ಕಮಲಾ ಹೆಮ್ಮಿಗೆ ಮರೆಯಾದರು..

ಮರೆತು ಹೋದ ಕಮಲಾ

ಸತೀಶ ಕುಲಕರ್ಣಿ

—-

ಕಮಲಾ ಹೆಮ್ಮಿಗೆ ತಮ್ಮ ಪಾತ್ರ ಮುಗಿಸಿ ‘ಹೋಗಿದ್ದಾರೆ’( ೨೪ ಸೆಪ್ಟಂಬರ್ ೨೩ ).

೮೦ರ ದಶಕದಲ್ಲಿ ಅತ್ಯಂತ ಉಚ್ಛ್ರಾಯದಲ್ಲಿದ್ದ ಕಮಲಾ, ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಧಾರವಾಡದ ದಿಗ್ಗಜ ಸಾಹಿತಿಗಳೆಲ್ಲ ಸಹಜವಾಗಿ ಆಕಾಶವಾಣಿಗೆ ಬಂದು ಹೋಗಲು ಕಾರಣರಾದವರು. ಅವರು ಏರ್ಪಡಿಸುತ್ತಿದ್ದ ಕವಿಗೋಷ್ಠಿ, ವಿಚಾರ ಸಂಕಿರಣ, ಸಂದರ್ಶನ ಮುಂತಾದವು ಸಾಹಿತ್ಯ ವಲಯದಲ್ಲಿ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದ್ದವು.
ಸಂತೋಷಕುಮಾರ ಗುಲ್ವಾಡಿ ಸಂಪಾದಕತ್ವದಲ್ಲಿ ಬರುತ್ತಿದ್ದ ‘ತರಂಗ’ ವಾರಪತ್ರಿಕೆ ತನ್ನ ವರ್ಣರಂಜಿತ ಪ್ರಸಾರ ಮತ್ತು ಪ್ರಚಾರ ಗುಣದಿಂದ ಸಾಕಷ್ಟು ಸಂಚಲನ ಉಂಟು ಮಾಡುತ್ತಿತ್ತು. ವಿಶೇಷವಾಗಿ ಕಮಲಾ ಹೆಮ್ಮಿಗೆ ಅವರ ಸಹಜ ಸುಂದರ ಫೋಟೊ ಸಹಿತ ಪ್ರಕಟವಾಗುತ್ತಿದ್ದ ಕವಿತೆಗಳು ನನ್ನಂತವರ ಗಮನ ಸೆಳೆದಿದ್ದವು.

ಆ ದಿನಗಳಲ್ಲಿ ಕೆಲವು ಪತ್ರಿಕೆಗಳಿಗೆ ನಾನು ಪುಸ್ತಕ ವಿಮರ್ಶೆ ಮಾಡುತ್ತಿದ್ದೆ. ಕಮಲಾ ಹೆಮ್ಮಿಗೆ ಅವರ ‘ಮುಂಜಾನೆ ಬಂದವನು’, ‘ನೀನೇ ನನ್ನ ಆಕಾಶ’ ಕವನ ಸಂಕಲನಗಳ – ವಿಮರ್ಶೆ ಬರೆದಿದ್ದೆ. ಹಾಗೆ ನೋಡಿದರೆ ಮುಖತಃ ಭೇಟಿಯಾದದ್ದು ಬಹಳ ಕಡಿಮೆ.
‘ಮುಂಜಾನೆ ಬಂದವನು’ ಕವನ ಸಂಕಲನ ನನ್ನನ್ನು ಬಹಳ ಆಕರ್ಷಿಸಿತ್ತು. ಮನಮುಟ್ಟುವ ಸಹಜ ಸಾಲುಗಳು, ಭಾಷೆ ಲಯದೊಂದಿಗೆ ಪ್ರಯೋಗಶೀಲತೆಯನ್ನು ಅಳವಡಿಸಿಕೊಂಡಿದ್ದ ಕಮಲಾ ಕಾವ್ಯವನ್ನು ಒಬ್ಬ ಓದುಗನಾಗಿ ಪ್ರೀತಿಸಿದ್ದೆ.

ನನ್ನ ಕಣ್ಣ ಕಣ್ಣಲ್ಲಿ
ಹೂಳ ಬೇಡವೊ ಹುಡುಗ
ಉರಿವ ಕಾಳ್ಗಿಚ್ಚು ಸುಟ್ಟೀತು
ತಬ್ಬದಿರು ನನ್ನ ಉದ್ಭಾಹುವಲಿ
ನಿನ್ನ ಬಿಗಿದು
ತಾವರೆದಂಟು ಆಳಕ್ಕೆಳದೀತು

ಸೂಚ್ಯವಾಗಿ ತಾವರೆದಂಟು ಆಳಕ್ಕೆಳದೀತೊ ಎಂದು ಓದುಗನನ್ನುಚುಡಾಯಿಸಿದ್ದು ಮಜಾ ಅನ್ನಿಸಿತ್ತು.

ಕುಕಿಲುತ್ತಿದ್ದ ಆ ಕಪ್ಪು ಹಕ್ಕಿ
ನೀನೆಲ್ಲಿ ಎಲ್ಲಿ ಈಗ ?
ಸ್ವರವೇ ನೀನಾಗಿ, ಮರವೇ ನಾನಾಗಿ
ಬರಿಯ ಕಂಬ ಈಗ
ಹುಣ್ಣಿಮೆ ಚಂದಿರ ನೀನು ಏರಿಸ್ಯಾದೂ
ಚೌತಿಯ ಚಂದ್ರಾಗಿ ಅನುದಾನವೂ ಕಾಡೊ
ಇಲ್ಲಿಯ ತನಕ

ಇದರೊಳಗಿನ ಸೂಚ್ಯ ವ್ಯಂಗ್ಯ ಯಾರು ಓದಿದರೂ ತಾಕದೆ ಇರಲಾರದು.

‘ನೀನೇ ನನ್ನ ಆಕಾಶ’ ಕಮಲಾ ಹೆಮ್ಮಿಗೆ ಅವರ ಮತ್ತೊಂದು ಮಹತ್ವದ ಕವನ ಸಂಕಲನ. ಮುನ್ನುಡಿಯನ್ನು ಬರೆದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ‘ಇಲ್ಲಿನ ಗೀತೆಗಳು ಒಂದೇ ಪ್ರಧಾನ ಅನುಭವದ ಬೇರೆ ಬೇರೆ ಮಗ್ಗುಲಗಳ ಬೆಳಗುವಂತವು, ಮಿಲನ, ವಿರಹ, ಕನವರಿಕೆ ವಿವಿಧಾನಭವಗಳು ಇಲ್ಲಿವೆ’ ಎಂದಿದ್ದರು.
ಮೈಯಲ್ಲ ಕಣ್ಣಾಗಿ ಗಿಣಿರಾಮ
ವನದಿ ನವಿಲೆಲ್ಲ ಕುಣಿದಾವ ಗಿಣಿರಾಮ
ಬಿಲ್ಲಂತೆ ಸೆಟೆದಾಕಿ ಗಿಣಿರಾಮ
ನನ್ನ ಹೆಣ್ಣು ಮಾಡಿದೆಲ್ಲೊ ಗಿಣಿ ರಾಮ

ಹಾಲು ಮೈಯ ಪಾರಿವಾಳ
ಎದೆಗೆ ಚುಂಚವೊತ್ತಿ
ಎತ್ತಿಕೊ ಮೃದು ಮನಸ್ಸೆಂದು
ಮುತ್ತನೊತ್ತಿ ಹಾರಿದೆ

ಜಾನಪದ ಶೈಲಿಯಲ್ಲಿ ಕಾವ್ಯ ರಚಿಸುತ್ತಿದ್ದ ಕಮಲಾರ ಕಾವ್ಯದಾಳದಲ್ಲೊಂದು ಗಾಢ ವಿಷಾದವೂ ಇತ್ತು.

ಮತ್ತೊಂದು ಪ್ರಸಂಗ : ಒಮ್ಮೆ ಅವರ ತಾಯಿ ಶಾರದಮ್ಮನವರ ಕುರಿತು ಒಂದು ಕವಿತೆ ಬರೆಯಲು ಕೇಳಿದ್ದರು. ‘ನಾನು ನಿಮ್ಮ ಅಮ್ಮನನ್ನು ನೋಡಿಲ್ಲ’ ಅಂದೆ. ಅದೇ ದಿನ ನಮ್ಮವ್ವನಿಗೆ ಸೀರಿಯಸ್ ಇದೆ ಅಂತ ಹುಬ್ಬಳ್ಳಿಯಿಂದ ಬುಲಾವ್ ಬಂದಿತ್ತು. ಹುಬ್ಬಳ್ಳಿಗೆ ಹೋಗಿ ಅವ್ವನ ಅಂಗೈ ಒತ್ತಿ ಹಿಡಿದಾಗ ‘ಹ್ಯಾಂಗ್ ಇದ್ದಿ’ ಎಂದು ಕೇಳಿದ್ದೆ. ಅಮ್ಮನ ಕಣ್ಣಿನಲ್ಲಿ ಕಮಲಾರ ಅವ್ವನನ್ನು ಕಂಡು, ಅಂದೇ ಅವರಿಗೆ ಒಂದು ಕವಿತೆ ಬರೆದು ಕಳಿಸಿದ್ದೆ. ಹೆಸರು, ‘ಅವ್ವಂದಿರು’.

ಅವ್ವಗ ಆರಾಮಿಲ್ಲ
ಹುಬ್ಬಳ್ಳಿಗೆ ಹೊರಟಿದ್ದೆ
ಕಮಲಾಳ ಪತ್ರ ಬಂದಿತ್ತು ;

‘ಪಾರಿಜಾತದ ಮಾತುಗಳು
ಮಡಿ ಶಾಲಿನ ಉಡುಗೆಯಲ್ಲಿ
ನರಸಿಂಹಸ್ವಾಮಿಯ ಕವಿತೆಯ
ಹೆಣ್ಣಿನಂತೆ ಶಾರಮ್ಮ’

ಅಂಗಳದ ತುಳಸಿ
ಮನದ ಎಲ್ಲ ರೋಗಕ್ಕೂ
ಮದ್ದಾದ ಈ ತಾಯಿ
ನನ್ನೆದೆಯ ಬಾವಿಯಲ್ಲಿ
ಶಬ್ದ ವಾಕ್ಯ ಕೊಡಪಾನವಾಗಿಳಿದು
ಎದೆ ನೀರಲ್ಲಿ ಬಿದ್ದಳು

ಬುಡು ಬುಡು ಸದ್ದು ಮಾಡುತ್ತ
ತುಂಬಿಕೊಂಡಳು

ಹುಬ್ಬಳ್ಳಿ ಮುಟ್ಟುವಾಗ
ಎದೆಯಲ್ಲಿ
ಎಳೆಯಲಾಗದ ಭಾರ
ಮನೆ ಮುಟ್ಟಿದಾಗ
ಅವ್ವ ಮಲಗಿದ್ದಳು

‘ಹೆಂಗಿದ್ದಿ’ ಅಂದೆ
‘ಬAದ್ಯಾ ಬಾ’ ಅಂದಳು

‘ಹಾರ್ಟ ವೀಕ ಅಂತಾರ
ಕಾಲು ಬಾವು ಬಂದಾವ
ಊಟ ಹೋಗಂಗಿಲ್ಲ’
ಅನ್ನುತ್ತ
‘ನೀ ಹೆಂಗಿದ್ದಿ’ ಅಂದಳು

ಅವ್ವನ ಕೈ ಹಿಡಿದು ಸುಮ್ಮನೆ ಕುಳಿತೆ
ಕಮಲಾ ಕಳಕೊಂಡದ್ದು ; ನನ್ನೆದುರಿಗೆ ಇತ್ತು.

ಬೆಂಗಳೂರಿನ ಸ್ಪೂರ್ತಿ ಪ್ರಕಾಶನ ಪ್ರಕಾಶಿಸಿದ ಶಾರದಾ ಹೆಮ್ಮಿಗೆ ಬದುಕು ಬರೆಹ ಕೃತಿಯಲ್ಲಿ ವಿಷ್ಣು ನಾಯಕ್, ಸರಜೂ ಕಾಟ್ಕರ್, ಗಂಗೂ ಮೂಲಿಮನಿ, ಪ್ರಹ್ಲಾದ ಅಗಸನಕಟ್ಟಿ, ಜಯಂತ ಕಾಯ್ಕಣಿ ವರುಗಳ ಕವಿತೆಗಳೂ ಕೂಡ ಇದರಲ್ಲಿವೆ.

ಕೋವಿಡ್ ಸಂದರ್ಭದಲ್ಲಿ ‘ಪ್ರಳಯದ ನೆರಳು’ ಎಂಬ ಸುಮಾರು ೮೦ ಲೇಖಕರ ಕಥಾ ಸಂಪುಟವನ್ನು ಕಮಲಾ ಸಂಪಾದಿಸಿ ಪ್ರಕಟಿಸಿದ್ದರು. ಬೆಂಗಳೂರಿನ ನಿವೇದಿತಾ ಪ್ರಕಾಶನ ಇದನ್ನು ಪ್ರಕಟಿಸಿತ್ತು. ೭೮೪ ಪುಟದ ಬೃಹತ್ ಕಥಾ ಸಂಪುಟಕ್ಕೆ ನನ್ನಿಂದ ಮುನ್ನುಡಿ ಬರೆಯಿಸಿದ್ದರು. ಬೇರೆ ಬೇರೆ ಭಾಷೆಯ ಕಥೆ, ಕಿರುಗಥೆ, ಅನುವಾದಗಳು, ೮ ಜೀವನ ವೃತ್ತಾಂತ ಹಾಗೂ ಬಹುಮುಖ್ಯ ಅನ್ನಬಹುದಾದ ಎರಡು ಕಾದಂಬರಿಗಳ ಆಯ್ದ ಭಾಗಗಳು ಇದರಲ್ಲಿವೆ. ನಗರ ಮತ್ತು ಗ್ರಾಮ ಜೀವನದಲ್ಲಿ ಕೋವಿಡ್‌ನಿಂದಾಗಿ ಆಗಿದ್ದ ಸೂಕ್ಷ್ಮ ಪಲ್ಲಟಗಳ ಸಂಪುಟವಿದು.

ಬಹುಶಃ ಇದು ಕಮಾಲಾ ಹೆಮ್ಮಿಗೆ ಪ್ರಕಟಿಸಿದ ಕೊನೆಯ ಕೃತಿ ಇರಬಹುದು. ‘ಇಷ್ಟೆಲ್ಲಾ ಕಥೆಗಳನ್ನು ಓದುವ ತಾಳ್ಮೆ ನಿಮ್ಮಂಥ ಲೇಖಕರಿಗೆ ಮಾತ್ರ ಸಾಧ್ಯ !’ ಎಂದು ಪ್ರೀತಿಯಿಂದ ದೀರ್ಘ ಪತ್ರ ಬರೆದಿದ್ದರು. ಇದು ನನ್ನ ಅವರ ಕೊನಯ ಪತ್ರ ವ್ಯವಹಾರವಾಗಿತ್ತು. ಕಳೆದ ೪೦ ವರ್ಷಗಳಲ್ಲಿ ಐದಾರು ಬಾರಿ ಮಾತ್ರ ಅವರನ್ನು ಕಂಡಿದ್ದೆ. ಬೆಂಗಳೂರಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ( ಸುಮಾರು ಜನವರಿ ೨೦೨೨ ಇರಬಹುದು ) ವಿಚಾರ ಸಂಕಿರಣಕ್ಕೆ ಬಂದಿದ್ದರು. ಅವರ ಕೊನೆಯ ಭೇಟಿ !.

ಧಾರವಾಡ – ಬೆಂಗಳೂರು, ಕೇರಳ ಮತ್ತೆ ಧಾರವಾಡ ಕೊಂಡ ಮನೆಯ ವ್ಯಾಜ್ಯ, ಮದುವೆ, ದೂರದರ್ಶನದಲ್ಲಿರುವಾಗ ಅಚಾನಕ್ ಆದ ವೃತ್ತಿ ತೊಂದರೆ ಇವೆಲ್ಲವುಗಳನ್ನು ಬೆನ್ನಿಗೆ ಹೇರಿಕೊಂಡರೂ ಬರವಣಿಗೆಯನ್ನು ಮಾತ್ರ ಕಮಲಾ ಮರೆಯಲಿಲ್ಲ.
ಕೊನೆಯದಾಗಿ ಕಮಲಾರ ಒಂದು ಪುಟ್ಟ ಪದ್ಯ ನೆನಪಾಗುತ್ತದೆ.

ಘಟ್ಟದ ಆ ತಿರುವಿನಲ್ಲಿ
ಸರ್ದಾಜಿ ಕೈ ಹಿಡಿದು
ಲಾರಿಯಲ್ಲಿ ಹತ್ತಿಸಿಕೊಂಡ,
ದುಡ್ಡು ಕೇಳದೆ ಊರು ಮುಟ್ಟಿಸಿದ !

ಈ ನಾಲ್ಕೇ ನಾಲ್ಕು ಸಾಲುಗಳು ಸಾಕು ಕಮಲಾ ಅವರ ಋಣಾತ್ಮಕ ಜೀವನ ನಂಬುಗೆಗೆ ಸಾಕ್ಷಿಯಾಗಿವೆ.
ಇನ್ನೊಂದು ಅವರ ತಾಯಿ ಶಾರದಾ ಹೆಮ್ಮಿಗೆ, ಕಮಲಾ ಅವರ ಬಗ್ಗೆ ಬರೆದ ಸಾಲುಗಳು ಹೀಗಿವೆ-
ಮಗ ವಾಕಿಂಗಿಗೆ, ಮಗಳು ಶಾಲು ಹೊದ್ದು ರೈಲಿಗೆ
ರಿಕ್ಷಾ ಸಿಗುತ್ತಿಲ್ಲ, ಮಳೆ ಬೇರೆ. ಹೇಗವಳ ಬೆನ್ನಿಗಿರಲಿ ?

ತಾಯಿ – ಮಗಳು ಇಬ್ಬರೂ ಇಲ್ಲ. ಅವರ ಸಾಲುಗಳು ನಮ್ಮನ್ನು ಕಾಡಬಹುದು.
ಕೊನೆಯಲ್ಲಿ ಒಂದು ಮಾತು : ಒಂದು ಸಾವು ಮರೆಯಲು ಈ ದಿನಗಳಲ್ಲಿ ಎರಡೇ ಎರಡು ದಿನ ಸಾಕು !               

‍ಲೇಖಕರು avadhi

September 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: