ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ
**
ಸಾಹಿತಿ ಡಾ ಕೆ ಎಸ್ ಪವಿತ್ರ ಅವರ ಕೃತಿ ‘ಕಂಡದ್ದು ಕಡಲು’.
ಈ ಕೃತಿಯನ್ನು ಶುಭದಾ ಎಂಟರ್ಪ್ರೈಸಸ್ ಅವರು ಪ್ರಕಟಿಸಿದ್ದಾರೆ.
ಸಾಹಿತಿ ಪ್ರೊ. ಜಿ. ಎನ್. ಉಪಾಧ್ಯ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.
**
‘ಕಂಡದ್ದು ಕಡಲು’ ಇದು ಡಾ. ಕೆ. ಎಸ್. ಪವಿತ್ರ ಅವರ ಇತ್ತೀಚಿನ ಕೃತಿ. ಇವರು ಹೆಸರಾಂತ ಮನೋವೈದ್ಯರು. ಪ್ರಸಿದ್ಧ ಲೇಖಕರಾಗಿ, ಪ್ರತಿಭಾವಂತ ನೃತ್ಯ ಕಲಾವಿದರಾಗಿ, ಚಿಂತಕರಾಗಿ ಅವರು ಸೈ ಎನಿಸಿಕೊಂಡಿದ್ದಾರೆ. ವ್ಯಾಪಕ ಓದು, ಅಧ್ಯಯನ, ಬರವಣಿಗೆ, ನೃತ್ಯ ಪ್ರದರ್ಶನಗಳ ಮೂಲಕ ತಮ್ಮ ಕ್ರಿಯಾಶೀಲ ವ್ಯಕ್ತಿತ್ವವನ್ನು ಲೋಕಮುಖಕ್ಕೆ ತೋರಿಸಿಕೊಟ್ಟ ಪ್ರತಿಭಾ ಸಂಪನ್ನರೂ ಹೌದು.ಲಲಿತಕಲೆ, ಸೃಜನಶೀಲ ಹಾಗೂ ಮಾನಸಿಕ ಆರೋಗ್ಯ ಅವರು ಆಳವಾಗಿ ಅಧ್ಯಯನ ಮಾಡಿರುವ ವಿಶಿಷ್ಟ ಕ್ಷೇತ್ರಗಳು. ಈ ಭಿನ್ನ ವಿಭಿನ್ನ ವಲಯಗಳ ಚಿಂತನೆಗಳನ್ನು ನಲವತ್ತ್ಮೂರು ಲೇಖನಗಳಲ್ಲಿ ಸಾಂದ್ರವಾಗಿ ಸೆರೆಹಿಡಿದಿರುವುದು ಪ್ರಸಕ್ತ ಕೃತಿಯ ಹೆಚ್ಚುಗಾರಿಕೆ. ಈ ಸಂಕಲನದ ಲೇಖನಗಳೆಲ್ಲ ನಾಡಿನ ವಿವಿಧ ಪತ್ರಿಕೆಗಳಲ್ಲಿ ಈಗಾಗಲೇ ಬೆಳಕು ಕಂಡವುಗಳೇ ಆಗಿದ್ದು , ನೃತ್ಯ, ಸಂಗೀತ ಹಾಗೂ ಇತರ ಲಲಿತಕಲೆಗಳಿಗೆ ಸಂಬಂಧ ಪಟ್ಟಂತೆ ಅವರು ರಚಿಸಿರುವ ಪುಸ್ತಕಗಳಲ್ಲಿ ಇದು ಐದನೆಯದು ಎಂಬುದು ಗಮನೀಯ ಅಂಶ. ಡಾ. ಪವಿತ್ರ ಅವರ ಮನೋಧರ್ಮ ಸೃಜನಾತ್ಮಕವೂ ವಿಮರ್ಶಾತ್ಮಕವೂ ಆಗಿರುವುದು ಒಂದು ಅಸಾಧಾರಣ ಸಂಗತಿ.
ಸಾಂಪ್ರತ ಕೃತಿಯಲ್ಲಿ ಎರಡು ಒಳತೆನೆಗಳಿದ್ದು ಭಾಗ ಒಂದು ನರ್ತನ ಜಗತ್ತಿನೊಳಗಿನ ವಿದ್ಯಮಾನಗಳ ಜಿಜ್ಞಾಸೆ ಇದ್ದರೆ ಭಾಗ ಎರಡು ನೃತ್ಯದ ಸುತ್ತ ಮುತ್ತ ಚಾಚಿಕೊಂಡಿದೆ. ನರ್ತನದ ಜಗತ್ತು ಅಗಾಧವಾದದ್ದು. ನೃತ್ಯದ ಒಂದೊಂದು ಚಲನೆ ನೋಟ- ಮುದ್ರೆಗೂ ಹಲವು ಅರ್ಥಗಳು ಸಾಧ್ಯವಿರುವಂತೆಯೇ ನೃತ್ಯಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಂಬಂಧಿಸಿದ ಪ್ರತಿಯೊಂದಕ್ಕೂ ಹಲವು ಅರ್ಥಗಳು, ವಿಶ್ಲೇಷಣೆಗಳು ಸಾಧ್ಯವಿದೆ. ‘ನನ್ನ ಸ್ವಾನುಭವ ೩೦ ವರ್ಷಗಳ ನೃತ್ಯ ಜಗತ್ತಿನೊಂದಿಗಿನ ಒಡನಾಟ ಇವು ಇಲ್ಲಿ ಬರೆಹದ ರೂಪ ತಾಳಿವೆ’ ಎಂಬ ಅವರ ಮನೋಗತ ಇಲ್ಲಿನ ಲೇಖನಗಳಲ್ಲಿ ಸಶಕ್ತವಾಗಿ ಮಿಂಚಿದೆ. ತಂತ್ರಜ್ಞಾನ ಬಲ ಇವತ್ತು ನೃತ್ಯಕ್ಕೆ ಹೆಚ್ಚಾಗಿದೆ. ಒಂದು ರೀತಿಯಲ್ಲಿ ರಿಹರ್ಸಲ್ ಅಗತ್ಯವನ್ನು ಇದು ಕಡಿಮೆ ಮಾಡಿದರೆ ಇನ್ನೊಂದು ರೀತಿಯಲ್ಲಿ ಹೆಚ್ಚು ಮಾಡಿದೆ. ‘ರಿಹರ್ಸಲ್’ ಎನ್ನುವುದು ಜೀವನಕಲೆಗೂ ಬೇಕಾದ ಹಲವು ಅಂಶಗಳನ್ನು ಕಲಿಸುತ್ತದಷ್ಟೆ. ಹಾಗಾಗಿ ಕಲೆ ತಲೆಯೆತ್ತುವ ಮೊದಲು, ತೆರೆಯೆತ್ತುವ ಮುನ್ನ ‘ರಿಹರ್ಸಲ್’ ಎಂಬ ಪ್ರಕ್ರಿಯೆಯನ್ನು ಕಲಾಜಗತ್ತು ಅಲಕ್ಷಿಸುವಂತಿಲ್ಲ ಎಂಬ ಕಿವಿಮಾತು ಎಲ್ಲ ಕಾಲಕ್ಕೂ ಸಲ್ಲುತ್ತದೆ.
‘ನೃತ್ಯ ಎಂಬ ಕಲೆಗೆ ಹಲವು ಗುರುಗಳು’ ಎಂಬ ಲೇಖನ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ನೃತ್ಯ ಕಲಿಯುವಾಗ ಹಲವು ಗುರುಗಳು ಬೇಕೇ ಬೇಕು. ಇಲ್ಲಿ ಗುರುವೆಂದರೆ ಮಾನವ ಗುರು ಅಷ್ಟೇ ಅಲ್ಲ. ನೃತ್ಯದ ಮೊದಲ ಗುರು ನಮ್ಮ ದೇಹ. ದೇಹವನ್ನು ಸೂಕ್ಷ್ಮವಾಗಿ ಗಮನಿಸುವುದು, ಪ್ರತಿಯೊಂದು ಅಂಗದಲ್ಲಾಗುವ ಬದಲಾವಣೆಯ ಅರಿವು ಇವು ಕಲಿಸುವಂತಹದ್ದು ಬಹಳಷ್ಟು. ನೃತ್ಯದ ಎರಡನೆಯ ಗುರು ಸಂಗೀತ. ನೃತ್ಯ ಕಲಾವಿದರ ದೇಹ ಮನಸ್ಸುಗಳು ಸಂಗೀತವನ್ನು ನರ್ತಿಸಬೇಕು. ನೋಡುವಿಕೆ, ಜೀವನಾನುಭವ ಸಹ ಪರಮಗುರು. ಎಷ್ಟೇ ಜನರಿಗೆ ನೃತ್ಯ ಹೇಳಿಕೊಟ್ಟ ಗುರುವೂ ದೇಹ-ಸಂಗೀತ-ಸಾಹಿತ್ಯದ ಓದು- ಇತರ ಕಲೆಗಳ ನೋಡುವಿಕೆ-ಜೀವನಾನುಭವ ಇವುಗಳ ಮುಂದೆ ಗುರು ಎಂಬ ಉಪಾಧಿಯ ಬದಲು, ‘ವಿದ್ಯಾರ್ಥಿ’ ಎಂಬ ಶೀರ್ಷಿಕೆಯನ್ನೇ ಸ್ವೀಕರಿಸ ಬೇಕಾಗುತ್ತದೆ! ಆದ್ದರಿಂದಲೇ ನೃತ್ಯ ಕಲಿಯುವ ಹಾದಿಯಲ್ಲಿ ಸತತ ಮಾರ್ಗದರ್ಶನ ಮಾಡಲು ಹಲವು ಗುರುಗಳು! ಎಂಬ ಮಾತು ಮಾರ್ಮಿಕವಾಗಿದೆ. ಕಲಾವಿದ ಅಥವಾ ಲೇಖಕ ಯಾರೇ ಆಗಿರಲಿ. ಸಾಹಿತ್ಯವನ್ನು ಲಘುವಾಗಿ ಪರಿಗಣಿಸಬಾರದು ಎಂಬುದನ್ನು ಉದಾಹರಣೆ ಸಹಿತ ಸೊಗಸಾಗಿ ವಿವರಿಸಿದ್ದಾರೆ.
ಡಿವಿಜಿ ಅವರ ಪುಸ್ತಕದ ಪೂರ್ತಿ ಹೆಸರು ‘ಅಂತಃಪುರ ಗೀತೆ’ಯಲ್ಲ. ಅದು ನಿಜವಾಗಿ ‘ಶ್ರೀ ಚನ್ನಕೇಶವ ಅಂತಃಪುರ ಗೀತೆ’. ಡಿ.ವಿ.ಜಿ. ಯವರ ಸಂಸ್ಕೃತ ಜ್ಞಾನವೂ ಸಂಸ್ಕೃತದಲ್ಲಿ ಬರೆಯುವ ‘ಅಂತಃಪುರ’ ವನ್ನೇ ಉಪಯೋಗಿಸಿರಬೇಕು. ಮುನ್ನುಡಿ ೧ ಮತ್ತು ೨ ರಲ್ಲಿ ಚಿತ್ರಪಟಗಳು, ಶಿಲ್ಪಗಳ ಬಗ್ಗೆ ಡಿ.ವಿ.ಜಿ.ಯವರು ಸಹಜವಾಗಿ ಒತ್ತು ನೀಡಿದ್ದಾರೆ. “ಎಷ್ಟು ಓದಿದರೂ ನೋಡಿದ್ದಕ್ಕೆ ಸಮನಾಗದು. ಹೋಗಿ ನೋಡಬೇಕು -ತೆರೆದ ಕಣ್ಣಿಂದ ನೋಡಬೇಕು” ಎನ್ನುವ ಅವರ ಮಾತುಗಳು ಈ ಗೀತೆಗಳನ್ನು ಹಾಡುವ-ನರ್ತಿಸುವ ಕಲಾವಿದರೂ ಒಮ್ಮೆಯಾದರೂ ಅಲ್ಲಿಗೆ ಹೋಗಿ ನೋಡಬೇಕು ಎಂಬ ಸೂಚನೆಯೂ ಹೌದು. ಹೀಗೆ ಒಬ್ಬ ಕವಿಯ ರಚನೆಯನ್ನು ನಾನಾ ಆಯಾಮಗಳಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಗತ್ಯವನ್ನು ಅವರು ಒತ್ತಿಹೇಳಿ ವಿಶ್ಲೇಷಣೆ ಮಾಡಿರುವುದು ವರ್ತಮಾನದ ಜರೂರು ಸಹ ಆಗಿದೆ. ಇದನ್ನೇ ಇನ್ನಷ್ಟು ಅಧ್ಯಾತ್ಮದ ಭಾಷೆಯಲ್ಲಿ ಹೇಳುವ ಡಿ.ವಿ.ಜಿ. ಕೊನೆಯ ಗೀತೆಯಲ್ಲಿ ಅದ್ವೈತಯೋಗ ‘ಕೇಶವ ವೇದ’ ವನ್ನಾಗಿಸುತ್ತಾರೆ.
ಆಸೆ, ಆಸೆ – ಮೂಡಿಸುವವರು, ಆಸೆ ಪಡುವರು ಮೂರೂ ಒಂದೇ ಆಗುವುದು ‘ಶೃಂಗಾರ’ ದಿಂದ ಸಾಧ್ಯವೆನಿಸುತ್ತದೆ. ಕಳವಳ ಕಳೆದು ನೆಮ್ಮದಿಗೆ ದಾರಿಯಾಗುತ್ತದೆ! ಅಂತಃಪುರ ಗೀತೆಗಳ ಅಂತರಂಗದಲ್ಲಿ ಶೃಂಗಾರವೂ ದೈವತ್ವಕ್ಕೇ ದಾರಿಯಾಗುತ್ತದೆ. ಪು.ತಿ.ನ.ರಂತೆ ಡಿ.ವಿ.ಜಿ. ಯವರ ಕಾವ್ಯವೂ ಜೀವನ ಪ್ರೀತಿಯಿಂದ, ಜೀವನ ಶ್ರದ್ಧೆಯಿಂದ, ತೃಪ್ತ ಮನಸ್ಸಿನಿಂದ ಸೃಷ್ಟಿಯಾದದ್ದು. ಪ್ರೌಢಶಾಲೆ ಮುಗಿಸುವ ಹೊತ್ತಿಗಾಗಲೇ ಮದುವೆಯಾಗಿದ್ದ ಡಿ.ವಿ.ಜಿ.ಯವರು “ಗೃಹಸ್ಥ ಜೀವನವೇ ಒಂದು ಜೀವನಶಿಕ್ಷಣ” ಎಂಬುದನ್ನು ಸ್ವಾನುಭವದಿಂದಲೇ ಹೇಳಿರಬಹುದು. ಹಲವು ಕಷ್ಟಗಳ ನಡುವೆಯೂ ಜೀವನದ ವಿಮುಖತೆಯಿಂದಲ್ಲದೆ, ಜೀವನ ಪ್ರೀತಿಯಿಂದ ಕಾವ್ಯವು ಹುಟ್ಟುತ್ತದೆ ಎಂಬುದು ಗಮನಾರ್ಹ. ಅಂದ ಮೇಲೆ ಇಂಥ ಕಾವ್ಯದಿಂದ ಜೀವನಪ್ರೀತಿ ಕಲಾಪ್ರೇಮ ಹುಟ್ಟುವುದರಲ್ಲಿ ಅಚ್ಚರಿಯೇನು? ಹೀಗೆ ಪವಿತ್ರ ಅವರ ಬಹುಮುಖ ಪ್ರತಿಭೆಯಿಂದ ಗಂಭೀರ ವಿವೇಚನೆಯಿಂದ ಇಡೀ ಕೃತಿ ನೃತ್ಯ, ಕಲಾ ಜಗತ್ತು, ಕಲೋಪಾಸನೆ, ರಸ ಸಿದ್ಧಿ, ವಿಚಾರ ವಿಮರ್ಶೆ, ಚಿಂತನ ಮಂಥನಗಳಿಂದ ಮಡುಗಟ್ಟಿರುವುದು ವಿಶೇಷ. ಅಂತಿಮವಾಗಿ ಜೀವನವಿದು ಪರಮಕಲೆ ಎಂಬ ಗಟ್ಟಿಯಾದ ನಿಲುವು ಇಲ್ಲಿ ಪ್ರಕಟವಾಗಿದೆ.
ಕಲೆಯಲ್ಲರಳಬಹುದೇ ಹೆಣ್ಣು ಮನ? ಎಂಬ ಪ್ರಶ್ನೆಯನ್ನು ಎತ್ತುತ್ತಲೇ ಕಲೆಗಳಲ್ಲಿ ಹೆಚ್ಚಿನವಕ್ಕೆ ಸ್ಫೂರ್ತಿ ಹೆಣ್ಣೇ. ಸಂಗೀತ, ನೃತ್ಯಗಳಂತೆ ಕಲಾ ಕ್ಷೇತ್ರಕ್ಕೂ ಸ್ತ್ರೀವಾದ ಎಂಬ ವಿಷಯಕ್ಕೂ ಇರುವ ಸಂಬಂಧ ಅತ್ಯಂತ ಹತ್ತಿರದ್ದು. ಹೀಗಿದ್ದೂ ಲಾಗಾಯ್ತಿನಿಂದಲೂ ಲಲಿತಕಲೆಗಳಲ್ಲಿ ಮುಖ್ಯ ಪ್ರಕಾರವಾದ ಚಿತ್ರಕಲೆಯಲ್ಲಿ ಮಹಿಳೆ ಸಾಗಿ ಬಂದ ಹಾದಿ ಸುಗಮವಾಗಿರಲಿಲ್ಲ. ಮೊನ್ನೆ ಮೊನ್ನೆಯವರೆಗೂ ಚಿತ್ರಕಲಾ ರಂಗದಲ್ಲಿ ಈ ಬರಗಾಲ ಮುಂದುವರಿದಿತ್ತು. ಇದಕ್ಕೆಸಮಾಜ ಮತ್ತು ಶಿಕ್ಷಣ ಕಾರಣ ಎಂಬುದನ್ನು ಬೊಟ್ಟು ಮಾಡಿ ತೋರಿಸುತ್ತಲೇ ಮಹಿಳಾ ಕಲಾವಲಯದ ಕೂಗು ಅಳಲುಗಳಿಗೆ ಈ ಲೇಖನ ಧ್ವನಿಯಾಗಿದೆ. ಹೇಳಬೇಕಾದುದನ್ನು ಪೊಗದಸ್ತಾಗಿ ಮುಲಾಜಿಲ್ಲದೆ ನೇರವಾಗಿ ಹೇಳುವುದು ಪವಿತ್ರ ಅವರ ಬರವಣಿಗೆಯ ಅತಿಶಯತೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ತನ್ನ ಅಸ್ತಿತ್ವಕ್ಕಾಗಿ ಅನುಗಾಲವೂ ಹೋರಾಟ ಮಾಡುತ್ತಲೇ ಬರಬೇಕಾದ ಪರಿಸ್ಥಿತಿಯಿದೆ. “ಕಲೆಯಲ್ಲಿ ಲಿಂಗಭೇದ ಇಂದಿಗೂ ಜೀವಂತವಾಗಿದೆ! ಕಲಾವಿದೆಯರ ಕಲೆ ‘ಅಡುಗೆ ಮನೆ ಸಾಹಿತ್ಯ’ದಂತೆ ಅವಗಣನೆಗೆ ತುತ್ತಾಗಿದೆ. ಸಿಗಬೇಕಾದ ಮನ್ನಣೆ ಸುಲಭವಲ್ಲ. ಇದು ಪಾಶ್ಚಾತ್ಯ-ಪೌರ್ವಾತ್ಯ ಜಗತ್ತುಗಳೆರಡರಲ್ಲಿಯೂ ನಿಜ ಎನ್ನುತ್ತಲೇ ಚಿತ್ರಕಲೆಯಲ್ಲಿ ಹೆಣ್ಣು ಮನ ಅರಳಬೇಕಾದ್ದು ಎರಡು ಮಹತ್ವದ ಕಾರಣಗಳನ್ನು ಕೊಟ್ಟಿದ್ದಾರೆ.
ಮೊದಲನೆಯದು ಅದು ಮಹಿಳೆಯರ ಮನಸ್ಸಿಗೆ ‘ಚಿಕಿತ್ಸಕ’ ಎಂಬ ದೃಷ್ಟಿಯಿಂದ. ಮನಸ್ಸಿನ ರಕ್ಷಣಾ ತಂತ್ರಗಳಲ್ಲಿ ‘Sublimation’ ಎಂಬ ಪ್ರಬುದ್ಧ ರಕ್ಷಣಾ ತಂತ್ರವಿದೆ. ಮನಸ್ಸಿನ ಅತೃಪ್ತ ಆಸೆ-ಆಕಾಂಕ್ಷೆಗಳು ಮಾನಸಿಕ ವ್ಯಾಧಿಯಾಗುವ ಬದಲು, ಸುಂದರ ಕಲಾಕೃತಿಯಾಗಿ ಹೊರಹೊಮ್ಮಿ ಮನಸ್ಸನ್ನು ಸ್ವಸ್ಥವಾಗಿ ಅರಳಿಸುವುದು ಈ ತಂತ್ರದಿಂದ ನಡೆಯುವ ಕಾರ್ಯ. ಮೂರ್ತವಾದ ಬಣ್ಣ-ರೇಖೆ- ಆಕೃತಿಗಳಿಂದ ಕೂಡಿಯೂ, ಅಮೂರ್ತವಾಗಿರಬಹುದಾದ ಚಿತ್ರಕಲೆ ‘Sublimation’ ತಂತ್ರದ ಅತ್ಯುತ್ತಮ ಅಭಿವ್ಯಕ್ತಿ. ಎರಡನೆಯದು ಮಹಿಳೆ ಕಲಾವಿದೆಯಾಗಿ ಭಾಗವಹಿಸದ ಚಿತ್ರಕಲಾ ಜಗತ್ತು ಸೃಜನಶೀಲತೆ-ಕ್ರಿಯಾಶೀಲತೆ-ಹೊಸತು ಅನುಭವಗಳ ಬಡತನದಿಂದ ನರಳುತ್ತದೆ. ಅಂದ ಮೇಲೆ ತನ್ನ ಅನುಭವಗಳನ್ನು ಸೂಕ್ಷ್ಮತೆಯಿಂದ, ಧೈರ್ಯದಿಂದ ಜಗತ್ತಿಗೆ ಕಲೆಯ ಮೂಲಕ ಹೇಳಲು ಹೆಣ್ಣಿಗೆ ದೊಡ್ಡ ಕ್ಯಾನ್ವಾಸ್ ನಾವು ನೀಡಲೇಬೇಕು ಎಂಬ ದೃಢ ನಿಲುವು ಇಲ್ಲಿ ವ್ಯಕ್ತವಾಗಿದೆ. ಒಬ್ಬ ಮಹಿಳೆ ಕಲಾವಿದೆಯಾಗಿ ಚಿತ್ರ ರಚಿಸುವುದಕ್ಕೂ, ಪುರುಷ ರಚಿಸುವುದಕ್ಕೂ ಅಂತರವಿರಬಹುದೇ? ‘ಇದೆ’ ಎನ್ನುತ್ತದೆ ಮಹಿಳಾ ಕಲಾ ವಲಯ. ಜೀವನದ ಪ್ರತಿಯೊಂದನ್ನೂ, ಪ್ರತಿ ಸಂತಸ-ದುಃಖ, ತನ್ನ ದೇಹದ ಅವಸ್ಥೆಗಳನ್ನು ಸ್ವತಃ ತಾನು ಅನುಭವಿಸಿ, ಕಲೆಯಲ್ಲಿ ಆತ್ಮಾನುಭೂತಿಯಿಂದ ಅದನ್ನು ಹೊರತರುವುದು, ಹೊರಗಿನಿಂದ ಅದನ್ನು ನೋಡಿ ಚಿತ್ರಿಸುವ ಪುರುಷನ ಅಭಿವ್ಯಕ್ತಿಗಿಂತ ಬಹು ಭಿನ್ನ ಎನ್ನುತ್ತದೆ ಚಿತ್ರ ಕಲಾವಿದೆಯರ ‘ಸ್ತ್ರೀವಾದಿತ್ವ’ ಇಲ್ಲೆಲ್ಲ ಡಾ. ಪವಿತ್ರ ಅವರ ಸೂಕ್ಷ್ಮ ಚಿಂತನೆ, ಮನ:ಶಾಸ್ತ್ರದ ಹಿನ್ನೆಲೆಯ ಒಳನೋಟ, ಸ್ತ್ರೀಪರ ನಿಲುವು ಢಾಳಾಗಿ ಕಾಣಸಿಗುತ್ತದೆ.
ನಶಾ ಏರಿದ್ರ ಮಾತ್ರ ಕವಿತಾ ಹುಟ್ಟೋದೆನ್ರೀ? ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಅವರು ಕೊಡುವ ಉತ್ತರ ಅಷ್ಟೇ ಖಡಕ್ ಆಗಿದೆ. ಕಲಾವಿದರಲ್ಲಿ, ಸಾಹಿತಿಗಳಲ್ಲಿ ‘ನಶೆ’ಯ ಬಗೆಗಿನ ಈ ಗ್ರಹಿಕೆ ಹೊಸತೇನಲ್ಲ. ಬಹು ಪುರಾತನವಾದದ್ದು. ಜಗತ್ತಿನಾದ್ಯಂತ ಎಲ್ಲ ಸಂಸ್ಕೃತಿಗಳಲ್ಲಿ ಸುರೆ-ಗಾಂಜಾ ಮೊದಲಾದ ಮಾದಕ ದ್ರವ್ಯಗಳನ್ನು ‘ಸೃಜನಶೀಲತೆ’ಯ ಜೊತೆಜೊತೆಗೇ ಗುರುತಿಸಲಾಗಿದೆ. ಸೃಜನಶೀಲತೆಯನ್ನು ಮನೋವೈದ್ಯ ವಿಜ್ಞಾನಿ ಯೂಂಗ್ ಹೆಣ್ಣು ಗುಣವೆನ್ನುತ್ತಾನೆ. ಒಂದು ಗರ್ಭಧಾರಣೆ ನಡೆದು, ದೀರ್ಘಕಾಲ ಗರ್ಭದೊಳಗಿಂದ ಶಿಶು ರೂಪುಗೊಳ್ಳುವ ಹಾಗೆ ಕವಿತೆಯ ಹುಟ್ಟು ಎನ್ನುತ್ತಾನೆ. ಮನೋವೈದ್ಯೆಯಾಗಿ ನನಗೆ ಮದ್ಯ-ಮಾದಕ ದ್ರವ್ಯಗಳು ಗರ್ಭಿಣಿ ಸ್ತ್ರೀಯ -ಗರ್ಭಸ್ಥ ಶಿಶುವಿನ ಮೇಲೆ ಬೀರುವ ದುಷ್ಪರಿಣಾದಂತೆಯೇ ‘ಕವಿತೆ’ ಎಂಬ ಮಗು, ‘ಕವಿ’ ಎಂಬ ತಾಯಿಯ ಮೇಲೂ ಬೀರಬಹುದು ಎನಿಸುತ್ತದೆ!ಸುರಾದೇವಿ ಸರಸ್ವತಿಯಾಗಲು ಸಾಧ್ಯವಿಲ್ಲ! “ನಶೆ’ಯಲ್ಲಿ ಕವಿತೆ ಹುಟ್ಟುವುದೋ, ಇಲ್ಲವೋ, ಅನಾರೋಗ್ಯ-ಅಪಾರ ನೋವು, ನಶೆ ಏರಿದವರಿಗೆ, ಅವರ ಆತ್ಮೀಯರಿಗೆ ಕಾಡುವುದು ಖಂಡಿತ! ಅನುಭವದ ಪರಿಧಿಯನ್ನು ವಿಸ್ತರಿಸುವ, ಬದುಕಿನ ಕುರಿತು ಪ್ರೀತಿಯನ್ನು ಹುಟ್ಟಿಸುವ, ಆರೋಗ್ಯಪೂರ್ಣ ಹೊಸ ದೃಷ್ಟಿಕೋನವನ್ನು ತೆರೆಯಿಸುವ ಪ್ರಯತ್ನ ಈ ಲೇಖನಗಳಲ್ಲಿ ಇರುವುದು ಮೆಚ್ಚುವಂತಹದು.
ಮನೋವೈದ್ಯರೊಬ್ಬರು ವರ್ತಮಾನದ ಬದುಕಿನ ಹಲವು ಪ್ರಶ್ನೆಗಳಿಗೆ ಇಲ್ಲಿ ಕಂಡುಕೊಂಡ ಉತ್ತರವೂ ವಿಚಾರ ಪ್ರಚೋದಕವಾಗಿದೆ. ಕನ್ನಡದಲ್ಲಿ ಕಲಾ ಸಾಹಿತ್ಯ ಬಹಳ ಕಡಿಮೆ. ಈ ದೆಸೆಯಲ್ಲಿ ಡಾ. ಪವಿತ್ರ ಅವರ ಯೋಗದಾನ ಮಹತ್ವದ್ದು. ಇಲ್ಲಿ ಕಲೆಯೊಂದಿಗೆ ವೈಜ್ಞಾನಿಕ ದೃಷ್ಟಿಕೋನವೂ ಸಂಗಮವಾಗಿದೆ. ಅವರು ಉತ್ತಮ ಕಲಾ ವಿಮರ್ಶಕರು. ಮನೋವೈದ್ಯರಾಗಿದ್ದುಕೊಂಡು ಅಂತರ್ಶಿಸ್ತೀಯ ನೆಲೆಯಲ್ಲಿ ತಮ್ಮ ವಿಶೇಷ ವಿದ್ಯೆ ವಿದ್ವತ್ತುಗಳನ್ನು ಕನ್ನಡಕ್ಕೆ ಧಾರೆಯೆರೆದಿದ್ದಾರೆ. ಐವತ್ತಕ್ಕೂ ಹೆಚ್ಚು ವೈವಿಧ್ಯಮಯವಾದ ಕೃತಿಗಳನ್ನು ಅವರು ರಚಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯವನ್ನು ಅವರು ಸಂಪದ್ಯುಕ್ತಗೊಳಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ಸಹೃದಯರ ಅಭಿರುಚಿಯನ್ನು ತಿದ್ದುವ, ಅವರ ವಿವೇಚನಾ ಶಕ್ತಿಯನ್ನು ಎಚ್ಚರಗೊಳಿಸುವ ತುಡಿತ ಈ ಲೇಖನಗಳಲ್ಲಿ ಎದ್ದುಕಾಣುತ್ತದೆ. ಕವಿಯೂ ವಿಜ್ಞಾನಿಯೂ ಇಬ್ಬರೂ ವಿಶ್ವ ಸತ್ಯದ ರೂಪಗಳನ್ನು ಹೊಸ ಹೊಸದಾಗಿ ಹುಡುಕಿ ಜೀವನ ಸೌಂದರ್ಯಗಳನ್ನು ಸಂಪಾದಿಸ ಹೊರಟವರು. ಗಂಡ ಭೇರುಂಡದಂತೆ ಒಂದೇ ಚೈತನ್ಯದ ಎರಡು ಮುಖಗಳು ಎಂಬ ಡಿವಿಜಿ ಅವರ ಮಾತನ್ನು ಈ ಕೃತಿ ನೆನಪಿಸುತ್ತದೆ. ಕನ್ನಡ ಸಾರಸ್ವತ ಪ್ರಪಂಚಕ್ಕೆ ಇದೊಂದು ಒಳ್ಳೆಯ ಸೇರ್ಪಡೆ. ಡಾ. ಪವಿತ್ರ ಅವರಿಗೆ ಅಭಿನಂದನೆಗಳು.
0 ಪ್ರತಿಕ್ರಿಯೆಗಳು