ಕಲಾ ಭಾಗ್ವತ್
**
ಸಾಹಿತಿ ವಿಶ್ವನಾಥ ಕಾರ್ನಾಡ್ ಅವರ ಕೃತಿಗಳು ‘ಸ್ಪರ್ಶ’ ಮತ್ತು ‘ನೀಲಕಮಲ’.
ಸ್ಪರ್ಶ ಕೃತಿಯನ್ನು ಮುಂಬೈ ವಿಶ್ವವಿದ್ಯಾಲಯ ದ ಕನ್ನಡ ವಿಭಾಗ ಪ್ರಕಟಿಸಿದೆ.
ಸಾಹಿತಿ ಕಲಾ ಭಾಗ್ವತ್ ಅವರು ಈ ಕೃತಿಗಳ ಕುರಿತು ಬರೆದ ಬರಹ ಇಲ್ಲಿದೆ.
**
ನಾನಾ ಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಅಪಾರ ಜೀವನಾನುಭವ ಸಾಧನೆಯ ಹಾದಿಯನ್ನು ತುಳಿದು ಬಂದಿರುವ ಡಾ. ವಿಶ್ವನಾಥ್ ಕಾರ್ನಾಡ್ ಅವರು ಹಲವು ಕ್ಷೇತ್ರಗಳಲ್ಲಿ ವಿಹರಿಸಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿರುವ ಅಪ್ಪಟ ವೈಚಾರಿಕ ಚಿಂತನೆಯ ಮಾನವೀಯ ಅಂತಃಕರಣದ ಸಾಹಿತಿ. ಕತೆ, ಕವನ, ಕಾದಂಬರಿ, ಆತ್ಮ ಕಥನ, ಸಂಶೋಧನೆ, ವ್ಯಕ್ತಿ ಚಿತ್ರ ಇವೆಲ್ಲವುಗಳನ್ನು ಒಳಗೊಂಡ ಮೂವತ್ತು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ‘ತುಳುವರ ಮುಂಬೈ ವಲಸೆ’ ‘ಪ್ರವಾಸಿಯ ಒಡಲು’ ‘ಯಾಜ್ಞ ಸೇನಿ’ ಇತ್ಯಾದಿಗಳನ್ನು ಒಳಗೊಂಡ ಮೂವತ್ತು ಕೃತಿಗಳನ್ನು ರಚಿಸಿದ ಅವರ ಮುಖ್ಯ ಅಹವಾಲು, ತರ್ಕವು ಮುಖ್ಯವಾಗಿ ಜಾತಿ ಪದ್ಧತಿಯ ಕುರಿತಾಗಿಯೇ ಆಗಿದೆ. ದೇವರ ಇರುವಿಕೆಯ ಬಗೆಗೆ, ಮೂಢ ನಂಬಿಕೆಗಳ ಕುರಿತು ತಮ್ಮ ಕೃತಿಗಳಲ್ಲಿ ಪ್ರಶ್ನೆ ಎತ್ತುತ್ತಲೇ ಬಂದಿರುವ ಕಾರ್ನಾಡರ ಬರವಣಿಗೆಯಲ್ಲಿ ಮಾನವ್ಯ ನೆಲೆಯಲ್ಲಿ ಸಮಾಜವನ್ನು ಕಾಣುವ ಗುಣವು ಒತ್ತಡವಿಲ್ಲದೆ ಸಹಜವಾಗಿಯೇ ಮೂಡಿ ಬಂದಿದೆ. ಇತ್ತೀಚೆಗೆ ಬೆಳಕು ಕಂಡ ಅವರ ವಿಮರ್ಶಾ ಲೇಖನಗಳ ಸಂಗ್ರಹ ‘ಸ್ಪರ್ಶ’ ಇದಕ್ಕೆ ಹೊರತಾಗಿಲ್ಲ.
“ಪ್ರತಿಯೊಬ್ಬ ಓದುಗನೂ ಬರಹಗಾರನನ್ನು ಕಾಲದ ಸಂದರ್ಭದಲ್ಲಿ ಅನುಸಂಧಾನ ಮಾಡಲಿಕ್ಕೆ ಪ್ರಯತ್ನಿಸುತ್ತಾನೆ. ಅದು ಬರಹಗಾರ ಎನ್ನುವ ವ್ಯಕ್ತಿಯ ಜೊತೆಗಿನ ಅನುಸಂಧಾನ ಅಲ್ಲ. ಬದಲಾಗಿ ಯುಗದ ಮೌಲ್ಯಗಳ ಜೊತೆಗಿನ ಅನುಸಂಧಾನ.” ಎನ್ನುವ ರಾಜೇಂದ್ರ ಚೆನ್ನಿಯವರ ಮಾತು ಈ ಕೃತಿಯನ್ನು ಓದುವಾಗ ನೆನಪಾಗುತ್ತದೆ. ಒಟ್ಟು ಹದಿನಾಲ್ಕು ಲೇಖನಗಳನ್ನು ಒಳಗೊಂಡಿರುವ ‘ಸ್ಪರ್ಶ’ಕ್ಕೆ ಸಾಹಿತಿ ಉದಯಕುಮಾರ್ ಹಬ್ಬು ಅವರು ನಾಲ್ಕು ಪುಟಗಳಲ್ಲಿ ಎಲ್ಲಾ ಲೇಖನಗಳನ್ನು ವಿಶ್ಲೇಷಿಸುವ ಮೂಲಕ ಸುದೀರ್ಘವಾದ ಮುನ್ನುಡಿಯನ್ನು ಬರೆದಿದ್ದಾರೆ. ‘ನಾವಿಂದು ಪಶ್ಚಿಮ ಮುಖಿಗಳಾಗಿದ್ದೇವೆ. ಅಲ್ಲಿಯ ಹಳಸಲು ವಿಮರ್ಶಾ ಸಿದ್ದಾಂತದ ತಕ್ಕಡಿಯಲ್ಲಿ ನಮ್ಮ ಸಾಹಿತ್ಯವನ್ನು ತೂಗಿ ನೋಡಿ ಗಲಿಬಿಲಿಗೊಂಡಿದ್ದೇವೆ. ನಮ್ಮ ಸಂಸ್ಕೃತಿಯ ವಿಭಿನ್ನ ನೆಲೆಗಳಲ್ಲಿ ಕನ್ನಡ ಸಾಹಿತ್ಯ ಚರ್ಚೆಗೊಳಗಾಗಬೇಕು, ಮೌಲ್ಯಮಾಪನಗೊಳ್ಳಬೇಕೆನ್ನುವ ಕಾರ್ನಾಡರ ನಿಲುವನ್ನು ನಾಡಿನ ವಿದ್ವಾಂಸರಾದ ಜಿ ಎನ್ ಉಪಾಧ್ಯ ಅವರು ಗುರುತಿಸಿದ್ದಾರೆ. ಇಂಗ್ಲಿಷ್, ಹಿಂದಿ, ಮರಾಠಿ ಮೊದಲಾದ ಭಾಷೆಗಳಲ್ಲಿ ಒಳ್ಳೆಯ ಹಿಡಿತವಿರುವುದರಿಂದ ಆ ಎಲ್ಲ ಸಂವೇದನೆಗಳು ಅವರ ಎಲ್ಲ ಬಗೆಯ ಬರವಣಿಗೆಯಲ್ಲಿ ಆಂಶಿಕವಾಗಿ ಕಂಡು ಬರುತ್ತದೆ.
ಈ ಕೃತಿಯಲ್ಲಿ ಕಾರ್ನಾಡರು ಪಂಪ, ಕುಮಾರವ್ಯಾಸರು ಚಿತ್ರಿಸಿರುವ ಕರ್ಣನ ಪಾತ್ರವನ್ನ ಹಲವು ಸಾಧ್ಯತೆಗಳ ಮೂಲಕ ಚರ್ಚಿಸಿದ್ದಾರೆ. ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯದ ಕಥೆಯನ್ನು ಮುಂದೋಡಿಸುವಲ್ಲಿ ಸ್ವಪ್ನಗಳು ಚಾಲಕ ಶಕ್ತಿಯಾಗಿವೆ. ಸ್ವಪ್ನವು ಪುಟ್ಟಪ್ಪನವರ ಸೃಜನಶೀಲತೆಯ ವಿನ್ಯಾಸವಾಗಿ ರೂಪುಗೊಂಡಿದೆ. ಅನುಭವವು ಅನುಭೂತಿಯಾಗಿ ಕಡೆಗೊಂದು ದಾರ್ಶನಿಕ ಸತ್ಯವಾಗಿ ಹೊರಹೊಮ್ಮಿರುವಾಗ ಅದಕ್ಕೆ ಮನೋವೈಜ್ಞಾನಿಕ ಹಿನ್ನೆಲೆಯೂ ಇದೆ ಎನ್ನುವುದು ಮುಖ್ಯ. ಅಣು ಮಹತ್ತುಗಳು ಇಲ್ಲಿನ ಸ್ವಪ್ನಗಳಲ್ಲಿ ಪ್ರಯಾಣಿಸುತ್ತವೆ. ಸ್ವಪ್ನ ವಾಸ್ತವವು ಎಳೆಗೂಸಿನಿಂದ ಹಿಡಿದು ಅತ್ಯಂತ ವ್ಯಾಪಕವಾಗಿ ಬೆಳೆದಿದೆ. ಇಲ್ಲಿ ಕುವೆಂಪು ನಿರ್ವಹಿಸಿದ ರೀತಿ, ಅವರ ಕಲ್ಪನೆ, ಆ ಮೂಲಕ ಅವರು ಮನುಷ್ಯ ಪ್ರಜ್ಞೆಗೆ ಕೆರಳಿಸುವ ಪ್ರಶ್ನೆಗಳು ಎಲ್ಲವೂ ಅಗಾಧವಾದದ್ದು. ಇವೆಲ್ಲದರ ಹಿನ್ನೆಲೆಯಲ್ಲಿ ಕೆಲವು ಪ್ರಸಂಗಗಳನ್ನು ಇಟ್ಟುಕೊಂಡು ಲೇಖಕರು ಚರ್ಚಿಸಿರುವುದು ಕೃತಿಯಲ್ಲಿ ಸೊಗಸಾಗಿ ಮೂಡಿಬಂದಿದೆ.
ಮಾಸ್ತಿಯವರ ಚಿಕವೀರರಾಜೇಂದ್ರ ಕೃತಿಯಲ್ಲಿ ಮಾಸ್ತಿಯವರು “ಅತಿಯಾದ ಕ್ರೌರ್ಯವು ಅವನತಿಗೆ ಕಾರಣ” ಎನ್ನುವಂತಹ ಸಂದರ್ಭವನ್ನು ಚಿತ್ರಿಸಲು ಹೋಗಿ ತನ್ನ ಕಲ್ಪನಾ ಶಕ್ತಿಯನ್ನು ಬಳಸಿಕೊಳ್ಳುವಾಗ ಅಸಹಜವಾದ ಅನೇಕ ಅಂಶಗಳನ್ನು ತಂದಿದ್ದಾರೆ ಎಂಬುದನ್ನು ಇಲ್ಲಿ ತೋರಿಸಲು ಕೆಲವು ಸನ್ನಿವೇಶಗಳನ್ನು ಚರ್ಚೆಗೆ ಒಳಪಡಿಸಿದ್ದಾರೆ. ಇಲ್ಲಿ ಹಲವಾರು ನೆಲೆಗಳಲ್ಲಿ ಮಾಸ್ತಿಯವರನ್ನು ವಿಮರ್ಶಿಸುವ ಮೂಲಕ ಅಲ್ಲಿರುವ ನ್ಯೂನತೆಗಳನ್ನು ಹುಡುಕುವ ಪ್ರಯತ್ನವಿದೆ. ‘ಅಪಾತ್ರೇ ರಮತೇ ನಾರಿ’ ಎನ್ನುವ ಶೀರ್ಷಿಕೆ ಕೊಟ್ಟು ಅಪಾತ್ರರಾದವರೊಂದಿಗೆ ರಮಿಸುವ ವಿಲಿಯಂ ಶೇಕ್ಸ್ಪಿಯರನ ಒಥೆಲೊ ನಾಯಕಿ ಡೆಸ್ಟಿಮೋನ, ಮೊಘಲರಿಗಿಂತ ಮೊದಲು ದೆಹಲಿಯನ್ನಾಳಿದ ಅಲ್ತಮಿಷನ ಮಗಳು ರಜಿಯಾ, ಹಾಗೂ ಜನ್ನನ ಯಶೋಧರ ಚರಿತೆಯ ಅಮೃತಮತಿ ಈ ಮೂವರು ಸ್ತ್ರೀಯರ ಕಾಮದ ಸ್ವರೂಪವನ್ನು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಚಿಂತನೆಗೆ ಒಳಪಡಿಸಿದ್ದಾರೆ.
ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ಸಮೀಕ್ಷೆಯನ್ನು ಹನ್ನೆರಡು ಪುಟಗಳಲ್ಲಿ ಹೇಳಿ ಮುಗಿಸಿರುವುದು ಆಕರ್ಷಕ ಭಾಗ. ‘ಕನ್ನಡದಲ್ಲಿ ಸೃಜನಶೀಲ ಹಾಸ್ಯ’ವು ಇಂದು ಹಲವು ನೆಲೆಗಳಲ್ಲಿ ಅಭಿವ್ಯಕ್ತಿಗೊಂಡರೂ ಕೂಡ ಈ ಪ್ರಕಾರವು ಹಿಂದಿ ಮರಾಠಿ ಸಾಹಿತ್ಯದಲ್ಲಿ ಬೆಳೆದು ಬಂದಂತೆ ಕನ್ನಡದಲ್ಲಿ ಬೆಳಗಲಿಲ್ಲ. ಎನ್ನುವುದು ಚಿಂತನೀಯ ಲೇಖನ. ಚಿತ್ತಾಲರ ಸಾಹಿತ್ಯದಲ್ಲಿ ವೈಚಾರಿಕತೆಯನ್ನು ಹಲವು ದೃಷ್ಟಿಕೋನದಿಂದ ವಿಶ್ಲೇಷಣೆಗೆ ಒಳಪಡಿಸಿ ಅವರ ಮಹತ್ವದ ಕೃತಿ ‘ಸಾಹಿತ್ಯದ ಸಪ್ತ ಧಾತುಗಳು’ ಇದರ ಕುರಿತಾಗಿ ಇಲ್ಲಿ ಸೊಗಸಾದ ವಿವರವನ್ನು ನೀಡಲಾಗಿದೆ. ಕೃತಿಯಲ್ಲಿ ಮುಂಬೈ ರಂಗಭೂಮಿಯ ಕುರಿತು ಸುದೀರ್ಘವಾದ ಒಂದು ಲೇಖನವಿದೆ. ಮುಂಬೈಯ ರಂಗಪರಂಪರೆಯ ಜೊತೆಗೆ ಮರಾಠಿ, ಪಾರಸಿ ಪರಂಪರೆಯ ವಿವರಗಳಿವೆ. ಅಂತೆಯೇ ಕನ್ನಡ ರಂಗ ಕೃತಿಗಳ ಪ್ರಮುಖ ಒಲವುಗಳ ಬಗೆಗೆ ಹಾಗೂ ರಂಗಭೂಮಿಯ ಸಾಧಕ ಬಾಧಕಗಳ ಬಗೆಗೂ ಸಮೀಕ್ಷೆ ನಡೆಸಲಾಗಿದೆ. ಬಲ್ಲಾಳರ ಭಾವ ಲೋಕದ ಮೇಲೆ ಲಗ್ಗೆ ಇಟ್ಟಿರುವ ಲೇಖನವು ಬಲ್ಲಾಳರ ಕೃತಿಗಳಲ್ಲಿ ಸ್ತ್ರೀಯರು, ಉತ್ಕಟವಾದ ಭಾವಸತ್ವ, ದುರಂತದ ಕಡೆಗಿನ ಬಲ್ಲಾಳರ ಒಲವು ಎಲ್ಲದರ ಬಗ್ಗೆ ವಿಮರ್ಶಿಸಿದೆ.
ರಾಮ್ ಮನೋಹರ್ ಲೋಹಿಯಾ ಅವರು ಆಗ್ರಾದ ಸೆಂಟ್ರಲ್ ಜೈಲಿನಿಂದ ಬಿಡುಗಡೆಗೊಂಡಾಗ ಅಂದರೆ 1964ರ ಸಂದರ್ಭದಲ್ಲಿ ನಿಧನರಾಗುವವರೆಗೆ ಆತ್ಮೀಯ ಗೆಳತಿ ರಮಾ ಮಿತ್ರರಿಗೆ ಬರೆದ ನೂರಾರು ಪತ್ರಗಳಲ್ಲಿ ಐದು ಪ್ರೇಮ ಪತ್ರಗಳನ್ನು ಯಥಾವತ್ ದಾಖಲಿಸಲಾಗಿದೆ. ಇದು ಈ ಕೃತಿಯ ಕುತೂಹಲಕಾರಿಯಾದ ಭಾಗವಾಗಿದೆ. ನಗರ ಜಾನಪದದ ಬಗ್ಗೆ ಹೇಳಿರುವ ಲೇಖನವೂ ವಿಶೇಷವಾಗಿದೆ. ನಗರ ಜಾನಪದದ ಮುಖ್ಯವಾದ ಮೂಲಗಳು ಅಲ್ಲಿನ ಆಶಯಗಳು, ಜೀವನ ನಿರ್ವಹಣೆ ಇತ್ಯಾದಿಗಳೊಂದಿಗೆ ಮುಂಬೈ ಮಹಾನಗರದಲ್ಲಿ ಜಾನಪದವು ಜೀವಿಸಿರುವ ಬಗ್ಗೆ ವಿಷದವಾಗಿ ಹೇಳಲಾಗಿದೆ. ಜೀವಿಯವರಿಂದ ವಿಶ್ಲೇಷಣೆಗೆ ಒಳಗಾದ ಬೇಂದ್ರೆಯವರ ‘ಬೆಳಗು’ ಲೇಖನವು ಅರ್ಥಪೂರ್ಣವಾಗಿದೆ.
ಬಸವಣ್ಣನವರ ಕಾಯಕವೇ ಕೈಲಾಸ “ಕಬೀರ ದಾಸರ ದೋಹೆಗಳಲ್ಲಿ ಅನುಭವ ಸೂಕ್ತಿಗಳು” ಇವೆಲ್ಲವೂ ಕಟುವಾದ ವೈಚಾರಿಕ ನೆಲೆಯಲ್ಲಿಯೇ ಚರ್ಚಿತವಾಗಿದೆ. “ಕಬೀರದಾಸರಿಗೆ ಸಮಾಜದಲ್ಲಿ ಕೆಟ್ಟವರು, ದುಷ್ಟರು ಯಾರೂ ಕಾಣುವುದಿಲ್ಲ. ತನ್ನಲ್ಲಿಯೇ ಹುಡುಕಿದಾಗ ತನಗಿಂತ ಕೆಟ್ಟವರು ಯಾರೂ ಇಲ್ಲ. ‘ಖೋಜೈ ಅಪ್ನಾ ಮನ್ ಕೊ ಮುಜ್‌ಸಾ ಬುರಾ ನ ಕೋಯಿ….’ ‘ಪಂಚತತ್ವಕೀ ಬನೀ ಚುನರಿಯಾ’ ಈ ಶರೀರ ದೇವರ ಮನೆಯಿಂದ ಬಂದಿದೆ. ಇದರಲ್ಲಿ ಷಡ್ವೈರಿಗಳನ್ನು ಸೇರಿಸಿ ಈ ಲೋಕಕ್ಕೆ ನಮ್ಮನ್ನು ಮನುಷ್ಯ ಯೋನಿಯಿಂದ ತಂದು ಬಿಟ್ಟಿದ್ದಾನೆ. ಅವುಗಳ ಜೊತೆ ಸಂಯಮದಿಂದ ನಾವು ಜೀವಿಸಬೇಕಾಗುತ್ತದೆ” ಇಂತಹ ಸಾಲುಗಳನ್ನು ಎತ್ತಿಕೊಂಡು ಕೃತಿಯಲ್ಲಿ ಚರ್ಚಿಸಿರುವುದು ವಿಶೇಷ. ಎಲ್ಲರೂ ಮನುಷ್ಯನ ಕುರಿತಾಗಿಯೇ ಬರೆಯುವುದರಿಂದ ಮನುಷ್ಯನ ಮೂಲಭೂತ ಸ್ವಭಾವ ಮತ್ತು ನಾಗರಿಕತೆಯ ಹಿನ್ನೆಲೆಯಲ್ಲಿ ಬದಲಾದ ಸ್ವಭಾವಗಳನ್ನು ವಿಶ್ಲೇಷಣೆಗೆ ಒಳಪಡಿಸಿ ನೋಡುವುದು ಅಗತ್ಯತೆ ಇದೆ ಎನ್ನುವುದರ ಅರಿವು ಮೂಡಿಸಿ ಆ ದೃಷ್ಟಿಕೋನದಲ್ಲಿಯೇ ಸಾಹಿತ್ಯ ಕೃತಿಗಳನ್ನು ಕಾಣುವ ಈ ಕೃತಿಯನ್ನು ವಿದ್ಯಾರ್ಥಿಗಳು ಪೂರಕ ಪಠ್ಯವಾಗಿಯೂ ಓದುವಂತಿದೆ.
ನೀಲ ಕಮಲ
ಈ ಕೃತಿಯೊಂದಿಗೆ ವಿಶ್ವನಾಥ ಕಾರ್ನಾಡರ ‘ನೀಲಕಮಲ’ ಅನುವಾದಿತ ಕಾದಂಬರಿಯೂ ಹೊರಬಂದಿದೆ. ಆಕರ್ಷಕ ಕ್ಲಾಸಿಕ್ ಶೈಲಿಯ ಮುಖಪುಟವನ್ನು ಹೊಂದಿರುವ ಇದು ಹಿಂದಿಯ ಪ್ರಸಿದ್ಧ ಕಾದಂಬರಿಕಾರ ಗುಲ್ಶನ್ ನಂದಾ ಅವರ ನೀಲ್ ಕಮಲ್ ಎನ್ನುವ ಮೂಲ ಕಾದಂಬರಿಯ ಕನ್ನಡ ಅನುವಾದ. ಇದು 1968ರಲ್ಲಿ ಹಿಂದಿ ಚಲನಚಿತ್ರವಾಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಕಾರ್ನಾಡರು ಎಲ್ಲ ಪಾತ್ರಗಳನ್ನು ಸಶಕ್ತವಾಗಿ ಕನ್ನಡಕ್ಕೆ ತರುವಲ್ಲಿ ಸಫಲರಾಗಿರುವುದು ಕಾದಂಬರಿಯನ್ನು ಓದಿದಾಗ ವಿಧಿತವಾಗುತ್ತದೆ. ಈಗಾಗಲೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವ ‘ಯಾಜ್ಞಸೇನಿ’ಯನ್ನು ಕನ್ನಡಕ್ಕೆ ಅನುವಾದ ಮಾಡಿ ಯಶಸ್ವಿಯಾದ ಡಾ ವಿಶ್ವನಾಥ್ ಕಾರ್ನಾಡರ ಎರಡನೆಯ ಪ್ರಯತ್ನವೂ ಸಫಲವಾಗಿದೆ. ಈ ಎರಡೂ ಕೃತಿಗಳಿಗಾಗಿ ವಿಶ್ವನಾಥ್ ಕಾರ್ನಾಡ್ ಅವರಿಗೆ ಅಭಿನಂದನೆಗಳು.
0 ಪ್ರತಿಕ್ರಿಯೆಗಳು