾಡುತ್ತಾ, ವಿಲಾಸಿ ವಿದೇಶ ಪ್ರಯಾಣಗಳನ್ನು ಆಸ್ವಾದಿಸುತ್ತಾ, ತಿಂಗಳಕೊನೆಗೆ ಲಕ್ಷ-ಲಕ್ಷಗಳನ್ನು ಎಣಿಸುತ್ತಾ ಕೂರಬಹುದಿತ್ತು. ಆದರೆ ಛವಿಯವರನ್ನು ಆಕರ್ಷಿಸಿದ್ದು ಮಾತ್ರ ಬೇಸಿಗೆಯಲ್ಲಿ ಅಕ್ಷರಶಃ ಬಿಸಿಕಾವಲಿಯಂತಾಗುತ್ತಿದ್ದ ರಾಜಸ್ಥಾನದ ಸೋದಾ ಎಂಬ ಪ್ರದೇಶ.

ಕನಸುಗಳನ್ನೇ ಕಣ್ಣುಗಳಲ್ಲಿ ತುಂಬಿಕೊಂಡು ಸೋದಾದ ಜನರೊಂದಿಗೆ ಬೆರೆತ ಈಕೆ, ಮುಂದೆ ಸೋದಾ ಗ್ರಾಮಸ್ಥರ ವಿಶ್ವಾಸವನ್ನು ಗಳಿಸಿಕೊಂಡು ಅಲ್ಲಿಯ ಸರಪಂಚ್’ ಆದರು. ಅಂದಿನಿಂದ ಸೋದಾ ಪ್ರದೇಶವು ಛವಿಯವರ ನೇತೃತ್ವದಲ್ಲಿ ಇಷ್ಟಿಷ್ಟೇ ಅರಳುತ್ತಾ, ಹಲವು ಸವಾಲುಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾ ನೀರಿನ ಬಳಕೆ, ಸಂಗ್ರಹಣೆ ಇತ್ಯಾದಿಗಳ ವಿಚಾರದಲ್ಲಿ ಇಂದು ಇಡೀ ದೇಶಕ್ಕೆ ಮಾದರಿಯೆನಿಸಿಕೊಂಡಿದೆ. ಹೀಗೆ ತನ್ನ ಅಸಾಮಾನ್ಯ ಸಾಮಾಜಿಕ ಕಾರ್ಯಗಳಿಂದಲೇ ಸೂಪರ್ ಸ್ಟಾರ್ ಸರಪಂಚ್’ ಆದ ಛವಿ ರಾಜವತ್ ಸಹಜವಾಗಿಯೇ ಭಾರತದಲ್ಲೂ, ಹೊರದೇಶಗಳಲ್ಲೂ ಪ್ರಶಂಸೆಯನ್ನು ಪಡೆದುಕೊಂಡು, ಹಲವು ಪ್ರಶಸ್ತಿ-ಪುರಸ್ಕಾರಗಳಿಗೂ ಅರ್ಹರಾಗಿ ಎಲ್ಲೆಡೆ ಗುರುತಿಸಿಕೊಂಡವರು.

ತಮ್ಮ ಸಾಮಾಜಿಕ ಕಳಕಳಿಯ ಕಾರ್ಯಗಳಿಂದಾಗಿ ಆಗಲೇ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದ ಛವಿ ರಾಜವತ್ ರವರ ಬಗ್ಗೆ ನಮಗೆ ಏನೇನೂ ತಿಳಿದಿರಲಿಲ್ಲ ಎಂಬುದು ಆಗ ನಮ್ಮ ಪಾಲಿನ ಅಚ್ಚರಿಯಾಗಿತ್ತು. ಹಾಗೆ ನೋಡಿದರೆ ಸ್ವತಃ ರಾಜಸ್ಥಾನ ಮೂಲದವನೇ ಆಗಿದ್ದ ಮನ್ಪಾಲ್ ನಿಗೂ ಈ ಬಗ್ಗೆ ಮಾಹಿತಿಯಿರಲಿಲ್ಲ. ಪಠ್ಯದ ಓದು, ಪಠ್ಯೇತರ ಚಟುವಟಿಕೆಗಳು, ಉದ್ಯೋಗ ತಲಾಶೆ… ಇತ್ಯಾದಿಗಳ ಜಂಜಾಟದಲ್ಲಿ ಬದುಕಿನ ಹಲವು ಸ್ವಾರಸ್ಯಗಳು ಕಳೆದುಹೋದವೇನೋ ಎಂದು ನಾವು ಹಳಹಳಿಸಿಕೊಂಡಿದ್ದೂ ಆಯಿತು. ಇನ್ನಾದರೂ ನಮ್ಮ ಸುತ್ತಮುತ್ತಲಿನ ಜಗತ್ತನ್ನು ಸಂವೇದನಾಶೀಲವಾಗಿ, ಜೀವಂತಿಕೆಯ ಪ್ರತಿರೂಪವಾಗಿ ನೋಡಬೇಕು ಭಾಯಿ ಎಂದು ಮನ್ಪಾಲ್ ಹೇಳಿಕೊಂಡ. ನಾನು ಹೂಂ ಎಂದು ಆತನೊಂದಿಗೆ ದನಿಗೂಡಿಸಿದೆ.

ಇದರ ತರುವಾಯ ತನ್ನ ಮಾತನ್ನು ಮನ್ಪಾಲ್ ಅದೆಷ್ಟು ಉಳಿಸಿಕೊಂಡನೋ ಗೊತ್ತಿಲ್ಲ. ಆದರೆ ನನಗೆ ಮಾತ್ರ ಅಂದು ದೆಹಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಆ ಕಾರ್ಯಕ್ರಮವು ‘ಇಂಡಿಯನ್ ಹ್ಯಾಬಿಟಾಟ್ ಸೆಂಟರ್’ ಜೊತೆಗೆ ಗಾಢವಾದ ಸಂಬಂಧವೊಂದನ್ನು ಹುಟ್ಟುಹಾಕಿತ್ತು. ಅಂದು ನಾನು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿರದಿದ್ದರೆ ದಿಲ್ಲಿಯ ಇಂಡಿಯನ್ ಹ್ಯಾಬಿಟಾಟ್ ಸೆಂಟರಿನ ಇರುವಿಕೆಯ ಅರಿವಾಗುವಷ್ಟರಲ್ಲಿ ಮತ್ತಷ್ಟು ಕಾಲವು ಸೋರಿಹೋಗುತ್ತಿತ್ತೇನೋ. ಅಸಲಿಗೆ ಈ ಪ್ರದೇಶವು ಮುಂದಿನ ಹಲವು ವರ್ಷಗಳ ಕಾಲ ನನ್ನೊಂದಿಗೆ, ನನ್ನ ದಿಲ್ಲಿ ಬದುಕಿನ ಅವಿಭಾಜ್ಯ ಅಂಗವಾಗಿ ಉಳಿಯಲಿದೆ ಎಂಬ ಕಲ್ಪನೆಯೂ ನನಗಿರಲಿಲ್ಲ. ಅಷ್ಟಕ್ಕೂ ಬದುಕು ನಮಗೆ ನೀಡುವ ಅಚ್ಚರಿಯ ಡಬ್ಬದಲ್ಲಿ ಏನೇನಿದೆ ಎಂಬುದನ್ನು ಯಾರು ತಾನೇ ಬಲ್ಲರು!

‘ನಾನು ಕಾಲಕಳೆದಂತೆ ಹಳತಾಗಬಹುದು. ಆದರೆ ಐ.ಎಚ್.ಸಿ ಮಾತ್ರ ನನ್ನ ಪಾಲಿಗೆ ಯಾವತ್ತಿಗೂ ಹಳತಾಗಲಾರದು’, ಎಂದು ನಾನು ಸಾಮಾನ್ಯವಾಗಿ ಹೇಳುತ್ತಿರುತ್ತೇನೆ. ಅದು ಸತ್ಯವೂ ಹೌದು. ಆ ಸುಂದರ ಪರಿಸರ, ಸಸ್ಯರಾಶಿ, ಹೋಳಿಹಬ್ಬದ ಕೆಂಬಣ್ಣವನ್ನು ದಟ್ಟವಾಗಿ ಚೆಲ್ಲಿಕೊಂಡಂತಿರುವ ಕೆಂಪುಗೋಡೆಯ ಭವ್ಯ ಕಟ್ಟಡಗಳು, ನೆತ್ತಿಯ ಮೇಲೆ ಬಿಸಿಲು ಚೆಲ್ಲುವ ಸೂರ್ಯನತ್ತ ಓರೆಯಾಗಿ ನೋಡುತ್ತಿರುವ ಸೂರಿನ ಸರಣಿಗನ್ನಡಿಗಳು, ರಂಗಭೂಮಿಯ ರಂಗಸ್ಥಳದಂತಿರುವ ಆಂಫಿ-ಥಿಯೇಟರ್, ಐ.ಎಚ್.ಸಿ ಅಂಗಳದಲ್ಲಿ ಖ್ಯಾತನಾಮರು ಅನಾಮಿಕರಂತೆ ಅಲೆದಾಡುವ ಪರಿ, ಇಲ್ಲಿ ನಡೆಯುವ ಕಾರ್ಯಕ್ರಮಗಳ ವೈವಿಧ್ಯ, ಎತ್ತ ನೋಡಿದರೂ ಕಣ್ಣಿಗೆ ಹಾಯೆನಿಸುವ ಕಲಾಕೃತಿಗಳು… ಹೀಗೆ ಒಂದೇ, ಎರಡೇ? ನನ್ನಂಥವರ ಪಾಲಿಗೆ ಅದೊಂದು ನಿಜವಾದ ಕಲಾಗ್ರಾಮವೇ ಹೌದು.

ಅಂದಹಾಗೆ ಹ್ಯಾಬಿಟಾಟ್ ಕೇಂದ್ರವು ದಿಲ್ಲಿಯಲ್ಲಿರುವುದು ದಿಲ್ಲಿಯ ಅದೃಷ್ಟ. ಮಾಡಲು ಬೇರೇನೂ ಕೆಲಸವಿಲ್ಲದಿದ್ದರೆ ಥಟ್ಟನೆ ಎದ್ದು ಇಂಡಿಯನ್ ಹ್ಯಾಬಿಟಾಟ್ ಸೆಂಟರಿನತ್ತ ಹೋಗಬಹುದು. ಏಕೆಂದರೆ ಅಲ್ಲಿ ಏನಾದರೊಂದು ಕಾರ್ಯಕ್ರಮವು ನಡೆಯುತ್ತಲೇ ಇರುತ್ತದೆ. ಅದು ಚಿತ್ರಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ-ಚರ್ಚೆ, ಉಪನ್ಯಾಸ, ಸಂಗೀತ ಕಾರ್ಯಕ್ರಮ, ಚಲನಚಿತ್ರ, ರಂಗಪ್ರಸ್ತುತಿ ಇತ್ಯಾದಿಗಳಲ್ಲಿ ಏನೂ ಆಗಬಹುದು. ಒಂದು ಪಕ್ಷ ಇದ್ಯಾವುದೂ ಹೊಂದಿಕೆಯಾಗದಿದ್ದರೆ ಹಸಿರು ಹೊದ್ದ ಕ್ಯಾಂಪಸ್ಸಿನಲ್ಲಿ ಒಂದಷ್ಟು ಹೊತ್ತು ನಡೆದಾಡಿ, ಅಲ್ಲಿಯ ತೋಟದ ಹೂವುಗಳೊಂದಿಗೆ ಒಡನಾಡಿ, ಮ್ಯೂರಲ್ಲುಗಳ ಕಿವಿಯಲ್ಲಿ ಪಿಸುಗುಟ್ಟಿ ಸುಮ್ಮನೆ ಹಿಂತಿರುಗಬಹುದು. ಹೊಟ್ಟೆ ಹಸಿದರೆ ಆವರಣದೊಳಗಿರುವ ಡೈನರಿನಲ್ಲಿ ಖಾದ್ಯಗಳ ಸವಿಯೂ ಇದೆ. ಯಾರೇನೇ ಹೇಳಲಿ. ಹ್ಯಾಬಿಟಾಟ್ ಸೆಂಟರಿನಂತಹ ದಿಲ್ಲಿಯ ಸಾಂಸ್ಕೃತಿಕ ಕೇಂದ್ರಗಳು ಬಂದವರನ್ನು ನಿರಾಶರಾಗಿಸುವುದಿಲ್ಲ.

ಛವಿ ರಾಜವತ್ ರಂಥಾ ಅದೆಷ್ಟೋ ಸಾಧಕರು ಇಂಡಿಯನ್ ಹ್ಯಾಬಿಟಾಟ್ ಸೆಂಟರಿನಲ್ಲಿ ಮುಂಚೆ ಬಂದುಹೋಗಿರಬಹುದು. ಆದರೆ ಅಂದು ಛವಿಯವರ ಆಗಮನದಿಂದಾಗಿ ಹ್ಯಾಬಿಟಾಟ್ ಕೇಂದ್ರದ ‘ಛವಿ’ಯ ಬಗ್ಗೆ ನಮಗೆ ಅನಿರೀಕ್ಷಿತವಾಗಿ ಒಂದಷ್ಟು ತಿಳಿಯಿತು. ಮುಂದೆಯೂ ಇಲ್ಲಿ ನಡೆದ ಇಂಥಾ ಹಲವು ಅದ್ಭುತ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದೆ. ಹ್ಯಾಬಿಟಾಟ್ ಕೇಂದ್ರದ ಈ ಸೊಗಸು ಮತ್ತು ಜೀವಂತಿಕೆಯೇ ಇಂದಿಗೂ ಕಲಾಸಕ್ತರನ್ನು ಎಂದಿನ ಹುಮ್ಮಸ್ಸಿನಲ್ಲಿ ಹಿಡಿದಿಟ್ಟುಕೊಂಡಿರುವುದು.

ಕೆಲ ವರ್ಷಗಳ ಹಿಂದೆ ಭಾರತೀಯ ಭಾಷೆಗಳ ಸಮ್ಮೇಳನವಾದ ‘ಸಮನ್ವಯ್’ ಇಂಡಿಯನ್ ಹ್ಯಾಬಿಟಾಟ್ ಸೆಂಟರಿನಲ್ಲಿ ಆಯೋಜನೆಯಾಗಿದ್ದಾಗ ಕನ್ನಡವೂ ಸೇರಿದಂತೆ ಹಲವು ಭಾಷೆಯ ಲೇಖಕರು, ಪತ್ರಕರ್ತರು ಮತ್ತು ಕಲಾವಿದರನ್ನು ಭೇಟಿಯಾಗುವ ಸದವಕಾಶವು ನನಗೆ ಒದಗಿಬಂದಿತ್ತು. ಸಾಮಾನ್ಯ ಪ್ರೇಕ್ಷಕನಂತೆ ಮೆಟ್ಟಿಲ ಮೇಲೆ ಕುಳಿತುಕೊಂಡು ತಮ್ಮ ಪಾಡಿಗೆ ಗಣ್ಯರ ಭಾಷಣವನ್ನು ಆಸಕ್ತಿಯಿಂದ ಕೇಳುತ್ತಿದ್ದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ತಮ್ಮ ಅಸ್ಖಲಿತ ಹಿಂದಿ ಮತ್ತು ಅದ್ಭುತ ಕಥಾನಿರೂಪಣೆಯ ಶೈಲಿಯಿಂದ ಎಲ್ಲರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತಿದ್ದ ಲೇಖಕಿ ಬಾನು ಮುಷ್ತಾಕ್, ಕವಿತೆಗಳ ಅಸಂಖ್ಯ ಅವತಾರಗಳನ್ನು ಆಸಕ್ತರ ಮುಂದಿಡುತ್ತಿದ್ದ ಕವಯತ್ರಿ ಮಮತಾ ಸಾಗರ… ಹೀಗೆ ಭಾಷಾವೈವಿಧ್ಯದ ನೆಪದಲ್ಲಿ ಭಾರತದ ಹಲವು ಮೂಲೆಗಳಿಂದ ಆಗಮಿಸಿದ್ದ ಪ್ರತಿಭಾವಂತರ ದಂಡೇ ಅಲ್ಲಿ ಸೇರಿತ್ತು. ಸಾಹಿತ್ಯಾಸಕ್ತರಿಗೆ ನಿಜವಾದ ಅರ್ಥದಲ್ಲಿ ಅದೊಂದು ಅಕ್ಷರಜಾತ್ರೆ.

ಇಂಥದ್ದೇ ಮತ್ತೊಂದು ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಮಾತಿಗೆ ಸಿಕ್ಕವರು ಯಶಸ್ವಿ ಬಾಲಿವುಡ್ ಚಿತ್ರವಾದ ‘ಗ್ಯಾಂಗ್ಸ್ ಆಫ್ ವಾಸೀಪುರ್’ ಖ್ಯಾತಿಯ ಸ್ನೇಹಾ ಖನ್ವಾಲ್ಕರ್. ಎಮ್.ಟಿ.ವಿ ವಾಹಿನಿಯಲ್ಲಿ ಸೌಂಡ್ ಟ್ರಿಪಿನ್’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಸ್ನೇಹಾ ಆಗಲೇ ತಮ್ಮ ಕ್ಷೇತ್ರದಲ್ಲಿ ಯಶಸ್ಸಿನ ಛಾಪನ್ನು ಮೂಡಿಸಿದವರು. ನಂತರ ಅನುರಾಗ್ ಕಶ್ಯಪ್ ನಿರ್ದೇಶನದ ‘ಗ್ಯಾಂಗ್ಸ್ ಆಫ್ ವಾಸಿಪುರ್’ ಸರಣಿ ಚಿತ್ರಗಳ ಸೂಪರ್ ಹಿಟ್ ಹಾಡುಗಳಿಂದ ಗಾಯಕಿಯಾಗಿಯೂ, ಸಂಗೀತ ನಿರ್ದೇಶಕಿಯಾಗಿಯೂ ಹೆಸರು ಮಾಡಿದ್ದರು. ಹೀಗೆ ಸೆಲೆಬ್ರಿಟಿ ಮ್ಯೂಸಿಕ್ ಡೈರೆಕ್ಟರ್ ಆಗಿರುವ ಸ್ನೇಹಾ ಖನ್ವಾಲ್ಕರ್ ಕ್ಯಾಮೆರಾಗಳ ಭರಾಟೆಯಿಲ್ಲದೆ, ಅನಾಮಿಕರಂತೆ ಪುಸ್ತಕದಂಗಡಿಯೊಂದರಲ್ಲಿ ಪುಸ್ತಕಗಳನ್ನು ಆರಿಸಿಕೊಳ್ಳುವುದನ್ನು ನೋಡಬೇಕೆಂದರೆ ದಿಲ್ಲಿಯ ಹ್ಯಾಬಿಟಾಟ್ ಸೆಂಟರಿಗೇ ಬರಬೇಕು.

ಒಮ್ಮೆ ಹ್ಯಾಬಿಟಾಟ್ ಕೇಂದ್ರದಲ್ಲಿ ಅಡ್ಡಾಡುತ್ತಿದ್ದ ನಾವು ಅದೆಲ್ಲೋ ರಬ್ಬಿ ಶರ‍್ಗಿಲ್ ಹಾಡುತ್ತಿದ್ದಾನಲ್ಲಾ’ ಎನ್ನುತ್ತಾ, ದೂರದಿಂದೆಲ್ಲೋ ಕೇಳಿಬರುತ್ತಿದ್ದ ದನಿಗೆ ತಕ್ಕಂತೆ ಗುನುಗುನಿಸುತ್ತಿದ್ದೆವು. ನಂತರ ಹ್ಯಾಬಿಟಾಟಿನ ಆಂಫಿ-ಥಿಯೇಟರಿಗೆ ಬಂದಾಗಲೇ ಅಸಲಿ ವಿಷಯ ತಿಳಿದಿದ್ದು. ಸುಮಾರು ನೂರು-ನೂರೈವತ್ತು ಮಂದಿಯ ಎದುರು ಕುಳಿತು ರಬ್ಬಿ ಶರ್ಗಿಲ್ ಛಲ್ಲಾ ಕೀ ಲಬ್ದಾ ಫಿರೇ…’ ಎಂದು ಗಿಟಾರ್ ನುಡಿಸುತ್ತಾ, ಸುಶ್ರಾವ್ಯವಾಗಿ ಹಾಡುತ್ತಿದ್ದ. ಇನ್ನು ಹಸ್ತಾಕ್ಷರ ಸಮೇತವಾಗಿ ಗುಲ್ಝಾರ್ ರವರ ಕಥಾಸಂಕಲನವನ್ನು (‘ಹಾಫ್ ಅ ರುಪೀ’) ಪಡೆದುಕೊಂಡಿದ್ದು ದಿಲ್ಲಿಯ ಹ್ಯಾಬಿಟಾಟ್ ಸೆಂಟರ್ ನೀಡಿದ ಆಯ್ದ ಮರೆಯಲಾಗದ ನೆನಪುಗಳಲ್ಲೊಂದು.

ಖ್ಯಾತ ಅಮೆರಿಕನ್ ವಾಸ್ತುಶಿಲ್ಪಿ ಜೋಸೆಫ್ ಸ್ಟೇಯ್ನ್ ರವರ ವಿನ್ಯಾಸದಲ್ಲಿ ಮೈತಾಳಿರುವ ಇಂಡಿಯನ್ ಹ್ಯಾಬಿಟಾಟ್ ಸೆಂಟರ್, ಬಿಡುವಿಲ್ಲದ ದಿಲ್ಲಿಯ ಮೆಟ್ರೋಪಾಲಿಟನ್ ಜಂಜಾಟದಲ್ಲೂ ಆಹ್ಲಾದವನ್ನು ತರುವ ಸುಂದರ ತಾಣ. ಇಂದು ಸುಮಾರು ಒಂಭತ್ತು ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಭವ್ಯವಾಗಿ ನಿಂತಿರುವ ಹ್ಯಾಬಿಟಾಟ್ ಕೇಂದ್ರವು ದಿಲ್ಲಿಯ ಲೋಧಿ ಎಸ್ಟೇಟ್ ಭಾಗದ ಸೌಂದರ್ಯಕ್ಕೆ ಕಿರೀಟವಿಟ್ಟಂತಿದೆ.

ದಿಲ್ಲಿಯ ಇಂಡಿಯನ್ ಹ್ಯಾಬಿಟಾಟ್ ಸೆಂಟರ್, ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ಸೇರಿದಂತೆ ನವಭಾರತದ ಹಲವು ಆಧುನಿಕ ಕಟ್ಟಡಗಳನ್ನು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿದ ಸ್ಟೇಯ್ನ್, ೧೯೯೨ ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಗೌರವಕ್ಕೆ ಪುರಸ್ಕೃತರಾದವರೂ ಹೌದು. ಲೋಧಿ ಎಸ್ಟೇಟಿಗಿದ್ದ ‘ಸ್ಟೇಯ್ನಾಬಾದ್’ ಎಂಬ ಅಡ್ಡಹೆಸರು, ಇಲ್ಲಿಯ ರಸ್ತೆಯೊಂದಕ್ಕೆ ಇರಿಸಲಾಗಿರುವ ಜೋಸೆಫ್ ಸ್ಟೇಯ್ನ್ ಲೇನ್’ ಇಂಬಿತ್ಯಾದಿ ಹೆಸರುಗಳು ಸ್ಟೇಯ್ನ್ ಸೃಷ್ಟಿಸಿದ ಅದ್ಭುತಗಳ ಖ್ಯಾತಿಗೆ ಮತ್ತು ಅವುಗಳು ಶಹರದ ಸಾಂಸ್ಕೃತಿಕ ಜನಜೀವನದಲ್ಲಿ ಒಂದಾಗಿರುವ ಸೊಬಗಿಗೆ ಸಾಕ್ಷಿ.

ದಿಲ್ಲಿಯನ್ನು ಸಂಗಾತಿಯಂತೆ ಪ್ರೀತಿಸಲು ಇರುವ ಕಾರಣಗಳ ಪಟ್ಟಿಗೆ ಮತ್ತೊಂದು ಹೆಸರನ್ನು ಬರೆದಿಟ್ಟುಕೊಳ್ಳಿ: ‘ಇಂಡಿಯನ್ ಹ್ಯಾಬಿಟಾಟ್ ಸೆಂಟರ್, ಲೋಧಿ ರೋಡ್’

March 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: