ಸಿದ್ದು ಪಿನಾಕಿ
ನಟ, ಗೆಳೆಯ ಶ್ರೀಮುರಳಿ ಅವರನ್ನು ತಬ್ಬಿಕೊಂಡು, ಲೇಟ್ ಆಯ್ತು, ಊಟ ಮಾಡಿ ನೀವು.. ಬರ್ತೇನೆ ಎಂದೆ. ಓಕೆ ಸಿದ್ದೂ… ಬೆಂಗಳೂರಿನಲ್ಲಿ ಸಿಗೋಣ ಎಂದವರೇ, ಹುಷಾರು ಎಂದರು.
ಆಗಲೇ ಸಂಜೆ ನಾಲ್ಕೂ ಮುಕ್ಕಾಲು. ಆತ್ಮೀಯ ಗೆಳೆಯರಾದ ವಿನೋದ್ ನಾಯ್ಕ್ ಅವರಿಗೂ ಹೇಳಿ, ಹೊರಡಲು ಸಿದ್ದವಾದೆ.
ಈ ಬಾರಿ, ವನ್ಯಜೀವಿ ಸಂರಕ್ಷಣಾ ಅಭಿಯಾನ, ಬಂಡೀಪುರಕ್ಕಿಂತಲೂ ಅದ್ಭುತವಾಗಿತ್ತು. ಕಬಿನಿ ಕಾಡಿನ, ಕೇರಳ ಮಗ್ಗುಲಲ್ಲಿರುವ ಡಿ.ಬಿ.ಕುಪ್ಪೆಯಲ್ಲಿ ಅಭಿಯಾನದ ಕಾರ್ಯಕ್ರಮವಿತ್ತು. ವಿನೋದ್ ನಾಯ್ಕ್, ಬಹಳ ಅದ್ಭುತವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಅವರು ಒಂಥರಾ ಒನ್ ಮ್ಯಾನ್ ಆರ್ಮಿ ಇದ್ದಂಗೆ.
ಶಾಸಕ ಅನಿಲ್ ಚಿಕ್ಕಮಾದು, ತಮ್ಮೆಲ್ಲಾ ಕೆಲಸಗಳನ್ನೂ ಸೈಡಲ್ಲಿಟ್ಟು, ಬಂದಿದ್ದರು. ನಾಗರಹೊಳೆ ಸಿ.ಎಫ್, ನನ್ನ ಆತ್ಮೀಯರೂ ಆದ ನಾರಾಯಣ ಸ್ವಾಮಿ, ಗೆಳೆಯ, ರೇಂಜ್ ಆಫೀಸರ್ ವಿನಯ್ ಹಾಗೆಯೇ, ಕಬಿನಿ ಕಾಡಿನ ನನ್ನ ಗೆಳೆಯರ ದೊಡ್ಡ ಹಿಂಡೇ ಹಾಜರಿತ್ತು.
ಎರಡೂವರೆ ಗಂಟೆ, ಕಾಡ ಮಕ್ಕಳೊಂಡಿಗೆ ಮಾತುಕತೆ ಸೊಗಸಾಗಿತ್ತು. ಅಲ್ಲಿಂದ, ಮತ್ತೆ ಕಾರಾಪುರದ ಜಂಗಲ್ ಲಾಡ್ಜ್ ಗೆ ಬರುವಷ್ಟರಲ್ಲಿ ಹೊಟ್ಟೆ ಚುರು ಚುರು ಎನ್ನುತ್ತಿತ್ತು. ನಾನು ಊಟ ಮಾಡಿದಾಗಲೇ ಸಂಜೆ ನಾಲ್ಕು ಗಂಟೆ.
ಶ್ರೀಮುರಳಿ, ಇನ್ನೂ ಊಟ ಮಾಡಿರಲಿಲ್ಲ. ಹೀಗಾಗೇ, ನೀವು ಊಟ ಮಾಡಿ, ನಾನು ಬೇಗೂರಿಗೆ ಹೊರಡ್ತೇನೆ ಎಂದೆ. ಕಾರಾಪುರ ಕಾಡಿನಿಂದ ಬೇಗೂರಿಗೆ ರಸ್ತೆ ಮಾರ್ಗವಾಗಿ ಹೋಗ್ತೇನೆಂದ್ರೆ, ಐವತ್ತೈದು ಕಿಲೋ ಮೀಟರ್. ಅ ರಸ್ತೆಯಲ್ಲಿ, ಮಿನಿಮಮ್ ಒಂದೂವರೆ ಗಂಟೆ ಜರ್ನಿ.
ಆದ್ರೆ, ನದಿ ದಾಟಿ ಹೋದ್ರೆ, ಐದೇ ಐದು ನಿಮಿಷ. ಉದ್ಭೂರು ಫಾರೆಸ್ಟ್ ಚೆಕ್‍ಪೋಸ್ಟ್ ನಿಂದ ಕಬಿನಿ ನದಿಗೆ ಕಾಲಿಟ್ಟೆವು. ನನ್ನೊಂದಿಗೆ ತಮ್ಮನಂತಹ ಕಾರ್ತಿಕ್ ಇದ್ದ. ನಾನು ಕಾಡನ್ನು ಎಷ್ಟೇ ಇಷ್ಟಪಟ್ಟರೂ, ಈ ನೀರೆಂದ್ರೆ ಒಂಥರಾ ಭಯ.
ಬೋಟ್ ಹತ್ತಿದವರಿಗೆ, ಆ ಕಡೆ ದಡದ ಮೂರ್ನಾಲ್ಕು ಗ್ರಾಮಸ್ಥರೂ ಜೊತೆಯಾದರು. ಆ ಅಗಾಧವಾದ, ನದಿಯನ್ನು ನೋಡಿದವರಿಗೆ ಎದೆ ಜಲ್ ಎನಿಸುತ್ತದೆ.
ಬೋಟ್ ಮೋಟಾರ್ ಸ್ಟಾರ್ಟ್ ಆಗಿ, ಸ್ವಲ್ಪ ದೂರ ಹೋಗಿತ್ತಷ್ಟೇ. ನೀರಿನಲ್ಲಿ ಕಪ್ಪನೆಯ ಎರಡು ಕಣ್ಣುಗಳು. ಬೋಟ್‍ನ ಸಮೀಪದಲ್ಲೇ ಇದ್ದವು. ತಕ್ಷಣವೇ, ಅದು ಮೊಸಳೆ ಎಂಬುದು ಗೊತ್ತಾದಾಗ, ಶಿವನೇ ಎಂದುಕೊಂಡೆ. ನದಿಯ ಮಧ್ಯಭಾಗಕ್ಕೆ ಹೋಗುತ್ತಿದ್ದಂತೇ, ಹಲವು ಕಣ್ಣುಗಳು ನೀರಿನೊಳಗೆ ತೇಲುತ್ತಿದ್ದವು.
ಕಾರ್ತಿಕ್‍ಗೂ ನೀರೆಂದ್ರೆ, ಸಿಕ್ಕಾಪಟ್ಟೆ ಭಯ. ಲೋ, ಬೆಳಗಾಗೆದ್ರೆ, ಹುಲಿ, ಆನೆ ನೋಡೋ, ನೀನೂ ಹೆದರುತ್ತೀಯಲ್ಲೋ ಎಂದು ನಕ್ಕೆ. ಆದ್ರೆ, ಒಳಗೊಳಗೇ ನನಗೂ ಹವಾ ಠುಸ್ ಎಂದಿತ್ತು. ಹ..ಹ…ಹ.
ಗೆಂಡತ್ತೂರಿನ ಆ ಕಡೆ ದಡ ತಲುಪುತ್ತಿದ್ದಂತೇ ನೆಮ್ಮದಿ. ಇಳಿಯುತ್ತಿದ್ದಂತೇ, ಬೇಗೂರಿನ ಗೆಳೆಯರು, ಕಾಯುತ್ತಿದ್ದರು. ಸೀದಾ ಬೇಗೂರಿಗೆ ಹೋಗಿ, ಸ್ನೇಹಿತರ ಹಿಂಡಿನೊಂಡಿಗೆ ಕಾಡು ಹರಟೆ ಶುರು ಹಚ್ಚಿಕೊಂಡೆ.
ಎರಡು ದಿನದ ಹಿಂದಷ್ಟೇ, ಇದೇ ರೇಂಜಿನಲ್ಲಿ ಭಾರೀ ಗಾತ್ರದ ಗಂಡು ಹುಲಿ ಸಾವನ್ನಪ್ಪಿತ್ತು. ಅದು ಟೆರೋಟೋರಿಯಲ್ ವಾರ್. ಎರಡು ಗಂಡು ಹುಲಿಗಳ ಕಾದಾಟವದು.
ಈ ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿ, ನರಳೀ, ನರಳೀ ಗುಂಡಿಯೊಂದರಲ್ಲಿ ಬಿದ್ದು ಸಾವನ್ನಪ್ಪಿತ್ತು. ಅರಣ್ಯ ಇಲಾಖೆಗೆ ಗೊತ್ತಾಗುವಷ್ಟರಲ್ಲಿ ಹುಲಿಯ ದೇಹ ಕೊಳೆತುಹೋಗಿತ್ತು. ಈ ಹೋರಾಟದಲ್ಲಿ ಗೆದ್ದ ಹುಲಿ ಸೋತಂತೆ, ಸೋತ ಹುಲಿ, ಸತ್ತಂತೆ. ಗೆದ್ದ ಹುಲಿಗೂ ಭಾರೀ ಪ್ರಮಾಣದಲ್ಲೇ ಗಾಯವಾಗಿರುತ್ತೆ. ಗಾಯವನ್ನು ನೆಕ್ಕುತ್ತಿರುವ ಹುಲಿ, ಸಿಕ್ಕಾಪಟ್ಟೆ ಡೇಂಜರ್.
ಇದಕ್ಕೆ ಬೇಟೆ ಮಾಡೋದಿಕ್ಕೆ ಆಗೋದಿಲ್ಲ. ಆಗ, ಕಾಡು ಬಿಟ್ಟು, ಊರ ದಾರಿಗೆ ಬರುತ್ತೆ. ಸುಲಭವಾಗಿ ಸಿಗೋ ದನ, ಕರುಗಳನ್ನು ಹಿಡಿಯುತ್ತೆ. ಈ ಗಾಯಗೊಂಡ ಹುಲಿಯೂ, ಹಸುವೊಂದನ್ನು ತಿಂದು ಹಾಕಿತ್ತು.
ಅರಣ್ಯ ಸಿಬ್ಬಂದಿ, ಈ ಬಗ್ಗೆ ಎಚ್ಚರವಾಗಿರುವಂತೆ, ಕಾಡಂಚಿನ ಗ್ರಾಮಸ್ಥರನ್ನು ಎಚ್ಚರಿಸುತ್ತಿದ್ದರು. ಆಗಲೇ, ನಾನೂ ಜೊತೆಗಿದ್ದೆ.
ಬಂಡೀಪುರದ ಚೌಡಳ್ಳಿಯಲ್ಲಾದ ದುರ್ಘಟನೆ, ಇಲ್ಲೂ ಆಗಬಾರದು ಎಂಬುದು ನನ್ನಿಚ್ಛೆ. ಅಲ್ಲಿ ನರಭಕ್ಷಕ ಇಬ್ಬರನ್ನು ಹೊಡೆದು ಹಾಕಿತ್ತು. ಹೀಗಾಗೇ, ಅರಣ್ಯ ಸಿಬ್ಬಂದಿ ಮುತುವರ್ಜಿ ವಹಿಸಿದ್ದರು.
ಸಾಮಾನ್ಯವಾಗಿ ಯಾವ ಹುಲಿಯೂ ಮನುಷ್ಯನ ಮೇಲೆ ದಾಳಿ ಮಾಡುವುದೇ ಇಲ್ಲ. ಆದ್ರೆ, ಗಾಯಗೊಂಡ ಹುಲಿ, ದನ ಕರುಗಳನ್ನು ಹಿಡಿದಾಗ, ಅದನ್ನು ತಡೆಯಲು ಹೋದ ಸಂದರ್ಭದಲ್ಲಿ, ಮನುಷ್ಯನ ಮೇಲೆಯೇ ಬೀಳುತ್ತವೆ. ಆಗ ಅದಕ್ಕೆ, ನರಹಂತಕ ಎಂಬ ಹಣೆಪಟ್ಟಿಯೂ ಬೀಳುತ್ತದೆ.
ಮಾರನೇ ದಿನ ನಾನು, ಕಾರ್ತಿ ಮತ್ತು ರಾಜಣ್ಣ ಕಾಡಂಚಿನ ಗ್ರಾಮದಲ್ಲಿದ್ದ ದನ ಮೇಯಿಸುವವರನ್ನು ಮಾತನಾಡಿಸುತ್ತಿದ್ದೆವು. ಕಾಡಂಚಿನಲ್ಲೇ, ಹಸುವೊಂದರ ಮೈದಡವುತ್ತಿದ್ದ ನನಗೆ, ಒಂಥರಾ ಸ್ಮೆಲ್. ಸುತ್ತಮುತ್ತ ಕಣ್ಣಾಡಿಸಿದವನಿಗೆ ಕಂಡಿದ್ದು, ಹುಲಿ ಹಾಕಿದ್ದ ಮಲ.
ಮೈ ಜುಂ ಎಂದಿತು. ಏಕಂದ್ರೆ, ಸ್ವಲ್ಪ ಹೊತ್ತಿನ ಮುಂಚೆಯಷ್ಟೇ, ಹುಲಿ, ಅಲ್ಲಿಂದ ತೆರಳಿತ್ತು. ಹೆಚ್ಚು ಜನರು ಇದ್ದರಿಂದ, ಬಹುಶಃ ಅದು ಹೊರಟು ಹೋಗಿರಬಹುದು. ದನ ಕಾಯುತ್ತಿದ್ದವರನ್ನು ಎಚ್ಚರಿಸಿದೆವು.
ಕಾಡೊಳಗೆ ಯಾರೂ ಹೋಗ್ಬೇಡಿ, ಹೊತ್ತು ಮುಳುಗುವ ಮುಂಚೆಯೇ, ಗುಡ್ಡ ಇಳಿದು, ದನ ಹೊಡೆದುಕೊಂಡು ಹೋಗಿ ಎಂದು ಹೇಳಿ, ನಾವೂ ಹೊರಟುಬಿಟ್ಟೆವು.
0 Comments