ಕಣಗಿಲೆ ಒಡಲೊಳಗಿನ ಕೂಸು ನನ್ನೂರು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. 

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. 

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಒಳಗಿನ ಧ್ಯಾನಗಳಿಗೆ ಒಪ್ಪಿಸಿಕೊಳ್ಳುವ ಕ್ರಿಯೆಯೇ ಜಡಿಮಳೆ ಇದ್ದಂತೆ. ಊರ ಕುರಿತು ಬರೆಯುವಾಗ ಸಮಷ್ಠಿ ಮಗ್ನತೆಗಳಿಗೆ ಎದುರಾಗುವ ಕೌತುಕಗಳು ದೊಡ್ಡಳ್ಳದ ಕೈಹಿಡಿದು ನಿಲ್ಲುತ್ತವೆ. ನನ್ನೂರು ಈ ಹಳ್ಳದ ಜೊತೆ ಸಂಲಗ್ನಗೊಂಡು ಎರಡೂ ದಡಗಳಲ್ಲಿ ಅರಳಿ ನಿಂತ ಕಣಗಿಲೆ ಹೂಗಳ ಒಡಲೊಳಗೆ ಕೂಸಾಗಿ ಆಡುತ್ತದೆ.

ಕಣ್ಣಾಯಿಸಿದಷ್ಟು ವಿಶಾಲವಾಗಿ ಕಾಣುವ ‘ಹೊನ್ನುಕಿತ್ತಮಲ್ಡಿ’ (ಗುಡ್ಡ) ಅಂದರೆ ನಮ್ಮ ಪ್ರದೇಶದಲ್ಲಿ ಗುಡ್ಡಕ್ಕಿರುವ ಸಮಾನಾರ್ಥಕ ಪದ. ಇಲ್ಲಿಂದಲೇ ಊರಿಗೆ ಹೊನ್ನಿನ ಚೆರಿತೆ ಒಳಗಾಗಿದ್ದು. ಎಲ್ಲಾ ಊರುಗಳಿಗೂ ಇರುವ ಗುರುತುಗಳಂತೆ ನನ್ನೂರಿಗೂ ಒಂದು ಕಿರು ಇತಿಹಾಸವಿದೆ.

ಮಾರಗೊಂಡಯ್ಯ ಮಿಂಡ್ಗುದ್ಲಿ ಎನ್ನುವ ನಾಯಕ ಊರನ್ನು ಸಣ್ಣ ಕೋಟೆ ಕಟ್ಟಿಕೊಂಡು ಆಳಿದನಂತೆ. ಆದರೆ ಕುದುರೆ ಕಾಲಾಳು ರಥ ಕಿರೀಟಗಳ ಪ್ರಭುತ್ವದ ಭೀತಿಯ ನೆರಳೇನೂ ಈ ನೆಲದ ಉಸಿರಿಗೆ ಹಿಂಸೆಯನ್ನು ಪರಿಚಯಿಸಿಲ್ಲ. ಒಂದಾನೊಂದು ದಿನ ಕುರಿಗಾಹಿಗಳು ತಂದ ಸುದ್ದಿ ಊರ ಜನರ ನಿದ್ದೆ ಕಸಿಯಿತು. ಹೊತ್ತು ಹುಟ್ಟುವುದರೊಳಗೆ ಊರ ನಾಯಕ ಏಳು ಕೋಣಗಳ ಜೊತೆ ಸೇರಿ ಹೊನ್ನಿನ ಗುಡ್ಡ ಸೇರಿದನಂತೆ.

ಹೊನ್ನತೆನೆಗಳೊಡೆದು ಸಿರಿತಂದ ಮುಂಗಾರಿನಂತೆ ಮಿನುಗುತಿದ್ದ ಗುಡ್ಡದಲ್ಲಿ ಮೂಡಿದ ಎಲ್ಲಾ ಹೊನ್ನಿನ ತೆನೆಗಳನ್ನು ಅಗೆದು ಕೋಣಗಳ ಮೇಲೆ ಏರಿಕೊಂಡು ಊರಿನ ಆಚೆ ಇರುವ ಹುಣಸೇಮರದ ಬೀಳಿನಲ್ಲಿ ಊಣಿಸಿದ್ದಾನೆಂಬ ಕಥೆಯಿದೆ. ಇಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತಿತ್ತೆಂಬ ಕುರುಹುಗಳು ಈಗಲೂ ಇವೆ.

ಹೊನ್ನು ತಂದ ಮಾರಗೊಂಡಯ್ಯನು ಈ ಊರಿನ ಪ್ರಧಾನನಾಗಿದ್ದುದರಿಂದ ನನ್ನ ಊರಿಗೆ ಮಾರಗೊಂಡನಹಳ್ಳಿ ಎಂಬ ಹೆಸರು ಬಂದುದಾಗಿ ಪ್ರತೀತಿ.

ನಿತ್ಯವೂ ಈ ಹೊನ್ನಿನ ಗುಡ್ಡ ಹೊನ್ನ ತೆನೆಗಳನ್ನು ಅರಳಿಸಿದ ಕಾರಣ ಮಾರಗೊಂಡಯ್ಯ ಅಗೆಸಿ ಹೆಚ್ಚೆಚ್ಚು ತಂದು ಊರಿಂದ ಹೊರಗೆ ಇರುವ ಅರಳೀಮರಗಳ ಕೆಳಗೆ ಮತ್ತೆ ಊಣಿಸಿ ನಾಲ್ಕು ಕರಿಕಲ್ಲಿನ ಬೆನಕಗಳನ್ನಿಟ್ಟು ಪೂಜಿಸಿದನಂತೆ.

ಅಂದಿನಿಂದ ಊರ ಕಾಯುವ ಭೂತರಾಯನಾಗಿ ಈ ಬೆನಕಗಳು ಸಾಂಸ್ಕೃತಿಕ ಚಲನೆಗೆ ಎದುರಾಗಿವೆ. ಇಂತದ್ದೊಂದು ಬಂಗಾರದ ಕತೆಯನ್ನು ಮೀರಿ ಬೆಳೆದ ಸಹಜ ಸಿರಿ ಈ ಊರಿಗಿದೆ.

ಕಾಲದ ಪರಿವಿಲ್ಲದೆ ಹಾಡುವ ಹಕ್ಕಿ

ಕಾಲದ ನೆನಪಿಲ್ಲದೆ ಮಳೆ ಸುರಿಸುವ ಮೋಡ

ಕಾಲದ ಭಯವಿಲ್ಲದೆ ಹರಿವ ನದಿ… ಎಲ್ಲವನ್ನೂ ಒಪ್ಪವಾಗಿ ನಮ್ಮ ಕಣ್ಣುಗಳಲ್ಲಿ ಜೋಡಿಸಿಕೊಂಡರೆ ಬೆಳದಿಂಗಳು ಬೆಳಗುತ್ತದೆ. ಈ ಮಾರುಕಟ್ಟೆಯ ಜಗತ್ತಿನಲ್ಲಿ ನೌಕರಿ ಹಿಡಿದು ನಗರ ಸೇರಿದ ನನಗೆ ಊರು ತಣ್ಣಗೆ ಜೊತೆಯಾಗುತ್ತಲೆ ಇರುತ್ತದೆ. ಕೆಂಪು ನೆಲದಲ್ಲಿ ದೊಡ್ಡಪ್ಪನ ಜೊತೆ ಸೇರಿ ಬೇರಣಬೆ, ನೀರ್ತೊಡೆ ಎರಡು ರೀತಿಯ ಅಣಬೆಗಳನ್ನು ಸಿಬ್ಬಲಲ್ಲಿ ತುಂಬಿಕೊಂಡು ತಂದ ದಿನಗಳಲ್ಲಿಯೇ ನನ್ನ ಬಾಲ್ಯಕ್ಕೊಂದು ದಿವ್ಯ ಅನುಭೂತಿ ದಕ್ಕಿದ್ದು.

ಮೊದಲ ಮಳೆಯ ಅಕ್ಕಿಬೆಲ್ಲದ ಸವಿಯಿಂದ ಆರಂಭವಾಗುವ ಒಕ್ಕಲಿಗೆ ನೆಲಕೊಟ್ಟು ಫಲವನ್ನು ಕಣಜಗಳಿಗೆ ತುಂಬುವವರೆಗೆ ನಡೆಯುವ ಕೃಷಿ ಕೆಲಸಗಳು ಜೀವಪರ ನಿಲುವುಗಳನ್ನು ಮರುಸೃಷ್ಟಿಸಿಕೊಳ್ಳುತ್ತಾ ಋತುವಿನ ಬುಗುರಿ ತಿರುತ್ತದೆ.

ನನ್ನ ಊರಿನಲ್ಲಿ ಕಮ್ಮಾರಿಕೆ ಕಸುಬು ಮಾಡುವ ಅಯ್ಯಣ್ಣನ ಕೊಲುಮೆಯ ಕೆಂಡದಲ್ಲಿ ಹಸಿರಿದೆ. ಕೃಷಿ ಉಪಕರಣಗಳನ್ನು ಹದ ಮಾಡಿಸುವಾಗ ಅಪ್ಪನ ಜೊತೆ ಕುಳಿತು ಅವರಿಬ್ಬರ ಅನುಭವ ದರ್ಶನಕ್ಕೆ ಎದುರಾಗುವಾಗ ಕಾಲ ಹಾಗೂ ಬದುಕುಗಳು ಹೊಸದಾಗಿ ಕಂಡಿವೆ. ಕುಡ್ಲು, ಕುಜ್ರ್ಗೆ, ಗುದ್ಲಿ, ಮಡಿಕೆಗೆ ಬೇಕಾಗುವ ಸಣ್ಣ ಸಲಕರಣೆಗಳು ಅಗ್ಗಿಯೊಳಗೊಂದಾಗಿ ರೂಪುಗೊಳ್ಳುವಾಗ ಊರಿನ ಸುದ್ದಿಗಳೆಲ್ಲಾ ಅಲ್ಲಿ ಹದವಾಗಿ ಬೇಯುತ್ತವೆ. ನನ್ನೂರಿನ ತುಂಬಾ ಅನೇಕ ಬಗೆಯ ನೈಜ ಕಸುಬುಗಳಿಗೆ ಒಗ್ಗಿಸಿಕೊಂಡ ತಪಸ್ಸಿವೆ.

ಸೊಟ್ಟಮಾದಣ್ಣನೆಂದೇ ಹೆಸರಾದ ಈ ಜೀವ ನೆಟ್ಟಗೆ ಕಟ್ಟಿದ ಈಸ್ಲು (ಈಚಲು ಗರಿಗಳಿಂದ ಮಾಡಿದ್ದು) ಪೊರಕೆಗಳು ಊರ ಮನೆಗಳ ಕಸವನ್ನೆಲ್ಲಾ ತಿಪ್ಪೆ ಸೇರಿಸಿವೆ. ಈ ಮಾದಣ್ಣ ಶ್ರಮಜೀವಿ. ಹಗಲಿಡೀ ಈಚಲುಗರಿಗಳನ್ನು ಸಂಗ್ರಹಿಸಿ ಹದವಾಗಿ ಒಣಗಿಸಿ ಪೊರಕೆ ಕಟ್ಟಿ ಎರಡು ರೂಪಾಯಿಗೊಂದರಂತೆ ಮಾರುತ್ತಿದ್ದರು. ಕೊಟ್ಟು ತಂದ ಹೆಣ್ಣುಮಕ್ಕಳ ಮನೆಗೂ ಸಡಗರದಿಂದ ಈ ಪೊರಕೆಗಳು ಹೋಗುತ್ತವೆ.

ನಮ್ಮೂರಲ್ಲಿ ಪರಿಣಯಗಳು ನಡೆದರೆ ಕಲಾವಿದ ನೀಲಣ್ಣನ ಕೈಗಳು ಜಂತೆ ಸವರುತ್ತವೆ. ಈ ನೀಲಣ್ಣ ಬಣ್ಣದ ಕಾಗದಗಳ ಜೊತೆ ಬರದೇ ಹೋದರೆ ಮದುವೆ ಮನೆಗಳು ಬಿಕೋ ಎನಿಸುತ್ತವೆ. ಎಂಟು ದಿನಕ್ಕೆ ಮೊದಲೆ ಮದುವೆ ನಡೆಯುವ ಮನೆಗಳಲ್ಲಿ ನೀಲಣ್ಣ ಇರುತ್ತಾರೆ. ಶಿರಾ ಸಂತೆಯಿಂದ ಬರುವ ಬಣ್ಣದ ಕಾಗದಗಳು ವಿವಿಧ ಬಗೆಯ ಆಕಾರಗಳಾಗಿ ಕತ್ತರಿಸಿಕೊಂಡು ಮನೆಯ ತೀರುಗಳಿಗೆ ಸಿಂಗಾರವಾಗುತ್ತದೆ. ಈ ಬಣ್ಣದ ಕಾಗದಗಳು ಅಂಟಿಕೊಂಡ ಮೇಲೆ ಹೊರಗೊಂದು ಹಸಿರುಚಪ್ಪರ ಕೆಂಪುಕೇಸರಿ ಹೂವುಗಳನ್ನು ಕರೆಸಿಕೊಂಡು, ಆಲವಾಣದ ಗಳಗಳ ಜೊತೆ ಹೆಣಸಿಕೊಂಡು ರಂಗೇರುತ್ತದೆ. ಆಗಲೇ ಮದುವೆ ಮನೆಗೆ ಸಂಭ್ರಮದ ಹಿಗ್ಗು.

ಕವಿಯೊಬ್ಬರು ಹೇಳುವಂತೆ ಶಿಲ್ಪಿಯ ಅಂತರ್ಯದಲ್ಲಿದ್ದ ಅಪ್ರತಿಮ ಭಾಷೆ ಬೇಲೂರಾಗಿಯೋ, ಹಳೇಬೀಡಾಗಿಯೋ, ಅಜಂತ ಎಲ್ಲೋರಗಳಾಗಿಯೋ ಜೀವ ಪಡೆದು ಶಿಲೆಯ ಮೇಲೆ ಉಸಿರಾಡುತ್ತಿರುತ್ತದೆ. ಹಾಗೆಯೇ ನನ್ನೂರು ಸದಾ ಪೌರ್ಣಮಿಗೆ ಮುಖ ಮಾಡಿ ಹಲವು ಅಚ್ಚರಿಗಳಾಗಿ ವಿಕಸಿಸುತ್ತಲೇ ಸಾಗಿದೆ.

ವೈಯಕ್ತಿಕ ಹಾಗೂ ಬಾಹ್ಯ ಬದುಕಿನ ಸಾಂಸ್ಕøತಿಕ ವಿಸ್ತಾರವಾಗಿರುವ ನನ್ನೂರು ಮಳೆಗಾಲ ಬಂತೆಂದರೆ ಗಂಡು ಹೆಣ್ಣುಗಳೆಂಬ ಭೇದವಿಲ್ಲದೆ ಹಳ್ಳಕ್ಕೆ ಬೆಸೆದುಕೊಂಡು ಬಿಡುತ್ತದೆ. ದೊಡ್ಡ ಮಳೆಗೆ ಹೊಸ ನೀರು ಬಂದರೆ ಎಲ್ಲರ ಮನೆಯ ಕೊಡಮೆಗಳು ಹಳ್ಳ ಸೇರುತ್ತವೆ. ಸರಿರಾತ್ರಿಯಲ್ಲಿ ನೀರಿಗೆ ಕೊಡಮೆ ಕಟ್ಟಿ ಬಂದರೆ ನಸುಕಿಗೆ ಹೋಗಿ ಬಿಡಿಸುತ್ತಾರೆ. ಹಲವು ಬಗೆಯ ಮೀನುಗಳು ಕೊಡಮೆಯಲ್ಲಿ  ತುಂಬಿಕೊಂಡು ಮನೆಯ ಮುಂದಿನ ಹಾಸುಬಂಡೆಗಳಲ್ಲಿ ತೊಳೆಸಿಕೊಂಡು ಮೀನಿನ ಅಡುಗೆ ಸಿದ್ದಗೊಳ್ಳುವುದು.  ಬೆಂದ ಮೀನುಗಳನ್ನು ಮರದ ಮರಗೆಯ ಮೇಲೆ ಬಸಿದಿರುತ್ತಾರೆ. ದಿನವಿಡೀ ದೊಡ್ಡವರು ಚಿಕ್ಕವರೆನ್ನದೆ ಬಿಡಿಸಿಕೊಂಡು ತಿನ್ನುವ ಕೆಲಸಕ್ಕೆ ಎಡಗೈ ಬಲಗೈ ಮೈಲಿಗೆ ಅಡ್ಡಿಯಾಗಿಲ್ಲ.

ಗಿರ್ರ್ಲು, ಗೊದ್ಲೆ, ಕೊರ್ವ, ಕಾಮುನ್ ಕರ್ಕು, ಸೀಗ್ಡಿ, ಏಡಿ ಎಲ್ಲಾ ಬಗೆಯವು ಮಳೆಗಾಲ ಮುಗಿಯುವವರೆಗೆ ನಮಗೆ ನಿತ್ಯ ಆಹಾರ.

ತೆಂಗಿನ ಕಡ್ಡಿಗಳಿಂದ ಮೀನು ಹಿಡಿಯುವ ಕೊಡಮೆಗಳನ್ನು ತಾವೆ ಸ್ವತಃ ತಯಾರಿಸಿಕೊಳ್ಳುವ ಹಿರಿಯರು ಇರುಳಲ್ಲಿ ದಿನವೂ ಹಳ್ಳ ಸೇರುತ್ತಾರೆ. ಬೆಳಗಾದರೆ ಮೀನುಳಿಯ ಗಮಲಿನ ಗಾಳಿಗೆ ಸೋಲದ ಮನಸುಗಳಿಲ್ಲ.

ನಮ್ಮೊಳಗೆ ನಿರ್ಮಲ ಹಾಗೂ ಸತ್ಯದ ಕಾಳಜಿಗಳಿದ್ದರೆ ಯಾವುದೂ ನಮ್ಮನ್ನು ತೊರೆಯಲಾರದು ಎಂಬ ಮಾತಿದೆ. ನಮ್ಮನ್ನು ಬೆಳೆಸುವ ಮನಸುಗಳು, ಜಾಗಗಳು ಭಾವಸಾಂದ್ರತೆಯನ್ನು ಕಲಿಸದೇ ಹೋದರೆ ನಿಜದಿಕ್ಕು ಕಾಯಲಾರದು.

ಉರಿವ ಬಿಸಿಲಿನೊಳಗೆ ಅರಳಿ ನಗುವ ಹೂ ಸಾಲು ಮಳೆಯ ಭರವಸೆಯಂಥ ಎಳೆಯ ಮೊಡಗಳ ಸುಳಿವು, ಶಿಶಿರದ ನಡುವೆ ನುಸುಳಿ ಬರುವ ವಸಂತ, ಕಳಚಿಬೀಳುವ ಹಾಗೂ ಪುನಃ ಚಿಗುರುವ ಆಯುಷ್ಯದ ಲೀಲೆ ಎಲ್ಲವೂ ಸೇರಿ ಮೌನವನ್ನು ಕಲಿಕೆಯ ಮಹಾ ಧ್ಯಾನವಾಗಿಸಿಕೊಳ್ಳಬೇಕೆಂಬ ಒಳಗಿನ ಚೈತನ್ಯ ಹಾಗೂ ಹೊರಗಿನ ಅನಿವಾರ್ಯ ಎರಡರ ನಡುವೆಯೂ ಸಂಬಂಧ ಸ್ಥಾಪಿಸಿವೆ.

ಮುಂಜಾನೆಯ ಮಂಜಿನೊಳಗೆ

ಹೊಳಪ ತೋರಿ ನಗುವ ಹೂವು

ಇಡೀ ರಾತ್ರಿ ಮೊಗ್ಗೊಳಗೆ ಅದಾವ ಪರಿಯ

ಸಿದ್ದತೆ ನಡೆಸಿರಬಹುದು.

ಭೌತಿಕವಾಗಿ ನಗರದಲ್ಲಿದ್ದರೂ ಕೂಡ ನನ್ನೂರಿನ ಮಳೆಯ ಶಬುದಕ್ಕೆ ಕಿವಿಯಾನಿಸಿ ಪುಳಕಗೊಳ್ಳುತ್ತೇನೆ.

August 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vishwas

    ಊರಿಗೆ ಮಾನವನ ‌ರೂಪಕೊಟ್ಟರೆ, ಅಕ್ಕನ ಈ ಪದಜೋಡಣೆಯಿಂದ ಚಿತ್ರಿಸುವ ಪರಿಯೇ ಅದಕ್ಕೆ ‘ಜೀವ’ ಹಾಗೂ ಅಲ್ಲಿನ ಪ್ರಕೃತಿಯ ವರ್ಣನೆ ಅದಕ್ಕೆ ‘ದೇಹ’ ಕೊಟ್ಟಂತೆ, ಮನಸ್ಸಿಗೆ ಮುದ ನೀಡಿತು.

    ಪ್ರತಿಕ್ರಿಯೆ
  2. Udaykumar G S

    “ಆಧ್ಯಾತ್ಮಕ್ಕಿಂತ ಮೋಹ ಹುಟ್ಟಿಸುವ ಭಾವ ಎನ್ನುವಂತೆ” ತನ್ನೂರಿನ ಒಡಲಾಳದ ಆತ್ಮಸುಖವನ್ನು ಓದುಗನ ಜೇಬುಗಳಿಗೆ ತುಂಬಿ ಮಣ್ಣಿನೊಟ್ಟಿಗೆ ಬೆಳೆದವನಿಗೆ ಬೆಳಗುವ ದೀಪದಂತೆ ಕಟ್ಟಡದೊಟ್ಟಿಗೆ ಬೆಳೆದವನಿಗೆ ಬತ್ತಿ ಇಲ್ಲದ ದೀಪದಂತೆ ಭಾಸವಾಗುವ ಎಲ್ ಗೀತಾಲಕ್ಷ್ಮಿ ಮೇಡಂ ರವರ ನೆನಕೆಗಳು ಭಾವ ಸಾಂದ್ರತೆಯನ್ನು ಪಡೆದು, ಸನ್ನಿವೇಶದ ಒಂದೊಂದು ತರಂಗಗಳು ನಮ್ಮನ್ನು ಸುತ್ತುವರೆಯುತ್ತಾ ಮೆಲುಕಾಗಿ ಉಳಿಯುವ ಆ ದಿನಗಳನ್ನು ಧೇನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: