- ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ ‘ತುಯ್ತವೆಲ್ಲ ನವ್ಯದತ್ತ : ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ ‘ (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು ಸುಚಿತ್ರ ಸಭಾಂಗಣದಲ್ಲಿ ಬಿಡುಗಡೆಗೊಳ್ಳುತ್ತಿವೆ.
- ‘ನಾನು ಸತ್ತಮೇಲೆ ‘ಕವನ ಸಂಕಲನದ ಒಂದು ಪದ್ಯಸಮ ಗದ್ಯಭಾಗವನ್ನು ಈಕೆಳಗೆ ಕೊಟ್ಟಿದೆ.
**
ಕವಿತೆ, ಏಕಾಂತ, ಲೋಕಾಂತ
**
… poetry makes nothing happen
… … … … … … …; it survives,
A way of happening, a mouth.
… … ಕವಿತೆಯಿಂದ ಏನೂ ಆಗುವುದಿಲ್ಲ, ಅದರಿಂ
ದೇನೂ ಹುಟ್ಟುವುದಿಲ್ಲ… … ಬದುಕುಳಿದು ಅದು
ಹೇಗೊ ಬಾಳಿಕೊಂಡಿರುತ್ತೆ. ಆಗುತ್ತ ಇರುವೊಂದು
ಬಗೆ ತಾನು ಎಂಬಂತೆ; ನಾಲಿಗೆ, ಬಾಯೆಂಬಂತೆ.
–ಇನ್ ಮೊಮೊರಿ ಆಫ್ ಡಬ್ಲ್ಯು.ಬಿ. ಯೇಟ್ಸ್, ಡಬ್ಲ್ಯು.ಎಚ್. ಆಡೆನ್
**
ಕವಿತೆಯಿಂದ ಏನೂ ಆಗದಿರಬಹುದು. ಆದರೂ ಇರುತ್ತದೆ ಅದು, ಆಗುತ್ತಿರುತ್ತದೆ. ಬೇಕು ಕವಿತೆ, ಆಗುತ್ತಿರಬೇಕು.
ಏನೂ ಹುಟ್ಟದಿರಬಹುದು ಅದರಿಂದ. ಆದರೆ ಅದಕ್ಕೊಂದು ಹುಟ್ಟಿರುತ್ತದೆ. ಆ ಹುಟ್ಟು ಎಲ್ಲಿಂದ? ಯಾವುದರಿಂದ?
ಕವಿ ಬದುಕುವುದು, ಎಲ್ಲರಂತೆ: ಲೋಕಾಂತವಾಗಿ. ಕವಿತೆ ಹುಟ್ಟುವುದು ಕವಿಯ ಮನಸ್ಸಿನ ಏಕಾಂತದ ಯಾವುದೋ ಮೂಲೆಯಲ್ಲಿ. ಏಕಾಂತದಲ್ಲಿ; ಏಕಾಂತದಿಂದ ಅಲ್ಲ.
ಆ ಏಕಾಂತ, ತಾನು ಸಲ್ಲಬೇಕಾದಲ್ಲಿ, ಲೋಕಾಂತಕಾಂತತೆಯಿಂದ ವಿದ್ಯುತ್ ಜಾಗರಗೊಂಡ ಏಕಾಂತವಾಗಬೇಕು.
ಏಕಾಂತ ಜಾಗೃತಗೊಳ್ಳಲು ಹವಣಿಸುವ ಪ್ರಜ್ಞೆ, ತಾಮ್ರದ ತಂತಿಯ ಸುರುಳಿ; ಲೋಕಾಂತ ಅದನ್ನು ಸುತ್ತುಗಟ್ಟಿರುವ ಅಯಸ್ಕಾಂತದ ಕೊಳವೆ.
ಲೋಕಾಂತದ ಅಯಸ್ಕಾಂತ ಗರ್ರನೆ ತಿರುಗಿದಾಗ ಏಕಾಂತದ ತಂತಿಯಲ್ಲಿ ಲೋಕಾನುಕಂಪ ಮತ್ತು ಸ್ಪಂದಗಳ ವಿದ್ಯುಜ್ಜಾಗರ. ಭಕ್ತ ದೇವರಿಂದ ಸ್ಪಂದಶಕ್ತಿ ಪಡೆದುಕೊಂಡಂತೆ, ಅದು.
ಲೋಕಾಂತ, ದೇವರು. ಏಕಾಂತ, ಭಕ್ತ.
ಅಥವಾ, ಲೋಕಾಂತದ ಅಯಸ್ಕಾಂತವು ಜಡವಾಗಿದ್ದರೆ, ಏಕಾಂತ ತಾನು ಅಂಥ ಲೋಕಾಂತವನ್ನು ಸುತ್ತುವರಿದಿರುವ, ವಿದ್ಯುತ್ ಜಾಗರಗೊಂಡ ತಂತಿಸುರುಳಿ. ತನ್ನಲ್ಲಿನ ವಿದ್ಯುತ್ತಿನಿಂದ ಆ ಅಯಸ್ಕಾಂತವನ್ನು ಎಚ್ಚರಿಸಿ, ವಾಪಸು ಅದರಿಂದಲೆ ಬಲಪಡೆದುಕೊಳ್ಳಬೇಕು ಅದು; ಗರ್ರನೆ ತಿರುಗಲು, ಆಡಲು ತೊಡಗಬೇಕು. ಭಕ್ತನು, ತನ್ನ ಭಕ್ತಿಯ ಬಲದಿಂದ, ಯೋಗನಿದ್ರೆಯಲ್ಲಿರುವ ಭಗವಂತನನ್ನು ಎಚ್ಚರಿಸಿ, ಮರಳಿ ಆ ಭಗವಂತನಿಂದಲೆ ಸ್ಪಂದಶಕ್ತಿ ಪಡೆದುಕೊಂಡಂತೆ, ಅದು.
ಆ ಎರಡೂ ಆಗುಹೋಗಿನಲ್ಲಿ, ಭಕ್ತ-ಏಕಾಂತ ಎಂಬ ಸುರುಳಿತಂತಿ ಭಗವಂತ-ಲೋಕಾಂತ ಎಂಬ ಅಯಸ್ಕಾಂತದಿಂದ ಸ್ಪಂದಶಕ್ತಿ ಪಡೆಯುವುದು ತನಗಾಗಿ ಅಲ್ಲ. ಬದಲು, ಆ ಸ್ಪಂದಶಕ್ತಿಯನ್ನು ಲೋಕದ ಒಳಿತಿಗೆ, ವಿಶ್ವ-ಬ್ರಹ್ಮಾಂಡದ ಒಳಿತಿಗೆ ವ್ಯಯಮಾಡಲೆಂದು, ಲೋಕಾಂತಕ್ಕೇ ಮರಳಿ ನೀಡಲೆಂದು – ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ.
ಕವಿತೆ ಹುಟ್ಟುವುದು ಏಕಾಂತಲೋಕಾಂತಗಳ ಮೈಥುನದ ಅಂಥ ವಿದ್ಯುಜ್ಜಾಗರದಿಂದ.
ಅಂಥ ಜಾಗರ ಮತ್ತು ಲೋಕಾಂತಭಕ್ತಿಯಿಲ್ಲದ ಆತ್ಮಲೀನಏಕಾಂತವು ಪಾತಕ, ಸಾವಿಗೆ ಸಮ.
ಮತ್ತು,
ಏಕಾಂತಕ್ಕೆ ತಾವಿಲ್ಲದ ಜಾಗರ, ಅತಿಲೋಕಾಂತರತಿ ಪ್ರೇತಾತ್ಮಗಳ ಹಪಾಪಿತನಕ್ಕೆ ಸಮ.
0 ಪ್ರತಿಕ್ರಿಯೆಗಳು