ಕಪ್ಪೆ ಕಲಿಸಿದ ‘ರಸ್ತೆ ನಿಯಮಗಳು’..

ತಮ್ಮಣ್ಣ ಬೀಗಾರ

**

ಏನು ಹಾಗೆ ನೋಡುತ್ತಾ ಇದ್ದೀರಿ..? ಸಿಟ್ಟು ಬಂದುಬಿಟ್ಟಿತಾ? ಯಾರು ರಸ್ತೆ ದಾಟುವುದು? ನಾವು ಶಾಲೆಗೆ ಹೋಗುವ ಹುಡುಗರು.
ಶಾಲೆಯಿಂದ ಹೊರಗೆ ಬಂದು ಆಟದ ಮೈದಾನ ದಾಟಿ ಪಕ್ಕದ ರಸ್ತೆ ದಾಟಿದರೆ ನಮಗೆ ಬೇಕಾದ ಸಾಮಾನೆಲ್ಲಾ ಸಿಗುವ ಅಂಗಡಿ ಇದೆ.
ಅಲ್ಲಿಗೆ ಹೋಗಿ ಬಣ್ಣದ ಪೆನ್ಸಿಲ್ಲೋ, ರಬ್ಬರ್ರೋ, ಹೊಳೆಯುವ ಪುಟ್ಟ ಪ್ಲಾಸ್ಟಿಕ್ ಬಾಲೋ ಕೊಂಡುಕೊಂಡು ಬರೋಣ ಅಂದರೆ “ನೀವು ಮಕ್ಕಳು ರಸ್ತೆ ದಾಟಿ ಹಾಗೆ ಹೋಗುವುದು ಸರಿಯಲ್ಲ. ವಾಹನವೇನಾದರೂ ವೇಗವಾಗಿ ಬಂದು ಅಪಘಾತ ಆದರೆ” ಅನ್ನುತ್ತಾರೆ. ನಮಗೇ ರಸ್ತೆದಾಟಲು ಅವಕಾಶ ಕೊಡಲು ದೊಡ್ಡವರು ಹಿಂದೆ ಮುಂದೆ ನೋಡುತ್ತಾರೆ ಎಂದೆಲ್ಲ ಅಂದುಕೊಳ್ಳುತ್ತಾ ಇದ್ದೀರಾ? ಇನ್ನು ಕಪ್ಪೆಗೇನು ರಸ್ತೆ ದಾಟುವ ಕೆಲಸ ಎಂದು ನಿಮಗೆ ಅನಿಸಿರಬೇಕು ಅಲ್ವಾ? ಸರಿ ಸರಿ ನೀವು ಸರಿಯಾಗಿ ಆಲೋಚನೆ ಮಾಡಿರುತ್ತೀರಿ. ಆದರೆ ನಿಮ್ಮ ಕಷ್ಟ ಸುಖ ಎಲ್ಲ ನಿಮ್ಮ ಗೆಳೆಯರ ಹತ್ತಿರ ಹೇಳಿ ಹಂಚಿಕೊಳ್ಳುತ್ತೀರಿ. ಹಾಗಾಗಿ ನಿಮ್ಮ ಕಷ್ಟ ಕೆಲವು ಸಾರಿ ದೊಡ್ಡವರಿಗೂ ಗೊತ್ತಾಗಿ ಏನೇನೋ ಪರಿಹಾರಕ್ಕೆ ಇಳಿಯುತ್ತಾರೆ. ಆದರೆ ನಾವು ಕಪ್ಪೆಗಳು, ಇಲಿಗಳು, ಹಾವುಗಳು, ಏಡಿಗಳು ಎಲ್ಲಾ ನಮ್ಮ ಕಷ್ಟ ಹೇಗೆ ಹೇಳಿಕೊಳ್ಳುವುದು ಹೇಳಿ? ಆದರೂ ನೀವು ಮಕ್ಕಳು, ತುಂಬಾ ಜಾಣರು.

ಪ್ರೀತಿಯಿಂದ ಮೋಡ ನೋಡಿ ಅದಕ್ಕೆ ಖುಷಿ ಆಗುವ ಹಾಗೆ ಹಾಡು ಹೇಳುತ್ತೀರಿ. ಮರವನ್ನು ಪ್ರೀತಿ ಮಾಡುತ್ತಾ ಅದಕ್ಕೆ ಗೊಬ್ಬರ ನೀರು ಹಾಕಿ ಖುಷಿ ಪಡಿಸುತ್ತೀರಿ. ಅಷ್ಟೇ ಅಲ್ಲ ಚಿಟ್ಟೆಯನ್ನು ಕಂಡರೆ ಚಿಟ್ಟೆಯ ಸಂಗಡ, ಹಕ್ಕಿಯನ್ನು ಕಂಡರೆ ಹಕ್ಕಿಯ ಜೊತೆಯಲ್ಲಿ, ದನಗಳು ಸಿಕ್ಕರೆ ಅವುಗಳ ಒಟ್ಟಿಗೆ ಎಲ್ಲಾ ಮಾತಾಡುವುದು ನಿಮಗೆ ಗೊತ್ತು. ನೀವು ಹೂವು, ಹಣ್ಣು, ಗೊಂಬೆಯ ಸಂಗಡ ಎಲ್ಲಾ ಮಾತಾಡುತ್ತಿರುವುದನ್ನು ನಾನು ನೋಡಿದ್ದೇನೆ. ಓಹ್! ಇಷ್ಟೆಲ್ಲಾ ಉದ್ದಕ್ಕೆ ಏಕೆ ಹೇಳಿದೆ ಅಂತ ನಿಮಗೆ ಅರ್ಥವಾಯಿತಾ? ಅರ್ಥವಾಗದಿದ್ದರೆ ನಾನೇ ಹೇಳುತ್ತೇನೆ ಬಿಡಿ. ಇಷ್ಟೆಲ್ಲಾ ಪ್ರಾಣಿ ಪಕ್ಷಿಗಳು, ಸಸ್ಯಗಳು ಅಲ್ಲದೇ ಗೊಂಬೆ ಚೆಂಡು ಮುಂತಾದ ನಿರ್ಜೀವ ವಸ್ತುಗಳ ಜೊತಗೂ ಪ್ರೀತಿಯಿಂದ ಬೆರೆಯುವ ನೀವು ನನ್ನ ಮಾತನ್ನು ಕೇಳಿಯೇ ಕೇಳುತ್ತೀರಾ ಅಂತ ನನಗೆ ಗೊತ್ತು. ಹಾಗಾಗಿ ನನ್ನ ಬಗ್ಗೆಯೂ ಒಂದಿಷ್ಟು ಹೇಳೋಣ ಅಂತ ಬಂದೆ. ಏನು.. ಹಾಂ.. ಈಗ ನಿಮ್ಮ ಮುಖದ ಮೇಲೆ ನಗು ಬಂತು. ನನಗೂ ಅದೇ ಬೇಕಾಗಿತ್ತು. ಸ್ವಲ್ಪ ಕೇಳಿ ಆಯ್ತಾ.

ಅದೇ, ನಾನು ನೀರ ಹೊಂಡದಲ್ಲಿ, ಹಳ್ಳದ ಬದಿಯಲ್ಲಿ, ತೋಟದ ಗಿಡದ ಮೇಲೆ, ಗದ್ದೆಯ ನೀರಿನಲ್ಲಿ, ಕೆರೆಯ ಬದಿಯಲ್ಲಿ ಎಲ್ಲಾ ಕಡೆಗೂ ಇರುತ್ತೇನೆ ಅಂತ ನಿಮಗೆ ಗೊತ್ತು. ಒಂದು ದಿವಸ ಏನಾಯಿತು ಅಂದರೆ ನಾನು ಕೆರೆಯ ದಡದ ಮೇಲೆ ಇದ್ದೆ. ಅಲ್ಲಿ ನಿಮ್ಮಷ್ಟೇ ದೊಡ್ಡ ಹುಡುಗನೊಬ್ಬ ಬಂದಿದ್ದ. ನಾನು ಸ್ವಲ್ಪ ಬಿಸಿಲ ಬೆಚ್ಚನೆಯ ಅನುಭವ ಅನುಭವಿಸುತ್ತಾ ಖುಷಿಯಾಗಿ ಇದ್ದೆ. ಆ ಹುಡುಗ ನನ್ನ ಹತ್ತಿರವೇ ಬಂದಿದ್ದು ನನಗೆ ಗೊತ್ತಾಗಲಿಲ್ಲ. ನಾನು ಸುಮ್ಮನೇ, ಈ ಹೊತ್ತು ಎಲ್ಲಿ ಊಟ ಸಿಗಬಹುದು? ಆಹಾರ ಹುಡುಕಲು ಎಲ್ಲಿ ಹೋಗುವುದು? ಆ ನೀರು ಹಾವು ಈ ಕಡೆ ಏನಾದರೂ ಬಂದಿದೆಯಾ? ಅದು ಬಂದು ಗಬಕ್ಕನೆ ಹಿಡಿದುಕೊಂಡರೆ ಮುಗಿದೇ ಹೋಯಿತು! ನಾನು ಸುತ್ತಲೂ ನೋಡುತ್ತಾ ಇರಬೇಕಪ್ಪಾ ಎಂದೆಲ್ಲಾ ಯೋಚಿಸಿ ಹಿಂದೆ ತಿರುಗಿದರೆ ಈ ಹುಡುಗ ನಿಂತಿದ್ದ! ಒಂದು ಸಾರಿ ಭಯ ಆಯಿತು. ಹುಡುಗ ಏನು ಮಾಡಲಿಕ್ಕಿಲ್ಲ ಅಂದುಕೊಂಡು ಸ್ವಲ್ಪ ಬಾಯಿ ಅಗಲಿಸಿ ನಕ್ಕಂತೆ ಮಾಡಿ ಕುಳಿತೆ. ನನ್ನ ಬಾಯಿ ಮೊದಲೇ ಅಗಲ. ನಾನು ನಕ್ಕಿದ್ದು ಅವನಿಗೆ ಗೊತ್ತಾಗಲಿಲ್ಲ ಬಿಡಿ. ಅವನು ಹತ್ತಿರ ಬಂದು ಬಗ್ಗಿದ. ಈಗ ಕೈ ಮುಂದೆ ಮಾಡಿ ನನ್ನನ್ನು ಮುಟ್ಟಲು ಮುಂದಾದ. ಆಗ ನನಗೆ ಹೆದರಿಕೆ ಶುರುವಾಯಿತು. ಪಟಕ್ಕನೆ ಕೆರೆಗೆ ಜಿಗಿದೆ. ಅವನಿಗೆ ಬೇಜಾರಾಗಿರಬೇಕು. ಸ್ವಲ್ಪ ಹೊತ್ತು ನಿಂತು ಹೊರಟು ಹೋದ.

ಅವನಿಗೆ ಬೇಜಾರಾಗಿರಬೇಕೂ ಅನ್ನುತ್ತೀಯ. ಆದರೂ ನೀನು ಕೆರೆಗೆ ಜಿಗಿದದ್ದು ಏಕೆ ಎಂದು ನಿಮಗೆ ಅನಿಸಿರಬಹುದು. ನನಗೂ ಏನಾದರೂ ಅಪಾಯ ಆಗಿಬಿಟ್ಟರೆ ಎನ್ನುವ ಭಯ ಇರುತ್ತದೆ ಅಲ್ಲವಾ. ಇಂತಹ ಯಾವುದೋ ತೊಂದರೆಯಾದಾಗಲೇ ನಾವು ರಸ್ತೆ ದಾಟುವುದು. ಅಂದರೆ ನಾವಿರುವ ಕೆರೆಯಲ್ಲಿ ನೀರು ಒಣಗಿ ಬೇರೊಂದು ಕಡೆ ಹೋಗುವುದು ಅನಿವಾರ್ಯ ಆದಾಗ, ಹಾವು ಮುಂತಾದ ದೊಡ್ಡಪ್ರಾಣಿಗಳು ನಮ್ಮ ಬೆನ್ನು ಹತ್ತಿದಾಗ ಅಥವಾ ನಮ್ಮ ಸಂಗಾತಿಯ ನೆನಪಾದಾಗ ಹೀಗೆ ಏನೇನೋ ಕಾರಣಗಳು ಇರುತ್ತವೆ. ಆದರೆ ರಸ್ತೆ ದಾಟುವುದು ಮಾತ್ರ ನಮಗೆ ದೊಡ್ಡ ಕೆಲಸವೇ. ನಿಮ್ಮ ರಸ್ತೆಗಳಲ್ಲಿ ಅದೇನೋ ಬೈಕು, ಕಾರು, ಲಾರಿ ಅಂತ ಏನೇನೋ ವಾಹನಗಳು ಬರ್ss ಅಂತ ಓಡಾಡುತ್ತಾ ಇರುತ್ತವೆ. ನಾವು ನಡು ರಸ್ತೆಯಲ್ಲಿರಲಿ, ರಸ್ತೆಯ ಬದಿಯಲ್ಲಿರಲಿ. ಆ ವಾಹನಗಳು ಗಮನಿಸುವುದೇ ಇಲ್ಲ. ಅಯ್ಯೋ ಆ ರಸ್ತೆಯ ನೆನಪಾದಾಗಲೆಲ್ಲ ನನಗೆ ಅಳು ಬಂದುಬಿಡುತ್ತದೆ ಗೊತ್ತಾ? ನಾನು ಇಲ್ಲೇ ಆಚೆ ಇರುವ ಒಂದು ಸಣ್ಣ ನೀರಿನ ಹೊಂಡದಲ್ಲಿ ವಾಸಿಸುತ್ತಿದ್ದೆ. ಅಲ್ಲಿ ಸುತ್ತಮುತ್ತಲು ಅಡ್ಡಾಡುವುದು ಕೀಟಗಳು ಏನಾದರೂ ಕಂಡರೆ ಪುಟ್ ಪುಟಕ್ ಅಂತ ನಾಲಿಗೆ ಚಾಚಿ ಒಳಗೆ ಎಳೆದುಕೊಂಡು ಗುಳುಂ ಮಾಡಿ ಹೊಟ್ಟೆ ತುಂಬಿಕೊಳ್ಳುತ್ತಾ ಇದ್ದೆ. ಅಲ್ಲೇ ನನ್ನ ಅಮ್ಮ, ಅಣ್ಣ, ತಂಗಿ, ಅಷ್ಟೇ ಏಕೆ ಅಜ್ಜಂದಿರು ಕೂಡಾ ಇದ್ದರು. ಬಿರು ಬೇಸಿಗೆ ಆದರೂ ಒಂದಿಷ್ಟು ನೀರು ಅಲ್ಲಿ ಇರುತ್ತಿತ್ತು.

ಅದು ಬೇಸಿಗೆ ಕಾಲದ ಕೊನೆಯ ದಿನಗಳು. ನಾವೆಲ್ಲ ಇನ್ನೇನು ಮಳೆಗಾಲ ಬಂದು ಬಿಡುತ್ತದೆ, ಆಗ ಇನ್ನೂ ದೂರ ಅಡ್ಡಾಡಿಕೊಂಡು ಮಜವಾಗಿ ಇರಬಹುದು ಎಂದು ಕನಸು ಕಾಣುತ್ತಾ ಇದ್ದೆವು. ಆ ದಿನ ಸಂಜೆ ಆ ಕಡೆಯಿಂದ ಬುಗು ಬುಗು ಅಂತ ಕಪ್ಪಾದ ಮೋಡ ಬರಲಿಕ್ಕೆ ಶುರುವಾಯಿತು. ಪಿಟಿ ಪಿಟಿ ಅಂತ ಮಳೆ ಹನಿ ಕೂಡ ಬಿತ್ತು. ನಮಗೆ ಖುಷಿಯೋ ಖುಷಿ. ನಾವೆಲ್ಲ ಸೇರಿ ಮಳೆ ಹಾಡು ಹೇಳಿ ಕುಣಿದಾಡಿದೆವು. ಮಳೆ ನಿಧಾನ ಬೀಳುತ್ತಾ ಇತ್ತು. ರಾತ್ರಿ ಎಷ್ಟಾಗಿತ್ತು ಏನೋ. ಜೋರಾಗಿ ಮಳೆ ಬೀಳುವುದಕ್ಕೆ ಶುರುವಾಯಿತು ನಾವೆಲ್ಲಾ ಸರಿದು ಸ್ವಲ್ಪ ಎತ್ತರದಲ್ಲಿ ಕುಳಿತುಕೊಂಡೆವು. ಸ್ವಲ್ಪ ಹೊತ್ತಿನ ನಂತರ ನೋಡಿದರೆ ನೀರು ಅಲ್ಲೆಲ್ಲಾ ತುಂಬಿ ಹೋಯಿತು. ನಾನು ಹೆದರಿ ಜಿಗಿಯುತ್ತ ಒಂದು ಸುರಕ್ಷಿತ ಜಾಗ ಹುಡುಕಿ ಎತ್ತರದ ಕಲ್ಲು ಬಂಡೆಯ ಮೇಲೆ ಕುಳಿತೆ. ಮಳೆ ಜೋರಾಗಿ ಬೀಳುತ್ತಲೇ ಇತ್ತು. ಉಳಿದವರು ಎಲ್ಲೋ ಸೇರಿಕೊಂಡರು. ಬೆಳಗಾದಾಗ ಮಳೆ ನಿಂತಿತ್ತು. ಸುತ್ತಲೂ ನೋಡಿದೆ. ನೀರೇ ನೀರು. ನಮ್ಮವರು ಯಾರೂ ಕಾಣಲಿಲ್ಲ. ಅಷ್ಟರಲ್ಲಿ ಆಚೆ ಗದ್ದೆಬಯಲಿನಲ್ಲಿ ನಮ್ಮವರೆಲ್ಲ ಸೇರಿ
ದೊಡ್ಡದಾಗಿ ಹಾಡು ಹೇಳುತ್ತಾ ಇರುವುದು ಕೇಳಿಸಿತು. ಹೌದಲ್ಲ, ಇವರೆಲ್ಲ ರಾತ್ರಿಯೇ ಆ ಗದ್ದೇಬಯಲಿಗೆ ಹೋಗಿಬಿಟ್ಟಿದ್ದಾರೆ ಅನಿಸಿತು. ನಾನು ಅಲ್ಲಿಗೆ ಹೋಗಬೇಕಲ್ಲ ಅಂತ ಪಟ ಪಟ ಜಿಗಿಯುತ್ತಾ ಸ್ವಲ್ಪ ಗಡಿಬಿಡಿಯಿಂದಲೇ ಹೊರಟೆ. ಆಗ ರಸ್ತೆ ಎದುರಾಯಿತು ನೋಡಿ.

ನಾನು ಆ ರಸ್ತೆಯನ್ನು ದಾಟಿಯೇ ಗದ್ದೆ ಬಯಲಿಗೆ ಹೋಗಬೇಕು. ರಸ್ತೆ ನನಗೆ ಹೊಸದಲ್ಲ. ಆದರೆ ಆಗಲೇ ಹೇಳಿದ ಹಾಗೆ ಅದನ್ನು ದಾಟುವುದು ತುಂಬಾ ಭಯ. ರಸ್ತೆಯ ಪಕ್ಕದಲ್ಲಿ ಬಂದು ಕುಳಿತೆ. ಒಂದರ ಹಿಂದೆ ಒಂದು ವಾಹನ ಬರುತ್ತಲೇ ಇತ್ತು. ಆ ಕಡೆಯಿಂದ ಯಾವುದೂ ಬರುತ್ತಿಲ್ಲ ಅನ್ನುವ ಹೊತ್ತಿಗೆ ಈ ಕಡೆಯಿಂದ ಒಂದು ವಾಹನ ಬಂದು ಬಿಡುತ್ತಿತ್ತು. ಈಗ ಏನು ಮಾಡುವುದು ಎಂದು ರಸ್ತೆಯ ಉದ್ದಕ್ಕೂ ನೋಡಿದೆ. ಅಲ್ಲಿ ಏನೇನೋ ಬಿದ್ದಿರುವ ಹಾಗೆ ಕಂಡಿತು. ರಸ್ತೆಯ ಬದಿಯಿಂದಲೇ ಹತ್ತಿರ ಹೋಗಿ ನೋಡಿದರೆ, ಅಯ್ಯೋ ನನ್ನ ಅಣ್ಣನೇ ಹೊಟ್ಟೆ ಮೇಲಾಗಿ ಬಿದ್ದಿದ್ದ. ನನ್ನ ಕಣ್ಣು ಮುಚ್ಚಿ ಹೋಯಿತು. ಅವನ ಎರಡೂ ಕಾಲು ಅರೆದು ಹೋಗಿತ್ತು. ಪಕ್ಕದಲ್ಲಿ ನನಗೆ ಪರಿಚಿತವಲ್ಲದ ಮತ್ತೊಬ್ಬ ಬಂಧು ಕೂಡಾ ಹಾಗೇ ಬಿದ್ದಿದ್ದ. ನಾವೆಲ್ಲ ಸಣ್ಣ ಜೀವಿಗಳು. ಅದೆಲ್ಲಾ ನಿಮ್ಮಂತಹ ಮನುಷ್ಯರ ಗಮನಕ್ಕೆ ಬರುವುದಿಲ್ಲ ಬಿಡಿ. ಹೌದು ಅಲ್ಲಿ ದೊಡ್ಡ ಹಾವು ಕೂಡ ಸತ್ತು ಬಿದ್ದಿತ್ತು. ಅದೂ ರಸ್ತೆ ದಾಟಲು ಹೋಗಿದ್ದೇ. ಈ ಕಪ್ಪೆ ಏನೇನೋ ಹೇಳುತ್ತಾ ಇದೆ ಅಂತ ಬೇಜಾರಾಯಿತಾ? ಆದರೆ ನಾನು ಹೇಳಬೇಕು ಅನಿಸಿತು, ಹೇಳಿಬಿಟ್ಟೆ.

ನಮ್ಮನ್ನು ಬಿಡಿ, ನಾನು ಎಷ್ಟೋ ಸಾರಿ ನೋಡಿದ್ದೇನೆ. ನೀವೇ ಸಾಕುವ ನಾಯಿಗಳೂ ಅಡ್ಡ ಬಿದ್ದಿರುತ್ತವೆ. ನಾನೊಂದು ಸಾರಿ ದೊಡ್ಡ ಆಕಳಕರುವೊಂದು ಹೀಗೇ ಯಾವುದೋ ವಾಹನಕ್ಕೆ ಬಡಿದು ಬಿದ್ದು ಸತ್ತಿದ್ದು ಕಂಡಿದ್ದೇನೆ. ವಾಹನಗಳನ್ನು ನಿಮ್ಮ ಹಿರಿಯರೇ ಓಡಿಸುವುದು ಅಂತ ಕೇಳಿದ್ದೇನೆ. ಪ್ರಾಣಿಗಳಾಗಲಿ, ನಿಮ್ಮಂತಹ ಮಕ್ಕಳಾಗಲಿ, ಮುದುಕರಾಗಲಿ, ಯಾರೇ ಆಗಲಿ ರಸ್ತೆ ದಾಟುತ್ತಿದ್ದರೆ ಅಥವಾ ಯಾವುದೋ ಕಾರಣಕ್ಕೆ
ರಸ್ತೆಗೆ ಬಂದರೆ ವಾಹನವನ್ನು ಸ್ವಲ್ಪ ನಿಧಾನಗೊಳಿಸಬೇಕು ಅನ್ನುವುದನ್ನು ಅವರಿಗೆ ಹೇಳಿ.
ಅದೆಲ್ಲ ಸರಿ, ನಾನು ಆ ದಿನ ತುಂಬಾ ಹೊತ್ತು ಕಾಯ್ದು ಬಹಳ ಎಚ್ಚರಿಕೆಯಿಂದ ಸುರಕ್ಷಿತವಾಗಿ ರಸ್ತೆ ದಾಟಿ ಬಿಟ್ಟೆ! ಹಾಗಾಗಿ ನಿಮಗೆ ಇದೆಲ್ಲ ಹೇಳುವುದಕ್ಕೆ ಸಾಧ್ಯ ಆಯ್ತು. ನಿಮ್ಮನ್ನು ಕಂಡರೆ ನನಗೂ ತುಂಬಾ ಪ್ರೀತಿ ಅಲ್ವಾ? ನೀವೂ ರಸ್ತೆಗೆ ಹೋಗುವಾಗ ಬಹಳ ಎಚ್ಚರಿಕೆ ವಹಿಸಬೇಕು ತಿಳಿತಾ. ಬರ್ತೀನಿ ಟಾಟಾ.

‍ಲೇಖಕರು Admin MM

July 17, 2024

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This