ಡಾ. ನಾ. ಮೊಗಸಾಲೆ
**
ಅರಬ್ಬೀ ಸಮುದ್ರವನ್ನೇ ಹೊತ್ತು ಮೇಲೆದ್ದು ಬಂದಂತೆ
ಆಕಾಶದಲ್ಲಿ ಮೋಡ ಮಿಂಚು ಗುಡುಗು!
ಇಷ್ಟು ದಿನ ಇಲ್ಲದಿದ್ದುದನು ಒಂದೇ ಬಾರಿ ಕೊಡುವಂತೆ
ಬಂತೇ ಮಳೆ? ಎಲ್ಲಿತ್ತು ಇದು ಎನ್ನುವಷ್ಟು!
ಸೂರು ಹರಿದು ಹೋಗುವ ಹಾಗೆ ಸುರಿದ ಮಳೆಯಲ್ಲಿ
ರಸ್ತೆ ಚರಂಡಿ ಒಂದಾಯಿತು, ಕುಸಿದುವು ಕಟ್ಟಡಗಳು
ಮರಗಿಡ ಬಳ್ಳಿಗಳೆಲ್ಲ ತಲೆಬಾಗಿ ಪ್ರಾರ್ಥಿಸಿದುವು :
ನಾವು ತಡಕೊಂಡೇವು ಬೇಸಗೆಯ, ಆದರೆ ಹೇಗೆ ನಿನ್ನನ್ನು?
ಬೆದೆಗೆ ಬಂದ ಹಾಗೆ ಇದ್ದ ನೆಲದ ಯೋನಿ ತುಟಿಗಳು
ಬೇಡ ಇತ್ತು ಈ ಭೋಗ ಎಂಬಂತೆ ಚಡಪಡಿಸಿತು!
ಆಹಾ! ಪುರುಷಾಕಾರಂ ಎನ್ನುವ ಆಕಾಶದ ಅಹಂಕಾರ
ಅತ್ಯಾಚಾರದಲ್ಲಿ ತೊಡಗಿದಂತೆ, ನೆಲವನ್ನು ಹರಿ ಹರಿಯಿತು!
ಕಣ್ಣ ನೋಟ ಕಂತುವ ತನಕ ನೋಡಿದೆ : ಸಣ್ಣ ಸಣ್ಣ ಹನಿಗಳು
ಹೇಗೆ ಸಮುದ್ರವೇ ಆಗುವುದು! ಮತ್ತೆ ಸಮುದ್ರಕ್ಕೆ
ಮರಳುವುದು!
ಈ ಮಳೆ ತಣ್ಣಗೆ ನೇವರಿಸಬಾರದೇ ಈ ಇಳೆಯ ಮೈಮನಗಳ
ಎನ್ನುವುದು ಈಗ ಕನಸಿನ ಆಚೆಗೆ ಹೋಗಿ ಆಯಿತು ಸಮುದ್ರ!
0 Comments