‘ಕರ್ಣನ್’ ‘ನಯಟ್ಟು’ ಎರಡೂ ದಲಿತ ವಿರೋಧಿ ಸಿನಿಮಾಗಳೇ..

ಕನಕರಾಜ್ ಆರನಕಟ್ಟೆ

ಇತ್ತೀಚಿಗೆ ತೆರೆಕಂಡ ತಮಿಳಿನ ‘ಕರ್ಣನ್’ ಸಿನಿಮಾದಂತೆಯೇ ನಮ್ಮಲ್ಲಿ ಹಲವರು ‘ನಯಟ್ಟು’ ಎನ್ನುವ ಮಲೆಯಾಳಂ ಸಿನಿಮಾವನ್ನೂ ಕೊಂಡಾಡುತ್ತಿದ್ದಾರೆ. ಆದರೆ ಅವೆರಡೂ ನನಗೆ ದಲಿತ ವಿರೋಧಿ ಸಿನಿಮಾಗಳಾಗಿಯೇ ಕಂಡಿವೆ. ‘ಕರ್ಣನ್ ಕೋಪ ಒಟ್ಟು ಸಾಮಾಜಿಕ ವ್ಯವಸ್ಥೆಯ ಮೇಲೆ ಎಂದು ಸಾರಾಸಗಟಾಗಿ ಎಲ್ಲರಂತೆ ಅದೊಂದು ದಲಿತ ಪರ ಸಿನಿಮಾ ಎಂದು ನಾನಂತೂ ಹೇಳುವುದಿಲ್ಲ. ಅದೊಂದು ಶೂದ್ರ ಜಾತಿಗಳ ವಿರೋಧಿಸುವ ಬ್ರಾಹ್ಮಣ್ಯವನ್ನು ಒಪ್ಪಿ ಅದರ ಜೊತೆ ನಡೆಯಲು ಬಯಸುವ ಸಿನಿಮಾ ಎಂಬುದು ಮಗದೊಂದು ಚರ್ಚೆ. ಇರಲಿ.

ಈಗ ‘ನಯಟ್ಟು’ ಸಿನಿಮಾಕ್ಕೆ ಬರುವ. ಇಲ್ಲಿ ನನ್ನ ಬೇಸರವೇನೆಂದರೆ ಜಗತ್ತಿನ ‘ಎಲ್ಲಾ’ ಸಿನಿಮಾಗಳನ್ನು ನೋಡಿ ಇಂಗ್ಲಿಷಿನಲ್ಲಿ ಬರೆಯುವ ತಮ್ಮನ್ನು ತಾವು ಪ್ರಸಿದ್ಧ ವಿಮರ್ಶಕರು ಎಂದುಕೊಳ್ಳುವ ವ್ಯಕ್ತಿಗಳನ್ನು ಬಿಡಿ, ಅಂತಹವರಿಗೆ ಯಾವುದೇ ತಾತ್ವಿಕ ಹಿನ್ನೆಲೆಯಿಲ್ಲ, ಆದರೆ ನಮ್ಮವರೇ ಈ ಸಿನಿಮಾವನ್ನು ಹೊಗಳುವುದ ನೋಡುವಾಗ ಬೇಸರವಾಗುತ್ತದೆ.

ಜೊಜೊ ಜಾರ್ಜ್ ನನ್ನ ಬಹು ಮೆಚ್ಚಿನ ನಟ ಮತ್ತು ನನ್ನ ಮೊದಲ ಸಿನಿಮಾದ ಕಥೆಯನ್ನು ಹೇಳಲು ಅವರನ್ನು ಸಂಪರ್ಕಿಸುತ್ತಿರುವ ಈ ಗಳಿಗೆಯಲ್ಲಿ ಈ ಸಿನಿಮಾದ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದು ತುಸು ಮುಜುಗರವಾದರೂ ಮಾತನಾಡಲೇಬೇಕು. ‘ನಯಟ್ಟು’ ಪೊಲೀಸ್ ಮತ್ತು ಅಧಿಕಾರ ಕೇಂದ್ರಗಳ ನಡುವಿನ ಹಾವು ಏಣಿ ಆಟವನ್ನು ಮುಖ್ಯವಾಗಿ ಪ್ರಭುತ್ವದ ಅಥವ ರಾಜಕೀಯ ಸಂಘಟನೆಗಳ ‘ಓಟ್’ ರಾಜಕಾರಣದ ಸುತ್ತ ತಿರುಗಿದರೂ ಅದು ಮಾತನಾಡುವುದು ದಲಿತ್ ವಿಚಾರಗಳನ್ನು ಎನ್ನುವುದು ನಿಮ್ಮಲ್ಲಿ ಕೆಲವರಿಗೆ ಗೊತ್ತಾಗಿರಬಹುದು.

ಮಲೆಯಾಳಂನಲ್ಲಿ (ಮತ್ತು ತಮಿಳಿನಲ್ಲಿ ಕೂಡ) ಈಗಾಗಲೇ ಇದರ ದಲಿತಪರ ಮತ್ತು ದಲಿತ ವಿರೋಧಿ ಅಂಶಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವರು ಇದನ್ನು ದಲಿತ ವಿರೋಧಿ ಸಿನಿಮಾ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ನನಗೂ ಅದರಲ್ಲಿ ಸಹಮತವಿದೆ. ಇದರಾಚೆಗೆ ನಾನು ಈ ಸಿನಿಮಾವನ್ನು ಕೊಂಡೊಯ್ಯಲು ಬಯಸುತ್ತೇನೆ, ಕೆಲ ಪ್ರಶ್ನೆಗಳ ಮೂಲಕ.

ಪ್ರಶ್ನೆ 1: ಈ ಸಿನಿಮಾದ ತುಂಬೆಲ್ಲಾ ಹೇರಳವಾಗಿ ಮಾರ್ಕ್ಸಿಸ್ಟ್ ಸಿಂಬಲ್ ಗಳನ್ನು ಬಳಸಿ ಇತರೆ ಪಕ್ಷಗಳ ಚಿಹ್ನೆಗಳನ್ನು ಬೇರೆ ತರನಾಗಿ ತೋರಿಸುವುದಾದರೂ ಏಕೆ? ಈ ಸಿನಿಮಾದ ಮೊದಲ ಪ್ಲಾಟ್ ಪಾಯಿಂಟ್ ಶುರುವಾಗುವಾಗುವುದು ವ್ಯಕ್ತಿಯೊಬ್ಬ ಸ್ಟೇಷನ್ ನ ಕಾಂಪೌಂಡ್ ಗೋಡೆಗೆ ಉಗುಳುವ ಮೂಲಕ. ಅಲ್ಲಿಂದಲೇ ಸಿನಿಮಾ ಚಲಿಸಲು ಆರಂಭಿಸುವುದು. ಆತನೂ ಜೊಜೊ ಜಾರ್ಜ್ ಮತ್ತು ನಿಮಿಷಾರಂತೆಯೇ ಈ ಸಿನಿಮಾದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿದವನು.

ಪೊಲೀಸರ ಮೇಲೆ ಸೇಡು ತೀರಿಸುವ ಆತನ ಕ್ರಿಯೆಯನ್ನು (ಅಥವ ದಲಿತ್ ವರ್ಸಸ್ ದಲಿತ್) ನೆಗೆಟಿವ್ ಶೇಡ್ ನಲ್ಲಿ ತೋರಿಸಿ ಆತನ ಹಿನ್ನೆಲೆಯನ್ನು ಸೂಚ್ಯವಾಗಿ ಮಾರ್ಕ್ಸಿಸ್ಟ್ ಹೋರಾಟಗಳಿಗೆ ತಳಕು ಹಾಕಿ ಎಡಪಂಥೀಯ ಹೋರಾಟಗಳು ಅಥವ ದಲಿತ್ ಹೋರಾಟಗಳು ಹೀಗೆ ಪೊಳ್ಳಾದವು ಎಂದು ತೋರಿಸಲೇ ಆ ಮೂರು (ಅವರಲ್ಲಿಬ್ಬರು ದಲಿತರು ಎನ್ನುವುದನ್ನು ಗಮನಿಸಬೇಕು) ಪೊಲೀಸರ ಮೇಲೆ ನೋಡುಗರ ಸಹಾನುಭೂತಿಯನ್ನು ಸೃಷ್ಟಿಸಲಾಗಿದೆ ಎಂದು ‘ನಾನ್ಯಾಕೇ’ ಭಾವಿಸಬಾರದು?

ಪ್ರಶ್ನೆ 2: ಕ್ಲೈಮಾಕ್ಸ್ ನಲ್ಲಿ ಕಥೆ ತಮಿಳುನಾಡಿನ ಗಡಿಯಲ್ಲಿರುವ ಕೇರಳದ ಮೂನಾರ್ ನಲ್ಲಿ ಸಂಭವಿಸುತ್ತದೆ. ಮೂರ್ನಾಲ್ಕು ಬಾರಿ ಒಂದೇ ಸಂಭಾಷಣೆಯನ್ನು ಪೊಲೀಸ್ ಅಧಿಕಾರಿ ಹೇಳುತ್ತಾರೆ: ‘ಇಲ್ಲಿ ಯಾರೂ ಮಲೆಯಾಳಿಗರಿಲ್ಲ, ತಮಿಳರೇ ಇದ್ದಾರೆ’ ಎಂದು. ದೃಶ್ಯಗಳೂ ಕೂಡ ಇದನ್ನೇ ಧ್ವನಿಸುತ್ತವೆ. ಈ ಮಾತು ಯಾಕಾಗಿ ಪದೇ ಪದೇ ಬರುತ್ತದೆಯೆಂದು ನಾವು ಸೂಕ್ಷ್ಮವಾಗಿ ಆಲೋಚಿಸಬೇಕಿದೆ.

ತಮಿಳರು ಹೇಳುವಂತೆ ಚೆನ್ನೈನಲ್ಲಿ ತೆಲುಗರೂ, ಕೊಯಂಬತ್ತೂರಿನಲ್ಲಿ ಮಲೆಯಾಳಿಗರು ತುಂಬಿಕೊಂಡಿದ್ದಾರೆ ಎಂತಲೋ ಅಥವ ನಾವು ಕನ್ನಡಿಗರು ಹೇಳುವಂತೆ ಬೆಂಗಳೂರಿನಲ್ಲಿ ತಮಿಳರೂ, ಬೆಳಗಾವಿಯಲ್ಲಿ ಮರಾಠಿಗರೂ ತುಂಬಿಕೊಂಡಿದ್ದಾರೆ ಎಂಬಂತಹ ಪ್ರಾದೇಶಿಕ ‘ದ್ವೇಷ’ವನ್ನು ಈ ಸಿನಿಮಾ ತಣ್ಣಗೆ ಮೆಟಫಾರಿಕ್ ಆಗಿ ಹೇಳುತ್ತಿಲ್ಲವೆ? ನೀವು ಆ ಪಕ್ಷ ಈ ಪಕ್ಷ ಅಂತ ಕಿತ್ತಾಡಿಕೊಂಡಿರಿ, ಅಲ್ಲಿ ಬೇರೆ ರಾಜ್ಯದವರು ನಮ್ಮ ನೆಲವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂಬಂತಹ ಫೆನೆಟಿಕ್ ವಿಚಾರವನ್ನು ಇಲ್ಲಿ ಸೂಚ್ಯವಾಗಿ ಚರ್ಚಿಸುತ್ತಿಲ್ಲವೆ, ಗೆಳೆಯರೆ? ಒಂದು ದೃಶ್ಯದಲ್ಲಿ ಕಣ್ಣು ಕಾಣದ ವೃದ್ಧೆಯೋರ್ವರನ್ನು ಓಟ್ ಹಾಕಿಸಲು ವ್ಯಕ್ತಿಯೊಬ್ಬ ಕರೆದುಕೊಂಡು ಹೋಗುತ್ತಾನೆ. ಓಟ್ ಮಾಡುವಾಗ ಆತ ಆ ವೃದ್ಧೆಯನ್ನು ಕೇಳದೆ ತನ್ನ ಇಷ್ಟಾನುಸಾರ ಮತ ಹಾಕುತ್ತಾನೆ.

ಇದು ಧ್ವನಿಸುವ ಅರ್ಥವನ್ನು ಬಿಡಿಸಿ ಹೇಳಬೇಕಿಲ್ಲ, ಅಲ್ಲವೇ!? ಇನ್ನೂ ಸಾಕಷ್ಟು ಪ್ರಶ್ನೆಗಳಿವೆ… ‘ಕರ್ಣನ್’ ಸಿನಿಮಾ ತಣ್ಣಗೆ ಉಸುರುವ ಬ್ರಾಹ್ಮಣ್ಯದ ಬಗ್ಗೆಯೂ ಚರ್ಚೆ ಮಾಡಬಹುದು. ಆದರೆ ದಲಿತ್ ಪ್ರಶ್ನೆಗಳು ತೆರೆಯ ಮೇಲೆ ಈ ಮಟ್ಟಿಗೆ ಚರ್ಚೆಯಾಗದಿರುವಾಗ ನಾನು ಏನೇನೊ ಮಾತನಾಡಿ ದಲಿತ್ ಸಿನಿಮಾವನ್ನು ಅನುಮಾನಿಸುವುದು ಬೇಡ. ಕೆಲವರಂತೂ ‘ನೀ ದಲಿತನಲ್ಲದ ಕಾರಣಕ್ಕೆ ಆ ಸಿನಿಮಾವನ್ನು ವಿರೋಧಿಸುತ್ತಿದ್ದೀ’ ಎಂದೂ ಹೇಳಬಹುದು, ಈ ಹಿಂದೆ ಹೇಳಿದ್ದಾರೆ ಕೂಡ. ಹಾಗಾಗಿ ‘ಕರ್ಣನ್’ನನ್ನು ಸೂಕ್ಷ್ಮವಾಗಿ ನೋಡಿ ಎಂದು ಮಾತ್ರ ಹೇಳಬಲ್ಲೆ.

‍ಲೇಖಕರು Avadhi

May 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: