ಕಟ್ಟುವವರ ಮಕ್ಕಳ ಕಾಯುವವರಾರು?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

‘ಸಂಪತ್ತು ಸೃಷ್ಟಿಸಿ ದೇಶ ಕಟ್ಟುವವರೆಂದರೆ ಹೊಲ ಗದ್ದೆಗಳಲ್ಲಿ ಬೆಳೆ ತೆಗೆಯುವವರು, ರಸ್ತೆ ಮಾಡುವವರು, ಮನೆ, ಕಾರ್ಖಾನೆ, ಅಣೆಕಟ್ಟು ಕಟ್ಟುವ ಕೆಲಸಗಾರರು, ಜನರ ಬಳಕೆಗಾಗಿ ವಸ್ತುಗಳನ್ನು ತಯಾರಿಸುವವರು, ಸಾರಿಗೆ ವಾಹನಗಳ ಚಾಲಕರಾದಿ ಸಿಬ್ಬಂದಿ, ವಾಹನ ರಿಪೇರಿಗಾರರು, ಗಣಿಗಳ ಆಳಕ್ಕಿಳಿದು ಅದಿರುಗಳನ್ನು ತೋಡಿ ಮೇಲೆತ್ತಿ ಕೊಡುವ ದುಡಿಮೆಗಾರರು… ಹೀಗೆ ನಾನಾ ವಿಧದ ಶ್ರಮಜೀವಿಗಳು. ಈ ಜನರಿಗೆ ಕಷ್ಟ ಬರಬಾರದು. ಅವರಿಗೆ ಸಮರ್ಪಕವಾದ ಮಜೂರಿ ದೊರೆಯಬೇಕು. ಅವರ ಮಕ್ಕಳು, ಕುಟುಂಬ ನೆಮ್ಮದಿಯಿಂದ ಬೆಳೆಯಬೇಕು.ʼ ಎಪ್ಪತ್ತರ ದಶಕದಲ್ಲಿ ನಮ್ಮ ಅಪ್ಪ ಎನ್.ವಿಶ್ವನಾಥ್‌ ಆಗಾಗ್ಗೆ ಹೇಳುತ್ತಿದ್ದ ಮಾತು ನನ್ನ ಕಿವಿಗೆ ಬೀಳುತ್ತಿತ್ತು  

ನನಗದು ಆಗ ಎಷ್ಟರ ಮಟ್ಟಿಗೆ ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಅಪ್ಪ ಆಗ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಉದ್ಯೋಗಿಯಾಗಿದ್ದರು. ಗ್ರಾಮೀಣ ಗೃಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಮಂಡಳಿಯ ಪರವಾಗಿ ಊರೂರು ಸುತ್ತುತ್ತಿದ್ದರು. ಕುಂಬಾರರು, ಕಮ್ಮಾರರು, ಬಡಗಿಗಳು, ಮರದಲ್ಲಿ ಆಟಿಕೆಗಳನ್ನು ಮಾಡುವವರು, ಚಿಕ್ಕಪುಟ್ಟ ಗೃಹಕೈಗಾರಿಕೆಗಳನ್ನು ನಡೆಸುವವರು, ಗಾಣಿಗರು, ಸೋಪು ತಯಾರಿಸುವವರು, ಜೇನು ಕೃಷಿ ಮಾಡುವವರು, ಚರ್ಮೋದ್ಯಮದ ಚಮ್ಮಾರರು, ಕೈಯ್ಯಿಂದ ಭತ್ತ ಕುಟ್ಟಿ ಅಕ್ಕಿ ಮಾಡುವವರು, ಅವಲಕ್ಕಿ/ ಮಂಡಕ್ಕಿ (ಪುರಿ) ತಯಾರಿಸುವವರು, ಬಡಗಿಗಳು, ಕಮ್ಮಾರರು, ಕತ್ತಾಳೆ/ಪುಂಡಿ ಇತ್ಯಾದಿ ನಾರುಗಳಿಂದ ಹಗ್ಗ ಹೊಸೆಯುವವರು… ಹೀಗೆ ನೂರಾರು ಜನರ ನಡುವೆ ಮಾತನಾಡಿ ಅವರ ಕಷ್ಟು ಸುಖ ತಿಳಿದು ಅವರಿಗಾಗಿ ಯೋಜನೆಗಳನ್ನು ಸಿದ್ಧಪಡಿಸಿ ಸಹಕಾರ ಸಂಘಗಳನ್ನು ಪ್ರೋತ್ಸಾಹಿಸಿ, ಸಾಲ ವ್ಯವಸ್ಥೆ ಮಾಡಿಸಿ ಅವರು ಬಾಳು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದ ಮಂಡಳಿಯ ನೂರಾರು  ಕಾರ್ಯಕರ್ತರ ತಂಡದಲ್ಲಿ ಒಬ್ಬರಾಗಿದ್ದವರು ನನ್ನ ಅಪ್ಪ.

ಬೆಂಗಳೂರಿನ ಕಾರ್ಪೊರೇಷನ್‌ ಕಛೇರಿ ಹತ್ತಿರವಿರುವ ದೇವಾಂಗ ಭವನದಲ್ಲಿ ನಡೆದ ಒಂದು ಕಾರ್ಯಕ್ರಮಕ್ಕೆ ಅಪ್ಪ ನನ್ನನ್ನು ಒಮ್ಮೆ ಕರೆದೊಯ್ದಿದ್ದರು. ನನಗಾಗ ಹತ್ತೋ ಹನ್ನೆರಡೋ ವರ್ಷ. ಅಲ್ಲಿ ಆ ದಿನ ಚರ್ಮೋದ್ಯಮಿಗಳ ಒಂದು ಸಭೆ. ಅಲ್ಲಿಗೆ ದಲಿತ ಸಂಘರ್ಷ ಸಮಿತಿಯ ಕೆಲವು ಪ್ರತಿನಿಧಿಗಳು ಬಂದಿದ್ದರು. ಮಧ್ಯಾಹ್ನದವರೆಗೆ ಹಲವರ ಭಾಷಣಗಳು, ಹಾಡುಗಳನ್ನೂ ಕೇಳಿದೆವು. ಅಪ್ಪ ತದೇಕಚಿತ್ತರಾಗಿ ಅವರ ಮಾತುಗಳನ್ನು ಆಲಿಸುತ್ತಿದ್ದರು. ಆಗ ನನಗೆ ಆ ಭಾಷಣಗಳು/ವಿಚಾರಗಳು ಅಷ್ಟೇನೂ ಅರ್ಥವಾಗಿರಲಿಲ್ಲ. ತಿಳಿದ ಒಂದೆರಡು ವಿಷಯಗಳು, ‘ದೇಶದ ಬಡವರಲ್ಲಿ ಹಿಂದುಳಿದ ಜಾತಿ ವರ್ಗಗಳಿಗೆ ಸೇರಿದವರೇ ಹೆಚ್ಚು. ಅವರಿಗೆ ಭೂಮಿಯಿಲ್ಲ ಮತ್ತು ಕೆಲಸಗಾರರಿಗೆ ಕೂಲಿ ಸಿಗುವುದಿಲ್ಲ, ಶಿಕ್ಷಣವಿಲ್ಲ. ಇವು ಸಿಗುವಂತೆ ಆಗಬೇಕುʼ.

ನಂತರದ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯ ನಿಲುವು ಉದ್ದೇಶಗಳು ಇವುಗಳೊಂದಿಗೆ ಪ್ರಾತಿನಿಧಿತ್ವ, ಸಮಾನತೆ ಎಂಬಿವೇ ವಿಚಾರಗಳು ಅಧ್ಯನಗಳು, ಸಮಾಲೋಚನೆಗಳಿಂದ ಅರಿವಿಗೆ ಬಂದಿತು. ದೇವಾಂಗ ಭವನದಲ್ಲಿ ಆ ಸಭೆ ನಡೆಯುತ್ತಿದ್ದ ಅದೇ ದಿನ ಆ ಸಭಾಂಗಣದ ಎದುರು ಇದ್ದ ದೊಡ್ಡ ನಿವೇಶನದ ಬಯಲಿನಲ್ಲಿ ಆನಂದ ಮಾರ್ಗಿಗಳ ಸಭೆಯೂ ನಡೆಯುತ್ತಿತ್ತು. (ಸಭೆಯ ಪ್ರವೇಶದ್ವಾರದಲ್ಲಿ ಕಾವಲು ನಿಂತಿದ್ದವರು ಆನಂದ ಮಾರ್ಗಿಗಳ ಗುಂಪಿನವರನ್ನಲ್ಲದೆ ಬೇರೆಯವರನ್ನು ಒಳಗೆ ಪ್ರವೇಶಿಸಲು ಬಿಡುತ್ತಿರಲಿಲ್ಲ.)

ಬೆಂಗಳೂರಿಗೆ ವಾಜಪೇಯಿ, ಬಾಬು ಜಗಜೀವನರಾಂ, ಇಂದಿರಾಗಾಂಧಿ, ಸಂಜಯ್‌ ಗಾಂಧಿ ಇತ್ಯಾದಿ ನಾಯಕರು ಬಂದು ಭಾಷಣ ಮಾಡಿದಾಗ ಅಪ್ಪ ನನ್ನನ್ನು ಮತ್ತು ನನ್ನ ಮೂರನೇ ಅಕ್ಕನನ್ನು ಸೈಕಲ್‌ ಮೇಲೆ ಕೂಡಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಮಲ್ಲೇಶ್ವರಂನಲ್ಲಿ ಪೊಲೀಸ್‌ ಸ್ಟೇಷನ್‌ ಎದುರಿನ ಬಯಲಿನಲ್ಲಿ ನಡೆಯುತ್ತಿದ್ದ ಸಭೆಗಳು, ಸುಭಾಷ್‌ ನಗರ ಮೈದಾನ ಅಥವಾ ಧರ್ಮಾಂಬುಧಿ ಕಲ್ಯಾಣಿ ಕೆರೆ (ಈಗಿನ ಬಸ್‌ ಸ್ಟಾಂಡ್‌)ಯಲ್ಲಿ ನಡೆಯುತ್ತಿದ್ದ ಬೃಹತ್‌ ಬಹಿರಂಗ ಸಭೆಗಳು, ಒಂದೆರಡು ಬಾರಿ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನಕ್ಕೂ ಹೋಗಿದ್ದ ನೆನಪು.

ಅಪ್ಪ ನಮ್ಮನ್ಯಾಕೆ ಇಂತಹ ಸಭೆಗಳಿಗೆ ಕರೆದೊಯ್ಯುತ್ತಿದ್ದರು ಎಂದು ಅನೇಕ ಬಾರಿ ಯೋಚಿಸಿದ್ದೆ. ಯಾಕೆ ಎಂದು  ಕೇಳಿದ್ದೆನೋ ಇಲ್ಲವೋ ನೆನಪಿಲ್ಲ. ಆದರೆ ಅವುಗಳಲ್ಲಿ ಏನೋ ವಿಶೇಷವಿರಬೇಕೆಂಬ ಅಂದಾಜಿತ್ತು. ಯಾಕೆ ಕರೆದೊಯ್ಯುತ್ತಿದ್ದೆ ಅಂತ ಅಪ್ಪನನ್ನ ಈಗ ಕೇಳಿದರೆ ನಸುನಕ್ಕು, ಜಗತ್ತಿನ ಜನಜೀವನದ ವಾಸ್ತವಗಳನ್ನು ತಿಳಿಯಬೇಕೆಂದರೆ ಆ ಕುರಿತ ಚಿಂತನೆಗಳ, ರಾಜಕೀಯ ನಿಲುವುಗಳ, ವಾದಗಳ ಹಲವು ಆಯಾಮಗಳನ್ನು ಕೇಳಬೇಕು, ನೋಡಬೇಕು, ಓದಬೇಕು, ಅದರ ಮೂಲಕ ನಿಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಬೇಕು, ಅದಕ್ಕಾಗಿ ಕರೆದೊಯ್ಯುತ್ತಿದ್ದೆ ಎನ್ನುತ್ತಾರೆ.

***

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ ಕಾಲಕ್ಕೆ, ಸಂಪತ್ತು ಸೃಷ್ಟಿಸುವವರು ಯಾರು, ದೇಶ ಕಟ್ಟುವವರು ಯಾರು, ಅವರ ಕಷ್ಟ-ಸುಖಗಳೇನು ಏನು ಎಂಬುದು ಸ್ವಲ್ಪ ಸ್ವಲ್ಪ ಅರ್ಥವಾಗತೊಡಗಿತ್ತು. ಸಮಾಜಕಾರ್ಯ ಅಧ್ಯಯನ, ಅದರ ಕ್ಷೇತ್ರಕಾರ್ಯದ ಸಮಯದಲ್ಲಿ ಈ ಕಷ್ಟಗಳೇನು, ಅವುಗಳಿಗೆ ಏನು ಕಾರಣ, ಅವುಗಳನ್ನು ಪರಿಹರಿಸಲು ನಡೆದಿರುವ ಯತ್ನಗಳೇನು ಎಂಬುದು ಪ್ರೊ. ಎಚ್.ಎಂ. ಮರುಳಸಿದ್ದಯ್ಯನವರು, ಪ್ರೊ. ಎಲ್.ಎಸ್. ಗಾಂಧೀದಾಸ್ ಮತ್ತು ಡಾ. ರಾಜೇಂದ್ರಕುಮಾರ್ ಅವರ ಒಡನಾಟ, ಮಾತುಕತೆಗಳಲ್ಲಿ ಕ್ರಮೇಣ  ಸ್ಪಷ್ಟವಾಗುತ್ತಿತ್ತು.

ಸಮಾಜಕಾರ್ಯ ವೃತ್ತಿಯಲ್ಲಿ ತೊಡಗಿಕೊಂಡಾಗ, ಅದರಲ್ಲೂ ವಯಸ್ಕರ ಶಿಕ್ಷಣ ಆಂದೋಲನಗಳಲ್ಲಿ ಭಾಗಿಯಾಗಿ ಸಾಕಷ್ಟು ಜಿಲ್ಲೆಗಳಲ್ಲಿ ತರಬೇತಿಗಳನ್ನು ನಡೆಸಿದಾಗಿ (೧೯೯೦-೯೧) ಮತ್ತು ೧೯೯೨ರಲ್ಲಿ ಕ್ರೈ ಚೈಲ್ಡ್‌ ರಿಲೀಫ್‌ ಅಂಡ್‌ ಯೂ -‌ ಸಂಸ್ಥೆಯ ಕಾರ್ಯಕರ್ತನಾಗಿ ಸೇರಿ, ರಾಜ್ಯದಾದ್ಯಂತ ಓಡಾಡುತ್ತಿದ್ದಾಗ ಅಪ್ಪ ಹೇಳುತ್ತಿದ್ದ ದೇಶ ಕಟ್ಟುವವರನ್ನು ಇನ್ನೂ ಹತ್ತಿರದಿಂದ ನೋಡುವ ತಿಳಿಯುವ ಅವಕಾಶ ಒದಗಿತ್ತು. ಅಪ್ಪನ ಮಾತಿನ ಎರಡನೇ ಭಾಗವೂ ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು ದೇಶ ಕಟ್ಟುವವರ, ದೇಶಕ್ಕಾಗಿ ಸಂಪತ್ತು ಸೃಷ್ಟಿಸುವವರ ಹಾಡು ಪಾಡು ಮತ್ತು ಅವರ ಮಕ್ಕಳ ಪರಿಸ್ಥಿತಿ.

ಅಂತಹದೊಂದು ಮುಖಾಮುಖಿ ಬೆಂಗಳೂರಿನ ಕಟ್ಟಡ ನಿರ್ಮಾಣ ಮಾಡುವವರೊಡನೆ ಆಯಿತು. ಅದಕ್ಕೆ ಕಾರಣವಾದುದು ಬೆಂಗಳೂರಿನ ಔಟ್‌ ರೀಚ್‌ ಸಂಸ್ಥೆಯ ಜೇಮ್ಸ್‌ ಮಾಸ್ಕೆರೇನಸ್‌ ಅವರೊಡನೆಯ ಒಡನಾಟ (೧೯೯೩-೯೪). ಆಗಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದ್ದ ಪಿ.ಆರ್.ಎ – ಪಾರ್ಟಿಸಿಪೇಟರಿ ರೂರಲ್‌ ಅಪ್ರೈಸಲ್‌ (ಜನರ ಸಂಪರ್ಕದಲ್ಲಿ ಗ್ರಾಮೀಣ ಪರಿಸ್ಥಿತಿಗಳನ್ನು ಅರ್ಥೈಸಿಕೊಳ್ಳುವುದು), ಇದರಲ್ಲಿ ತರಬೇತುದಾರರಾಗಿದ್ದವರು ಈ ಜೇಮ್ಸ್. ಅವರ ಹೆಸರನ್ನು ಚಿಕ್ಕದಾಗಿ ಜಿಮ್ಮಿ ಎಂದು ಕರೆಯುತ್ತಿದ್ದರು. ಕ್ರೈ ತಂಡಕ್ಕೆ ಪಿ.ಆರ್‌.ಎ. ವಿಧಾನಗಳನ್ನು ಕಲಿಸಲು ಜಿಮ್ಮಿ ಲೋನಾವಾಲಾದಲ್ಲಿ ಒಮ್ಮೆ ಮತ್ತು ಹೈದರಾಬಾದಿನಲ್ಲಿ ಇನ್ನೊಮ್ಮೆ ತರಬೇತಿ ಶಿಬಿರಗಳನ್ನು ನಡೆಸಿದ್ದರು.

ಮೊದಲ ತರಬೇತಿ ನಡೆದಾಗ ಕ್ರೈ ಸಂಸ್ಥಾಪಕರಾದ ರಿಪ್ಪನ್‌ ಕಪೂರ್‌ ಅವರು ಕೂಡಾ ಇದ್ದರು. ಅದು ಹೇಗೋ, ಜಿಮ್ಮಿಗೂ ನನಗೂ ಬಹಳ ಸ್ನೇಹವಾಯಿತು. ಅವರು ಹೇಳುತ್ತಿದ್ದ ಕೆಲವು ಕಲ್ಪನೆಗಳು, ಸಿದ್ಧಾಂತಗಳನ್ನು ನಾನು ಸರಳವಾಗಿ ವಿವರಿಸುತ್ತಾ, ಅವರೊಡನೆ ಪಿ.ಆರ್‌.ಎ.ನಲ್ಲಿ ಬಳಸುವ ಚಿತ್ರಗಳನ್ನು ನಿರ್ಮಿಸುವುದು, ಹಳ್ಳಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಚಿತ್ರಣಗಳನ್ನು ಬಿಡಿಸುವುದು (ಋತುಮಾನಗಳು, ಹಳ್ಳಿಯ ನಕ್ಷೆ, ಚಪಾತಿ ಡಯಾಗ್ರಾಮ್‌ ಇತ್ಯಾದಿ) ಮತ್ತು ಅವನ್ನು ಅರ್ಥೈಸುವುದು ಇತ್ಯಾದಿಗಳಲ್ಲಿ ತೊಡಗಿಕೊಂಡೆ.

ಇಂತಹದೊಂದು ಚರ್ಚೆಯಲ್ಲಿ ಬಂದಿದ್ದ ವಿಚಾರ ವಲಸೆ ಅಥವಾ ಗುಳೆ ಹೋಗುವುದು. ಬರದಿಂದ ಕಂಗೆಟ್ಟ ಜನ ಉದ್ಯೋಗಗಳನ್ನು ಅರಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರಗಳತ್ತ ಸಾಗುವುದು, ಅಲ್ಲಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಬದುಕು ಸವೆಸುವುದು. ಚರ್ಚೆಯಲ್ಲಿ ಮಾತನಾಡಿದ ಹೆಚ್ಚಿನ ಜನರು ಕಟ್ಟಡ ನಿರ್ಮಾಣದಲ್ಲಿ ಮತ್ತು ಸಹಾಯಕರಾಗಿ ದುಡಿಯುವ ಕಾರ್ಮಿಕರನ್ನೆ ಉದಾಹರಿಸಿ  ಹೇಳಿದರು. ಮುಂಬೈ ಮತ್ತು ದೆಹಲಿಯ ನಮ್ಮ ಸಂಸ್ಥೆಯ ಪ್ರತಿನಿಧಿಗಳಿಗೆ ಅದು ಬಹಳ ಸಾಮಾನ್ಯವಾಗಿತ್ತು. ನಾನು ಬೆಂಗಳೂರಿನತ್ತ ದೃಷ್ಟಿ ಹಾಯಿಸಿದೆ.

ಬೆಂಗಳೂರು ಆಗ ಶೀಗ್ರ ಗತಿಯಲ್ಲಿ  ಬೆಳೆಯುತ್ತಾ ವಿಸ್ತಾರಗೊಳ್ಳುತ್ತಿತ್ತು. ಅಷ್ಟೇ ಅಲ್ಲ ಮೇಲ್ಮುಖವಾಗಿಯೂ ಬಾಹುಗಳನ್ನೆತ್ತಿ  ಹಬ್ಬುತ್ತಿತ್ತು. ಎತ್ತೆತ್ತಲೂ ಚಿಕ್ಕಪುಟ್ಟ ದೊಡ್ಡ ಬಹುಮಹಡಿ ಕಟ್ಟಡಗಳು ಏಳುತ್ತಿದ್ದವು. ತಮಿಳುನಾಡು, ಆಂಧ್ರಪ್ರದೇಶವಷ್ಟೇ ಅಲ್ಲದೆ ಉತ್ತರ ಭಾರತದಿಂದಲೂ ವಲಸೆ ಬಂದ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿದ್ದರು. ಅವರ ನಡುವೆ ಎದ್ದು ಕಾಣುತ್ತಿದ್ದವರು ನಮ್ಮ ಉತ್ತರ ಕರ್ನಾಟಕದ ಮಂದಿ. ಗಂಡಸರು ಅಚ್ಚಬಿಳಿಯ ಧೋತಿ, ಜುಬ್ಬಾ ಧರಿಸಿಕೊಂಡು ಜೀರ್‌ ಜೀರ್‌ ಎನ್ನುವ ಚಡಾವು ಮೆಟ್ಟಿ ಓಡಾಡುತ್ತಿದ್ದರು. ಅವರ ಕಿವಿಗಳಲ್ಲಿ ಚಿನ್ನದ ಹತ್ತಕಡಕು, ಕೆಲವರ ಮುಂಗೈನಲ್ಲಿ ಬೆಳ್ಳಿಯದೋ ಬಂಗಾರದ್ದೋ ಕಡಗ, ಹತ್ತಿ ಸೀರೆಯ ಹೆಂಗಸರ ಕೈಗಳಲ್ಲಿ ಕುತ್ತಿಗೆ, ಕಿವಿಗಳಲ್ಲಿ ಬಂಗಾರ ಬಹಳ ಸಾಮಾನ್ಯವಾಗಿತ್ತು. ಜೊತೆಯಲ್ಲಿ ಕನಿಷ್ಠ ಮೂರ್ನಾಲ್ಕು ಮಕ್ಕಳು. ಅಂತಹ ಆಭರಣಗಳಿಲ್ಲದ ಮಂದಿಯೂ ಸಾಕಷ್ಟಿದ್ದರು.

ಅಷ್ಟು ಹೊತ್ತಿಗೆ ಜಿಮ್ಮಿ, ಔಟ್‌ರೀಚ್‌ ಸಂಸ್ಥೆಯ ಮೂಲಕ ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಸೌಲಭ್ಯಗಳನ್ನು ಒದಗಿಸಬೇಕೆಂದು ಅವರ ಸಂಖ್ಯೆ, ಅವರ ಆವಶ್ಯಕತೆಗಳು, ಅವರು ಬೆಂಗಳೂರಿನಲ್ಲಿ ಎಲ್ಲೆಲ್ಲಿ ಹರಡಿಕೊಂಡಿದ್ದಾರೆ ಇವೇ ಮೊದಲಾದವುಗಳನ್ನು ಕುರಿತು ಅಧ್ಯಯನ ಆರಂಭಿಸಿದ್ದರು. ಕ್ರೈ ಪರವಾಗಿ ನಾನು ಸ್ವಲ್ಪ ಅನೌಪಚಾರಿಕವಾಗಿ, ಸ್ವಲ್ಪ ಅಧಿಕೃತವಾಗಿ ಅವರೊಡನೆ ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಓಡಾಡಿದೆ.

ನೆರೆ ರಾಜ್ಯಗಳು ಮತ್ತು ಉತ್ತರದ ರಾಜ್ಯಗಳಿಂದ ಬಂದ ಕಾರ್ಮಿಕರಲ್ಲಿ ಅನೇಕರಿಗೆ ಕಟ್ಟಡ ನಿರ್ಮಾಣ ಕುರಿತು ಒಂದಷ್ಟು ಕೌಶಲ್ಯಗಳಿತ್ತು. ಅವರಿಗೆ ಸಿಗುವ ಮಜೂರಿ/ಕೂಲಿ ಆಗಿನ ಕಾಲಕ್ಕೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಉತ್ತಮವಾಗಿತ್ತು. ಆದರೆ ನಮ್ಮ ಉತ್ತರ ಕರ್ನಾಟಕದಿಂದ ಬಂದವರಲ್ಲಿ ಹೆಚ್ಚಿನವರು ಒಕ್ಕಲುತನದಲ್ಲಿದ್ದವರು. ಅವರಿಗೆ ಕಟ್ಟಡ ಕೌಶಲ್ಯ ತಿಳಿಯದು. ಈ ಜನ ಕಟ್ಟಡ ನಿರ್ಮಾಣ ನಿವೇಶನದಲ್ಲಿ ಕಾವಲುಗಾರರು ಮತ್ತು ಕಲ್ಲು ಮಣ್ಣು, ಸಿಮೆಂಟ್‌, ಇಟ್ಟಿಗೆ, ಕಬ್ಬಿಣವೇ ಮೊದಲಾದವುಗಳನ್ನು ಕೆಳಗಿನಿಂದ ಮೇಲಕ್ಕೆ ಹೊರೆ ಹೊರುವವರು. ಇವರ ಮಜೂರಿ ಅಷ್ಟೇನೂ ಹೇಳಿಕೊಳ್ಳುವಷ್ಟಿರಲಿಲ್ಲ. ʼನಾವು ಇಲ್ಲಿ ಇರುವುದಿಲ್ಲ. ಊರಲ್ಲಿ ಮಳೆ ಆದರೆ ಹೊರಟು ಹೋಗುತ್ತೇವೆʼ ಎಂದೇ ಅವರ ಮಾತು ಮೊದಲಾಗುತ್ತಿತ್ತು.

ಆದರೆ ಈ ಜನ ಹಿಂದಕ್ಕೆ ಹೋದದ್ದು ಕಡಿಮೆ. ಅವರ ಚಿನ್ನ ಕರಗಿತು. ಬಿಳಿಯ ಪಂಚೆ ಮಾಸಲಾಯಿತು. ಕಾರಣ ಬಹುತೇಕರನ್ನು ಹಳ್ಳಕ್ಕೆಳೆದು ಹಿಡಿದಿಟ್ಟುಕೊಂಡ‌ ಹಾಳು ಕುಡಿತ. ಉತ್ತರ ಕರ್ನಾಟಕದಿಂದ ವಲಸೆ ಬಂದವರು ಅವರವರದೇ ಹೆಸರುಗಳಲ್ಲಿ (ಕಲ್ಬುರ್ಗಿ ಕಾಲೋನಿ, ರಾಯಚೂರು ಕಾಲೋನಿ, ಯಾದ್ಗೀರಿ ಕಾಲೋನಿ) ಬೆಂಗಳೂರಿನ ಸುತ್ತಮುತ್ತ ವಾಸಿಸುತ್ತಿದ್ದಾರೆ. ಅವರು ಅವರ ಮಕ್ಕಳು ಈಗ ಬೆಂಗಳೂರಿನವರೇ ಆಗಿದ್ದಾರೆ. 

ಮುಂದಿನ ಕೆಲವೇ ದಿನಗಳಲ್ಲಿ ಜಿಮ್ಮಿ ವರದಿಯೊಂದನ್ನು ಕ್ರೈ ಜೊತೆ ಹಂಚಿಕೊಂಡರು. ಕಟ್ಟಡ ನಿರ್ಮಾಣದ ಹಲವು  ಹಂತಗಳಲ್ಲಿ ಕೆಲಸ ಮಾಡುವ ಜನರ ವಿವಿಧ ಸ್ವರೂಪಗಳು, ಪಾಯಕ್ಕೆ ನೆಲ ಅಗಿಯುವವರು, ಕಲ್ಲು ಹಾಕುವವರು, ಕಂಬಿ ಕಟ್ಟುವವರು, ಗೋಡೆ ಕಟ್ಟುವವರು, ತಾರಸಿಯ ಕೆಲಸದವರು, ಸಿಮೆಂಟ್‌ ಸಾರಣೆ ಮಾಡುವವರು, ಮರಗೆಲಸದವರು, ಎಲೆಕ್ಟ್ರಿಕಲ್‌ ವೈರಿಂಗ್‌ ಕೆಲಸದವರು, ನೆಲಕ್ಕೆ ಮೊಸಾಯಿಕ್ ಬಿಲ್ಲೆ ಅಥವಾ ಗ್ರಾನೈಟ್‌ ಕಲ್ಲು ಹಾಕುವವರು, ಹೀಗೇ ಅದೆಷ್ಟೊಂದು ಕೆಲಸಗಳ ಜನರು. ಅವರಿಗೆ ಕೊಡುವ ಮಜೂರಿ ಮತ್ತು ಆ ಕೆಲಸಗಳನ್ನು ಮಾಡುವ ಜನರ ಪರಿಸ್ಥಿತಿ ಇತ್ಯಾದಿ ವಿವರಗಳು ಅದರಲ್ಲಿತ್ತು. ಆ ವರದಿಯ ಬಹು ಮುಖ್ಯವಾದ ಭಾಗ ಪಾಯ ಅಗೆಯುವವರು ಮತ್ತು ಕೇವಲ ಸಹಾಯಕ ಕೆಲಸ ಮಾಡಿಕೊಂಡು ಕಾವಲುಗಾರರಾಗಿ ಇರುವ ಕುಟುಂಬಗಳ ಮಕ್ಕಳ ದುಸ್ಥಿತಿ ಕುರಿತಾಗಿತ್ತು.

ಕಟ್ಟಡ ನಿರ್ಮಾಣದ ಸಮಯದಲ್ಲಿ ಮಕ್ಕಳು ಎಲ್ಲೆಡೆ ಓಡಾಡುತ್ತಿರುತ್ತಾರೆ. ಬೇರೆಬೇರೆ ರೀತಿಯ ಅಪಾಯಗಳಿಗೆ ಈಡಾಗುತ್ತಾರೆ. ಅಷ್ಟರಲ್ಲಾಗಲೇ ಕಟ್ಟಡ ನಿರ್ಮಾಣಕ್ಕೆಂದೇ ಮಾಡಿಕೊಂಡಿರುವ ನೀರಿನ ತೊಟ್ಟಿಯಲ್ಲಿ ಬಿದ್ದು ಸತ್ತ ಮಕ್ಕಳು, ಮೊದಲ ಮಹಡಿಯೋ ಎರಡನೆಯದೋ ಎಷ್ಟನೆಯದೋ ಅಲ್ಲಿಂದ ಬಿದ್ದ ಮಕ್ಕಳು, ಒಮ್ಮೊಮ್ಮೆ ಮೇಲಿನಿಂದ ಕೆಳಗೆ ಕೆಡವುವ  ಕಲ್ಲು, ಇಟ್ಟಿಗೆ, ಮರದ ತುಂಡು, ಮೊದಲಾದವುಗಳ ಏಟಿಗೆ ಸಿಕ್ಕಿ ಸತ್ತ ಮಕ್ಕಳು, ಅಂಗವಿಕಲರಾಗುವ ಮಕ್ಕಳು, ಮಕ್ಕಳು ದುಡಿಮೆಯಲ್ಲಿ ಕೈಜೋಡಿಸುವುದು, ನಿರ್ಮಾಣ ಕಾರ್ಯಕ್ಕೆ ಸಾಗ್ರಿಗಳನ್ನು ಸಾಗಿಸಿ ತರುವ ವಾಹನಗಳಡಿ ಸಿಲುಕಿ ಸತ್ತ ಮಕ್ಕಳು… ಒಂದೇ ಎರಡೇ… ಇಷ್ಟರ ಮೇಲೆ  ಕಾರ್ಮಿಕರಲ್ಲೆ ಯಾರೆಂದರವರು ಮಕ್ಕಳನ್ನು ಎಳೆದಾಡುವುದು, ಹೊಡೆಯುವುದು, ಲೈಂಗಿಕವಾಗಿ ವರ್ತಿಸುವುದು, ಮಕ್ಕಳು ಎಲ್ಲೋ ಕಳೆದು ಹೋಗುವುದು (ಯಾರೋ ಕದ್ದೊಯ್ದಿರಬಹುದು), ಹೆಣ್ಣುಮಕ್ಕಳು ಬೆಳೆಯುತ್ತಿದ್ದಂತೆ ಅಲ್ಲಲ್ಲೇ ಅವರೂರಿನವರಿಗೆ ಮದುವೆ (ಬಾಲ್ಯವಿವಾಹ) ಮಾಡಿಬಿಡುವುದು ಇಂಥವೆಲ್ಲಾ ಸಾಮಾನ್ಯವಾಗಿತ್ತು.

ಬಹಳಷ್ಟು ಬಾರಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮಾಲೀಕರಿಗೂ ಈ ಕುಟುಂಬಗಳಿಗೂ ಯಾವುದೇ ನೇರವಾದ ಸಂಬಂಧವಿರುತ್ತಿರಲಿಲ್ಲ. ಇವರ ಮಕ್ಕಳಿಗೆ ಏನೇ ತೊಂದರೆಯಾದರೂ ಅವರೇನೂ ನೆರವಿಗೆ ಬರುತ್ತಿರಲಿಲ್ಲ. ಯಾರೋ ಮಧ್ಯವರ್ತಿಗಳು ಏನೋ ಒಂದಷ್ಟು ಹಣ ಕೊಟ್ಟು ಅಲ್ಲಿಂದ ವಾಪಸ್‌ ಕಳಿಸಿ ಬಿಡುತ್ತಿದ್ದರು, ಇಲ್ಲವೇ ಬೇರೊಂದು ನಿವೇಶನಕ್ಕೆ ಬದಲಿಸಿಬಿಡುತ್ತಿದ್ದರು. ಅಲ್ಲಿಗೆ ಸಮಸ್ಯೆ ಮುಚ್ಚಿಹೋಗುತ್ತಿತ್ತು.!

ಭಾರತ ಸಂವಿಧಾನದಲ್ಲಿ ಖಾತರಿ ಮಾಡಿರುವ ಜೀವಿಸುವ ಹಕ್ಕು (ಪರಿಚ್ಛೇದ ೨೧) ಮತ್ತು ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಹೇಳುವ ಜೀವಿಸುವ ಹಕ್ಕು (ಪರಿಚ್ಚೇದ ೬) ದೊಡ್ಡ ಮಟ್ಟದಲ್ಲಿ ಇಲ್ಲೆಲ್ಲಾ ಉಲ್ಲಂಘನೆಯಾಗುತ್ತಿತ್ತು. ೧೯೯೨ರಲ್ಲಿ ಸರ್ವೋಚ್ಚ ನ್ಯಾಯಾಲಯವು ಉನ್ನಿಕೃಷ್ನನ್‌ ಮತ್ತು ಆಂಧ್ರಪ್ರದೇಶ ಸರ್ಕಾರದ ಮಧ್ಯದ ಪ್ರಕರಣದಲ್ಲಿ ನೀಡಿದ್ದ ತೀರ್ಪು ‘ಪ್ರಾಥಮಿಕ ಶಿಕ್ಷಣ ಮಕ್ಕಳ ಹಕ್ಕುʼ ಎನ್ನುವುದನ್ನು ಇಲ್ಲಿ ಯಾರೂ ಹೇಳುತ್ತಿರಲೂ ಇಲ್ಲ, ಕೇಳುತ್ತಿರಲೂ ಇಲ್ಲ. ಮಕ್ಕಳಿಗೆ ಸಾಮಾಜಿಕ ಭದ್ರತೆ (ಪ. ೨೬) ಮತ್ತು ಸೂಕ್ತ ಜೀವನ ಮಟ್ಟವನ್ನು ಒದಗಿಸಲು (ಪ. ೨೭) ಪೋಷಕರಿಂದ ಸಾಧ್ಯವಾಗುತ್ತಿರಲಿಲ್ಲ. ಇವೆಲ್ಲದರ ಒಟ್ಟು ದುಷ್ಫಲವಾಗಿ ಮಕ್ಕಳ ಅಮೂಲ್ಯವಾದ ಬಾಲ್ಯ ಮಾತ್ರ ಭರದಿಂದ ಮೇಲೇಳುತ್ತಿದ್ದ ಭವ್ಯ ಮಹಲುಗಳ/ಗಗನಚುಂಬಿ ಕಟ್ಟಡಗಳ ದೈತ್ಯ ಪಾದಗಳ ಕೆಳಗೆ ನಲುಗಿ ಹೋಗುತ್ತಿತ್ತು. 

ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆಯನ್ನು ಕುರಿತು ಜಿಮ್ಮಿ ತಮ್ಮ ವರದಿಯಲ್ಲಿ ವಿಶದವಾಗಿ ಬರೆದಿದ್ದರು. ಈ ಕುಟುಂಬಗಳಿಗೆ, ಬಹು ಮುಖ್ಯವಾಗಿ ಮಕ್ಕಳಿಗೆ ಏನಾದರೂ ಸಹಾಯ ಮಾಡಲೇಬೇಕು. ಈ ಮಕ್ಕಳು ಅವಕಾಶ ವಂಚಿತರಾಗಿ ಮುರುಟಿಹೋಗಬಾರದು ಎಂದು ಎತ್ತಿ ತೋರಿಸಿದ್ದರು. ವರದಿ ಕ್ರೈನಲ್ಲಿ ಚರ್ಚೆಯಾಯಿತು. ರಿಪ್ಪನ್‌ ಕಪೂರ್‌ ಅವರ ಸಲಹೆಯಂತೆ ಮುಂಬೈನಲ್ಲಿ ಅದಾಗಲೇ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದ ʼಮೊಬೈಲ್‌ ಕ್ರೆಷ್‌ʼ ಸಂಸ್ಥೆಯ ಅಧ್ಯಯನ ಮಾಡಲು ಜಿಮ್ಮಿ ಮತ್ತು ಸಂಗಡಿಗರನ್ನು ಕಳುಹಿಸಲಾಯಿತು.

ಬೆಂಗಳೂರಿನಲ್ಲೂ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಕೇಂದ್ರಗಳನ್ನು ಆರಂಭಿಸುವ ಯೋಜನೆ ಸಿದ್ಧವಾಯಿತು. ಆದರೆ ಬಹಳ ಮುಖ್ಯ ತೊಡಕು ಎಂದರೆ  ಕಟ್ಟಡಗಳ ಮಾಲೀಕರು ಕೇಂದ್ರಗಳನ್ನು ನಡೆಸಲು ಸುತರಾಂ ಒಪ್ಪಲೇ ಇಲ್ಲ. ಅವರ ವಾದ ಬಹಳ ಸರಳವಾಗಿತ್ತು. ನೀವು ಈಗ ಮಕ್ಕಳಿಗೆ ಕೇಂದ್ರ ಎನ್ನುತ್ತೀರಿ, ನಾಳೆ ಆ ಕೇಂದ್ರವನ್ನು ನಡೆಸಲು ಹಣಕ್ಕೆ ಬೇಡಿಕೆ ಇಡುತ್ತೀರಿ, ಮತ್ತೆ ಕಾರ್ಮಿಕರಿಗೆ ಕನಿಷ್ಠ ವೇತನಕ್ಕೆ ಒತ್ತಾಯಿಸುತ್ತೀರಿ, ಬಾಲಕಾರ್ಮಿಕರನ್ನು ತೋರಿಸುತ್ತೀರಿ, ಪ್ರಕರಣ ದಾಖಲಿಸುತ್ತೀರಿ, ಆಮೇಲೆ ಬೇರೆ ಬೇರೆ ರೀತಿಯ ಸೌಲಭ್ಯಗಳಿಗಾಗಿ ಮುಷ್ಕರ ಹೂಡಿಸುತ್ತೀರಿ. ನೀವುಗಳು ಇಲ್ಲಿಗೆ ಬರುವುದೇ ಬೇಡ. (ಆ ಹೊತ್ತಿನಲ್ಲಿ ನಮಗೆ ಇಷ್ಟೆಲ್ಲಾ ಕಲ್ಪನೆಯೇ ಇರಲಿಲ್ಲ. ಈ ಮಾತು ಹೇಳಿದವರು ಬಹುತೇಕರು ಮುಂಬೈನಿಂದ ಬಂದು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಹಣ ಹೂಡಿದ್ದವರು. ಅವರಿಗಿದೆಲ್ಲಾ ಅಲ್ಲಿ ಅನುಭವಕ್ಕೆ ಬಂದಿತ್ತು!)

ಕ್ರೈ ಮತ್ತು ಔಟ್‌ರೀಚ್‌ ಜೊತೆಯಾಗಿ ಹಲವಾರು ಸುತ್ತಿನ ಮಾತುಕತೆಗಳು ನಡೆದವು. ‘ಸಾಮ ದಾನ ಮತ್ತು ಭೇದʼ ತಂತ್ರಗಳ ಪ್ರಯೋಗಕ್ಕೆ ಆಂತರಿಕವಾಗಿ ಒಪ್ಪಿಗೆ ಸಿಕ್ಕಿತು. (ಎಂದಿಗೂ ದಂಡ ಪ್ರಯೋಗ ಬೇಡ ಎಂದು ನಿರ್ಧಾರವಾಗಿತ್ತು. ಜೊತೆಗೆ ಮಕ್ಕಳಿಗಾಗಿ ಕ್ರೆಷ್‌ ಮತ್ತು ಡೇ-ಕೇರ್‌ ನಡೆಸುವ ಸಿಬ್ಬಂದಿ ಮತ್ತು ಔಟ್‌ರೀಚ್‌ ಕಾರ್ಮಿಕರ ಕನಿಷ್ಠ ವೇತನ ಮತ್ತು ಸಂಬಂಧಿತ ವಿಚಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಕಟ್ಟಡಗಳ ಮಾಲೀಕರಿಗೆ ಪರೋಕ್ಷವಾಗಿ ಖಾತರಿ ಕೊಡಬೇಕಾಯಿತು).

ಸರ್ಕಾರದ ನೀರಾವರಿ, ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕೆಲವು ಉನ್ನತ ಮಟ್ಟದ ಅಧಿಕಾರಿಗಳು ಜಿಮ್ಮಿಯವರಿಗೆ ಪರಿಚಿತರಿದ್ದರು.  ಕ್ರೈಗೆ ಹಲವಾರು ವರ್ಷಗಳಿಂದ ದೇಣಿಗೆ ನೀಡುತ್ತಿದ್ದ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳ ಪರಿಚಯವೂ ಇತ್ತು. ಇವುಗಳ ನೆರವು ಕಟ್ಟಡ ನಿರ್ಮಾಣ ಮಾಲೀಕರ ಮೇಲೆ ಪ್ರಭಾವ ಬೀರಿತು. ಔಟ್‌ರೀಚ್‌ ಅಧಿಕೃತವಾಗಿ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಸುತ್ತಮುತ್ತ ಮತ್ತು ಕುಕ್‌ ಟೌನ್‌ ಹಾಗೂ ಲ್ಯಾಂಗ್‌ಫೋರ್ಡ್‌ ರಸ್ತೆಯ ಅಕ್ಕಪಕ್ಕದಲ್ಲಿ ಏಳುತ್ತಿದ್ದ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಮಕ್ಕಳಿಗಾಗಿ ಡೇ-ಕೇರ್‌ ಮತ್ತು ಕ್ರೆಷ್‌ ಆರಂಭಿಸಿತು.

ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲೇ ಒಂದು ಸುರಕ್ಷಿತ ಸ್ಥಳ ಆಯ್ದು ಅಲ್ಲಿ ಮಕ್ಕಳಿಗೆ ಆಟಪಾಟ, ಸ್ವಲ್ಪ ಅಕ್ಷರಾಭ್ಯಾಸ, ಕತೆ ಹೇಳುವುದು, ಒಂದು ಹೊತ್ತಿನ ಪೌಷ್ಟಿಕ ಆಹಾರದ ಸೌಲಭ್ಯ, ಜೊತೆಗೆ ಬೇಕಾದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವುದು, ಮುಖ ಕೈಕಾಲು ತೊಳೆಯಲು ಸಹಕರಿಸುವುದು ಈ ಕೆಲಸಗಳನ್ನು ಮಾಡಲು ಒಂದಷ್ಟು ಕಾರ್ಯಕರ್ತರು ಸೇರಿದರು. ಕೆಲವು ಸ್ವಯಂಸೇವಕರೂ ಬಂದರು.

ಇದೇನು ಅಷ್ಟು ಸುಲಭವಾಗಿ ಆಗಲಿಲ್ಲ. ಆರಂಭದ ಕೆಲವೇ ದಿನಗಳಲ್ಲಿ ನಮಗೂ ಕಟ್ಟಡಗಳ ಮಾಲೀಕರಿಗೂ ಚಿಕ್ಕಪುಟ್ಟ ಘರ್ಷಣೆಗಳಾಯಿತು. ಸ್ವಯಂಸೇವಕರನ್ನು/ಕಾರ್ಯಕರ್ತರನ್ನು  ಬೇಕೆಂದೇ ಒಂದೊಂದು ದಿನ ಒಂದೊಂದು ಕಡೆಗೆ ಕಳುಹಿಸುವುದು, ಕೇಂದ್ರವೇ ಬೇಡ ಎನ್ನುವುದು, ಇದನ್ನು ಈಗಿಂದೀಗಲೇ ನಿಲ್ಲಿಸಿ ಎನ್ನುವುದು ಇತ್ಯಾದಿ ಕಿರುಕುಳ. ಈ ಕ್ರೆಷ್‌ ಮತ್ತು ಡೇ- ಕೇರ್‌ ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ, ಮುಂದಿನ ದಿನಗಳಲ್ಲಿ ತಮ್ಮ ಹಿತಾಸಕ್ತಿಗೆ ಮುಳುವಾಗುವಂತೆ ದೊಡ್ಡದಾದೀತು ಎಂದು ಅವರಾಗಲೇ ಅಂಜಿಕೊಂಡಿದ್ದರೇನೋ? ಅವರಿಗಿಂತಲೂ ದೊಡ್ಡ ತೊಂದರೆಯಾಗಿ ನಮಗೆ ಕಂಡದ್ದು ವಿವಿಧ ಹಂತಗಳ ಕೆಲಸಗಳ ‘ಮೇಸ್ತ್ರಿʼಗಳು. ಎಲ್ಲೋ ಏನೋ ಅವರ ಸ್ವಾತಂತ್ರ್ಯ ಮೊಟಕಾಗಿತ್ತು. ಅಲ್ಪಸ್ವಲ್ಪ ಮಾಹಿತಿ, ಜ್ಞಾನ ಇರುವವರ್ಯಾರೋ ಎಲ್ಲರ ಮೇಲೆ ಕಣ್ಣಿಟ್ಟಿರುವುದು ವೇದ್ಯವಾಗಿತ್ತೇನೋ. ಇಂತಹ ವ್ಯವಸ್ಥೆಗಳು ಬೇಡವೇಬೇಡ ಎಂದು ಮೇಸ್ತ್ರಿಗಳು ತಮ್ಮ ಗುತ್ತಿಗೆದಾರರ ಎದುರು ಜೋರಾಗಿಯೇ ಹೇಳುತ್ತಿದ್ದರು.

ಬದಲಾವಣೆಗೆ, ಹೊಸ ಬೆಳವಣಿಗೆಗಳಿಗೆ ವಿರೋಧ ಸಹಜವೇ. ಕೆಲವೇ ತಿಂಗಳುಗಳಲ್ಲಿ ಔಟ್‌ರೀಚ್‌ನ ಕೆಲಸಗಳ ಫಲಿತಾಂಶ ಕಟ್ಟಡ ಕಾರ್ಮಿಕರಿಗೆ ಅರಿವಾಗತೊಡಗಿತು. ನಮ್ಮ ಪ್ರಯತ್ನದಿಂದ ಒಂದಷ್ಟು ಮಕ್ಕಳು ಹತ್ತಿರದ ಅಂಗನವಾಡಿಗಳಿಗೆ, ಶಾಲೆಗೆ ಸೇರಿದರು ಕೂಡಾ. ಮಕ್ಕಳನ್ನು ಹತ್ತಿರದ ಆಟದ ಮೈದಾನಕ್ಕೆ, ಉದ್ಯಾನವನಕ್ಕೆ ಕರೆದೊಯ್ಯುವುದು ದೊಡ್ಡ ಬದಲಾವಣೆಗಳಲ್ಲಿ ಒಂದಾಯಿತು. (ಇಲ್ಲೊಂದು ದಿನ ಅಲ್ಲೊಂದು ದಿನ ಇದ್ದು ದಿನ ನೂಕುವ ನಮ್ಮ ಮಕ್ಕಳಿಗ್ಯಾಕೆ ಶಾಲೆ, ಶಿಕ್ಷಣ, ನಾವು ವಾಪಸ್‌ ಹೋಗಿಬಿಡುವವರು ಎನ್ನುತ್ತಿದ್ದ ಪೋಷಕರನ್ನು ಒಪ್ಪಿಸುವುದೇ ದೊಡ್ಡ ಕೆಲಸವಾಗಿತ್ತು.) ಸ್ವಲ್ಪ ದೊಡ್ಡ ಮಕ್ಕಳಿಗೆ ಏನೂ ಹಣ ಕೊಡದೆಯೂ ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ಮೇಸ್ತ್ರಿಗಳಿಗೆ ಮಕ್ಕಳ ಶಾಲಾ ಶಿಕ್ಷಣದಿಂದ ಕಷ್ಟವಾಯಿತು.

ಕೊಂಚ ಮೇಲ್ಮಟ್ಟದ ಸಮುದಾಯಗಳ ಸಂಬಂಧವಿದ್ದ ಜಿಮ್ಮಿ ಕೆಲವು ಕಟ್ಟಡ ವಿನ್ಯಾಸಗಾರರನ್ನು (ಆರ್ಕಿಟೆಕ್ಟ್‌) ಸಂಪರ್ಕಿಸಿದರು. ಅಂತಹ ಹೆಸರಾಂತ ವಿನ್ಯಾಸಗಾರರ ಒಂದು ಸಭೆ ಸೇರಿಸಿ ಕಟ್ಟಡ ಕಾರ್ಮಿಕರ ಪರಿಸ್ಥಿತಿ ಮತ್ತು ಅವರ ಮಕ್ಕಳಿಗಾಗಿ ಬೇಕಿರುವ ವ್ಯವಸ್ಥೆಗಳನ್ನು ಮಂಡಿಸಿ ಚರ್ಚೆ ನಡೆಸಿದೆವು. ಕಟ್ಟಡ ವಿನ್ಯಾಸಗಾರರ ಮಾತು ‘ನಡೆಯುತ್ತದೆʼ ಎಂಬುದು ತಿಳಿಯಿತು. ವಿನ್ಯಾಸದ ವಿವಿಧ ಹಂತಗಳಲ್ಲಿ ಮಕ್ಕಳ ಡೇ-ಕೇರ್‌ ಮತ್ತು ಕ್ರೆಷ್‌ಗಾಗಿ ಅವರು ಸ್ಥಳ ಗುರುತಿಸಿ ಕೊಟ್ಟರೆ ಅದನ್ನು ಅದೇ ರೀತಿ ಕಟ್ಟಡ ನಿರ್ಮಾಣಕಾರರು ನಿರ್ವಹಿಸಬೇಕು ಎಂಬುದು ಆಗ್ಗೆ ಸಾಮಾನ್ಯ ನಂಬಿಕೆಯಾಗಿತ್ತು.

ಅಷ್ಟು ಹೊತ್ತಿಗೆ ಕಟ್ಟಡ ಕಾರ್ಮಿಕರ ಹಕ್ಕುಗಳು, ಸುರಕ್ಷತೆ ಸೌಲಭ್ಯಗಳು, ಅವರ ಕುಟುಂಬ ಮತ್ತು ಮಕ್ಕಳಿಗಳಿಗಾಗಿ ಕಟ್ಟಡಗಳ ಮಾಲೀಕರು ಮಾಡಲೇಬೇಕಾದ ವ್ಯವಸ್ಥೆಗಳು, ಕೂಲಿ ದರಗಳು, ಇವೇ ಮೊದಲಾದವುಗಳನ್ನು ಕುರಿತು ನಾವೂ ಸಾಕಷ್ಟು ಅಧ್ಯಯನ ನಡೆಸಿದ್ದೆವು. ಕಾರ್ಮಿಕ ಇಲಾಖೆಯೊಡನೆಯೂ ಸಮಾಲೋಚನೆಗಳು ಆದವು. ಇವುಗಳ ಒಟ್ಟು ಫಲಿತಾಂಶ, ಕಟ್ಟಡ ನಿರ್ಮಾಣ ಮಾಡುವ ಕಂಪನಿ ಅಥವಾ ಖಾಸಗಿ ಮಾಲೀಕರು ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿಯೆ ನಡೆಯುವ ಕ್ರೆಷ್‌, ಡೇ-ಕೇರ್‌ಗಳ ಖರ್ಚಿನ ಪಾಲನ್ನು ವಹಿಸಿಕೊಳ್ಳಲು ಒತ್ತಡ ಬಿದ್ದಿತು. ಅನೇಕರು ಒಲ್ಲದ ಮನಸ್ಸಿನಿಂದಲೆ ಒಪ್ಪಿಕೊಂಡರು. ಕೆಲವು ಕಡೆ ಸಂಘರ್ಷ ಮುಂದುವರೆಯಿತು.

ಹಾಗೆ ಏಳುತ್ತಿದ್ದ ಕಟ್ಟಡಗಳು ಬಹುತೇಕ ವಸತಿ ಸಮುಚ್ಚಯಗಳೇ ಆಗಿದ್ದವು. ʼನಿಮ್ಮ ಮನೆ ಕಟ್ಟುವಾಗ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಬೇಕೆ?ʼ ಎಂಬರ್ಥದ ಒಂದು ಪ್ರಚಾರಾಂದೋಲನವನ್ನು ಹೆಚ್ಚು ಅಬ್ಬರವಿಲ್ಲದೆ ನಡೆಸಿದ್ದೆವು. ಇದು ವಸತಿ ಸಮುಚ್ಚಯಗಳಲ್ಲಿ ಮನೆಗಳನ್ನು /ಅಪಾರ್ಟ್‌ಮೆಂಟ್‌ಗಳನ್ನು ಕೊಂಡವರಿಗೆ ತಲುಪಬೇಕೆಂಬುದು ಉದ್ದೇಶ. ಒಂದಷ್ಟು ಕಡೆ ಅದು ತಾಗಬೇಕಾದವರಿಗೆ ತಾಗಿತ್ತು. ಕೆಲವರು ತಾವೇ ಬಂದು ದೇಣಿಗೆಗಳನ್ನು ಹಣ, ವಸ್ತುಗಳು, ಆಹಾರದ ಸ್ವರೂಪದಲ್ಲಿ ನೀಡಿದರು. ಕೆಲವರು ತಮ್ಮ ನಿರ್ಮಾಣ ಕಂಪನಿಯೊಂದಿಗೆ ಮಾತನಾಡಿದರು. ಆದರೆ ಬಹಳಷ್ಟು ಜನರು ತಟಸ್ಥರಾಗಿದ್ದರು. ನಮ್ಮ ಪುಣ್ಯಕ್ಕೆ ವಿರೋಧಿಸುತ್ತಿರಲಿಲ್ಲ.

ಕಟ್ಟಡ ನಿರ್ಮಾಣಕಾರರ ಮಕ್ಕಳ ಸುರಕ್ಷತೆ, ಆರೋಗ್ಯ, ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಲು ಮುಂದಿನ ದಿನಗಳಲ್ಲಿ ಹಲವು ಸಂಸ್ಥೆಗಳು ಮುಂದೆ ಬಂದರು. ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನ, ಮಕ್ಕಳ ಶಿಕ್ಷಣ ಹಕ್ಕು ಆಂದೋಲನ, ಮಕ್ಕಳ ಅಪೌಷ್ಟಿಕತೆ ತಡೆ ಯೋಜನೆಗಳು, ಕನಿಷ್ಠ ವೇತನ ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ಯೋಜನೆಗಳು ಇವೇ ಮೊದಲಾದವು ಹಂತಹಂತವಾಗಿ ವಿಕಾಸವಾಗುತ್ತಾ ಬಂದಿತು.

***

ಕಳೆದ ಶತಮಾನದ ಕೊನೆಯ ಹೊತ್ತಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಕುರಿತು ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆಗಳು, ಯೋಜನೆಗಳು ಹೊರಬಿದ್ದಿತು. ಅದರಲ್ಲೊಂದು, ಕಟ್ಟಡ ಮತ್ತಿತರ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯಕ್ರಮಗಳು. ಈ ಮಂಡಳಿಯ ಯೋಜನೆಯಡಿ ಎಲ್ಲ ರೀತಿಯ ಕಟ್ಟಡ ಕಾರ್ಮಿಕರು ದಾಖಲು ಮಾಡಿಕೊಂಡರೆ ಅವರಿಗೆ, ಮಕ್ಕಳನ್ನೂ ಒಳಗೊಂಡ ಅವರ ಕುಟುಂಬಗಳಿಗೆ ಹಲವು ರೀತಿಯ ಸೌಲಭ್ಯಗಳನ್ನು ಖಾತರಿಪಡಿಸುವುದು ಈ ಯೋಜನೆ. ನೌಕರರಿಗೆ ನಿವೃತ್ತಿ ವೇತನ, ಅಪಘಾತಕ್ಕೆ ಒಳಗಾದರೆ ಪರಿಹಾರ ಮತ್ತು ಚಿಕಿತ್ಸೆಗೆ ನೆರವು, ಆರೋಗ್ಯ ಸೇವೆಗಳು, ಹೆರಿಗೆ ಭತ್ಯೆ ಮತ್ತು ಸೇವೆ, ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ಆರ್ಥಿಕ ನೆರವು, ಮಕ್ಕಳ ಶಿಕ್ಷಣಕ್ಕೆ ನೆರವು, ಯಾರಾದರೂ ನಿಧನರಾದರೆ ಅವರ ಅಂತ್ಯಕ್ರಿಯೆಗೆ ನೆರವು, ಕೆಲಸಗಾರರಿಗೆ ಉಪಕರಣಗಳನ್ನು ಕೊಡಿಸುವುದು, ಅವರದೇ ಮನೆ ಕಟ್ಟಿಕೊಳ್ಳಲು ನೆರವು ಇತ್ಯಾದಿ. ಯಾವುದೇ ಕಟ್ಟಡ, ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರು ತಮ್ಮ ನಿರ್ಮಾಣದ ಒಟ್ಟು ವೆಚ್ಚದ ಶೇ.೧ರಷ್ಟನ್ನು ಈ ಮಂಡಳಿಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಡಲು ನೀಡಲೇಬೇಕು. (ಕಟ್ಟಡ ಮತ್ತಿತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್‌ ಕಾಯಿದೆ ೧೯೯೬  ಸೆ. ೩(೧) ಮತ್ತು ೩(೩)). ಈ ಹಣ ಪ್ರತಿ ರಾಜ್ಯದಲ್ಲೂ ಪ್ರತಿ ವರ್ಷ ಹಲವು ಕೋಟಿಗಳು ಸಂಗ್ರಹವಾಗುತ್ತಿದೆ. ಇದೊಂದು ಅತ್ಯಂತ ಸ್ವಾಗತಾರ್ಹ ಕಲ್ಯಾಣ ಕಾರ್ಯಕ್ರಮ. 

ಕಟ್ಟುವ ಕೆಲಸಗಾರರು ಅಥವಾ ರಾಷ್ಟ್ರದ ಸಂಪತ್ತು ನಿರ್ಮಾಣ ಕಾರ್ಮಿಕರು ಮತ್ತವರ ಕುಟುಂಬಗಳ ಒಳಿತಿಗಾಗಿ ರೂಪಗೊಂಡಿರುವ ಯೋಜನೆ. 

ಆದರೆ ಇದರಲ್ಲೊಂದು ತೊಡಕಿದೆ. ಕಟ್ಟಡ ಕಾರ್ಮಿಕರು ಈ ಯೋಜನೆಯಲ್ಲಿ ದಾಖಲಾಗಬೇಕು. ಅದಕ್ಕೆ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಮಾಲೀಕರು ಇಂತಹವರನ್ನು ತಾವು ಉದ್ಯೋಗಕ್ಕೆ ನೇಮಿಸಿಕೊಂಡಿದ್ದೇವೆ ಎಂದು ಪ್ರಮಾಣಪತ್ರ ನೀಡಬೇಕು. ಮಾಲೀಕರು ಇಂತಹ ಪ್ರಮಾಣ ಪತ್ರ ನೀಡಲು ಮುಂದಾಗುತ್ತಿರಲಿಲ್ಲ. ಅಥವಾ ಕಾರ್ಮಿಕರಿಗೆ ಇಂತಹದು ಇದೆ ಎಂದು ತಿಳಿದೇ ಇರುವುದಿಲ್ಲ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು (ಕೆ.ಸಿ.ಆರ್.ಓ), ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ, ಯುನಿಸೆಫ್, ಮತ್ತಿತರರು ಕಾರ್ಮಿಕ ಇಲಾಖೆಯೊಡನೆ ಸೇರಿ, ಹಿರಿಯ ಗಾಂಧೀವಾದಿಗಳಾದ ದೊರೆಸ್ವಾಮಿಯವರ ಮುಂದಾಳತ್ವದಲ್ಲಿ ಒಂದು ಕಾರ್ಯಾಗಾರವನ್ನು ಏರ್ಪಡಿಸಿತ್ತು – ‘ಕಟ್ಟಡ ಕಾರ್ಮಿಕರ ಮಕ್ಕಳ ಹಕ್ಕುಗಳ ರಕ್ಷಣೆ – ಯಾರ ಜವಾಬ್ದಾರಿʼ (೨೦೦೮). ನಿಗಾ ಕೇಂದ್ರದ ಸದಸ್ಯರಾದ ಲಕ್ಷಾಪತಿ (ಅಪ್ಸಾ ಸಂಸ್ಥೆ) ಕಟ್ಟಡ ಕಾರ್ಮಿಕರ ಮಕ್ಕಳ ಪರಿಸ್ಥಿತಿ, ಮಕ್ಕಳಿಗಾಗುವ ತೊಂದರೆ, ಅಪಾಯಗಳನ್ನು ಕುರಿತು ನಡೆಸಿದ್ದ ಅಧ್ಯಯನವನ್ನು ಮಂಡಿಸಿದರು.

ಸಮಾಲೋಚನೆಯಲ್ಲಿ ಕಟ್ಟಡ ಕಾರ್ಮಿಕರು, ಮಕ್ಕಳು, ಕಾರ್ಮಿಕ ಸಂಘಟನೆಗಳ ನಾಯಕರು, ಸ್ವಯಂಸೇವಾ ಸಂಘಟನೆಗಳು, ಸರ್ಕಾರದ ಪ್ರತಿನಿಧಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾಗಿದ್ದ ಡಾ.ಡಿ.ಎಸ್.ಅಶ್ವಥ್‌ ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗಳಾಗಿದ್ದ ಗುರುದಾಸ್‌ ಭಟ್‌  ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿನ ಮುಖ್ಯ ಬೇಡಿಕೆ, ಕಟ್ಟಡ ಕಾರ್ಮಿಕರನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು.  ಇದಕ್ಕೊಂದು ಚಿಕ್ಕ ಬದಲಾವಣೆಯನ್ನು ಸೂಚಿಸಲಾಯಿತು. ಅದರಂತೆ ಕಾರ್ಮಿಕ ಸಂಘಟನೆ ಅಥವಾ ಸ್ವಯಂಸೇವಾ ಸಂಘಟನೆಗಳು ಗುರುತಿಸಿ ಸೂಚಿಸಿದರೆ ನೋಂದಾವಣೆ ಮಾಡಬಹುದು ಎಂಬುದು ಜಾರಿಗೆ ಬಂದಿತು. 

ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳನ್ನು ಕಾಯುವ ಪ್ರಕ್ರಿಯೆಯಲ್ಲಿ ಹೊಸ ವಿಧಾನ ಚಲಾವಣೆಗೆ ಬಂದಿತು. ಈ ಪ್ರಕ್ರಿಯೆಯಲ್ಲಿ ಹಲವು ಸ್ವಯಂಸೇವಾ ಸಂ‍ಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಮುಂದಾಗಿ ಸತತವಾಗಿ ಕಟ್ಟಡ ಕಾರ್ಮಿಕರನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು. ಅದು ಈಗಲೂ ಮುಂದುವರೆದಿದೆ. ಕೋವಿಡ್‌ ಸಂಕಷ್ಟ ಸಮಯದಲ್ಲಿಯೂ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಗಳ ಹಿತ ಕಾಯಲು ಇದು ನೆರವಾಯಿತು. 

‍ಲೇಖಕರು Admin

August 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: