
ಹೇಮಾ ಹೆಬ್ಬಗೋಡಿ
ನಿನ್ನೆ ಸಂಜೆ ಬಾದಾಮಿಯ ಇತಿಹಾಸಜ್ಞರಾಗಿದ್ದ ಡಾ.ಶೀಲಾಕಾಂತ ಪತ್ತಾರ ಸರ್ ನಿಧನರಾದರು. ಅವರು ಕರ್ನಾಟಕದ ಕಲೆ, ಇತಿಹಾಸ ಕುರಿತು ಹಲವು ಕೃತಿಗಳನ್ನು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಬರೆದಿದ್ದಾರೆ. ʼಬಾದಾಮಿ – ಒಂದು ಸಾಂಸ್ಕೃತಿಕ ಅಧ್ಯಯನʼ ಎನ್ನುವ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ ಪಡೆದಿದ್ದರು.
ಬಾದಾಮಿ ಶಿಲ್ಪಕಾಶಿ, ಕರ್ನಾಟಕ ಸಾಂಪ್ರದಾಯಿಕ ಶಿಲ್ಪಕಲೆ, ಪಟ್ಟದಕಲ್ಲು ದರ್ಶನ, ಬಾದಾಮಿ ಚಾಲುಕ್ಯ ಶಿಲ್ಪಕಲೆ, ಬಾದಾಮಿ ಚಾಲುಕ್ಯರ ಅಲಂಕಾರ ಶಿಲ್ಪಗಳು, ದಿ ಸಿಂಗಿಂಗ್ ರಾಕ್ಸ್ ಆಫ್ ಬಾದಾಮಿ, ದಿ ವಿಶನ್ ಆಫ್ ಮೌನೇಶ್ವರ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ʼಕಲ್ಲೋಜʼ ಇವರಿಗೆ ಸಲ್ಲಿಸಿದ ಅಭಿನಂದನಾ ಗ್ರಂಥ.
ಬಾದಾಮಿಗೆ ಹೋಗ್ತಿದಿವಿ ಅಂದಾಗ ಓ ಎಲ್ ಎನ್ ಸರ್ ಮರೆಯದೆ ಇಬ್ಬರನ್ನು ಮಾತಾಡಿಸಿಬರಬೇಕು ಅಂದರು. ಒಬ್ಬರು ಕಸ್ತೂರಿ ಬಾಯಿರಿ ಮತ್ತೊಬ್ಬರು ಶೀಲಾಕಾಂತ ಪತ್ತಾರ. ಒಬ್ಬರ ಬರವಣಿಗೆ ಅಷ್ಟಿಷ್ಟು ಓದಿಯಷ್ಟೇ ಗೊತ್ತು. ಶೀಲಾಕಾಂತ ಪತ್ತಾರ ಯಾರು ಅಂತ ಹುಡುಕಿದಾಗ ಗೊತ್ತಾದದ್ದು ಬಾದಾಮಿಯ ಇತಿಹಾಸವನ್ನು, ಅದರ ಕಲ್ಲಿನ ಕತೆಗಳನ್ನು ಕುರಿತು ಬಹಳ ಆಳವಾದ ಅಧ್ಯಯನ ಮಾಡಿದವರು.

ಬಾದಾಮಿಯ ಕತೆಯನ್ನು ಇಂತಹವರಿಂದ ಕೇಳೋ ಅವಕಾಶ ತಪ್ಪಿಸಬಾರದೆಂದು ಆ ಸಂಜೆ ಅವರನ್ನು ನೋಡಲು ಹೋದೆವು.
ಅದೊಂದು ಕಲ್ಲಿನ ಕತೆಗಳ ಕೇಳಿದ ಸಂಜೆ..
ಬಾದಾಮಿಯ ಇತಿಹಾಸ, ಭಾಷೆ, ಶಿಲ್ಪವನ್ನು ನೋಡುವ ಕ್ರಮಗಳ ಕುರಿತ ಅವರ ಮಾತುಗಳು ಮರೆಯಲಾರದ್ದು..
ಆ ಸಂಜೆಯ ಮಾತುಕತೆಯಲ್ಲಿ ಕೆಲವು..
ʼಈ ಟಿವಿ ನ್ಯೂಸ್‌ಗಳವ್ರು, ಧಾರವಾಹಿಗಳವರು ಕನ್ನಡ ಭಾಷೆಯ ಸೂಕ್ಷ್ಮತೆಯನ್ನ ಹಾಳುಗೆಡವ್ತಿದಾರ. ಇವರುಗಳು ಆಡೋ ಮಾತು ಕೇಳಲು ಏನಾದರೂ ಚಂದ ಇರ್ತದೇನು? ನಮ್ಮೂರಿನ ಹೆಣ್ಮಕ್ಳು ಆಡೋ ಮಾತು ಕೇಳಿ ಇವರು ಕನ್ನಡ ಕಲೀಬೇಕು. ನಮ್ಮಲ್ಲಿ ಇನ್ನೊಂದು ದುರಂತ ಆಗಿದ್ದು ಅಂದ್ರೆ ಮೈಸೂರು ಭಾಗದ ಕನ್ನಡವೇ ಶ್ರೇಷ್ಠ ಅನ್ನೋ ಹಂಗ ಮಾಡಿ ಈ ಭಾಗದ ಕನ್ನಡದ ಸೊಗಡು ಮುಖ್ಯವಾಹಿನಿಯೊಳಗೆ ಬರದಂಗ ಮಾಡಿದಾರ.ʼ
ʼಜಾರ್ಜ್ ಮಿಶೆಲ್ ಅಂತೇಳಿ ವಿದ್ವಾಂಸ ಇಲ್ಲಿ ನಮ್ಮ ಬಾದಾಮಿ, ಐಹೊಳೆ, ಪಟ್ಟದಕಲ್ಲು ಅಧ್ಯಯನ ಮಾಡೋಕೆ ಬಂದಿದ್ರು. ಎಷ್ಟು ಶಿಸ್ತಿನ ಅಧ್ಯಯನ ಮಾಡ್ತಾರ ಅಂದ್ರ ಅವರನ್ನ ನೋಡಿ ಕಲಿಬೇಕು. ಬೆಳಕು ಹರೀತಿದ್ದಂಗೆ ಸೈಟಿಗೆ ಹೋಗೋರು. ಹೊತ್ತು ಮುಳುಗೋವರೆಗೂ ಅಲ್ಲೇ ಇದ್ದು ಅಧ್ಯಯನ ಮಾಡೋರು. ಆ ಮನುಷ್ಯ ಈ ಗೋಪುರ, ಶಿಲ್ಪಗಳನ್ನ ಅಳತೆ ಮಾಡಿ ಬರೆದುಕೊಳ್ಳೋರು. ಅವರ ಅಳತೆ ಮಾಡ್ತಿದ್ದದ್ದು ಇಂಚಿನ ಲೆಕ್ಕದಲ್ಲಿ ಅಲ್ಲ ಮಿ.ಮೀಟರ್ ಲೆಕ್ಕದಲ್ಲಿ ಅಳತೆ ಮಾಡೋರು ಅಷ್ಟು ನಿಖರವಾಗಿರಬೇಕು ಅಂತ ಹೇಳಿ.ʼ
ʼವಿಜಯನಗರ ಸಾಮ್ರಾಜ್ಯಕ್ಕಿಂತ ಬಾದಾಮಿ ಚಾಲುಕ್ಯರು ಹಿಂದಿನವರು. ಇಲ್ಲಿನ ಶಿಲ್ಪ ಕೆತ್ತನೆಯ ವೈಭವ, ಆ ಕಾಲದ ಹಿನ್ನಲೆಯೊಳಗೆ ನೋಡಿದರೆ ಅದೊಂದು ಅದ್ಭುತ. ಆದರೆ ಬಾದಾಮಿಗೆ ಸಿಗಬೇಕಾದಷ್ಟು ಮಾನ್ಯತೆ ಸಿಕ್ಕಿಲ್ಲ. ಇಲ್ಲಿನ ಪ್ರತಿಮೆಗಳನ್ನು ನೋಡಿದ್ರೇನು ಆಳೆತ್ತರ. ವಿಷ್ಣು, ಶಿವನ ಆಳೆತ್ತರದ ಶಿಲ್ಪಗಳನ್ನು ಆ ಕಾಲದಾಗ ಹ್ಯಾಂಗ ಕೆತ್ತಿರಬೇಕು. ಗುಡ್ಡವನ್ನು ಕಡಿದು ಗುಹಾಂತರ ದೇವಾಲಯ ಮಾಡಿದಾರ ಅಂದ್ರ ಸುಮ್ನೇ ಏನು?ʼ
ʼತಂಜಾವೂರಿನೊಳಗ ಬೃಹದೇಶ್ವರ ದೇವಸ್ಥಾನದ ದ್ವಾರದಲ್ಲಿ ಒಬ್ಬ ಕಾವಲುಗಾರನ ಶಿಲ್ಪ ಅದ. ಅದನ್ನು ಕೆತ್ತಿದ ಶಿಲ್ಪಿಯ ಕಲ್ಪನೆ ಎಷ್ಟು ಅದ್ಭುತ ನೋಡಿ. ಗುಡಿ ಒಳಗ ಇರೋನು ಬೃಹದೇಶ್ವರ. ದೊಡ್ಡ ಗಾತ್ರದ ಲಿಂಗ. ಇಡೀ ಲೋಕಕ್ಕೆ ಒಡೆಯ. ಅವನ ಗರ್ಭಗುಡಿಯನ್ನ ಕಾಯುವಂತ ಕಾವಲುಗಾರ ಎಷ್ಟು ಶಕ್ತಿವಂತನಾಗಿರಬೇಡ ಹೇಳಿ. ಅದನ್ನ ತೋರಿಸಾಕ ಅಂವ ಏನ್ ಮಾಡನಾ ಅಂದ್ರ ಆಳೆತ್ತರದ ಆ ಕಾವಲುಗಾರ ಕೈಯಲ್ಲಿ ಒಂದು ದೊಡ್ಡ ಗದೆ ಕೊಟ್ಟು ಆ ಗದೆಯನ್ನ ಅಂವ ತನ್ನ ಹೆಬ್ಬೆರಳಿನ ಉಗುರಿನ ಮೇಲೆ ಹಿಡಿದು ನಿಲ್ಲೋ ಹಂಗ ಮಾಡ್ಯಾನ. ಅಂದ್ರ ಅಷ್ಟು ದೊಡ್ಡ ಗದೆಯನ್ನು ಬರೀ ಒಂದು ಉಗುರಿನ ಮ್ಯಾಲೆ ಹಿಡಿದು ನಿಲ್ತಾನ ಅಂದ್ರ ಅಂವ ಎಷ್ಟು ಬಲಶಾಲಿ ಇರಬೇಕು ಹೌದಲ್ಲೋ?ʼ
ನಿನ್ನೆ ಸಂಜೆ ಪತ್ತಾರ ಸರ್ ಹೋಗಿಬಿಟ್ರು ಅಂದಾಕ್ಷಣ ಅವರೊಡನೆ ಆ ಸಂಜೆ ಆ ಕತೆಗಳು ನೆನಪಾದವು.
0 ಪ್ರತಿಕ್ರಿಯೆಗಳು