‘ಕವಿತೆ ಬಂಚ್‌’ನಲ್ಲಿ ಟಿ ಪಿ ಉಮೇಶ್‌

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಟಿ ಪಿ ಉಮೇಶ್‌
ಟಿ.ಪಿ. ಉಮೇಶ್ ಚಿತ್ರದುರ್ಗದ ಹೊಳಲ್ಕೆರೆಯವರು. ವೃತ್ತಿ ಸಹಶಿಕ್ಷಕರು. ‘ಫೋಟೊಕ್ಕೊಂದು ಫ್ರೇಮು’, ‘ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್’, ‘ವಚನಾಂಜಲಿ’, ‘ವಚನವಾಣಿ’, ‘ದೇವರಿಗೆ ಬೀಗ’, ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’ ಪ್ರಕಟಿತ ಕೃತಿಗಳು. ತಾಲೂಕು ಅತ್ಯುತ್ತಮ ಶಿಕ್ಷಕ ಪುರಸ್ಕಾರ 2009, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕಾರ 2017, ರೋಟರಿ ಅತ್ಯುತ್ತಮ ಶಿಕ್ಷಕ ನೇಷನ್ ಬಿಲ್ಡರ್, ಅವಾರ್ಡ್ 2013 ಮತ್ತು 2019, ‘ಫೋಟೊಕ್ಕೊಂದು ಪ್ರೇಮು’ ಪುಸ್ತಕಕ್ಕೆ ರೋಣ ಗಜೇಂದ್ರಗಡ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಸಾಹಿತ್ಯ ಚಿಗುರು’ ದೊರೆತ ಪ್ರಶಸ್ತಿಗಳು. ಶಾಲಾ ಮಕ್ಕಳ ‘ಚಿಗುರು’ ಬಾನುಲಿ ಕಾರ್ಯಕ್ರಮದಲ್ಲಿ ಅಮೃತಾಪುರದ ಶಾಲಾ ವಿದ್ಯಾರ್ಥಿಗಳು 2018 ರಿಂದ
ಪ್ರತಿವರ್ಷ ಭಾಗವಹಿಸಿ ಕಾರ್ಯಕ್ರಮ ನೀಡುವಲ್ಲಿ ತರಬೇತುಗೊಳಿಸಿರುತ್ತಾರೆ.

1. ಸದ್ದು! ಮಾತು ಕೆಲಸ ಮಾಡುತ್ತಿದೆ!

ಮಾತು ಬಹಳ ಕೆಲಸ ಮಾಡುತ್ತಿದೆ!
ಆರಿಸಿಕೊಂಡ ಮಾತು ಅಧಿಕಾರ ನಡೆಸುತ್ತಿದೆ;
ಆರಿಸಿದವರನ್ನೆಲ್ಲ ಅಲೆಸುತ್ತಾ ಅಳಿಸುತ್ತಿದೆ;
ಎದೆ ಏರಿಸಿದ ಧನಿಗಳನೆ ಮುರಿಯುತ್ತಿದೆ;
ಉಸಿರೆತ್ತಿದವರ ಕರುಳನೆ ಅರಿದು ಉಗಿಯುತ್ತಿದೆ;
ಆಸರಾದವರ ಹಸ್ತಮಸ್ತಕಗಳನೆ ನೊಣೆಯುತ್ತಿದೆ;
ಮಾತು ಅಂಕುಶ ಹಿಡಿದು ಕುಳಿತಿದೆ;
ಮಾತು ಕೆಲಸ ಮಾಡಿಸುತ್ತಿದೆ!

ಮಾತು ಭಲೆ ಶಕ್ತಿ ಭಕ್ತಿ ಹೊದ್ದಿದೆ;
ಮಾತ ಮಾತಿಗು ಉಘೇ ಉಘೇ ಅನ್ನಬೇಕಿದೆ;
ಕೈ ಕಾಲುಗಳ ಹಿಡಿದು ಹೊರಳಾಡಬೇಕಿದೆ;
ಭೀತಿಯಲಿ ಉಸಿರುಗಟ್ಟಿ ಊಳಿಡಬೇಕಿದೆ;
ತೋರಿದ ದಾರಿಯಲ್ಲೇ ಎಡವಿ ಕುಂಟಬೇಕಿದೆ;
ಮೂಳೆ ಮಾಂಸಗಳನೆ ಊಟಕ್ಕಿಡಬೇಕಿದೆ;
ಬಯಲು ಬೆಟ್ಟಗಳ ಕಡಿದು ದಕ್ಷಿಣೆ ಹಾಕಬೇಕಿದೆ;
ಮಾತು ಸದಾ ಕ್ರೋಧೋನ್ಮತ್ತವಾಗಿದೆ;
ಮಾತು ಕೆಲಸ ಮಾಡಿಸುತ್ತಿದೆ!

ಮಾತು ಬೆಳಕ ಪಂಜಿನಲಿ ಬೆಂಕಿ ಚೆಲ್ಲುತ್ತಿದೆ;
ಆಸರೆಯ ಸೆರಗಲಿ ವಿಭಜನೆಯ ಹಂಚುತ್ತಿದೆ;
ಪ್ರೀತಿಯೆಸರಲಿ ಭೀತಿಯ ರಕ್ತ ಹರಿಸುತ್ತಿದೆ;
ಚರಿತೆಯ ಜಪದಲಿ ನೆಲಧನಿ ಒಕ್ಕಲೆಬ್ಬಿಸುತ್ತಿದೆ;
ಬಲದ ನೆಪದಲಿ ಭೂ ಒಡಲ ಬಗೆಯುತ್ತಿದೆ;
ಮಾತ ಮರೆಸಿ ಮನೆಯಲಿ ಗಳ ಎಣಿಸುತ್ತಿದೆ;
ಮಾತು ಮಾತಿನೆಸರಲಿ ಹಸಿವ ಮರೆಸುತ್ತಿದೆ;
ಮಾತು ಈಗ ಕನಸುಗಳ ಮಾರುತ್ತಿದೆ!
ಮಾತು ಕೆಲಸ ಮಾಡುತ್ತಿದೆ!

ಸದ್ದು ಮಾತು ಕೆಲಸ ಮಾಡುತ್ತಿದೆ;
ಕವಿತೆ ಸುಮ್ಮನೆ ತೊಂದರೆ ಕೊಡುತ್ತಿದೆ!

2. ಬಡಾಯಿಯವರು

ಕವಿತೆ ಕಥೆ ಕಟ್ಟುತ್ತಾರಂತಿವರು
ಸಮಯ ಇದ್ದವರು ಸಮಯ ಮಿಕ್ಕವರು
ಭಾರಿ ಹುಕಿಯವರು ಚೂರು ಸೊಕ್ಕಿನವರು
ಕಲ್ಪನೆ ಕನಸುಗಳ ತಾವಷ್ಟೇ ಕಂಡವರು
ಮಾತುಗಳಿಗೆ ಹೇಗೋ ಸಿಂಗಾರ ಮಾಡುವ
ಬಡಾಯಿಯವರು

ಜುಟ್ಟು ಬಿಟ್ಟವರು ಅಲ್ಲೆ ಕಟ್ಟಿದವರು
ಗಡ್ಡ ತೊಟ್ಟವರು ಬೋಳಿಸಿ ನಯವಾದವರು
ಮೀಸೆ ಬಿಟ್ಟೂ…. ಬಿಡದವರು
ಇದ್ದು ಅಡ್ಡ ಕತ್ತರಿ ಆಡಿಸದವರು
ಬೇಲಿ ಹಾಕಿಕೊಂಡು ಮನೆ ಮಾಡಿನಲೆ ಕೂತ
ಬಡಾಯಿಯವರು

ಜುಬ್ಬ ಪೈಜಾಮದ ಸವಾರಿಯವರು
ತೀರ್ಥ ನೀತಿ ನೇಮಗಳಲಿ ಮಿಂದವರು
ಪುಳಿಯೋಗರೆ ಬಾಡೂಟ ಲೆಕ್ಕದವರು
ನೆರೆಮನೆಯನೆಲ್ಲ ಹುಡುಕುವವರು
ಸಲ್ಲದಕೆಲ್ಲ ಮೂಗು ತೂರಿಸುತ್ತ ಜೂಜು ಮೋಜುಗಳ ಕಲೆಯೆನ್ನುವ
ಬಡಾಯಿಯವರು

ಹೂವ ಆಟ ಮಾಟ ನೋಡುತ್ತಲೇ ಕಣ್ಬಿಟ್ಟೇ ಮೂರ್ಚೆ ಹೋಗುವವರು
ಹುಬ್ಬು ಕೆನ್ನೆ ಎದೆ ಕಟಿ ಇಳಿಜಾರು ಖಂಡಗಳ ಲೆಕ್ಕದಲಿ ಪೂಜಿಸುವರು
ಹೆಣ್ಣ ಜಪಿಸಿ ತಪಿಸಿ ಆರಾಧಿಸುವರು ಅವಳ ಹೊಸಿಲೊಳಗೆ ಬಂಧಿಸಿದವರು
ದೇವರ ಝಂಕಿಸಿ ಪ್ರಶ್ನಿಸುವರು ಆ ದೇವಿ ದೇವರಿಗೇ ಶರಣೆಂದವರು
ಜುಟ್ಟು ಜನಿವಾರ ಟೋಪಿ ನಾಮಗಳ ತೋರುತ ಭಾಷೆಯೆಲ್ಲ ತಮ್ಮದೆಂದವರು
ಭಾರಿ ನಡು ಬಿಡುವಿನ ಆರಾಮಿ ನೌಕರಿಯ
ಬಡಾಯಿಯವರು

ಬರೆದದ್ದೆಲ್ಲ ಓದಲೇಬೇಕೆನ್ನುವ ಬಿರಡೆಯಿರದ ಮಾತಿನವರು
ಸುಶೀಲವೆನ್ನುತ ಅಶ್ಲೀಲತೆಯನೇ ಹಾಡುವ ಹರಾಮಿ ಗಂಡು ಹೈಗಳವರು
ಈ ಬಡಾಯಿಯವರು

ನೋವು ಅಪ್ಪಿಕೊಳದೆ ಬಂಡಾಯ ಹಡೆವ ಬೀದಿ ಪತಿವ್ರತೆಯವರು
ಗರ್ಭಕಟ್ಟದೆ ಸುಳ್ಳೆ ಮುಲುಕುವ ಕೆಲಸ ಕದಿವ ತಕರಾರಿನವರು
ತಗಡು ಫಲಕ ಪತ್ರ ವಿಲಾಯಿತಿ ವಿನಾಯಿತಿಗಾಗಿ ಪುಂಗಿ ಊದುವವರು
ಧರ್ಮ ದೇಶ ಕೋಶ ನೆಲ ಜಲ ತಾಯಿ ತಂದೆ ಬಂಧುಬಳಗ ಧಿಕ್ಕರಿಸುವ ಪೀತಗಣ್ಣಿನವರು
ಧ್ಯಾನಸ್ಥ ಕಥೆ ಕವಿತೆ ಹೊಸೆಯುತ್ತಾರಂತಿವರು
ನಾವು ಉಧೋ ಉಧೋ೫ ಎನ್ನುತ್ತಾ ಕಾಯಬೇಕಂತಿವರನು
ಬೂಸಾ ಕ್ರಾಂತಿಕಾರ ನಕಲಿ ಮೆದುಳಿನವರು
ಹಗಲು ನಶೆ ಇಳಿಸಿಕೊಳ್ಳದ ಅವಕಾಶವಾದಿಗಳು
ಈ ಬಡಾಯಿಯವರು

3. ಭೂಮಿ ಹಾಡು

ಭೂಮಿ ಹಾಡುತ್ತಿತ್ತು
ಮಕ್ಕಳಿಗೆಲ್ಲ ಹಾಡು ಕಲಿಸಿತ್ತು
ಬೆಳೆದ ಮಕ್ಕಳಿಗೆ ಭೂಮಿ ಬೇಡವಾಯಿತು
ಭೂಮಿಯ ಹಾಡು ಬೇಸರವಾಯಿತು
ತಮ್ಮ ಹಾಡೂ ಸಾಕಾಯಿತು

ರೆಕ್ಕೆ ಕಟ್ಟಿಕೊಂಡು ಆಕಾಶಕ್ಕೆ ಹೋದರು
ಆಕಾಶವೆಲ್ಲ ಮೋಡ ಮಳೆಯ ತಾಳ ಹಾಕುತ್ತ
ಭೂಮಿಯ ಹಾಡಿಗೆ ಕುಣಿಯುತ್ತಿತ್ತು
ನಿತ್ಯ ಭೂಮಿಯೆಡೆಗೆ ಬರುತ್ತಿತ್ತು

ಭೂಮಿ ಬಿಟ್ಟು ಪಾತಾಳಕ್ಕೆ ಹೋದರು
ಪಾತಾಳವೆಲ್ಲ ಚಿನ್ನ ವಜ್ರ ಅಗ್ನಿಯ ನಿಧಿಯಾಗಿ
ಭೂಮಿಯ ಹಾಡಿನ ಸಿರಿಯನ್ನೆ ಹೊತ್ತು ತಿರುಗುತ್ತಿತ್ತು
ತಪ್ಪದೇ ಭೂಮಿ ಹಾಡ ಕಾಯುತ್ತಿತ್ತು

ಸಾಗರದ ಒಡಲಿಗೆ ತೇಲಿ ಹೋದರು
ಸಾಗರವು ಭೂಮಿ ಜೋಲಿಯಲಿ ಜೀಕುತ್ತಿತ್ತು
ಭೂಮಿಯ ಮಡಿಲ ಹಾಡಲಿ ನೆಮ್ಮದಿಯಾಗಿತ್ತು
ಸದಾ ಅಲೆಯಲೆಗಳ ಹೂಹಾರ ಹಾಕಿ ಪೂಜಿಸುತ್ತಿತ್ತು

ಮಕ್ಕಳೆಲ್ಲ ತಮ್ಮ ಮನೆಗೆ ಬಂದರು
ಭೂಮಿತಾಯಿ ಎಂದಿನಂತೆ ಹಾಡುತ್ತಿದ್ದಾಳೆ
ಬೆಳೆದ ಮಕ್ಕಳೆಲ್ಲ ಹಾಡುತ್ತಿದ್ದಾರೆ
ಭೂಮಿ ಹಾಡಲೆ ಬಾಳುತ್ತಿದ್ದಾರೆ

4. ಕವಿ ನಿಂತಲ್ಲೆ ನಿಂತ ಭವಿ!

ಬರೆದ ಬರಹ ಅಚ್ಚಾಗದೇ ಹಕ್ಕಿಯಾಗಿದೆ!
ಹಾರಿ ಹಾರಿ ಕಡಲ ದಾಟಿ ಕಾಣದಾಗಿದೆ!

ಗಾಳಿ ಮೋಡ ಮಳೆ ಅಲೆ ಸಾಗರವ ತಡಕಿದೆ
ದೇಹ ಮನ ಚಿತ್ತ ಆತ್ಮಗಳ ಹುಡುಕಿದೆ
ಇಲ್ಲ ಇಲ್ಲಿಲ್ಲ ಬರಹ, ಹಕ್ಕಿಯಾದ ಸುಳಿವಿಲ್ಲಿಲ್ಲ!
ಬರೆದ ಕವಿಯ ಹೊರತು ಗರುತಿನವರಿಲ್ಲಿಲ್ಲ!

ಬರೆದ ಬರಹ ಹಕ್ಕಿಯಾಗಲು ಹಕ್ಕಿಲ್ಲವೇ?
ಹಕ್ಕಿಯಾದದ್ದನ್ನೇ ಹಿಡಿದು ಬಡಿದು ಬರೆದೆ
ನನ್ನದೆಂದು ಬಿಡದೆ ಗೋಗರೆದು ಮೆರೆದೆ
ಅದು ಹಕ್ಕಿ ಕಾಣ! ಅದು ದಿಕ್ಕು ಕಾಣ!
ಯಾರಾರಿಗೆ ದಾರಿ ತೋರಬೇಕೋ?
ಕುಟುಕು ನೀಡಿ ಜೀವ ಪೊರೆಯಬೇಕೋ?
ಎಲಾ ಕವಿಯೇ ನಿಂತಲ್ಲೆ ನಿಂತ ಭವಿಯೇ!
ಬಿಟ್ಟು ಬಿಡು ಬರಹ ಹಕ್ಕಿಯಾಗಿಯೇ ಇರುವ ಜಗವ!
ಆಗಾಗ ಬಳಿ ಬಂದಾಗ ಗುಕ್ಕಿಕ್ಕಿ ತೂರಿಬಿಡು ಮನವ!

ನಿನ್ನ ಗುರುತು ನಿನಗಿರಲಿ ತಗಡು ಹೊದ್ದ ಗೋರಿಯಲಿ!
ಬರಹವನು ಮಣ್ಣಿಗಿಡುವುದೇಕೆ ಹಾರಲಿ ಬದುಕಾಗಲಿ!

5. ಮಾತಾಡು ಮನವೇ

ಮಾತಾಡು ಮನವೇ
ಮಾತಾಡಬೇಕು ಜಗವೇ

ಈಗ ತುಟಿ ಬಿಚ್ಚಿ ಮಾತಾಡುವವರು ಇಲ್ಲ
ಕಟಿ ಕುಣಿಸಿ ಹಾರಾಡುವವರೂ ಇಲ್ಲ
ಮಾತಾಡಿ ಆಡಿ ಗುಡ್ಡೆ ಹಾಕುತ್ತಿದ್ದವರು
ಹೋರಾಡಿ ಆಡಿ ಭರಾಟೆ ಮಾಡುತ್ತಿದ್ದವರು
ಬಾಯಿದ್ದು ನಾಲಿಗೆ ಕುಯ್ದುಕೊಂಡಿದ್ದಾರೆ
ಶಬ್ಧಗಳ ದ್ವನಿಗೆ ಸಮಾಧಿ ಕಟ್ಟಿಕೊಂಡಿದ್ದಾರೆ
ಮತ್ತೆಂದೂ ಮಾತಾಡಲಾಗದು ಅವರು
ಇನ್ನೆಂದೂ ಬೀದಿಗಿಳಿಯಲಾಗದು ಇವರು
ಮಾತಾಡು ಮನವೇ
ಮೌನಬಿಡು ಗುರುವೇ

ಮಾತೇ ಮರೆತಂತೆ ತೇಲ್ಗಣ್ಣು ಬಿಡುವವರು
ಕೊರಳಿಗೆ ರೋಗ ಬಂದಂತೆ ಹುದುಗಿದವರು
ಹೊಟ್ಟೆಗೆ ವ್ರಣ ಬಡಿದಂತೆ ಮುಲುಕುವವರು
ತಲೆಗೆ ಗರ ಮೆಟ್ಟಿದಂತೆ ನಡುಗುವವರು
ಕೈಕಾಲಿಗೆ ಬೆಂಕಿ ಮುಟ್ಟಿದಂತೆ ದೂರಿರುವವರು
ಮೈಯ್ಗೆ ಮೈಯೇ ಸಿಡಿಲೊಡೆದಂತೆ ಬಿದ್ದವರು
ಮತ್ತೊಂದ ಮಾತಾಡರು ಎಂದೆಂದೂ
ಇನ್ನೊಂದ ತರ್ಕಿಸರು ಅವರೆಂದೂ
ಮಾತಾಡು ಮನವೇ
ಮಾರ್ಗದಾ ಗುರಿಯೇ

ರಹದಾರಿಗಳಿದ್ದು ನಡೆಯದಾದ ಸುಲಕ್ಷಣ ಹೆಳವರು
ಕೃತಿಗಳಿದ್ದು ಆಚರಿಸದಾದ ಮರ್ಯಾದ ಪುಂಗವರು
ಬೆಳಕಿದ್ದು ಕತ್ತಲೆಂದು ಊಳಿಟ್ಟ ಚಾಳಿಸಿನ ಕುರುಡರು
ಉಣಲಿದ್ದು ಹಸಿವಿನ ಕಿಚ್ಚಿಟ್ಟ ಹೊಟ್ಟೆಬಾಕ ಖೂಳರು
ಸಿರಿಯಿದ್ದು ಸರೀಕರ ಬೆತ್ತಲಿಟ್ಟ ನೆತ್ತಿಮಾಸಿದ ದುರುಳರು
ಬದುಕಿದ್ದು ಇನ್ನು ಸಾಕಾಗದ ಮೈಬೆವರದ ಮಡಿಯವರು
ಮತ್ತೆ ಮಾತಾಡರು ಇನ್ನೆಂದು
ಇತ್ತ ಸುಳಿಯರು ಅವರೆಂದು
ಮಾತಾಡು ಮನವೇ
ಮನ್ವಂತರದ ದಾರಿಯೇ

ಜೀವ ಚೇತನದಾತ್ಮದ ನೊಸಲಿಗೆ ಕೆಸರೆರಚಿದ ಮುಖವಾಡದವರು ಅಳಿಯುವವರೆಗು
ಜ್ಞಾನ ವಿಜ್ಞಾನಗಳನೆ ಹಣ ಅಹಮಿಕೆಗಳಿಗೆ ಅಡವಿಟ್ಟವರು ಬೂದಿಯಾಗುವವರೆಗು
ಮಾತಾಡು ಮನವೇ
ಯುಗಯುಗದ ಅರಿವೇ

6. ದೇವರು ಪ್ರತ್ಯಕ್ಷನಾದ

ನನ್ನ ದೇವರು ಇಂದು ಪ್ರತ್ಯಕ್ಷನಾದ

ಸಂಕಟವಿಲ್ಲದ ಜಗವ ಕೇಳಿದೆ
ಕಂಟಕವಿಲ್ಲದ ಮಾನವನಾಗು ಎಂದನು

ನೋವು ನೀಡದ ನಗುವ ಕೇಳಿದೆ
ಸಾವು ಬರಲು ಕಾಯಬೇಡ ಎಂದನು

ಉಸಿರು ಇರದ ಆಯಸ್ಸು ಕೇಳಿದೆ
ಹಸಿದಾಗ ಸುಮ್ಮನಿದ್ದುಬಿಡು ಎಂದನು

ಹಣವಿರದ ವ್ಯವಹಾರ ಕೇಳಿದೆ
ಗುಣಗಳಿರದ ವ್ಯಕ್ತಿಯಾಗು ಎಂದನು

ಬಂಧುಗಳಿರದ ಕುಟುಂಬ ಕೇಳಿದೆ
ಬಂಧನಕ್ಕೆ ಮತ್ತೇಕೆ ಒಳಗಾದೆ ಎಂದನು

ನನಗೀಗಲೇ ಸಾವು ಕೇಳಿದೆ
ನೀನಿನ್ನು ಹುಟ್ಟಿಯೇ ಇಲ್ಲ ಎಂದನು

ನೀ ಮತ್ತೆ ಬರಬೇಡೆಂದು ಕೇಳಿದೆ
ನಿನಗಾಗಿ ನಾನಲ್ಲ ಎಂದನು

ನನ್ನ ಬಿಟ್ಟು ನಿಲ್ಲದೆ ತಿರುಗಿ ಓಡಿದೆ
ನಿನ್ನ ಬಿಟ್ಟು ಹೋಗಲುಂಟೆ ಎಂದನು

ನನ್ನ ದೇವರು ಇಂದು ಪ್ರತ್ಯಕ್ಷನಾದ
ನನ್ನ ಬಿಟ್ಟು ಕೊಟ್ಟು ಬದುಕದಾದ

7. ತೆಗೆಯಲಾರದ ಬದುಕಿನ ಬಾಗಿಲು

ಒಂದು ಅಲೆ ಬಂದೊಡನೆ ಮುಗಿಯಲಾಗದ ಕಡಲು
ಒಂದು ತುತ್ತು ನುಂಗಿದೊಡನೆ ತುಂಬಲಾಗದ ಒಡಲು
ಹಜ್ಜೆ ಹೆಜ್ಜೆ ಪೋಣಿಸುತಲಿ ಮಣ್ಣ ತುಳಿದು ದೇಕುತಲಿ
ಗಾಳಿ ಓಲಗದಿ ತೇಲುತಲಿ ಭಾವ ಬಂಧುಗಳ ಜೀಕುತಲಿ
ಕನಸು ಚಿಟ್ಟೆಯ ಮುರಿದ ಬಣ್ಣ ರೆಕ್ಕೆಗಳ ಗುರುತಿನಲಿ ದಾರಿ ಕಾಣುತಲಿ
ಬದುಕು ಪೊರೆ ಕಳಚದ ಮೈ ಭೂತಕಾಲದ ಕಪ್ಪಿಡಿದ ಕನ್ನಡಿಯಲಿ
ನಿಲ್ಲಲಾರದು ಗಡಸು ಮೋಡಗಳ ತೊರೆಯು
ಭೂಮಿ ಬಾಗಿದರು
ಬದುಕು ತೆಗೆಯದು ಬಾಗಿಲು

ಇಂದ್ರಿಯಗಳ ಮೆಮೊರಿಯಲಿ ಅಳಿಸಿಹೋದ ಪೂರ್ವಜರ ವಿಶ್ವಕೋಶ
ವಿಷಯಗಳ ಅಲೆಗಳಲಿ ನೃತ್ಯಮಗ್ನ ದೇಹದ ಸ್ತುತಿ ಮರೆಯದ ರತಿಪಾಶ
ಪಂಚಕವಚಗಳ ಒಡ್ಡೋಲಗದ ಹುಕಿಗೊಂಡ ಚಬುಕಿನಲಿ
ಬೀಜ ಮೊಳೆಸದ ಮಣ್ಣಿನಲ್ಲಿ ಅನಗತ್ಯ ಬೆವರ ಊರುತಲಿ
ಅವತಾರಿ ಫಿಶ್ ಟಾರ್ಟೈಸ್ ಅನಕೊಂಡಗಳು ಮೌನಹೊದ್ದ ಬೆಂಕಿಯಲಿ
ಪಾಪ ಪುಣ್ಯಗಳು ಓಬಿರಾಯನ ಧೂಳುಗಳು ಮೆಟ್ಟುಗಾಲಿನ ಒತ್ತಿನಲಿ
ಬಟ್ಟೆಗಳ ಮರೆತ ಹೊಟ್ಟೆಗಳಿಗೆ ವರ್ಜಿನಿಟಿಯ ಲೇಪಿಸಲಾಗದು
ಯಾರ್ಯಾರು ಛಲ ತೊಟ್ಟರು
ತೆಗೆಯಲಾರದ ಬದುಕಿನ ಬಾಗಿಲು

ಮಹಾತ್ಮರ ಹೆಸರೊಂದು ಹೊರೆ ಸುಮ್ಮನೆ ಬದುಕುವ ಆತ್ಮಗಳಿಗು
ಛಾವಿ ಹೊತ್ತೊಯ್ದ ಹುತಾತ್ಮರ ಧೇನಿಸುತ ಬಾಗಿಲ ಬಡಿವ ಬದುಕಿಗು

ತೆಗೆಯಲಾಗದ ಬದುಕಿನ ಬಾಗಿಲು
ಹೆಳವ ಕುರುಡನಿಗಿಟ್ಟಿರುವ ಕಂದೀಲು

‍ಲೇಖಕರು Admin

September 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: