‘ಕವಿತೆ ಬಂಚ್’ನಲ್ಲಿ ಅಶ್ವಿನಿ ಬಿ ಬಿ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಅಶ್ವಿನಿ ಬಿ ಬಿ

ನಾನು ಅಶ್ವಿನಿ… ನಮ್ಮೂರು ಕರಂದಂಟಿನ ನಾಡು ಗೋಕಾವಿ… ಬಯಲು ಸೀಮೆಯ ಅಂಚಿನೂರು. ಓದಿದ್ದು ,ಕಲಿತಿದ್ದು ಎಲ್ಲ ಸ್ವಂತ ಊರಲ್ಲೇ.. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆಂಗ್ಲಭಾಷೆಯಲ್ಲಿ ಎಂ.ಎ ಪದವಿ.. ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಆಂಗ್ಲಭಾಷಾ ಶಿಕ್ಷಕಿ.. ಕನ್ನಡಮ್ಮನ ಅಭಿಮಾನಿ.

ವೃತ್ತಿ ಬದುಕು ಪರಭಾಷೆಯಾದರೂ ಉಸಿರು, ಹಸಿರು, ಮಾತು, ಮೌನ ಎಲ್ಲವೂ ಕನ್ನಡವಾಗಿದ್ದರೆ ಚೆನ್ನ ಎಂದು ನಂಬಿದವಳು… ಕಥೆ ಕವನ ಬರೆಯೋ ಗೀಳು. ಬರಹಗಾರ್ತಿ ಆಗಬೇಕು ಎಂಬ ಕನಸನು ನನಸಾಗಿಸೋ ಹುಚ್ಚು ಆಸೆ. ಬರವಣಿಗೆಯ ಸ್ಪೂರ್ತಿ ನನ್ನ ಅಪ್ಪ…‌ ಅಪ್ಪನೆಂಬ ಆಗಸದಿ ಪದಗಳ ಪೋಣಿಸಿ ಮಿನುಗು ಚುಕ್ಕಿಯಾಗಬಯಸಿರುವೆ…

  1. ನಾ ಬಯಸೋ ಸಾಮೀಪ್ಯ 

ಇಳಿಸಂಜೆ ಹೊತ್ತಿನಲಿ
ತಂಪಾದ ತಂಗಾಳಿಯು
ನನ್ನ ಎಡಬಿಡದೇ ಕಾಡಿರಲು
ಕಂಗಳು ನಿನ್ನ ದಾರಿ ಕಾದಿರಲು
ಮನವು ಬಯಸಿದ್ದು ನಿನ್ನದೇ
ಸಾಮೀಪ್ಯ…!!!!!

ಕನಸಿನ ಕುಡಿ ಚಿಗುರಿದಾಗ
ತುಂತುರು ಮಳೆ ಧರೆಗಿಳಿವಾಗ
ಎದೆಯು ನಿನ್ನ ಅಪ್ಪುಗೆಯ
ಬಯಸಿ ಬಸವಳಿದಿರಲು
ತೋಳುಗಳು ಬಯಸಿದ್ದು ನಿನ್ನದೇ
ಸಾಮೀಪ್ಯ…!!!!

ಮನದೊಳಗೆ ನಿನ್ನದೇ ಕನವರಿಕೆ
ಮತ್ತಾರ ನೆನೆವ ಅಚಿಂತೆ ನನಗೆ
ನಿನ್ನ ನಲ್ಮೆಯ ಕೂಸಾಗಿ
ನಿನ್ನ ಮಡಿಲಲ್ಲಿ ನಾ ಮಗುವಾಗಿ ಮಲಗಿದಾಗ
ನೆವರಿಸೋ ಬೆರಳು ಬಯಸಿದ್ದು ನಿನ್ನದೇ
ಸಾಮೀಪ್ಯ..!!!!!

ಈ ಬಾಳ ಒಡನಾಟಕೆ
ನೀನಾಗ ಬೇಕಿದೆ ನಾ ಬಯಸೋ ಸಂಗಾತಿ
ಸಾಕೆನಿಸಿದೆ ಇನ್ನೂ ಈ ಒಂಟಿ
ಬಾಳಿನ ನಂಟು- ಗಂಟು ಎಲ್ಲವೂ
ನಾ ಕೂಗುವ ಮುನ್ನ, ನನ್ನ ಜಗವು ಬಯಸಿದ್ದು ನಿನ್ನದೇ
ಸಾಮೀಪ್ಯ…!!!!!

ಈ ಮರುಳ ಮನಸ್ಸಿನ ಆಟಕೆ
ನೀ ನೀಡು ಒಮ್ಮೆ ಒಪ್ಪಿಗೆಯನು
ನಾನೇ ಬರುವೆ ನಿನ್ನ ಎದೆಗೂಡ ಸೇರಲು
ಸಾವೇ ಎದುರಾದರೂ ನಾ ನಿಲ್ಲಲಾರೆ
ನಿನ್ನೊಲವ ಕಣಜ ನಾ ಸೇರುವ ಮುನ್ನ
ಈ ದೇಹವು ಬಾಯ್ದೆರೆದು ಬಯಸಿದ್ದು ನಿನ್ನದೇ
ಸಾಮೀಪ್ಯ…!!!!!

02. ನನ್ನದಾಗದ ಬದುಕು

ನನ್ನದಾಗಲಿಲ್ಲ ಈ ಬದುಕು
ಎಲ್ಲರೂ ಅವರವರ
ಅನೂಕೂಲಕ್ಕೆ ತಕ್ಕಂತೆ
ಬಳಸಿಕೊಂಡರು…!

ಒಂದು ವೃಕ್ಷ ‌ಕೂಡ ಜಗಕೆ
ಹಸಿರ ಬೆಳೆಸಿ, ಉಸಿರ ನೀಡಿ
ಖಗ ಜಾತಿಗಳಿಗೆಲ್ಲ ನೆಲೆ
ನೀಡೋದಾತ…!

ನಾನಿತ್ತ ನೆಲೆ ಇಂದು
ಈ ನನ್ನವರ ಮಧ್ಯೆ
ನನ್ನದಾಗಲಿಲ್ಲ
ಬಯಸಿದ ಬದುಕು…!

ನಾನೇನು ಸ್ವಾರ್ಥಿ ಎಂದಲ್ಲ
ನಾನು, ನನ್ನವರು ಎಂದು
ನಾ ಮಾಡಿದ ನಂಟು- ಗಂಟು
ಅದೇ, ಬೇಕು ಅವರಿಗೆ…
ಮುಪ್ಪಾದ ಈ ದೇಹವಲ್ಲ…!

ಬಳಲಿ ಬೆಂದವರಿಗೆ
ತಂಗಾಳಿ ಎರೆದೆ
ನನ್ನನೇ ಮರೆತು
ಇರುವವರೆಷ್ಟೋ…!

ಕಾಲರಥ ತಿರುಗಿಹುದೀಗ
ಕುಟುಕು ಜೀವ ಹಿಡಿದು
ಕಾದಿಹೆನು ನಾ
ಒಬ್ಬಂಟಿ ಇಂದೀಗ….!

ಹೆಂಡತಿ- ಮಕ್ಕಳು
ನಂಟಿರುವ ತನಕ
ಒರಟು ಒಂಟಿ ಜೀವ ನನ್ನದೀಗ
ಜಗವೇ ನನ್ನದೆಂದು ಪ್ರೀತಿಸಿದೆ
ಜಗಕ್ಕೆಲ್ಲ ನಗುವ ನಾ ನೀಡಿದೆ
ಇಂದು ಜಡ ದೇಹ ನನ್ನದು…!

ನಾಳೆ ಎಂತೋ ಏನೋ ಗೊತ್ತಿಲ್ಲ
ಯಾವ ದೇವರ ಪಾದಕ್ಕೋ ಕಾಣೆ
ಎಲ್ಲರ ಬದುಕ ಹಸನಾಗಿಸಿದೆ
ಬರುವಾಗ ಒಂಟಿ, ಹೋಗುವಾಗ ಒಂಟಿ
ಆದರೆ ಇದ್ದಾಗ ಸವೆಸಿದ ಜೀವನ
ಯಾರ ಭಾಗ್ಯಕ್ಕೋ ಏನೋ…!

ಇಂದಿನ ನನ್ನ ಸೌಭಾಗ್ಯಕ್ಕೆ ನಾನೇ ಹೊಣೆ
ಸಾವಿನ ನೋವಿಗೆ ಖುಷಿಪಡಲೇ
ಕಳೆದು ಹೋದವರ ನೆನೆಸಿ ದು:ಖಿಸಲೇ
ನನ್ನದಾಗದ ಬದುಕಿಗೆ
ಹಿಡಿಶಾಪ ಹಾಕಲೇ…
ಕಾಲವೇ ನನ್ನ ನೋವಿನ ರೂವಾರಿ…!!

03. ನಮನ

ಚೆಲುವ ಕಂಪಿನ‌ ಗಾಳಿ ತೇಲಿಸಿ
ಪರಿಸರದಿ ಪಸರಿಸೋ ಪರಿಸರಕ್ಕೊಂದು ನಮನ …!!

ಅವನಿಯೊಳಗೆ ಅವನಿಗೊಂದಾಗಿ
ಅವಳಿಗೊಂದಾಗಿ ಒಲವ ಬೆಸೆದ ವನಗಳಿಗೊಂದು ನಮನ…!!

ಚಿಲಿಪಿಲಿ ಹಕ್ಕಿಗಳ ಚುಮುಚುಮು ಚೆಂದದ
ಗಾನವ ಆಲಿಸಲು ಅವಕಾಶವಿತ್ತ ಪಿಕಗಳಿಗೊಂದು ನಮನ….!!

ಹರಿವ ಸಾಗರದೊಳು ಸರಿಗಮದ
ಸಂಗೀತವ ಆಲಾಪಿಸಿ ಆನಂದಿಸೋ ಅಲೆಗಳಿಗೊಂದು ನಮನ….!!

ಗಿಡ- ಮರಗಳಾಗಿ ನಮ್ಮೊಳಗೆ ಒಂದಾಗಿ
ನಾವಿರುವ ಜಗದ ಬೇಗೆಯ ತಣಿಸುತಿರೋ ಹಸಿರಿಗೊಂದು ನಮನ…!!

ಬೇಯುತಿರುವ ಮನು ಸಂಕುಲಕ್ಕೆ ಬೆಚ್ಚಗಿನ ಬದುಕ
ಕಲ್ಪಿಸಲು ಆಮ್ಲದಿ ಜನಕವಾಗಿರುವ ಉಸಿರಿಗೊಂದು ನಮನ….!!

ಪರಿಸರ ರಕ್ಷಣೆ ನಮ್ಮ ಹೊಣೆಯಾದಾಗ
ಹಸಿರಾಗಿ ಉಸಿರಾದ ಪ್ರಕೃತಿಗೊಂದು ನಮನ….!!

ಬಂದಿರುವ ಕುಂದು ಇಂದು ಎಂದೆಂದೂ
ಅದರೊಳಗೂ ಉಳಿಸುತಿರೋ ವೈದ್ಯರಿಗೊಂದು ನಮನ….!!

ಹೀಗೆ ನಡೆದರೆ ಮುಂದಿನ‌ ಭವಿಷ್ಯವೆಲ್ಲಿ
ಯೋಚಿಸು ಓ ನ್ನ ಆತ್ಮೀಯ ಬಂಧು ಎನ್ನುತಿರುವ ವನದೇವಿಗೊಂದು ನಮನ…..!!

ಬೇಕಾದರೂ ಬೆಳಕು ಬೆಳೆಸು ದಿನಕ್ಕೊಂದು ಹಲಸು
ಹುಲುಸಾಗಿ ತೊಳೆಯುವದು ನಿನ್ನೊಳಗಿನ ಹೊಲಸು ಎಂದ ತೇಜನಿಗೊಂದು ನಮನ….!!

ಸಾವು ಇರದ ಸಾಲು ಮರಗಳ ನೆಟ್ಟು
ಮಕ್ಕಳಂತೆ ಎದೆಯ ಉಸಿರ ಕೊಟ್ಟು ಬೆಳೆಸಿದ ತಿಮ್ಮಕ್ಕಗೊಂದು ನಮನ….!!

ವಿಶ್ವ ಕುಲದ ಅಳಿವು- ಉಳಿವಿಗೆ
ಅರಿವಿನ‌ ಪಾಠ ಕಲಿಸುತ್ತಿರೋ ಜನನಿ ಅವನಿಯ ಮಡಿಲಿಗೊಂದು ನುಡಿ ನಮನ….!!

04. ನನ್ನವಳು

ನನ್ನವಳು ತ್ರಿಲೋಕದ ಅಪರೂಪದ ಸುಂದರಿ
ನನ್ನವಳು ನನಗಾಗಿ ಬಂದವಳು
ಭಗವಂತನ ದಯೆಯ ಮಾಯೆ ಅವಳ ಚೆಲುವು
ಅವನೊಲಿದು ನೀಡಿದ ಕೃಪೆ ನನ್ನವಳು, ನನ್ನ ಗೆಳತಿ….!!

ಪ್ರೀತಿಯ ಚುಂಬನಕ್ಕೆ ಕಣ್ಣಲ್ಲೇ ಕರೆದವಳು
ನನ್ನವಳು ಎಂದರೆ ಮೈಯೆಲ್ಲ ನವಿರೇಳುವದು
ಅವಳ ಒಂದು ಕಣ್ಣ ಸನ್ನೆಯೇ ಸಾಕು
ಮೈಯೊಳಗಿನ ನೋವೆಲ್ಲ ಮಳೆಯಲ್ಲಿ ಕರಗಿದಂತಾಗುವದು….!!

ನನ್ನವಳು ನಲಿವ ನವಿಲಾದವಳು ನನಗಾಗಿ
ನನ್ನವಳು ತಾಳ್ಮೆಯ ಸವಿಗರಿಯಾದವಳು
ಅವಳೊಂದು ಲತೆಯಂತೆ ಬಳುಕುವ ಬಳ್ಳಿಯಂತೆ
ಅವಳಾಸರೆ ನನ್ನ ಜೀವನದ ದಾರಿಯಾಗಿದೆಯಂತೆ …!!

ಅವಳ ಕೈಯೊಳಗೆ ಕೈಸೇರಿಸಿ ಜೀವನವ ನಡೆಸುವಾಗ
ಹೃದಯದ ಬಡಿತ ಒಲವಿನ ತುಡಿತ ಮನದಲ್ಲಿ
ಅವಳ ಅಂತರಂಗ ಅಂತಃಪುರಕ್ಕೆ ರಾಜ ನಾನು
ಸದಾ ಮಿರಮಿಸುವೆನು ಅವೆದೆಯ ಸಾಮ್ರಾಜ್ಯದ ಮೇಲೆ….!!

ನನ್ನವಳ ನೋವಿನ ಗಂಟಿನೊಳಗೆ ಇಹುದು
ನನ್ನವಳ ಪ್ರೀತಿಯ ಪಾಶದ ಒಲವಿನ ಮುತ್ತೊಂದು
ಅವಳ ನೋವು, ಅವಳ ಮುತ್ತು
ಅವಳ ಭಾರ ನಾನೊಬ್ಬನೇ ಹೊರುವ ಹೊತ್ತು….!!

ಅವಳ ಜೊತೆಯಾಗಿ ಅವಳ ಹೆಜ್ಜೆಯ ಗೆಜ್ಜೆಯಾಗಿ
ಈ ಬಾಳ ಪಯಣದಿ ನಾ ನಡೆವ ತವಕ
ಅವಳ ಪ್ರೀತಿಯ ಅವಳ‌ ಮಾಯೆಯ
ಮುದ್ದಿನ ಮಗುವಾಗಿ ನಾ ಕಳೆವೆ ಬಾಳೆಲ್ಲ….!!

05. ಅನುರಾಗದ ಓಲೆ

ಓ ನನ್ನ ಮಿಂಚು ಕಂಗಳ ಚಲುವೆ
ನಿನಗೆಂದೆ ಬರೆಯುತಿರುವೆ ಪ್ರೇಮದೋಲೆ
ನೀ ಓದಿ ತಣಿವಾಗ ಎದೆಯೊಳಗೆ ಸ್ವರ ನಾದಲೀಲೆ
ನನ್ನದೆ ಗೂಡಲಿ ನೀನೊಂದು ಮರಿ ಕೋಗಿಲೆ
ನಿನ್ನ ಮಾತುಗಳೇ ನನ್ನ ಪದಗಳಿಗೆ ಸ್ಪೂರ್ತಿ ಸೆಲೆ
ಹೃದಯ ಸಿಂಹಾಸನದಿ ನೀನೆ ಇರುವೆ ಶಾಕುಂತಲೆ
ಏತಕೇ ಹೀಗೆ ಸತಾಯಿಸುವೆ ನೀ ಬೇಕಂತಲೆ
ನಾ ಬರಹದಲಿ ಹರಿಸ ಬಯಸುವೆ ನನ್ನೊಲವಿನ ಅಕ್ಷರಮಾಲೆ

ಆದರೂ ದೊರೆಯುತ್ತಿಲ್ಲ ನಿನ್ನೊಪ್ಪಿಗೆ ನನ್ನೊಲವಿನ ಮೇಲೆ
ನಿತ್ಯ ನಿರಂತರ ಈ ಪ್ರೆಮದ ನೌಕಾ ನಾಲೆ
ನಾ ಬಾಳ ಬಯಸಿರುವೆ ನನ್ನೊಂದಿಗೆ ಬಾಲೆ
ತೊರೆಯ ಬೇಕಿದೆ ಜಗದ ಎಲ್ಲ ಸಂಕೋಲೆ
ನಿನ್ನದೆಯಲಿ ಕಟ್ಟ ಬೇಕಿದೆ ಪ್ರೇಮದೂಗಳ ಸರಮಾಲೆ
ಪ್ರತಿಕ್ಷಣ ಮಿಡಿವದು ಹೃದಯ ನಿನ್ನ ಉಸಿರಿನ ಮೇಲೆ
ಅದಕ್ಕೆಂದೆ ಬೇಡುವೆ ದೇವನ ಹರಸಲು ನೀಡಿ ಪುಷ್ಪಮಾಲೆ
ಕರಗತ ಮಾಡಿಕೊಳ್ಳ ಬೇಕಿದೆ ಜನುಮಕ್ಕೂ ನಿನ್ನುಳಿಸಿಕೊಳ್ಳುವ ಕಲೆ
ಮುಂದಿನದೆಲ್ಲವೂ ಭಗವಂತನ ಕರುಣೆಯ ಋಣ ಮಾಲೆ
ನಾ ಬಯಸಿದ್ದಕ್ಕಿಂತ ಎಲ್ಲವೂ ಹಣೆಬರಹದ ಲೀಲೆ….!

‍ಲೇಖಕರು Avadhi

June 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: