‘ಕವಿತೆ ಬಂಚ್‌’ನಲ್ಲಿ ರೇಶ್ಮಾ ಭಟ್

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ರೇಶ್ಮಾ ಭಟ್
ರೇಶ್ಮಾ ಭಟ್ ಉಪನ್ಯಾಸಕಿ. ಪತ್ರಿಕೆಗಳಲ್ಲಿ ಕಥೆ, ಕವನ, ಲಲಿತಪ್ರಬಂಧ, ಮಕ್ಕಳ ಪದ್ಯಗಳು, ಅಂಕಣ ಬರಹಗಳು ಪ್ರಕಟವಾಗಿವೆ. ಇವರ ಮೂರು ಕಥೆಗಳಿಗೆ ತುಷಾರ ಹಾಗೂ ಉತ್ಥಾನ ಪತ್ರಿಕೆಗಳು  ನಡೆಸಿದ ಸ್ಪರ್ಧೆಗಳಲ್ಲಿ ಬಹುಮಾನಗಳು ಬಂದಿವೆ. ‘ನವೆ ನವೋನ್ಮೇಷಶಾಲಿನೀ’ ಎಂಬ ಲಲಿತಪ್ರಬಂಧ ಸಂಕಲನ ಹಾಗೂ ‘ಕಥಾ ವ್ಯವಕಲನ’ ಎನ್ನುವ  ಕಥಾಸಂಕಲನ  ಪ್ರಕಟವಾಗಿವೆ.

‘ನವೆನವೋನ್ಮೇಷಶಾಲಿನೀ’ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ  ಪ್ರಶಸ್ತಿ, ಗುರುಕುಲ ಪುಸ್ತಕ ಪ್ರಶಸ್ತಿ ಬಂದಿವೆ. ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ರಾಜ್ಯಮಟ್ಟದ ಅಡ್ವೈಸರ್ ಸಾಹಿತ್ಯ ಪ್ರಶಸ್ತಿ, ಲೇಖಿಕಾ ಸಾಹಿತ್ಯ ವೇದಿಕೆ ಪುಸ್ತಕ ಪ್ರಶಸ್ತಿ ಸಂದಿವೆ.  ಚಿಂತನಬಯಲು ತ್ರೈಮಾಸಿಕ ಪತ್ರಿಕೆಯ ಸಂಪಾದಕಿ. ಆಕಾಶವಾಣಿ ಕಲಾವಿದೆ. ಗಮಕಿ.

1. ಮೊಹರನೊತ್ತಿ ಹೋಗಿಬಿಡು

ಕಡಲು ಭೋರ್ಗರೆಯಲಿ ಅಲ್ಲಿ
ಅದರೆದುರೇ ನಿಂತಿರುವೆ
ನೀ ಬಂದು ಇಳಿಹೊತ್ತಿನಲಿ
ಮುತ್ತನೊತ್ತಿ ಹೋಗಿಬಿಡು
ಮುತ್ತನೊತ್ತಿ ಹೋಗಿಬಿಡು||

ಸೂರ್ಯನಿಲ್ಲದಾಗಸವು
ಚಂದ್ರನಿಲ್ಲದಾಯಿಳೆಯು
ಆದರೂ ನಿನ್ನ ಬರವ
ಗುರುತಿಸಲು ಬಲ್ಲೆನು|
ಹೊತ್ತನತ್ತ ತಳ್ಳಿ ನೀನು
ಮುತ್ತನೊತ್ತೆ ಬಂದುಬಿಡು
ಮುತ್ತನೊತ್ತಿ ಹೋಗಿಬಿಡು||

ನೀರೆಷ್ಟೇ ದೂರದಲಿದ್ದರು
ನೀರಧಿಯೆಡೆ ಹರಿವಂತೆ
ನಿನ್ನ ಒಂದು ಸ್ಪರ್ಶಕಾಗಿ
ಕಾದಿಹೆ ನೀರಧಿಯಂತೆ
ಕಾಯುತಿರುವ ಈ ಕಾಯಕಕೆ
ಮುತ್ತನೊಂದನೊತ್ತಿಬಿಡು
ಮುತ್ತನೊತ್ತಿ ಹೋಗಿಬಿಡು||

ದಿಟ್ಟಿಸುತಿಹ ಕಂಗಳ ನಡುವೆಯೇ
ನನ್ನ ಪುಟ್ಟ ಲೋಕವಿದೆ
ನುಸುಳಿ ಬಂದು ಕರಗಿಸಿ ನನ್ನ
ಮುತ್ತನೊತ್ತಿ ಹೋಗಿಬಿಡು|
ಆ ನೆನಪಲೆ ಕರಗುತಲಿರುವೆ
ಮತ್ತೆ ನೀನು ಬರುವನಕ
ಮುತ್ತನೊತ್ತಿ ಹೋಗಿಬಿಡು||

ಹೆಣವೊಂದು ಮಲಗಿದೆ ಇಲ್ಲಿ
ಹೆಣಗಾಡಿ ಜೀವನದಲ್ಲಿ
ಈ ಹೆಣವು ನಿನಗಲ್ಲದೆ
ಬೇರಾರಿಗೂ ಕಾದಿಲ್ಲವೆಂದು
ಹಣೆಯ ಮೇಲೆ ಮೆತ್ತಗೊಂದು
ಮೊಹರನೊತ್ತಿ ಹೋಗಿಬಿಡು
ಮೊಹರನೊತ್ತಿ ಹೋಗಿಬಿಡು||

2. ಅಲ್ಪಗಾನದ ಲಹರಿ

ಜೀವನವೆಂಬ ನಾಟಕದ ನಡುವಿನಲಿ
ಮೂಡಿಬರುತಿದೆ ಒಂದು ಗಾನ ಲಹರಿ
ಈ ಅಲ್ಪಗಾನದಲಿ ತೆರೆದಿಡುವೆ ನನ್ನ ಬಗೆ
ಇದ ಒಪ್ಪಿರುವೆ ನೀನೆಂದು ಬಗೆವೆ||

ನಾನಳಿದ ಮೇಲೂ ಉಳಿಯುವುದು ಈ ಗಾನ
ನಿನ್ನ ಹೃದಯದ ಮೂಲೆ ಕೋಣೆಯಲ್ಲಿ
ನೀ ಮೊದಲು ಅಳಿದರೂ ಉಳಿಯುವುದು ಈ ಕವನ
ನನ್ನೆದೆಯ ಜೀವಕೋಶಗಳಲಿ||

ದೀಪವಿಲ್ಲದ ಮನೆಯಲೇನಿದ್ದು ಫಲವೇನು?
ಕತ್ತಲಲಿ ತೊಡರುವುದು ವಿಷಯ ವಸ್ತುಗಳು
ನೀ ಬಂದು ನನ್ನೆದೆಯ ಒಳಗೆ ಹಚ್ಚಿದ ಹಣತೆ
ತೋರಿಸಿತು ಹೊಸ ನವ್ಯ ಲೋಕವನ್ನು||

ಮನೆ ತೆರೆದಿದೆ ಬಾ ಎಂದು ನಾನು ಕರೆಯಲೆ ಇಲ್ಲ
ನೀನಾಗಿ ಒಳಬಂದು ನಿಂತೆಯಲ್ಲ!
ನೀ ಬಂದ ಮೇಲಷ್ಟೆ ಸಂಜೆ ಮಲ್ಲಿಗೆ ಬಿರಿದು
ಮನದ ತುಂಬೆಲ್ಲದರ ಕಂಪ ಪದರು||

ಲಾಟೀನ ಮಿಣುಕು ಬಂಡಿ ಕುಲುಕುಲುಕಿ ಗೆಜ್ಜೆಗಳ
ಅಲೆದಿತ್ತು ಊರನಡು ಬೀದಿ ತುಂಬ
ಎಲ್ಲಿಯೂ ನಿಲ್ಲದ ಗೆಜ್ಜೆದನಿ ಸಡಗರವು
ನಿಂತುಬಿಟ್ಟಿತು ಕಂಡು ದಿವ್ಯಬಿಂಬ||

ಮಲ್ಲಿಗೆಯ ಗಿಡದಲ್ಲಿ ಅಂದು ಹೂವಿನ ರಾಶಿ
ನೀನೆತ್ತಿಕೊಂಡೆ ಅದರಲೊಂದು
ನೀನೆತ್ತಿಕೊಂಡ ಮಲ್ಲಿಗೆಯೆ ನಾನಿಂದು
ಕಾರಣವ ಕೇಳೆನು ನಿನ್ನನೆಂದು||

ಎಲ್ಲಿಯದೊ ಕೊರಳು ಎಲ್ಲಿಯದೊ ಕವಿತೆ
ಸೇರಿ ಸುಂದರ ಭಾವಗೀತೆಯಂತೆ
ತುಂಬು ಬೆಳುದಿಂಗಳಲಿ ಹಾಡಿಕೊಂಡರೆ ಇದನು
ಗಾಳಿ ತುಂಬೆಲ್ಲ ಭಾವನಾದದೊರತೆ||

ನನ್ನ ದನಿ ತಾರ ನಿನ್ನದೋ ಮಂದ್ರ
ಮೌನಶೃತಿಯಲಿ ಸೇರಿತೊಮ್ಮೆ ಹೃದಯ
ನಿನ್ನೂರು ಅಲ್ಲಿ ನನ್ನೂರು ಇಲ್ಲಿ
ತಂಗಿದ್ದು ಹೋಗಲು ಅಲ್ಲಿ ಮತ್ತೊಮ್ಮೆ ಇಲ್ಲಿ||

ಕುಲಗೋತ್ರ ಭಾಷೆಗಳ ಮೀರಿ ಬೆಳೆದಾ ಭಾವ
ಗಂಗೆ ಕಾವೇರಿಗಳ ಹರಿವು ಒಂದೆಯೇನು?
ಕತ್ತೆತ್ತಿ ನೋಡಿದರೆ ಚಂದಿರನು ಕಾಣುವನು
ನಿಮ್ಮೂರ ಬಾನಿನಲು ಇರುವನೇನು?

ನಡೆವ ಸಂಭ್ರಮದಲ್ಲಿ ಕೈಗೆ ಕೈ ಕೂಡಿರಲಿ
ಕಡು ಸುಡುವ ನೆಲದ ಧಗೆ ಮರೆಸುತಿರಲಿ
ಎತ್ತರೆತ್ತರ ಹತ್ತಿ ಬೆಟ್ಟದೊಡೆಯನ ಮುಟ್ಟಿ
ಅಲ್ಲೊಂದು ನಿಲುಗಡೆಯು ನಮಗೆ ಇರಲಿ||

ಗಾಳಿಯಲಿ ಬರೆಯದಿರು ನಿನ್ನ ಹೃದಯದ ಹಾಡು
ತಿಳಿಯದೆಯೆ ಉಳಿಯುವುದು ನೀರಿನಾಳ
ನನ್ನಂತೆಯೇ ನೀನು ಭಾವ ಪರವಶನಾಗಿ
ತೆರೆದುಬಿಡು ನಿನ್ನೆದೆಯ ಕನಸಿನಾಳ||

ನೀ ನಡೆವ ದಿಕ್ಕಿಗೇ ನನ್ನ ಹೆಜ್ಜೆಯು ಇರಲಿ
ತೆಪ್ಪದಲಿ ದಾಟೋಣ ತುಂಬು ಹೊಳೆಯ
ನಿನ್ನ ಕೈಯಲು ಹುಟ್ಟು ನನ್ನ ಕೈಯಲು ಹುಟ್ಟು
ತೆಪ್ಪ ಮುಳುಗುವ ಭೀತಿ ದೂರ ಅಟ್ಟು||

ತುಂಬುಹೊಳೆಯಲಿ ಮಿಂದೇಳುತಿರುವಾ ನೀನು
ವಾಸ್ತವದ ಕಡಲನ್ನು ಬಲ್ಲೆಯೇನು?
ಎಂದ ನಿನ್ನಯ ಮಾತು ನನ್ನ ಮನಕೂ ಗೊತ್ತು
ಕಳ್ಳಿ ಮುಳ್ಳಲು ಇಹುದು ಸಣ್ಣ ಹೂವ ನತ್ತು||

ಹಗಲು ರಾತ್ರಿಗಳ ಉರುಳು ಚಕ್ರದಲಿ
ಅರಳಿದ ಈ ಭಾವ ಭ್ರಾಂತಿಯಲ್ಲ
ಸುಡುವ ನೆಲವಾದರೂ ಪಾದವಿರಿಸಲೇಬೇಕು
ಉಸಿರಿರುವತನಕವೀ ಪಯಣ ಮುಗಿಯದಲ್ಲ||

3. ಸ್ಥಗಿತ ಚಲಿತಗಳ ನಡುವೆ

ನೀಲಾಕಾಶವು ಚಿರಸ್ಥಗಿತ
ಬಿಳಿಮೋಡವದೋ ಚರಚಲಿತ
ಶಿಲೆಗಲ್ಲದು ನಿಶ್ಚಲಸ್ಥಗಿತ
ಜಲಧಿಯು ಚಲಿತ
ಜಲಧಿಯ ಜಲಚಲಿತಾ||

ಕಾಂಡದಿ ಹೆಮ್ಮರ ಸ್ಥಗಿತ
ಎಲೆಬಳ್ಳಿಗಳೋ ಚಲಚಲಿತ
ಕಾಲವು ಸ್ಥಾವರಸ್ಥಗಿತ
ಜೀವನ ಚಲಿತ
ಜೀವನ ನಿರಂತಚಲಿತಾ||

ಬುವಿಯದು ಸುಸ್ಥಿರಗಮಿತ
ದಿವನದು ಸ್ತಬ್ಧಿತಕುದಿತ
ಮಾತಿದು ಚಲಿತ
ಮೌನ ಸ್ಥಿಮಿತ
ಮೌನ ನಿರಂತರ ಸ್ಥಿಮಿತಾ||

ಬೆಳಕೋ ಕ್ಷಿಪ್ರಚಲಚಲಿತ
ಕತ್ತಲು ಗಾಢಘನಘನಿತ
ಗಿರಿಯದು ಸ್ಥಗಿತ
ಹಕ್ಕಿಯ ಜಿಗಿತ
ಹಕ್ಕಿಯ ದಿಗಂತಜಿಗಿತಾ||

ಪಥವದು ಚಲನದಿಸ್ಥಗಿತ
ಪಥಿಕಗೆ ಪಯಣವುನಿಶ್ಚಿತ
ಸಾವು ಅಂತಃಸ್ಥಗಿತ
ಜೀವವು ಅನಂತ ಚಲಿತ
ಜೀವದ ಅನಂತ ಚಲಿತ||

ಸ್ಥಿರವು ತೋರುವುದು ಚಲನದಲಿ
ಚಲನವೋ ಅದು ಸ್ಥಿರದಲ್ಲಿ
ಸ್ಥಿರ ಚಲನೆಗಳ ಗತಿಯಲ್ಲಿ
ವಿಶ್ವವು ಸುಷುಪ್ತನಿದ್ರಿತ
ಕನಸೋ ಚರಚಲಿತಾ
ಕನಸೋ ಜಾಗೃತ ಚಿರಚಲಿತಾ||
ಚಿರ ಚಲಿತಾ|
ಘನ ಸ್ಥಗಿತಾ

4. ಇಬ್ಬಂದಿ

ಹೆಣ ಪೆಟ್ಟಿಗೆಯ ಬಾಗಿಲಿಗೆ ಸಿಕ್ಕಿ
ಎರಡಾಗಿ ಬಿದ್ದಿದೆ ಹಲ್ಲಿ
ಹೊರಬಿದ್ದ ಬಾಲವೋ
ನೆಗೆನೆಗೆದು ಹಾರುತಿದೆ ಇಲ್ಲಿ||

ಪೆಟ್ಟಿಗೆಯೊಳಗಿನ ಆರಾರು ಮೂಲೆಗಳಲಿ
ಅಡರಿದ ಕತ್ತಲೆಯೊಳಗೆ ಇಡಿಕಿರಿದ ಗಂಧ
ಒಳಬಿದ್ದ ಮೂಲೆಯಲಿ ಮೊಳೆಯ ಏಟಿಗೆ ಬೆದರಿ
ಅಪ್ಪಿ ಕುಳಿತಿದೆ ಹಲ್ಲಿ ಸತ್ತ ಮರದ ಗೋಡೆಯನು||

ಹಿಕ್ಕೆ ಹಾಕಲು ಪಕ್ಕೆ ಒತ್ತಿದರೆ ಹೊರಬಾರದು
ಹೊಸವಸನದ ಮೇಲೊಂದು ಹಸಿ ಇರುವೆಯ ಕಂಡು
ಹಾರಲಾರದೆ ಅಲ್ಲಿಂದಲೇ ನಾಲಗೆಯ ಚಾಚಿ
ಕುಸಿದಿದೆ ಮೊಳೆಮೂಲೆಯಿಂದ ಕೆಳಮೂಲೆಗೆ||

ಹೊರಬಿದ್ದ ತುಂಡಿನಲಿ ಸತ್ತು ಹೋಗಿದೆ ಕೋಶ
ಅಗಾಧ ಬಯಲಿನ ಅನಂತ ಅವಕಾಶದ ಕೆಳಗಿನ
ಈ ಆಟಗಳೆಲ್ಲ ಮುಗಿಯುವುದು ಹೀಗೆಯೇ
ಹಾರಾಡುತ ನೆಗೆದಾಡುತಲಿರುವಾಗಲೇ||

ಮತ್ತೆ ಒಳಗೊಂದು ಕಪ್ಪಿರುವೆ ಬಿಳಿ ವಸನದ ನಡುವೆ
ನಾಲಗೆಯ ಚಾಚುತಲಿ ಮೆಲ್ಲನೆ ಸೆಳೆದುಕೊಳುವಾತುರವೆ
ಮೊಳೆಗಳ ನಡುವೆ ಮೊಳೆಯಬೇಕಾದರೆ ಮತ್ತೆ
ಮರಳಲೇಬೇಕು ಇಂಥಾ ಹಾರುವ ನೆಗೆಯುವ ಆಟಕ್ಕೆ||

5. ನನ್ನೊಳಗಿನ ಭಾಷ್ಯ

ನಾನು ಮಾಡುವ ಕೆಲಸಗಳು
ನನಗೇ ಲೇಸೆನಿಸುವುದಿಲ್ಲ
ನನ್ನೊಳಗೂ ಒಂದು ಮೋಸದಾಟವಿದೆ|

ನಾನು ನಗುವಾಗ ಅದು
ಹೃದಯದಿಂದ ಬಂದಿರುವುದಿಲ್ಲ
ನನ್ನೊಳಗೂ ಕೆಲವು ಆಗ್ರಹಗಳಿವೆ|

ನಾನು ಮಾಡುವ ಅಡುಗೆ
ರುಚಿಯೆನಿಸುವುದಿಲ್ಲ
ನನ್ನೊಳಗೂ ಒಂದು ರುಚಿಯಿದೆ|

ನಾನು ಹಾಡುವ ಹಾಡು
ಶ್ರುತಿಬದ್ಧವಾಗಿರುವುದಿಲ್ಲ
ನನ್ನೊಳಗೂ ಒಂದು ಶ್ರುತಿಯಿದೆ|

ನಾನು ಕೊಡುವ ತೀರ್ಮಾನಗಳು
ಸರಿಯಿರುವುದೇ ಇಲ್ಲ ಏಕೆಂದರೆ
ನನ್ನೊಳಗೂ ಒಂದು ತೀರ್ಪಿದೆ|

ಈಗ ಹೇಳು ನಾನು ನಿನ್ನನ್ನು
ಪ್ರೀತಿಸಿಲ್ಲ ಎಂದಾದರೆ ನನ್ನೊಳಗೂ
ಪ್ರೀತಿಯ ಭಾಷ್ಯವೊಂದು ಇರಬಹುದಲ್ಲ?

6. ಬೆರಳುಗಳೊಂದಿಗೆ ಸುಖದುಃಖ

ಪ್ರೀತಿಯಿಂದ ಕಾಲನ್ನೊಮ್ಮೆ ನೇವರಿಸಿದೆ.
ಬೆರಳುಗಳನ್ನೊಮ್ಮೆ ನೀವಿದೆ.
ಬೆರಳುಗಳ ಬುಡದಲ್ಲಿ ಅವಿತಿದ್ದ ನೋವೊಂದು ಚುಳ್ ಎಂದಿತು.
ಎಲ್ಲರಂತೆ ನಾನೂ ಏನೇನೋ ಸಾಧಿಸುವ ಭ್ರಮೆಯಲ್ಲಿ
ಎಡತಾಕಿ… ಮೆಟ್ಟಲುಗಳಿಗೆ ಎಡವಿ ರಕ್ತ ಸುರಿದಾಗ…
‘ನೋಡು ಇದು ನಿನಗೆ ಹೊಂದಿಕೆಯಾಗದ ತಾಣ
ಇಲ್ಲಿದ್ದಷ್ಟು ಸಮಯ ಎಡವುತಲೇ ಇರಬೇಕು…
ಹೊರಟುಬಿಡು ಇಲ್ಲಿಂದ’ ಎಂದಿದ್ದೆ.
ಉಷಾ ಓಡಿದಷ್ಟಲ್ಲ ಅವಳಿಗಿಂತ ಹತ್ತು ಪಟ್ಟು ಕಡಿಮೆ ವೇಗದಲ್ಲಿ
ಪದಕದ ಹಂಬಲಕ್ಕಲ್ಲದಿದ್ದರೂ
ಕನಿಷ್ಠ ಪದವಿಗಾಗಿ ಓಡಬೇಕು’ ಎಂದಿದ್ದೆ.

ಕೊನೆಗೆ ಎಲ್ಲಿಯೂ ಸಲ್ಲದೆ ಹೊರದಬ್ಬಿಸಿಕೊಂಡಾಗ
ಸೀದ ಮನೆಯ ಮಾಳಿಗೆಗೆ ಹೋಗಿ ಕೆಳಗೆ ಬಗ್ಗಿ ನೋಡಿದ್ದೆ.
ಹಾರಿ ಸಾಯಲೆಂದು ಅಲ್ಲ, ಒಣಹಾಕಿದ ಬಟ್ಟೆ ಕೆಳಬಿದ್ದಿತ್ತು.
ಕ್ಲಿಪ್‌ಗಳನ್ನು ಜಡಿದರೂ ಬಟ್ಟೆಗಳು ಪಟಪಟನೆ ಹಾರುತ್ತಿದ್ದವು
ಆಗಲೂ ನೀನು ನಕ್ಕಿದ್ದೆ.
‘ಎಲ್ಲರೂ ಧರೆಗೆ ದೊಡ್ಡವರೇ ನಾನೇನು ಮಾಡಲು ಸಾಧ್ಯ?’
ಸಂದರ್ಶನದ ದೊಡ್ಡ ಮಂಡೆಯವನ ಬಾಯಿ ಎದುರಿಗಿಟ್ಟಿದ್ದ
ದ್ರಾಕ್ಷಿ ಗೋಡಂಬಿಗಳನ್ನು ಕತ್ತರಿಸುತ್ತಾ ಅದನ್ನು
ಜೊಲ್ಲು ಸಹಿತ ಕಟವಾಯಿಗೆ ತಂದು ನಿಲಿಸಿತ್ತು.
ಪ್ರಶ್ನೆಗಳ ನಡುವೆ ಆಗಾಗ ಅದನ್ನು ಒಳಗೆಳೆದುಕೊಳ್ಳುವ
ಕೆಲಸವನ್ನೂ ನಾಲಗೆ ಮಾಡುತ್ತಿತ್ತು.
ಕ್ಲಿಪ್ಪು ಜಡಿದರೂ ಬಟ್ಟೆ ಹಾರುತ್ತದೆ ಎಂದಾದರೆ
ಬೇಸರವೇಕೆ ಓಡು ಎಷ್ಟಾಗುತ್ತದೋ ಅಷ್ಟು ಓಡು…
ನಿರ್ಧರಿಸಿಕೊಂಡು ಧಢಧಢನೆ ಮೆಟ್ಟಿಲಿಳಿದಿದ್ದೆ.
ಆ ದಿನವೂ ನಿನಗೆ ವಿಪರೀತ ಆಯಾಸವೇ ಇತ್ತಲ್ಲ.
ನೋವಿನೆಣ್ಣೆಯಿಂದ ಮೃದುವಾಗಿ ನೀವಿ
ಮತ್ತೆಯೂ ನಿಲ್ಲದ ಸೆಳೆತಕ್ಕೆ ಮಗನ ಪುಟ್ಟ ಪಾದಗಳನ್ನು
ನಿನ್ನ ಮೇಲೆ ನಿಲಿಸಿಕೊಂಡಾಗ ಹಿತವೆನಿಸಿತ್ತು.
ಅವನೆಲ್ಲಿ ನಿಲ್ಲುತ್ತಾನೆ? ದುಡುದುಡು ಓಡಿಯೇಬಿಟ್ಟ.
ಅವನಿಗೂ ಓಡುವ ಆತುರ.
ಯಜಮಾನರನ್ನು ಕರೆದು ನನ್ನ ಕಾಲು ಎಂದೆ
ಅರ್ಥವಾಗಿ ಬೆರಳ ಮೆಟ್ಟಿ ನಿಂತರು.
ಹಿತವಾಗಲಿಲ್ಲ ಬೇಡ ಸಾಕು ನೋವು ಎಂದೆ.
ನಿಜವಾಗಿಯೂ ನಿನಗೆ ನೋವಾಗಿತ್ತಲ್ಲ?
ಮತ್ತೆ ಪುನಃ ನೋವಿನೆಣ್ಣೆಯಿಂದ ನಿನ್ನನ್ನು ಸಂತೈಸಿ
ಎರಡು ಚೊಂಬು ಬಿಸಿನೀರು ಸುರಿದ ಮೇಲೆ ಶಮನವಾಗಿತ್ತು.


ದೊಡ್ಡ ಮಂಡೆಗಳನ್ನು ನೆನಪಿಸಿಕೊಂಡು
ಮಗ ಬಾಕ್ಸಿಂಗಿಗೆಂದು ನೇತಾಡಿಸಿದ್ದ ದಿಂಬಿಗೆ ಗುದ್ದಿದ್ದೆ.
ಕೈ ಬೆರಳುಗಳ ಬುಡದಲ್ಲೂ ನೋವೆದ್ದಿತ್ತು.
ಬೆರಳುಗಳಿಗೆ ಬೆರಳುಗಳದೇ ಸಾಂತ್ವಾನವೆಂದು
ಪುನಃ ನೋವಿನೆಣ್ಣೆಯ ತಂದು
ಎಡದ ಬೆರಳಿಂದ ಬಲವನ್ನೂ
ಬಲದ ಬೆರಳಿಂದ ಎಡವನ್ನೂ ನೀವುತ್ತಾ ನರಳಿದೆ.
ರೊಟ್ಟಿ ತಟ್ಟಿದ ದಿನವೂ ಹೀಗೆಯೇ
ಬೆರಳುಗಳು ಬಸವಳಿಯುತ್ತವೆ.
‘ಇದೇನು ದೊಡ್ಡ ವಿಷಯವಲ್ಲ ಈ ದೊಡ್ಡ ಜೀವನದಲ್ಲಿ.
ಅವಕಾಶ ವಂಚಿತೆ ಎಂಬ ಸ್ವಮರುಕದ ಅಗತ್ಯವೂ ಇಲ್ಲ.’
ನೀನು ಎಚ್ಚರಿಸಿದ್ದೆ. ನಿಜವಾಗಿ ನೋಡಿದರೆ ಹೌದು…
ನಾನೇನು ಕಳೆದುಕೊಂಡೆ ಎಂದು ಈ ರೀತಿ ಹಪಹಪಿಸುತ್ತಾ…
ಇಲ್ಲಿ ಎಷ್ಟೆಷ್ಟು ಕಳೆದುಕೊಂಡವರಿದ್ದಾರೆ.
ಸಮುದ್ರದ ದಂಡೆಯಲ್ಲಿ ಈಗಲೂ ಒಬ್ಬ ಮರಳನ್ನು
ಕೆದಕುತ್ತಲೇ ಇದ್ದಾನೆ
ಅವನೇನು ಹುಡುಕುತ್ತಿದ್ದಾನೋ ತಿಳಿಯದು.
ಜೊತೆಗಿರುವ ನಾಯಿಯೂ ಉಗುರಿನಿಂದ ಮರಳನ್ನು ಕೆದರುತ್ತಿದೆ.
ಅದಕ್ಕೆ ಬೇಕಾದ್ದು ಸಿಕ್ಕಿಯೇಬಿಟ್ಟಿದೆ.
ಯಾವುದೋ ಪಕ್ಷಿಯ ಮುರಿದ ರೆಕ್ಕೆ ಮರಳ ತಳದಲ್ಲಿ ಹೂತುಹೋಗಿತ್ತು.
ನಾಯಿಯ ಮೂಗು ರೆಕ್ಕೆಯ ಮಾಂಸದ ವಾಸನೆಯನ್ನು
ಗ್ರಹಿಸಿ ಬಿಟ್ಟಿತ್ತು.
ಮುರಿಯಲಾರದಂತೆ ದೇಹಕ್ಕೆ ಜೋತುಕೊಂಡಿದ್ದರೂ ಅದು ಮುರಿದದ್ದು ಹೇಗೆ?
ಮುರಿದ ಮೇಲೆ ಅದು ಹಾರುವುದು ಹೇಗೆ?
ಒಂದು ರೆಕ್ಕೆಯಿಂದ ಕೋಳಿಯಷ್ಟು ದೂರ ಹಾರಬಹುದೇನೋ.
ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಷ್ಟು ಸಾಕು.
ಅವನ ಉತ್ಖನನ ಇನ್ನೂ ಸಾಗಿಯೇ ಇದ್ದಿತು.
ಕಳೆದುಕೊಂಡ ಜಾಗ ಸರಿಯಾಗಿ ಗೊತ್ತಿದ್ದರೆ ಹುಡುಕಬಹುದು
ಹಲವಾರು ಬಾರಿ ಕಳೆದುಕೊಂಡವರಿಗೆ ಹುಡುಕಲು ಒಂದು ಸ್ಥಳ ಎಂಬುವುದಿದೆಯೇ?
‘ಸಾಕು ನಿಲ್ಲಿಸು ನೀನೆಷ್ಟೇ ಓಡಿದರೂ ಆರಂಗುಲಕ್ಕಿಂತ ಹೆಚ್ಚು ಓಡಲಾರೆ.
ಮೂರಂಗುಲಕ್ಕಿಂತ ಹೆಚ್ಚು ನಡೆಯಲಾರೆ.
ದೊಡ್ಡ ಮಂಡೆಗಳ ವಿಷಯ ಬಿಡು
ಅವರೇನು ಅದನ್ನು ಓಡಿ ಸಾಧಿಸಿದವರಲ್ಲ.
ಕಳ್ಳ ದಾರಿಯ ಹುಡುಕಿ ತೆವಳಿ ದಕ್ಕಿಸಿಕೊಂಡವರು.
ಅವರ ಕಾಲುಗಳ ವಿಷಯ ನನಗೆ ಗೊತ್ತು.
ಅದು ಒಂದು ದಿನವೂ ಬಳಲಲಿಲ್ಲ. ಬಿಸಿನೀರಿನ ಸುಖ ಕಾಣಲಿಲ್ಲ.
ಬಳಲದ ಪಾದಕ್ಕೆ ಮಗುವಿನ ಸ್ಪರ್ಶವೂ ಹಿತವಾಗದು.
ಎಣ್ಣೆ ನೀವಿದರೂ ಸುಖವೆನಿಸದು.’

7. ತಿಳಿಯದಂತೆ ನಡೆಯುವುದು

ಅವನು ಡೆಸ್ಡಿಮೋನಾಳನ್ನು ಕೊಂದಂತೆ
ನೀ ಕೊಲಲಾರೆ ನನ್ನನ್ನು
ನಿನ್ನ ಲೋಕಾಚಾರದಲಿ
ನಿನಗೊಂದು ಲೋಕಜ್ಞತೆಯಿದೆ||

ಅವನು ಅಹಲ್ಯೆಯ ಶಪಿಸಿದಂತೆ
ನೀ ಶಪಿಸಲಾರೆ ನನ್ನನ್ನು
ನಿನ್ನ ಆಸ್ಥಾನದಲ್ಲಿ
ನಿನಗೊಂದು ಸುಂದರ ಸ್ಥಾನವಿದೆ||

ಅವನು ಸೀತೆಯ ತೊರೆದಂತೆ
ನೀ ತೊರೆಯಲಾರೆ ನನ್ನನ್ನು
ನಿನ್ನ ತೂಕದ ಮಾತಿಗೆ
ಅಲ್ಲಿ ದೊಡ್ಡ ಬೆಲೆಯಿದೆ||

ಅವನು ರೇಣುಕೆಯ ಕಡಿಸಿದಂತೆ
ನೀ ಕಡಿಸಲಾರೆ ತಲೆಯನ್ನು
ನಿನ್ನ ನಿಯಮದಲ್ಲಿ
ವಿಪರೀತ ಸಂಯಮವಿದೆ||

ಆದರೆ… ದಿನದಿನವೂ ಕೊಲುವೆ
ದಿನದಿನವೂ ಶಪಿಸುವೆ
ದಿನದಿನವೂ ತೊರೆಯುವೆ
ದಿನದಿನವೂ ಚಿವುಟಿ ತೆಗೆಯುವೆ
ಚಿಗುರಿದ ತಲೆಯನ್ನು
ತಿಳಿಯದಂತೆ ಲೋಕಕ್ಕೆ
ತಿಳಿವೇ ಆಗದಂತೆ ಜಗತಿಗೆ||

‍ಲೇಖಕರು Admin

September 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ನವೋದಯದ ಶೈಲಿ , ಪ್ರಾಸ , ನವಿರು, ಭಾವತೀವ್ರತೆಯ ಕವನಗಳ ಜೊತೆಯಲ್ಲಿ ನವ್ಯರ ಬಗೆಯ ತೀರಾ ವೈಯಕ್ತಿಕ ಗೊಡವೆಯ ವಿಸ್ತರಣೆಯ ಕವನವೂ ಇಲ್ಲಿದೆ. ಎರಡೂ ವಿಧಗಳ ಕವನಗಳೂ ಚೆನ್ನಾಗಿವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: