ಕಳೆದುಹೋಗುತ್ತಿರುವ ಸಾಲಿಗೆ ಶೆಟ್ರ ಅಂಗಡಿ, ಭಟ್ರ ಹೊಟೇಲು…

ಕೃಷ್ಣಮೋಹನ ತಲೆಂಗಳ

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ.

ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ.

ಇಲ್ಲಿನ ಬರಹ ನಮ್ಮ ತಾಣದ ಅಧಿಕೃತ ನಿಲುವಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ನೋಟವನ್ನು ರೂಪಿಸಲು ಇಲ್ಲಿ ಚರ್ಚೆಗೆ ತೆರೆದಿಡಲಾಗಿದೆ.

ನಿಮ್ಮ ಫೀಡ್ ಬ್ಯಾಕ್ ಪ್ರಕಟಣೆಗೆ ಅರ್ಹವಾಗುವಂತಿರಲಿ, ಚರ್ಚೆಯನ್ನು ಬೆಳೆಸುವಂತಿರಲಿ, ಟೀಕೆ  ಎಡಿಟ್ ಆಗುತ್ತದೆ..

ಶೆಟ್ರಂಗಡಿಯ ಶಾಪಿಂಗು ಹಾಗೂ ಭಟ್ರ ಹೊಟೇಲು ಗಂಜಿ ಊಟ ಮಾಡದೆ ಎಷ್ಟು ದಿನ ಆಯ್ತು?!

ಹಿಂದೆಲ್ಲ ನಾವು ದಿನಸಿ (ಜೀನಸಿ, ಕಟ್ಲೇರಿ) ಅಂಗಡಿಗೆ ಹೋದರೆ ಅಲ್ಲಿ ಅಕ್ಕಿ, ಬೇಳೆ ಮಾತ್ರ ಅಲ್ಲ, ತರಕಾರಿಯೂ ಸಿಗ್ತಾ ಇತ್ತು, ಚಪ್ಪಲಿಯೂ ಸಿಗ್ತಾ ಇತ್ತು, ಗೊಬ್ಬರ ಹೊರುವ ಬುಟ್ಟಿ, ದನಕ್ಕೆ ಹಾಕಲು ಹಿಂಡಿ, ಕುಡಿಯಲು ಗೋಲಿ ಸೋಡ, ತಿನ್ನಲು ಊರ ಬಾಳೆಹಣ್ಣು ಎಲ್ಲ ಅಲ್ಲೇ ಸಿಗ್ತಾ ಇತ್ತು. ತಂಪು ಹೆಂಚಿನ ಮಾಡಿನ, ಸಾರಣೆ ಮಾಡಿದ ನುಣುಪಾದ ನೆಲದ ಕೋಣೆ ತುಂಬೆಲ್ಲ ತುಂಬಿದ ಸಾಮಾನು, ಅಗರಬತ್ತಿ ಘಮ, ಸಾಂಬಾರ ಪದಾರ್ಥಗಳ ಘಾಟು, ಕಾಫಿ ಪುಡಿಯ ಪರಿಮಳ, ಕಾಯಿ ಹಿಂಡಿಯ ಸುವಾಸನೆ. ಮೂಲೆಯಿಂದ ರೇಡಿಯೊದಲ್ಲಿ ಕೇಳುವ ಚಿತ್ರಗೀತೆ. ಅದರೊಳಗೆ ಹೊಕ್ಕು ಬಂದರೆ ಎಂಥದ್ದೋ ಒಂದು ಕಣಜದೊಳಗೆ ಹೋಗಿ ಬಂದ ಅನುಭವ.

ದತ್ತಣ್ಣ ಅಭಿನಯದ ಭಾರತ್ ಸ್ಟೋರ್ಸ್ ಸಿನಿಮಾ ನೋಡಿದವರಿಗೆ ಈ ನೋವು ಅರ್ಥ ಆದೀತು. ಪೈಗಳು, ಶೆಟ್ರು, ಸಾಹೇಬ್ರು, ಸೋಜರ ಕಿರಾಣಿ ಅಂಗಡಿ ಅಂದ್ರೆ ಹಾಗೆ. ಅಲ್ಲಿ ರೇಟು ಕಮ್ಮಿ ಮಾಡಿ ಅಂತ ಚೊರೆ ಮಾಡಲು, ದುಡ್ಡು ಕಮ್ಮಿ ಆಯ್ತು, ಲೆಕ್ಕಕ್ಕೆ ಬರ್ಕೊಳ್ಳಿ ಅಂತ ಹೇಳಲು, ಒಂದು ಎಕ್ಸ್ ಟ್ರಾ ಕವರ್ ಕೊಡಿ, ಭಾರ ಉಂಟು ಅಂತ ಕೇಳಲು, ಡಬ್ಬಿಗೆ ಕೈ ಹಾಕಿ ಚಾಕಲೇಟ್ ತೆಗೆದು ತಿನ್ನಲು ಸ್ವಾತಂತ್ರ್ಯ ಇತ್ತು. ಇತ್ತು ಅಲ್ಲ, ಈಗಲೂ ಅಲ್ಲಿ ಇಲ್ಲಿ ಇರ್ತದೆ ಆದರೆ ಮುಂದೆಯೂ ಇರ್ತದಾ ಅನ್ನುವುದೇ ಪ್ರಶ್ನೆ?

ಥಿಯೇಟರ್ ಹೋಗಿ ಮಲ್ಟಿಪ್ಲೆಕ್ಸ್ ಬಂತು, ಮರದ ಕಟ್ಟೆಯಡಿ ಕೂದಲು ತೆಗೆಯುತ್ತಿದ್ದ ಕಾಲ ಇತಿಹಾಸವಾಗಿ ಸೆಲೂನು ಅಂಗಡಿಗಳು ಬಂದವು, ಮನೆಮನೆಗೆ ಗಾಡಿ ದೂಡಿಕೊಂಡು ಮಾರಾಟವಾಗುತ್ತಿದ್ದ ತರಕಾರಿ ಆನ್ ಲೈನಿನಲ್ಲೇ ಬರಲು ಶುರುವಾಯಿತು. ಹಾಗೆಯೇ ಕಿರಾಣಿ ಅಂಗಡಿ ಸಹ! ಮಾಲ್ ಗಳು ಬಂದ ಮೇಲೆ ಕಿರಾಣಿ ಅಂಗಡಿ ಸಪ್ಪೆ ಅಂತ ಅನ್ನಿಸ್ತಾ ಇದೆ. ರಸ್ತೆ ಅಗಲ ಆಗುವಲ್ಲಿ, ಚತುಷ್ಪಥ ಆಗುವಲ್ಲಿ ಧಾರಾಶಾಹಿಯಾಗ್ತಾ ಬಂದ ಸಾವಿರಾರು ಕಿರಾಣಿ ಅಂಗಡಿಗಳು ಮತ್ತೆ ತಲೆ ಎತ್ಲೇ ಇಲ್ಲ. ಅಲ್ಲೇ ಅಕ್ಕಪಕ್ಕ ಹೊಸ ಹೊಸ ಮಾಲುಗಳು ಹುಟ್ಟಿಕೊಂಡವು. ಸೀದಾ ಕಾರಿನಲ್ಲಿ ಹೋಗಿ, ಪಾರ್ಕಿಂಗಿಗೆ ದುಡ್ಡು ಕೊಟ್ಟು, ನಾಲ್ಕಾರು ಮಾಳಿಗೆಯನ್ನು ಎ.ಸಿ. ತಂಪಿನಲ್ಲಿ ಸುತ್ತಾಡಿ, ಕಟ್ಟಿಟ್ಟ ಸಾಮಾನುಗಳನ್ನು ದೂಸ್ರಾ ಮಾತಿಲ್ಲದೆ ಬುಟ್ಟಿಗೆ ಹಾಕಿ ತಂದು ಬಿಲ್ಲಿಂಗ್ ಸೆಕ್ಷನಿನಲ್ಲಿ ಕೇಳಿದ ದುಡ್ಡನ್ನು ಸ್ವೈಪ್ ಮಾಡಿ ಬಂದು, ಚೀಲಕ್ಕೆ ಪ್ರತ್ಯೇಕ, ಪ್ಯಾಕಿಂಗಿಗೆ ಪ್ರತ್ಯೇತ ದುಡ್ಡು ಕೊಟ್ಟು ಹೊರಗೆ ಬಂದಾಗ ಸಾರ್ಥಕತೆಯ ಭಾವ! “ಶಾಪಿಂಗ್ ಮಾಡಿ” ಬಂದಿದ್ದೇವೆ ಅಂತ.

ಅವರ ಮುಗಿಲೆತ್ತರದ ಕಟ್ಟಡ, ಅಲ್ಲಿನ ಹವಾನಿಯಂತ್ರಿತ ಕೊಠಡಿಗಳು, ನೂರಾರು ಸಿಬ್ಬಂದಿ, ಸೆಕ್ಯೂರಿಟಿ, ಸಿಸಿ ಕೆಮರಾ ಎಲ್ಲದರ ಮೊತ್ತವೂ ನಮ್ಮ ಖರೀದಿಯಲ್ಲಿ ಅಡಕವಾಗಿರ್ತದೆ ಅನ್ನುವ ಸರಳ ಸತ್ಯವೂ ನಮಗೆ ತಿಳಿಯುವುದಿಲ್ಲ. ನಮ್ಮೂರಿನ ಶೆಟ್ರು, ಕಾಮತರು, ಭಟ್ರು, ಸಾಹೇಬ್ರ ಅಂಗಡಿಯ ದುಡ್ಡು ಎಲ್ಲಿಗೆ ಹೋಗ್ತದೆ ಅಂತ ಗೊತ್ತುಂಟು. ನಮ್ಮೂರಲ್ಲೇ ಹೂಡಿಕೆ ಆಗ್ತದೆ. ಮಾಲುಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಅಂಗಡಿಗಳಿಗೆ ನೀಡಿ ಬರುವ ದುಡ್ಡು ಮತ್ತೆಲ್ಲಿಗೆ ಹೋಗ್ತದೆ ಅಂತ ಗೊತ್ತೇ ಆಗುವುದಿಲ್ಲ! ಅದು ನಮ್ಮ ಲೆಕ್ಕಾಚಾರದ ವ್ಯಾಪ್ತಿ ಮೀರಿದ್ದು.
ಆರ್ಥಿಕ ಸ್ವಾಭಿಮಾನದ ವಿಚಾರ ಬಿಡಿ.

ಒಂದು ಕಾಲದಲ್ಲಿ 50-60 ರುಪಾಯಿಗೆ ಆರಾಮವಾಗಿ ಸಾಮಾನ್ಯ ಥಿಯೇಟರುಗಳಲ್ಲಿ ಸಿನಿಮಾ ನೋಡಿ ಬರಬಹುದಿತ್ತು. ಇಡೀ ಮನೆ ಮಂದಿ 200-300 ರುಪಾಯಿಗಳಲ್ಲಿ ಕುಟುಂಬ ಸಮೇತ ಸಿನಿಮಾ ನೋಡಬಹುದಿತ್ತು. ಇವತ್ತು ಹಾಗಲ್ಲ. ಒಂದೊಂದು ಸಿನಿಮಾಗೆ ಟಿಕೆಟ್ಟಿಗೇ 200-500 ರುಪಾಯಿ. ಮತ್ತೆ ನಮ್ಮದೇ ಮನೆಯಿಂದ ತಿನ್ನಲು ಏನೂ ಒಯ್ಯುವ ಹಾಗಿಲ್ಲ, ಅಲ್ಲಿ ಸಿಗುವ ಪಾಪ್ ಕಾರ್ನಿಗೆ ನಾಲ್ಕೈದು ಪಟ್ಟು ದುಡ್ಡು ಕೊಟ್ಟು, ದುಬಾರಿ ತಂಪು ಪಾನೀಯವನ್ನೇ ಖರೀದಿಸಿ ಕೊಂಡೊಯ್ಯಬೇಕು. ಇತ್ತೀಚೆಗೆ ನೀರು ಕೊಂಡು ಹೋಗಲು ಅನುಮತಿ ಸಿಕ್ಕಿದೆ. ಇಲ್ಲವಾದರೆ ಅದಕ್ಕೂ ಅವಕಾಶ ಇಲ್ಲ. ಕೆಳಗೆ ವಾಹನ ಪಾರ್ಕಿಂಗ್ ಮಾಡಿದ್ದಕ್ಕೂ ದುಡ್ಡು ಕೊಡಬೇಕು. ಸುಮಾರು ನಾಲ್ಕು ಮಂದಿ ತಿಂಡಿ ತಿಂದು ಇಂಥಹ ಕಡೆ ಸಿನಿಮಾ ನೋಡಲು 2000-2500 ರುಪಾಯಿ ಬೇಕು! ಆದರೂ ನಾವು ಹೇಳುವ ನೆಪಗಳು… “ಈಗ ಥಿಯೇಟರಿಗೆ ಯಾರು ಹೋಗ್ತಾರೆ, ಅಲ್ಲಿ ಬೀಡಿ ವಾಸನೆ, ಅಲ್ಲಿ ದುರ್ಗಂಧ, ಉಗುಳ್ತಾರೆ, ಸೆಕೆ, ಫ್ಯಾನು ಸರಿ ಇಲ್ಲ, ಸೌಂಡು ಸರಿ ಇಲ್ಲ, ಸೀಟು ಸರಿ ಇಲ್ಲ.” ಹುಟ್ಟಿ 20-30 ವರ್ಷ ಅಂಥದ್ದೇ ಥಿಯೇಟರಿನಲ್ಲೇ ಸಿನಿಮಾ ನೋಡುತ್ತಾ ಬಂದ ನನ್ನ ಸಮಕಾಲೀನರಿಗೂ ಈಗ ಮಾಮೂಲಿ ಥಿಯೇಟರುಗಳು ಬೋರಿಂಗು, ಹೇಸಿಗೆ, ಅಸಹ್ಯ ಅನ್ನಿಸ್ತಾ ಇದೆ. ಮಾತ್ರವಲ್ಲ, ಶೇ.90ರಷ್ಟು ಥಿಯೇಟರುಗಳು ನಾನಾ ಕಾರಣಗಳನ್ನು ನೀಡಿ ನೆಲಸಮವಾಗಿವೆ. ಮತ್ತೆ ಆ ಜಾಗದಲ್ಲಿ ಏಳುವುದು ಮಾಲುಗಳು ಮಾತ್ರ… ದುಡ್ಡು ನಾಲ್ಕು ಪಟ್ಟು ಖರ್ಚಾದರೂ ತೊಂದರೆ ಇಲ್ಲ… ನಮಗೆ ಈಗ ಆರಾಮವಾಗಿ, ಸುಲಭವಾಗಿ, ಮೈಕೈಚಾಚಿ…. ರೇಡಿಮೇಡಿ ಪಾಪ್ ಕಾರ್ನ್ ತಿನ್ನುತ್ತಾ ನೋಡುವ ಸಿನಿಮಾ ಬೇಕು.


ಕೆಲ ವರ್ಷಗಳ ಹಿಂದೆ ಮಂಗಳೂರಿನ ಅಶೋಕ ವರ್ಧನ ಅವರು ಒಂದು ಹೋರಾಟ ಶುರು ಮಾಡಿದ್ರು, ಮಲ್ಟಿಪೆಕ್ಸ್ ಥಿಯೇಟರುಗಳಿಗೆ ಕಡ್ಲೆ ಕೊಂಡು ಹೋಗಲು ಬಿಡಬೇಕು ಅಂತ!. ಇದು ಸಿಲ್ಲಿ ಅಂತ ಅನ್ನಿಸಬಹುದು. ಆದರೆ, ಸಿಲ್ಲಿ ಅಲ್ಲ, ಈ ಹೋರಾಟದ ಹಿಂದೆ ಒಂದು ಉದ್ದೇಶ ಇದೆ. ನೀವು ಹೇಳಿದ ಟಿಕೆಟ್ ದುಡ್ಡು ಕೊಡ್ತೇವೆ, ವಾಹನ ನಿಲುಗಡೆ ದುಡ್ಡು ಕೊಡ್ತೇವೆ. ನಮ್ಮ ಮನೆಯ ಆಹಾರ ಕೊಂಡು ಹೋಗಬಾರದು ಅಂದರೆ ಏನರ್ಥ. (ಆಗ ನೀರಿನ ಶೀಷೆ ಸಮೇತ ಕೊಂಡೊಯ್ಯುವ ಹಾಗೇ ಇರಲಿಲ್ಲ). ದುಬಾರಿ ಟಿಕೆಟ್ ತೆತ್ತು, ಅವರ ನಿರ್ಬಂಧಗಳನ್ನೆಲ್ಲ ಒಪ್ಪಿ ದೂಸ್ರಾ ಮಾತಿಲ್ಲದೆ ಅಲ್ಲಿ ಸಿಕ್ಕುವುದನ್ನೇ ತಿಂದು ತೆಪ್ಪಗೆ ಸಿನಿಮಾ ನೋಡಿ ಬರ್ತೇವೆ, ಯಾಕೆ ಪಾಪ್ ಕಾರ್ನ್ ತಿಂದ್ರೆ ಅಲ್ಲಿ ಕಸ ಆಗುವುದಿಲ್ವ, ಗಲೀಜು ಆಗುವುದಿಲ್ವ? ನನ್ನ ಮನೆಯ ನೀರು ನಾನು ಕೊಂಡು ಹೋಗಿ ಕುಡಿಯಬಾರದು ಅಂದ್ರೆ ಯಾವ ಸೀಮೆ ನಿರ್ಬಂಧ ಇದು? ಅಶೋಕ ವರ್ಧನರ ನಿಲುವು ಖಂಡಿತಾ ಸರಿಯಾಗಿದೆ.

ನಾನು ದುಡ್ಡು ತೆತ್ತ ಮೇಲೆ ನನ್ನ ಸ್ವಾತಂತ್ರ್ಯವನ್ನೇ ಮೊಟಕುಗೊಳಿಸುವಂತಹ ವಿಲಕ್ಷಣ ನಿಯಮಗಳನ್ನು ಹಾಕುವುದು ಹಾಸ್ಯಾಸ್ಪದ. ಆದರೂ ನಮಗೆಲ್ಲ ಇದು ಪ್ರಶ್ನಿಸಬೇಕಾದ ವಿಚಾರ ಅಂತ ಅನ್ನಿಸುವುದೇ ಇಲ್ಲ! ಭಾರತೀಯ ರೈಲಿನಲ್ಲಿ ಪ್ರಯಾಣಿಸುವಾಗ ಸಿಕ್ಕಸಿಕ್ಕಲ್ಲಿ ಕಸ ಎಸೆದು, ಉಗುಳಿ ಗಲೀಜು ಮಾಡುವವರೂ ಸಹ, ಬೆಂಗಳೂರು ಮೆಟ್ರೋದಲ್ಲಿ ತೆರಳುವಾಗ “ಅತ್ಯಂತ ಶಿಸ್ತುಬದ್ಧ”ರಾಗಿರ್ತಾರೆ. ಅದು ಪರಿಸರ, ನಿರ್ಬಂಧ, ಬಿಂಬಿಸುವಿಕೆಯನ್ನು ಅವಲಂಬಿಸಿರ್ತದೆ.


ಇಲ್ಲಿ ಮಲ್ಟಿಪ್ಲೆಕ್ಸ್ ಬಗ್ಗೆ ಹೇಳಿದ್ದು ಒಂದು ಉದಾರಹಣೆ ಅಷ್ಟೇ. ಇದು ಜಾಗತೀಕರಣ, ಆರ್ಥಿಕ ದಿವಾಳಿತನ, ಸ್ವದೇಶಿ ಕಲ್ಪನೆ ಇತ್ಯಾದಿ ಯಾವುದೇ ಹೋರಾಟಗಳ ಹಿನ್ನೆಲೆಯ ಚಿಂತನೆ ಅಲ್ಲ. ನಗರೀಕರಣ, ಸೌಕರ್ಯಗಳು ಜಾಸ್ತಿ ಆದ ಹಾಗೆ, ನಾವು ಜಾಸ್ತಿ ದುಡ್ಡು ಖರ್ಚು ಮಾಡ್ತೇವೆ, ಸ್ವಾತಂತ್ರ್ಯ ಕಳೆದುಕೊಳ್ತೇವೆ, ನಿರ್ಬಂಧ ಜಾಸ್ತಿ ಇರ್ತದೆ, ಏನೋ ಕೃತಕ, ಅಸಹಜ ವಾತಾವರಣದಲ್ಲಿ, ಭಯಪೀಡಿತರ ಹಾಗಿದ್ದು, ಎಲ್ಲದಕ್ಕೂ ತಲೆಯಾಡಿಸಿ ಕುಳಿತ ಹಾಗೆ. ಡಿಗ್ನಿಟಿ, ಸ್ಟೇಟಸ್ಸು, ಜೀವನಮಟ್ಟದ ಸುಧಾರಣೆ ಅಂದ್ರೆ ಹೀಗೆಯೋ ಏನೋ, ನಮ್ಮೂರ ಭಟ್ರ ಹೊಟೇಲಿನಲ್ಲೂ ಅಷ್ಟೆ, ಮರದ ಹಳೆ ಬೆಂಚಿನಲ್ಲಿ ಕುಳಿತು ಬಾಳೆ ಎಲೆ ಹಾಕಿದರೆ ಅನ್ ಲಿಮಿಟೆಡ್ ರೈಸು, ಮಾವಿನಹಣ್ಣಿನ ಒಗ್ಗರಣೆ ಹಾಕಿದ ಗೊಜ್ಜು, ಗಂಜಿ, ಖಾರದ ಚಟ್ನಿ, ಹುರಿದ ಮೆಣಸು, ಮೊಸರು, ಕುಡಿಯಲು ಮಜ್ಜಿಗೆ… ಬೀಸುವ ತಂಪು ಗಾಳಿ, ಊರ ರಾಜಕೀಯದ ಲೊಟ್ಟೆ ಹರಟೆ, ಎಲ್ಲ ಇರ್ತದೆ. ಎಲ್ರೂ ಜೊತೆಯಾಗಿ ಖುಷಿಯಿಂದ ಉಂಡು ಬರುವಾಗ 30-40 ರುಪಾಯಿ ಚಾರ್ಜ್ ಮಾಡಿಯಾರು ಅಷ್ಟೇ, ಅಲ್ಲಿ ನಿಮಗೆ ಸಪ್ಲೈಯರು, ಕುಕ್ಕು, ಕ್ಲೀನರು, ಕ್ಯಾಶಿಯರು ಎಲ್ಲ ಅವರೇ ಆಗಿರ್ತಾರೆ. ಎ.ಸಿ. ರೂಂ ಇರುವುದಿಲ್ಲ. ಹೋದಾಗ ಬಾಗಿಲು ತೆರೆಯಲು (ಕೆಲವು ಇಂತಹ ಭಟ್ರ ಹೊಟೇಲುಗಳಿಗೆ ಬಾಗಿಲೇ ಇರುವುದಿಲ್ಲ), ನಡು ಬಾಗಿಸಿ ನಮಸ್ಕಾರ ಮಾಡುವವರು, ಕಾರಿನ ಬಾಗಿಲು ತೆಗೆದುಕೊಡುವವರು, ವಿಶೇಷವಾಗಿ ಆರ್ಡರ್ ತೆಗೆದುಕೊಳ್ಳುವವರು, ಕೈತೊಳೆಯಲು ಲಿಂಬೆ ಹಣ್ಣು ಹಾಕಿದ ನೀರು ತಂದು ಇಡುವವರು ಯಾರೂ ಇರುವುದಿಲ್ಲ. ಕೆಲವು ಹಳ್ಳಿ ಹೊಟೇಲುಗಳಲ್ಲಿ ಬಾಲ್ದಿಯಿಂದ ನೀರು ತೆಗೆದು ಮಗ್ಗಿನಲ್ಲಿ ಕೈತೊಳೆಯಬೇಕು. ಆದರೂ ಆ ಊಟದ ಸುಖ, ಖುಷಿ, ಸ್ವಾತಂತ್ರ್ಯ 3,5 ಸ್ಟಾರು ಹೊಟೇಲುಗಳ ವಿಚಿತ್ರ ಗಾಂಭೀರ್ಯದ ಪರಿಸರ, ಅತಿ ವಿನಯದ ವರ್ತನೆ, ಹೊಟ್ಟೆಗೇ ಹಿಡಿಸದ ಅನಗತ್ಯ ಪದಾರ್ಥಗಳ ಮೆನು, ಗಂಟೆಗಟ್ಟಲೇ ಕಾಯುವ ಅಸಹನೆ ಯಾವುದರಲ್ಲೂ ಸಿಗುವುದಿಲ್ಲ (ನನಗಂತೂ ಸಿಗುವುದಿಲ್ಲ, ನನ್ನ ಅನುಭವ ಅಷ್ಟೇ).

ಅಂತಹ ಹೊಟೇಲುಗಳು ಈಗ ವಿರಳಾತಿವಿರಳ. ನಡೆಸಲು ಅವರು ಕಷ್ಟ ಪಡ್ತಾರೆ. ಕಡಿಮೆ ಖರ್ಚಿಗೆ ಹೊಟ್ಟೆಗೆ ಸುಖ ಕೊಡುವ ಗಂಜಿ ಊಟ, ದೋಸೆ, ಇಡ್ಲಿ, ಚಹಾ ಮಾಡಿ ಕೊಡುವ, ಅಲ್ಪ ಲಾಭದಲ್ಲಿ ತೃಪ್ತಿ ಪಡೆಯುವ, ಗ್ರಾಹಕರನ್ನೆಲ್ಲ ನೆನಪಿಟ್ಟು, ನಗು ಮುಖದಿಂದ ಮಾತನಾಡಿಸಿ, ಊರಿನ ಸುದ್ದಿಗೆಲ್ಲ ಕಿವಿ, ಬಾಯಿಯಾಗುವ ಹೊಟೇಲುಗಳ ಸರಳ ಮಾಲೀಕರು, ಮೆಸ್ಸುಗಳು ಕಾಣೆಯಾಗುತ್ತಾ ಬರ್ತಾ ಇವೆ. ಅಲ್ಲಿ ವ್ಯವಹಾರದಷ್ಟೇ ಪ್ರೀತಿ, ಆತ್ಮೀಯತೆ, ವೈಯಕ್ತಿಕ ಬಾಂಧವ್ಯ ಇತ್ತು. ಯಾವುದೇ ದೊಡ್ಡ ಹೊಟೇಲುಗಳಿಗೆ ಹೋಗಿ, ಊಟದ ಬಳಿಕ ನಿಮ್ಮಲ್ಲಿ ದುಡ್ಡು ಕಡಿಮೆಯಾದರೆ, “ನಾಳೆ ಕೊಡ್ತೇನೆ” ಈಗಿಲ್ಲ ಅಂತ ಹೇಳಿದರೆ ಅವರು ಬಿಟ್ಟಾರ?! ಖಂಡಿತಾ ಬಿಡ್ಲಿಕಿಲ್ಲ. ಅಲ್ಲಿ ವಿಶ್ವಾಸ, ನಂಬಿಕೆ, ಭಾವುಕತೆಗೆ ಬೆಲೆ ಇಲ್ಲ. ಏನಿದ್ದರೂ ವ್ಯವಹಾರ ಅಷ್ಟೇ. ನಾನು ಬಂಡವಾಳ ಹಾಕಿದ್ದೇನೆ, ಲಾಭ ಬೇಕು ಅಷ್ಟೇ… ಅದು ಖಂಡಿತಾ ತಪ್ಪಲ್ಲ, ಅದು ವ್ಯವಹಾರದ ಸೂತ್ರ. ಅವರದನ್ನು ಮಾಡಲೇಬೇಕು. ಸಿಸಿ ಕ್ಯಾಮೆರಾ, ಸ್ವೈಪ್ ಮಾಡಿ ಪ್ರವೇಶ, ಟಿಪ್ಸು, ವಿಶಾಲ ಪಾರ್ಕಿಂಗ್, ದೊಡ್ಡ ದೊಡ್ಡ ಟೀವಿಗಳು, ವಿಶಾಲ ಟೇಬಲ್ಲುಗಳು, ಯೂನಿಫಾರಂ ಹಾಕಿದ ಸಿಬ್ಬಂದಿ… ಎಲ್ಲ ಒಂದು ಅಂತಸ್ತು, ಒಂದು ಘನತೆ, ಒಂದು ಅಲಿಖಿತ ಶಿಸ್ತಿನ ವಾತಾವರಣ ಸೃಷ್ಟಿಸಿರ್ತದೆ. ಸತ್ಯ ಹೇಳ್ತೇನೆ… ನನಗೆ ಸ್ವತಂತ್ರವಾಗಿ ಸ್ನೇಹಿತರ ಜೊತೆ ಮಾತನಾಡಲೂ ಆಗದ, ಬೇಕಾದ ಹಾಗೆ ವೈಟರ್ ಜೊತೆ ಚರ್ಚೆ ಮಾಡಲು ಆಗದ, ಹೊಟ್ಟೆಗೆ ಖುಷಿ ನೀಡುವ ಸರಳ ಆಹಾರ ಸಿಕ್ಕದೆ ಹೊಟೇಲು ಎಷ್ಟೇ ದೊಡ್ಡದಾಗಿದ್ದರೂ ಖುಷಿ ಕೊಡುವುದಿಲ್ಲ… ನಿಮಗೆ ಖುಷಿ ಕೊಡ್ತದ? ಗೊತ್ತಿಲ್ಲ.

ಇಷ್ಟೆಲ್ಲ ಹೇಳಿದ್ದು ಯಾಕೆ ಅಂದ್ರೆ… ಕಿರಾಣಿ ಅಂಗಡಿಗಳ ಖರೀದಿಯ ಸುಖದಿಂದ ನಾವು ವಂಚಿತರಾಗ್ತಾ ಇದ್ದೇವೆ. ಮಾಲುಗಳ ದೊಡ್ಡ ದೊಡ್ಡ ಚೈನ್ ಸ್ಟೋರುಗಳು, ಸೂಪರ್ ಬಜಾರ್ ಗಳು ಬಂದ ಮೇಲೆ, ಆನ್ ಲೈನಿನಲ್ಲೇ ಎಲ್ಲ ಮನೆ ಬಾಗಿಲಿಗೇ ಬರಲು ಶುರುವಾದ ಮೇಲೆ ಎಂಥದ್ದಕ್ಕೂ ಅಂಗಡಿಗೆ ಹೋಗಬೇಕಾದಿಲ್ಲ. ನನ್ನೂರಿನ ಶಿವಾನಂದ ಪೈ ಅಂಗಡಿ, ಕೇಶವ ಶೆಟ್ರ ಜೀನಸಿ ಅಂಗಡಿಗಳೂ ಅಷ್ಟೇ… ಇವತ್ತಿಗೂ ಅಲ್ಲಿ ತೆಂಗಿನಕಾಯಿ, ಹಾಲು, ಜೀನಸಿ, ತರಕಾರಿಯಿಂದ ಹಿಡಿದು ಎಲ್ಲವೂ ಸಿಗ್ತದೆ. ಅಕ್ಕಿಯನ್ನು ನಾವೇ ಮುಟ್ಟಿ ನೋಡಿ, ಎಷ್ಟೊತ್ತು ಬೇಯ್ತದೆ ಅಂತ ಕೇಳಲು ಬಿಡ್ತಾರೆ, ಬೆಲ್ಲ ಗಟ್ಟಿ ಇದೆಯೇ ಅಂತ ನೋಡಲು ಬಿಡ್ತಾರೆ, ಸಮಾರಂಭಗಳಿಗೆ ಜೀನಸಿ ಕೊಂಡು ಹೋದರೆ ಮಿಕ್ಕ ವಸ್ತುಗಳನ್ನು ವಾಪಸ್ ತಗೊಳ್ತಾರೆ. ಇವತ್ತು ದುಡ್ಡು ಕಡಿಮೆ ಆದರೆ, ನಾಳೆ ಕೊಟ್ರೂ ನಡೀತದೆ ಅಂತಾರೆ, ಲಿಸ್ಟು, ಬಿಲ್ಲು ಮುಗಿದ ಮೇಲೆ ಅದೊಂದು ಸೋಪು ಬಾಕಿ ಆಯ್ತು ಅಂದ್ರೆ, ಬೇಸರ ಇಲ್ಲದೆ ಕಟ್ಟಿ ಕೊಡ್ತಾರೆ… ಎಲ್ಲದಕ್ಕಿಂತ ಹೆಚ್ಚಾಗಿ ನಗು ಮುಖದಿಂದ ಮಾತನಾಡಿಸ್ತಾರೆ… ಕೇಳಿದ ಸಾಮಾನು ಇಲ್ಲದೆ ಹೋದರೆ ನಾಳೆ ತರಿಸಿ ಆದರೂ ಕೊಡ್ತಾರೆ… ನಾಳೆ ನಮ್ಮೂರಿನಲ್ಲೂ ರಸ್ತೆ ಅಗಲವಾಗುವಾಗ ಅಗತ್ಯ ಬಿದ್ರೆ ಇಂತಹ ಅಂಗಡಿಗಳನ್ನೂ ಕೆಡವುತ್ತಾರೆ, ತಾಕತ್ತಿರುವವರು ಎದುರಿಗೇ ದೊಡ್ಡ ಮಾಲು ಕಟ್ತಾರೆ… ಅಲ್ಲಿಗೆ ಒಂದೊಂದೇ ಅಂಗಡಿಗಳು ನೆಲಸಮವಾಗ್ತವೆ ಮಾತ್ರವಲ್ಲ, ಕಿರಾಣಿ ಅಂಗಡಿಯ “ಅಂದಿ ಕಾಲತ್ತಿಲ್” ಕಂಡ ಶಾಪಿಂಗಿನ ಆಪ್ತ ಅನುಭವ ಸಹಿತ ಸತ್ತೇ ಹೋಗ್ತದೆ… ಪೈಗಳಿಗೆ, ಶೆಟ್ರಿಗೆ, ಭಟ್ರಿಗೆ ಬಹುರಾಷ್ಟ್ರೀಯ ಕಂಪನಿಯವರಿಗೆ ಪೈಪೋಟಿ ನೋಡಿ ಹತ್ತು ಅಂತಸ್ತಿನ ಕಟ್ಟಡ ಕಟ್ಟುವಷ್ಟು ತಾಕತ್ತು ಇರ್ಲಿಕಿಲ್ಲ, ಕಟ್ಟಿದರೂ ಅದನ್ನು ನಡೆಸುವಷ್ಟು ಸಂಪನ್ಮೂಲ ಸಿಗ್ಲಿಕಿಲ್ಲ…. ಸಿಕ್ರೂ ನಮ್ಮೂರಿನ ಶೆಟ್ರು, ಭಟ್ರು ನಡೆಸುವ ಮಾಲುಗಳು ಜನರನ್ನು ಆಕರ್ಷಿಸ್ಲಿಕೂ ಇಲ್ಲ….

ಇವತ್ತು ನೀವು ಕಾಪು, ಪಡುಬಿದ್ರಿ, ಬ್ರಹ್ಮಾವರ, ಸಾಲಿಗ್ರಾಮ, ಕೋಟ ಕಡೆಗೆ ಹೋದರೆ ನಿಮಗೆ ರಸ್ತೆ ಭಯಂಕರ ಅಗಲವಾಗಿ, ಮರಗಳೆಲ್ಲ ನಾಶವಾಗಿ ಯಾವ ಊರಿಗೆ ತಲುಪಿದ್ದು ಅಂತಲೇ ತಿಳಿಯುವುದಿಲ್ಲ. ಮೇಲ್ಕಾರ್, ಕಲ್ಲಡ್ಕ, ಸೂರಿಕುಮೇರು, ಮಾಣಿಯ ಪರಿಸ್ಥಿತಿ ಅರ್ಧಕ್ಕರ್ಧ ಹೀಗಾಗಿ ಆಗಿದೆ. ಇನ್ನು ಮುಂದೆ ಉದ್ಯಾವರ, ಉಪ್ಪಳ, ಬಂದ್ಯೋಡು, ಕುಂಬಳೆ ಭಾಗಗಳೂ ಹೀಗಾಗುವ ಹಂತದಲ್ಲಿ ಇವೆ. ಕಾಮಗಾರಿ ಪ್ರಗತಿಯಲ್ಲಿದೆ. ಮರಗಳು, ಹೆಂಚಿನ ಸಾಲು ಕಟ್ಟಡಗಳು, ಚಂದದ ಶಾಲೆಗಳು, ಅಂಕುಡೊಂಕು ತೆಂಗಿನ ಮರಗಳು ಎಲ್ಲ ಮಣ್ಣು ಪಾಲಾಗ್ತಿವೆ. ಆ ಜಾಗದಲ್ಲಿ ವೇಗವಾಗಿ ಸಾಗಲು ಅನುಕೂಲವಾಗುವ ಚತುಷ್ಪಥ ಹೈವೇ ಬರ್ತದೆ. ಭೀಕರ ಹೈವೇಯ ಎರಡೂ ಪಕ್ಕ ಬೇಲಿ ಹಕ್ತಾರೆ. ನಡುವಿನ ಚತುಷ್ಪಥಕ್ಕೆ ಸುಂಕ ವಿಧಿಸ್ತಾರೆ. ಬೇಡದವರು ಸರ್ವಿಸ್ ರೋಡಿನಲ್ಲಿ ಹೋಗಿ ಹೇಳ್ತಾರೆ.

ಈ ಊರಿನವ ರಸ್ತೆಯ ಈಚೆ ಬದಿ ಮನೆ ಇದ್ರೆ, ಆಚೆ ಬದಿಯ ಅಂಗಡಿಗೆ ಹೋಗಲು ನಾಲ್ಕು ಕಿ.ಮೀ. ಮುಂದೆ ಹೋಗಿ, ಡಿವೈಡರು ಹುಡುಕಿ ರಸ್ತೆ ದಾಟಿ ಆಚೆ ಹೋಗಬೇಕು!!!! ಮತ್ತೆ ಇನ್ನೊಂದು ಕಡೆ ನಾಲ್ಕು ಕೀ.ಮೀ. ಅನಾವಶ್ಯಕ ಹೋಗಿ ಡಿವೈಡರ್ ಇರುವಲ್ಲಿ ಮರಳಬೇಕು. ನಡೆದುಕೊಂಡು ರಸ್ತೆ ದಾಟುವ ಅಂದರೆ, ಬೇಲಿ ಹಾಕ್ತಾರೆ. ಇದಕ್ಕೆ ಪರಿಹಾರವೇ ಇಲ್ಲ. ಕಂಡ ಕಂಡಲ್ಲಿ ಅಂಡರ್ ಪಾಸ್ ನಿರ್ಮಿಸಲೂ ಆಗುವುದಿಲ್ಲ…

ಇಂಥಕ್ಕೇ ಕಳೆದುಹೋಗುತ್ತಿರುವ ಸಾಲಿಗೆ ಶೆಟ್ರ ಅಂಗಡಿ, ಭಟ್ರ ಹೊಟೇಲು ಸೇರಿ ಆಗಿದೆ. ಹೆಸರೇ ತಿಳಿಯದ ಊರಿನ ವಿಶಾಲ ಅಶ್ವತ್ಥ ಮರದಡಿಯ ಕೆಂಪು ಹೆಂಚಿನ, ಹೊಗೆ ಹಿಡಿದ ಹೊಟೇಲಿನ ಎದುರಿನ ಅಂಗಳದ ಅಲುಗಾಡುವ ಮರದ ಬೆಂಚಿನ ಮೇಲೆ ಕುಳಿತು ಹಸಿರು ಬಾಳೆ ಎಲೆಯಲ್ಲಿ ಗಂಜಿ ಊಟ ಉಣ್ಣುವ ಖುಷಿ ಅಸ್ಪಷ್ಟ ಅಸ್ಪಷ್ಟ ಆಗ್ತಾ ಇದೆ…. ಅಭಿವೃದ್ಧಿಯ ವೇಗ, ಸಮಕಾಲೀನರಾಗುವ ನಮ್ಮ ಹುಚ್ಚು ಭ್ರಮೆ, “ಎಂತ ಮಾಡಿದರೂ ನಮ್ಮ ಒಳ್ಳೆಯದಕ್ಕೇ” ಎಂಬ ಅಮಾಯಕತೆ ಹಾಗೂ ನಾವೇನು ಕಳೆದುಕೊಳ್ಳುತ್ತಿದ್ದೇವೆ ಎಂಬ ಕಲ್ಪನೆಯನ್ನು ಹೆಚ್ಚು ಬೆಳೆಸದೇ ಇರುವ ಕಾರಣ… ನಾವೆಷ್ಟು ನಿರ್ಲಿಪ್ತಾ ಆಗ್ತಾ ಇದ್ದೇವೆ ಎಂದರೆ, ನಮಗೆ ಕಳೆದುಕೊಂಡು ಹೋಗ್ತಾ ಇದ್ದಷ್ಟೂ ಎಂಥದ್ದೂ ಅನ್ನಿಸುವುದೇ ಇಲ್ಲ…! ಮಾಲುಗಳಲ್ಲಿ ಶಾಪಿಂಗ್ ಮಾಡಿ, ನಮ್ಮದೇ ಗಾಡಿ ನಿಲ್ಲಿಸಿದ್ದಕ್ಕೆ ಕೇಳಿದ ದುಡ್ಡು ಕೊಟ್ಟು ಲೀಟರಿಗೆ ನಾಲ್ಕು ಪಟ್ಟು ದುಡ್ಡು ಕೊಟ್ಟು ಮಿನರಲ್ ವಾಟರ್ ಕುಡಿದು ಢರ್ರನೆ ತೇಗುವಾಗ ನಾನೂ ಸಮಕಾಲೀನನಾದೆ ಅಂತ ವಿಚಿತ್ರವಾಗಿ ಹೆಮ್ಮೆ ಅನುಭವಿಸ್ತೇವೆ… ಎಲ್ಲದಕ್ಕೂ ಸುಲಭವಾಗಿ ಅಜಸ್ಟ್ ಆಗ್ತಾ ಇದ್ದೇವೆ.. ಅಯಾಚಿತವಾಗಿ…! ನಿಮಗೆ ಹಾಗನ್ನಿಸ್ತದ? ಅನ್ನಿಸಿದ್ರೆ ದಯವಿಟ್ಟು ಕಮೆಂಟು ಮಾಡಿ (ಕೊನೆ ತನಕ ತಾಳ್ಮೆಯಿಂದ ಓದಿದ್ರೆ).

‍ಲೇಖಕರು avadhi

March 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ravi jewaragi

    ಇವತ್ತಿಗೂ ನಾನು ನಮ್ಮ ಮನೆ ಹತ್ತಿರದ ಕಿರಾಣಿ ( ದಿನಸಿ) ಅಂಗಡಿಯಲ್ಲಿ ದಿನಸಿಯನ್ನು ತರುತ್ತೇನೆ.
    ಇಂತಹ ಆತ್ಮೀಯತೆ ಮತ್ತೆಲ್ಲೂ ಸಿಗಲ್ಲ.
    ರವಿ.ಜೇವರಗಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: