ಕಣ್ಣು ತೆರೆಸಿದ ‘ಲೂಯಿ ಬ್ರೈಲ್’ ಕಥನ

ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ ನ ಹೊಸ ಕೃತಿ `ಲೂಯಿ ಬ್ರೈಲ್’.

ನಾಡಿನ ಹಿರಿಯ ವಿಜ್ಞಾನಿಗಳು ಹಾಗೂ ಜನಪ್ರಿಯ ಲೇಖಕರು ಆದಂತಹ ಡಾ.ಎಮ್ ಎಸ್ ಎಸ್ ಮೂರ್ತಿ ಅವರು 200 ವರ್ಷಗಳ ಹಿಂದಿನ ಆತನ ಜೀವನ ಹೋರಾಟದ ಬದುಕನ್ನು ಈ ಕೃತಿಯ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಕೃತಿ ಓದಿದ ಮೇಲೆ ಆತನ ಬದುಕು ಎಂಥವರಿಗಾದರೂ ಪ್ರೇರಣೆಯನ್ನು ನೀಡಬಲ್ಲಂತಹ ಜೀವನೋತ್ಸಾಹದ ಸಿರಿ. ಅಂಧರ ಜ್ಞಾನಜ್ಯೋತಿ `ಲೂಯಿ ಬ್ರೈಲ್’ ಕೊಳ್ಳಲು ಸಂಪರ್ಕ : 9739561334

ಈ ಕೃತಿಗೆ ಶ್ರೀನಿವಾಸ ರೆಡ್ಡಿ ಅವರು ಬರೆದ ಮುನ್ನುಡಿ ಇಲ್ಲಿದೆ-

ವಸ್ತು ವೈವಿಧ್ಯದ ಜೊತೆಗೆ ಪಾತ್ರ ಕಟ್ಟುವ ಧ್ಯಾನ

ಕೆ ಶ್ರೀನಿವಾಸ ರೆಡ್ಡಿ

ಒಂದು ಸುಸಂಸ್ಕೃತವಾದ ಮನಸ್ಥಿತಿ ದೇಶ ಭಾಷೆ ಧರ್ಮಗಳನ್ನು ಮೀರಿ ಮಾನವ ಇತಿಹಾಸದ ಸಾಧನೆಯ ಯಶಸ್ವೀ ಮೈಲಿಗಲ್ಲುಗಳನ್ನು ಯಶಸ್ಸುಗಳನ್ನು ವಿಶಿಷ್ಟವಾಗಿ ಗ್ರಹಿಸಿ ಅದರಿಂದ ರೋಮಾಂಚನಗೊಂಡು ಅದನ್ನು ತಂದು ತಾನು ಜನಿಸಿದ ಮಣ್ಣಿನಲ್ಲಿ ಚಿಗುರೊಡೆಯುವಂತೆ ಮಾಡುವ ಒಂದು ವಿಶಿಷ್ಟ ಸಾರ್ಥಕ ಪ್ರಯತ್ನವೇ ಈ ಪುಸ್ತಕ. ಈ ನಿಟ್ಟಿನಲ್ಲಿ ಡಾ.ಎಂಎಸ್‌ಎಸ್.ಮೂರ್ತಿರವರು ನಿಜಕ್ಕೂ ಅಭಿನಂದಾರ್ಹರು.

ಸಾಧಕರ ಮನಸ್ಥಿತಿಯೇ ಹಾಗಿದೆ. ಅವರಿಗೆ ಒದಗಿಬರುವ ಅತ್ಯಂತ ಕಠಿಣ ಸನ್ನಿವೇಶಗಳೇ ಅವರಿಗೆ ಮಹಾನ್ ಸಾಧನೆಯ ಅವಕಾಶಗಳಾಗಿ ಮಾರ್ಪಡುತ್ತವೆ. ಅವರು ಎದುರಿಸುವ ಪ್ರತಿಯೊಂದು ಸೋಲು ಅವರಿಗೆ ಸ್ಫೂರ್ತಿಯೇ. ಅವರ ಗಮನ ಯಾವಾಗಲೂ ಅವರ ಸಾಧನೆಯ ಕಡೆಯೇ ಕೇಂದ್ರೀಕೃತಗೊಂಡಿದೆ. ಅವರನ್ನು ಯಾವುದೂ, ಯಾರು ವಿಚಲಿತಗೊಳಿಸಲಾಗದು. ಅವರು ಅವರ ಗುರಿಯನ್ನು ಸಾಧಿಸಿಯೇ ತೀರುತ್ತಾರೆ. ಇಂತಹ ಒಂದು ಜೀವಂತ ಕಥನ ಈ ಪುಸ್ತಕದಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ.

ಈ ಪುಸ್ತಕವನ್ನು ಓದಲು ತೊಡಗಿದರೆ ಸ್ಟೀವ್ ಜಾಬ್ಸ್‌ ನು ಸ್ಟ್ಯಾನ್‌ ಫರ್ಡ್ ಯುನಿವರ್ಸಿಟಿಯಲ್ಲಿ ಮಾಡಿದ ಪ್ರಾರಂಭಿಕ ಭಾಷಣದ ನೆನಪಾಗುತ್ತದೆ. ಮಹಾನ್ ಸಾಧಕರ ಬದುಕಿನಲ್ಲಿ ಬರುವ ಪ್ರತಿಯೊಂದು ಅನಾಹುತಗಳೂ, ಸಂಕಷ್ಟಗಳೂ, ಘಟನೆಗಳೂ ನಿರ್ದಿಷ್ಟ ಕಾರಣಗಳಾಗಿಯೇ ಬಂದಿವೆ. ಇವನ್ನು ಒಂದೊಂದು ಬಿಂದು ಎಂದು ಪರಿಗಣಿಸಿದರೆ ಇಂತಹ ಬಿಂದುಗಳನ್ನು ಸಾಧನೆಯ ನಂತರವೇ ಒಂದಕ್ಕೊಂದು ಸೇರಿಸಲು ಸಾಧ್ಯವಾಗುತ್ತದೆ. ಆಗಷ್ಟೇ ನಮಗೆ ಇಂತಹ ಸಂಕಷ್ಟಗಳ ಘಟನೆಗಳ ಅರ್ಥಪೂರ್ಣತೆಯು ತಿಳಿಯಲು ಸಾಧ್ಯವಾಗುತ್ತದೆ. ಅವರ ಬದುಕಿನಲ್ಲಿ ಇಂತಹ ದುರ್ಘಟನೆಗಳು ಘಟಿಸಿದ್ದರಿಂದಲೇ ಅವರು ಮಾನವ ಕುಲಕ್ಕೇ ದಾರಿದೀಪವಾಗುವ ಮಹಾನ್ ಸಾಧನೆಗಳನ್ನು ಮಾಡಿದ್ದಾರೆ. ಮಾನವ ಜಗತ್ತಿಗೇ ಸ್ಫೂರ್ತಿಯಾಗಿ ನಿಂತಿದ್ದಾರೆ. ಇಂತಹ ಒಂದು ಬಳ್ಳಿ ಈ ಪುಸ್ತಕದ ದಾರಿಯುದ್ದಕ್ಕೂ ಹಬ್ಬಿಕೊಂಡಿದೆ.

ಹತ್ತನೇಯ ತರಗತಿಯ ವಿಧ್ಯಾರ್ಥಿಗಳಿಗೆ ಇಂತಹ ಒಂದು ರೋಮಾಂಚನಕಾರಿ ಸಾಧನೆಯ ಅನುಭವವನ್ನು ಮೂಡಿಸುವ ಪ್ರಯತ್ನದ ಮೂಲಕ ಲೇಖಕರು ಕಥೆಯನ್ನು ಪ್ರಾರಂಭಿಸುತ್ತಾರೆ. ವಾಸ್ತವದಲ್ಲಿ ಬ್ರೈಲ್ ಲಿಪಿಯ ಮಹತ್ವವನ್ನು ಉಬ್ಬಿದ ಚುಕ್ಕೆಗಳ ಮೂಲಕ ಬಿಡಿಸುತ್ತಾ ಹೋಗುವ ಲೇಖಕರು ಇದರಿಂದ ಅಂಧರ ಬದುಕಿನಲ್ಲಿ ಆದ ಕ್ರಾಂತಿಕಾರಕ ಬದಲಾವಣೆಯ ಕುರಿತಂತೆ ರೋಮಾಂಚನಗೊಂಡು ಮಕ್ಕಳಲ್ಲೂ ಇಂತಹ ರೋಮಾಂಚನವನ್ನು ಹುಟ್ಟಿಸಲೆತ್ನಿಸುತ್ತಾರೆ. ಇದು ನೋಡಲು ಸರಳವೆನ್ನಿಸಿದರೂ ಇದೊಂದು ಮಕ್ಕಳ ಮನದಲ್ಲಿ ಮಹಾನ್ ಸಾಧನೆಯ ಬೀಜ ಬಿತ್ತುವ ತಂತ್ರವೇ.

ಪುಸ್ತಕದಲ್ಲಿ ಗಾಯತ್ರಿ ಮೇಡಂ ಹೇಳುವ ಮೂಲಕ ಮಹಾನ್ ಸಾಧಕ ಲೂಯಿ ಬ್ರೈಲ್ ನ ಜೀವನ ಸಾಧನೆಯ ಕಥೆ ಶುರುವಾಗುತ್ತದೆ. ಪ್ರಾನ್ಸ್ ದೇಶದ ಸಣ್ಣ ಹಳ್ಳಿ ಕೂವ್ರೆ ಕಲ್ಲಿನ ಮನೆ ಅಲ್ಲಿನ ಪರಿಸರದ ಚಿತ್ರಣವಿದೆ. ಕಥೆಯನ್ನು ಲೈವ್ ಆಗಿ ಹೇಳುವ ರೀತಿಯಿದೆ. ಒಂದು ಸಣ್ಣ ಅಪಘಾತದಲ್ಲಿ ಕಣ್ಣುಗಳನ್ನು ಕಳೆದುಕೊಳ್ಳುವ ಲೂಯಿ ಬ್ರೈಲ್ ಗೆ ಮಕ್ಕಳಿಗೆ ಇರುವ ಸಹಜ ಕುತೂಹಲವೇ ಇದೆ. ಚರ್ಮ ಹೊಲೆಯುವ ದಬ್ಬಳದಿಂದ ಕಣ್ಣು ಕಳೆದುಕೊಂಡ ಮುಗ್ಧ ಮಗು ಲೂಯಿ ತಾಯಿಯನ್ನು ಕೇಳುವ ‘ಯಾವಾಗ ಬೆಳಗ್ಗೆ ಆಗುತ್ತೆ’ ಎನ್ನುವ ಮಾತೇ ನಮ್ಮ ಕರಳು ಹಿಂಡುವಂತಿದೆ. ಆದರೆ ಮುಂದೊಂದು ದಿನ ಇಡೀ ಮನುಕುಲದ ಅಂಧರ ಬಾಳಿಗೇ ಬೆಳಕನ್ನು ತುಂಬುವ ಅದ್ಭುತ ಅನ್ವೇಷಣೆಯ ಬೀಜಾಂಕುರವಾಗುವುದು ಇಲ್ಲಿಯೇ.

ಈ ಪುಸ್ತಕವನ್ನು ಓದುತ್ತಾ ಹೋದಂತೆ ಅದು ನಮ್ಮನ್ನು ಲೂಯಿ ಜೀವನದೊಳಕ್ಕೆ ನಡೆಸುತ್ತದೆ. ಮೊದಲಿಗೆ ಅಂಧತನದ ಹೊಡೆತಕ್ಕೆ ಸಿಕ್ಕು ನಲುಗಿ ಹೋದರೂ ನಂತರ ಕಠಿಣ ಪರಿಸ್ಥಿತಿಗೆ ಒಗ್ಗಿಕೊಳ್ಳುವ ಲೂಯಿ ನಂತರದಲ್ಲಿ ಆಲಿಕೆಯ ಮೂಲಕ, ವಾಸನೆಯ ಮೂಲಕ, ಸ್ಪರ್ಶದ ಮೂಲಕ ಪ್ರಪಂಚವನ್ನು ಗ್ರಹಿಸಲು ಯತ್ನಿಸುತ್ತಾನೆ. ಕ್ರಮೇಣ ಆತ್ಮವಿಶ್ವಾಸ ಗಳಿಸಿಕೊಳ್ಳುತ್ತಾನೆ. ಕಲಿಕೆಯಲ್ಲಿ ನಿರಂತರ ಉತ್ಸಾಹವನ್ನು ತೋರುವ ಲೂಯಿಗೆ ಫಾದರ್ ಪಲ್ವಿ ಭೇಟಿ ಆತನ ಬಾಳಿನಲ್ಲಿ ಹೊಸದೊಂದು ಹಾದಿಯನ್ನು ತೆರೆಸುತ್ತದೆ. ಗಮನಿಸಿದರೆ ನಮ್ಮ ಬದುಕೇ ಹಾಗಿದೆ. ಯಾವುದನ್ನೂ ನಾವು ತೀವ್ರವಾಗಿ ಆಶಿಸಿದರೆ ಅದರ ಸೆಳೆತಕ್ಕೆ ಒಳಗಾಗುತ್ತೇವೆ. ಹಾಗೆಯೇ ನಿರಂತರ ಪ್ರಯತ್ನ ಹಾಗೂ ಪರಿಶ್ರಮಗಳಲ್ಲಿ ತೊಡಗಿದರೆ ನಮಗೆ ಯಾವುದೂ ಸಾಧ್ಯವಾಗುತ್ತದೆ. ಹೊಸ ಮಾರ್ಗಗಳು ಹೊಸ ಹೊಸ ವ್ಯಕ್ತಿಗಳು ಜೊತೆಯಾಗಿ ನಮಗೆ ಎಲ್ಲವೂ ಒದಗಿಬರುತ್ತವೆ ಲೂಯಿ ಬದುಕಿನಲ್ಲಿ ಆದದ್ದೂ ಇದೇ.

ಈ ಪುಸ್ತಕದ ಇಡೀ ಕಥೆಯಲ್ಲಿ ‘ನನಗೆ ಓದಲು ಸಾಧ್ಯವಾಗಿದ್ದಿದ್ದರೆ’ ಎಂಬ ಲೂಯಿಯ ಬಲವಾದ ಹಂಬಲವೇ ಸಾಧನೆಯ ಹಾದಿಯನ್ನು ತೆರೆಸುತ್ತಾ ಸಾಗುತ್ತದೆ. ಎದುರಾಗುವ ಕಠಿಣ ಸನ್ನಿವೇಶ ಪರಿಸ್ಥಿತಿಗಳಿಗೆ ಸಿಕ್ಕು ಹದವಾಗುವ ಗಟ್ಟಿಯಾಗುವ ಲೂಯಿ ಎಲ್ಲವನ್ನು ಎದುರಿಸುತ್ತಲೇ ತನ್ನ ಹೃದಯದ ಧನಿಗೆ ಕಿವಿಗೊಟ್ಟು ನಡೆಯುವುದನ್ನು ಕಾಣುತ್ತೇವೆ. ಅಂತೆಯೇ ಆತನ ಛಲ ಆತ್ಮವಿಶ್ವಾಸ ಇಮ್ಮಡಿಸುತ್ತದೆ.

ಪ್ಯಾರಿಸ್‌ನ ‘ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಲೈಂಡ್ ಯೂತ್’ ಸಂಸ್ಥೆಗೆ ಸೇರುವ ಲೂಯಿ ಅಂದಿಗೆ ಅಸ್ತಿತ್ವದಲ್ಲಿದ್ದ ಅಂಧರ ಅಸಮರ್ಪಕ ಓದುವ ವಿಧಾನವನ್ನು ಮನಗೊಂಡು ಉತ್ತಮ ವಿಧಾನವನ್ನು ರೂಪಿಸುವುದನ್ನೇ ತನ್ನ ಜೀವನದ ಉದ್ದೇಶವಾಗಿಸಿಕೊಳ್ಳುತ್ತಾನೆ. ಇಂತಹ ದಾರಿಯಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ಕಷ್ಟಗಳನ್ನು ಅಡ್ಡಿಗಳನ್ನು ಎದುರಿಸುವುದನ್ನು ಕಾಣುತ್ತೇವೆ. ಆದರೆ ಲೂಯಿಯ ‘ಏನು ಬೇಕಾದರೂ ಆಗಬಹುದು’ ಎಂಬ ಅಚಲ ನಂಬಿಕೆಯೇ ಆತನಿಗೆ ಬಲವಾಗುವುದನ್ನು ಬೆಳಕಾಗುವುದನ್ನು, ದಾರಿದೀಪವಾಗುವುದನ್ನು ಕಾಣುತ್ತೇವೆ. ಕೊನೆಗೆ ಲೂಯಿ ತನ್ನ ಹದಿನೈದನೇ ವಯಸ್ಸಿಗೇ ಅಂಧರ ಬಾಳಿಗೆ ಬೆಳಕಾಗುವ ಉಬ್ಬು ಚುಕ್ಕೆಗಳ ಬ್ರೈಲ್ ಲಿಪಿಯನ್ನು ರೂಪಿಸಿ ಮಹಾನ್ ಸಾಧನೆಯನ್ನು ಮಾಡುತ್ತಾನೆ.

ಮಹಾನ್ ಸಾಧಕರ ಅಂತಹ ಗುಣಗಳೇ ಅವರನ್ನು ಯಶಸ್ವಿಗಳನ್ನಾಗಿಸಿವೆ. ಪುಸ್ತಕವನ್ನು ಓದುತ್ತಾ ಹೋದಂತೆ ಲೂಯಿಯ ಬದುಕು, ಸಾಧನೆ ನಮ್ಮನ್ನು ಆವರಿಸಿಕೊಳ್ಳತೊಡಗುತ್ತದೆ. ರೋಮಾಂಚನಗೊಳಿಸುತ್ತದೆ. ಇಲ್ಲಿ ಲೇಖಕರ ಮೂಲ ಉದ್ದೇಶ ಸಾಧಿತವಾಗಿದೆ. ಯಾವುದೋ ದೇಶ, ಯಾವುದೋ ಭಾಷೆ, ಯಾವುದೋ ಧರ್ಮ ಆದರೆ ಲೂಯಿಯ ಇಂತಹ ಸಾಧನೆಯ ಅದ್ಭುತ ಬದುಕು ಲೇಖಕರನ್ನು ರೋಮಾಂಚನಗೊಳಿಸಿದೆ. ಹಾಗೆಯೇ ಮಾನವಕುಲದ ಅಂತ:ಸತ್ವವನ್ನೂ ಶ್ರೀಮಂತಗೊಳಿಸುತ್ತದೆ. ಮಹಾನ್ ಸಾಧಕರು ಎಲ್ಲಿಗೂ, ಯಾವುದಕ್ಕೂ ಸೀಮಿತವಲ್ಲ. ಅವರು ಮಾನವಕುಲವನ್ನು ಕೈಹಿಡಿದು ನಡೆಸುವ ನಾಯಕರೇ ಎಂಬುದು ಸಾಬೀತಾಗುತ್ತದೆ.

ಒಬ್ಬ ವ್ಯಕ್ತಿಯ ಯಶಸ್ಸು ತಾನೇ ಕಟ್ಟಿಕೊಂಡ ಚೌಕಟ್ಟಿನಿಂದ ಹೊರಬಂದ ತನ್ನ ಮುಕ್ತ ಆಲೋಚನೆಯಲ್ಲೇ ಇದೆ. ಆತನ ಸಂಕಲ್ಪ, ಛಲ, ವಿಶ್ವಾಸಗಳಲ್ಲೇ ಇದೆ. ಆತನ ನಿರಂತರ ಪ್ರಯತ್ನ ಪರಿಶ್ರಮಗಳಲ್ಲೇ ಇದೆ. ಎಂತಹ ಸಂಕಷ್ಟ ಸಂದಿಗ್ಧ ಪರಿಸ್ಥಿತಿಗಳನ್ನೂ ಧೈರ್ಯದಿಂದ ಎದುರಿಸಿ ಮುನ್ನಡೆಯವುದರಲ್ಲೇ ಇದೆ ಎಂಬುದು ಲೂಯಿ ಬ್ರೈಲ್ ಜೀವನ ಸಾಧನೆಯಲ್ಲಿ ಮನದಟ್ಟಾಗುತ್ತದೆ.

ಒಟ್ಟಿನಲ್ಲಿ ಈ ಪುಸ್ತಕದ ಭಾಷೆ, ಶೈಲಿ ವಿಧಾನಗಳು ಏನೇ ಇರಲಿ, ಆದರೆ ಇದರಲ್ಲಿರುವ ಹೂರಣ ಮಾತ್ರ ಅದ್ಭುತ ರೋಮಾಂಚನಕಾರಿಯಾದುದು. ಇದು ಮಾನವ ಕುಲದ ಪ್ರಗತಿಯ ಹೆಜ್ಜೆ ಗುರುತೇ, ಲೂಯಿ ಬ್ರೈಲ್ ರಂತಹ ಮಹಾನ್ ನಾಯಕರು ಎಂದೆಂದಿಗೂ ಮಾನವಕುಲದ ಪ್ರಗತಿಯ ಮಾರ್ಗದರ್ಶಕರೇ ಆಗಿದ್ದಾರೆ. ಇಂತಹ ರೋಮಾಂಚನವನ್ನು ನಮ್ಮ ಕನ್ನಡದ ಮಣ್ಣಿನಲ್ಲಿ ಬಿತ್ತಿ ಬೆಳೆಯಲು ಆಶಿಸುವ ಲೇಖಕರ ಎಲ್ಲಾ ಪ್ರಯತ್ನಗಳೂ ಈಡೇರಲಿ ಎಂದು ಆಶಿಸುತ್ತೇನೆ.

‍ಲೇಖಕರು Admin

October 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: