
ಕವಿತೆ ಬಂಚ್-
‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.
ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.
ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.
ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ದತ್ತು ಕುಲಕರ್ಣಿ
ನನ್ನ ಹೆಸರು ದತ್ತು ಕುಲಕರ್ಣಿ. ನಾನು ಮೂಲತಃ ಗದಗ ಜಿಲ್ಲೆಯವನಗಿದ್ದು ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದೇನೆ. ವೃತ್ತಿಯಿಂದ ಡಿಸೈನ್ ಇಂಜನಿಯರ ಆಗಿ ಕೆಲಸ ಮಾಡುತ್ತಿದ್ದೇನೆ. ಪ್ರವಾಸ, ಓದು ಮತ್ತು ಬರೆಯುವದು ನನ್ನ ಹವ್ಯಾಸಗಳು.
1. ತಲೆ ಬಡಿಸಿಕೊಂಡವನು
ಹೀಗೆ ಒಂದು ನಟ್ಟ ನಡುರಾತ್ರಿ
ಅರೆ ಮಂಪರಿನ ಹೊತ್ತು
ಹಾಸಿಗೆಯಲ್ಲಿ ಹೊರಳಾಡುವಾಗ
ತಲೆ ಪಲ್ಲಂಗಕ್ಕೆ ಬಡಿಯಿತು
ಅದೇ ಹೊತ್ತು
ದಿಂಬು ಹಾಸಿಗೆ ಚಾದರಗಳು ತಮ್ಮಷ್ಟಕ್ಕೆ ತಾವೇ
ಏನೊ ಪಿಸಗುಡುತ್ತಿದ್ದವು
ಇವನಿಗೆ ತನ್ನಷ್ಟಕ್ಕೆ ತಾನೇ ಏನೂ ಮಾಡ್ಲಿಕ್ಕೆ ಆಗುವುದಿಲ್ಲ
ತನ್ನ ನಿದ್ದೆ ತಾನು ಮಾಡಲೂ ಸಹಿತ ನಾವು ಬೇಕು
ಏನೊ ಹೋಗಲಿ ಬಿಡು ಅಂತಂದುಕೊಂಡು ಸುಮ್ಮನಿದ್ದೆ
ಆದರೆ ಮರುದಿನ
ಪಲಂಗ ನನ್ನನ್ನು ದುಗಿಸಿ ಎಬ್ಬಿಸಬೇಕೇ..,?

ಹಾಗೆ ಮುಂದುವರಿದು
ಬ್ರಷ್ ತನ್ನ ಕಡ್ಡಿಗಳಿಂದ ನನ್ನ ಹಲ್ಲು ತಿಕ್ಕಿತು
ಲೋಟ ತುಟಿ ಹತ್ತಿರ ಬಂದು ಒತ್ತಿಕೊಂಡಾಗ ಚಾ ತಾನೇ ಒಳ ಹೋಗಿತು
ಬಚ್ಚಲಿನಲ್ಲಿ ನೀರು ಧೋ ಎಂದು ಸುರಿದು ಮೈತೊಳೆಯಿತು.
ತಿಂಡಿ ಬಾಯಲ್ಲಿ ತಾನೆ ಹೋಗಿ ಬಿದ್ದಿತ್ತು
ಇದಾಗಿ ಕಾರು ತನ್ನ ಸ್ಟೇರಿಂಗ್ ತಾನೇ ತಿರುಗಿಸುತ್ತಾ ಆಫೀಸಿಗೆ ಕರೆದುಕೊಂಡು ಹೋಯಿತು
ಅಲ್ಲಿ ಕಂಪ್ಯೂಟರ್ ಕೀಬೋರ್ಡ್ ನ ಮಣಿಗಳು
ತಕ ತಕ ಕುಣಿದು ದಣಿದು ಕೊನೆಗೆ ಎಂಟು ತಾಸಿನ
ನಂತರ ಕಂಪ್ಯೂಟರ್ ಅನ್ನು ಶಡ್ಡೌನ್ ಮಾಡಿದವು.
ಹಾಗೆಯೇ ಕಾರು ಮರಳಿ ಮನೆಗೆ ಕರೆದುಕೊಂಡು ಹೋಯಿತು
ಊಟ ಬಾಯಲ್ಲಿ ತಾನೆ ಇಳಿದ ಮೇಲೆ
ಪಲ್ಲಂಗ ನನ್ನನ್ನು ತಬ್ಬಿ ಕೊಂಡಿತು
ಆಮೇಲಿಂದ ನನಗೆ
ಇದೆ ರೂಢಿಯಾಗಿದೆ
ನಾನಂತೂ ಈಗೀಗ ಏನೂ ಮಾಡುವುದಿಲ್ಲ
ನನಗನಿಸುವ ಮಟ್ಟಿಗೆ ಮೊದಲೂ ಏನು ಮಾಡುತ್ತಿರಲಿಲ್ಲ
2. ರೇಖೆ – ವೃತ್ತ – ಬಿಂದು
ಹಾಗೆ ಇರಲಿ ಎಂದು ನನ್ನ ಕ್ಯಾಡ ಡ್ರಾಯಿಂಗ್ ಮೇಲೆ
ಒಂದು ಗೆರೆ ಎಳೆದರೆ
ಅದಕ್ಕೆ ವಿಸ್ತೀರ್ಣವಿಲ್ಲ
ಅದು ಏನನ್ನೂ ಒಳಗೊಂಡಿಲ್ಲ
ಎಲ್ಲವನ್ನೂ ಹೊರಗಿಟ್ಟ ಒಬ್ಬಂಟಿ ಅನಾಥ
ಹಾಗಾಗಿ ಇನ್ನೆರಡು ಗೆರೆ ಸೇರಿಸಿ
ತ್ರಿಕೋನ ಮಾಡಿದೆ.
ಮೂರು ಬಾಹುಗಳು ಸೇರಿ
ಸ್ವಲ್ಪ ಒಳ ಹರವು ಬೆಳೆದು
ಬಂಧಗಳು ಸಂಬಂಧಗಳಾಗಿ
ಕೋನಗಳು ಉಂಟಾದವು.
ಹಾಗೆ ಕುತೂಹಲದಿಂದ ಇನ್ನೊಂದು ಬಾಹು ಸೇರಿಸಿ
ಚೌಕ ಮಾಡಿದೆ.

ವಾಹ್ ಸಮತಟ್ಟಾದ ಕ್ಷೇತ್ರಫಲ
ಸುತ್ತಲೂ ಆವಾರಿಸಿರುವ ಬಾಹು ಬಂಧದ ರಕ್ಷಿತ ಭಾವ
ಕೂಡು ಮನೆಯ ಅನೋನ್ಯತೆ
ಹಾಗೆಯೇ ನೋಡೋಣ ಎಂದು
ಬಾಹುಗಳ ಉದ್ದ ಹೆಚ್ಚು ಕಡಿಮೆ ಮಾಡಿದರೆ
ಒಳಕೋನಗಳ ದೃಷ್ಟಿ ಕೋನಗಳು
ತಕ್ಷಣವೆ ಬದಲಾಗಬೇಕೆ ?
ಈ ಜಟಾಪಟಿಯಲ್ಲಿ
ಆಕಾರವೇ ಹೀಚು ಪೀಚಾಗಿ
ಕರುಳ ಬಂಧಕ್ಕೆ,,, ಸವಾಲಾಯಿತು.
ಬಹುತ್ವ ಮತ್ತು ಅನೋನ್ಯತೆಗಳು
ವಿಲೋಮನುಪಾತದಲ್ಲಿ ಇರುವದು ಏಕೋ?
ಆದರೂ ಛಲ ಬಿಡದ ತ್ರಿವಿಕ್ರಮನಂತೆ
ಬಾಹುಗಳನ್ನು ಹೆಚ್ಚಿಸುತ್ತಾ ಹೋದೆ
ಕೊನೆಗೆ ಈ ಅನಂತ ಬಾಹುಗಳ ನಡುವೆ
ಕೋನಗಳೆ ಇಲ್ಲದಂತಾಗಿ
ಅದು ವೃತ್ತವಾಯಿತು.
ನಾ ಉದ್ದ ನಾ ಹೆಚ್ಚು ಅನ್ನೊ ಭಾವವಿಲ್ಲ.
ಜಟಾಪಟಿಗೆ ಆಸ್ಪದವಿಲ್ಲ
ಒಂದೇ ತರಹದ ದೃಷ್ಟಿಕೋನ
ಸಮಾನತೆಯ ಸೊಗಸು.
ಹಾಗೆ ಮುಂದುವರೆದರೆ
ನಿರಂತತೆಯ ನಿರ್ಲಿಪ್ತತೆ
ಅಷ್ಟರಲ್ಲಿ ನನ್ನ ವೃತ್ತ ದೊಳಗಿನ
ರೇಖೆಗಳೆಲ್ಲ
ಗೊಯ್ ಗುಡಲು ಪ್ರಾರಂಭಿಸಿದವು.
ನಮಗೊ ಆದಿಯಿಲ್ಲ ಅಂತ್ಯವಿಲ್ಲ
ಸ್ವಂತಿಕೆಯನ್ನು ಕಳೆದುಕೊಂಡಂತಾಗಿದೆ.
ಹೇಗಾದರೂ ಆಗಲಿ ಎಂದು
ಮತ್ತೆ ಬಾಹುಗಳನ್ನು ಕಡಿಮೆ ಮಾಡುತ್ತಾ ಬಂದೆ.
ರೇಖೆಗಳೆಲ್ಲ ಬಿಂದುರೂಪಿಗಳಾಗಿ
ನಲಿಯತೊಡಗಿದವು.
ಹಾಗೆ ಚೆಲ್ಲಾಪಿಲ್ಲಿಯಾಗತೊಡಗಿದವು.
ಮತ್ತೆ ಬಿಂದುಗಳನನ್ನೆಲ್ಲ ಮತ್ತೆ ವೃತ್ತಗಳನ್ನಾಗಿ ಮಾಡಬೇಕಲ್ಲಾ
ಎಂದು ಒಂದು ಬಿಂದುವನ್ನು ಜೂಮ್ ಮಾಡಿದರೆ
ಆ ಬಿಂದುವಿನಲ್ಲಿ ರೇಖೆಗಳು, ವೃತ್ತ
ಇಡೀ ಡ್ರಾಯಿಂಗ್ ಅಷ್ಟೇ ಏಕೆ –
ನಾನು ಕೂಡ ಸೇರಿ ಇಡೀ ವಿಶ್ವವೆ ಕಾಣಿಸಿತು.
3. ಅಂದದ್ದು ಅಂದ ಹಾಗೆ ಇರುವದಿಲ್ಲಾ.
ಕುರ್ಚಿಗೆ ಕುಳಿತುಕೊಳ್ಳಲಿಕ್ಕಾಗುವದಿಲ್ಲ.
ಮಂಚಕ್ಕೆ ಮಲಗಿಕೊಳ್ಳಲಿಕ್ಕಾಗುವದಿಲ್ಲ.
ಕಪಾಟಿಗೆ ತನ್ನನ್ನೆ ಮುಚ್ಚಿಕೊಳ್ಳಲಿಕ್ಕಾಗುವದಿಲ್ಲ.
ಅಂತ
ಅನ್ನುವದನ್ನೆಲ್ಲ ಅನ್ನಲಾಗುವದಿಲ್ಲ..
ಚಾದರಕ್ಕೆ ಹೊದ್ದುಕೊಳ್ಳಲಿಕ್ಕಾಗುವದಿಲ್ಲ.
ಹಾಸಿಗೆಗೆ ಮಲಗಿಕೊಳ್ಳಲಿಕ್ಕಾಗುವದಿಲ್ಲ.
ದಿಂಬಿಗೆ ತಲೆಯೆ ಇಲ್ಲ
ಅಂತ
ಅನ್ನುವದನ್ನೆಲ್ಲ ಅನ್ನಲಾಗುವದಿಲ್ಲ..
ತಾಟಿಗೆ ತಿನ್ನಲಿಕ್ಕಾಗುವದಿಲ್ಲ
ಸೌಟಿಗೆ ಬಡಿಸಿಕೊಳ್ಳಲಿಕ್ಕಾಗುವದಿಲ್ಲ.
ಲೋಟಾಕ್ಕೆ ಕುಡಿಯಲು ಬರುವದಿಲ್ಲ
ಅಂತ
ಅನ್ನುವದನ್ನೆಲ್ಲ ಅನ್ನಲಾಗುವದಿಲ್ಲ..
ಹೌದು,
ಯಾವಾಗಲೂ ಮತ್ತು ಒಮ್ಮೊಮ್ಮೆ
ಅಂದದ್ದೆಲ್ಲ ಅಂದ ಹಾಗೆ ಇರುವದಿಲ್ಲ
ಹಾಗೆಯೇ
ಅನ್ನದೇ ಬಿಟ್ಟದ್ದೂ ಕೂಡ !

ಈ ಕವನ
ತಬ್ಬಲಿ
ಇದಕೆ ತಲೆಬರಹವಿಲ್ಲ
ಇಲ್ಲ ಎಲ್ಲಿಯೂ ಪ್ರಾಸ
ಆದಿ, ಅಂತ್ಯ ಮತ್ತು ನಡುವೆ
ಹಾಡಲು ಬರುವದಿಲ್ಲ
ಗೇಯ ಲಕ್ಷಣಗಳಿಲ್ಲ
ಭಾವಾಭಿವ್ಯಕ್ತಿ ಇಲ್ಲ
ಅಸಲಿಗಿದು ಕವನವೇ ಅಲ್ಲ
ಎನ್ನುವದು ಈ ಕ್ಷಣದ ವರೆಗಿನ
ಸತ್ಯ
ಆದರೆ ಈ ಕ್ಷಣದ ನಂತರ
ಈ ಕವನ ತಬ್ಬಲಿ ಅಲ್ಲ
ಇದು ಓದಿಸಿಕೊಂಡಿದೆ ನಿಮ್ಮಿಂದ
ತನ್ನ ತಬ್ಬಲಿತನವನ್ನು ಬಿಚ್ಚಿಟ್ಟು
ಅದನ್ನೇ ಕಳೆದುಕೊಂಡಿದೆ..
ಹೂವು ತನ್ನ ಸೌಂದರ್ಯವನ್ನು ಬಿಚ್ಚಿಟ್ಟು
ಕಳೆದುಕೊಂಡ ಹಾಗೆ,
ಹಾಗೆಯೇ..
ಪಡೆದುಕೊಂಡ ಹಾಗಿದೆ ಸಾರ್ಥಕತೆಯನ್ನು
ತಾನೆ ದ್ವನಿಯಾಗಿದೆ
ರೂಪಕಲಂಕಾರದಂತೆ
ಪ್ರಾಸದ ತ್ರಾಸಿಲ್ಲದೆಯೂ
ಹಾಸು ಹೊಕ್ಕಾಗಲು
ಹವಣಿಸುತ್ತಿದೆ.
ಗೇಯ ಹುಡುಕಿ
ರಾಗ ತಡಕಿ
ಬಿಡುಗಡೆಯ
ಭಾವ ತುಂಬಿ
ನಿಮ್ಮ ಹಾಡಾಗಿ ಮಾಡಿಕೊಳ್ಳಲು
ಕೇಳಿಕೊಳ್ಳುತ್ತದೆ.
4. ನನ್ನ ನೆರಳು
ನನ್ನ ನೆರಳು ನನ್ನ ಉತ್ಪಾದನೆ..
ಆದರೂ
ಅದರಿಂದೇನು ಲಾಭವಿಲ್ಲ
ನಾನು ಅದನ್ನು ಬಿಟ್ಟರೂ
ಅದು ನನ್ನನ್ನು ಬಿಡುವದಲ್ಲ
ನಾಯಿ ಜನ್ಮ!
ಒಮ್ಮೆ ಮುಂದೆ ಮತ್ತೊಮ್ಮೆ ಹಿಂದೆ
ಮುಗದೊಮ್ಮೆ ಪಕ್ಕ
ಮುಂಜಾನೆ ಉದ್ದ, ಮದ್ಯಾನ್ಹ ಗಿಡ್ಡ
ಸಂಜೆ ಮತ್ತೆ ಉದ್ದ
ಚಂದ್ರನ ಜೊತೆ ಸ್ವಲ್ಪ ಮಬ್ಬು
ವಿದ್ಯುತ್ ದೀಪದಲ್ಲಂತೂ ಇನ್ನೂ ಮಬ್ಬು
ಆದರೂ ವಿಚಿತ್ರ
ಪ್ರಖರ ಬೆಳಕಿನಲ್ಲಿ
ನಿಖರ ಸ್ಪಷ್ಟ
ಎಲ್ಲ ಕಡೆ ಬೆಳಕಿದ್ದರಂತೂ
ನನ್ನಲ್ಲೆ ಅಸ್ತಂಗತ

ಇಂತಿಪ್ಪ ನನ್ನ ನೆರಳು ನನ್ನ ಬಿಟ್ಟು
ಹೋಯಿತೆಂದರೆ
ಎಲ್ಲಿಲ್ಲಿಯೂ ಕತ್ತಲೆಯೆ..!!!!
ಹೌದು ನೆರಳು
ಬೆಳಕಿನ ಅಸ್ತಿತ್ವದ ಗುರುತು,
ಇದನ್ನು ನಾನು ಮರೆತರೂ
ನನ್ನ ನೆರೆಳು ಮಾತ್ರ ಇದರಿಂದ ಹೊರತು !!!
5. ಆರಾಮ ಕುರ್ಚಿ
ಹೀಗೆ ಒಂದು
ರವಿವಾರದ ನಡು ಮದ್ಯಾನ್ಹ
ಉಂಡು ವಿರಮಿಸುವ ಹೊತ್ತು
ಒಳ ಪಡಸಾಲೆಯಲಿ
ಒಬ್ಬಂಟಿ ಕುರ್ಚಿಯಾಗೊ ಆಸೆ ನನಗೆ
ಯಾವದೊ ಕಾಡಿನ
ಸತ್ತ ಮರದ ದೇಹದಲ್ಲಿ
ನನ್ನದು ಪರಕಾಯ ಪ್ರವೇಶ
ಗಿಡದ ಬೊಡ್ಡೆಯನ್ನೇ ಸಿಗಿದು
ಮಾಡಿದ ಕಾಲುಗಳು
ಎಳೆ ಕೊಂಬೆಗಳೆ ಕೈಗಳು
ದಪ್ಪ ಕಾಂಡವೆ ಪೃಷ್ಠ
ಒಣಗಿಸಿ ಬಳಲಿಸಿ
ಕಡಿದು ಕೊರೆದು
ಹೊರಮೈಯ ನೆಲ್ಲಾ ತರೆದು
ಉಚ್ಚುಕೊಡ್ಡ ಹೊಡೆದು
ಕಾಲನ ಎಣ್ಣೆಯನ್ನು ತಿಕ್ಕಿ ತೀಡಿದರೆ
ಮೈಯಲ್ಲ ನುಣುಪು

ಹಾಗೆಯೇ
ಜೋಡಿಸಿ ಮೊಳೆ ಹೊಡೆದರೆ
ಆರಾಮ ಕುರ್ಚಿ ಎನ್ನುವ ಹೆಸರು
ಭೂತದ -ಜೀವನವನ್ನು
ನೀಗಿಕೊಂಡು
ಒರಟು ತೊಗಟೆಗಳೆಂಬ
ಚರ್ಮವನ್ನು ಸುಲಿಸಿಕೊಂಡು
ಮೈ ಮೇಲೆ ಕುಳಿತವರಿಗೆ
ಬೆಚ್ಚನೆಯ ಅಪ್ಪುಗೆ ನೀಡಿ
ನೀಳ ತೋಳುಗಳ ನೆಮ್ಮದಿಯ ಚಾಚಿ
ಅಮ್ಮನ ಮಡಿಲ ನೆನಪಿಸಿ
ಶಾಂತಿಯೆಂಬೊ ಜಂತಿಯೆಡೆಗೆ
ಮುಖ ಮಾಡಿದರೆ
ಅದೆ ಸ್ಥಿತ ಪ್ರಜ್ಞ ಸ್ಥಿತಿ..
ಜೀವದಿಂದ ನಿರ್ಜೀವವಾಗಿ
ನಿರ್ಜೀವದಿಂದ ಮರಳಿ ಭಾವದೆಡೆಗೆ
ಹೊರಳಿದ ಕುರ್ಚಿಯಾಗಿ
ಹಾಗೆ ಉಳಿದುಬಿಡುವಾಸೆ ನನಗೆ.
6. ಹಗಲುಗನಸು
ರಾತ್ರಿಯ ಸವಿನಿದ್ದೆಯಲಿ
ಕನಸೊಂದು ಬಿತ್ತು
ಅದರಲ್ಲಿ ರಾತ್ರಿಯೇ ಕಳೆದು
ಹಗಲಾಗಿತ್ತು.
ಪಟಕ್ಕನೆ ಎಚ್ಚರವಾದಾಗ
ನಿಜವಾಗಲೂ ಹಗಲಾಗಿತ್ತು
ಆವಾಗ ಅನಿಸಿತು
ಹಗಲುಗನಸುಗಳು ನನಸಾಗಬಹುದು ಒಮ್ಮೊಮ್ಮೆ
ಕನಸುಗಳಲಿ ಹಗಲಾದಾಗೊಲೊಮ್ಮೆ
ಮತ್ತು
ಹಗಲಿನಲಿ ಕನಸುಗಳು ಮುಗಿದಾಗಲೊಮ್ಮೆ
7. ತಕ್ಕಡಿಯ ಗೊಣಕಾಟ
ಹೀಗೆ ಒಂದು ಹಗಲು ಅಲ್ಲದ
ರಾತ್ರಿಯೂ ಅಲ್ಲದ ಮುಸ್ಸಂಜೆ ಹೊತ್ತಲ್ಲಿ
ಮನೆಯ ಹೊಸ್ತಿಲಿನ ಮೇಲೆ
ತಕ್ಕಡಿಯೊಂದು ಬಂದು ಕುಳಿತಿತು.
ಎನಣ್ಣಾ ಸುದ್ದಿ.. ಒಳಗೆ ಬಾ ಅಂದೆ.
ಇಲ್ಲ ತಮ್ಮಾ ನನಗೆ ಈಗ
ಒಳಗ ಬರುಹಂಗಿಲ್ಲ ..
ಆದರ ನನ್ನ ಮುಳ್ಳಿಗೆ ತುಕ್ಕ ಹಿಡಿಯಾಕ ಹತ್ತೈತಿ
ಭಾಳ ದಿವಸಾತು..
ಏನರ ಎರಡು ಈ ಕಡೆ ಆ ಕಡೆ ಇಟ್ಟು
ತೂಕ ಮಾಡು ಅಂತ ಅಂಗಲಾಚಿತು.
ಇರಲಿ ಎಂದು ಕೈಗೆ ಸಿಕ್ಕ ಏನೊ ಎರಡನ್ನು
ಆ ಕಡೆ ಈ ಕಡೆ ಹಾಕಿದೆ.
ಮುಳ್ಳು ಅಲಗಾಡಲಿಲ್ಲ.
ಆದರೆ ತಕ್ಕಡಿ ಎರಡನ್ನೂ
ಹೊರ ಚೆಲ್ಲಿತು.
ಮತ್ತೆ ಕೈಗೆ ಸಿಕ್ಕ ಮತ್ತೆರಡನ್ನು ಹಾಕಿದೆ.
ಮುಳ್ಳು ಅಲುಗಾಡದೆ ಮುಷ್ಕರ ಮುಂದುವರೆಸಿತು.
ತಕ್ಕಡಿ ಪರಟೆಗಳು ಮೂಗುಚಿಕೊಂಡವು..
ಮತ್ತೆ ಎರಡನ್ನೂ ಹಾಕಿದಾಗ ಇದೆ ಪುನರಾವರ್ತಿಸಬೇಕೆ ?
ತಕ್ಕಡಿ ಬೀಸಾಡಿದವುಗಳನ್ನು
ಎತ್ತಿ ನೋಡಿದೆ.

ಯುದ್ಧ ಮತ್ತು ಶಾಂತಿ
ಸಹನೆ ಮತ್ತು ಬಂಡಾಯ
ಯಂತ್ರಗಳು ಮತ್ತು ಸರಳ ಜೀವನ
ಎಲ್ಲಿದ್ದವೊ ಇವೆಲ್ಲಾ ಅನಿಸಿತು.
ಅಷ್ಟರಲ್ಲಿ ಮನೆ ಮುಂದೆ
ಎಡ ಪಂಥ ಬಲ ಪಂಥ
ಅನ್ನುವ ಫಲಕ ಹಿಡಿದುಕೊಂಡ ಜೋಡಿ ಸಾಲುಗಳಲ್ಲಿ
ಹತ್ತು ಹಲವು ಮುಗಿಬಿದ್ದ ಜೋಡಿಗಳ ದಂಡು
ತಮ್ಮನ್ನು ತೂಕ ಹಾಕು’-ತಮ್ಮನ್ನು ತೂಕ ಹಾಕು
ಎಂದು ಅಂಗಲಾಚತೊಡಗಿದವು.
ಇತ್ತ ತೂಕ ಹಾಕಿಸಿಕೊಳ್ಳಲು ತಯಾರಾದ ಜೋಡಿ
ಅತ್ತ ತೂಕ ಹಾಕಲಾರೆ ಎನ್ನುವ ತಕ್ಕಡಿ.
ತಲೆಚಿಟ್ಟು ಹಿಡಿದು ಹೋಯಿತು.
ಕೊನೆಗೆ ಕನಿಕರಗೊಂಡ ತಕ್ಕಡಿಯೆ
‘ನೋಡು ತಮ್ಮ, ಹಾಗಲಕಾಯಿ ಬದನಿಕಾಯಿಗಳನ್ನು
ಆ ಕಡೆ ಈ ಕಡೆ ಇಟ್ಟು ತೂಕ ಮಾಡಾಕ ಬರುದಿಲ್ಲ
ಒಂದೊಂದಾಗಿ ಕಲ್ಲ ಹಚ್ಚಿ ತೂಕ ಮಾಡತಾರ
ಈಗೀಗ ಜನರಿಗೆ ಇನ್ನೂ ಏನು ತೂಕ ಮಾಡಬೇಕು
ಮಾಡಬಾರದು ಅನ್ನೂದ ಗೊತ್ತಿಲ್ಲ
ಮತ್ತ ತೂಕದ ಕಲ್ಲುಗಳನ್ನೆ ಕಳಕೊಂಡಾರ
ಅಂತ ಗೊಣಗಿಕೊಂಡಿತು.
ಚೆನ್ನಾಗಿದೆ