‘ಕವಿತೆ ಬಂಚ್‌’ನಲ್ಲಿ ಮೆಹಬೂಬಿ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಮೆಹಬೂಬಿ

ನಾನು ಮೆಹಬೂಬಿ. ಕೊಪ್ಪಳ ಜಿಲ್ಲೆಯಲ್ಲಿ ಉಪ ನಿರ್ದೇಶಕಳಾಗಿ ಖಜಾನೆ ಇಲಾಖೆಯಲ್ಲಿ ಕಾರ್ಯ ನಿರ್ಹಿಸುತ್ತಿದ್ದೇನೆ. ಸಾಹಿತ್ಯ ನನ್ನ ಆಸಕ್ತಿಯ ವಿಷಯ. ‘ಬಾ ಹತ್ತರ’ ಗಝಲ್ ಹಾಗೂ ‘ಸೂರ್ಯನನ್ನು ಹೆತ್ತಿದ್ದು ನಾನು…’ ಪ್ರಕಟಿತ ಸಂಕಲನಗಳು.

1. ನೋವಷ್ಟೇ ಕಡಲೆಂದರೆ

ನಗು ಕೇವಲ ಅಲೆಯೇ..
ಕಡಲು, ಅಲೆಗಳ ಸದ್ದು
ಕೇಳಿಸಿಕೊಳ್ಳದು…

ಸದ್ದಿಗಾಗಿ ಶಬ್ದಗಳಿರಬೇಕಲ್ಲ
ಅರ್ಥವಿರದ ಎಷ್ಟೋ
ಶಬ್ದಕೋಶಗಳು ಕೈಯಲ್ಲಿ…

ಇಡುವ ಕಾಲಿಗೆ
ಹೆಜ್ಜೆ ಗುರುತಿರದಿದ್ದರೆ…
ಅರ್ಥ ಹೊತ್ತುಕೊಂಡ
ತುಟಿಗಳೆಷ್ಟೋ ಜಗದಲಿ…

ತೀರಗಳಿಗೆ ಕಡಲು
ಕಾಯುವ ಕಾಯಕ ಹೊರೆಸಲಾಗಿದೆ…
ಚೆನ್ನಾಗಿ ಗೊತ್ತವಕೆ
ಯಾರ ಎದೆಯ ಉದಾಸ ಭಾವ
ಕದ್ದು ಸಂಜೆಗಳು ಭಾರವಾಗಿವೆ..
ಎಲ್ಲವನ್ನೂ ಬಲ್ಲ ಅವು
ಉಸರಲಾರವು….
ಉಸಿರಾಡುವದನ್ನು
ನಿರ್ಬಂಧಿಸಲಾಗಿದೆ..

ಒಂಟಿಮೌನ
ಜೊತೆಯರಸಿ ಮಾತಾಗುವದು..
ಒಂದಿನ ಮಾತೆಲ್ಲ ಉದುರಿ
ಬಿದ್ದು ಮತ್ತೆ ಒಂಟಿಯಾಗೋದು
ಎಲ್ಲ ಲೆಕ್ಕಗಳಿವೆ….
ಆ ಒಂಟಿತನ ಅವಕ್ಕೆ ಕಾಡದು
ಈ ಒಂಟಿತನ ಬಿಕ್ಕಲೀಯದು…

2. ಕದಡಿದ ನೀರು..

ಅಭಿಪ್ರಾಯ
ತಳೆಯದೇ
ಕಾಲಕ್ಕಂಟಿಸಿದ
ಹೆಜ್ಜೆಗಳಿಗೆ…
ನಾ ಆ ಉಮೇದು
ದೂರುತ್ತಿದ್ದೇನೆ….
ಹೀಗೊಂದು
ಹೊದಿಕೆಗೆ ಕಾಲು
ಒರೆಸುತ್ತಿದ್ದೇನೆ….

ಗಾಳಿಗೂದಿದ
ಮಾತುಗಳ
ಭ್ರಮೆಗೆ…
ಮಾರಿಕೊಂಡ
ಇಜ್ಜತ್ತನ್ನು…
ಆ ಅಭಿಪ್ರಾಯದಲಿ
ಹುಡುಕುತ್ತಿದ್ದಾಳೆ..
ಪ್ರಾಯ ಕಳೆದುಕೊಂಡ
ಅಭಿಯೊಬ್ಬಳು…

ಈಗ ಅದರ
ಜರೂರತ್ತು…
ಕಂಡ ಗಳಿಗೆ
ಕನಲಿ ಒದರಿತು
ಕೈಗಂಟಿಕೊಂಡ
ಮದರಂಗಿ….
ಮರಳಿನ ಮನೆಗೆ
ತೊಲೆಗಳಿರುವದಿಲ್ಲ…
ಭಂಗಗಳ
ಭಂಗುರಕ್ಕೆ
ಕಾರಣಗಳಿರುವದಿಲ್ಲ…

3. ಸಂವಾದ… (ಮೂಲ.. ಅಮೃತಾ ಪ್ರಿತಂ)

ಬಾ ಪ್ರಿಯನೇ..
ಇವತ್ತು ಮನಸುಗಳ ಬಿಚ್ಚಿ ಮಾತಾಡೋಣ..
ನಿನ್ನ ಹೃದಯದ ತೋಟದೊಳಗೆ…

ಯಾವದೇ ವಿಷಯದ ಬೀಜಗಳು ಸಿಡಿದಂತೆ..
ಚಿವುಟಿಬಿಟ್ಟೆ ಚಹಾದ ಹಸಿರು ಎಲೆಗಳಂತೆ..
ಪ್ರತಿ ವಿಷಯ ನೀ ಹುದುಗಿಟ್ಟರೂ
ಪ್ರತಿ ಎಲೆ ಒಣಗಲಿಲ್ಲ ನೋಡು..

ಮಣ್ಣಿನ ಈ ಒಲೆಯೊಳಗೆ
ಕೆಂಡದಿಂದ ಬೆಂಕಿಯನ್ನು ಪುಟಗೊಳಿಸೋಣ..
ಒಂದೆರಡು ಸಲ ಊದುವ ಪ್ರಯತ್ನ ಮಾಡೋಣ..
ಹೀಗೆ ಆರಿದ ಕಟ್ಟಿಗೆಯನ್ನು ಉರಿಸೋಣ…

ಮಣ್ಣಿನ ಈ ಒಲೆಯೊಳಗೆ..
ಆ ಸೆಕೆಯಿಂದಲಾದರೂ ನಮ್ಮ ಪ್ರೀತಿ ಮಾತನಾಡಬಹುದು.
ನನ್ನ ದೇಹದ ಕಡಾಯಿಯಲ್ಲಿ
ಹೃದಯದ ನೀರು ಕುದಿಯಬಹುದು…

ಬಾ ಪ್ರಿಯನೇ…
ಇವತ್ತು ಬಿಚ್ಚೋಣ
ಪೊಟ್ಟಣದಲ್ಲಿರುವ ಹಸಿರು ಚಹದ ಎಲೆಗಳ…
ಕಳೆದುಕೊಂಡ ಮಾತುಗಳ ಹೆಕ್ಕೋಣ…
ಮತ್ತೊಮ್ಮೆ ಒಣಗಿದ ಮಾತುಗಳನ್ನು ತಾಜಾ ಮಾಡೋಣ…
ಅದ್ದಿ ನೋಡೋಣ ನೀರಿನಲ್ಲಿ..
ಬಣ್ಣ ಹೇಗೆ ಬದಲಾಗುತ್ತದೆಂದು..

ಬಿಸಿಯಿರುವಾಗಲೇ…
ಒಂದೆರಡು ಗುಟುಕು ನೀನಿಳಿಸು..
ಒಂದೆರಡು ಗುಟುಕು ನಾನಿಳಿಸುವೆ…

ನಮ್ಮ ಬದುಕಿನ ವಸಂತ ಕಾಲ
ಇದಿಲ್ಲದೆ..
ನಮ್ಮ ಚಳಿಗಾಲ ಕಳೆಯೋದು ಕಷ್ಟ..
ಬಾ ಪ್ರಿಯನೇ..
ಇವತ್ತು ಮನಸುಗಳ ಬಿಚ್ಚಿ ಮಾತಾಡೋಣ…

4. ಸಂತನಾಗಬೇಕಾದರೆ….

ಸಂತ ಅನ್ನಿಸಿಕೊಳ್ಳಲು
ಅರ್ಧರಾತ್ರಿಗೆದ್ದು
ತಿರುಗಿ ನೋಡದೆ
ಹೊರಡಲೇಬೇಕೇ…

ಜಗತ್ತಿಗೆಲ್ಲ
ಬೆಳಕು ನೀಡಲು
ಸಂಸಾರವನ್ನು
ಸುಡಲೇಬೇಕೇ…

ನಾ ಬೆತ್ತಲಾಗಲು
ಇನ್ನೊಬ್ಬರಿಗೆ
ಬಟ್ಟೆ ತೊಡಿಸಲೇಬೇಕೇ…

ಇನ್ನರ್ಧ ರಾತ್ರಿ
ಕಳೆಯಲು
ನಾನೇನಾಗಲಿ
ಉಡಿಯಲೊಂದು ಕಟ್ಟಿಕೊಂಡು….

ನೀ ಸಂತನಾದೆ
ತಕರಾರಿಲ್ಲ ನನಗೆ…
ಕುಡಿಯೊಂದು ಬಿಟ್ಟು
ಕಟ್ಟಿಕೊಂಡವನ ಬಿಟ್ಟು
‘ಸಂತೆ ‘ಅನಿಸಿಕೊಳ್ಳುವ ಪರಿ ಹೇಳು…
ನೀನಷ್ಟೇ ಅಲ್ಲ..
ಇಡೀ ಬೆಳಕಿಗೆ ಸಾರು
ತೊರೆವ ಪರಿ
ಪೊರೆವ ಪರಿ
ಆಗುವುದ್ಹೇಗೆ…?!

ಅದು ಗಂಡಸರೇ
ಬೆಳಕ ಬಳಿದು ತರುವ ಬಗೆ
ಈ ಭೂಮಿಯಲಿರುವ
ಯಶೋಧರೆಯರನ್ನು ಸಂತೈಸಲೇ ಇಲ್ಲ..!!!!!

5. ನನ್ನದಲ್ಲದ ಹೊತ್ತಿಗೆ ನಾನಾಗುವ ಪರಿ….

ರಾತ್ರಿ ಗಳಿಗೆಲ್ಲಾ
ಬೆಳಕಿನ ಬೀಜ ಬಿತ್ತುವೆ…
ಚಿಗುರೊಡೆಯುವ
ನಿರೀಕ್ಷೆಗಳಲ್ಲಿ
ಶತ ಶತಮಾನಗಳ
ಓದಲು ತೊಡಗುವೆ…
ಬದುಕಲು
ಉಸಿರು ತಾನೆ ಬೇಕು…
ಜಗತ್ತಿಗೆ ನಾ ಬದುಕಿರುವೆ
ಎಂದು ತೋರಿಸಲು…

ತೆವಳಲು
ನಾನು ನನ್ನ
ಕೈ ಕಾಲುಗಳನ್ನು
ಮಡಚಿಟ್ಟುಕೊಂಡಿರುವೆ
ಈ ವರ್ತಮಾನದ ತುರ್ತಿಗೆ…
ಪರಿಚಯದ ಚರ್ಚೆ ಬೇಡ
ವಾಸನೆಯೊಂದೇ ಸಾಕು
ಈ ಮಣ್ಣಿಗೆ…

6. ಗತಕಾಲಕ್ಕೊಂದಿಷ್ಟು ಮಳೆ..

ಒಂದಿಷ್ಟು ನನ್ನ ಕನಸುಗಳು ಕರಗಿದವು…
ಒಂದಿಷ್ಟು ನಿನ್ನ ಕನಸುಗಳು..

ಸೂರ್ಯ ಏನೇನೋ ಕಟ್ಟಿಕೊಂಡು ಬಂದ
ಈ ನಗರದಲ್ಲಿ ಎಲ್ಲವೂ ಖಾಲಿಯಾದ ಹೊತ್ತು…

ಆ ಬಾನ ಚಿಕ್ಕೆ ನನ್ನ ಮೂಗಿನ
ನತ್ತಾಗಲೇ ಇಲ್ಲ…
ಚಂದ್ರನ ಕದ್ದು ಯಾರೋ ಬಚ್ಚಿಟ್ಟು ಅವರೇ ಕತ್ತಲಾದರು..

ಮುಗಿಲಗಲ ಹರಡಿದ
ಆ ಹಸಿರೆಲೆಯ ಟೊಂಗೆಗಳು
ಗಾಯವನ್ನು ಮಾಯಿಸಲೇ ಇಲ್ಲ…

ಖಾಲಿ ಎದೆಯ ಎದೆಬಡಿತಗಳೆಂದು
ಕೊನೆಗೂ ದೀಪ ಹಚ್ಚಲೇ ಇಲ್ಲ…
ನನ್ನ ಹುಡುಕಾಟದ
ಆ ಹೊತ್ತು ನನಗೆ ಸಿಗಲೇ ಇಲ್ಲ…

7. ಕ್ಷಮಿಸಿ ಬಿಡಿ….

ಬೆಳಕಿಗಾಸೆಪಟ್ಟು
ಹೊಸ್ತಿಲು ತೊರೆದು
ಹೋದ
ನಿಮ್ಮ ಧ್ಯಾನ ಬಿಟ್ಟು
ಪಾಪಿಯ ಧೇನಿಸುವ
ನೋವಿನ
ನರಳಿಕೆಗಳೆ ಬದುಕಾದವು
ಕ್ಷಣಗಳೇ ಕ್ಷಮಿಸಿ…

ಎದೆಯ ಬಡಿತಗಳೇ
ಕ್ಷಮಿಸಿ ನನ್ನ…
ನಿಮ್ಮ ನಿಷ್ಕಾಳಜಿಗೆ..

ಉಸಿರಾಟಗಳೇ
ನಿಮ್ಮ ಆರೋಗ್ಯ
ನೋಡಲಿಲ್ಲ..
ಸಾಧ್ಯವಾದರೆ ಕ್ಷಮಿಸಿ ನನ್ನ…

ಅವನು ಕುಡಿದ
ಕಪ್ಪನ್ನು ಇನ್ನೂ
ತೊಳೆದಿಲ್ಲ..
ಸ್ಪರ್ಶಿಸಿದ ಆ
ಸೀರೆಯನ್ನೆಂದೂ
ಉಡಲಿಲ್ಲ…

ಅಲ್ಲಲ್ಲಿ ನನಗಂಟಿದ
ಗಂಧವನ್ನು
ನಾನಲ್ಲೆ ಇಂಗಿಸಿಡುವದರಲ್ಲಿ
ತೊಡಗಿಸಿಕೊಂಡೆ..

ಕೊನೆಗವನು
ನಾನು ಕುಡಿಯಲಿಲ್ಲ
ಆ ಕಪ್ಪಲಿ..
ನಾನೆಂದು ಸ್ಪರ್ಶಿಸಲಿಲ್ಲ
ಆ ಸೀರೆಯ ‘ಸಾರಿ..’
ಅಂತಂದಾಗ..
ನನಗೂ ನೆನಪಾಯಿತು
ನಿಮ್ಮೆಲ್ಲರ…

ನೀವೆಲ್ಲರೂ
ಒಂದು ಸಲ
ಕ್ಷಮಿಸಿಬಿಡಿ…

8. ಧರೆ ಹೊತ್ತಿ ಉರಿದಡೆ…

ಹೊತ್ತಿ ಉರಿದ ಗಾಯ
ಎತ್ತಿ ಇರಿದ ಗಾಳಿ
ನಾನೆಂದೂ ಕ್ಷಮಿಸೋದಿಲ್ಲ..
ಹೊತ್ತಿ ಉರಿದ ಒಲೆ
ಹತ್ತಿ ಇಳಿವ ಗಾಳಿ
ನಿಮ್ಮಬ್ಬರಿಗೂ ಕೃತಜ್ಞತೆಯಿಲ್ಲವೆಂದಲ್ಲ…

ಅವೆಲ್ಲವೂ
ಲೆಕ್ಕಕ್ಕೆ ಬಾರದು
ನಾನು ಬದುಕಲೇಬೇಕೆಂಬ
ಅಸಹಾಯಕತೆಯನ್ನು
ತಂದೊಡ್ಡಿದ್ದಕ್ಕೆ..

ನಾನು ಕುಳಿತು ಹೇಳುವ
ನೀನು ಕುಳಿತು ಕೇಳುವ
ಒಂದು ಕ್ಷಣವೂ
ಸೆರಗ ಕೊನೆಗೆ ಕಟ್ಟಿ
ಕೊಡಲಿಲ್ಲ ಕೊನೆಗೂ…

ಇರಲಿ ಬಿಡು
ನನ್ನ ನಡೆಗೆ
ನೀರಲಿ ಪಾಚಿಕಟ್ಟಲಿ…
ಚಂದ್ರ ನೋಡುವ
ಪಕ್ಕದ ಚುಕ್ಕಿ ತೋರುವ
ಧಾವಂತ ಈಗ
ನನಗೂ ಇಲ್ಲ ನಿನಗೂ ಇಲ್ಲ..

‍ಲೇಖಕರು Admin

August 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: