ಪ್ರೊ. ಜಿ. ಎನ್. ಉಪಾಧ್ಯ
**
ಮುಂಬೈ ಕನ್ನಡಿಗರ ಸಾಹಸ ಸಾಧನೆಗೆ ಹತ್ತಿರ ಹತ್ತಿರ ಎರಡು ಶತಮಾನಗಳ ಇತಿಹಾಸವಿದೆ. ಹೀಗಿದ್ದೂ ಇಲ್ಲಿನ ಕನ್ನಡಿಗರು ಕರ್ನಾಟಕದ ಜನಮನಕ್ಕೆ ಅಪರಿಚಿತರೇ ಆಗಿ ಉಳಿದಿರುವುದು ಖೇದದ ಸಂಗತಿ. ಮುಂಬೈ ಕೇವಲ ವಾಣಿಜ್ಯ ನಗರಿ ಅಷ್ಟೇ ಅಲ್ಲ. ಇದೊಂದು ಸಾಂಸ್ಕೃತಿಕ ನಗರಿ ಎಂಬುದನ್ನು ಇಲ್ಲಿನ ಕನ್ನಡಿಗರು ರುಜುವಾತು ಪಡಿಸುತ್ತಾ ಬಂದಿದ್ದಾರೆ. ಕನ್ನಡ ಸಾಹಿತ್ಯ ವಲಯವಾಗಿ ಮುಂಬೈ ಬೆಳೆದು ಬಂದ ಬಗೆ ಹಾಗೂ ಇಲ್ಲಿನ ಇತ್ತೀಚಿನ ಸಾಹಿತ್ಯಕ ವಿದ್ಯಮಾನಗಳ ಕುರಿತಾಗಿ ಬೆಳಕು ಚೆಲ್ಲುವ ಕಿರು ಲೇಖನ ಇಲ್ಲಿದೆ.
**
ಭಾರತೀಯ ಭಾಷೆಗಳಲ್ಲಿ ಸಂಸ್ಕೃತ ಮತ್ತು ತಮಿಳನ್ನು ಬಿಟ್ಟರೆ ಕನ್ನಡವೇ ಅತ್ಯಂತ ಸಮೃದ್ಧ ಹಾಗೂ ಪ್ರಾಚೀನ ಭಾಷೆ. ಕನ್ನಡ ಸಾಹಿತ್ಯಕ್ಕೆ ಸುಮಾರು ಒಂದೂವರೆ ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವಿದೆ. ಇಪ್ಪತ್ತನೆಯ ಶತಮಾನವನ್ನು ಕನ್ನಡ ಸಾಹಿತ್ಯದ ಮತ್ತೊಂದು ಸುವರ್ಣಯುಗ ಎಂದೇ ಕರೆಯಲಾಗುತ್ತದೆ. ಇಪ್ಪತ್ತನೆಯ ಶತಮಾನದ ಸುರುವಾತಿನಲ್ಲಿ ಹೊಸಗನ್ನಡ ಸಾಹಿತ್ಯ ನಾಡಿನ ಬೇರೆ ಬೇರೆ ವಲಯಗಳಲ್ಲಿ ಸೃಷ್ಟಿಯಾಗಿ ಜನಪ್ರಿಯವಾದುದು ಅಷ್ಟೇ ಸತ್ಯ. ಆಧುನಿಕ ಕನ್ನಡ ಸಾಹಿತ್ಯ ವಿಶೇಷವಾಗಿ ಧಾರವಾಡ, ಮಂಗಳೂರು, ಮೈಸೂರು, ಹಾಗೂ ಮುಂಬೈ ವಲಯಗಳಲ್ಲಿ ರಚನೆಯಾದುದನ್ನು ಕಾಣಬಹುದಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿಹೆಚ್ಚು ಕನ್ನಡಿಗರಿರುವ ಪ್ರದೇಶ ಮುಂಬೈ. ಸುಮಾರು ಹದಿನೆಂಟು ಇಪ್ಪತ್ತು ಲಕ್ಷ ಕನ್ನಡಿಗರು ಇಲ್ಲಿ ನೆಲೆಸಿ ನಾನಾ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆ ಗೈದಿದ್ದಾರೆ. ಕನ್ನಡ ಸಾಹಿತ್ಯಕ್ಕೂ ಮುಂಬೈಗೂ ಅವಿನಾಭಾವ ಸಂಬಂಧವಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯ ಕುರಿತು ಮಾತನಾಡುವಾಗ, ಚಿಂತನಮಂಥನ ನಡೆಸುವಾಗ ಇತಿಹಾಸಕಾರರು ವಿಮರ್ಶಕರು ಮತ್ತೆ ಮತ್ತೆ ಮುಂಬೈ ಕಡೆಗೆ ಮುಖ ಮಾಡಬೇಕಾಗುತ್ತದೆ. ಕನ್ನಡ ಸಾರಸ್ವತ ಲೋಕಕ್ಕೆ ಮುಂಬೈ ಕೊಟ್ಟ ಕೊಡುಗೆ ಗಮನಾರ್ಹವಾದುದು.
ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ನಾಟಕ ಎಂಬ ಕೀರ್ತಿಗೆ ಪಾತ್ರವಾದ ಕರ್ಕಿ ವೆಂಕಟರಮಣ ಶಾಸ್ತ್ರಿಗಳ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ಅಥವಾ ಕನ್ಯಾವಿಕ್ರಯದ ಪರಿಣಾಮವು’ (೧೮೮೭) ಪ್ರಕಟವಾದುದು ಈ ಮಹಾನಗರದಲ್ಲಿಯೇ. ಇಲ್ಲಿದ್ದುಕೊಂಡೇ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಚುರಮುರಿ ಶೇಷಗಿರಿರಾಯರು (೧೮೬೯) ಮೊದಲ ಬಾರಿಗೆ ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ರೂಪಾಂತರಗೊಳಿಸಿದರು. ಮರಾಠಿ ರಂಗಭೂಮಿಗೆ ಜನ್ಮವಿತ್ತ ನಾಟಕವಿದು. ಹೊಸಗನ್ನಡದ ಮೊದಲ ಅನುವಾದಿತ ಕಾವ್ಯ ಕೃತಿ ಬಿ. ಎಂ. ಶ್ರೀ ಅವರ ‘ಇಂಗ್ಲೀಷ್ ಗೀತಗಳು’ ಎಂಬ ಮಾತಿದೆ. ಇದು ತರವಲ್ಲ. ಮುಂಬೈ ಕನ್ನಡಿಗ ಹಟ್ಟಿಯಂಗಡಿ ನಾರಾಯಣ ರಾಯರ ‘ಆಂಗ್ಲ ಕವಿತಾವಳಿ’, ೧೯೧೯ರಲ್ಲಿ ಮುಂಬೈಯಲ್ಲಿ ಬೆಳಕು ಕಂಡದ್ದು ಚಾರಿತ್ರಿಕ ಸತ್ಯ. ಕನ್ನಡ ಕಾವ್ಯಾನುವಾದಕ್ಕೆ ನಾಂದಿ ಹಾಡಿದ ಕೀರ್ತಿ ಹಟ್ಟಿಯಂಗಡಿ ನಾರಾಯಣರಾಯರಿಗೆ ಸಲ್ಲುತ್ತದೆ. ಹೀಗೆ ಮುಂಬೈ ಕನ್ನಡಿಗರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಾಧನೆಗೆ ಸುಮಾರು ಒಂದೂವರೆ ಶತಮಾನದ ಗಟ್ಟಿಯಾದ ಇತಿಹಾಸವಿದೆ ಎಂಬುದು ಅಭಿಮಾನದ ಸಂಗತಿ.
ಹದಿನೆಂಟನೆಯ ಶತಮಾನದ ಹೊತ್ತಿಗೆ ಮುಂಬೈ ವ್ಯಾಪಾರಿ ಕೇಂದ್ರವಾಗಿ ಹೆಸರು ಮಾಡಿತ್ತು. ವಿಶಾಲವಾದ ಮುಂಬೈ ಪ್ರಾಂತದ ಆಡಳಿತ ಕಛೇರಿ ಈ ಮಹಾನಗರದಲ್ಲಿದ್ದುದರಿಂದ ಅನೇಕ ಮುದ್ರಣಾಲಯಗಳು ಇಲ್ಲಿ ತಲೆಯೆತ್ತಿದವು. 1860 -70 ರ ಹೊತ್ತಿಗೆ ಮುಂಬೈಯಲ್ಲಿ ಕನ್ನಡ ಮುದ್ರಣಾಲಯಗಳಿಗೆ ಬೇಕಾದ ಮೊಳೆಗಳನ್ನು ಸಿದ್ಧಪಡಿಸಿದ ಬಗೆಗೂ ಸಾಕಷ್ಟು ಮಾಹಿತಿ ಲಭ್ಯವಿದೆ. 1857ರಲ್ಲಿ ಮುಂಬೈ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.1860 ರ ಹೊತ್ತಿಗೆ ಮುಂಬೈಯಲ್ಲಿ ಕನ್ನಡ ಮುದ್ರಣಾಲಯಗಳು ಸ್ಥಾಪನೆಯಾದವು. 1870 ರ ಆಸುಪಾಸಿನಲ್ಲಿ ಕನ್ನಡ ಪತ್ರಿಕೋದ್ಯಮ, ಕನ್ನಡ ಮುದ್ರಣ ಕಾರ್ಯ, ಕನ್ನಡ ಗ್ರಂಥೋದ್ಯಮ ಇಲ್ಲಿ ಆರಂಭವಾಗಿ ಹೊಸ ಶಕೆ ಆರಂಭವಾಯಿತು. 1898 ರಲ್ಲಿ ಶ್ಯಾಮರಾವ್ ವಿಠಲ ಕೈಕಿಣಿ ಅವರು ಮುಂಬೈ ವಿವಿಯ ಸಿಂಡಿಕೇಟ್ ಸದಸ್ಯರಾಗಿ ನಿಯುಕ್ತರಾದರು. ಕೈಕಿಣಿ ಹಾಗೂ ರಾ.ಹ.ದೇಶಪಾಂಡೆ ಅವರ ದಿಟ್ಟ ಪ್ರಯತ್ನದಿಂದ ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನಕ್ಕೆ ಅವಕಾಶ ದೊರೆಯಿತು. ಬಳಿಕ ಅನೇಕ ಕಾಲೇಜುಗಳಲ್ಲಿ ಕನ್ನಡ ವಿಷಯವನ್ನು ಬೋಧಿಸಲು ವಿವಿ ವ್ಯವಸ್ಥೆ ಮಾಡಿತು. ಹೀಗಾಗಿ ಕನ್ನಡ ಪರ ಚಟುವಟಿಕೆಗಳು ಮುಂಬೈ ಮಹಾನಗರದಲ್ಲಿ ಚುರುಕುಗೊಂಡಿತು. ಮುಂಬೈ ಶಿಕ್ಷಣ ಕೇಂದ್ರವಾಗಿ ರೂಪುಗೊಂಡುದರಿಂದ ಕರ್ನಾಟಕದ ಅನೇಕ ಪ್ರತಿಭಾವಂತರು ಪುಣೆ ಮುಂಬೈಯಲ್ಲಿ ಓದಿ ನೌಕರಿ ಮಾಡುತ್ತಾ ಕನ್ನಡದ ತೇರನೆಳೆಯುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಮುಂಬೈ ಮಹಾನಗರ ಕ್ರಿಯಾಶೀಲರಿಗೆ ಯಾವತ್ತೂ ಅವಕಾಶಗಳನ್ನು ಒದಗಿಸಿದ ತಾಣ. ಬ್ರಿಟಿಷರ ಕಾಲದಲ್ಲಿ ಆಧುನಿಕ ಶಿಕ್ಷಣ ಪಡೆದ ಅನೇಕ ಸುಧಾರಣಾವಾದಿಗಳು ಮುಂಬೈಯಲ್ಲಿ ಸಾಹಿತ್ಯ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದು ಮಹತ್ವದ ಸಂಗತಿ. ಚುರಮುರಿ ಶೇಷಗಿರಿರಾಯ ಮುಂಬೈಯಲ್ಲಿ ಕನ್ನಡ ಸಾಹಿತ್ಯ ರಚನೆಗೆ ನಾಂದಿ ಹಾಡಿದ ಬಹುಭಾಷಾ ವಿದ್ವಾಂಸ. ಕನ್ನಡ ಮರಾಠಿಯಲ್ಲಿ ಸಾಹಿತ್ಯ ರಚಿಸಿದ ಹಿರಿಮೆ ಇವರದು. ಪ್ರಗತಿಪರ ಚಿಂತಕರಾಗಿದ್ದ ಶ್ಯಾಮರಾವ್ ವಿಠಲ ಕೈಕಿಣಿ ಸಮುದ್ರ ಪರ್ಯಟನ, ವಿಧವಾ ವಿವಾಹದಂಥ ಕೃತಿಗಳನ್ನು ರಚಿಸಿ ಹೊಸ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ. ಕರ್ಕಿ ವೆಂಕಟರಮಣ ಶಾಸ್ತ್ರಿಗಳು ಮುಂಬೈಯಲ್ಲಿ ಮಾಡಿದ ಸಾಹಿತ್ಯ ಪರಿಚಾರಿಕೆ ಪ್ರಾಥಃ ಸ್ಮರಣೀಯವಾಗಿದೆ. ಶಿವರಾಮ ಧಾರೇಶ್ವರರ ‘ಕನ್ಯಾವಿಕ್ರಯ’ ನಾಟಕ ಸಾಕಷ್ಟು ಪುರೋಗಾಮಿತನವನ್ನು ಒಳಗೊಂಡಿದೆ. “ಧೀರ ಪತ್ರಿಕೋದ್ಯಮಿ ಹಾಗೂ ಆದ್ಯ ಸಾಮಾಜಿಕ ನಾಟಕಕಾರ ಕರ್ಕಿ ವೆಂಕಟರಮಣ ಶಾಸ್ತ್ರಿ ಅವರ ಹೆಸರು ಹೊಸಗನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ನಿಲ್ಲತಕ್ಕದ್ದು” ಎಂಬುದಾಗಿ ಖ್ಯಾತ ಸಂಶೋಧಕ ಡಾ. ಶ್ರೀನಿವಾಸ ಹಾವನೂರ ಅವರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬಯಿಯಲ್ಲಿ ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಾ ಹತ್ತಾರು ಕನ್ನಡ ಕೃತಿಗಳನ್ನು ರಚಿಸಿದ, ಕನ್ನಡ ಕಾವ್ಯಗಳ ಅನುವಾದಕ್ಕೆ ಶ್ರೀಕಾರ ಹಾಕಿದ ಹಟ್ಟಿಯಂಗಡಿ ನಾರಾಯಣ ರಾಯರ ಸಾಧನೆ ಉಲ್ಲೇಖನೀಯವಾದುದು. ಮುಂಬೈ, ಪುಣೆ, ಶಿಕ್ಷಣ ಕೇಂದ್ರಗಳಾಗಿ ಹೆಸರುವಾಸಿಯಾಗಿದ್ದ ಕಾರಣ ಉತ್ತರ ಕರ್ನಾಟಕದ ಜನ ಸಹಜವಾಗಿ ಈ ನಗರಗಳಿಗೆ ಹೆಚ್ಚಿನ ಶಿಕ್ಷಣಕ್ಕಾಗಿ ಬಂದುಹೋಗತೊಡಗಿದರು. ಮುಂಬಯಿಯಲ್ಲಿ ಕನ್ನಡಿಗರು ತಮ್ಮದೇ ಆದ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸಾಹಿತ್ಯ ಸಂಸ್ಕೃತಿಯ ಉಪಾಸನೆಯಲ್ಲಿ ತೊಡಗಿಕೊಂಡರು.
೧೯೫೬ರಲ್ಲಿ ಭಾಷಾವಾರು ಪ್ರಾಂತ ನಿರ್ಮಾಣವಾಗಿ ಮುಂಬೈ ಹೊರನಾಡಾಗಿ ಪರಿಣಮಿಸಿದರೂ ಇಲ್ಲಿನ ಕನ್ನಡ ನುಡಿ ಸೇವೆಗೆ ಹಿನ್ನೆಡೆಯಾಗಲಿಲ್ಲ. ಕೃಷ್ಣಕುಮಾರ ಕಲ್ಲೂರ, ದಿನಕರ ದೇಸಾಯಿ, ಸುಂದರ ನಾಡಕರ್ಣಿ, ಆರ್. ಡಿ. ಕಾಮತ್, ಎಂ. ವಿ. ಕಾಮತ್, ಚಿದಂಬರ ದೀಕ್ಷಿತ್, ಶ್ರೀನಿವಾಸ ಹಾವನೂರು, ಬ್ಯಾತನಾಳ, ರಾಮಚಂದ್ರ ಉಚ್ಚಿಲ್, ಭೀಮರಾವ್ ಚಿಟಗುಪ್ಪಿ, ವಾಸಂತಿ ಪಡುಕೋಣೆ, ಡಿ. ಕೆ. ಮೆಂಡನ್, ವ್ಯಾಸರಾಯ ಬಲ್ಲಾಳ ಮೊದಲಾದವರು ಸ್ವಾತಂತ್ರ್ಯ ಪೂರ್ವದಲ್ಲೇ ಮುಂಬೈಯಲ್ಲಿ ಸಾಹಿತ್ಯ ಪರಿಚಾರಿಕೆಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡಿದ್ದರು. ೧೯೪೬ – ೪೮ರ ಹೊತ್ತಿಗೆ ಮುಂಬೈಯಿಂದ ಬೆಳಕು ಕಾಣುತ್ತಿದ್ದ ನುಡಿ ಪತ್ರಿಕೆ ಹೊಸ ಲೇಖಕರನ್ನು ಲೋಕಮುಖಕ್ಕೆ ಪರಿಚಯಿಸುವಲ್ಲಿ ಯಶಸ್ವಿಯಾಯಿತು. ೧೯೫೦ರಲ್ಲಿ ಮುಂಬೈಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ವಿ. ಕೃ. ಗೋಕಾಕರು ನವ್ಯಕಾವ್ಯವನ್ನು ಘೋಷಿಸಿದರು. ಇದಾದ ಅನಂತರ ಕನ್ನಡ ಕಾವ್ಯವಾಹಿನಿಯ ಗತಿಯೇ ಬದಲಾದುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಕವಿ ಗಂಗಾಧರ ಚಿತ್ತಾಲ, ವಿ. ಜಿ. ಭಟ್ ಅವರ ಕೊಡುಗೆಯೂ ಗಮನಾರ್ಹವಾದುದು.
ಬಹುಕಾಲ ಮುಂಬೈಯಲ್ಲಿ ನೆಲೆಸಿ ವೈವಿಧ್ಯಮಯವಾದ ಸಾಹಿತ್ಯ ರಚಿಸಿ ಕನ್ನಡ ಸಾಹಿತ್ಯ ಕ್ಕೆ ಹೊಸ ಮೆರಗು ನೀಡಿದ ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಡಾ. ಬಿ. ಎ. ಸನದಿ, ಡಾ. ವ್ಯಾಸರಾವ್ ನಿಂಜೂರು, ಅರವಿಂದ ನಾಡಕರ್ಣಿ, ಡಾ. ಜಯಂತ ಕಾಯ್ಕಿಣಿ, ಮಿತ್ರಾ ವೆಂಕಟ್ರಾಜ್, ಡಾ. ಸುನೀತಾ ಶೆಟ್ಟಿ,ಬಿ. ಎಸ್. ಕುರ್ಕಾಲ್, ಡಾ. ಜೀವಿ ಕುಲಕರ್ಣಿ, ಶ್ರೀನಿವಾಸ ಜೋಕಟ್ಟೆ, ಡಾ. ಮಂಜುನಾಥ ಮೊದಲಾದವರ ಸಾಧನೆ ಸಾಹಿತ್ಯ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಕಳೆದ 24- 25 ವರ್ಷಗಳಲ್ಲಿ ಮುಂಬಯಿನ ಕನ್ನಡ ಲೇಖಕರು ಸಾವಿರಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಹೊರತಂದಿರುವುದು, ಇಂದಿಗೂ ಈ ಭಾಗದಲ್ಲಿ ನೂರಾರು ಕನ್ನಡ ಲೇಖಕರು ಸಾಹಿತ್ಯದ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಾಹಿತ್ಯ ವಲಯವಾಗಿ ತನ್ನತನವನ್ನು ಉಳಿಸಿಕೊಳ್ಳುವಲ್ಲಿ ಮುಂಬಯಿ ಯಶಸ್ವಿಯಾಗಿದೆ. ಅಭಿಜಿತ್ ಪ್ರಕಾಶನ 130 ಕೃತಿಗಳನ್ನು ಪ್ರಕಟಿಸಿ ಮುಂಬೈಯನ್ನು ಸಾಹಿತ್ಯ ವಲಯವಾಗಿ ಬೆಳೆಯಲು ವಿಶೇಷವಾದ ಕೊಡುಗೆಯನ್ನು ನೀಡಿದೆ.ಕನ್ನಡ ವಿಭಾಗ ಮುಂಬೈ ವಿವಿಯ ಪ್ರಕಟಣೆಗಳ ಸಂಖ್ಯೆ ನೂರನ್ನು ಮೀರಿದೆ. ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಸುವು ತುಂಬಿದ, ಹೊಸನೀರು ಹಾಯಿಸಿದ ಕೀರ್ತಿ ಇಲ್ಲಿನ ಲೇಖಕರಿಗೆ ಸಲ್ಲುತ್ತದೆ. ಇಲ್ಲಿನ ಕಥೆ, ಕಾವ್ಯ, ಕಾದಂಬರಿ, ರಂಗಭೂಮಿ, ಸಾಂಘಿಕ ಚಟುವಟಿಕೆಗಳ ಬಗೆಗೆ ಈಗಾಗಲೇ ಕೆಲವು ಪಿಎಚ್.ಡಿ ಸಂಶೋಧನ ಗ್ರಂಥಗಳು ರಚನೆಯಾಗಿ ಪ್ರಕಟಣೆ ಕಂಡು ಈ ಭಾಗದ ಸಾಹಿತ್ಯ ಸಾಧನೆ ನಾಡಿಗೆ ತಿಳಿಯುವಂತೆ ಆಗಿದೆ. ಮುಂಬೈಯಲ್ಲಿ ನೆಲೆನಿಂತು ಸಾಹಿತ್ಯ ಸೃಷ್ಟಿಸಿದ ಲೇಖಕರು ಭಿನ್ನ ಪರಿಯಲ್ಲಿ ಬರೆದು ತಮ್ಮ ಅನನ್ಯತೆಯನ್ನು ಮೆರೆದಿದ್ದಾರೆ. ಈ ಮೂಲಕ ಒಳನಾಡಿನ ಲೇಖಕರನ್ನು ಓದುಗರನ್ನು ಅಚ್ಚರಿಗೀಡು ಮಾಡಿದ್ದಾರೆ.
ಕನ್ನಡಕ್ಕೆ ಹೊಸನೀರು ಹಾಯಿಸಿದ ಕೀರ್ತಿ ಮುಂಬೈ ಕನ್ನಡ ಲೇಖಕರಿಗೆ ಸಲ್ಲುತ್ತದೆ. ನಗರಪ್ರಜ್ಞೆ, ನಗರ ಜಾನಪದ, ಅನಾಥಪ್ರಜ್ಞೆ ಮೊದಲಾದ ಪರಿಕಲ್ಪನೆಗಳಿಗೆ ಜೀವತುಂಬಿದ ಶ್ರೇಯಸ್ಸು ಈ ಭಾಗದ ಲೇಖಕರದಾಗಿದೆ. ಮುಂಬೈನಲ್ಲಿ ನೆಲೆನಿಂತು ಸಾಹಿತ್ಯ ಕೃಷಿಮಾಡಿದ ಹೆಚ್ಚಿನ ಲೇಖಕರು ವಿಜ್ಞಾನ ಕ್ಷೇತ್ರದವರು. ಹೀಗಾಗಿ ಅವರು ಮುಂಬೈ ಮಹಾನಗರದ ಜೀವನ ದರ್ಶನವನ್ನು ಭಿನ್ನಪರಿಯಲ್ಲಿ ದಾಖಲಿಸಿ ಹೆಸರು ಮಾಡಿದರು. ಇಲ್ಲಿನ ಲೇಖಕರು ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡವರು. ಮುಂಬೈ ಮಹಾನಗರದ ಸಂಕೀರ್ಣವೆನಿಸುವ ಬದುಕನ್ನು, ಅದು ಒಡ್ಡುವ ಸವಾಲುಗಳನ್ನು, ಅದು ತರುವ ಕುತೂಹಲಕಾರಕ ತಿರುವುಗಳನ್ನು, ಪರಿವರ್ತನೆಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿ ಹೊಸ ಅನುಭವ ಪ್ರಪಂಚವನ್ನು ಕನ್ನಡದೊಳಗೆ ತಂದು ಹೊಸ ಸಂವಾದಕ್ಕೆ ಅನುವು ಆಸ್ಪದ ಮಾಡಿಕೊಟ್ಟದ್ದು ಮುಂಬೈ ಲೇಖಕರ ಮಹತ್ವದ ಸಾಧನೆ. ಈ ವಾಣಿಜ್ಯ ಮಹಾನಗರಿಯಲ್ಲಿ ಕನ್ನಡದ ಬಾವುಟವನ್ನು ಏರಿಸಿ ನಿಲ್ಲಿಸಲು ಇಲ್ಲಿನ ಲೇಖಕರು ನಿರಂತರವಾಗಿ ಪರಿಶ್ರಮ ವಹಿಸುತ್ತಾ ಬಂದಿರುವುದು ಗಮನೀಯ ಅಂಶ.
ಮುಂಬೈ ಕನ್ನಡ ವಾಹಿನಿಯನ್ನು ದಾಖಲಿಸುವ ವಿಶ್ಲೇಷಿಸುವ ಕಾರ್ಯ ತಕ್ಕಮಟ್ಟಿಗೆ ನಡೆದಿದೆ. ತುಳುವರ ಮುಂಬಯಿ ವಲಸೆ (ಡಾ. ಕೆ. ವಿಶ್ವನಾಥ ಕಾರ್ನಾಡ್), ಮುಂಬಯಿ ಮಿಡಿತ, ಅವಲೋಕನ (ಸಂ) ಎಚ್. ಬಿ. ಎಲ್ ರಾವ್, ಮಹಾರಾಷ್ಟ್ರ ಕನ್ನಡ ವಾಹಿನಿ (ಸಂ) ಡಾ. ಜಿ. ಎನ್. ಉಪಾಧ್ಯ, ಮುಂಬೈ ಕನ್ನಡ ರಂಗಭೂಮಿ (ಡಾ. ಭರತಕುಮಾರ್ ಪೊಲಿಪು), ಮುಂಬಯಿ ಕನ್ನಡ ಕಥಾ ಸಾಹಿತ್ಯ (ಡಾ. ಮಮತಾ ರಾವ್), ಮುಂಬಯಿ ಕನ್ನಡ ಕಾದಂಬರಿಗಳು (ಡಾ. ರಾಜಶ್ರೀ ಇನಾಂದಾರ್), ಮುಂಬಯಿ ಕನ್ನಡ ಕಾವ್ಯ (ಡಾ. ಮರಿಯಪ್ಪ ನಾಟೇಕರ್), ಮುಂಬೈ ಕನ್ನಡಿಗರ ಸಿದ್ಧಿ ಸಾಧನೆ (ಡಾ. ಪೂರ್ಣಿಮಾ ಶೆಟ್ಟಿ ), ಕನ್ನಡ ಸಂಶೋಧನೆಗೆ ಮುಂಬೈ ಕೊಡುಗೆ (ಕಲಾ ಭಾಗ್ವತ್) ಮೊದಲಾದ ಕೃತಿಗಳಲ್ಲಿ,ಶೋಧ ಗ್ರಂಥಗಳಲ್ಲಿ ಮುಂಬೈ ಲೇಖಕರ ಸಾಂಸ್ಕೃತಿಕ ಸಾಧನೆಯ ವಿಶ್ಲೇಷಣೆಯಿದೆ. ಬಹುಕಾಲ ಸಾಹಿತ್ಯ ವಲಯವಾಗಿ ಹೆಸರು ಮಾಡಿದ ‘ಮುಂಬಯಿ ಕನ್ನಡ ಸಾಹಿತ್ಯ ಚರಿತ್ರೆ’ಯ ಎರಡು ಬೃಹತ್ ಸಂಪುಟಗಳನ್ನು ಮುಂಬೈ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಎನ್. ಉಪಾಧ್ಯ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಸಾಮಕಾಲೀನ ಇತಿಹಾಸ ರಚನೆ ತುಸು ಕಷ್ಟದ ಕೆಲಸ. ಇಪ್ಪತ್ತೊಂದನೆಯ ಶತಮಾನದ ಮುಂಬೈ ಕನ್ನಡ ಸಾಹಿತ್ಯ ಸಾಧನೆಯನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲು ಈಗ ಸಕಾಲ.
ಕನ್ನಡ ಸಾಹಿತ್ಯಕ್ಕೆ ಮುಂಬೈನ ಕೊಡುಗೆ ಅಪಾರ. ಇಂದಿಗೂ ಮುಂಬೈಯಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಪರಿಚಾರಿಕೆ ನಡೆದಿರುವುದು ಗಮನೀಯ ಅಂಶ. ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುವಲ್ಲಿ: ಹೊಸ ನೀರು ಹಾಯಿಸುವಲ್ಲಿ ಈ ಮಹಾನಗರದ ಲೇಖಕರು ಇಂದಿಗೂ ನಿರತರಾಗಿದ್ದಾರೆ. ಹಿರಿಯ ತಲೆಮಾರಿನ ಸಾಹಿತಿಗಳಾದ ಡಾ.ವ್ಯಾಸರಾವ್ ನಿಂಜೂರು, ಡಾ.ಜೀವಿ ಕುಲಕರ್ಣಿ, ಡಾ.ಸುನೀತಾ ಶೆಟ್ಟಿ, ಡಾ.ವಿಶ್ವನಾಥ ಕಾರ್ನಾಡ, ಬಾಬು ಶಿವಪೂಜಾರಿ, ಡಾ. ಜಿ. ಡಿ. ಜೋಶಿ, ಸರೋಜಾ ಶ್ರೀನಾಥ್,ಸದಾನಂದ ಸುವರ್ಣ, ಎಂ.ಟಿ ಪೂಜಾರಿ, ಶ್ರೀನಿವಾಸ ಜೋಕಟ್ಟೆ, ಮಿತ್ರಾ ವೆಂಕಟ್ರಾಜ್, ಶ್ಯಾಮಲಾ ಮಾಧವ, ವಿ. ಎಸ್.ಶ್ಯಾನುಭಾಗ, ಡಾ.ಈಶ್ವರ ಅಲೆವೂರು, ಡಾ.ಭರತ್ ಕುಮಾರ್ ಪೊಲಿಪು, ವೆಂಕಟ್ರಾಜ್ ರಾವ್, ರಾಮಮೋಹನ ಶೆಟ್ಟಿ ಬಳ್ಳುಂಜೆ, ಡಾ.ರಘುನಾಥ್, ಡಾ. ಗಿರಿಜಾ ಶಾಸ್ತ್ರಿ, ಡಾ.ಮಮತಾ ರಾವ್, ಡಾ.ಜಿ.ಎನ್.ಉಪಾಧ್ಯ, ಅಶೋಕ ಸುವರ್ಣ, ಓಂದಾಸ್ ಕಣ್ಣಂಗಾರ್, ಡಾ.ಕರುಣಾಕರ ಶೆಟ್ಟಿ, ಡಾ.ಜಿ.ಪಿ.ಕುಸುಮಾ, ಜಿ. ವಿ. ಕಂಚುಗಾರ, ಕೊಲ್ಯಾರು ರಾಜು ಶೆಟ್ಟಿ, ಗಂಗಾಧರ ಪಣಿಯೂರು, ಕುಮಾರ ಜೋಶಿ, ಸೋಮನಾಥ್ ಕರ್ಕೇರ, ಗೋಪಾಲ ತ್ರಾಸಿ, ದಯಾನಂದ ಸಾಲ್ಯಾನ್, ಕೆ.ಎನ್.ಸತೀಶ್, ಡಾ.ದಾಕ್ಷಾಯಣಿ ಯಡಹಳ್ಳಿ, ಡಾ.ಮಂಜುನಾಥ್, ಮೇರಿಪಿಂಟೋ, ರತ್ನಾಕರ ಶೆಟ್ಟಿ, ಜಿ.ಕೆ.ರಮೇಶ್, ರಾಜೀವ ನಾಯಕ್,
ಡಾ.ಲೀಲಾ, ವಸಂತ ಕಲಕೋಟಿ, ಡಾ.ವಾಣಿ ಉಚ್ಚಿಲ್ಕರ್, ವಿಜಯಕುಮಾರ್ ಶೆಟ್ಟಿ, ಶಾಂತಾ ಶಾಸ್ತ್ರಿ, ಡಾ.ಶ್ಯಾಮಲಾ ಪ್ರಕಾಶ್, ಶಿಮುಂಜೆ ಪರಾರಿ, ಡಾ.ಸುಮಾ ದ್ವಾರಕಾನಾಥ್, ಹರೀಶ್ ಹೆಜ್ಮಾಡಿ , ನಟೇಶ್ ಪೊಲೆಪಲ್ಲಿ,ಅಮಿತಾ ಭಾಗ್ವತ್, ಅನುಸೂಯ ಗಲಗಲಿ, ಅರವಿಂದ ಹೆಬ್ಬಾರ್, ಅಶೋಕ ಸುವರ್ಣ,ಎಚ್.ಆರ್.ಛಲವಾದಿ, ದಿನಕರ ಚಂದನ್, ಡಾ.ಉಮಾ ರಾಮ ರಾವ್, ಡಾ.ವನಕುದ್ರಿ,ಶಾರದಾ ಅಂಚನ್, ಡಾ.ಮಧುಸೂದನ ರಾವ್, ಪಂಜು ಗಂಗೊಳ್ಳಿ, ಡಾ.ರಮಾ ಉಡುಪ, ವಿದ್ಯಾಧರ ಮುತಾಲಿಕ ದೇಸಾಯಿ, ಅರವಿಂದ ಜೋಶಿ, ಚಂದ್ರಶೇಖರ ಪಾಲೆತ್ತಾಡಿ, ಮಿತ್ರಪಟ್ಟ ನಾರಾಯಣ ಬಂಗೇರ, ಎನ್.ಆರ್.ರಾವ್, ಶಿವರಾಮ ಪೂಜಾರಿ, ಶರದ್ ಸೌಕೂರು,ಲಕ್ಷ್ಮೀ ವೆಂಕಟೇಶ್, ಗೋಪಿಕಾಪ್ರಿಯ,ರಾಘು.ಪಿ.ಶೆಟ್ಟಿ, ಡಾ.ಸುರೇಖಾ ನಾಯಕ್, ವಿದುಷಿ ಸರೋಜಾ ಶ್ರೀನಾಥ್, ಚಂದ್ರಹಾಸ ಸುವರ್ಣ, ಏಳಿಂಜೆ ನಾಗೇಶ್, ಮೀನಾ ಕಾಳಾವರ, ಸನತ್ಕುಮಾರ್ ಜೈನ್, ಅರ್ಚನಾ ಪೂಜಾರಿ,ಗೋವಿಂದ ಭಟ್,ಸುಜಾತ ಉಮೇಶ್ ಶೆಟ್ಟಿ, ಲತಾ ಸಂತೋಷ ಶೆಟ್ಟಿ,ಶಕುಂತಲಾ ಪ್ರಭು,ಸೋಮಶೇಖರ ಮಸಳಿ,ಲಕ್ಷ್ಮೀ ರಾಠೋಡ್,ಡಾ.ಶೈಲಜಾ ಹೆಗಡೆ, ಲಕ್ಷ್ಮೀಶ ಶೆಟ್ಟಿ, ಶಶಿಕಲಾ ಹೆಗಡೆ, ಸುರೇಖಾ ದೇವಾಡಿಗ, ಪಾರ್ವತಿ ಪೂಜಾರಿ, ಮೊದಲಾದವರು ವಿಭಿನ್ನ ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ಬೆಳೆಸುತ್ತಾ ಬಂದಿದ್ದಾರೆ.
ಹೊಸ ತಲೆಮಾರಿನ ಮುಂಬಯಿ ಕನ್ನಡ ಲೇಖಕರ ಕೊಡುಗೆಯೂ ಗಮನಾರ್ಹ. ಈ ನಿಟ್ಟಿನಲ್ಲಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ, ಡಾ.ದಿನೇಶ್ ಶೆಟ್ಟಿ ರೆಂಜಾಳ, ಅನಿತಾ ಪೂಜಾರಿ, ಹೇಮಾ ಸದಾನಂದ ಅಮೀನ್,ಅಶೋಕ ಪಕ್ಕಳ,ಪೇತ್ರಿ ವಿಶ್ವನಾಥ ಶೆಟ್ಟಿ, ಶಾರದಾ ಅಂಬೆಸಂಗೆ, ಡಾ. ದುರ್ಗಪ್ಪ ಕೋಟಿಯವರ, ಗೀತಾ ಮಂಜುನಾಥ್, ಸುಜ್ಞಾನಿ ಬಿರಾದಾರ್, ಡಾ.ಜ್ಯೋತಿ ಸತೀಶ್, ಉದಯ ಶೆಟ್ಟಿ ಪಂಜಿಮಾರು, ಲಕ್ಷ್ಮೀ ಹೇರೂರು, ವಿಶ್ವೇಶ್ವರ ಮೇಟಿ, ಜ್ಯೋತಿ ನಾರಾಯಣ ಶೆಟ್ಟಿ, ಕಲಾ ಭಾಗ್ವತ್, ಸುರೇಖಾ ಹರಿಪ್ರಸಾದ್ ಶೆಟ್ಟಿ, ಜ್ಯೋತಿ ನಾರಾಯಣ ಶೆಟ್ಟಿ, ವಿಶ್ವನಾಥ್ ಅಮೀನ್, ಶ್ರೀಧರ್ ಉಚ್ಚಿಲ್, ಅಶೋಕಕುಮಾರ್ ವಳದೂರು, ರಮಣ್ ಶೆಟ್ಟಿ ರೆಂಜಾಳ, ವಾಣಿ ಶೆಟ್ಟಿ, ಸವಿತಾ ಅರುಣ್ ಶೆಟ್ಟಿ, ಅಶ್ವಿತಾ ಶೆಟ್ಟಿ, ವಿದ್ಯಾ ರಾಮಕೃಷ್ಣ, ವಿಕ್ರಮ್ ಜೋಶಿ ಮೊದಲಾದವರು ಕನ್ನಡ ಸಾಹಿತ್ಯ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಪಟ್ಟಿ ಅಂತಿಮ ಅಲ್ಲ, ಇನ್ನೂ ಕೆಲವು ಹೆಸರು ಇಲ್ಲಿ ಬಿಟ್ಟುಹೋಗಿರಬಹುದು. ಒಟ್ಟಿನಲ್ಲಿ ಇವತ್ತಿಗೂ ಮುಂಬೈ ಸಾಹಿತ್ಯ ವಲಯವಾಗಿ ಮುಂದುವರಿದಿದೆ ಎಂಬುದು ಸಾಮಾನ್ಯದ ಮಾತಲ್ಲ. ಕರ್ನಾಟಕದ ಹೊರಗೆ ಭಾರತದ ಬೇರೆ ಯಾವ ನಗರದಲ್ಲೂ ಈ ಪರಿಯ ಕನ್ನಡ ಕೈಂಕರ್ಯವನ್ನು ನಾವು ಕಾಣಲು ಸಾಧ್ಯವಿಲ್ಲ. ಇದು ಮುಂಬೈ ಕನ್ನಡಿಗರ ಹೆಮ್ಮೆಯ ಸಾಧನೆಯೂ ಹೌದು.
(ಈ ಲೇಖನಕ್ಕೆ ಬೇಕಾದ ಕೆಲವು ಪೂರಕ ಮಾಹಿತಿಗಳನ್ನು ನೀಡಿ ಸಹಕರಿಸಿದ ಪತ್ರಕರ್ತ, ಸಾಹಿತಿ ಶ್ರೀನಿವಾಸ ಜೋಕಟ್ಟೆ ಅವರಿಗೆ ಧನ್ಯವಾದಗಳು. )
0 ಪ್ರತಿಕ್ರಿಯೆಗಳು