
‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.
ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಗಿರಿಧರ್ ಖಾಸನೀಸ್
ಗಿರಿಧರ್ ಖಾಸನೀಸ್ ಅವರು ಹಿರಿಯ ಕಲಾ ಬರಹಗಾರರು, ಛಾಯಾಗ್ರಾಹಕರು ಹಾಗೂ ಹಲವಾರು ಚಿತ್ರ ಪ್ರದರ್ಶನಗಳ ಕ್ಯುರೇಟರ್. 2013 ಮತ್ತು 2014 ಸಾಲಿನಲ್ಲಿ ಟೊಟೊ-ತಸ್ವೀರ್ ಛಾಯಾಚಿತ್ರ ಪ್ರಶಸ್ತಿಗಳ ತೀರ್ಪುಗಾರ ಸಮಿತಿಯಲ್ಲಿದ್ದವರು.
2017 ರಲ್ಲಿ ದಕ್ಷಿಣ ಕೊರಿಯಾದ ಇಂಟರ್ನ್ಯಾಷನಲ್ ಕ್ಯುರೇಟರ್ಸ್ ರೆಸಿಡೆನ್ಸಿ-ಗೆ ಆಹ್ವಾನಿತರಾಗಿದ್ದವರು. ಪ್ರಸ್ತುತ ಒಂದು ಫೋಟೋ- ಆರ್ಟ್ ಪುಸ್ತಕ (ಇಂಗ್ಲಿಷ್) ಮತ್ತು ಅತಿಸಣ್ಣಕಥೆ/ಗಪದ್ಯಗಳ (ಕನ್ನಡದಲ್ಲಿ) ಸಂಗ್ರಹಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
1. ಪ್ರೇಮಪತ್ರ..
ಎಂಟನೇ ಕ್ಲಾಸಿನ ಹುಡುಗಿ ಒಂಬತ್ತನೇ ಕ್ಲಾಸಿನ ಹುಡುಗನಿಗೆ ಪ್ರೇಮಪತ್ರ ಬರೆದು ಯಾರ ಕೈಗೋ ಅದು ಸಿಕ್ಕಿ ರಾಧ್ಧಾಂತವಾಗಿ ಪ್ರಿನ್ಸಿಪಾಲರು ಇಬ್ಬರನ್ನೂ ತಮ್ಮ ಕೊಠಡಿಗೆ ಬರಹೇಳುತ್ತಾರೆ.
ವಿದ್ಯಾರ್ಥಿಗಳು ಕೊಠಡಿಯೊಳಗೆ ಅಕ್ಕಪಕ್ಕದಲ್ಲಿ ತಲೆ ತಗ್ಗಿಸಿ ನಿಂತು ಪ್ರಿನ್ಸಿಪಾಲರಿಗಾಗಿ ಕಾಯುತ್ತಾರೆ.
ಕಿಟಕಿಯಿಂದ ತೂರಿ ಬಂದ ಸೂರ್ಯನ ಕಿರಣ ಮೇಜಿನ ಮೇಲೆ ಮಲಗಿದ ಪ್ರೇಮಪತ್ರಕ್ಕೆ ಹಾಗೂ ಧೂಳು ಮುಕ್ಕಿದ ಕಪಾಟಿನಲ್ಲಿ ಕೈಕಟ್ಟಿ ಎದೆ ಉಬ್ಬಿಸಿ ನಿಂತ ವಿವೇಕಾನಂದ ಮೂರ್ತಿಗೆ ಹೊಸಬೆಳಕ ತಾಕಿಸುತ್ತದೆ.

ಗಡಿಯಾರ ಹನ್ನೆರಡು ಬಾರಿಸುತ್ತದೆ.
ಅವಳು ಅವನ ಕಡೆ ನೋಡುತ್ತಾಳೆ.
ಪ್ರಿನ್ಸಿಪಾಲರು ಕೊಠಡಿಗೆ ಕಾಲಿಡುವ ಮುನ್ನ ಅವನ ಕೈಯನ್ನು
ಒಮ್ಮೆ ಹಿಸುಕಬೇಕೆನಿಸುತ್ತದೆ.
2. ಸಂಬಂಧಗಳು
‘ಅಪ್ಪ ಬದಲಾಗಿದ್ದಾರೆ ಅನಿಸುವುದಿಲ್ಲವೇ, ಅಮ್ಮ,? ಮೊದಲಿನ ಹುರುಪಿಲ್ಲ. ಚುರುಕಿಲ್ಲ. ನಗು ನಗುತ್ತಾ ಮಾತಾಡಲ್ಲ… ನೀನು ಗಮನಿಸಿಲ್ಲವೇ?’ ಅಮ್ಮ ಸುಮ್ಮನೆ ನಕ್ಕಳು. ‘ನಿನಗಿದು ಅರ್ಥ ಆಗಲ್ಲ ಮರಿ. ಸ್ವಲ್ಪ ದೊಡ್ಡವನಾದ ಮೇಲೆ ಎಲ್ಲ ಗೊತ್ತಾಗತ್ತೆ,’ ಅಂತ ಹೇಳಬಯಸಿದಳು. ಹೇಳಲಿಲ್ಲ.
ಆರು ವರುಷದ ಮಗು ಗಮನಿಸಿದ್ದನ್ನು ಹತ್ತು ವರುಷ ಸಂಸಾರ ಮಾಡಿದ ನಾನು ಕಾಣೆನೇ? ಹೌದು, ನನ್ನವರು ಸಡನ್ನಾಗಿ ಮಂಕಾಗಿ ಬಿಟ್ಟಿದ್ದಾರೆ. ನೋಡಿದರೆ ಪಾಪ ಅನ್ನಿಸುತ್ತೆ. ಈ ಅಫೇರ್ ಗಿಫೇರ್ ತುಂಬಾ ದಿನ ನಡೆಯೋಲ್ಲ ಅಂತ ನನಗೆ ಚೆನ್ನಾಗಿ ಗೊತ್ತು… ನಾಲ್ಕು ದಿನ ಹೋದರೆ ಎಲ್ಲ ಸರಿ ಹೋಗತ್ತೆ. ನಿನ್ನೆ ಸಂಜೆ ದೇವರ ಮುಂದೆ ಎರಡು ರೂಪಾಯಿ ಮುಡಿ
ಇಟ್ಟಿದ್ದೇನೆ. ಎಲ್ಲ ಸರಿ ಹೋಗುತ್ತೆ.

ನಾನು ಬದಲಾಗಿದ್ದೇನೆ ಅಂತ ಅಮ್ಮ ಮಗ ಮಾತಾಡಿಕೊಂಡಿದ್ದು ನನಗೆ ಕೇಳಿಸದೆ ಇರುವುದೇ? ನಿಜ, ಒಂದೆರಡು ಬಾರಿ ಎಡವಿದ್ದೇನೆ. ಪಶ್ಚಾತಾಪವನ್ನೂ ಪಟ್ಟಿದ್ದೇನೆ. ಆದರೆ ಈಗಿನ ವಿಚಾರ ಬೇರೆ. ಅವಳು ತಿಳಿದಂತೆ ಅಫೇರ್ ಗಿಫೇರ್ ಏನೂ ನಡೆದಿಲ್ಲ. ಆಫೀಸಿನಲ್ಲಿ ರೂಮರ್ ಹರಿದಾಡುತ್ತಿದೆ. ರಿಸೆಶನ್ ಹೆಸರಲ್ಲಿ ಮೂವತ್ತು ಜನರಿಗೆ ಪಿಂಕ್ ಸ್ಲಿಪ್ ಕೊಡ್ತಾರಂತೆ, ಲಿಸ್ಟಿನಲ್ಲಿ ನನ್ನ ಹೆಸರೂ ಇದೆ ಅಂತೆ…
3. ಕುರು
ಮೂರು ದಿನದ ಹಿಂದೆ ಗುಲಗಂಜಿ ಕಾಳಿನಷ್ಟಿದ್ದ ಹುಣ್ಣು ಇಂದು ಬೆಂದ ಕಡಲೆಕಾಯಿಯ ಸೈಜು ಆಕಾರ ಬಣ್ಣ ಪಡೆದಿದೆಯೆಂದು
ಬೆಳಿಗ್ಗೆ ಕನ್ನಡಿ ಮುಂದೆ ನಿಂತು ಪೈಜಾಮವನ್ನು ನಿಧಾನವಾಗಿ ಕಳಚಿ ಕುಂಡಿಯನ್ನು ನೋಡಿಕೊಂಡ ಪಾಂಡುರಂಗನಿಗೆ ಅರಿವಾಯಿತು.
ಕುರುವಿನ ಸುತ್ತ ಹಾಗೆ ಒಂದು ಬಾರಿ ತೋರು ಬೆರಳನ್ನಾಡಿಸಿದ.
ಹಾಯ್ ಅನಿಸಿತು.
ಇನ್ನೇನು ಪಾಯಿಜಾಮ ಏರಿಸಬೇಕು ಅನ್ನುವಾಗ ಕುರು ಪುಸ್ಸ್ಸ್ಸ್ ಎಂದು ಬಿರುಕು ಬಿಟ್ಟು ರಕ್ತ ಮಿಶ್ರಿತ ಕೀವು ಹೊರಹೊಮ್ಮಿತು.

ಬಲಗೈಯಲ್ಲಿ ಪೈಜಾಮದ ಲಾಡಿ ಹಿಡಿದು ಎಡಗೈಯಿಂದ ಒಸರುತ್ತಿದ್ದ ಕೀವನ್ನು ಹತ್ತಿಯಿಂದ ಮೆಲ್ಲಗೆ ಒರೆಸಿ ಹಾಕಿದ ಮೇಲೂ ಹುಣ್ಣಿದ್ದ ಜಾಗ ಜುಮುಜುಮಿಸುತ್ತಲೇ ಇತ್ತು.
ಅಭ್ಯಾಸಬಲದಿಂದ ಪಾಂಡುರಂಗ ಮತ್ತೊಮ್ಮೆ ಮೆಲ್ಲಗೆ ಅದರ ಸುತ್ತ ಬೆರಳನ್ನಾಡಿಸಿದ. ಮೊದಲಿನ ಖುಷಿ ಸಿಗಲಿಲ್ಲ.
ಏನೋ ಖಾಲಿಯಾದ ಹಾಗೆ. ಏನನ್ನೋ ಕಳೆದುಕೊಂಡ ಹಾಗೆ…
4. ಪಕ್ಕದ ಮನೆ ಹುಡುಗಿ
ನನಗೆ ಅವಳ ಪರಿಚಯವಿಲ್ಲ.
ಒಂದೆರಡು ಬಾರಿ ನೋಡಿರಬಹುದು ಅಷ್ಟೇ.
ನೆನಪಿನಲ್ಲಿರುವುದು ಅವಳ ಅಸಾಧಾರಣ ನೀಳ್ಗತ್ತಿನಲ್ಲಿ
ತೂಗಿದ ಒಂದೆಳೆ ಸರದ ತುದಿಯಲ್ಲಿ ಈಜಾಡಿದ
ಚೆಂದದ ಪುಟ್ಟ ಮೀನಿನ ಕಪ್ಪು ಕಣ್ಣು.
ನಿನ್ನೆ ರಾತ್ರಿ ನೇಣು ಹಾಕಿಕೊಂಡು ಸತ್ತಳಂತೆ.
ಕೆಲಸದವಳು ಹೇಳಿದಳು.

ಹೊರಗೆ ಹೋಗಿ ನೋಡಿದೆ.
ಬಿಳೀ ಬಟ್ಟೆ ಹೊದಿಸಿ ಶವದ ಗಾಡಿಯಲ್ಲಿ ಮಲಗಿಸಿದ್ದರು.
ಮುಖ ಕಾಣಲಿಲ್ಲ, ಮೀನೂ ಕಾಣಲಿಲ್ಲ.
ಗಾಡಿ ಚಲಿಸಿದಾಗ ಕೆಲಸದವಳು
ಕಣ್ಣೊರೆಸಿಕೊಂಡು ಕೈಮುಗಿದಳು.
5. ತೊರೆದು ಜೀವಿಸಬಹುದೇ
ರಾತ್ರಿ ಒಂಬತ್ತು ಮುಕ್ಕಾಲು. ಹೊರಗೆ ಜಿಟಿಜಿಟಿ ಮಳೆ. ಬಾಗಿಲು ತಟ್ಟಿದ ಹಾಗಾಯಿತು. ಧೈರ್ಯ ಮಾಡಿ ತೆಗೆದೆ. ಎದೆ ಧಸಕ್ ಎಂದಿತು.
ಒಳಗೆ ಬಾ ಎಂದು ನಾನೇನು ಕರೆಯಲಿಲ್ಲ. ತಾನಾಗಿ ಬಂದು ಕುರ್ಚಿಯಲ್ಲಿ ಕುಸಿದು ಕುಳಿತನು.

ಹೇಗಿದ್ದವನು ಹೇಗಾಗಿದ್ದಾನೆ? ಮೈಯೆಲ್ಲಾ ಬರೀ ಮೂಳೆ! ನಿಸ್ತೇಜ ಮುಖ. ಕಣ್ಣು ಕಮರಿದ ಕಣಿವೆ. ತಲೆ ಬೋಳು … ಅಯ್ಯೋ, ಎಲ್ಲಿ ಹೋಯಿತು ನವಿರಾದ ಆ ಗುಂಗುರು ಕೂದಲು?
ಅವನಾಗಿಯೇ ಮೌನ ಮುರಿದ. ‘ಯಾವ ತಪ್ಪೂ ಮಾಡಿಲ್ಲ. ಆದರೂ ಏಕೆ ನನ್ನ ಹಿಂದೆ ಬಿದ್ದಿದ್ದಾರೆ?’
6. ಅಳಿದ ಮೇಲೆ
ಗಂಡನನ್ನು ಮರಕ್ಕೆ ಕಟ್ಟಿಹಾಕಿ
ಅವನ ಕಣ್ಣೆದುರಿಗೇ ಹೆಂಡತಿಯನ್ನು ಹಿಂಸಿಸಿ
ಬಲಾತ್ಕಾರ ಮಾಡಿದ ಮೂವರು ಯುವಕರನ್ನು
ಸಾಕ್ಷಿಗಳಿಲ್ಲದ ಕಾರಣ ಬಿಟ್ಟುಬಿಟ್ಟಾಗ ಸಿಟ್ಟಿಗೆದ್ದ ಗಂಡನು

ಕೊಡಲಿ ಹಿಡಿದು ಮೊದಲು ಮರವನ್ನು ಕಡಿದು
ನಂತರ ಎಲ್ಲರೆದುರು ಅದೇ ಕೊಡಲಿಯಿಂದ
ಹೆಂಡತಿಯನ್ನು ಕೊಚ್ಚಿ ಹಾಕಿದನೆಂದು
ನ್ಯಾಯಾಲಯವು ಅವನಿಗೆ ವಿಧಿಸಿದ
ಮರಣದಂಡನೆಯ ಸುದ್ದಿಯನ್ನು
ಮೂರನೇ ಪುಟದ ಆರನೇ ಕಾಲಮ್ನಲ್ಲಿ ಪ್ರಕಟಿಸೋಣ ಎಂದು
ಸಂಪಾದಕರು ಸಜ್ಜಾಗುತ್ತಿದ್ದಂತೆ
ಚಿನ್ನಾಭರಣ ಜಾಹಿರಾತಿನ ಮಿಟುಕಲಾಡಿಯೋರ್ವಳು
ಅದೇ ಜಾಗಕ್ಕೆ ಬಂದು ಮಾದಕ ನಗೆ ಬೀರಿ ಕಣ್ಣು ಮಿಟುಕಿಸಬೇಕೆ?
7. ತಲೆಮಾರು
ಅಮ್ಮನಿಗೆ ಸಾಲಾಗಿ ಆರು ತಂಗಿಯರು. ಮಗನಿಗಾಗಿ ಹಂಬಲಿಸಿದ ತಾತ ಅಜ್ಜಿಯನ್ನು ಹಿಂಡಿ ಹಿಸುಕಾಕಿದರೂ ಭಗವಂತ ಓಗೊಡಲಿಲ್ಲ. ಚಂಡಾಲನೊಬ್ಬ ಮಂತ್ರ ಮಾಡಿ ಕೊಟ್ಟ ಲಿಂಬೆಕಾಯಿ ರಸ ಕುಡಿದು ಅಜ್ಜಿ ತೀರಿದ ಮೇಲೆ ಕಾಶಿಯಾತ್ರೆಗೆ ಹೋದ ತಾತ ಮರಳಿ ಬರಲಿಲ್ಲ.
ಫಾಸ್ಟ್ ಫಾರ್ವರ್ಡ್. ನಲವತ್ತು ವರ್ಷ.

ಆರು ತಂಗಿಯರಲ್ಲಿ ಬದುಕುಳಿದ ಮೂವರ ಜೊತೆ ಅಮ್ಮ ಸೆಗಣಿ ಹಾಕಿ ಸಾರಿಸಿದ ನೆಲದ ಮೇಲೆ ಚಾಪೆ ಹಾಕಿ ಕೂತಿದ್ದಾಳೆ. ಪಕ್ಕದಲ್ಲಿ ನೆಲ್ಲಿಕಾಯಿ ಮರ. ಚಿಕ್ಕಂದಿನಲ್ಲಿ ಆ ಮರದ ಬುಡದಲ್ಲಿ ಆಡಿದ ಆಟಗಳೆಷ್ಟೋ!
ಕೊನೆಯ ತಂಗಿ, ಕ್ಯಾಲಿಫೋರ್ನಿಯಾ ನಿವಾಸಿ, ನಾಲ್ಕು ವರ್ಷದ ಮೊಮ್ಮೊಗನ ಕೈ ಹಿಡಿದು ಟ್ಯಾಕ್ಸಿಯಿಂದ ಕೆಳಗಿಳಿಯುತ್ತಾಳೆ. ಅಕ್ಕಂದಿರೆಲ್ಲ ಹುರುಪಿನಿಂದ ಬರಮಾಡಿಕೊಳ್ಳುತ್ತಾರೆ. ಮಗುವನ್ನು ಎತ್ತಿ ಮುದ್ದಾಡುತ್ತಾರೆ.
ಮೊದಮೊದಲು ಹಿಂಜರಿದ ಮಗು ಆಮೇಲೆ ಅಮ್ಮನ ನೆರೆತ ಕೂದಲ ಸವರುತ್ತ ‘ಹೌ ಸ್ವೀಟ್’ ಎನ್ನುತ್ತಾನೆ.
0 ಪ್ರತಿಕ್ರಿಯೆಗಳು