ವಸಂತ ಪ್ರಕಾಶನದಿಂದ ಮಕ್ಕಳ ಸಾಹಿತ್ಯ ಸುಗ್ಗಿ…

ಡಾ ಎಚ್ ಎಸ್ ವೆಂಕಟೇಶ ಮೂರ್ತಿ

ಕನ್ನಡ ಪುಸ್ತಕ ಪ್ರಕಾಶನ ಲೋಕದಲ್ಲಿ ವಸಂತ ಪ್ರಕಾಶನವು ಬಹಳ ಮುಖ್ಯವಾದದ್ದು. ಹಲವು ಸದಭಿರುಚಿಯ ಪುಸ್ತಕಗಳನ್ನು ಈ ಸಂಸ್ಥೆ ಪ್ರಕಟಿಸಿದೆ. ಹಿರಿಯ ಸಾಹಿತಿಗಳ ಬರಹಗಳ ಜೊತೆಗೆ ʼವ್ಯಕ್ತಿ ಚಿತ್ರ ಮಾಲೆʼ, ʼಆರೋಗ್ಯ ಚಿಂತನ ಮಾಲಿಕೆʼಯಂತಹ ಪುಸ್ತಕ ಮಾಲಿಕೆಗಳನ್ನು ಪ್ರಕಟಿಸಿದ ಹೆಮ್ಮೆ ವಸಂತ ಪ್ರಕಾಶನದ್ದು. ಈಗ ಅವರು ʼವಸಂತ ಬಾಲಸಾಹಿತ್ಯ ಮಾಲೆʼಯ ಅಡಿಯಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಹಿರಿಯ ಕವಿಗಳಾದ ಶ್ರೀ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಈ ಮಾಲಿಕೆಯ ಸಂಪಾದಕರು. ಹನ್ನೆರೆಡು ಮಂದಿ ಲೇಖಕರ ಕೃತಿಗಳನ್ನು ಈ ಮಾಲಿಕೆಯಡಿಯಲ್ಲಿ ಪ್ರಕಟಿಸಲಾಗಿದೆ. ಈ ಮಾಲಿಕೆಯು ಇದೇ ತಿಂಗಳ ೨೪ರಂದು ಲೋಕಾರ್ಪಣೆಗೊಳ್ಳಲಿದೆ. ಈ ಮಾಲಿಕೆಗಾಗಿ ಎಚ್‌.ಎಸ್.‌ ವೆಂಕಟೇಶಮೂರ್ತಿ ಅವರು ಬರೆದಿರುವ ಪ್ರಸ್ತಾವನೆ ಇಲ್ಲಿದೆ.

ಕಾವ್ಯ, ನಾಟಕದಂತೆಯೇ ಮಕ್ಕಳ ಸಾಹಿತ್ಯವೂ ನನಗೆ ಬಹು ಪ್ರಿಯವಾದ ಸಾಹಿತ್ಯ ಪ್ರಕಾರ. ಮಕ್ಕಳಿಗಾಗಿ ಸಾಕಷ್ಟು ಕವಿತೆ, ಕಥೆ, ನಾಟಕಗಳನ್ನು ಬರೆದಿದ್ದೇನೆ. ಈಗ ಮಕ್ಕಳ ಸಾಹಿತ್ಯದ ಸಂಪಾದನೆಯ ಅವಕಾಶವೂ ಒದಗಿದ್ದು ನನ್ನ ಭಾಗ್ಯ. ವಸಂತ ಪ್ರಕಾಶನ ಅಂಥ ಒಂದು ಅವಕಾಶವನ್ನು ನನಗೆ ಕಲ್ಪಿಸಿದೆ. ಮಕ್ಕಳಿಗಾಗಿ ಬರೆಯುವುದು, ಬರೆಸುವುದು ನನಗೆ ಅತ್ಯಂತ ಪ್ರಿಯವಾದ ಸಂಗತಿ. ಅನೇಕ ವರ್ಷಗಳಿಂದ ಈ ಕರ್ತವ್ಯದಲ್ಲಿ ಮನಸಾ ತೊಡಗಿಕೊಂಡಿದ್ದೇನೆ.

ಮಕ್ಕಳಿಗಾಗಿ ಯಾರು ಬರೆಯಬೇಕು ಎನ್ನುವುದು ಚಿಂತಿಸಬೇಕಾದ ವಿಷಯ. ಮಕ್ಕಳಿಗಾಗಿ ಮಕ್ಕಳೇ ಬರೆಯಬೇಕೆಂದು ವಾದ ಮಾಡುವವರು ಇದ್ದಾರೆ. ಅದೇ ನಿಜವಾದ ಮಕ್ಕಳ ಸಾಹಿತ್ಯ, ದೊಡ್ಡವರು ಬರೆದಾಗ ಅವರು ಎಷ್ಟೇ ಪರಕಾಯಪ್ರವೇಶಚತುರರಾದರೂ ಮಕ್ಕಳ ಸಹಜ ಮುಗ್ಧತೆ ಅಲ್ಲಿ ಬರುವುದು ಸಾಧ್ಯವಿಲ್ಲ ಎನ್ನುವುದು “ಮಕ್ಕಳ ಸಾಹಿತ್ಯ ಮಕ್ಕಳಿಂದ” ಎಂದು ವಾದಿಸುವವರ ಮುಖ್ಯ ನಿಲುವು. ಯಾವುದೇ ಸಾಹಿತ್ಯವಿರಲಿ ಅದಕ್ಕೆ ಕಲಾತ್ಮಕತೆಯ ಪರಿಷ್ಕಾರವಾಗದೆ ಅದು ನಿಜವಾದ ಸಾಹಿತ್ಯವಾಗುವುದು ಸಾಧ್ಯವಿಲ್ಲ.

ಮಕ್ಕಳು ಬರೆದುದರಲ್ಲಿ ಮುಗ್ಧತೆ ಇರುತ್ತದೆ ನಿಜ. ಆದರೆ ಆ ಬರಹಕ್ಕೆ ಸಾಹಿತ್ಯ ಸಂಸ್ಕಾರವಾಗದೆ ಅದಕ್ಕೆ ಲಯದ ಸಹಜ ಸೊಬಗು, ಭಾಷೆಯ ಬೆಡಗು, ಕಲ್ಪನೆಯ ಜಿಗಿತ ಸಿದ್ಧಿಸಲಾರದು. ಹಿಂದೆ ಕ್ಯಾಡ್ಬರಿಯವರು ಮಕ್ಕಳಿಗಾಗಿಯೇ ಒಂದು ಸ್ಪರ್ಧೆ ನಡೆಸಿ ನೂರಾರು ಮಕ್ಕಳ ರಚನೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಮಕ್ಕಳಲ್ಲಿ ಸೃಷ್ಟಿಶೀಲತೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇಂಥ ಪ್ರಯೋಗಗಳು ಸ್ವಾಗತಾರ್ಹವಾದುದು. ಆದರೆ ಮಕ್ಕಳು ಹೀಗೆ ಬರೆದುದು ನಿಜವಾದ ಮಕ್ಕಳ ಸಾಹಿತ್ಯಕ್ಕೆ ಕಚ್ಚಾಮಾಲು ಎಂದು ನನಗೆ ಅನ್ನಿಸುತ್ತೆ. ಮಕ್ಕಳ ಕಲ್ಪನೆ ಹಾರಾಡುವ ನೆಲೆಯನ್ನು ಗುರುತಿಸಿಕೊಳ್ಳಲು ಈ ಬಗೆಯ ರಚನೆಗಳು ನಮಗೆ ಸಹಾಯ ಮಾಡುತ್ತವೆ. ಆದರೆ ಕ್ಯಾಡ್ಬರಿಯ ಅಂಥಾಲಜಿಯಲ್ಲಿ ಪಂಜೆ ಮಂಗೇಶರಾಯರ ತೆಂಕಣ ಗಾಳಿಯಾಟ, ಕುವೆಂಪು ಅವರ ಕಿಂದರಿಜೋಗಿ, ಬೇಂದ್ರೆಯವರ ಕರಡಿ ಕುಣಿತ, ರಾಜರತ್ನಂ ಅವರ ತುತ್ತೂರಿ, ಸಿದ್ಧಯ್ಯ ಪುರಾಣಿಕರ ಅಜ್ಜನ ಕೋಲಿದು- ಮೊದಲಾದ ರಚನೆಗಳ ಸಮೀಪಕ್ಕೆ ಬರುವ ರಚನೆಗಳೂ ಇಲ್ಲ. ನಮ್ಮ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾಗುವ ಮಕ್ಕಳು ಬರೆದ ಕವಿತೆಗಳೆನ್ನುವ ಬರಹವನ್ನು ಒಮ್ಮೆ ಗಮನಿಸಿದರೆ ನನ್ನ ಮಾತಿನ ಸತ್ಯ ಸ್ಪಷ್ಟವಾಗುವುದು.

ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಭಾಷೆ, ಮಕ್ಕಳ ಕಲ್ಪನೆ, ಮಕ್ಕಳ ಮುಗ್ಧತೆ ಇವೆಲ್ಲಾ ಇರಲೇ ಬೇಕು. ಅವುಗಳ ಹಿಂದೆ ಶ್ರೇಷ್ಠ ಮಟ್ಟದ ಸಾಹಿತ್ಯಕ ಕಸುಬುಗಾರಿಕೆ ಮತ್ತು ಮನಸ್ಸಿನ ಪಕ್ವತೆ ಇಲ್ಲದೆ ಮಕ್ಕಳ ಸಾಹಿತ್ಯ ಉನ್ನತಿ ಸಾಧಿಸಲಾರದು. ಪ್ರೌಢತೆಯ ಹೆಗಲೇರಿ ಕುಳಿತ ಮುಗ್ಧತೆಯಿಂದ ಮಾತ್ರ ಅತ್ಯುನ್ನತ ಮಕ್ಕಳ ಸಾಹಿತ್ಯದ ನಿರ್ಮಿತಿ ಸಾಧ್ಯ. ಸಾಹಿತ್ಯ ಅಂದಮೇಲೆ ಅನುಭವದ ಆಯ್ಕೆ, ಅದರ ನಿರ್ಮಿತಿಗೆ ತಕ್ಕ ರೂಪದ ಆಯ್ಕೆ, ರೂಪವನ್ನು ಯುಕ್ತವಾಗಿ ಧರಿಸಬಲ್ಲ ಭಾಷೆಯ ಆಯ್ಕೆ, ಆ ಭಾಷೆಯೊಂದಿಗೆ ಭಾವಕ್ಕೆ ಸಾಥಿಯಾಗಿ ನಿಲ್ಲುವ ಉಚಿತ ಲಯದ ಆಯ್ಕೆ ಇವೆಲ್ಲಾ ಇರಲಿಕ್ಕೇ ಬೇಕು. ಅವು ಇಲ್ಲವಾದಲ್ಲಿ ಅತ್ಯುತ್ತಮ ಮಕ್ಕಳ ಸಾಹಿತ್ಯದ ನಿರ್ಮಿತಿ ಸಾಧ್ಯವೇ ಇಲ್ಲ. ಅಜ್ಜನ ಕೋಲನ್ನು ಕುದುರೆ ಎಂದು ಮಕ್ಕಳು ಕಲ್ಪಿಸಬಲ್ಲರು. ಆದರೆ ಈ ಕುದುರೆಯ ವಿಲಕ್ಷಣ ಗುಣಲಕ್ಷಣಗಳನ್ನು ಬಾಲ್ಯವನ್ನು ಆಧಾರವಾಗಿ ಇಟ್ಟುಕೊಂಡು ಇವತ್ತು ಪ್ರೌಢತೆಯ ನೆಲೆಯಲ್ಲಿ ನಿಂತ ಪ್ರಬುದ್ಧ ಕವಿ ಸಿದ್ಧಯ್ಯ ಪುರಾಣಿಕರಂಥವರು ಮಾತ್ರ ಕಲ್ಪಿಸಬಲ್ಲರು.
ಆ ಪದ್ಯದ ಕೊನೆಯ ನಾಲಕ್ಕು ಸಾಲುಗಳನ್ನು ಗಮನಿಸಿ:

ಅರಬರ ದೇಶದಿ ದೊರೆಯದ ಕುದುರೆ
ಕಾಠೇವಾಡದಿ ಕಾಣದ ಕುದುರೆ
ಅರಸುಮಕ್ಕಳಿಗು ಸಿಕ್ಕದ ಕುದುರೆ
ನನಗೇ ಸಿಕ್ಕಿದೆ ನನ್ನೀ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ.

ಇದು ಮಕ್ಕಳ ಅನುಭವಲೋಕಕ್ಕೆ ಲೋಕಗ್ರಹಿಕೆಗಳನ್ನು ದಕ್ಕಿಸುವ ದೃಷ್ಟಿಯಿಂದ ಬರೆಯಲಾದ ಚೌಪದಿ. ಮಕ್ಕಳಿಗೆ ಭಾರವಾಗದಂತೆ ಅವರ ಲೋಕಪರಿಚಯವನ್ನು ಹಿಗ್ಗಿಸುವ ಸಾಲುಗಳು ಇಲ್ಲಿವೆ. ಮಕ್ಕಳೇ ಬರೆದಿದ್ದರೆ ಈ ಬಗೆಯ ಸಾಲುಗಳು ಹುಟ್ಟುತ್ತಿರಲಿಲ್ಲ. ಪ್ರೌಢತೆಯನ್ನ ಬಚ್ಚಿಟ್ಟುಕೊಂಡ ಮುಗ್ಧತೆ ಮಕ್ಕಳ ಕವಿತೆಯ ಅಂಗವಿನ್ಯಾಸವಾಗಬೇಕೆಂದು ನಾನು ಬಯಸುತ್ತೇನೆ. ಇದನ್ನು ಬೇಕಾದರೆ ಇನ್ನೋಸೆನ್ಸ್ ಆಫ್ ವಿಸ್ಡಮ್ ಎಂದು ಕರೆಯಲಿಕ್ಕೆ ಅಡ್ಡಿಯಿಲ್ಲ. ಪಂಜೆಯವರ ʼಹಾವಿನ ಹಾಡುʼ ಎಂಬ ಕವಿತೆಯನ್ನೇ ಎತ್ತಿಕೊಳ್ಳಿ. ಅದು ಕೇವಲ ನಾಗರ ಹಾವನ್ನು ಕುರಿತ ಕವಿತೆಯೇ ಅಲ್ಲ ಎನ್ನುತ್ತದೆ ಕನ್ನಡ ವಿಮರ್ಶೆ. ಈ ಪದ್ಯದ ಕೊನೆಯ ಚೌಪದಿಯನ್ನು ಗಮನಿಸಿ.

ಬರಿಮೈ ತಣ್ಣಗೆ, ಮನದಲಿ ಬಿಸಿ ಹಗೆ,
ಎರಡೆಳೆ ನಾಲಗೆ ಇದ್ದರು ಸುಮ್ಮಗೆ.
ಎರಗುವೆ ನಿನಗೆ, ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ ಪೋ ಪೋ ಪೋ

ಈ ಸಾಲುಗಳು ಬ್ರಿಟಿಷ್ ಸಾರ್ವಭೌಮತ್ವಕ್ಕೆ ಕ್ವಿಟ್ ಇಂಡಿಯಾ ಎಂದು ಸೂಚ್ಯವಾಗಿ ಹೇಳುತ್ತಿವೆ ಎನ್ನುತ್ತಾರೆ ವಿಮರ್ಶಕರು. ದೊಡ್ಡವರಿಗೂ ದಕ್ಕುವ ಮಕ್ಕಳ ಕವಿತೆಗಳು ಎನ್ನುವಂಥ ವಿಮರ್ಶೆ ಇಂಥ ಕವಿತೆಗಳನ್ನು ಕುರಿತೇ ಹುಟ್ಟಿಕೊಳ್ಳುತ್ತದೆ. ನನ್ನ ʼಗುಬ್ಬಿಮರಿʼ ಕವಿತಾ ಗುಚ್ಛದಲ್ಲಿ, ಮಕ್ಕಳಿಗೆ ಭಾರವಾಗದಂತೆಯೇ ಅನೇಕ ಗಂಭೀರ ಸಾಮಾಜಿಕ ಹೇಳಿಕೆಗಳನ್ನು ಮಾಡಲಾಗಿದೆ ಎಂದು ಕನ್ನಡ ವಿಮರ್ಶೆ ಗುರುತಿಸಿದೆ. ಒಂದು ಗುಬ್ಬಿಮರಿ ಕಾಗೆಮರಿಯೊಂದಿಗೆ ಆಡಿಕೊಳ್ಳುತ್ತಿದೆ. ಅದು ತಾಯಿ ಗುಬ್ಬಿಗೆ ಸಹ್ಯವಾಗುವುದಿಲ್ಲ. ಅದು ಮರಿಗೆ ನೀನು ಕಾಗೆ ಮರಿಯೊಂದಿಗೆ ಆಡುವುದು ಕೂಡದು, ಗುಬ್ಬಿಮರಿ ಏನಿದ್ದರೂ ಗುಬ್ಬಿಮರಿಯೊಂದಿಗೆ ಮಾತ್ರ ಆಡಿಕೊಳ್ಳಬೇಕು ಎಂದು ನಿರ್ಬಂಧಿಸುತ್ತದೆ.

ಮುಗ್ಧ ಗುಬ್ಬಿಮರಿ, ʼಕಾಗೆ ಮರಿ ಒಳ್ಳೆ ಮರಿ! ಅದರ ಜೊತೆ ಆಡಿದರೆ ಏನು ತಪ್ಪು?ʼ ಎಂದು ಕೇಳುತ್ತದೆ. ಆಗ ತಾಯಿ ಗುಬ್ಬಿ ʼಕಾಗೆ ಮರಿಯ ಜೊತೆ ನೀನು ಆಡಿದರೆ ಅದರಂತೆ ನೀನೂ ಕಪ್ಪಗಾಗುತ್ತೀʼ ಎನ್ನುತ್ತದೆ. ಗುಬ್ಬಿ ಮರಿ ತಕ್ಷಣ ಉತ್ತರಿಸುತ್ತದೆ – ʼನನ್ನೊಂದಿಗೆ ಆಡಿಕೊಂಡರೆ ಕಾಗೆಮರಿ ನನ್ನ ಹಾಗೇ ಬೆಳ್ಳಗೂ ಆಗಬಹುದಲ್ಲ!?ʼ ಇದನ್ನೇ ವಿಸ್ಡಮ್ ಆಫ್ ಇನ್ನೋಸೆನ್ಸ್ ಎಂದು ಗುರುತಿಸಬೇಕಾಗುತ್ತದೆ. ವರ್ಗ ಭೇದ ವರ್ಣ ಭೇದದ ಬಗ್ಗೆ ಯಾವ ಅಬ್ಬರವನ್ನೂ ಮಾಡದೆ ಸಾಮಾಜಿಕನ್ಯಾಯದ ಹೇಳಿಕೆಯನ್ನು ಇಲ್ಲಿ ಮಂಡಿಸಲಾಗಿದೆ. ಹೀಗೆ ಯಾವುದು ಉಚಿತವೋ ಆ ಮೌಲ್ಯಗಳು ಮಕ್ಕಳಿಗೆ ನೀತಿಯ ಭಾರವಿಲ್ಲದೆ ಹೃದ್ಗತವಾಗಬೇಕು ಎಂದು ಯಾರು ತಾನೇ ಬಯಸುವುದಿಲ್ಲ?

ನನ್ನ ʼಕಾರ್ಪೊರೇಷನ್ ಲಾರಿʼ ಎಂಬ ಪದ್ಯದಲ್ಲಿ ಹಾಳುಮೂಳನ್ನು ಹೊಟ್ಟೆಗೆ ಹಾಕಿಕೊಳ್ಳುವ ಕಾರ್ಪೊರೇಷನ್ ಲಾರಿಯ ಬಗ್ಗೆ ಮಗುವೊಂದು ವಹಿಸುವ ಅನುಕಂಪೆ ಮತ್ತು ಕಾಳಜಿ ಮುಖ್ಯವಾಗುತ್ತದೆ. ʼಬೇಕಾದ್ದೇನು ಹಾರೋದಕ್ಕೆʼ ಎಂಬ ನನ್ನ ಇನ್ನೊಂದು ಪದ್ಯದಲ್ಲಿ ಮೇಡಂ ಮತ್ತು ಮರಿಹಕ್ಕಿಯ ಸಂವಾದವಿದೆ.

ಬೇಕಾದ್ದೇನು ಹಾರೋದಕ್ಕೆ?
“ಟೊಂಕದ ಪಕ್ಕ ರೆಕ್ಕೆ!”
ಅಷ್ಟೇ ಸಾಕೇ ಯೋಚಿಸಿ ನೋಡು; ಬೇಡವೇನು ಮಾಡು?

ಬೇಕಾದ್ದೇನು ಕುಕ್ಕೋದಕ್ಕೆ?
“ಮೂತೀಲೊಂದು ಕೊಕ್ಕು!”
ಅಷ್ಟೇ ಸಾಕೇ ಯೋಚಿಸಿ ಹೇಳು; ಬೇಡವೇನು ಕಾಳು?

ಬೇಕಾದ್ದೇನು ಬದುಕೋದಕ್ಕೆ?
“ಅಮ್ಮನ ಪ್ರೀತಿಯ ತೆಕ್ಕೆ!”
ಅಷ್ಟೇ ಸಾಕೇ ಬೇಡವೆ ಹೇಳು; ನಿನ್ನದೆ ಸ್ವಂತ ಬಾಳು!?

ಈ ಪದ್ಯದಲ್ಲಿ ಹಾರುವುದಕ್ಕೆ ರೆಕ್ಕೆ ಇದ್ದರೆ ಮಾತ್ರ ಸಾಲದು, ಹಾರಲಿಕ್ಕೆ ಬಯಲೂ ಬೇಕು ಎನ್ನುವ ಸಂಬಂಧೀತತ್ವವನ್ನು ಮಕ್ಕಳಿಗೆ ಅವರ ಭಾಷಾಕಲ್ಪದಲ್ಲೇ ದಾಟಿಸುವ ಪ್ರಯತ್ನವಿದೆ. ಮುಂದೆ “ಚಿನ್ನಾರಿ ಮುತ್ತ” ಚಿತ್ರಕ್ಕೆ ಹಾಡು ಬರೆಯುವಾಗ ಈ ಐಡಿಯಾವನ್ನ ಇನ್ನಷ್ಟು ಸರಳೀಕರಿಸಿ ರೆಕ್ಕೆ ಇದ್ದರೆ ಸಾಕೇ ಎನ್ನುವ ಹಾಡನ್ನು ಬರೆದದ್ದಾಯಿತು. ಅದು ಈವತ್ತೂ ಕನ್ನಡ ಮಕ್ಕಳಿಗೆ ಪ್ರಿಯವಾದ ಒಂದು ಗೀತೆಯಾಗಿದೆ.
ಮಕ್ಕಳ ಕವಿತೆಗಳು ಎಂತೆಂಥಾ ಕಠೋರ ಸತ್ಯಗಳನ್ನು ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುತ್ತವೆ ಎನ್ನುವುದಕ್ಕೆ ಬ್ರೌನಿಂಗ್ ಕವಿಯ ʼಪೈಡ್ ಪೈಪರ್ ಆಫ್ ಹ್ಯಾಮಲಿನ್ʼ ಎಂಬ ಪ್ರಸಿದ್ಧ ಕವಿತೆಯನ್ನು ಗಮನಿಸಬೇಕು.

ಕುವೆಂಪು ಅವರ ʼಕಿಂದರಿಜೋಗಿʼ ಕವಿತೆಗೆ ಪ್ರೇರಣೆ ಈ ಇಂಗ್ಲಿಷ್ ಕವನ. ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ನೆಲೆಸಿರುವ ಎಚ್.ವೈ. ರಾಜಗೋಪಾಲ್ ಅವರು ʼಬೊಮ್ಮನಹಳ್ಳಿಯ ಕಿಂದರಿಜೋಗಿʼಯ ಬಗ್ಗೆ ಬರೆಯುವಾಗ ಬ್ರೌನಿಂಗ್ ಕವಿಯ ಕವಿತೆಯ ಹಿನ್ನೆಲೆಯಲ್ಲಿರುವ ದಾರುಣ ದುರಂತಕಥೆಯೊಂದನ್ನು ಪ್ರಸ್ತಾಪಿಸುತ್ತಾರೆ. ಪೈಡ್ ಪೈಪರ್ ಕವಿತೆಯ ಹಿಂದೆ ಮಧ್ಯಕಾಲೀನ ಯುಗದಲ್ಲಿ ಸಂಭವಿಸಿದ ಮಕ್ಕಳ ಧರ್ಮಯುದ್ಧದ (ಕ್ರುಸೇಡ್ಸ್) ಐತಿಹ್ಯವಿದೆ. ಪಶ್ಚಿಮ ಯೂರೋಪಿನ ಕ್ರೈಸ್ತರು, ತಮ್ಮ ಧರ್ಮದ ಪವಿತ್ರನಗರವೆಂದು ಪರಿಗಣಿಸಲ್ಪಟ್ಟಿರುವ ಜೆರುಸಲೆಂ ನಗರವನ್ನು ಅನ್ಯ ಧರ್ಮೀಯರಿಂದ ಮುಕ್ತಗೊಳಿಸಲು ಎಂಟು ಬಾರಿ ಸೈನಿಕ ಕಾರ್ಯಾಚರಣೆಗಳನ್ನು ನಡೆಸುತ್ತಾರೆ. ಇವನ್ನೇ ಕ್ರುಸೇಡ್‌ಗಳೆಂದು ಗುರುತಿಸುವುದು.

ಹದಿಮೂರನೇ ಶತಮಾನದಲ್ಲಿ ದಾರುಣವಾದ ಮಕ್ಕಳ ಕ್ರುಸೇಡ್‌ಗಳು ನಡೆಯುತ್ತವೆ. ಸ್ಟೀಫನ್ ಎಂಬ ಕುರುಬ ಹುಡುಗನ ಮುಂದಾಳುತನದಲ್ಲಿ ಹನ್ನೆರಡು ವಯಸ್ಸು ಮೀರದ ಮೂವತ್ತು ಸಾವಿರ ಮಕ್ಕಳ ದಂಡೊಂದು ಜೆರುಸಲೆಂ ಅನ್ನು ಅನ್ಯ ಧರ್ಮೀಯರಿಂದ ಮುಕ್ತಗೊಳಿಸಲು ದಂಡಯಾತ್ರೆ ಹೊರಡುತ್ತದೆ. ದಾರಿಯಲ್ಲಿ ಅನೇಕ ಅವಘಡಗಳು ಸಂಭವಿಸುತ್ತವೆ. ಸಮುದ್ರದಲ್ಲಿ ಹಡಗು ಒಡೆದು ಸಾವಿರಾರು ಮಕ್ಕಳು ಮೃತರಾಗುತ್ತಾರೆ. ಅಳಿದುಳಿದ ಮಕ್ಕಳು ಗುಲಾಮರಾಗಿ ಮಾರಲ್ಪಡುತ್ತಾರೆ. ಇಂಥದೇ ಇನ್ನೊಂದು ದುರಂತ ಘಟನೆ – ನಿಕೊಲಾಸ್ ಎಂಬ ಜರ್ಮನ್ ಹುಡುಗನ ನೇತೃತ್ವದಲ್ಲಿ ಇಪ್ಪತ್ತು ಸಾವಿರ ಮಂದಿ ಮಕ್ಕಳು ಜೆರುಸಲೆಂ ಕಡೆ ಹೊರಟು ಮೊದಲ ಚಿಲ್ಡ್ರನ್ ಕ್ರುಸೇಡಿನಂತೆಯೇ ಮಾರ್ಗಮಧ್ಯದಲ್ಲಿ ನಾನಾಬಗೆಯ ತೊಂದರೆಗೆ ಸಿಕ್ಕು ನಾಶವಾಗುವ ಘಟನೆ.

ಮಕ್ಕಳಿಗೆ ಉಂಟಾದ ಈ ಸಾಮೂಹಿಕ ಸರ್ವನಾಶವೇ ಒಂದು ರೂಪಕವಾಗಿ ಆಕಾರಪಡೆದು ಪೈಡ್ ಪೈಪರ್ ಕವಿತೆಗೆ ಕಾರಣವಾಗಿರುವುದು ಎದೆ ಝಲ್ಲೆನ್ನಿಸುವಂಥ ವಿಷಯ. ಈ ಹಿನ್ನೆಲೆಯಲ್ಲಿ ಬ್ರೌನಿಂಗ್ ಕವಿತೆಯನ್ನ, ಅಥವಾ ಕುವೆಂಪು ಅವರ ಕಿಂದರಿಜೋಗಿ ಪದ್ಯವನ್ನ ಇನ್ನೊಮ್ಮೆ ಓದಿದರೆ, ಆ ಕವಿತೆ ಮಕ್ಕಳಿಗೆ ಮಾತ್ರವಲ್ಲ, ಹಿರಿಯರಿಗೂ ಬೇರೊಂದು ನೆಲೆಯಲ್ಲಿ ದಕ್ಕುವ ಕವಿತೆಯಾಗುತ್ತದೆ. ಎಲ್ಲ ಮಕ್ಕಳ ಕವಿತೆಗಳು ಹೀಗಿರಬೇಕೆಂಬುದು ನನ್ನ ವಾದವಲ್ಲ. ಆದರೆ ಮಕ್ಕಳ ಕವಿತೆಗಳು ಹೀಗೆ ಬದುಕಿನ ದಾರುಣತೆಯನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡು ಮಕ್ಕಳ ಮನಸ್ಸನ್ನು ಪ್ರವೇಶಿಸಿದರೆ, ಇತಿಹಾಸದ ಕ್ರೌರ್ಯವನ್ನೂ ಮಾಯಾರೂಪದಲ್ಲಿ ನಾವು ಮಕ್ಕಳಿಗೆ ದಾಟಿಸಿದ ಹಾಗೆ ಆಗುತ್ತದೆ.

ಮಕ್ಕಳಿಗೆ ಕಠೋರವಾದ ಸತ್ಯಗಳನ್ನು ಹೇಳುವುದಕ್ಕೆ ಈ ಬಗೆಯ ರೂಪಕಮಾರ್ಗ ಅತ್ಯುಚಿತವೆಂದು ನಾನು ಭಾವಿಸುತ್ತೇನೆ. ನಮ್ಮ ಜವಾಬುದಾರಿ- ಮಕ್ಕಳಿಗೆ ಹೂವಿನ ಅರಿವು ಕೊಡುವಂತೆಯೇ ಹೂವಿನ ಹಿಂದಿರುವ ಮುಳ್ಳಿನ ಅರಿವನ್ನೂ ಮರೆಮಾತಿನ ತಂತ್ರದ ಮೂಲಕ ದಾಟಿಸಿಬಿಡುವುದು. ಸಂತೋಷದಂತೆ ಸ್ಥೈರ್ಯವೂ ಮಕ್ಕಳಿಗೆ ಉಪಾಧೇಯವಾದುದು. ಮಕ್ಕಳ ಸಾಹಿತ್ಯದಲ್ಲಿ ಇದಕ್ಕೆ ಅನೇಕ ಮಾಯಾಮಾರ್ಗಗಳಿವೆ. ಅದನ್ನು ಜವಾಬುದಾರಿಯೊಂದಿಗೆ ಅನುಸಂಧಾನಿಸುವುದು ಪಕ್ವಗೊಂಡ ಮಾಗಿದಮನಸ್ಸಿನ ಮಕ್ಕಳ ಸಾಹಿತಿಗಳ ಹೊಣೆಗಾರಿಕೆ! ಆ ಹೊಣೆಗಾರಿಕೆಯನ್ನು ನಮ್ಮ ಹಿರಿಯರು ಅದ್ಭುತವಾಗಿ ನಿರ್ವಹಿಸಿದ್ದಾರೆ. ಈ ಮಾತು ಬರೆಯುವಾಗ ಕನ್ನಡದ ಮನೋಹರವಾದ ಅನೇಕ ಮಕ್ಕಳ ಕವಿತೆಗಳು ನನ್ನ ಕಣ್ಮುಂದೆ ಪೆರೇಡು ನಡೆಸುತ್ತಿವೆ. ಅವು ನಿಜಕ್ಕೂ ಕನ್ನಡಿಗರು ಮರೆಯಲಾಗದಂಥ, ಮರೆಯಬಾರದ ಮಕ್ಕಳ ಕವಿತೆಗಳು:

ಪಂಜೆ ಮಂಗೇಶರಾವ್ ಅವರ ʼಉದಯರಾಗʼ ಎಂಬ ಕವಿತೆಯನ್ನು ಗಮನಿಸಿ.
ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು, ಕುಣಿದಾಡುವನು.
ಬೆಳಕಿನ ಕಣ್ಣುಗಳಿಂದಾ ಸೂರ್ಯನು ನೋಡುವನು, ಬಿಸಿಲೂಡುವನು;
ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂಡಿನ ಹೊರಹೊರ ದೂಡುವನು.

ಬಂಗಾರದ ಚೆಲು ಬಿಸಿಲ ಕಿರೀಟದ ಶೃಂಗಾರದ ತಲೆ ಎತ್ತುವನು;
ತೆಂಗಿನ ಕಂಗಿನ ತಾಳೆಯ ಬಾಳೆಯ ಅಂಗಕೆ ರಂಗನು ಮೆತ್ತುವನು.

ಮಾಡಿನ ಹುಲ್ಲಲಿ ಚಿನ್ನದ ಗೆರೆಯನು ಎಳೆಯುವನು ರವಿ ಎಳೆಯುವನು;
ಕೂಡಲೆ ಕೋಣೆಯ ಕತ್ತಲ ಕೊಳೆಯನು ತೊಳೆಯುವನು ರವಿ ಹೊಳೆಯುವನು.

ಮಲಗಿದ ಕೂಸಿನ ನಿದ್ದೆಯ ಕಸವನು ಗುಡಿಸುವನು, ಕಣ್ ಬಿಡಿಸುವನು;
ಹುಲು, ಗಿಡ, ಹೂವಿಗೆ ಪರಿಪರಿ ಬಣ್ಣವ ಉಡಿಸುವನು, ಹನಿ ತೊಡಿಸುವನು.

ಏರುವನು ರವಿ ಏರುವನು; ಬಾನೊಳು ಸಣ್ಣಗೆ ತೋರುವನು;
“ಏರಿದವನು ಚಿಕ್ಕವನಿರಬೇಕಲೆ”ಎಂಬಾ ಮಾತನು ಸಾರುವನು.

ಈ ಪದ್ಯವು ಪಂಜೆಯವರ ಮಕ್ಕಳ ಕವಿತೆಗಳ ಗುಣವನ್ನು ಸಾರವತ್ತಾಗಿ ಪ್ರಕಟಿಸುತ್ತಾ ಇದೆ. ಮೊದಲು ಈ ಕವಿತೆಯಲ್ಲಿ ನಮ್ಮನ್ನು ಮರುಳು ಮಾಡುವುದು ಮಕ್ಕಳಿಗೆ ಬಹು ಪ್ರಿಯವಾಗುವ ಕುಣಿದಾಡುವ ಪ್ರಾಸಗಳು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಇದನ್ನು ಪಠ್ಯದಲ್ಲಿ ಓದಿದ್ದು. ಈಗಲೂ ಈ ಕವಿತೆಯ ಸಾಲುಗಳು ನನ್ನ ಮನಸ್ಸಲ್ಲಿ ಉಳಿದಿವೆ.

ತೆಂಗಿನ ಕಂಗಿನ ತಾಳೆಯ ಬಾಳೆಯ ಅಂಗಕೆ ರಂಗನು ಮೆತ್ತುವನು-ಎಂಬ ಸಾಲನ್ನು ನೆನೆದಾಗೆಲ್ಲಾ ನನಗೆ ಪುಳಕಾಂಕುರವಾಗುತ್ತದೆ. ಓತಪ್ರೋತವಾಗಿ ಬರುವ ಅನುಪ್ರಾಸಗಳ ಹೆಣಿಗೆ ಮಕ್ಕಳಿಗೆ ಯಾವತ್ತೂ ಪ್ರಿಯವಾಗುವಂಥದ್ದು. ಒಂದೇ ಬಗೆಯಲ್ಲಿ ಅನುರಣಿಸುವ ನಾದದ ಸೊಗಸು ಮಕ್ಕಳನ್ನು ಮರುಳು ಮಾಡುತ್ತದೆ. ಅದನ್ನು ಪಂಜೆಯವರು ಬಲ್ಲವರಾಗಿದ್ದರು.

ಮಕ್ಕಳಿಗೆ ಪ್ರಿಯವಾಗುವ ಸಂಗತಿಗಳಿಂದಲೇ ಇಲ್ಲಿ ಬೆಳಗಿನ ಅನುಭವವನ್ನು ಹಿಡಿಯಲಾಗಿದೆ. ಬೇಂದ್ರೆಯವರ ಬೆಳಗು ಎಂಬ ಅದ್ಭುತ ಕವಿತೆ ಪ್ರೌಢರಿಗಾಗಿ ಬರೆದದ್ದು. ಅಲ್ಲಿ ಶಾಂತಿರಸವೇ ಪ್ರೀತಿಯಿಂದ ಮೈದುಂಬಿತಣ್ಣ-ಎಂಬಂಥ ಆಧ್ಯಾತ್ಮಿಕ ಸ್ಪರ್ಶವುಳ್ಳ ಅಮೂರ್ತ ಕಲ್ಪನೆಗಳು ಸಹನೀಯವೂ ಸ್ವಾದ್ಯವೂ ಆಗಬಲ್ಲವು. ಮಕ್ಕಳಿಗಾಗಿ ಹೇಗೆ ಸೂರ್ಯೋದಯವನ್ನು ಗ್ರಹಿಸಬಹುದು? ಮೊದಲ ಸಾಲುಗಳಲ್ಲಿ ರಂಗಸ್ಥಳ ಎಂಬ ಮಾತು ಬರುವುದರಿಂದ ಅಲ್ಲಿ ಬರುವ ಜಗಳ ಮತ್ತು ನೆತ್ತರ ಉಲ್ಲೇಖ ಸಹ್ಯವಾಗುವುದು.

ಬೆಳಕು, ಬಿಸಿಲು, ಮುಂಜಾವದಲ್ಲಿ ನಾವು ಕೇಳುವ ಹಕ್ಕಿಗಳ ಚಿಲಿಪಿಲಿ ಇವುಗಳ ವರ್ಣನೆ ಮುಂದಿನ ಸಾಲುಗಳಲ್ಲಿ ಬರುತ್ತದೆ. ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಎಂಬ ಪ್ರಸಿದ್ಧವಾದ ವಚನದ ಸಾಲೊಂದು ಉಂಟಷ್ಟೆ? ಜಗತ್ತಿನ ಚಟುವಟಿಕೆಯೆಲ್ಲಾ ಸೂರ್ಯನಿಂದಲೇ ಚೋದಿತವಾಗುತ್ತವೆ ಎಂಬುದನ್ನು ಪಂಜೆಯವರ ಕವಿತೆಯೂ ಗ್ರಹಿಸುತ್ತಾ ಇದೆ. ಸೂರ್ಯೋದಯದ ಬಣ್ಣಗಾರಿಕೆ ಮುಂದಿನ ಸಾಲುಗಳ ವಿಷಯ. ಜೊತೆಗೆ ಬಿಸಿಲಿನ ಶುದ್ಧೀಕರಣ ಶಕ್ತಿಯನ್ನೂ ಕವಿತೆ ಕೈವಾರಿಸುತ್ತದೆ.

ಕೊನೆಯ ಸಾಲು ಹೇರದಿರುವ ಸಹಜ ನೀತಿಯ ಅಥವಾ ಲೋಕಗ್ರಹಿಕೆಯ ಮಾತು. ಯಾವುದೂ ಮಕ್ಕಳ ಗ್ರಹಿಕೆಗೆ ಭಾರವಾಗುವುದಿಲ್ಲ. ಪ್ರೌಢತೆಯ ಹೆಗಲ ಮೇಲೆ ಮುಗ್ಧತೆಯ ಸವಾರಿ ಎಂದು ನಾನು ಹೇಳಿದ ಮಾತು ಇಂಥ ಪದ್ಯಗಳಿಗೆ ಎಷ್ಟು ಚೆನ್ನಾಗಿ ಅನ್ವಯವಾಗುತ್ತದೆ, ನೋಡಿ!

| ಮುಂದುವರೆಯುವುದು |

‍ಲೇಖಕರು Admin

September 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: