ಕಮಲಾಕರ್ ಭಟ್ ಕಂಡಂತೆ ರಮೇಶ್ ಅರೋಲಿ…

ಕಮಲಾಕರ್ ಭಟ್

ದಿಲ್ಲಿ ಮುಟ್ಟಿದ ಮ್ಯಾಲೂ ಹಳ್ಳಿ ಬಿಟ್ಟಕೊಡದ ಕವಿ ಅಂದ್ರ ರಮೇಶ್ ಅರೋಲಿ. ಅವರ ಎರಡನೆಯ ಮತ್ತು ಮೂರನೆಯ ಸಂಕಲನಗಳನ್ನು ಓದಿ ಮುಗಿಸಿದಾಗ ಅನಿಸಿದ್ದು ಎಂದರೆ, ಹೊಸದಾಗಿ ಕಟ್ಟಿಕೊಂಡ ಭಾಷೆ, ಕಾವ್ಯವಿಧಾನ, ಅರ್ಥವಿನ್ಯಾಸಗಳಲ್ಲಿ ಹಳೆಯ ಹಸಿವುಗಳ, ವಿಷಾದ – ವಿರೋಧಾಭಾಸಗಳ, ಭಾವಿಸಿದ ಬವಣೆಗಳ, ಹಿಂದು – ಇಂದು – ಮುಂದುಗಳನ್ನು ಶೋಧಿಸುತ್ತಾ ತನ್ನ ಜೊತೆಗೆ ನಮ್ಮನ್ನೂ ಈ ನೈತಿಕ ಅರ್ಥಶೋಧನೆಗೆ ಹಚ್ಚುವ ಕವಿ ಅರೋಲಿ.

“ಜುಲುಮೆ” ಅವರ ಗೇಯ ಕವಿತೆಗಳ ಸಂಗ್ರಹ. ಚಂದ್ರಶೇಖರ ಕಂಬಾರರ ಜಾನಪದ ಲಯಗಾರಿಕೆಯ ಹಿಂದೆಯೂ ನವ್ಯ ಕಾವ್ಯದ ಗುಣವೇ ಇದೆ ಎಂದು ಆ ಕಾಲದ ಕಂಬಾರರ ಕಾವ್ಯದ ಕುರಿತು ವಿಮರ್ಶಕರು ಹೇಳುತ್ತಾರೆ. ಬೇಂದ್ರೆಯವರ ಕಾವ್ಯವೂ ನಮಗೆ ಜಾನಪದ ಸೊಗಡಿನದು ಎನಿಸಿದರೂ ಅದನ್ನು ಜಾನಪದ ರಚನೆಯಾಗಿ ಓದುವುದು ಸಾಧ್ಯವಾಗದ ಏನೋ ಒಂದು ಲಕ್ಷಣ ಅದರಲ್ಲಿಯೇ ಇರುತ್ತದೆ. ಮೌಖಿಕ ಮಾಧ್ಯಮ ತೊರೆದು ಮುದ್ರಣ ಮಾಧ್ಯಮದ ಮೂಲಕ ಜನರ ಓದಿಗೆ ದಕ್ಕುತ್ತಲಿರುವ ಕಾವ್ಯದಲ್ಲಿ ಜಾನಪದ ಎನ್ನುವುದು ಕೇವಲ ನೆನಪು. ಆದರೂ ರಮೇಶ್ ತಮ್ಮ ಮುನ್ನುಡಿಯಲ್ಲಿ ಹೇಳುವ ಹಾಗೆ, ಅದು ಮತ್ತೆ ಮತ್ತೆ ನಮ್ಮನ್ನು ಅಟ್ಟಿಬರುವ ನೆನಪು, ನಾವೇ ಹಠಕ್ಕೆ ಬಿದ್ದು ಹಿಂಬಾಲಿಸುವ ನೆನಪು. ಹಾಗಾಗಿ, ನಮ್ಮ ಆಧುನಿಕ ತುರ್ತುಗಳ ವ್ಯಾಖ್ಯಾನಕ್ಕೂ ನಮ್ಮ ಕಾವ್ಯಪರಂಪರೆಯ ಈ ನೆನಪುಗಳು, ಕನ್ನಡ ನುಡಿಯಲ್ಲಿ ಅಡಗಿ ಕುಂತಿರುವ ನಾದ ಲಯಗಳು, ಇಡಿಯಾಗಿ ದಕ್ಕದಿದ್ದರೂ ಹಿಡಿಗೆ ಸಿಕ್ಕಾಷ್ಟಾದರೂ ಬೇಕು ಎನ್ನುವುದು ನಿಜ. ಹೆಚ್ಚು ಜನರನ್ನು ತಲುಪಲು ಅವು ಸಹಕಾರಿ ಎನ್ನುವುದು ಸತ್ಯ ಮತ್ತು ಈ ಗುಣವೇ ಸಾಕು.

“ಜುಲುಮೆ” ಸಂಕಲನದ ಉದ್ದಕ್ಕೂ ‘ತಾಯಂದಿರ ಜೋಗುಳ’ ಕೇಳಿಸಿಕೊಳ್ಳುವ ತವಕ; ಗಿಳಿಯ ‘ಪೊಟರಿನ ಗುಟುರು’ ಕೇಳದ ಆತಂಕ. ರಮೇಶ್ ಇದಕ್ಕೆ “ಹಸಿದ ಮೇಕೆಯ ಅಳಲು, ಸೋತ ಗೂಳಿಯ ಗುಟುರು” ಅನ್ನುತ್ತಾರೆ. ನನಗೆ ಈ ರೂಪಕಗಳಲ್ಲಿಯೇ ರಮೇಶ್ ಅವರ ಅಂತರಂಗ ಅರಿವಿಗೆ ಬರುತ್ತದೆ. ಇವು ಕವನಗಳಲ್ಲ, ಕಾವ್ಯವನ್ನು ಅಥವಾ ಹಾಡನ್ನು ಕರುಳಿನ ಅಳಲಿಗೆ ಮಾಧ್ಯಮವಾಗಿಸಿದ ಪ್ರಯೋಗಗಳು. ಇಲ್ಲಿನ ಪ್ರತಿ ಕವನದಲ್ಲಿಯೂ ಅವಗಣನೆಗೆ ಗುರಿಯಾದ ಜನರು, ಮತ್ತು ಅವರ ಕಥನಗಳಿವೆ. ಹೆಚ್ಚಿನ ಕವನಗಳಲ್ಲಿ ಈ ಕಥನ ಮತ್ತು ಲಯಗಾರಿಕೆಯ ಮೂಲಕವೇ ಓದುಗರಲ್ಲಿ ನೈತಿಕ ಗಾಭರಿ ಹುಟ್ಟಿಸುವ ನಂಬಿಕೆ ಈ ಕವಿಯದು. “ಹೇಗೆ ನಗುವುದು ಜಡೆಯಲಿ” ಅಂತಹ ಒಂದೊಂದು ಭಾವಗೀತೆಗಳೂ ಇವೆ. ಕನ್ನಡದ ಜನಮಾನಸದಲ್ಲಿ ಈಗಲೂ ಹಸನಾಗಿ ಇರುವ ಹಲವು ಲಯಗಳ ಜೊತೆಗೆ, ತೆಲುಗು ನುಡಿಯಿಂದಲೂ ಲಯವನ್ನು ಬರಮಾಡಿಕೊಂಡು ರಚಿಸುತ್ತಾರೆ ರಮೇಶ್. ಈ ಕವಿತೆಗಳಲ್ಲಿ ಅರ್ಥಅಹಂಕಾರದ ಸಾಂದ್ರತೆಯನ್ನು ಕರಗಿಸಿ ಹಗುರ ಹಾಡಿನ ಮಂದಗತಿಗೆ ಓದುಗನನ್ನು ಸೆಳೆಯುವುದು ನನಗೆ ವಿಶೇಷವಾಗಿ ಹಿಡಿಸಿತು. ಪುನರಾವರ್ತನೆ, ಪುಟ್ಟ ಪುಟ್ಟ ಸಾಲುಗಳು, ಗಹನ ವಿಚಾರಗಳನ್ನು ಗಿಡಿದು ತುಂಬುವ ಹಠ ಇಲ್ಲದೆ ಇರುವುದು, ಗೇಯತೆಗೆ ತಾತ್ವಿಕತೆಯ ಅಂಗಿ ತೊಡಿಸುವುದು ಈ ಕವನಗಳ ಹೆಚ್ಚುಗಾರಿಕೆ. ಇದು ನನ್ನ ಓದನ್ನು ಸಾವಕಾಶ ಮಾಡಿ, ಅಲ್ಲಿಯ ಅರ್ಥಪ್ರಪಂಚದ ಬದಲಿಗೆ ಭಾವಪ್ರಪಂಚಕ್ಕೆ ಸ್ಪಂದಿಸಲು ಆಹ್ವಾನಿಸಿತು. ಇಲ್ಲಿಯ ಅನೇಕ ಕವನಗಳಲ್ಲಿ ಹೆಣ್ಣು ಪಾತ್ರಗಳಿವೆ. ಅವು ನಮ್ಮನ್ನು ಆ ಪಾತ್ರಗಳ ಕಷ್ಟ ಕೋಟಲೆ, ಸಂಕಟಗಳಿಗೆ ಸ್ಪಂದಿಸುವಂತೆ ಮಾಡುತ್ತವೆ. ಇದಕ್ಕಿಂತ ಮುಖ್ಯವಾಗಿ, ಈ ಕವನಗಳ ಆಳದಲ್ಲಿ ಒಂದು ತಾಯ್ತನದ ಸಂವೇದನೆ ಇದೆ. ಹೆಂಗರುಳಿನ ಈ ಕವನಗಳು ಗಂಡುಗರ್ವವನ್ನು ಕರಗಿಸುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಕಥನ ಕವನಗಳಲ್ಲಿ ರಮೇಶ್ ತಮ್ಮ ವಿಶೇಷ ಶಕ್ತಿ ತೋರಿಸುತ್ತಾರೆ, ಶೀರ್ಷಿಕೆಯ ಕವನವಾದ “ಜುಲುಮೆ” ಒಂದು ಒಳ್ಳೆಯ ಉದಾಹರಣೆ.

ಒಂದೊಂದು ಕವನವೂ ಒಂದು ನಿಟ್ಟುಸಿರಿನಂತೆ, ಒಂದು ಕರುಳಕರೆಯಂತೆ, ಒಂದು ಮಾನವೀಯ ಧ್ಯಾನದಂತೆ ಕಂಡು ಬರುವ “ಜುಲುಮೆ” ಸಂಕಲನದ ನಂತರ ರಮೇಶ್ “ಬಿಡು ಸಾಕು ಈ ಕೇಡುಗಾಲಕ್ಕಿಷ್ಟು” ಎಂಬ ಮಹತ್ವಾಕಾಂಕ್ಷಿ ಸಂಕಲನದಿಂದ ಮತ್ತೊಮ್ಮೆ ನನ್ನಲ್ಲಿ ಬೆರಗು ಮೂಡಿಸಿದರು. ಈ ಸಂಕಲನ ಓದುತ್ತಾ ಹಿಂದಿನ ತಲ್ಲಣಗಳ ಮುಂದುವರಿದ ಅಭಿವ್ಯಕ್ತಿ ಇಲ್ಲಿ ಕಂಡು ಬಂದ ಹಾಗೆ, ರಮೇಶ್ ಮತ್ತೂ ಮುಂದಿನ ಸಮಸ್ಯೆಯನ್ನು ಎತ್ತಿಕೊಂಡು ತಡಕಾಡುತ್ತಿದ್ದಾರೆ ಅನಿಸಿತು. ಈ ಸಂಕಲನದ ಕವನಗಳಲ್ಲಿ ಗೇಯ ಕವಿತೆಗಳ ಜೊತೆಗೆ, ಮುಕ್ತಛಂದದ ಕವಿತೆಗಳೂ ಇರುವುದು ವಿಶೇಷ. ಜಾನಪದ ಸೊಗಡಿನ ಗೇಯ ಕಾವ್ಯ ಮತ್ತು ಮುಕ್ತಛಂದದ ಆಧುನಿಕ ಅಭಿವ್ಯಕ್ತಿ ವಿಧಾನಗಳು ಕನ್ನಡ ಕವಿಗಳಿಗೆ ಯಾವ ಸಾಧ್ಯತೆಗಳನ್ನು ತೆರೆಯುತ್ತವೆ, ಯಾವುದನ್ನು ಮುಚ್ಚುತ್ತವೆ? ಗೇಯ ಕವಿತೆ ಮುಚ್ಚಿದ ಸಾಧ್ಯತೆಗಳನ್ನು ಮುಕ್ತಛಂದ ತೆರೆಯುತ್ತದೆಯೇ? ಮುಕ್ತಛಂದದ ಸೊಕ್ಕು ಮುಕ್ಕುಗಳನ್ನು ಜಾನಪದ ಲಯ ನಯವಾಗಿಸುವುದೆ? ಈ ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡವು. ಪದ, ಪದಾರ್ಥ, ಲಯಗಳಲ್ಲಿ ಮುಂದುವರಿಕೆ ಇದ್ದರೂ ಸಂವೇದನೆಯಲ್ಲಿ ಬೇರೆ ಏನೋ ಆಗುತ್ತಿದೆಯಲ್ಲ!

ರಮೇಶ್ ಕವನಗಳ ಒಟ್ಟಾರೆ ಲಕ್ಷಣಗಳ ಕುರಿತಾಗಿ ವಿಸ್ತೃತವಾಗಿ ಬರೆಯ ಬೇಕಾಗುತ್ತದೆ. ಆದರೆ, ತಕ್ಷಣಕ್ಕೆ ತೋರಿದ ಅಂಶಗಳನ್ನು ಟಿಪ್ಪಣಿ ಮಾಡುವುದಾದರೆ: ಸಮಾಜದಲ್ಲಿನ ಪುರಾತನ ಕ್ರೌರ್ಯ ಅನ್ಯಾಯಗಳ ಮುಂದುವರಿಕೆಯ ಚಿತ್ರಗಳನ್ನು ಅವರ ಕಣ್ಣು, ಪ್ರಜ್ಞೆ ಮತ್ತು ಕರುಳು ಸಾತತ್ಯದಿಂದ ಕಟ್ಟಿಕೊಡುತ್ತವೆ. ಪ್ರತಿ ಕವನವೂ ಒಂದು ನೈತಿಕ ಜಾಗ್ರತೆಯಾಗಿ ಕೆಲಸ ಮಾಡಬೇಕು, ಅದು ಬರಿಯ ಹಾಡು ಅಥವಾ ಕವಿತೆ ಮಾತ್ರ ಆಗಬಾರದು ಎಂಬ ಕಳಕಳಿ ಇಲ್ಲಿದೆ. ನಮ್ಮನ್ನು ಸುತ್ತಿಕೊಂಡಿರುವ ಹಳೆಯ ಮತ್ತು ಹೊಸ ಹಿಂಸೆ – ಅತ್ಯಾಚಾರಗಳನ್ನು ಎದುರಿಸಲು ನಮ್ಮ ಸಮಾಜಕ್ಕೆ ಅಗತ್ಯವಿರುವ ಸಂವಹನ ವಿಧಾನ – ಪರಿಕರಗಳ ಶೋಧನೆಯೂ ಆಗಬೇಕಿರುವ ಎಚ್ಚರ ಇಲ್ಲಿದೆ. ಸಾಹಿತ್ಯವೆಂದರೆ ವ್ಯಕ್ತಿಯ ಮೂಲಕ ಸಮಷ್ಟಿಯ ಕುರಿತಾದ ಧ್ಯಾನವೆನ್ನುವ ಬದ್ಧತೆ ಇದೆ. ಆದರೂ, ರಮೇಶ್ ಕವನಗಳು ನನ್ನಲ್ಲಿ ಎಬ್ಬಿಸಿರುವ ಪ್ರಶ್ನೆಗಳೆಂದರೆ:

ಆಧುನಿಕ ಅನುಭವಗಳ ಅಭಿವ್ಯಕ್ತಿಗೆ ಸಂಕೀರ್ಣತೆ, ಕ್ಲಿಷ್ಟತೆಗಳಿಂದ ಸಂಪೂರ್ಣವಾಗಿ ಬಿಡಿಸಿಕೊಂಡ ಕಾವ್ಯ ವಿಧಾನ ಸಾಧ್ಯವೇ? ರಮೇಶ್ ತಮ್ಮ ಕವನಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಹೋಗಿ ಬಂದು ಮಾಡುತ್ತಿರುವುದರ ಅರ್ಥ ಈ ಸಂದಿಗ್ಧತೆಯ ದ್ಯೋತಕವವೇ?

ತುಳಿತ – ಅತ್ಯಾಚಾರಕ್ಕೆ ಒಳಗಾದವರ ಕುರಿತ ಕಾವ್ಯ ಅವರ ಸಂಕಟ ನೋವುಗಳನ್ನು ಚಿತ್ರಿಸುವಷ್ಟೇ ಅವರ ಸಾಮರ್ಥ್ಯ, ಶಕ್ತಿ, ಏಜೆನ್ಸಿಗಳನ್ನು ಚಿತ್ರಿಸುವ ಕಡೆ ನಮ್ಮ ಸಾಹಿತ್ಯ ಹೆಚ್ಚು ಆಸಕ್ತಿ ತೋರಬೇಕೇ?

ಸರಳ ಬಂಧದ ಜಾನಪದ ಲಯದ ಕಾವ್ಯ ಮುದ್ರಣ ಮಾಧ್ಯಮದ ಸಾಹಿತ್ಯ ಮಾತ್ರವಾಗಿ ಪ್ರಸರಣಗೊಂಡರೆ, ಜನರನ್ನು ತಲುಪಲು ಅದಕ್ಕೆ ಬೇಕಾದ ಸಂದರ್ಭಗಳು ದಕ್ಕದೇ ಹೋದರೆ ಆಗ, ಅಂತಹ ಕಾವ್ಯದ ಸಾಧನೆ ಏನು? ಇನ್ನೂ ಸ್ಪಷ್ಟವಾಗಿ ಕೇಳಬೇಕು ಎಂದರೆ, ಸಿದ್ದಲಿಂಗಯ್ಯನವರ ಹೋರಾಟದ ಹಾಡುಗಳು ಚಳುವಳಿಯ ಭಾಗವಾಗಿ ಜನರ ದನಿಯಾಗದೆ ಇದ್ದಿದ್ದರೆ ಅವುಗಳನ್ನು ಹೇಗೆ ಭಾವಿಸುತ್ತಿದ್ದೆವು? ಮಾಧ್ಯಮ ಕ್ಷೇತ್ರದಲ್ಲಿ ತಜ್ಞರೂ ಆಗಿರುವ ರಮೇಶ್ ಕೂಡ ಬಹುಶಃ ಈ ಪ್ರಶ್ನೆಗಳ ಜೊತೆ ಹೆಣಗಾಡುತ್ತಿರಬಹುದು.

‍ಲೇಖಕರು avadhi

March 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: