ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ
 ಮಹಾಂತೇಶ ನವಲಕಲ್
ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ ಪ್ರಕಾರಗಳಲ್ಲಿ ತುಂಬಾ ಬೆಳೆದಿದ್ದರೂ ಸಹ ಎಷ್ಟು ಜನರಿಗೆ ಕಥೆಗಳು ತಲುಪಿವೆ? ಎನ್ನುವ ಪ್ರಶ್ನೆ ಬರುತ್ತದೆ. ಕಥಾ ಜಗತ್ತು ಎಲ್ಲರಿಗೂ ತಲುಪಬಹುದಾದ ಯುನಿಕ್ ಮಾದರಿಯಲ್ಲಿ ಬೆಳೆಯಲಿಲ್ಲ ಎಂದು ನನ್ನ ವೈಯಕ್ತಿಕ ಭಾವನೆ. ಇದಕ್ಕೆ ಕಾರಣ ಕಾಲಾನುಕ್ರಮದಲ್ಲಿ ಕಾಣಿಸಿಕೊಂಡ ‘ಇಸಂ’ಗಳ ಸಿದ್ಧಮಾದರಿಗಳು ಮತ್ತು ಹಳೆಯ ಕಥೆಗಳ ದಟ್ಟ ಪ್ರಭಾವಗಳ ನೆರಳಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲವೇನೋ? ನವೋದಯದ ಸರಳ ಮಾದರಿ, ಆಮೇಲೆ ಬಂದ ನವ್ಯದ ಮನೋವಿಶ್ಲೇಷಕ ಶೈಲಿಯ ಕಥಾ ಪ್ರಪಂಚ, ಪ್ರಗತಿಶೀಲದ ಎಡ ಪಂಥೀಯ, ದಲಿತ ಬಂಡಾಯದ ಖಡ್ಗವಾಗುವ ಕಥಾ ಪರಂಪರೆಗಳು ಸುಮಾರು ಅರವತ್ತು ವರ್ಷಗಳ ಕಾಲ ಕನ್ನಡ ಕಥಾ ಜಗತ್ತನ್ನು ಆಳಿದವು. ಇದರಿಂದ ಕಥೆಗಾರ ನೋಡಬಹುದಾದ ಸ್ವಯಂ ಚಕ್ಷುಮುಖೇನ ವೀಕ್ಷಣೆ ಸಾಧ್ಯವಾಗಲಿಲ್ಲವೇನೋ! ಆತನಿಗೆ ಪೂರ್ವಾಗ್ರಹ ಚಷ್ಮಗಳಿಲ್ಲದೆ ನೋಡಬಹುದಾದ ನೇರ ಗ್ರಹಿಕೆಯ ಕಥಾ ಪ್ರಪಂಚ ನಿಲುಕದೆ ಹೋಯಿತೇನೋ!
ಮೇಲಿನ ಮಾದರಿಯ ನನ್ನ ಚಿಂತನೆ ಇನ್ನಷ್ಟು ಸ್ಪಷ್ಟತೆಯನ್ನು ಕೇಳುತ್ತದ್ದರಿಂದ ಅದನ್ನು ಹೇಳುವದು ಒಳ್ಳೆಯದು. ಇಲ್ಲದಿದ್ದರೆ ತಪ್ಪು ಸಂದೇಶ ರವಾನೆಯಾಗುವ ಅಪಾಯವಿದ್ದುದರಿಂದ ನಾನು ಈಗಲೆ ವಿವರಣೆ ಕೊಡುತ್ತೇನೆ. ನಾನು ‘ಇಸಂ’ ಗಳ ಬಗ್ಗೆ ಮಾತಾಡುತ್ತಿಲ್ಲ. ಪ್ರತಿಯೊಂದು ಚಳುವಳಿಯ ಹಿಂದೆ ‘ಇಸಂ’ಗಳು ಕೆಲಸ ಮಾಡಿವೆ. ಜನರ ನೋವಿಗೆ ಮಿಡಿವ ಪ್ರಾಣಮಿತ್ರ ಆಗಿವೆ. ಆದರೆ ‘ಇಸಂ’ಗಳು ಕಥೆಗಳನ್ನು ನೇರವಾಗಿ ಪ್ರವೇಶಿಸಿದ್ದರಿಂದ ಕಥೆಯ ಕುಸುರಿ ಕುಸಿದು ಆಶಯಗಳೆ ಪ್ರಾಬಲ್ಯ ಗಳಿಸಿದವೇನೋ ಎಂದು ನನ್ನ ಭಾವನೆ. ಪ್ರತಿಯೊಂದು ಕಾಲಘಟ್ಟದಲ್ಲಿ ಬಂದ ಈ ಕಥಾ ಮಾರ್ಗಗಳು ನಾವೇ ಸೃಷ್ಟಿಸಿಕೊಂಡ ಸಾಹಿತ್ಯಿಕ ಮಾರ್ಗಗಳಾದರೂ ಅವುಗಳನ್ನು ನಾವು ಅದರ ಮೂಲ ಸ್ವರೂಪದಲ್ಲೆ ಆಹ್ವಾನಿಸಿಕೊಂಡಿದ್ದರಿಂದ ಮತ್ತು ಅದರ ಉತ್ಪಾದನಾ ಅನುಪಾತದಲ್ಲಿ ಮೂಲ ಸ್ವರೂಪದ ಅಂಶಗಳೇ ಬಹುವಾಗಿ ಪ್ರಕಟಗೊಂಡಿದ್ದರಿಂದ ಮೇಲೆ ಹೇಳಿದ್ದು ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬಂದು ಕಥಾ ರಚನೆಯಲ್ಲಿ ತೊಡಕಾಯಿತೇನೋ? ಅಂದರೆ ಮನುಷ್ಯನ ಜ್ಞಾನ ಕ್ರಿಯೆಯಲ್ಲಿ ಆತ ಪಡೆದುಕೊಂಡ ಅನುಭವ ಜೀರ್ಣವಾದರೆ ಮಾತ್ರ ಹೊಸದನ್ನು ಸೃಷ್ಟಿಸಲು ಸಾಧ್ಯ ಎಂಬ ಅರಿವು ನಮಗೆ ಆ ಮಟ್ಟಿಗೆ ದಕ್ಕಲಿಲ್ಲವೇನೋ!
ಈ ಹಿನ್ನೆಲೆಯಲ್ಲಿ ನಮ್ಮ ಹಿಂದಿನ ಕಥಾ ಸಾಹಿತ್ಯ ನಡೆದು ಬಂದ ದಾರಿಯ ಬಗ್ಗೆ ಕೊಂಚ ಗಮನಹರಿಸೋಣ. ನವ್ಯದ ನೆರಳಿನಿಂದಲೇ ಬಂದ ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ ಅಂತಹವರು ಅದರಿಂದ ತಪ್ಪಿಸಿಕೊಂಡು ಸ್ವಯಂ ಅಸ್ಮಿತೆಯ ಹುಡುಕಾಟ ನಡೆಸಿ ಯಶಸ್ವಿಯಾದರು. ಉದಾಹರಣೆಗೆ ಲಂಕೇಶರ ಕತೆಗಳಾದ ‘ಬಸವೇಗೌಡ’, ‘ಕೃತಜ್ಞತೆ’, ‘ಮುಟ್ಟಿಸಿಕೊಂಡವರು’ ಮತ್ತು ತೇಜಸ್ವಿಯವರ ‘ತಬರನ ಕತೆ’, ‘ಅಬಚೂರಿನ ಪೋಸ್ಟಾಫೀಸ್‍’ ನಂತಹ ಕಥೆಗಳು ಮನುಷ್ಯನಾಳದ ನೀಚತನಗಳ ಜೊತೆ ಓದುಗರನ್ನು ತೀವ್ರವಾಗಿ ಮುಖಾ-ಮುಖಿಯಾಗಿಸಿದವು.

ಲಂಕೇಶರ ಬಸವೇಗೌಡ ಕಥೆಯನ್ನು ನಾವು ಇಲ್ಲಿ ಚರ್ಚಿಸಿದರೆ ಒಳ್ಳೆಯದು. ಬಸವೇಗೌಡನ ಮನದಾಳದ ಕ್ರೌರ್ಯ, ಆ ಊರನ್ನೇ ನಲುಗುವಂತೆ ಮಾಡಿದ್ದರೂ ಆತನ ರೋಗ ಮತ್ತು ಸಾವಿನ ಬಗ್ಗೆ ಆತನಿಗಿರುವ ಸ್ವಯಂ ಭಯ ಮತ್ತು ಆಳದಲ್ಲಿ ಅಡಗಿರುವ ಪಾಪಪ್ರಜ್ಞೆಗಳು ಆತನ ಕ್ರೌರ್ಯದ ಜೊತೆ ಘರ್ಷಿಸುತ್ತಲೆ ಹೋಗುತ್ತವೆ. ಒಂದು ಸಲ ದಲಿತರ ಪಾದ ತೊಳೆಯುವ ಬಸವೇಗೌಡ, ಮರುಕ್ಷಣದಲ್ಲೆ ದಲಿತರ ಮೇಲೆ ದೌರ್ಜನ್ಯವೆಸಗುವ ರಾಕ್ಷಸನಾಗುತ್ತಾನೆ. ಮತ್ತೆ ಪಾಪಕೂಪದಲ್ಲಿ ಬಿದ್ದು ಒದ್ದಾಡುವ ಪಾಪದ ಮನುಷ್ಯನಂತೆ ಗೋಚರಿಸುತ್ತಾನೆ. ಈ ಕಥೆಯನ್ನು ಯಾವ ಕಾಲಘಟ್ಟದಲ್ಲಿ ನಿಲ್ಲಿಸಲು ಸಾಧ್ಯ? ಇದು ನವೋದಯ ಮಾದರಿಯ ಸರಳ ನಿರೂಪ ಮಾಡುವ ಕಥೆ. ನವ್ಯ ಕಾಲಘಟ್ಟದ ಮನೋವಿಶ್ಲೇಷಣೆ ಮಾಡುವ ಕಥೆ, ದಲಿತ ಬಂಡಾಯದ ಪ್ರತಿಭಟನೆಯನ್ನು ಹೇಳುವ ಕಥೆ, ಪ್ರಗತಿಶೀಲದ ಸಮಾನತೆಗಾಗಿ ಕಾತರಿಸುವ ಕಥೆ, ಎಲ್ಲಾ ಕಾಲ ಘಟ್ಟವನ್ನು ಸಮಾವಿಷ್ಟ ಮಾಡಿಕೊಂಡ ಕಥೆಯಿದು. ಲಂಕೇಶ್ ಇಲ್ಲಿ ಯಾವುದೆ ಪಾತ್ರಗಳ ಬಗ್ಗೆ ಚೌಕಾಶಿ ಮತ್ತು ಪಕ್ಷಪಾತ ಮಾಡುವದಿಲ್ಲ, ಪಾತ್ರಗಳ ಪರವಾಗಿ ನಿಲ್ಲುವದಿಲ್ಲ ಅಥವಾ ಕೆಟ್ಟದಾಗಿ ಹೇಳುವದಿಲ್ಲ. ಕಥೆ ಹಾಲಿನಿಂದ ಮೊಸರಾದಂತೆ, ಮಕರಂದವು ಜೇನಾದಂತೆ ಸಮಗ್ರವಾಗಿ ನಮ್ಮ ಮುಂದೆ ನಿಲ್ಲುತ್ತದೆ.
ಅವರ ಇನ್ನೊಂದು ಕಥೆ ‘ಮುಟ್ಟಿಸಿಕೊಂಡವರು’ ಕಥೆಯೂ ಸಹ ಇದನ್ನೇ ಹೇಳುತ್ತದೆ. ವ್ಯವಸ್ಥೆ ಸೃಷ್ಟಿಸಿದ ಜಾತಿ ಬೇರುಗಳು ಬಡತನಕ್ಕಿಂತಲೂ ಪ್ರಭಲ ಮತ್ತು ಆಳದಲ್ಲಿವೆ ಎಂಬುದನ್ನು ಸೂಕ್ಷ್ಮವಾಗಿ ಹೇಳುತ್ತವೆ. ಹೈದ್ರಾಬಾದ ಕರ್ನಾಟಕ ಪ್ರದೇಶ ಸಾಂಸ್ಕೃತಿಕವಾಗಿ ಕಡೆಗಣೆಯಾದಂತೆ, ಹೈದ್ರಾಬಾದ ಕರ್ನಾಟಕದ ಕಥೆಗಾರರು ಕಡೆಗಣಿಸಲ್ಪಟ್ಟರೇನೋ? ಶಾಂತರಸರ ಕಥೆಗಳು ಸಹ ಇದೆ ಹಾದಿಯಲ್ಲಿ ನಡೆದಂತಹ ಕಥೆಗಳು. ಹೈದ್ರಾಬಾದ ಕರ್ನಾಟಕದ ಕಥೆಗಳು ನಿಜವಾಗಿಯೂ ಆರಂಭವಾಗಿದ್ದು ಶಾಂತರಸರಿಂದ. ಶಾಂತರಸರು ಕಥೆಗಳನ್ನು ಬರೆದರು ಕಟ್ಟಿದರು ಅನ್ನುವದಕ್ಕಿಂತ ಕಲ್ಪನೆಗಳಿಗೆ ಕಾವು ಕೊಟ್ಟು ಕಥೆಗಳನ್ನಾಗಿ ಮಾಡಿದರು. ಅವರ ‘ಮಲ್ಕಮ್ಮ’, ‘ಬಡೆಸಾಬು ಪುರಾಣ’, ‘ಗುರುಪಾದ ನೀಲಗಂಗಾ ಒಂದು ಆಣೆ’ಯಂತಹ ಕಥೆಗಳು ದೀರ್ಘವಾಗಿ ಕಾಡುತ್ತವೆ. ಭಾಷೆಯ ಗಿಲೀಟು ಬಿಟ್ಟು ಸರಳವಾಗಿ ಸುಲಿದ ಬಾಳೆ ಹಣ್ಣಿನಂತೆ ಅರಳುವ ಕಥೆಗಳನ್ನು ಬ್ಲ್ಯಾಕ್ ಅಂಡ್ ವೈಟ್ ಅಪಾಯದಿಂದ ಶಾಂತರಸರು ತಪ್ಪಿಸಿದರು. ನೀಲಗಂಗಾ ಗುರುಪಾದ ಒಂದು ಆಣೆ ಕತೆಯಲ್ಲಿ ಗುರುಪಾದನ ಹಸಿವು-ಬಡತನವನ್ನು ನೀಲಗಂಗಾಳ ನಿರ್ಮಲ ಪ್ರೀತಿ ಹಂಗಿಸಿದಂತೆ ಕಾಣುವದು ಕೂಡ ಒಂದು ಕಾವ್ಯದಂತೆ ಕಾಡುತ್ತದೆ.
ಅನಂತಮೂರ್ತಿಯವರ ‘ಸೂರ್ಯನ ಕುದುರೆ’, ‘ಕ್ಲಿಪ್ ಜಾಯಿಂಟ್’ನಂತಹ ಕಥೆಗಳು ನಮ್ಮನ್ನು ಮತ್ತದೆ ವಿಭ್ರಮದ ಲೋಕಕ್ಕೆ ಕರೆದೊಯ್ಯುತ್ತವೆ. ಇದನ್ನು ಯಾಕೆ ಹೇಳಿದೆನೆಂದರೆ ಪ್ರಸ್ತುತ ಘಳಿಗೆಯಲ್ಲಿ ನಮ್ಮ ಓರಿಗೆಯ ಜಗತ್ತು ಜ್ಞಾನ ಅಥವಾ ಅನುಭವಗಳನ್ನು ಹೆಕ್ಕುವದು, ಪೂರ್ವಕಾಲದಲ್ಲಿ ನಿರ್ಮಾಣವಾದ ಕಥಾ ಪರಂಪರೆಯಿಂದಲೇ ಎನ್ನಬಹುದು. ಅಂದರೆ ನಿರಂತರ ಅನ್ವೇಷಣೆಗೆ ತೆರೆದುಕೊಳ್ಳದ ನಮ್ಮ ಮನಸ್ಸುಗಳನ್ನು ನಾವು ಪ್ರಜ್ಞಾಪೂರ್ವಕವಾಗಿ ಮುಚ್ಚಿಕೊಂಡಿದ್ದೇವೆ. ಅದಕ್ಕೆ ಜ್ಞಾನದ ಮಾದರಿಯಲ್ಲೆ ನಾವು ನಿಂತುಕೊಂಡು ಕಥೆಗಳನ್ನು ಹಳೆಯ ದ್ರಾಕ್ಷಾರಸವನ್ನು ಹೊಸ ಸೀಸೆಯಲ್ಲಿ ತುಂಬುತ್ತೇವೆ ಎನ್ನುವದು ಸಮಂಜಸವೇನೋ!
ಕನ್ನಡ ಕಥಾ ಪರಂಪರೆಯಲ್ಲಿ ಇಬ್ಬರನ್ನು ನೆನೆದು ಮುಂದೆ ಹೋಗೋಣ ಒಂದು ಧುಮ್ಮಿಕ್ಕುವ ಜಲಪಾತ, ಇನ್ನೊಂದು ಶಾಂತ ನದಿ. ಈ ಇಬ್ಬರು ಕನ್ನಡದ ಕಥಾ ಸಾಗರದ ಹರವನ್ನು ಅಸಂಪ್ರದಾಯಕ ಪ್ರದೇಶಕ್ಕೆ ವರ್ಗಾಯಿಸಿದವರು. ಇಬ್ಬರೂ ಲಂಕೇಶರ ನಿಕಟವರ್ತಿಗಳಾಗಿದ್ದವರು. ಅವರು ಮೊಗಳ್ಳಿ ಗಣೇಶ್ ಹಾಗು ದೇವನೂರ್. ಮೊಗಳ್ಳಿ ಅವರು ನಾನು ಲಂಕೇಶ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾನು ಎಂದು ಹೇಳಿದ ನೆನಪು. ಹಾಗೇಯೆ ದೇವನೂರು ಸಹ ಲಂಕೇಶ್, ತೇಜಸ್ವಿ, ಅನಂತ ಮೂರ್ತಿಯವರು ಬ್ರಹ್ಮ-ವಿಷ್ಣು-ಮಹೇಶ್ವರಂತೆ ಎಂಬ ಅವರ ಹೇಳಿಕೆ ದಾಖಲಾದ ನೆನಪು.

ದೇವನೂರ ಮಹಾದೇವರವರು ಕನ್ನಡ ಕಥಾ ಪರಂಪರೆಗೆ ಒಂದು ಹೊಸ ಭಾಷೆ ಒದಗಿಸಿದವರು. ದೇವನೂರವರ ಕಥೆಗಳು ಕನ್ನಡಕ್ಕೆ ಘನತೆಯ ಕಸುವನ್ನು ತಂದು ಕೊಟ್ಟವು. ಕಥೆ ಹೇಳುವ ಭಾಷೆ ಮತ್ತು ಪಾತ್ರಗಳ ಸಂವಹನ ಭಾಷೆಗಳು ಅಪ್ಪಟ ನಂಜನಗೂಡಿನ ಗ್ರಾಮ್ಯ ಜನ್ಯವಾದುದ್ದರಿಂದ ದೇವನೂರರು ಎಲ್ಲಾ ಕಾಲ ಘಟ್ಟದಲ್ಲಿ ನಮಗೆ ಪ್ರಸ್ತುತರಾಗುತ್ತಾರೆ. ದೇವನೂರವರ ಸಮಕಾಲಿನ ಸಂದರ್ಭದಲ್ಲಿ ಬಂದ ಚೆನ್ನಣ್ಣ ವಾಲೀಕಾರರ ‘ಬೆಳ್ಯ’ ಕಥಾ ಸಂಕಲನ ಹೀಗೆಯೇ ಗ್ರಾಮ ಬದುಕಿನ ಮಾತುಗಳನ್ನು ಕಥೆಯ ಭಾಷೆ ಪಾತ್ರಗಳ ಭಾಷೆಯಾಗಿ ಆಯ್ದುಕೊಂಡಿದ್ದರೂ. ಕಥೆಗೆ ಬೇಕಾಗಬಹುದಾದ ಬಂಧ-ಓಘ ವಾಲಿಕಾರರಲ್ಲಿ ಕಾಣಲಿಲ್ಲವೇನೋ? ಗಾಂಧಿ ಅಂಬೇಡ್ಕರರ ವಿಚಾರಗಳನ್ನು ಮೇಳೈಸಿಕೊಂಡು ಬರೆದ ದೇವನೂರು, ‘ಗಾಂಧಿಯ ತತ್ವಗಳು ಈ ದೇಶವನ್ನು ರಕ್ಷಿಸಬಲ್ಲವು, ಅಂಬೇಡ್ಕರ್ ತತ್ವಗಳು ಈ ದೇಶದ ಬಡವರ ಹಸಿವನ್ನು ಹಿಂಗಿಸಬಲ್ಲವು’ ಎಂದು ನಂಬಿದವರು. ದೇವನೂರು ‘ಮೆಟ್ಟು, ಬೂಟು ಸೇಡಿನ ಪ್ರತಿಕಾರಕ್ಕಿಂತ ಶಾಂತಿ ರಸದ ಅಸ್ತ್ರ ದೊಡ್ಡದೆಂದು ನಂಬಿದವರು. ಅವರ ‘ಮಾರಿಕೊಂಡವರು’, ‘ಅಮಾಸ’, ‘ಒಡಲಾಳ’ದಂತಹ ಕಥೆಗಳು ಸಹ ಅದನ್ನೇ ಹೇಳುತ್ತವೆ. ತಣ್ಣಗೆ ಓದುಗನ ಮನದಲ್ಲಿ ರೊಚ್ಚನ್ನು ಬಿತ್ತುವ ದೇವನೂರು ತಾವೇ ಯಾವುದೇ ತೀರ್ಮಾನಕ್ಕೆ ಕೈಹಾಕುವದಿಲ್ಲ. ದಲಿತರಿಗೆ ಪರಮ ಶತ್ರುವಾಗಿರುವ ಸಮಕಾಲಿನ ‘ಫ್ಯೂಡಲ್’ ಜಗತ್ತಿನ ಬೆಂಕಿ ನೀರಿನಾಳದ ಬೆಂಕಿಯಂತೆ ಚಿತ್ರಿಸಿದವರು. ಮೊಗಳ್ಳ್ಳಿಯವರು ಸಹ ತಮ್ಮ ಲೇಖನ ಮತ್ತು ಕಥೆಗಳಲ್ಲಿ ನಿರಂತರ ತಕರಾರನ್ನು ಎತ್ತುವ ಮೂಲಕ ಕನ್ನಡ ಕಥಾ ಲೋಕವನ್ನು ಕಾಯ್ದವರು. ನೇರ ನಿಷ್ಠುರತೆಯಿಂದ ಇದ್ದ ಹಾಗೆ ಹೇಳುವ ಮೊಗಳ್ಳಿಯವರಂತೆಯೇ ಅವರ ಕಥೆಗಳಿವೆ.
ಪ್ರಸ್ತುತ ಕಾಲವನ್ನು ನಿಜವಾಗಿಯೂ ಕಥಾ ಪರಂಪರೆಯ ಸುರ್ವಣಯುಗ ಎನ್ನಬಹುದು. ಕುಂ.ವೀರಭದ್ರಪ್ಪನಂತಹ ಬರಹಗಾರರು ಸಂಪೂರ್ಣವಾಗಿ ಹಳ್ಳಿಯ ಜ್ಞಾನವನ್ನು ಮತ್ತು ಪಟ್ಟಣದ ಅನುಭವವನ್ನು ಬಳಸಿಕೊಂಡು ಕಥಾ ಜಗತ್ತನ್ನು ಕಟ್ಟಿದರು. ಕುಂ.ವೀ. ಕಥೆಗಳನ್ನು ಓದಿ ವಿಮರ್ಶಕ ಲೋಕ ಓದುಗ ಜಗತ್ತು ನಿಬ್ಬೆರಗಾಗಿತ್ತು. ಯಾರು ಕೇಳಲರಿಯದ, ಯಾರು ನೋಡಲರಿಯದ ಒಂದು ವಿಚಿತ್ರವಾದ ಖಂಡಾಲದಂತಹ ಜಗತ್ತಿನ ಪಾತ್ರಗಳನ್ನು ಕಥೆಗಳಿಗೆ ತಂದ ಕೀರ್ತಿ ಕುಂವೀಗೆ ಸಲ್ಲುತ್ತದೆ. ಕಾಲಾನುಕ್ರಮದಲ್ಲಿ ಕತೆಗಳಿಗೆ ನಿರಂತರ ಮರು ವಿನ್ಯಾಸ ಕೊಟ್ಟ ಕುಂ.ವೀ ಮುಂದಿನ ದಿನಮಾನಗಳಲ್ಲಿ ಕಥೆಗಳು ರೋತೆದನಿ ತಾಳದಂತೆ ಅದಕ್ಕೆ ಹಾಸ್ಯ ಲವಲವಿಕೆಯ ಸ್ಪರ್ಶ ಕೊಟ್ಟರು. ಇದರಿಂದ ಕಥೆಗಳು ಜನ ಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾಯಿತು. ನೆಲದೊಡಲಿನ ಕಥೆಗಳಾಗಿದ್ದರಿಂದ ಎಲ್ಲ ಓದುಗರನ್ನು ಆಕರ್ಷಿಸುವಲ್ಲಿ ಸಾಫಲ್ಯ ಹೊಂದಿದವು.
ನಟರಾಜ ಹುಳಿಯಾರ ಅವರ ಕಥೆಗಳು ಕನ್ನಡ ಕಥಾ ಪರಂಪರೆಯಲ್ಲಿ ಬಹು ಮುಖ್ಯವಾದವುಗಳು. ಹುಳಿಯಾರ್‍ರು ಲಂಕೇಶ್ ಕಥಾ ಪರಂಪರೆಯ ಮುಂದಿನ ಭಾಗದಂತೆ ತೋರಿದರೂ ಸಂಶಯಿಸುವಿಕೆ, ಪ್ರಶ್ನಿಸುವಿಕೆ, ಪಾತ್ರಗಳನ್ನು ಸಿಂಥೆಸಿಸ್‍ಗೆ ಒಳಪಡಿಸುವಲ್ಲಿ ಇವರು ಬಳಸುವ ಪರಿಕರಗಳು ಅವರಿಗಿಂತ ಭಿನ್ನ ಮಾದರಿಯಲ್ಲಿವೆ ಎನ್ನಬಹುದು. ಅವರ ಸ್ವಯಂ ಅಸ್ಮಿತೆಯ ಛಾಪು ಎಲ್ಲ ಕಥೆಗಳಲ್ಲಿ ಅಚ್ಚೊತ್ತಿವೆ. ಅವರ ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’, ‘ಮಾಯಾಕಿನ್ನರಿ’, ‘ಕೋಟೆ ಮನೆಯ ಪಾಠಗಳು’ ಕಥೆಗಳನ್ನು ಉದಾಹರಿಸಬಹುದು ಲಂಕೇಶರ ಮೂಲ ಗ್ರಹಿಕೆಯಾದ ಎಲ್ಲ ಮನುಷ್ಯರ ಆಳದಲ್ಲಿ ಇರಬಹುದಾದ ಕ್ರೌರ್ಯ, ಸಣ್ಣತನ, ಮಾನವೀಯತೆ ಹುಳಿಯಾರರ ಕತೆಗಳಲ್ಲಿ ಕಾಣಿಸುತ್ತವೆ. ಹುಳಿಯಾರರು ತಮ್ಮ ಬಹು ಮುಖ್ಯವಾದ ಸಮಯವನ್ನು ಲಂಕೇಶ್ ಪತ್ರಿಕೆಯೊಂದಿಗೆ ಕಳೆದಿದ್ದಕ್ಕಾಗಿ ಬದುಕು-ಬರಹದ ಅಂತರದ ಹಂಗು ಹರಿದು ಒಂದು ಮಾಡಿದವರು. ಅದಕ್ಕಾಗಿ ಅತಿಯಾದ ನಾಟಕೀಯತೆ, ಭಾಷೆಯ ಗಿಲೀಟು ಮತ್ತು ವಿಜೃಂಭಣೆಗಳಿಂದ ದೂರ ಉಳಿದ ಅವರ ಕಥಾ ಜಗತ್ತು ಸರಳ ಸುಂದರ ಮಾರ್ಗದಲ್ಲಿ ನಮ್ಮನ್ನು ಮುನ್ನೆಡೆಸುತ್ತದೆ . ಹುಳಿಯಾರರ ಮೊದಲ ಕತೆ ‘ನೆತ್ತರು ಗುಲಾಬಿ’ ಪ್ರಗತಿಶೀಲ ಮಾರ್ಗದಿಂದ ಬಿಡಿಸಿಕೊಳ್ಳಲು ಹಪಾಹಪಿಸುವ ಕಥೆಯಂತಿದೆ. ಅವರು ಮುಂದೆ ತುಳಿಯಬಹುದಾದ ಭಿನ್ನ ದಾರಿಯ ಬಗ್ಗೆ ಮುನ್ಸೂಚನೆಯನ್ನು ಕೊಡುತ್ತದೆ.
ಕೇಶವ ಮಳಗಿಯಂಥಹ ಕಥೆಗಾರರು ಕನ್ನಡ ಕಥಾ ಜಗತ್ತಿಗೆ ಕಾವ್ಯಾತ್ಮಕ ಸುಂದರ ಭಾಷೆ ಪರಿಚಯಿಸುವಲ್ಲಿ ಯಶಸ್ವಿಯಾದರು. ಪ್ರಗತಿಶೀಲ ಪರಂಪರೆ ಮತ್ತು ದಲಿತ ಬಂಡಾಯ ಕಾಲಘಟ್ಟದಲಿ ಕ್ಷೀಣವಾಗಿದ್ದ ಭಾಷಾ ಸೊಗಡು, ಮತ್ತೆ ಕೇಶವ ಮಳಗಿಯವರ ‘ಧಾರಣಿಯ ಜೊತೆ ನನ್ನದೊಂದು ಕಥೆ’, ‘ವೆನ್ನಲ ದೊರೆಸಾನಿ’, ‘ಅಂಗದ ಧರೆ’, ‘ಕುಂಕುಮ ಭೂಮಿ’ ಮತ್ತು ಅವರ ಅನುವಾದ ಕಥೆಗಳಲ್ಲಿ ಚಾಲ್ತಿಗೆ ಬಂದು ಮುಂದುವರಿದಿದೆ. ಕೇಶವ ಮಳಗಿ ಕಥೆಗಳಲ್ಲಿ ಭಾವಗಳು ಚಂದದಿಂದ ಸ್ವಚ್ಛಂದವಾಗುತ್ತವೆ, ಓದುಗರನ್ನು ಬಹು ದಿನದವರೆಗೆ ಕಾಡುತ್ತವೆ. ಪಾಶ್ಚಾತ್ಯ ಕಥಾ ಜಗತ್ತಿಗೆ ಮಳಗಿ ಕತೆಗಳು ಮುಖಾಮುಖಿಯಾಗುವಂತಿವೆ.
ಜಯಂತ್ ಕಾಯ್ಕಿಣಿ ‘ದಗಡೂ ಪರಬನ ಅಶ್ವಮೇಧ’, ‘ತೆರೆದಷ್ಟೆ ಬಾಗಿಲು’ದಂತಹ ಶ್ರೇಷ್ಟ ಕಥೆಗಳನ್ನು ಕೊಟ್ಟವರು. ಕಾಯ್ಕಿಣಿಯವರ ಕಥಾ ಜಗತ್ತಿನ ಗ್ರಹಿಕೆಯಲ್ಲಿದ್ದ ಕಥೆಯೆಂದರೆ ಹೀಗೆ ಎಂಬ ಸಿದ್ಧ ಮಾದರಿಯ ಜೇನುಗೂಡಿಗೆ ಕಲ್ಲು ಎಸೆದ ಕಥೆಗಾರರು. ಕಾಯ್ಕಿಣಿಯವರ ಕಥೆಗಳಿಗೆ ಆದಿ-ಅಂತ್ಯಗಳಿಲ್ಲ. ಅವು ನಿರಂತರತೆಯನ್ನು ಮೈವೆತ್ತಂತೆ ಸಾಗುತ್ತವೆ. ಅನೂಹ್ಯ ಕಲ್ಪನೆಗಳನ್ನು ಘಟನೆಗಳನ್ನು ಕಥೆ ಮಾಡುವ ಕಾಯ್ಕಿಣಿ, ಕಥೆಯೆಂದರೆ ಹೀಗೆ ಎಂದು ಸಾರುವುದಿಲ್ಲ. ಪ್ರತಿ ಘಟನೆಗಳು ಕಥೆಗಳಾಗುತ್ತವೆ. ಓದುಗನನ್ನು ಮುಂದೆ ಕೂಡಿಸಿಕೊಂಡು ಮಾತನಾಡುತ್ತವೆ. ಪಕ್ಕದ ಮನೆಯವರ ಕತೆಗಳಂತೆ ಹೇಳಲು ಆರಂಭಿಸುತ್ತವೆ. ಕಥೆಗಳನ್ನು ಸೀಳಿ ನೋಡುವ ಒಬ್ಬ ಚಿಕಿತ್ಸಕ ಕಾಯ್ಕಿಣಿ ಎಂದರೆ ತಪ್ಪಾಗಲಾರದು.
ಅಮರೇಶ ನುಗಡೋಣಿ ಹೈದ್ರಾಬಾದ ಕರ್ನಾಟಕದ ವಿಶಿಷ್ಟ ಪ್ರತಿಭೆ. ಅವರ ಸವಾರಿ, ತಮಂಧದ ಕೇಡು ಕಥೆಗಳು ನನಗೆ ಇಷ್ಟದ ಕಥೆಗಳು. ಗ್ರಾಮ ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ತಣ್ಣಗೆ ಕಟ್ಟಿಕೊಡುವ ನುಗಡೋಣಿ, ಈಗಲೂ ಹಳ್ಳಿಯಿಂದ ಬಂದ ಮುಗ್ಧನಂತಿರುವ ಕಥೆಗಾರರು. ಅವರ ಮಾತಿನಲ್ಲಿ ಇಣುಕುವ ಪುಗ್ಗಿ, ಗುಡಗಿ, ಚಿತಪತ್ಲಣ್ಣು (ಸೀತಾಫಲ) ಎನ್ನುವ ನಮ್ಮ ಹೈದ್ರಾಬಾದ ಕರ್ನಾಟಕದಲ್ಲಿನ ಅದರಲ್ಲೂ ರಾಯಚೂರು ಸೀಮೆಯ ಭಾಷಾ ಕವಚವನ್ನು ಅವರು ಇನ್ನು ತ್ಯಜಿಸಿಲ್ಲ. ಅಂತೆಯೇ ಅವರ ಕಥೆಯಲ್ಲಿ ಯಾವಾಗಲಾದರು ಇಣಕುವ ಸೋ-ವಾಟ್ ಎನ್ನುವ ಇಂಗ್ಲಿಷ ಶಬ್ಧ ಓದುವವನಿಗೆ ಮುಜುಗುರ ತರುತ್ತವೆ. ಏಕೆಂದರೆ ಗ್ರಾಮದ ಘಟನೆಗಳೆ ಅವರ ಕಥೆಗಳ ಜೀವಾಳ. ಅದಕ್ಕಾಗಿ ಆಧುನಿಕ ನಗರ ಜಗತ್ತು ಅವರ ಗ್ರಹಿಕೆಗೆ ಪೂರ್ಣವಾಗಿ ಸಿಗುವದಿಲ್ಲ. ಕಥೆ ಕಟ್ಟುವ ಪರಿಯ ಬಗ್ಗೆ ಸ್ಪಷ್ಟತೆ ಹೊಂದಿರುವ ನುಗಡೋಣಿಯವರ ಕಥೆಗಳು ಪ್ರತಿಕ್ರಿಯಾತ್ಮಕವಾಗಿ ಇರಬೇಕೋ? ಪರ್ಯಾಯವಾದ ಜಗತ್ತು ಕಟ್ಟಿಕೊಡಬೇಕೋ? ಕಥೆಯ ನುಡಿಗಟ್ಟು ಜ್ಞಾನದ ನುಡಿಗಟ್ಟು ಒಂದೇ ಆಗಲು ಸಾಧ್ಯವೇ? ಎನ್ನುವ ಪ್ರಶ್ನೆ ಎತ್ತುತ್ತವೆ. ನುಗಡೋಣಿಯವರ ‘ತಮಂಧದ ಕೇಡು’ ಮತ್ತು ‘ಉತ್ಕ್ರಮಣ’ದ ಬಗ್ಗೆ ಮಾತನಾಡಲೇಬೇಕು. ಹಳ್ಳಿಯ ಫ್ಯೂಡಲ್ ಜಗತ್ತಿನ  ಕ್ರೌರ್ಯ ಮತ್ತು ನವ ಆಧುನಿಕ ಜಗತ್ತಿನ ಮುಖಾಮುಖಿಗಳ ಬಗ್ಗೆ ‘ತಮಂಧದ ಕೇಡು’ ಕಥೆ ಮಾತನಾಡಿದರೆ, ‘ಉತ್ಕ್ರಮಣ’ ಶರಣರ ತತ್ವಗಳನ್ನು ಅವರು ಅನುಷ್ಠಾನ ಮಾಡಲು ಬಸಿದ ಪರಿಕರ ಮಾದರಿಗಳಿಂದಲೇ ನಾಶ ಮಾಡುವುದನ್ನು ಹೇಳುತ್ತವೆ.
ಜ್ಞಾನ ಅಥವಾ ಅನುಭವ, ವಿಶ್ಲೇಷಣೆ, ಸಂಶ್ಲೇಷಣೆ ಮತ್ತು ಮೌಲ್ಯಮಾಪನ. ಈ ನಾಲ್ಕು ಘಟ್ಟಗಳಲ್ಲಿ ಕಥೆ ಅರಳುತ್ತದೆ. ಮೇಲಿನ ಮಾದರಿಗಳನ್ನು ನಾನು ಯಾಕೆ ಚರ್ಚಿಸಿದೆನೆಂದರೆ, ಕಥಾ ಪರಂಪರೆಯಲ್ಲಿ ಕಥೆಗಳನ್ನು ಕಟ್ಟಲು ಬಳಸುವ ನಾಲ್ಕು ಪರಿಕರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸುತ್ತೇನೆ. ಜ್ಞಾನವೊಂದೆ ಇಲ್ಲಿ ಬರೀ ಕತೆಯಾಗುವದಿಲ್ಲ ಜ್ಞಾನ ಅದು ವರದಿ ಆಗಬಹುದು, ಜ್ಞಾನ ಒಂದು ಪ್ರಬಂಧ, ಭಾಷಣ, ಚಿಂತನೆ ಆಗಬಹುದು. ಜ್ಞಾನ ಅಥವಾ ಅನುಭವ, ವಿಶ್ಲೇಷಣೆ, ಸಂಶ್ಲೇಷಣೆ ಮತ್ತು ಮೌಲ್ಯಮಾಪನ. ಈ ನಾಲ್ಕು ಘಟ್ಟಗಳಲ್ಲಿ ಕಥೆ ಅರಳುತ್ತದೆ. ಪ್ರತಿಯೊಂದು ಘಟ್ಟದಲ್ಲಿಯೂ ಕೂಡಾ ಮಾಪನವನ್ನು ಮಾಡುವದರಿಂದ ಕಥೆಯ ಅಂತಃಸತ್ವ ತಂತ್ರ ಗಟ್ಟಿಯಾಗುತ್ತದೆ ಎಂದು ನನ್ನ ಅಭಿಪ್ರಾಯ. ನನ್ನ ಹಿರಿಯರೊಬ್ಬರು ಇದರ ಬಗ್ಗೆ ವ್ಯಾಖ್ಯಾನಿಸಿದರು. ಲೈಂಗಿಕತೆಗೆ ಕಾಮಶಾಸ್ತ್ರ ಓದಬೇಕಿಲ್ಲ. ಕಥೆಯೆಂಬುವುದು ತನ್ನಷ್ಟಕ್ಕೆ ತಾನು ಅರಳುವ ಹೂವು. ಅದಕ್ಕೆ ಹೀಗೇಯೇ ಎಂದು ನಿರ್ಬಂಧ ವಿಧಿಸುವದು ತರವಲ್ಲ ಎಂದರು. ಎಚ್.ಎಸ್. ರಾಘವೇಂದ್ರರಾಯರು, ಮಹಾಂತೇಶ ಹೇಳಿದಕ್ಕೆ ನನ್ನ ಸಹಮತವಿದೆ ಎಂದು ಹೇಳಿ, ಇದರ ಬಗ್ಗೆ ದೀರ್ಘವಾದ ಚರ್ಚೆ ನಡೆದರೆ ಒಳ್ಳೆಯದು ಎಂದರು.
ಮೇಲೆ ಹೇಳಿದ ನಾಲ್ಕು ಅಂಶಗಳು ನನ್ನದಲ್ಲ ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಮತ್ತು ಪಠನಾಕ್ರಮ ರಚನೆಯಲ್ಲಿ ಈ ಮಾದರಿಯನ್ನು ಯಥೇಚ್ಛವಾಗಿ ಬಳಸಿದರು. ಇದಕ್ಕೆ ‘ಬ್ಲೂಮ್ಸ ವರ್ಗಿಕರಣ ಶಾಸ್ತ್ರ’ವೆನ್ನುತಾರೆ. ‘ಬ್ಲೂಮ್ಸ್’ ಪ್ರತಿಯೊಂದು ಕೆಲಸ ಸುಂದರವಾಗಿ ನಡೆಯಲು ಒಂದು ಸೂತ್ರವನ್ನು ಹೇಳುತ್ತಾನೆ.. ಅದಕ್ಕಿಂತ ಮುಂಚಿತವಾಗಿ, ಒಂದು ಜ್ಞಾನವನ್ನು ನಿನಗೆ ಬೇಕಾದ ಮಾಧ್ಯಮಕ್ಕೆ ಹೇಗೆ ಒಗ್ಗಿಸಿಕೊಳ್ಳಬಹುದು ಎಂದು ಹೇಳುತ್ತಾನೆ. ಅಂದರೆ ಒಂದು ಜ್ಞಾನದ ಯಥಾವತ್ತನ್ನು ಬೇರೆ ಬೇರೆ ಮಾಧ್ಯಮದಲ್ಲಿ ಹಾಗೆ ಬಳಸಲು ಸಾಧ್ಯವಿಲ್ಲ. ಆದ್ದರಿಂದ ಒಂದು ಜ್ಞಾನ, ವಿಶ್ಲೇಷಣಾ ಹಂತ ತಲುಪುತ್ತದೆ, ನಂತರ ಸಂಶ್ಲೇಷಣೆ ಆಮೇಲೆ ಮೌಲ್ಯಮಾಪನ ಹಂತಕ್ಕೆ ಬರುತ್ತದೆ.  ಪ್ರತಿ ಹಂತದಲ್ಲೂ ಮೌಲ್ಯಮಾಪನ ಒಳಗೊಳ್ಳುವ ಕ್ರಿಯೆ ನಡೆಯುತ್ತದೆ. ಇತಿಹಾಸ ಮತ್ತು ಪುರಾಣಗಳಲ್ಲಿ ಅಂತರ್ಗತವಾಗಿರುವ ಅನೇಕ ಕತೆಗಳನ್ನು ನಿಮ್ಮ ಜೊತೆ ಚರ್ಚಿಸುತ್ತೇನೆ. ಕಲ್ಯಾಣದ ಕೊನೆಯ ಇತಿಹಾಸವನ್ನು ಕಥನವನ್ನು ಸಾರುವ ವಚನವೊಂದು ನನಗೆ ಹಗಲು ರಾತ್ರಿಯನ್ನದೆ ಬೆಂಬಿಡದೆ ಕಾಡುತ್ತದೆ. ಅದನ್ನು ಬರೆದವರು ಹಾಲು ಮತ ಜಾತಿಗೆ ಸೇರಿದ ದನ ಕಾಯುವ ರಾಮಣ್ಣ. ಈ ವಚನ ಕಲ್ಯಾಣದ ಅಂತಿಮ ಕಾಲದ ಚರಿತ್ರೆಯನ್ನು ಸಾರುತ್ತದೆ. ಅದಕ್ಕೆ ಪುರಾವೆಯನ್ನು ಒದಗಿಸುವ ಮಹತ್ವದ ವಚನವಾಗುತ್ತದೆ.
“ಅಣ್ಣ ಕಲ್ಲಿಗೆ, ಅಕ್ಕ, ಪ್ರಭು ಕದಳಿಗೆ,
ಚನ್ನಬಸವಣ್ಣ, ನಾಗಮ್ಮ ಉಳವಿಗೆ
ಮಿಕ್ಕ ಶರಣರು ತಮ್ಮ ತಮ್ಮ ಚಿತ್ತಕ್ಕೆ
ನಾನು ಗೋಪೇಶ್ವರ ಲಿಂಗದಲ್ಲಿ ಅಡಗಿದೆನು.”
ಎನ್ನುವ ಈ ವಚನ ಇತಹಾಸ ಹೇಳುವ ಕತೆಯಾಗುತ್ತದೆ. ಒಬ್ಬ ನಿರಕ್ಷರಿ ವಚನಕಾರ ಇಡೀ ಕೊನೆಯ ಕಲ್ಯಾಣದ ಸಂದರ್ಭವನ್ನು ನಾಲ್ಕು ಸಾಲಿನಲ್ಲಿ ಹೇಳಿದ ಕಥೆಯಂತಿರುವ ಈ ವಚನ ಕಥೆ ಯಾಕೆ ಆಗಲಿಲ್ಲ? ಎನ್ನುವ ಪ್ರಶ್ನೆ ಕಾಡುತ್ತದೆ. ಪ್ರಭುದೇವರ ಬೆಡಗಿನ ವಚನವೊಂದಿದೆ. ಅಮೂರ್ತವಾದದ ಹಿನ್ನೆಲೆಯಲ್ಲಿ ರಚಿಸಲ್ಪಟ್ಟ ವಚನವಿದು. ಚಿಕ್ಕ ಕಥೆಯಾಗುವ ಯೋಗ್ಯತೆಯನ್ನು ಹೊಂದಿದ್ದು ಅದನ್ನು ನೋಡೋಣ.
ಕಾಳಮೇಘ ಮಂದಿರದ ಚೌಳನ್ದಾರದ ಮನೆಯಲ್ಲಿ
ಒಬ್ಬ ಸೂಳೆಯ ಬಾಗಿಲಲ್ಲಿ ಎಂಬತ್ನಾಲ್ಕು ಮಿಂಡಗಾರರು,
ಅವಳ ಸಂಗದಲ್ಲಿ ಇರಲಮ್ಮರು ಅವಳು ತಾವೆ ಬರಲೆಂದು ಕರೆಯದಿಹಳು,
ಅವಳಿಗೆ ಯೋನಿ ಹಿಂದು ಅಂಡು ಮುಂದು
ಕಣ್ಣು ಅಂಗಾಲಿನಲ್ಲಿ, ತಲೆ ಮುಂಗಾಲಿನಲ್ಲಿ,
ಕಿವಿ ಭುಜದಮೇಲೆ, ಕೈಮಂಡೆಯ ಮೇಲೆ,
ಮೂಗು ಹಣೆಯಲ್ಲಿ, ಮೂಗಿನ ದ್ವಾರ ಉಂಗುಷ್ಟದಲ್ಲಿ,
ಬಸುರು ಬಾಯಲ್ಲಿ ನಡೆವಳು ತಲೆ ಮುಂದಾಗಿ
ಕಾಲು ಮೇಲಾಗಿ, ಅವಳ ಕೂಡುವ ಪರಿಯಾ ಹೇಳಾ
ಅಲೇಖನಾದ ಶೂನ್ಯ ಗೆದ್ದೆಯಲ್ಲಾ ಕಲ್ಲಿನ ಹೊಟ್ಟೆಯ ಮರೆಯಲ್ಲಿ ಗುಹೇಶ್ವರ.
ಇದು ಒಂದು ಕಥೆಯನ್ನು ಹೇಳುವ ಅಮೂರ್ತ ಬೆಡಗಿನ ವಚನ, ಇದು ಒಂದು ಕಥೆಯಾಗಿ ನಮ್ಮನ್ನ ಕಾಡುತ್ತದೆ. ‘ಕಾಲ ಮೇಘ’ ಮಂದಿರವೆಂಬ ಈ ಜಗತ್ತಿನಲ್ಲಿ ಯಾವುದೂ ಸರಿಯಾಗಿಲ್ಲದ ಕಥೆಯಿದು. ಇದನ್ನು ಅಲ್ಲಮ ತನ್ನ ಬೆಡಗಿನ ದಾಟಿಯಲ್ಲಿ ನಿರೂಪಿಸುತ್ತಾನೆ. ಬಸವಣ್ಣನ ‘ಧರೆಯ ಮೇಲೊಂದು ಹಿಡಿದಪ್ಪ ಅಂಗಡಿಯನ್ನು ಇಟ್ಟ’… ವಚನ ಒಂದು ವಚನವಾಗದೆ, ಕಥೆಯಾಗಿ ನಮ್ಮ ಮುಂದೆ ನಿಲ್ಲುತ್ತದೆ. ‘ಒಮ್ಮನವಾದರೆ ನುಡಿವ ಇಮ್ಮನವಾದರೆ, ನುಡಿಯ…’ ಮಹಾದೇವಶೆಟ್ಟಿಯ ಮನಸ್ಥಿತಿಯನ್ನು ವಿಶ್ಲೇಷಿಸುವ ಬಸವಣ್ಣ ಕಥೆಗಾರನಾಗಿ ತನ್ನ ವಚನದಲ್ಲಿ ಕುಸುರಿ ಕೆಲಸವನ್ನು ಮಾಡುತ್ತಾನೆ.
ಸಾದತ್ ಹಸನ್ ಮಾಂಟೋ ಅವರ ‘ಸಾರಿ’ ಕಥೆ ಕೇವಲ ನಾಲ್ಕು ಸಾಲಿನಲ್ಲಿ ಮುಗಿಯುತ್ತದೆ. ಇದು ಕಥೆಯಾಗುವುದಾದರೆ, ಬೆಡಗಿನ ವಚನಗಳು ಯಾಕೆ ಕಥಾ ಪರಂಪರೆಗೆ ಸೇರಲಿಲ್ಲ ಎನ್ನುವ ಪ್ರಶ್ನೆ ಕಾಡುತ್ತದೆ. ಇಂತಹ ಅನೇಕ ವಚನಗಳು ನನ್ನ ದೃಷ್ಟಿಯಲ್ಲಿ ಕಥೆಗಳೇ. ಆದರೆ ಇವುಗಳಿಗೆ ಆಧುನಿಕ ಕಥಾ ಜಗತ್ತು ಧರಿಸಿಕೊಂಡ ‘ಕವಚ’ ಧರಿಸಿಕೊಂಡಿಲ್ಲ ಎನ್ನಬಹುದು. ‘ರಾಮ ಬಂದ, ರಾವಣನ ಕೊಂದ’ ‘ಸೀತೇನ ತಂದ, ಅಯೋಧ್ಯಗೆ ಬಂದ’ ಎನ್ನುವ ಕಥೆ ಮಜ್ಜಿಗೆ ಪೂರ್ತಿ ರಾಮಾಯಣದ ಹಿನ್ನೆಲೆಯಲ್ಲಿ ನಮ್ಮ ಕಡೆ ಚಾಲ್ತಿಯಲ್ಲಿದೆ. ಇದು ಸಹ ಕಥೆಯೇ. ಒಬ್ಬ ಬ್ರಾಹ್ಮಣರ ಅಜ್ಜಿ ಮಜ್ಜಿಗೆ ಬೇಕಾದರೆ ರಾಮಾಯಣದ ಕಥೆ ಹೇಳು ಎಂದು ಕೇಳಿದಾಗ, ಒಬ್ಬ ಬಡ ಹುಡುಗನಲ್ಲಿ ಹುಟ್ಟಿಕೊಂಡ ಕಥೆಯಿದು. ಲಕ್ಷಾಂತರ ಪುಟದ ರಾಮಾಯಣವನ್ನು ನಾಲ್ಕು ಸಾಲಿನಲ್ಲಿ ಸಂಕ್ಷೇಪಿಸುವುದು ಸವಾಲಿನದ್ದು. ಹೊಟ್ಟೆಗಾಗಿ, ಹಸಿವೆಗಾಗಿ ನೆಯ್ದ ಕಥೆಯಿದು. ಇದು ಸಹ ಸಾದತ್ ಹಸನ್ ಮಾಂಟೋ ಅವರ ‘ಸಾರಿ’ ಕಥೆಯನ್ನು ನೆನಪಿಸಿದರೂ ಅದನ್ನ ಕಥೆಯೆಂದು ಗುರುತಿಸುವ ವಿಮರ್ಶಕ ಪಡೆ, ಯಾಕೋ ಮಜ್ಜಿಗೆ ರಾಮಾಯಣವನ್ನು ಗುರುತಿಸುವ ಗೋಜಿಗೂ ಹೋಗಲಿಲ್ಲ.
ಜಾನಪದ ಹಿನ್ನೆಲೆಯಲ್ಲಿ ಹುಟ್ಟಿದ
“ಕೈಕೈ ಎಲ್ಲಿಟ್ಟಿ,
ಬಾಗಿಲ್ಯಾಗ್ ಇಟ್ಟೆ
ಬಾಗಿಲೇನು ಕೊಡ್ತು
ಕಟಿಗೆ ಕೊಡ್ತು
ಕಟ್ಟಿಗೇನು ಮಾಡ್ದಿ
ಒಲಿಯಾಗ ಇಟ್ಟೆ
ಒಲಿಯೇನು ಕೊಡ್ತು
ಬೂದಿಕೊಡ್ತು
ಬೂದಿ ಏನು ಮಾಡ್ದಿ
ಹೊಲಕ್ಕ ಹಾಕ್ದೆ
ಹೊಲ ಏನು ಕೊಡ್ತು
ಜೋಳ ಕೊಡ್ತು”
ಜೀವನೋಪಾಯವನ್ನು ನಿರಂತರವಾಗಿ ಸಲುಹುವ ಇಂಥಹ ಕತೆಗಳು ಇನ್ನು ಕತೆಗಳಂತೆ ದಾಖಲಾಗಿಲ್ಲವೆನ್ನುವದು ನನ್ನ ಅನಿಸಿಕೆ.
“ಆನಿ ಬಂತು ಆನಿ
ಯಾವೂರು ಆನಿ
ಇಲ್ಲಗ್ಯಾಕ ಬಂತು
ದಾರಿ ತಪ್ಪಿ ಬಂತು
ದಾರಿಗೊಂದು ದುಡ್ಡು
ಹಾದಿಗೊಂದು ದುಡ್ಡು.
ಸೇರ ಕೊಬರಿ ತಂದು
ಲಟ ಲಟ ಮುರಿದು
ಹುಡಗರ ಕೈಯ್ಯಾಗ ಕೊಟ್ಟು
ದೊಡ್ಡವರ ಬಾಯಾಗ ಬೊಟ್ಟು”
ಇದು ಸಹ ಯಾವುದೋ ಒಗಟನ್ನು ಹೇಳುವ ಜಾನಪದ ಕಥೆ. ಹಾಗೆ ನೋಡಿದರೆ ಭಾರತದ ಪ್ರತಿ ಹಳ್ಳಿಯೂ ಕಥೆಗಳನ್ನು ಇನ್‍ಕಾರ್ಪೋರೇಟ್ ಮಾಡಿಕೊಂಡಿವೆ ಎನ್ನಬಹುದು. ಹನುಮಂತ, ರಾಮ, ಶಿವರಿಗೆ ಸಂಬಂಧಪಟ್ಟ ಕಥೆಗಳು ಪ್ರತಿ ಊರಿನಲ್ಲಿ ಇವೆ. ಹನುಮಂತ ಸಂಜೀವಿನಿ ಪರ್ವತ ಹೊತ್ತೊಯ್ಯುವಾಗ ಬಿದ್ದ ಕಲ್ಲುಗಳೇ ನಮ್ಮೂರ ಗುಡ್ಡಗಳು ಎಂದು ನಂಬುವರು. ಶ್ರೀಲಂಕಾದಿಂದ ಅತಿ ದೂರದಲ್ಲಿದ್ದ ನಮ್ಮೂರಿನ ಮೇಲೆ ಹನುಮಂತ ಹೇಗೆ ಹೋಗಿದ್ದಾನೆ ಎನ್ನುವ ವಿಷಯಗಳನ್ನು ತರ್ಕಿಸದೆ ತಾವೇ ಕಟ್ಟಿಕೊಂಡ ಕತೆಗಳು ಪ್ರತಿ ಊರಿನಲ್ಲಿ ಇವೆ. ಇದರ ತಾರ್ಕಿಕ ಹಿನ್ನೆಲೆಯನ್ನು ತೆಗೆದುಕೊಳ್ಳದೆ ಭಾವನಾತ್ಮಕ ಹಿನ್ನೆಲೆಯನ್ನು ತೆಗೆದುಕೊಂಡಿದ್ದು ಎಲ್ಲಾ ಊರುಗಳ ಕಥೆಗಳಲ್ಲೂ ಇವೆ. ಅಂತೆಯೆ ಮಹಾಭಾರತ ಮತ್ತು ರಾಮಾಯಣದ ಕಥೆ, ಉಪ-ಕಥೆಗಳು ತಮ್ಮ ಇಷ್ಟ ನಷ್ಟ ಅಳತೆಗಳಿಗನುಗುಣವಾಗಿ ನಮ್ಮ ಜಾನಪದ ಕಥಾ ಪ್ರಪಂಚ ಕಥೆಗಳನ್ನು ಸೃಷ್ಠಿಮಾಡಿದೆ.
ಮಹಾ ಭಾರತದ ಒಂದು ಕತೆ ಹೀಗಿದೆ. ಒಂದು ದಿನ ಭೀಷ್ಮ ಗಂಗಾ ನದಿಗೆ ಸ್ನಾನ ಮಾಡಲು ಹೋದಾಗ, ಕೈಯಲ್ಲಿ ಹಿಡಿದ ಭರ್ಚಿಯಿಂದ (ತೊಂಡೆಕಾಟ) ಓತಿಕಾಟವನ್ನು ಇರಿದ. ಅದು ನೀನು ನಿನ್ನ ಸಾವಿನ ಸಮಯದಲ್ಲಿ ಸಾವಿರ ಬಾಣಗಳ ಶರಶಯ್ಯೆಯಲ್ಲಿ ಮಲಗು ಎಂದು ಶಾಪ ಕೊಟ್ಟಿತೆಂಬ ಕಥೆಯೂ ಇದೆ. ಜಾನಪದ ಕಥೆಗಳು ತಮ್ಮ ಸಮೀಪದ ಜಗತ್ತಿನಿಂದ ತೆಗೆದುಕೊಂಡಿದ್ದರಿಂದ ಅದು ಬಹುವಾಗಿ ನಮ್ಮನ್ನು ಕಾಡುವ ಕಥೆಗಳಾಗುತ್ತವೆ ಎಂದು ನನ್ನ ಭಾವನೆ. ಭಾರತೀಯ ಕಥೆ ಮೀಮಾಂಸೆಯಲ್ಲಿ ಪ್ರಮುಖವಾಗಿ ಬಂಗಾಲಿ, ಮರಾಠಿ, ಕೇರಳ, ಮಣಿಪುರ, ಭೋಜಪುರಿ ಬುಡಕಟ್ಟು ಕಥೆಗಳನ್ನು ನಾವು ಬಹುವಾಗಿ ಅನುವಾದಿಸುತ್ತಿರುತ್ತೇವೆ.
ಯಾಕೆ ಈ ಕಥೆಗಳು ತಾಜಾತನದಿಂದ ಕೂಡಿವೆ ಎಂಬುದರ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು. ನನ್ನ ಗೆಳೆಯರು ಪಶ್ಚಿಮ ಬಂಗಾಳದ ವಿವೇಕಾನಂದ ಆಶ್ರಮಕ್ಕೆ ಪ್ರತಿ ವರ್ಷವು ಭೇಟಿ ಕೊಡುತ್ತಾರೆ. ಅವರು ಹೇಳಿದ ಘಟನೆ ಇದು. “ಬಂಗಾಲಿ ಮತ್ತು ಕೇರಳ ಇಂದು ಇಡೀ ದೇಶದಲ್ಲೆ ಅತಿ ಹೆಚ್ಚು ಅಕ್ಷರಸ್ಥರನ್ನು ಮತ್ತು ಓದುಗರನ್ನು ಹೊಂದಿದ ರಾಜ್ಯಗಳು. ಬಂಗಾಲಿಯಲ್ಲಿ ಒಬ್ಬ ರಿಕ್ಷಾ ಹೊಡೆಯುವವ ಸಹ ತನ್ನ ರಿಕ್ಷಾದಲ್ಲಿ ಬಿಡುವಿದ್ದಾಗ ಓದಲು ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾನೆ. ಆಗಾಗ ರಿಕ್ಷಾ ನಿಲ್ದಾಣಗಳಲ್ಲಿ ಅವುಗಳ ಬಗ್ಗೆ ಚರ್ಚಿಸುತ್ತಾರೆ. ಒಂದು ದಿನ ರಿಕ್ಷಾವಾಲಗಳು ಮುಂಜಾನೆ ನಿಲ್ದಾಣದಲ್ಲಿ ಇರಲಿಲ್ಲ ಯಾಕೆ? ಏನಾದರೂ ಮುಷ್ಕರವಿದೆಯೆ ಎಂದು ಕೇಳಿದೆ. ಸರ್ ಇವತ್ತು ಮಹಾಶ್ವೇತಾ ದೇವಿಯವರ ಹುಟ್ಟು ಹಬ್ಬ. ಅದಕ್ಕಾಗಿ ಸೆಮಿನಾರ ನಡೆದಿದೆ. ಇದನ್ನು ಆರ್ಗನೈಜ್ ಮಾಡಿದವರು ರಿಕ್ಷಾ ಹೊಡೆಯುವ ಸಂಘದವರು” ಎಂದು ಹೇಳಿದರು. ಕೇರಳದಲ್ಲಿಯು ಸಹ ಸ್ವಲ್ಪ ಹೆಚ್ಚು ಕಡಿಮೆ ಹಾಗೆ ಇದೆ.
ಹಾಗೇನೇ ನಮ್ಮ ವಚನಕಾರರು, ಇಲ್ಲಿಯ ತತ್ವ ಪದಕಾರರು ಹೇಳಿದ ನೆಲಮೂಲ ಸಂಸ್ಕೃತಿಯ ಪುನರುತ್ಥಾನ ಪ್ರವೇಶಿಕೆ ಹಾಗೂ ಕಟ್ಟುವಿಕೆ ಬಹುಶಃ ಬಂಗಾಲಿ ಮತ್ತು ಕೇರಳ ಸಾಹಿತ್ಯದಲ್ಲಿ ಅನುಷ್ಠಾನಗೊಂಡಿದೆಯೆಂದು ನನ್ನ ಅಭಿಪ್ರಾಯ. ವಚನಕಾರರಲ್ಲಿ ದನಕಾಯುವವರು, ಕ್ಷೌರಿಕರು, ಮಡಿವಾಳರು, ನೇಕಾರರು, ಸೂಳೆಯರು, ಕಂಬಾರರು, ಕುಂಬಾರರು ಇತ್ಯಾದಿ ವೃತ್ತಿಯವರು ಸಹ ಅನುಭವ ಮಂಟಪದ ಹಾಸಿನ ಮೇಲೆ ಕುಳಿತು ಅನುಭಾವದ ವಚನಗಳನ್ನು ರಚಿಸಿದ್ದು, ಇದರಲ್ಲಿ ಶ್ರಮಿಕವರ್ಗ ಭಾಗವಹಿಸಿದ್ದು ಮಹೋನ್ನತ ಸಂಗತಿಯಾಗಿದೆ.
ಭಾರತದಾದ್ಯಂತ ನಾವು ಕಥಾ ಜಗತ್ತನ್ನು ಅವಲೋಕಿಸಿದಾಗ, ಕಥೆ ಕಟ್ಟುವುದನ್ನು ಕಲಿಸಲು ಶಾಲೆ ಎಂಬುದಿಲ್ಲ. ಕಥೆ ಬರೆಯುವುದನ್ನು ಕ್ಲಾಸಿಕ್ ಆಗಿ ಸೃಷ್ಟಿ ಮಾಡಲು ಹೇಳಿಕೊಡುವ ಒಂದು ಪರಿಕರವೂ ಇಲ್ಲ. ಕಥೆಗಾರರಲ್ಲಿ ನಾನು ಒ(ಉ)ಲಿದಂತೆ ಹಾಡುವೆ ಎನ್ನುವ ಮಂತ್ರದೊಂದಿಗೆ ಬರೆದವರೆ ಹೆಚ್ಚು. ಕಥಾ ಜಗತ್ತನ್ನು ಪ್ರವೇಶಿಸುವ ಮುನ್ನ ತಮ್ಮ ಅನುಭವ ಮತ್ತು ಜ್ಞಾನವನ್ನು ಕಥಾ ಭಿತ್ತಿಯ ಮುಖಾಂತರ ಹೇಳಲು ಆರಿಸಿಕೊಂಡಿದ್ದು ತಮ್ಮ ಹಿರಿಯರು ಸಾಗಿದ ದಾರಿಯನ್ನು ಮಾತ್ರ.
ಕಥೆಗಾರ ಮತ್ತು ಕವಿ ಯಾವಾಗಲೂ ಒಂದು ಭ್ರಮೆಯಲ್ಲಿ ಬದುಕುತ್ತಿರುತ್ತಾನೆ. ತಾನು ಬರೆದಿದ್ದೆಲ್ಲ ಸರ್ವ ಶ್ರೇಷ್ಟ ಎನ್ನುವ ನಂಬಿಕೆ ಅದು. ಇದು ಯಾಕೆ ಹೀಗೆ ಆಗುತ್ತದೆಂದರೆ ಅವರಿಗೆ ನೀವು ಎಲ್ಲಿ ತಿದ್ದಿಕೊಳ್ಳಬೇಕು ಎಂದು ಹೇಳುವವರು ಯಾರು? ತಾನು ಬರೆದಿದ್ದೇ ಸರ್ವಶ್ರೇಷ್ಠ ಎಂಬ ಭ್ರ್ರಮೆಯಲ್ಲಿ ಬದುಕುವ ಕಥೆಗಾರನ ಕಿರೀಟವನ್ನು ಕೆಳಗೆ ಇಳಿಸುವವವರು ಯಾರು?
ಒಂದು ಕತೆ ಹೀಗಿದೆ, ಆತ ಕಥೆಗಾರ ಯಾವಾಗಲೂ ರತ್ನ ಖಚಿತವಾದ ಕೀರಿಟವನ್ನು ಇಟ್ಟುಕೊಂಡು ಅಡ್ಡಾಡುವವ. ಒಂದು ದಿನ ಅವಳಲ್ಲಿ ಹೋಗುತ್ತಾನೆ. ಆಕೆಗೆ ತನ್ನ ಪುಸ್ತಕ ಕೊಡುತ್ತಾನೆ ತನ್ನ ಬಗ್ಗೆ ಹೇಳಿಕೊಳ್ಳುತ್ತಾನೆ. ಅವಳು ಪರಿವಿಡಿ ತೆಗೆದಾಗ ಆ ಪುಸ್ತಕ ಓದಿದ ನೆನಪು ಬರುತ್ತದೆ. ಅದು ಬಡ ಹುಡುಗನೊಬ್ಬ ನಡೆಸುವ ಸೆಕೆಂಡ ಹ್ಯಾಂಡ್ ಪುಸ್ತಕ ಮಾರಾಟ ಮಾಡುವ, ಪಾದಾಚಾರಿಗಳು ನಡೆದಾಡುವ ಜಾಗದಲ್ಲಿ ಇಟ್ಟ ಪುಸ್ತಕದ ಅಂಗಡಿಯಲ್ಲಿ ಕೊಂಡ ನೆನಪು. ಇಲ್ಲಿ ಕಿರೀಟ ಹೊತ್ತುಕೊಂಡು ಬರುವ ಕಥೆಗಾರನಿಗೆ ಗುಜರಿ ಅಂಗಡಿಯಲ್ಲಿ ಸಿಕ್ಕ ಪುಸ್ತಕ ಪಾಠವಾಗಬೇಕು ಎನ್ನುವದು ನನ್ನ ಅಭಿಪ್ರಾಯ. ಕಥೆಗಾರನಿಗೆ ಪ್ರತಿದಿನವು ಮೌಲ್ಯಮಾಪನದ ದಿನ. ನಿನ್ನೆ ಬರೆದ ಕಥೆ ಅದ್ಭುತವಾಗಿದ್ದರೂ ಇಂದು ಅದು ಲೋಪದೋಷಪೂರಿತವಾಗಿದೆ ಎಂದು ಕಥೆಗಾರನಿಗೆ ಅನ್ನಿಸಿದಾಗ ಕಥೆಗಾರ ಬೆಳೆಯುತ್ತಿದ್ದಾನೆಂದು ನನ್ನ ಭಾವನೆ.
ಕನ್ನಡದ ಕಥೆಗಳಿಗೆ ಓದುಗರು ಕಡಿಮೆ. ಕಥೆಗಳನ್ನು ಯಾರು ಓದಬೇಕು? ಓದುವವರು ಯಾರೆಂದರೆ ಅದೇ ಕಥೆಗಾರರು, ಕವಿಗಳು, ಸಾಹಿತ್ಯಕ್ಕೆ ಸಂಬಂಧಪಟ್ಟವರು ಓದಬೇಕು (ಇತ್ತಿತ್ತಲಾಗಿ ಅವರೂ ಓದುತ್ತಿಲ್ಲ). ಕನ್ನಡ ಸಾಹಿತ್ಯ ಲೋಕದಲ್ಲಿ ವಚನಕಾರರು ಮತ್ತು ತತ್ವಪದಕಾರರು ಸೃಷ್ಟಿಸಿದ ಸಾಮೂಹಿಕ ಪ್ರಜ್ಞೆಯ ಜ್ಞಾನವು ಜನಸಾಮಾನ್ಯರನ್ನು ತಲುಪಿದಂತೆ, ಆಧುನಿಕ ಕನ್ನಡದ ಕಥೆ, ಕಾವ್ಯ ಜನಸಾಮಾನ್ಯರನ್ನು ತಲುಪವಲ್ಲಿ ವಿಫಲವಾಗಿದೆ ಎಂದು ನನ್ನ ಭಾವನೆ. ಹೀಗೆ ಜನ ಸಾಮಾನ್ಯರನ್ನು ತಲುಪುವಲ್ಲಿ ತೇಜಸ್ವಿ, ಲಂಕೇಶ್ ಈ ನಿಟ್ಟಿನಲ್ಲಿ ಕಥೆ, ವಿಜ್ಞಾನ ಲೋಕದ ಕುರಿತ ಬರವಣಿಗೆಯನ್ನು ಅತ್ಯಂತ ಸರಳವಾಗಿ ಸುಲಲಿತವಾಗಿ ಅರ್ಥವಾಗುವ ಫಾರ್ಮೆಟ್‍ನಲ್ಲಿ ಬಳಸಿದರು. ಇದರ ಮುಂದಿನ ಹಂತದಲ್ಲಿ ಎರಡನೆ ಘಟ್ಟವಾಗಿ ಬಂದ ದೇವನೂರು, ಕುಂ.ವೀ., ಮೊಗಳ್ಳಿ, ನುಗಡೋಣಿ, ಹುಳಿಯಾರ್, ಮಳಗಿ, ಕಾಯ್ಕಿಣಿ ಅವರ ತಲೆಮಾರಿನ ಕಥೆಗಳು ಕನ್ನಡ ಕಥಾ ಪರಂಪರೆಯ ಘನತೆಯನ್ನು ಹೆಚ್ಚಿಸಿದವು. ಇಂದು ಕಥಾ ವಿಮರ್ಶೆಯ ಸಹ ವ್ಯಕ್ತಿಕೇಂದ್ರಿತ ನೆಲೆಯಲ್ಲಿ ನಡೆಯುತ್ತಿರುವದು ವಿಷಾದದ ಸಂಗತಿ. ಅಂತೆಯೇ ಕೆಟ್ಟ ಕಥೆಗಳು ಮುಂಚೂಣಿಗೆ ಬರುತ್ತಿವೆ. ಆದರೆ ಅವುಗಳ ಆಯುಷ್ಯ ತೀರಾ ಕಡಿಮೆ.
ಸಂರಚನೆ ವಿರಚನೆ ಎಂಬ ಸಾಧ್ಯತೆ
ಕಥೆ ಕಟ್ಟುತ್ತೇವೆ ಕಥೆಗೆ ಒಬ್ಬ ಗೌಡ ಸಿಕ್ಕಿದ್ದಾನೆ ಅಥವಾ ಒಬ್ಬ ವ್ಯಕ್ತಿಯನ್ನು ಗೌಡನನ್ನಾಗಿ ಮಾಡಿದ್ದೇವೆ. ಆತ ಐವತ್ತು ವರ್ಷಗಳಿಂದ ಹಾಗೆಯೇ ಇದ್ದಾನೆ. ಆತನಲ್ಲಿ ಬದಲಾವಣೆ ಎಂಬುದೇ ಇಲ್ಲ. ಇಂತಹ ಮಾಯಾವಿ ಸಿದ್ಧ ಮಾದರಿಯ ಕಥೆಗಳನ್ನು ಬೆನ್ನು ಹತ್ತಿದ್ದೇವೆ. ಅಂಬೇಡ್ಕರ್ ಹೇಳಿದ ಇತಿಹಾಸದ ಪುನರ್ರಚನೆ ಮಾದರಿಯ ಕಥೆಗಳು ಇನ್ನೂ ನಮ್ಮ ಕೈಯ್ಯಲ್ಲಿ ಸಿಗುತ್ತಿಲ್ಲ. ದಲಿತರ ವಿಭಿನ್ನ ಮಾದರಿಯ ಶೋಷಣೆಯ ಕ್ರಮಗಳು ಇನ್ನೂ ಗುರುತಿಸುವಲ್ಲಿ ವಿಫಲರಾಗಿದ್ದೇವೆ. ನಾಗಾ ಜನಾಂಗದ ಕಥೆ ಇಲ್ಲಿಯ ಮೂಲ ಪುರುಷರ ಕಥೆ. ಮತ್ತೆ ಭಾರತದ ಇತಿಹಾಸದಲ್ಲಿ ನಡೆದಿರಬಹುದಾದ ಸಾಂಸ್ಕೃತಿಕ ಐತಿಹಾಸಿಕ ದಾಖಲೀಕರಣದ ಅಪಭ್ರಂಶವನ್ನು ಸರಿಪಡಿಸಲು ಆಗದ ಕಥೆಗಳು ಗುರುತಿಸುವಲ್ಲಿ ನಾವು ಶಕ್ಯರಾಗಿದ್ದೇವೆಯೇ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.
ನನ್ನ ಓರೆಗೆಯ ಕಥೆಗಾರರು ಯಾರೂ ಐತಿಹಾಸಿಕ ವಿಷಯಗಳ ಬೆನ್ನು ಹತ್ತುವುದಿಲ್ಲ. ಅವುಗಳನ್ನು ಕಥೆ ಹೇಗೆ ಮಾಡಬೇಕೆಂಬ ಅರಿವಿಲ್ಲ. ಇಂತಹ ಕತೆಗಳನ್ನು ಸಂಶೋಧನಾ ದೃಷ್ಟಿಯಿಂದ ನೋಡುವ ವ್ಯವಧಾನವಿಲ್ಲ. ಕತೆಗಾರನಿಗೆ ಸಂಶೋಧಕರು, ಸಮಾಜ, ಕಾಲ ಎಲ್ಲವನ್ನು ನೀಡಿದೆ. ಆದರೆ ನಾವು ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ಬುದ್ಧ ಗಯಾದಲ್ಲಿ ಇರುವ ಭೋದಿವೃಕ್ಷದ ಮೇಲೆ ಇಲ್ಲಿಯ ದಲಿತರ ಮೇಲೆ ದಾಳಿ ಆದಂತೆ ಪದೆ ಪದೆ ಆಗಿದೆ. ಆ ಭೋದಿವೃಕ್ಷವನ್ನು ಕಡಿದು ಹಾಕಲಾಗಿದೆ. ಮತ್ತೆ ಶ್ರೀಲಂಕಾದಿಂದ ತಂದು ನೆಡಲಾಗಿದೆ ಎಂಬ ವಾದವೂ ಇದೆ. ಆದರೆ ಒಂದು ಕಥೆಯೂ ಇದರ ಬಗ್ಗೆ ಮಾತಾಡುವದಿಲ್ಲ. ಐತಿಹಾಸಿಕ ಕಥೆಗಳು ಮಾತ್ರ ಸಂರಚನೆ ವಿರಚನೆ ಎಂಬ ಕಟ್ಟುವಿಕೆ ಮತ್ತು ಕೆತ್ತುವಿಕೆಯ ಹಿನ್ನೆಲೆಯಲ್ಲಿ ನೋಡಬೇಕಿಲ್ಲ. ವರ್ತಮಾನದ ಕಥೆಗಳು ಸಹ ಕಾಲ ಚಕ್ರ ತಿರುಗಿದಂತೆಲ್ಲ ವಿವಿಧ ಮುಖಗಳಲ್ಲಿ ಪರಿಭ್ರಮಿಸುತ್ತವೆ. ಅದನ್ನು ಇದೇ ಸಂರಚನೆ ವಿರಚನೆ ಮಾದರಿಯನ್ನು ನಾವು ಪ್ರಯತ್ನಿಸುತ್ತಿದ್ದೇವೆಯೇ? ಇದೇ ನಮ್ಮ ಮುಂದಿರುವ ಯಕ್ಷ ಪ್ರಶ್ನೆ.

‍ಲೇಖಕರು nalike

May 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: