
ಕವಿತೆ ಬಂಚ್-
‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.
ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.
ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.
ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಸೌಮ್ಯಶ್ರೀ ಎ ಎಸ್
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಆಗಸನಮರ, ಗ್ರಾಮದ ಎ.ಎಸ್. ಸೌಮ್ಯಶ್ರೀಯವರು ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಚಿನ್ನದ ಪದಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರು. ಪ್ರಸ್ತುತ ಇವರು ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರವೃತ್ತಿಯಲ್ಲಿ ಅಪಾರ ಸಾಹಿತ್ಯ ಪ್ರೀತಿ ಹೊಂದಿರುವ ಇವರ ಹಲವಾರು ಕತೆ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸೌಮ್ಯಶ್ರೀಯವರ ಈ ಚೊಚ್ಚಲ ಕಥಾಸಂಕಲನ ೨೦೧೭ರಲ್ಲಿ ಪ್ರಕಟವಾಗಿದೆ.
1. ಅಂರ್ತಜಾಲ!
ಸಾಮಾಜಿಕ ಜಾಲತಾಣ
ಬರಿ ಮೋಹಕವಷ್ಟೇ ಅಲ್ಲ
ಹೊಸಸಾಧ್ಯತೆಗಳ ಅರಸಿ
ಹೊಸಲೋಕಕೆ ಕರೆಸಿ
ಅಂಗೈಯಲಿ ಜಗವ ತೋರಿಸಿ
ಮನಸು ಬುದ್ಧಿಗಳ ಚುರುಕುಗೊಳಿಸಿ
ಬಗೆಬಗೆಯ ಅಲೋಚನೆಗಳ ಪಸರಿಸುವ ತಾಣ
ಹಿತಮಿತದಿ ವಿಹರಿಸಿದಾಗ
ಜ್ಞಾನ ದೀವಿಗೆಯಂತ ಸೊಗಸು
ಹದಮೀರಿ ಬಳಸಿದಾಗ
ಕಗ್ಗಂಟಿನ ಮನಸು
ಅರಿವಿನ ಅಗರವಹುದು
ಬೆಂಬಿಡದ ಭೂತವು ಆಗುವುದು!

ಆಧುನಿಕತೆಗೆ ಮಾರುಹೋಗಿರುವ
ಯುವಪೀಳಿಗೆ ಶರವೇಗದಲಿ ಸಾಗುತಿದೆ
ಸಂಬಂಧಗಳಲಿ ಪ್ರೀತಿ, ವಾತ್ಸಲ್ಯದ ಸೆಳತವಿಲ್ಲ
ತನ್ನವರ ಬಗ್ಗೆ ಅರೆಗಳಿಗೆ ತುಡಿತವಿಲ್ಲ!
ಜಾಲದ ಬಂಧನದ ಬಲೆಯೊಳಗೆ ಬಂಧಿಯಾಗಿ
ಅತಿಯಾದ ಕಾತುರ, ಆತಂಕದಿಂದ ತಲ್ಲಣ
ಇರಬೇಕು ಜಾಲತಾಣಗಳ ಬಳಸುವಲ್ಲಿ ಎಚ್ಚರ
ಇಲ್ಲವಾದಲ್ಲಿ ನಿಜಕೂ ಬದುಕು ದುಸ್ತರ!
ಫೇಸ್ಬುಕ್, ಟ್ವಿಟರ್, ವಾಟ್ಸ್‍ಪ್
ನಿರಂತರ ಸ್ಟೇಟಸ್ ಅಪ್ಡೇಟ್‍ಗಳು
ಮನಬಂದಂತೆ ಫೇಸ್ಬುಕ್ ವಾಲುಗಳಲಿ
ಸ್ವೇಚ್ಛೆಯಾಗಿ ಗೀಚುವ ಹುಚ್ಚರು
ಮಿಥ್ಯ ಜಗತ್ತಿನಲಿ ಕಳೆದುಹೋಗಿ
ವಾಸ್ತವತೆಯ ಬದುಕಿಂದ ದೂರ ಸರಿದಿಹರು!
ಅಂರ್ತಜಾಲವೆಂಬ ಇಂದ್ರಜಾಲದ
ಮೋಹದ ಸುಳಿಯ ಬಂಧನದಲಿ ಬಂಧಿಯಾಗಿಹರು!
ಅಂಗೈಯಲಿ ಅಂರ್ತಜಾಲ
ಯಾರನ್ನು ಬಿಟ್ಟಿಲ್ಲ ಈ ಮೋಹಜಾಲ
ಹಾಕಿದ ಸ್ಟೇಟಸ್‍ಗಳಿಗೆ ಹರಿದು ಬಂದ
ಲೈಕ್‍ಗಳೆಷ್ಟು ಗೀಚಿದ ಕಾಮೆಂಟ್‍ಗಳೆಷ್ಟೆಂದು
ಮತ್ತೆ ಮತ್ತೆ ತೆರೆದು ನೋಡುವ ಭ್ರಾಂತಿ
ಸರಿಸಿದೆ ಮನೆ ಮನದಿಂದ ಶಾಂತಿ!

ಜಾತಿ ಧರ್ಮಗಳ ವಿವಾದಗಳು
ಪ್ರಚಾರಪ್ರಿಯರ ಹಾವಳಿಗಳು
ವೈಯಕ್ತಿಕ ಸಮರಗಳು
ಸುರಿಸಿದ ಅಸಂಬದ್ದ ಕಾಮೆಂಟ್‍ಗಳ ಸಂವಹನ
ಮೂಡಿಸುತ್ತಿವೆ ಸಾಮಾಜಿಕ ವಲಯದಲ್ಲಿ ತಲ್ಲಣ
ಒಂದಷ್ಟು ಅವಹೇಳನಗಳು, ಕ್ರಾಂತಿಕಾರಿ ಹೇಳಿಕೆಗಳು
ತಂದೊಡ್ಡುತ್ತಿವೆ ಸಾಮಾಜಿಕ ಕದನ!
ಇರಲಿ ಅಂತರ್ಜಾಲದ ಅರಿವು
ತಿಳಿವಿನ ಗುರಿಯೊಂದಿಗೆ ಒಲವು
ಮಾಯಾಜಾಲವಾಗದಿರಲಿ ಸೆಳವು
ಬದುಕು ಬಾಂಧವ್ಯಗಳಿಗೆ
ಮುಸುಕದಿರಲಿ ಮರೆವಿನ ಉಸುಕು!
2. ಅವ್ವ!
ಬಳ್ಳಿಯಂತೆ ಅಪ್ಪಿಕೊಂಡು
ನಿನ್ನೊಟ್ಟಿಗೆ ಇದ್ದಾಗ ಬದುಕು
ಹಸಿರಾಗಿ ನಳನಳಿಸುತ್ತಿತ್ತು
ತುಂಡು ಬೆಲ್ಲ ಬಾಯಿಗಿಟ್ಟು
ಸಂಭ್ರಮಿಸಿದ ಸಿಹಿಕ್ಷಣಗಳು
ಕರಗಿ ಮತ್ತೆ ಮನಸು
ಕಳೆದ ನೆನಪುಗಳ ಸಾಗರದ
ಮುತ್ತನಿಡುವ ಒಲವ
ಅಲೆಗಳ ಕಚಗುಳಿಯಲಿ
ಕಳೆದು ಹೋಗಿದೆ ಅವ್ವ!

ಹರಿದ ಬಟ್ಟೆ ತೊಟ್ಟು
ಹಗಲು ಇರುಳು ನನಗಾಗಿ
ಬೆವರು ಬಸಿದು ಹರಿದು
ಸವೆಸುತ್ತಿದ್ದ ಬದುಕ
ಸೂಜಿದಾರದಿ ಹೊಲಿದು
ಹೊಸ ಬದುಕ ಬಿಕ್ಷೆಯ ಇತ್ತವಳು
ಉಸಿರು ತುಂಬಿ ಜೀವ
ಕೊಟ್ಟವಳು ನೀನು ಅವ್ವ!
ಅಂದು ಹೊಲಿದ ಹೊಲಿಗೆಗೆ
ಇಂದು ಮತ್ತಷ್ಟು ಮೆರಗು ಬಂದಿದೆ
ಸೂಜಿ ಮೊನೆಯು ಕಾಣದಷ್ಟು
ಕಣ್ಮಂಜಾಗಿದ್ದರೂ ನೀನು
ಕಣ್ಣಲ್ಲಿ ಕಣ್ಣಿಟ್ಟು ಹೊಲಿದು
ಬರೆದ ಬದುಕ ನೆನೆಯದೆ
ನೀ ಕೊಟ್ಟ ಸವಿ ನೆನಪುಗಳ
ಒಲವ ಹೊದ್ದು ಮಲಗಬೇಕಾದ
ನಾನು ಅಹಂಕಾರದ ಅಮಲೇರಿ
ಮೆರದನಲ್ಲ ಅವ್ವ!
ನೀನು ಒಲವ ಸುರಿಸಿ
ಬೆಳಸಿದ ಗಿಡ ಅಂದು
ಚಿಗುರಿ ಹಸಿರಾಗಿ ಪಲ್ಲವಿಸುತ್ತಿತ್ತು
ಅದ್ಯಾರೋ ನೆರಳು ತಾಗಿತೋ
ನೀನೆಟ್ಟ ಗಿಡ ಬಾಡಿ ಬರಿದಾಗಿದೆ
ಮರಳಿ ಬಂದು ನಿನ್ನೊಲವ
ಸುರಿಸು ಸತ್ತ ಗಿಡಕೆ ಮತ್ತೆ ಜೀವಕಳೆ
ಮೂಡಿ ನಿನ್ನಿಂದ ಕಿಲಕಿಲನೆ ನಗುತ್ತದೆ!
3. ಪ್ರಕೃತಿ
ಇರುವುದೆಲ್ಲವ ಅಳಿದು
ಮತ್ತ್ಯಾವುದೋ ದುರಾಸೆಗೊಳಗಾಗಿ
ಪ್ರಕೃತಿಯೆಂಬ ಹೊನ್ನಿನ ಗಣಿಯ
ಅಗೆದು ಬಗೆದು ದೋಚುತಿಹರು.

ಪರಿಸರ ಸಂರಕ್ಷಣೆ
ನಮ್ಮೆಲ್ಲರ ಹೊಣೆ
ಇದು ಘೋಷಣೆಗಷ್ಟೇ!
ಅಧುನಿಕತೆಗೆ ಮಾರುಹೋಗಿ
ಅರಿಯದೆ ಪ್ರಕೃತಿಯ ವೇದನೆ
ಮುಗಿಲೆತ್ತರಕೆ ಮಹಲುಗಳ
ಕಟ್ಟುತಾ ಅದೇ ಸಾಧನೆಯೆಂದು
ಸುಖಭೋಗದಲಿ ಬೀಗುತಿಹರು!
ಪ್ರಕೃತಿ ಮಾತೆ ಪರಿ ಪರಿಯಾಗಿ
ಪರಿತಪಿಸುತ್ತಿದ್ದರೂ ಆ ವೇದನೆಗಿಲ್ಲ
ನಾಗರೀಕ ಮನುಜನ ಸಂವೇದನೆ
ಹಸಿರು ಸರಿಸಿ ಹೊಗೆಯ ಸೂಸಿ
ತಾನು ನಿಂತ ನೆಲೆಯೆಂಬುದ ಮರೆತು
ಮೂಢನಾಗಿ ಪ್ರಕೃತಿಯ ಒಡಲ ದಹಿಸುತಿಹನು
ಹಸಿರು ತೇರಿನಂತಿದ್ದ ಪ್ರಕೃತಿಯ
ಎಲ್ಲೆ ಮೀರಿ ವಿಕೃತಿಗಳಿಸುತಿಹನು
ವಿಜ್ಞಾನ -ತಂತ್ರಜ್ಞಾನ ಅರಿತೆನೆಂದು
ಅಹಂನಿಂದ ಮೆರೆಯುತ್ತಿರುವ
ಮನುಜ ತಿಳಿದಿಲ್ಲ ನಿಜಕೂ
ಕಲ್ಪನೆಗೂ ನಿಲುಕದ ಸತ್ಯ
ಒಮ್ಮೆ ಭುವಿ ಅಬ್ಬರಿಸಿದರೆ
ನಿಂತ ನೆಲ ಭೂಕಂಪನ
ಪ್ರಕೃತಿ ಉಳಿಸುವುದು
ನಮ್ಮ ಸುಕೃತಿಯೆಂದರಿತು ಬಾಳಿದರೆ ಒಳಿತು
ಮಾಡಿದರೆ ಪ್ರಕೃತಿಯ ಉಪೇಕ್ಷೆ
ಎದುರಾಗುವುದು ಊಹೆಗೂ ನಿಲುಕದ ಶಿಕ್ಷೆ!

ಹೂ!
ಮೊಗ್ಗಾಗ್ಗಿದ್ದ ಹೂ ಅರಳಿ
ತನ್ನವರೊಟ್ಟಿಗೆ ಕಿಲಕಿಲನೆ ನಗುತ್ತಿತ್ತು
ಬಳ್ಳಿಯಲ್ಲಿ ಬಾಗಿ ಬೀಗುತ್ತಿದ್ದ
ಹೂವಿನ ಅಂದ ಚೆಂದಕೆ ಸೋತು
ಅದರ ಸಮ್ಮತಿಗೂ ಕಾಯದೆ
ಚುಂಬಿಸಿ ಕೈಹಿಡಿದು ಹೋದರು!
ತನ್ನ ಮನೆ ತನ್ನವರ ತೊರೆದ ಹೂ
ನೋವಿನಲ್ಲೇ ಬೈಗು ಬೆಳಗುಗಳ ಕಳೆದಿತ್ತು
ಬೊಗಸೆಯಷ್ಟು ಒಲವಿಗಾಗಿ
ಹಪಹಪಿಸಿ ಕಣ್ಣೀರು ಸುರಿಸಿತ್ತು!
ಕಟ್ಟಿದ್ದ ಕನಸುಗಳು ಕರಗಿತ್ತು
ನೋವಿನ ಸ್ಪರ್ಶಕೆ ನಲುಗಿ ಹೋಗಿತ್ತು
ಹೂವಿನ ಮೇಲಿನ ಮೋಹದ.
ಮಾಯದ ಪ್ರೀತಿ ಮಾಯವಾಗಿತ್ತು
ಹೃದಯದ ಅರಮನೆಯಿಂದ ಹೂ
ಬಯಲಿನ ಬೇಲಿ ಸೇರಿತ್ತು!
ಕೋಪ, ಸಿಟ್ಟು ಸೆಡವಿಗೆ
ಮಧುರ ಭಾವನೆಗಳು ಸತ್ತಿತ್ತು
ಬೀಸಿ ಬಂದ ಬೇಸರದ ಬಿರುಗಾಳಿಗೆ
ಹೂವಂತ ಮನಸು ಬೆಚ್ಚಿ ಚೀರಿತ್ತು!

ಹೂವಿನ ಒಲವಿಗೆ ಮನಸು
ಮರುಗಲಿಲ್ಲ ಕರಗಲಿಲ್ಲ!
ನಲಿವು ಕಾಣದೆ ನೋವಿನಿಂದ
ಹೂ ಬಾಡಿ ಹೋಗಿತ್ತು
ಕೈಯಿಂದ ಜಾರಿ ಹೋಗಿತ್ತು
ಕಾಲ ಸರಿದಂತೆ ಹೂವಿನ ಒಲವ
ಅರಿತು ಮನಸು ಹಂಬಲಿಸಿತ್ತು
ಹೂ ಒಲವ ತೊರೆದು
ಬಲು ದೂರ ಸಾಗಿತ್ತು!
4. ಜೋಳಿಗೆ!
ಬೆನ್ನಿಗೆ ಅಂಟಿಕೊಂಡ
ಅರೆಹೊಟ್ಟೆಯ ಹೊತ್ತು
ಸುಡುವ ಬಿಸಿಲು, ಕೊರೆವ ಚಳಿ
ಮಳೆಯಲ್ಲಿ ಮೈಯೊಡ್ಡಿ
ಉಣದೆ ಕೂಡಿಟ್ಟ ಕಾಳುಗಳ ಬಿತ್ತಿ
ಹರಿದ ಜೋಳಿಗೆ ಹಿಡಿದು ಕೂತ
ಬಿತ್ತಿದ್ದು ಅಂಕುರಿಸಿ ಹಸಿರಾಗಿ ಚಿಗುರೊಡೆದು
ನಕ್ಕಾಗ ಮನದಲ್ಲಿ ನೆಮ್ಮದಿಯ ನಗು
ಬೆಳೆದು ಕೈಗೆಟುಕಿದಷ್ಟನ್ನೇ ಹಸನುಗೊಳಿಸಿ
ಮಾಡಿದ್ದ ಸಾಲಕ್ಕೆ ಒಪ್ಪಿಸಿ
ಸುಡುವ ಬೆಂಕಿಯಂತಹ ಹಸಿವೆಗೆ
ಕಣ್ಣೀರು ಸುರಿದು ಹೊಟ್ಟೆಗೆ ತಣ್ಣೀರಿನ
ಬಟ್ಡೆ ಹಾಕಿ ಬಾರದ ನಿದಿರೆಗಾಗಿ ಕಾಯ್ದ
ಕತ್ತಲು ಕಳೆಯಲೇ ಇಲ್ಲ
ಹೊಂಬೆಳಕು ಮೂಡಲೇ ಇಲ್ಲ
ಬದುಕಿನುದ್ದಕ್ಕೂ ಬೆಳಕಿನ ಹಸಿವಿನ
ನರಳಾಟ ನಿಲ್ಲಲೇ ಇಲ್ಲ!

ಬಂದ ಖಾಯಿಲೆಗೆ ಮದ್ದಿಲ್ಲದೆ
ಕೊಡಲು ಕೈಯಲ್ಲಿ ಬಿಡುಗಾಸು
ಇಲ್ಲದೆ ನರಳಿ ನರಳಿ ಉಸಿರು
ಬಿಡುವುದ ಸುತ್ತಲೂ ನೋಡುತ್ತಲೇ
ನಿಂತಿದ್ದರು ನಗರದಲ್ಲಿ ಕಲಿತ ನಾಗರೀಕರು.
ಸೊಗದ ಸೋಗಿನಲ್ಲಿ ತೂಗಾಡುತ್ತಿರುವ
ಅಧುನಿಕ ನಾಗರೀಕರಾದ ನಾವು
ಹಸಿವೆಂದು ಬೊಗಸೆ ಹಿಡಿದು ನಿಂತರೂ
ಲೆಕ್ಕಿಸದೆ ಮೂದಲಿಸಿ ಸಾಗುವ
ನಾವು ತಿನ್ನುತ್ತಿರುವ ಮುಷ್ಟಿ ಅಗಳು
ಅವರಿಟ್ಟ ಬಿಕ್ಷೆ ಎಂಬುದ ಮರತೆ ಬಿಟ್ಟಿದ್ದೇವೆ.
ಕೈಲಿದ್ದ ಅನ್ನವನ್ನು ಎಸೆದು
ಅದಕ್ಕಾಗಿ ಕಾಯ್ದು ನಿಂತವರತ್ತ
ಅಹಂನ ನಗು ಬೀರುತ್ತಾ ಮೈಮನದಲ್ಲಿ
ತುಂಬಿರುವ ಕೊಬ್ಬನ್ನು ಕರಗಿಸಲು
ಜಿಮ್ಮ್, ಯೋಗ, ವ್ಯಾಯಾಮವೆಂದು
ವ್ಯಾಧಿಯ ಬಾದೆಯ ತಾಳಲಾರದೆ
ದುಡ್ಡು ಸುರಿಯುತ್ತಿದ್ದೇವೆ!
ಹೊಟ್ಟೆಯ ಜೋಳಿಗೆಯ ತುಂಬಿಸಲು
ಮತ್ತದೇ ಮಳೆ ಗಾಳಿ ಬಿಸಿಲು ಲೆಕ್ಕಿಸದೆ
ಸರತಿಯ ಸಾಲಿನಲ್ಲಿ ನಿಂದು ತಂದ
ಅಕ್ಕಿ ಮುಗ್ಗು ವಾಸನೆ!
ಬೊಗಸೆಯಲ್ಲಿ ಹಿಡಿದ ಅಕ್ಕಿಯಲ್ಲಿ
ತುಂಬಿರುವ ಕಲ್ಲು ಮಣ್ಣು
ಕಪ್ಪು ಬೆಳಕಿನ ಹುಳುಗಳನ್ನು
ತೆಗೆದು ತೊಳೆದು
ಉಪ್ಪು ನೀರು ಸುರಿದು ಬೇಯಿಸಿ ತಿಂದರೆ
ಆ ದಿನ ಗುಡಿಸಲಲ್ಲಿ ಪರ್ವದ ಸಂಭ್ರಮ!
5. ಬಲೂನ್
ಅಂಗೈಲಿದ್ದ ಬಲೂನ್ ಗೆ ನನ್ನುಸಿರು
ತುಂಬಿ ದಾರ ಬಿಗಿದು ಗಾಳಿಗೆ ತೂರಿ ಬಿಟ್ಟೆ
ನೀಲಿ ಆಗಸದಲ್ಲಿ ತೇಲಿ ಹೋಯಿತು.
ಕಟ್ಟಿದ್ದ ಸೂತ್ರ ನನ್ನ ಬೆರಳುಗಳ
ಹಿಡಿತದಲ್ಲೇ ಇತ್ತು.
ಹಾರಿ ಹೋದ ಬಲೂನ್ ನ್ನು ಹಿಡಿತಕ್ಕೆ
ತೆಗೆದುಕೊಳ್ಳಲು ಕೈ ಚಾಚುತ್ತಲೇ ಇದ್ದೆ
ಅದು ಹೋದ ಹಾದಿಯಲ್ಲಾ ಸವೆಸಿದೆ
ಪಾದದಲ್ಲಿ ರಕ್ತ ಜಿನುಗುತ್ತಿದ್ದರೂ
ಕಲ್ಲು ಮುಳ್ಳು ಲೆಕ್ಕಿಸದೆ ಹೆಜ್ಜೆ ಹಾಕಿದೆ
ಆದರೆ ಹಿಡಿತಕ್ಕೆ ಸಿಗಲೇ ಇಲ್ಲ!

ಕೈಲಿದ್ದ ದಾರವನ್ನು ಮತ್ತಷ್ಟು
ಬಿಗಿಗೊಳಿಸಿ ಆಗಸದತ್ತ ಮುಖಮಾಡಿ ನಿಂತೆ
ಗಾಳಿಗೆ ಎದ್ದ ಧೂಳು ಮುಖಕ್ಕೆ ರಾಚಿತು
ಕಣ್ಣಿನೊಳಗೆ ಧೂಳು ತೂರಿ ಹೋಗಿ
ಬೆಳಕಿನಲ್ಲೂ ಮಬ್ಬು ಮಬ್ಬಾದ ಕತ್ತಲು!
ಹಿಡಿದ ದಾರವನ್ನು ಕೊಂಚ ಸಡಿಲಿಸಿದೆ
ನನ್ನ ಮುಷ್ಟಿಯಿಂದ ಜಾರಿ ಗಾಳಿಯಲ್ಲಿ
ಕರಗಿ ಹೋಯಿತು.
ಆಗಸಕ್ಕೆ ಮುಖ ಮಾಡಿ
ಕಣ್ಣಲ್ಲಿ ಕಣ್ಣಿಟ್ಟು ಗಾಳಿಯಲ್ಲಿ ಹಾರುವುದನ್ನೇ
ಕಣ್ತುಂಬಿಕೊಳ್ಳುತ್ತಿದ್ದೆ.
ಬೀಸಿದ ಬಿರುಸಾದ ಗಾಳಿಗೆ
ಮರದ ಕೊಂಬೆಗೆ ದಾರ ಗಂಟು ಕಟ್ಟಿಕೊಂಡಿತು
ಬಿಡಿಸಿಕೊಳ್ಳಲು ಹೊಯ್ದಾಡುತ್ತಿತ್ತು
ದಿಟ್ಟಿಸುತ್ತಿದ್ದ ನನ್ನ ಕಣ್ಣುಗಳು ಹನಿಗೂಡಿದವು
ಬಿರುಬಿಸಿಲಿಗೋ!? ಉಸಿರುಗಟ್ಟಿ ತುಂಬಿಸಿದ್ದ ನನ್ನದೇ
ಉಸಿರನ್ನು ಕಳೆದುಕೊಳ್ಳುತ್ತೇನೆಂಬ ಭೀತಿಯೋ!
ಪಾದಕ್ಕೆ ಮುಳ್ಳು ಚುಚ್ಚಿದಂತಾಗಿ
ನೆಲದತ್ತ ಕಣ್ಣಾಯಿಸಿದೆ ನಾನು
ಮೈಮರೆತ ಅರೆಕ್ಷಣದಲ್ಲಿ ಬಲೂನ್ ಹೊಡೆದು
ನನ್ನುಸಿರು ಗಾಳಿಯಲ್ಲಿ ಲೀನವಾಯಿತು.
ನಿಂತಲ್ಲೇ ಕುಸಿದು ಕುಳಿತೆ!
6. ಕಾಲ!
ಕಾಲನ ಮಾಯಾಜಾಲ
ಜಗದಗಲಕೂ ಹಾಸಿದೆ
ಕಲ್ಪಿತ ಕಾಲನ ಸುಳಿಯೊಳಗೆ
ಹುಟ್ಟಿ ಸತ್ತು ಹುಚ್ಚು ಭ್ರಮೆಯೊಳಗೆ
ಬಯಕೆಗಳ ಬೆನ್ನತ್ತಿ ಮಾಗಿ ಬಾಗಿ
ಮಣ್ಣಲ್ಲಿ ಮಣ್ಣಾಗುವರೆಗೂ ಬಿಡದು
ಮನಸಿನ ಹೊಯ್ದಾಟ!

ಕಾಲುಗಳಿಗೆ ಕಾಲನ ಹಿಂದೆ
ಓಡುವ ಧಾವಂತ
ಮತ್ತ್ಯಾವುದೋ ಬೆಳಕು ಹರಸುತಾ!
ಭೂತದ ಛಾಯೆ, ಭವಿಷ್ಯದ ಬಿಂಬ
ವರ್ತಮಾನದ ಖುಷಿಯ ಮರೆಸುತಿಹುದು!
ಕಾಲನ ನೆರಳೊಟ್ಟಿಗೆ
ಎತ್ತ ಎತ್ತಲೋ ಸಾಗುತಿದೆ
ಮುಗಿಲೆತ್ತರಕ್ಕೆ ಹಾರುತಿಹ
ಹಕ್ಕಿಗಳ ಸಮೂಹವ ಬೆನ್ನತ್ತಿ
ಹೊರಟಂತಿದೆ ಬಿಂಬಗಳ ಮೆರವಣಿಗೆ
ಅದ್ಯಾವುದೋ ಅಸ್ಪಷ್ಟ ಪ್ರತಿರೂಪದ
ಹೆಜ್ಜೆಗೆ ಹೆಜ್ಜೆಯಿಟ್ಟು ಜೊತೆಯಾಗುವಂತಿದೆ!
8. ನೀರವತೆ!
ಸದಾ ಮಂದಹಾಸ ಬೀರುವ
ಮೊಗದ ಹಿಂದೆ ಕಲ್ಪನೆಗೂ
ನಿಲುಕದಷ್ಟು ನೋವು ಅಡಗಿದೆ!
ದುಗುಡವ ಮರೆಮಾಚಿ
ಸಂತಸದಿ ಕುಣಿವ
ಮನದಲ್ಲೂ ಸುಡುತಿದೆ
ನೋವಿನ ತಾಪ
ಕೇಳುವವರಿಲ್ಲ ಪರಿತಾಪ!
ಮನದ ಕಡಲಲಿ
ನೋವಿನ ಅಲೆಯೆದ್ದಿದೆ
ಕಣ್ಣಲಿ ಕಂಬನಿ ಸುರಿಯುತಿದೆ
ಕವಿದ ಕತ್ತಲಲ್ಲೂ
ಕಣ್ಣುಗಳು ಬೆಳಕಿಗಾಗಿ
ಹುಡುಕುತ್ತಾ ದಾರಿ
ಕಾಣದೆ ಅಲೆದಾಡಿದೆ!

ಮನದಲಿ ಹೊತ್ತಿ ಉರಿಯುತಿಹ
ನೋವಿಗೆ ಕನಸುಗಳು ಕರಗಿ
ಮನಸು ಶಿಲೆಯಾಗಿದೆ!
ಭಾವನೆಗಳು ಬತ್ತಿ ಬರಿದಾಗಿದೆ
ಮನಸು ಚಿಂತೆಯ ಚಿತೆಗೆ
ಸಿಲುಕಿ ಅಂಬರಕೆ
ಮುಖ ಮಾಡಿ ನಿಂದಿದೆ!
ಕಾಲ ಉರುಳಿದಂತೆ
ಸರಿದ ಸಂಬಂಧದ ಸೆಳೆತವಿಲ್ಲ
ಜೊತೆಯಾದ ನೋವಿಗೆ ಬೇಸರವಿಲ್ಲ
ಕವಿದ ಕತ್ತಲೆ ಕರಗಿಲ್ಲ
ಬದುಕಲಿ ಮತ್ತೆ ಬೆಳದಿಂಗಳ
ಬಾಂಧವ್ಯದ ಬಲೆಯೊಳಗೆ
ಬಂಧಿಯಾಗುವ ಬಯಕೆ ಉಳಿದಿಲ್ಲ
ಎಲ್ಲೆಲ್ಲೂ ನಿಶ್ಯಬ್ಧ ನೀರವತೆ!
0 ಪ್ರತಿಕ್ರಿಯೆಗಳು