‘ಕವಿತೆ ಬಂಚ್‌’ ವಿಮರ್ಶೆ – ಓದುಗರ ಎದೆಗೂ ತಾಕಬೇಕು ಈ ಮಾತು

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.

ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ..

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಕಳೆದ ವಾರ ಹಾಗೆ  ‘ಪೊಯೆಟ್ ಆಫ್ ದಿ ವೀಕ್’ ಆದವರು‌ ಸತೀಶ್ ಕುಲಕರ್ಣಿ

ಅವರ ಕವಿತೆಗೆ ಕಥೆಗಾರ, ವಿಮರ್ಶಕ, ಅವಧಿಯ ಅಂಕಣಕಾರ ಶಿವಕುಮಾರ ಮಾವಲಿ ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ..

ಶಿವಕುಮಾರ ಮಾವಲಿ

ಓದುಗರ ಎದೆಗೂ ತಾಕಬೇಕು ಈ ಮಾತು

ಯುದ್ಧ ಮುಗಿದ ಮೇಲೆ ಲೋಕದಲ್ಲಿ ಉಳಿಯುವುದು ಏನು? War does not determine who is RIGHT; it determines what is LEFT ಎನ್ನುವುದು ಯುದ್ಧದ ವಿಷಯದಲ್ಲಿ ಯಾವಾಗಲೂ ಸತ್ಯ. ಸತೀಶ್ ಕುಲಕರ್ಣಿಯವರ ‘ಯುದ್ಧ ಮುಗಿದ ಮೇಲೆ’ ಎನ್ನುವ ಪದ್ಯ ಕೂಡ ಅದನ್ನೇ ಪುನರುಚ್ಛರಿಸುತ್ತಿದೆ. ಯಾರೇ ಗೆದ್ದು, ಯಾರೇ ಸೋತರು ಕೊನೆಯಲ್ಲಿ ಸೋಲುವುದು ಮನುಷ್ಯನೇ ಎನ್ನುವ ಕವಿಗೆ ಖಡ್ಗ, ಬಾಂಬು, ಗ್ರೆನೇಡುಗಳು ಗೆಲ್ಲಲಾರವು ಎಂಬ ಭರವಸೆ ಇದೆ.

ದೇಶದ ನೆಲಗಳು ಯುದ್ಧದ ನೆಲೆಗಳಾಗಿ ಬದಲಾಗುವ ಬಗ್ಗೆ ಕವಿ ಕಳವಳ ವ್ಯಕ್ತಪಡಿಸುತ್ತಾರೆ. ಯುದ್ಧ ಮುಗಿದ ಮೇಲೆ ಉಳಿಯುವ ಸೂತಕದ ಅವಧಿ ಮತ್ತೊಂದು ಯುದ್ಧಕ್ಕೆ ಅಣಿಗೊಳಿಸುತ್ತಲೇ ಇರುತ್ತದೇನೋ ಎಂಬ ಅನುಮಾನ ಕವಿಯದ್ದಿರಬೇಕು. ಹಾಗಾಗಿಯೇ ಅವರು ದೀಪ ಮತ್ತು ಬೆಂಕಿ ಎರಡೂ ಒಂದೇ ಅಲ್ಲ ಒಂದು ಬೆಳಕು ಇನ್ನೊಂದು ಕೇವಲ ಸುಡತಿ ಎನ್ನುತ್ತಾರೆ.

ಚರ್ಚಿಲ್ ಹೇಳಿದಂತೆ ‘If you don’t want to die in the war, you have to accept peace’ ಎಂಬುದನ್ನು ನಂಬುವ ಯಾವ ಕವಿಯೂ ಯುದ್ಧವನ್ನು ಬಯಸಲಾರ. ಅಷ್ಟಾಗಿಯೂ ಜಗದಲ್ಲಿ ‘You need war in order to restore peace in the world’ ಎಂದು ನಂಬಿಕೊಂಡಿರುವವರ ಸಂಖ್ಯೆಯೇನೂ ಕಮ್ಮಿಯಿಲ್ಲ.

ತಾನು ಕಟ್ಟಿಕೊಂಡ ಮನೆಯ ತೋಟದಲ್ಲಿ ಕವಿಯ ಕೃಷಿ ಆತ್ಮಸಂತೋಷದ ಹಾದಿಯನ್ನು ಕಂಡುಕೊಂಡಿದ್ದಾರೆ. ಕರಕಿ ಕಸ ತೆಗೆಯವುದು, ಹಸನ ಮಾಡುವುದು, ಚೊಂಬು ನೀರು ಹನಿಸುವುದು ಮಾಡುತ್ತ ಇದು ನನ್ನ ಹಾಗೆಯೇ ನನ್ನ ಸಣ್ಣ ಲೋಕ ಅದನ್ನು ಗೇಟು‌, ಕಾಪೌಂಡುಗಳಿಂದ ಕಾಯಬೇಕೆಂಬ ಅವಶ್ಯಕತೆಯೂ ಇಲ್ಲ. ಏಕೆಂದರೆ ಆ ತೋಟದಲ್ಲಿ ಕಾಯಬೇಕಾದ ಯಾವ ಫಸಲೂ ಇಲ್ಲ. ಇದು ನನ್ನ ಸಣ್ಣ ಲೋಕ ಎನ್ನುತ್ತಾರೆ ಕವಿ ತಮ್ಮ ‘ನಾನು ನನ್ನ ತೋಟ’ ಎಂಬ ಪದ್ಯದಲ್ಲಿ.

ಯುದ್ಧದ ಬಗ್ಗೆ ಬರೆದ ಕವಿ ಬೆಕ್ಕಿನ ಬಗ್ಗೆಯೂ ಬರೆಯುತ್ತಾರಲ್ಲ? ಹೌದು ಅಡ್ಡ ಗೋಡೆಯ ಮೇಲೆ ಕಳ್ಳ ನಡಿಗೆಯಲ್ಲೂ, ರಾಜಗಾಂಭೀರ್ಯದ ನಡಿಗೆಯಲ್ಲೂ ಕಾಣಿಸಿಕೊಳ್ಳುವ ಬೆಕ್ಕಿನ ಬಗ್ಗೆ ಕವಿಗೊಂದು ಕುತೂಹಲದ ಕಣ್ಣಿದೆ. ನೀವು ಗಮನಿಸಿದ್ದರೆ ಈ ಬೆಕ್ಕಿಗೆ ಒಂದೇ ಮನೆ ಇಲ್ಲ. ಒಂದೇ ಸಂಸಾರ ಇಲ್ಲ. ಏಳೇಳು ಗೃಹ ಸಂಚಾರಿ. ಹಾಲನ್ನು ಇಷ್ಟಪಡುವ ಜೀವಿ, ಮಾಂಸಾಹಾರಿಯೂ ಹೌದು. ಅಡುಗೆ ಮನೆಯಲ್ಲಿ ತುಡುಗು ಮಾಡಿ ಮನೆಯೊಡತಿ‌ ಬೆನ್ನತ್ತಿದಾಗ ಓಟ ಕೀಳುವ ಬೆಕ್ಕು ಒಂದು ವೇಳೆ ಸಿಕ್ಕಿಕೊಂಡು ಬಾಲ ಹಿಡಿದು ನೀವು ಹೊರ ಒಗೆದರೂ ನೆಲಕೆ ಮತ್ತೆ ನಾಲ್ಕು ಕಾಲು ಊರಿ ನಡೆಯಲು ಸಿದ್ಧ ಈ ಜಿಗಟು ಜೀವಿ. ಹೀಗೆ ಬೆಕ್ಕಿನ ಬಗ್ಗೆ ಬರೆಯಬೇಕು ಎಂದೆನ್ನಿಸುವುದು ವಿಶೇಷವಾದ ಸಂಗತಿ.

ಇನ್ನು ‘ ಈ ಕಾಲ’ ದ ಬಗ್ಗೆ ಬರೆಯದೆ ಇರುವ ಕವಿಗಳು ತೀರ ವಿರಳ. ಆಕಾಶದೆತ್ತರಗಳು ನೆಲ ಕಚ್ವಿ, ಕೋಟಿಗಳು ಕುಬ್ಜವಾಗುವ ಕಾಲವಿದು ಎನ್ನುತ್ತ, ಸಂಬಂಧಗಳು ಸೂತಕದ ಸರಕಾಗುವ ಈ ಕಾಲದಲ್ಲಿ ರೂಪ ರೂಪಗಳನು ದಾಟಿ ಕುರೂಪವೇ ಹೊಸ ರೂಪ ತಾಳುವ ಕಾಲ ಇದು ಎಂದು ವಿಶ್ಲೇಷಿಸುತ್ತಾರೆ.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಾವಿರುವ ಕಾಲದ ಬಗ್ಗೆ ಒಂದು ಸಣ್ಣ ಅಸಹನೆ ಇರುತ್ತದೆ. ವಿಪರೀತ ಆದರ್ಶವಾದಿಯಂತೆ ಮಾತನಾಡುವ ಎಲ್ಲರೂ ತಾವಿರುವ ‘ಈ ಕಾಲ’ ದ ಬಗ್ಗೆ ಪುಕಾರು ಹೊಂದಿರುತ್ತಾರೆ ಎಂಬುದು ಸರ್ವಸತ್ಯ. ಹುಟ್ಟು ಸಾವುಗಳು, ಒಳಿತು ಕೆಡುಕುಗಳು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತವೆ ಎಂಬುದನ್ನು ಮರೆಯಬಾರದು. ‘ಕತ್ತಲೆಯು ಹರಗಿ ಬೆಳಕು ಬರುವ ಬೆರಗಿನ ಕಾಲವಿದು’ ಎನ್ನುವಾಗ ಕವಿಯೂ ಆಶಾವಾದಿಯಾಗಿದ್ದಾರೆ ಎಂಬುದು ಸ್ಪಷ್ಟ.

ಒಂದು ವಿಶಿಷ್ಟ ಸನ್ನಿವೇಶ ಕುರಿತು ಬರೆದ ‘ಎದೆಗೆ ತಾಕಿತು ಮಾತು’ ಪದ್ಯದಲ್ಲಿ ಕವಿ ರಾಜ್ ಘಾಟ್ ಗೆ ಭೇಟಿಕೊಟ್ಟ ಸಂದರ್ಭವನ್ನು ವಿಶ್ಲೇಷಿಸುತ್ತಾರೆ. ಈ ಬಾರಿಯೂ ರಾಜ್ ಘಾಟ್ ಗೆ‌ ಹೋಗಿದ್ದೆ ಎನ್ನುವುದರಲ್ಲಿ ಪ್ರತೀ ಬಾರಿ ದೆಹಲಿಗೆ ಹೋದ ಕವಿ ಇಲ್ಲಿಗೆ ಭೇಟಿ ಕೊಡುತ್ತಾರೆ ಎಂಬುದು ತಿಳಿಯುತ್ತದೆ. ಹಾಗೆಯೇ ಈ ಬಾರಿ ಹೋದಾಗ ಗಾಂಧಿ ನೆನಪಿಗೆಂದು ಒಂದು ಪುಸ್ತಕ ಕೊಳ್ಳುತ್ತಾರೆ ಕವಿ. ಆಗ ಕೈತಪ್ಪಿ ಬಿದ್ದ ಪುಸ್ತಕವನ್ನು ಬಾಗಿ ಎತ್ತಿಕೊಳ್ಳುವ ಕವಿ ಅದನ್ನು ಎದೆಗಪ್ಪಿಕೊಳ್ಳುತ್ತಾರೆ. ಆಗಲೇ ಅವರಿಗೆ ‘ಎತ್ತು ಸದಾ ಬಿದ್ದವರ’ ಎಂದು ಗಾಂಧಿಯೇ ಹೇಳಿದ ಮಾತು ಎದೆಗೆ ತಾಕುತ್ತದೆ.

ಗಾಂಧಿಯನ್ನು ಆಗಲೇ ಮೈಗೂಡಿಸಿಕೊಂಡಿರದ ಹೊರತು ಇಂಥ ಧ್ವನಿಗಳನ್ನು ಕೇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ… ಕವಿ, ಗಾಂಧಿಯನ್ನು ರಾಜ್ ಘಾಟ್ ನಲ್ಲಿ ಭೇಟಿ ಮಾಡಿ ಬರುತ್ತಾರೇನೋ ಎಂಬಂತೆ ಭಾಸವಾಗುವ ಈ ಕವಿತೆ ನಮ್ಮೊಳಗೊಬ್ಬ ಗಾಂಧಿ ಈಗಾಗಲೇ ಇದ್ದರೆ ಗಾಂಧಿಯನ್ನು ಎದುರುಗೊಳ್ಳಲು ಸಾಧ್ಯ ಮತ್ತು ಅವರ ಮಾತುಗಳನ್ನು ಕೇಳಿಸಿಕೊಳ್ಳಲೂ ಕೂಡ ಸಾಧ್ಯ ಎಂದು ಮನವರಿಕೆ ಮಾಡುತ್ತದೆ. ಯುದ್ಧದ ನಿರರ್ಥಕತೆಯನ್ನು ಒಪ್ಪಿಕೊಂಡ ಕವಿಗೆ ಗಾಂಧಿಯ ಮಾತು ಎದೆಗೆ ತಾಕುವುದು ಅಪೇಕ್ಷಣೀಯವಾಗಿದೆ.

ಆ ಮೂಲಕ ಓದುಗರ ಎದೆಗೂ ಆ ಮಾತಗಳು ತಾಕಿದರೆ ಸಾರ್ಥಕವಾದಂತೆ.

‍ಲೇಖಕರು Avadhi

June 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: