ಸುನೀಲ್ ನಾಗರಾಜ್
**
ಅಂದು ೨೦೧೮ನೇ ಇಸವಿಯಲ್ಲಿ ಬೆಂಗಳೂರಿನ ಒಂದು ಖಾಸಗೀ ವಿದ್ಯಾಸಂಸ್ಥೆಯಲ್ಲಿ ಎಂ.ಬಿ.ಎ ಪದವಿ ಪಡೆದಿದ್ದ ನಾನು ಹೇಗಾದರೂ ಮಾಡಿ ಬೆಂಗಳೂರಿನಲ್ಲಿ ಜೀವನವನ್ನು ಕಟ್ಟಿಕೊಳ್ಳಬೇಕೆಂಬ ಮಹದಾಸೆಯಿಂದ ಅಲ್ಲಿಯೇ ಒಂದು ಖಾಸಗಿ ಕಂಪೆನಿಯಲ್ಲಿ ಕಸ್ಟಮರ್ ರಿಲೇಶನ್ ಶಿಪ್ ಮ್ಯಾನೇಜ್ಮೆಂಟ್ ಹುದ್ದೆಗೆ ಸೇರಿಕೊಳ್ಳುತ್ತೇನೆ. ಅಂದಹಾಗೆ ಆಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದ ನಾನು ಒಮ್ಮೆ ಎಲ್ಲದರಿಂದಲೂ ಬ್ರೇಕ್ ತೆಗೆದುಕೊಳ್ಳಬೇಕೆಂಬ ಮನಸ್ಥಿತಿಗೆ ತಲುಪಿದ್ದೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು ನಮ್ಮ ಬೆಂಗಳೂರು ಮಹಾನಗರದಲ್ಲಿನ ಟ್ರಾಫಿಕ್. ಬಸ್ಸಿನಲ್ಲಿ ಕುಳಿತು ಶೇಷಾದ್ರಿಪುರಂನ ಆಫೀಸಿನಿಂದ ಪೀಣ್ಯ ಎರಡನೇ ಹಂತದ ನನ್ನ ರೂಮ್ ತಲುಪುವುದರಲ್ಲಿ ನಾನು ಹಣ್ಣುಗಾಯಿ ನೀರುಗಾಯಿ ಆಗಿರುತ್ತಿದ್ದೆ. ಅದುವೇ ನೋಡಿ ನನಗೆ ಪುಸ್ತಕ ಓದುವ ಹವ್ಯಾಸ ಹುಟ್ಟುಹಾಕಿದ್ದು. ಪುಸ್ತಕಗಳಿಗೆ ಇರುವ ಶಕ್ತಿಯೇ ಅಂತಹುದು ಒಮ್ಮೆ ಮನಸಾರೆ ನಾವು ಅವುಗಳನ್ನು ಅಪ್ಪಿಕೊಂಡರೆ ಜೀವನ ಪರ್ಯಂತ ಅವು ನಮ್ಮ ಕೈಹಿಡಿದು ನಡೆಸುತ್ತವೆ ಎಂಬ ವಿಷಯ ನನ್ನ ಅರಿವಿಗೆ ಅದಾಗಲೇ ಬಂದಾಗಿತ್ತು.
ಇದರ ನಡುವೆ ಸಾಹಿತ್ಯದ ಒಲವು ನನ್ನನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಕನ್ನಡ ಎಂ.ಎ ಅಧ್ಯಯನ ಮಾಡಲು ಹುರಿದುಂಬಿಸಿತ್ತು. ಒಂದೆಡೆ ಅಪ್ಪನನ್ನು ಕಳೆದುಕೊಂಡ ಅಮ್ಮ ಏಕಾಂಗಿಯಾಗಿದ್ದರೆ, ಅವಳನ್ನು ಸಾಕಷ್ಟು ಹಚ್ಚಿಕೊಂಡಿದ್ದ ನಾನು ಈ ಉದ್ಯೋಗವನ್ನು ಮೊದಲು ತೊರೆದು ಅಮ್ಮನ ಮಡಿಲು ಸೇರಬಯಸಿದ್ದೆ. ಅಷ್ಟರಲ್ಲಾಗಲೆ ೨೦೨೦ರ ಫೆಬ್ರವರಿಗೆ ಕಾಲ ಸರಿದುಹೋಗಿತ್ತು. ಉದ್ಯೋಗ ತೊರೆದು ನನ್ನ ಹುಟ್ಟೂರಿಗೆ ಬಂದ ಒಂದೇ ತಿಂಗಳಲ್ಲಿ ಜಗತ್ತಿನಾದ್ಯಂತ ಕರೋನ ಮಹಾಮಾರಿ ತನ್ನ ಅಟ್ಟಹಾಸ ಮೆರೆಯಲು ತಯಾರಾಗಿ ನಿಂತಿತ್ತು. ನಿರಂತರ ಎರಡು ವರ್ಷ ಎಲ್ಲವೂ ಲಾಕ್ ಡೌನ್. ಜೊತೆಗೆ ನನ್ನ ಓದಿನ ಗೀಳು ಅಲ್ಲಿಗೆ ನಿಂತು ಹೋಗಿತ್ತು. ಇತ್ತೀಚೆಗೆ ಅಂದ್ರೆ ೨೦೨೩ ರ ಅಕ್ಟೋಬರ್ ತಿಂಗಳಿನಲ್ಲಿ ಸುಮ್ಮನೆ ಕುಳಿತು ಇಸ್ಟಾಗ್ರಾಮ್ ವೀಕ್ಷಣೆ ಮಾಡುತ್ತಿದ್ದಾಗ ಒಂದು ವಿಡಿಯೋ ತುಣುಕಿನಲ್ಲಿ ಕೇಳಿದ ಒಂದು ಧ್ವನಿ ಇವತ್ತು ನಾನು ಇಷ್ಟು ಹೊತ್ತಿನಲ್ಲಿ ಕುಳಿತು ಈ ಲೇಖನವನ್ನು ಬರೆಯುವಂತೆ ಮಾಡಿದೆ. ಅದುವೇ ಯುವ ಲೇಖಕರು ಹಾಗೂ ಸಾಹಿತಿಗಳು ಆದ ಅನಂತ ಕುಣಿಗಲ್ ಅವರ “ನಮಸ್ಕಾರ ಎಲ್ಲರಿಗೂ, ನೀವು ಪುಸ್ತಕ ಓದುತ್ತೀರ ಹಾಗಾದ್ರೆ ಈ ವೀಡಿಯೋ ಪೂರ್ತಿ ನೋಡಿ. ಒಬ್ಬರೆ ಓದೋಕೆ ಬೇಜಾರ? ನಾಲ್ಕು ಗೋಡೆಗಳ ಮಧ್ಯೆ ಎಷ್ಟು ಅಂತ ಓದ್ತೀರಾ? ಓದದಿದ್ರೆ ನಿದ್ರೆ ಬರಲ್ಲ ಅಲ್ವಾ? ಹಾಗಾದ್ರೆ ಬನ್ನಿ ನಮ್ಮ ಜೊತೆ”. ಈ ರೀತಿಯ ಸಂದೇಶವನ್ನು ಒಳಗೊಂಡಿದ್ದ ‘ದಯವಿಟ್ಟು ಗಮನಿಸಿ’ ಅಥವಾ ‘(ಅ)ಪರಿಚಿತ ಓದುಗರು’ ಎಂಬ ಪೇಜ್ ನಿಂದ ಅಪ್ಲೋಡ್ ಆಗಿದ್ದ ವೀಡಿಯೋ ತುಣುಕು.
ಮೊದಲೇ ಪುಸ್ತಕಗಳ ಓದಿನ ಗೀಳಿದ್ದ ನನಗೆ ಇದೊಂದು ದಿವ್ಯ ವಾಣಿಯಂತೆ ಕಂಡಿತು. ಅಂದೇ (ಅ)ಪರಿಚಿತ ಓದುಗರು ಪೇಜನ್ನು ಫಾಲೋ ಮಾಡಲು ಪ್ರಾರಂಭಿಸಿದೆ. ಒಮ್ಮೆಲೆ ಆ ಪೇಜ್ ನಲ್ಲಿ ಅಪ್ಲೋಡ್ ಆಗಿದ್ದ ಎಲ್ಲಾ ವೀಡಿಯೋ ಹಾಗೂ ಪೋಸ್ಟ್ ಗಳನ್ನು ನೋಡಲು ಪ್ರಾರಂಭಿಸಿದೆ ಅಂದೇ ಅನಿಸಿದ್ದು ಸಾಮಾಜಿಕ ಜಾಲತಾಣಗಳನ್ನು ಇಷ್ಟು ಚೆಂದವಾದ ರೀತಿಯಲ್ಲು ಬಳಸಿಕೊಳ್ಳಬಹುದೆಂದು. ಹೇಗಾದರೂ ಈ ಗುಂಪನ್ನು ಸೇರಲೇಬೇಕೆಂಬ ಮಹದಾಸೆ ಈಡೇರಲು ಹೆಚ್ಚು ಸಮಯ ಬೇಕಾಗಲಿಲ್ಲ. ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವದ ದಿನದಂತೆ ಈ ಅಪರಿಚಿತ ಓದುಗರ ಏಳನೇ ಭೇಟಿಗೆ ಅದಾಗಲೇ ಶುಭಗಳಿಗೆ ಕೂಡಿಬಂದಿತ್ತು. ಆದಿನ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಮುಂಜಾನೆಯೇ ಎದ್ದು ನಾಲ್ಕು ಗಂಟೆಗೆ ಬಸ್ ಹಿಡಿದು ಕೊಡಗಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ೧೦.೩೦ರಷ್ಟಿಗೆ ಕಬ್ಬನ್ ಪಾರ್ಕ್ ಪ್ರವೇಶಿಸಿದೆ. ಬೆಂಗಳೂರು ನನಗೇನು ಹೊಸದಲ್ಲದಿದ್ದರೂ ಅಲ್ಲಿದ್ದವರೆಲ್ಲ ನನಗೆ ಹೊಸಬರೆ. ವೀಡಿಯೋದಲ್ಲಿ ಅನಂತರನ್ನು ಮಾತ್ರ ನೋಡಿದ್ದೆ. ಹೈಕೋರ್ಟ್ ಪಕ್ಕದಲ್ಲಿಯೇ ಪಾರ್ಕಿನೊಳಗಿನ ಒಂದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಅನಂತರನ್ನು ನೋಡಿ ಮನಸ್ಸು ಸ್ವಲ್ಪ ಸಮಾಧಾನಗೊಂಡಿತು.
ಎಷ್ಟೇ ಸ್ನೇಹಿತರ ಜೊತೆ ಸಲುಗೆಯಿಂದ ಇದ್ದವರಾದರೂ ಅಪರಿಚಿತರು ಪರಿಚಿತರಾಗ ಹೊರಟಾಗ ಒಂದು ಅಂಜಿಕೆ ಇದ್ದೇ ಇರುತ್ತೆ ಆ ಸಮಯದಲ್ಲಿ ನನಗೂ ಹಾಗೆಯೇ ಆಯಿತು. ಹೋಗಿ ಮಾತಾಡಿಸಿಯೇ ಬಿಡೋಣ ಎಂದು ಹೋಗಿ ಅನಂತರ ಮುಂದೆ ನಿಂತೆ ನನ್ನ ಹೆಸರು ಸುನಿಲ್ ಇನ್ಸಟಾದಲ್ಲಿ ಭೇಟಿಯ ಬಗ್ಗೆ ತಿಳಿಯಿತು ಕೊಡಗಿನಿಂದ ಬಂದಿದ್ದೀನಿ ಎಂದೆ. ಅವರ ಪ್ರತ್ಯುತ್ತರ ಅಷ್ಟು ದೂರದಿಂದ ಭೇಟಿಗೆ ಅಂತಾನೆ ಬಂದ್ರ ಎಂತೆಂತಹ ಹುಚ್ಚರಿದ್ದಾರಪ್ಪ ಎಂದರು. ಮತ್ತೆ ಮಾತು ಮುಂದುವರೆಸಿ ಸರಿ ಒಂದು ಕಡೆ ಕುಳಿತು ಓದ್ತಾ ಇರಿ ಅಮೇಲೆ ಕರಿತೀವಿ ಎಂದರು. ಇನ್ನೂರಕ್ಕಿಂತ ಹೆಚ್ಚು ಜನ ಆ ಭೇಟಿಯಲ್ಲಿ ಪಾಲ್ಗೊಂಡಿದ್ದರು. ಎಳೆಯ ವಯಸ್ಸಿನವರಿಂದ ಹಿಡಿದು ಅಳ್ಳಾಡುವ ವೃದ್ಧರೂ ಆ ಗುಂಪಿನಲ್ಲಿದ್ದರು. ಯುವ(UVA) ಸಂಸ್ಥೆಯ ಸಹಯೋಗದೊಂದಿಗೆ ಅಂದಿನ ಭೇಟಿ ಅದ್ಭುತವಾಗಿ ನೆರವೇರಿತ್ತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಓದುವ, ಬರೆಯುವ ಮತ್ತು ಮಾತನಾಡುವ ಸ್ಪರ್ಧೆಗಳು ನಡೆದಿದ್ದವು. ನಾಲಿಗೆ ನುಲಿ ಸ್ಪರ್ಧೆಯಲ್ಲಿ ಗೆದ್ದು ಎರಡು ಕನ್ನಡ ಪುಸ್ತಕಗಳನ್ನು ಮೊದಲನೇ ಭೇಟಿಯಲ್ಲಿಯೇ ಪಡೆದುಕೊಂಡೆನೆಂಬ ಹೆಮ್ಮೆಯ ಜೊತೆಗೆ ಗ್ರೂಫ್ ಫೋಟೋ ಕ್ಲಿಕ್ಕಿಸಿಕೊಂಡು ಭಾರವಾದ ಮನಸ್ಸಿನಿಂದ ಊರದಾರಿ ಹಿಡಿದಿದ್ದೆ.
ಆ ಭೇಟಿಯ ನಂತರ ನನ್ನಲ್ಲಿನ ಓದಿನ ಗೀಳು ಮುಂದೆ ಕನ್ನಡ ಸಾರಸ್ವತ ಲೋಕಕ್ಕೆ ನನ್ನಿಂದ ಏನಾದರೂ ಕೊಡುಗೆಯನ್ನು ನೀಡಿಯೇ ತೀರಬೇಕೆಂಬ ಹಠವನ್ನು ಹುಟ್ಟುಹಾಕಿದೆ. ಬೆಂಗಳೂರಿನಲ್ಲಿ ನಂತರದ ಭೇಟಿಗೆ ಹೋಗಲು ಸಾಧ್ಯವಾಗದಿದ್ದರೂ ಅವ್ವ ಪುಸ್ತಕಾಲಯದ ನಾಲ್ಕನೇ ವಾರ್ಷಿಕೋತ್ಸವಕ್ಕೆ ಹೋಗಿದ್ದೆ ಅದೊಂದು ಹಬ್ಬವೇ ಸರಿ. ಅಲ್ಲಿ ಬಂದಿದ್ದ ಪ್ರತಿಯೊಬ್ಬ ಲೇಖಕರ ಬದುಕಿನಲ್ಲು ಈ ಪುಸ್ತಕಗಳು ವಿಭಿನ್ನ ಮತ್ತು ವಿಶೇಷವಾದ ಪಾತ್ರವನ್ನು ವಹಿಸಿದ್ದವು. ಬೆಂಗಳೂರಿನಲ್ಲಿ ಪ್ರಾರಂಭವಾದ ಈ ಓದಿನ ಕ್ರಾಂತಿ ಇಂದು ರಾಜ್ಯದ ೨೦ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕನ್ನಡ ಮನಸ್ಸುಗಳ ಒಂದುಗೂಡಿಸಲು ಸಹಕಾರಿಯಾಗಿದೆ. ಓದುಗರ ಜೊತೆ ಒಂದು ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ. ನಾನು ಬೆಂಗಳೂರಿನ ಅಪರಿಚಿತ ಓದುಗರು ತಂಡಕ್ಕೆ ಮೊದಲು ಸೇರಿಕೊಂಡವನಾದರು ಇಂದು ಆ ತಂಡಕ್ಕೆ ಧನಾತ್ಮಕ ರೀತಿಯಲ್ಲಿ ಪೈಪೋಟಿ ನೀಡುತ್ತಿರುವ ನಮ್ಮ ಮೈಸೂರಿನ ಅಪರಿಚಿತ ಓದುಗರು ತಂಡದಲ್ಲಿ ಸಕ್ರಿಯ ಪಾಲುದಾರನಾಗಿದ್ದೇನೆ. ವಯಸ್ಸಿನಲ್ಲಿ ಚಿಕ್ಕವನಾದರೂ ಪ್ರಬುದ್ಧಮಾನವಾದ ಮನಸ್ಸಿರುವ, ಸಂಘಟನಾ ಸಾಮರ್ಥ್ಯವಿರುವ ಗೆಳೆಯ ಕಿರಣ್ ಪಿ ಕೌಶಿಕ್ ನ ಸಾರಥ್ಯದಲ್ಲಿ ಯಶಸ್ವಿ ೧೧ ಭೇಟಿಗಳನ್ನು ಪೂರೈಸಿದೆ. ವಿಶ್ವಮಾನವ ಕುವೆಂಪು ಅವರ ಕವಿಮನೆ ಮತ್ತು ಕವಿಶೈಲಕ್ಕು ನಮ್ಮ ಮೈಸೂರಿನ ಅಪರಿಚಿತ ಓದುಗರ ತಂಡ ಭೇಟಿಕೊಟ್ಟು ಒಂದು ಅವಿಸ್ಮರಣೀಯ ದಿನವನ್ನು ಕೂಡ ನನ್ನ ಜೀವನಕ್ಕೆ ಕೊಡುಗೆಯಾಗಿ ನೀಡಿದೆ.
ಇತ್ತೀಚೆಗೆ ೨೦೨೪ರ ಜೂನ್ ತಿಂಗಳಲ್ಲಿ ವಿಶ್ವ ಪರಿಸರ ದಿನವನ್ನು ಓದು, ಹಾಡು, ಹರಟೆಯೊಂದಿಗೆ ಸಸ್ಯಗಳನ್ನು ನೆಡುವುದರ ಮೂಲಕ ವಿಶೇಷವಾಗಿ ಆಚರಿಸಿದ್ದೇವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಈ (ಅ)ಪರಿಚಿತ ಓದುಗರು ತಂಡ ಜೀವಮಾನದುದ್ದಕ್ಕೂ ಜೊತೆಗಿರುವಂತಹ ಸಾಕಷ್ಟು ಗೆಳೆಯರನ್ನು ನನಗೆ ತಂದುಕೊಟ್ಟಿದೆ. ಭೇಟಿಯಲ್ಲಿ ಮಾತ್ರವೇ ಮಾತನಾಡುತ್ತಿದ್ದವರು ಇಂದು ದಿನಗಳು (ಅ)ಪರಿಚಿತ ಓದುಗರ ಶುಭೋದಯ ಎಂಬ ಸಂದೇಶಗಳೊಂದಿಗೆ ಪ್ರಾರಂಭವಾಗುವ ಸ್ಥಿತಿಗೆ ತಲುಪಿದ್ದೇವೆ. ಪ್ರತಿದಿನವೂ ಪುಸ್ತಕಗಳೊಂದಿಗಿನ ನನ್ನ ಒಡನಾಟ ತಡೆಯಿಲ್ಲದೆ ನಡೆದಿದೆ. ಅನಂತರ ಕನಸ್ಸಿನ ರೊಟ್ಟಿಯಲ್ಲಿ ನಮಗೂ ಪಾಲು ದೊರೆಯುತ್ತದೆ ಎಂಬ ವಿಶ್ವಾಸ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯದಲ್ಲೆ ಮೈಸೂರಿನ ಅಪರಿಚಿತ ಓದುಗರ ತಂಡದ ಸಾರಥ್ಯವನ್ನು ವಹಿಸುವ ದೊಡ್ಡ ಜವಾಬ್ದಾರಿ ಹೆಗಲ ಮೇಲಿದೆ. ಓದುಗರ ಕ್ರಾಂತಿಯನ್ನು ಮತ್ತಷ್ಟು ಹೆಚ್ಚಿಸುವ ಆಸೆ ಹಾಗೂ ಹಠ ಎರಡೂ ನನ್ನ ಮನದಲ್ಲಿ ಮನೆ ಮಾಡಿವೆ. “ಬಿಟ್ಟನೆಂದರೂ ಬಿಡದೀ ಪುಸ್ತಕದ ಮಾಯೆ” ಎಂಬ ಮಾತು ಅಕ್ಷರಶಃ ನನ್ನ ಬದುಕಲ್ಲಿ ಸತ್ಯವಾಗಿದೆ. ಇಷ್ಟೆಲ್ಲಾ ಬರೆದು ಮುಖ್ಯವಾದ ವಿಷಯ ಹೇಳದಿದ್ದರೆ ಹೇಗೆ? ಮೇಲಿನ ಎಲ್ಲಾ ನೆನಪುಗಳಿಗೆ ಮತ್ತು ವಿಚಾರಗಳಿಗೆ ಕಾರಣವಾದ (ಅ)ಪರಿಚಿತ ಓದುಗರ ತಂಡಕ್ಕೆ ಮೊದಲನೇ ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆ ಎಲ್ಲಾ ಕನ್ನಡ ಮನಸ್ಸುಗಳು ಒಟ್ಟಾಗಿ ಬಂದೇ ಬರ್ತೀರಾ ಅಲ್ವಾ? ಬೆಂಗಳೂರಿನ ವಿಜಯನಗರದ ಚಿದಾನಂದಮೂರ್ತಿ ಸಭಾಂಗಣದಲ್ಲಿ ಇದೇ ಜುಲೈ ಹದಿನಾಲ್ಕನೇ ತಾರೀಖು ಒಂದು ದಿನ ಮುಂಚಿತವಾಗಿಯೇ ಬಂದು ನಾನಂತು ಕಾಯ್ತಾ ಇರ್ತೀನಿ ಆದಷ್ಟು ಬೇಗ ಬಂದು ಬಿಡಿ.
0 ಪ್ರತಿಕ್ರಿಯೆಗಳು