‘ಕಟ್ಟಡಗಳಲ್ಲೂ ಕಲಾತ್ಮಕತೆಯ ಉಸಿರು’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಮಹಾನಗರಿಯೊಂದನ್ನು ಹೇಗೆಲ್ಲಾ ನೋಡಬಹುದು ಎಂದು ನನ್ನನ್ನು ನಾನೇ ಸಾಮಾನ್ಯವಾಗಿ ಸ್ವಗತದ ಧಾಟಿಯಲ್ಲಿ ಪ್ರಶ್ನಿಸುತ್ತಿರುತ್ತೇನೆ. 

ಏಕೆಂದರೆ ಬರಹಗಾರನೊಬ್ಬನಿಗೆ ಪ್ರಮುಖವಾಗಿ ಬೇಕಿರುವ ಅಂಶವೆಂದರೆ ಕುತೂಹಲ. ಆತನಿಗೆ ಕುತೂಹಲವು ಸತ್ತಿತೆಂದರೆ ಬರಹವೂ, ಬದುಕೂ ಒಂದು ರೀತಿಯಲ್ಲಿ ಮುಗಿದಂತೆಯೇ. ಒಂಚೂರು ಸಂವೇದನೆ, ಬದುಕಿನಲ್ಲೊಂದಿಷ್ಟು ಕುತೂಹಲ ಮತ್ತು ಹೊಸ ವಿಚಾರಗಳಿಗೆ ತೆರೆದುಕೊಳ್ಳಲು ಒಂದಷ್ಟು ಮುಕ್ತ ಮನೋಭಾವವಿದ್ದರೆ ಬಹುತೇಕ ಪ್ರತೀ ಪ್ರಯಾಣದಲ್ಲೂ, ಪ್ರತೀ ಭೇಟಿಯಲ್ಲೂ, ಪ್ರತೀ ಘಟನೆಯಲ್ಲೂ ಏನಾದರೊಂದು ಸ್ವಾರಸ್ಯಕರ ಸಂಗತಿಯು ಹಿಡಿಯಷ್ಟು ಜೀವನಪ್ರೀತಿಯುಳ್ಳವನಿಗೆ ಸಿಕ್ಕೇ ಸಿಗುತ್ತದೆ. ಪ್ರಾಯಶಃ ಇದೇ ಕಾರಣವೇನೋ! ದಿಲ್ಲಿಗೆ ಕಾಲಿಟ್ಟು ಬರೋಬ್ಬರಿ ಒಂದು ದಶಕವು ಕಳೆದುಹೋದರೂ, ನನ್ನಲ್ಲಿ ಮೊದಲು ಹುಟ್ಟಿದ್ದ ದಿಲ್ಲಿಯ ಹೊಸತನವು ಇನ್ನೂ ಮಾಸಿಲ್ಲ. 

ನನ್ನ ಬಾಲ್ಯದ ದಿನಗಳಲ್ಲಿ ಈಜಿಪ್ಟ್ ದೇಶದಲ್ಲಿರುವ ಪಿರಾಮಿಡ್ ಗಳ ಬಗ್ಗೆ ಮೊದಲ ಬಾರಿಗೆ ತಿಳಿದುಕೊಂಡಾಗ ಪಿರಾಮಿಡ್ಡುಗಳ ಬಗ್ಗೆ ವಿಚಿತ್ರ ಮೋಹವೊಂದು ಹೊಸದಾಗಿ ಹುಟ್ಟಿಕೊಂಡಿತ್ತು. ಇದರ ತರುವಾಯ ಈಜಿಪ್ಟ್ ಬಗೆಗಿನ ಮೋಹವು ಮುಂದೆ ಹಲವು ವರ್ಷಗಳ ಕಾಲ ನನ್ನಲ್ಲಿ ಭದ್ರವಾಗಿ ಉಳಿದುಕೊಂಡಿತು. ಈಗ ಹಿಂತಿರುಗಿ ನೋಡಿದರೆ ಪಿರಾಮಿಡ್ಡುಗಳು ತನ್ನಲ್ಲಿ ಹುದುಗಿಸಿಟ್ಟುಕೊಂಡಿದ್ದ ಹಲವು ನಿಗೂಢ ಸಂಗತಿಗಳು ಮತ್ತು ಮಾನವ ಜನಾಂಗವು ಕಾಣಬಲ್ಲ ದೈತ್ಯಕನಸುಗಳೂ, ಹಲವು ಸವಾಲುಗಳ ಹೊರತಾಗಿ ಅವುಗಳನ್ನು ಸಾಕಾರಗೊಳಿಸಿದ ಆತನ ಭಗೀರಥ ಪ್ರಯತ್ನದ ಛಲವೂ ನನ್ನನ್ನು ಆಕರ್ಷಿಸಿರಬಹುದು ಎಂದು ಅಂದುಕೊಳ್ಳುತ್ತೇನೆ.  

ಅಷ್ಟಿದ್ದರೂ ಈಜಿಪ್ಟ್ ಪಿರಾಮಿಡ್ಡುಗಳ ಸರಳ ಆಕಾರವು ನನ್ನನ್ನು ಅಪಾರವಾಗಿ ಸೆಳೆದಿದ್ದು ಸುಳ್ಳಲ್ಲ. ಇದೊಂಥರಾ ಪೌಲೋ ಕೊಯೆಲೋನ ಕಾದಂಬರಿಗಳ ಥರಾನೇ. ಪೌಲೋ ಕೊಯೆಲೋನ ‘ಎಲೆವೆನ್ ಮಿನಿಟ್ಸ್’ ಕಾದಂಬರಿಯನ್ನು ಓದುವವರೆಗೂ ಕಾದಂಬರಿಗಳ ಬಗ್ಗೆ ನನ್ನಲ್ಲೊಂದು ವಿಚಿತ್ರ, ಬಾಲಿಶ ಪೂರ್ವಾಗ್ರಹವಿತ್ತು. ಅದೇನೆಂದರೆ ಉತ್ತಮ ಕಾದಂಬರಿಯೊಂದರಲ್ಲಿ ಬಹಳ ಪಾತ್ರಗಳಿರಬೇಕು, ಸಂಕೀರ್ಣವೆನಿಸುವಂತಹ ಕಥಾಹಂದರವಿರಬೇಕು, ಸಾಕೆನಿಸುವಷ್ಟು ರೋಚಕ ತಿರುವುಗಳಿರಬೇಕು… ಇತ್ಯಾದಿ! ಆದರೆ ಕೊಯೆಲೋನ ಈ ಪುಟ್ಟ ಕಾದಂಬರಿಯಲ್ಲಿ ಅಂಥದ್ದೇನೂ ಇರಲಿಲ್ಲ.

ಕೆಲವೇ ಕೆಲವು ಪಾತ್ರಗಳನ್ನು ಬಳಸಿಕೊಂಡು, ಸರಳ ಕಥಾಹಂದರವನ್ನಿಟ್ಟುಕೊಂಡೇ ಖ್ಯಾತ ಲೇಖಕ ಕೊಯೆಲೋ, ಪ್ರೀತಿ-ಪ್ರೇಮ-ಕಾಮ-ಬದುಕುಗಳೆಂಬ ಫಿಲಾಸಫಿಕಲ್ ಸಂಗತಿಗಳನ್ನು ಮನಮುಟ್ಟುವಂತೆ ಓದುಗನಿಗೆ ತಿಳಿಸುತ್ತಾನೆ. ಇದು ಸಾಲದ್ದೆಂಬಂತೆ, ಇಷ್ಟು ಗಂಭೀರ ವಿಚಾರವುಳ್ಳ ಪುಸ್ತಕವು ಶುರುವಾಗುವುದೇ ‘ಒಂದಾನೊಂದು ಕಾಲದಲ್ಲಿ…’ ಎಂಬ ಸರಳಾತಿಸರಳ ಒಕ್ಕಣೆಯಿಂದ. ಥೇಟು ಪುಟ್ಟ ಮಕ್ಕಳ ಕತೆ ಪುಸ್ತಕದಂತೆ.   

ಪಿರಾಮಿಡ್ಡುಗಳ ಸರಳವೆನ್ನಿಸುವ ತ್ರಿಕೋನದ ಆಕಾರವು ನನ್ನಲ್ಲಿ ವಾಸ್ತುಶಿಲ್ಪದ ಬಗ್ಗೆ ತಕ್ಕಮಟ್ಟಿನ ಕುತೂಹಲವನ್ನು ಹುಟ್ಟಿಸಿದ್ದು ಕೂಡ ಈ ರೀತಿಯಲ್ಲೇ. ಅಸಲಿಗೆ ಬಾಲ್ಯದ ದಿನಗಳ ನನ್ನ ಸೀಮಿತ ತಿರುಗಾಟದಲ್ಲಿ ಎರಡು ವಿನ್ಯಾಸಗಳು ನನ್ನ ಮನದಲ್ಲಿ ಶಾಶ್ವತವಾಗಿ ತಮ್ಮ ಛಾಪನ್ನೊತ್ತಿದ್ದವು. ಅವುಗಳೆಂದರೆ ಮೈಸೂರಿನ ಸೈಂಟ್ ಫಿಲೋಮಿನಾ ಚರ್ಚು ಮತ್ತು ಬೇಲೂರು-ಹಳೇಬೀಡುಗಳ ಅದ್ಭುತ ದೇವಾಲಯಗಳು.

ಇನ್ನು ವಿಶ್ವದ ಅದ್ಭುತಗಳಲ್ಲೊಂದಾದ ತಾಜ್ ಮಹಲ್ ಅನ್ನು ಟಿವಿ ಪರದೆಯಲ್ಲಿ ನಾನು ಅದೆಷ್ಟೋ ಬಾರಿ ನೋಡಿದ್ದೆ. ಆದರೆ ತಾಜ್ ಮಹಲನ್ನು ಕಣ್ಣಾರೆ ಕಂಡ ನಂತರವೇ ಅದರ ನೈಜ ಸೌಂದರ್ಯವು ನನ್ನೆದುರು ವಿಶ್ವರೂಪದಂತೆ ತೆರೆದುಕೊಂಡಿದ್ದು. ಈಗಲೂ ತಾಜ್ ಮಹಲ್ ಅನ್ನು ಶಿಲ್ಪ, ಚಿತ್ರ ಮತ್ತು ವೀಡಿಯೋಗಳ ರೂಪಗಳಲ್ಲಿ ಕಾಣುವಾಗ, ಅದರ ನಿಜವಾದ ಸೌಂದರ್ಯಕ್ಕೆ ಈ ಆವೃತ್ತಿಗಳು ನ್ಯಾಯವನ್ನೊದಗಿಸುತ್ತಿಲ್ಲ ಎಂದೇ ನನಗನ್ನಿಸುತ್ತಿರುತ್ತದೆ. 

ದಿಲ್ಲಿಯನ್ನು ನಾನು ಆರಂಭದ ದಿನಗಳಲ್ಲಿ ಕಣ್ತುಂಬಿಕೊಳ್ಳುತ್ತಿದ್ದ ರೀತಿಯೂ ಬಹುತೇಕ ಇದೇ ಮಾದರಿಯಲ್ಲಿತ್ತು. ಇಷ್ಟು ದಿನ ಟಿವಿ ಪರದೆಯಲ್ಲಷ್ಟೇ ಕಾಣುತ್ತಿದ್ದ ಕೆಂಪುಕೋಟೆಯ ದೈತ್ಯಗೋಡೆಗಳು, ಸುಪ್ರೀಂಕೋರ್ಟ್ ಕಟ್ಟಡದ ಗುಮ್ಮಟ, ಸಂಸತ್ತಿನ ವೃತ್ತ, ಕುತುಬ್ ಮಿನಾರಿನ ಎತ್ತರ, ಕೇಂದ್ರ ಚುನಾವಣಾ ಆಯೋಗದ ಕಟ್ಟಡಗಳು ಈಗ ಸಾಕ್ಷಾತ್ ಕಣ್ಣೆದುರಿಗಿದ್ದವು. ಹಿಂದೆ ದೇಶದ ಶಕ್ತಿಕೇಂದ್ರದಷ್ಟೇ ಕಾಣುತ್ತಿದ್ದ ದಿಲ್ಲಿಯು ಕ್ರಮೇಣ ನಮ್ಮದೇ ಅಡ್ಡಾ ಆಗಿ ಬದಲಾದ ನಂತರ, ಮಹಾನಗರಿಯೊಂದಿಗೆ ಒಂದು ಬಗೆಯ ಆಪ್ತಸಂಬಂಧವೂ ಹುಟ್ಟಿಕೊಂಡಿತು.

ಇಂದು ಇದಕ್ಕೆ ಹೊಟ್ಟೆಪಾಡು, ಅನಿವಾರ್ಯತೆಗಳ ಹೆಸರಿನಲ್ಲಿ ಹತ್ತಾರು ಹಣೆಪಟ್ಟಿ-ಸಮರ್ಥನೆ-ಕಾರಣಗಳನ್ನು ನಾವು ತಂದು ನಿಲ್ಲಿಸಬಹುದು. ಅದೇನೇ ಆದರೂ ಈ ಬಗೆಯ ಸಂವೇದನೆಯ ಸೇತುವೆಯೊಂದು ನಮ್ಮ ಮತ್ತು ನಾವಿರುವ ಸ್ಥಳದ ಜೊತೆ ಹುಟ್ಟಿಕೊಳ್ಳುವುದು ಬಲುಮುಖ್ಯ ಎಂಬುದನ್ನು ಮಾತ್ರ ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಆಂಗ್ಲಭಾಷೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ “ಬಿಲಾಂಗಿಂಗ್” ಎಂಬ ಪದವು ನಿಜಕ್ಕೂ ಅರ್ಥಪೂರ್ಣವಾಗುವುದು ಇಂಥಾ ಸಂದರ್ಭಗಳಲ್ಲೇ.  

ಇಲ್ಲಿಯ ವಾಸ್ತುಶಿಲ್ಪ ವೈವಿಧ್ಯ ಮತ್ತು ನನ್ನ ಮುಗಿಯದ ಕುತೂಹಲಗಳ ಭರದಲ್ಲಿ ದಿಲ್ಲಿಯು ನನ್ನೊಳಗೆ ನಿಧಾನವಾಗಿ ಇಳಿಯುತ್ತಾ ಹೋಗಿದ್ದು ಹೀಗೆ. ಅಸಲಿಗೆ ದಿಲ್ಲಿಯ ರಸ್ತೆಗಳಲ್ಲಿ ಸಾಗುವುದೆಂದರೆ ವಾಸ್ತುಶಿಲ್ಪದ ದೈತ್ಯ ಎನ್ಸೈಕ್ಲೋಪೀಡಿಯಾ ಒಂದರ ಪುಟಗಳನ್ನು ತಿರುವುತ್ತಾ ಹೋದಂತೆ. ಇಲ್ಲಿಯ ಮಣ್ಣಿಗೆ ಪುರಾಣಗಳ ಕಾಲದ ಘಮವೂ ಇದೆ, ಮೊಘಲರ ಕಾಲದ ಕೋಟೆ-ಕೊತ್ತಲಗಳ ಛಾಪೂ ಇದೆ. ಅತ್ತ ಲ್ಯೂಟೆನ್ಸ್ ವಿನ್ಯಾಸದ ಭವ್ಯ ಕಟ್ಟಡಗಳು ನಮ್ಮ ಕಣ್ಣುಗಳನ್ನರಳಿಸಿದರೆ, ಇತ್ತ ಇತಿಹಾಸದ ಹಿನ್ನೆಲೆಗಳನ್ನು ಗಮನದಲ್ಲಿರಿಸಿ ನಿರ್ಮಿಸಲಾದ ಆಧುನಿಕ ಮೋಹಕ ಕಟ್ಟಡಗಳೂ ನಮ್ಮನ್ನು ಸೆಳೆಯುತ್ತಿರುತ್ತವೆ. ಅಷ್ಟಕ್ಕೂ ಮಹಾನಗರಿಗಳೆಂದರೆ ಗಾಜಿನ ಕೌದಿಯನ್ನು ಹೊದ್ದುಕೊಂಡ ಗಗನಚುಂಬಿ ಕಟ್ಟಡಗಳಷ್ಟೇ ಇರಬೇಕಿಲ್ಲ ಎಂಬುದನ್ನು ಸಾರಲು ದಿಲ್ಲಿಯಷ್ಟು ಸೂಕ್ತ ತಾಣವು ಇನ್ನೊಂದಿರಲಿಕ್ಕಿಲ್ಲ. 

ಸಿವಿಲ್ ಎಂಜಿನಿಯರ್ ಆಗಿರುವ ನನ್ನ ಗೆಳೆಯನೊಬ್ಬ ದುಬೈಯಲ್ಲಿ ನೆಲೆಯೂರಿದಾಗ, ನಮ್ಮ ಗೆಳೆಯರ ಬಳಗದ ಹಲವರಂತೆ ನಾನೂ ಖುಷಿಪಟ್ಟಿದ್ದೆ. ಏಕೆಂದರೆ ಸಿವಿಲ್ ಎಂಜಿನಿಯರುಗಳಿಗೆ ದುಬೈ ಮಹಾನಗರಿಯು ಸ್ವರ್ಗವಿದ್ದಂತೆ ಎಂಬ ಮಾತು ಕಳೆದ ಒಂದು-ಒಂದೂವರೆ ದಶಕಗಳಿಂದ ಚಾಲ್ತಿಯಲ್ಲಿದೆ. ಒಮ್ಮೆ ಟ್ರಾನ್ಸಿಟ್ ವೀಸಾ ಬಳಸಿಕೊಂಡು ದುಬೈಯ ಪ್ರಮುಖ ಬೀದಿಗಳಲ್ಲಿ ಅಡ್ಡಾಡುವ ಅವಕಾಶವೊಂದು ನನಗೆ ಆಕಸ್ಮಿಕವಾಗಿ ಸಿಕ್ಕಿದಾಗ, ಅಲ್ಲಿನ ಕಣ್ಣುಕುಕ್ಕುವ ಕಟ್ಟಡಗಳನ್ನು ಖುದ್ದಾಗಿ ನೋಡಿದ್ದೆ.

ವಿಶ್ವದ ಅತೀ ಎತ್ತರದ ಕಟ್ಟಡವಾಗಿರುವ ಬುರ್ಜ್ ಖಲೀಫಾ ಆಕಾಶಕ್ಕೆ ತೂತು ಕೊರೆಯುವಂತಿತ್ತು. ಹಲವು ಭವ್ಯ ಕಾಂಪ್ಲೆಕ್ಸುಗಳು ಜಗಮಗನೆ ಹೊಳೆಯುತ್ತಿದ್ದವು. ಇನ್ನು ವಿಚಿತ್ರ ಆಕಾರ ಮತ್ತು ಶೈಲಿಯ ಗಗನಚುಂಬಿ ಕಟ್ಟಡಗಳು, ಹಾಸಿದ ಕಪ್ಪುಕಂಬಳಿಯಂತಿದ್ದ ರಸ್ತೆಗಳು ಯಾವುದೋ ಕಂಪ್ಯೂಟರ್ ವೀಡಿಯೋಗೇಮ್ ಆಟವೊಂದರ ಅತ್ಯುತ್ಕøಷ್ಟ ಗ್ರಾಫಿಕ್ಸ್ ಅಳವಡಿಕೆಯುಳ್ಳ, ಕಾಲ್ಪನಿಕ ನಗರದಂತಷ್ಟೇ ನನಗಂದು ಕಂಡಿದ್ದು ಸತ್ಯ.   

ದಿಲ್ಲಿಯ ವಾಸ್ತುಶಿಲ್ಪ ವೈವಿಧ್ಯದಲ್ಲಿರುವ ಜೀವಂತಿಕೆಯು ಜಗತ್ತಿನ ಉಳಿದ ಮಹಾನಗರಗಳಿಗಿಂತ ಭಿನ್ನವಾಗಿ ನಿಲ್ಲುವುದು ಈ ಆಯಾಮದಲ್ಲಿ. ದಿಲ್ಲಿಯ ರಸ್ತೆಗಳಲ್ಲಿ ಸಾಗುತ್ತಾ ಹೋದರೆ ಬಹುತೇಕ ಎಲ್ಲೆಲ್ಲೂ ಕಾಣುವ ಮೊಘಲರ ಕಾಲದ ಕೋಟೆ-ಕೊತ್ತಲಗಳನ್ನು ಕ್ಷಣಕಾಲ ಮರೆತರೂ, ದಿಲ್ಲಿಯ ಮಟ್ಟಿಗೆ ವಾಸ್ತುಶಿಲ್ಪ ಸಿರಿವಂತಿಕೆಯ ಸ್ವರ್ಣಕಿರೀಟಕ್ಕೆ ಸಾಕಷ್ಟು ಗರಿಗಳಿವೆ. ಲ್ಯೂಟೆನ್ಸ್ ವಿನ್ಯಾಸದ ದಿಲ್ಲಿಯು ನಗರಕ್ಕೊಂದು ವಿಶೇಷ ಸೌಂದರ್ಯವನ್ನು ತಂದಿದ್ದೇ ಅಲ್ಲದೆ, ಮುಂಬರಲಿರುವ ಕಟ್ಟಡಗಳಿಗೂ ಒಂದು ವಿಶೇಷವಾದ ವೇದಿಕೆಯನ್ನು ಸಿದ್ಧಪಡಿಸಿಕೊಟ್ಟಿತ್ತು. ವಿಶ್ವದೆಲ್ಲೆಡೆಯಿಂದ ಅತ್ಯುತ್ಕಂಷ್ಟ ಎಂದು ಕರೆಯಬಹುದಾದ ವಿಶಿಷ್ಟ ವಿನ್ಯಾಸಗಳನ್ನು ಪ್ರಯೋಗಿಸುವಲ್ಲಿ ದಿಲ್ಲಿಯು ನಿಸ್ಸಂಕೋಚವಾಗಿ ತೆರೆದುಕೊಳ್ಳುತ್ತಾ ಹೋಯಿತು. ಇಂದು ದಿಲ್ಲಿಯ ಸೌಂದರ್ಯದಲ್ಲಿ ಕಾಣುವ ದೊಡ್ಡ ಪಾಲು ಇಲ್ಲಿಯ ವಾಸ್ತುಶಿಲ್ಪದ್ದೇ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.  

ಹಾಗಂತ ವಾಸ್ತುಶಿಲ್ಪದ ಸೌಂದರ್ಯವು ಇಲ್ಲಿರುವ ಗತಕಾಲದ ಕಟ್ಟಡಗಳಿಗಷ್ಟೇ ಸೀಮಿತವಾಗಿಲ್ಲ. ದಿಲ್ಲಿ ಪೋಲೀಸ್ ಮುಖ್ಯ ಕಾರ್ಯಾಲಯದ ಕಟ್ಟಡದ ಹೊರಾಂಗಣ ವಿನ್ಯಾಸವು ಯಾವ ಪಂಚತಾರಾ ಹೋಟೇಲನ್ನೂ ನಾಚಿಸುವಂತಿದೆ. ತನ್ನೆರಡೂ ಮುಖಗಳಲ್ಲಿ ದೈತ್ಯ ಜಾರುಬಂಡಿಯಂತಿರುವ ಎನ್.ಡಿ.ಆರ್.ಎಫ್ ಕಚೇರಿಯನ್ನು ನೋಡುವುದೇ ಒಂದು ಸೊಗಸು. ಸಿಲಿಂಡರ್ ಆಕೃತಿಯ ಕೇಕೊಂದರಿಂದ, ಚಿಕ್ಕದೊಂದು ತುಣುಕನ್ನು ತೆಗೆದರೇನೋ ಎಂಬಂತಿರುವ ಸ್ಟೇಟ್ಸ್‍ಮನ್ ಹೌಸಿನ ಭವ್ಯ ಕಟ್ಟಡವು ಕನ್ನಾಟ್ ಪ್ಲೇಸಿನ ಯಾವ ಮೂಲೆಯಲ್ಲಿ ನಿಂತು ದಿಟ್ಟಿಸಿದರೂ ಅದ್ಭುತವಾಗಿ ಕಾಣುತ್ತದೆ. ಹರ್ಬರ್ಟ್ ಬೇಕರ್ ಮತ್ತು ಎಡ್ವರ್ಡ್ ಲ್ಯೂಟೆನ್ಸ್ ವಿನ್ಯಾಸದ ಈ ಸ್ಟೇಟ್ಸ್‍ಮನ್ ಹೌಸ್ ಇಂದು ದಿಲ್ಲಿಯ ಐಕಾನಿಕ್ ಎನ್ನಿಸುವಂಥಾ ಕಟ್ಟಡಗಳಲ್ಲೊಂದು. ಇವೆಲ್ಲಾ ಸರ್ಕಾರಿ ಕಚೇರಿಗಳು-ಆಫೀಸ್ ಸಂಕೀರ್ಣಗಳೇ ಹೊರತು, ಪ್ರವಾಸಿ ತಾಣಗಳಲ್ಲ ಎಂಬುದು ನಾವೆಲ್ಲರೂ ಇಲ್ಲಿ ಗಮನಿಸಬೇಕಾದ ಅಂಶ. 

ಇಂದು ನ್ಯಾಷನಲ್ ಕೋ-ಆಪರೇಟಿವ್ ಡೆವಲಪ್ಮೆಂಟ್ ಕಾರ್ಪೋರೇಷನ್ ಕಚೇರಿಯಾಗಿರುವ ಕಟ್ಟಡವನ್ನು ಎಪ್ಪತ್ತರ ದಶಕದ ಅಂತ್ಯದಲ್ಲಿ ನಿರ್ಮಿಸಿದವರು ಕುಲ್ದೀಪ್ ಸಿಂಗ್. ಎರಡು ವಿಂಗ್ ಗಳನ್ನು ಹೊಂದಿರುವ ಈ ವಿಶಿಷ್ಟ ಕಟ್ಟಡವು ‘ಪಜಾಮಾ ಬಿಲ್ಡಿಂಗ್’ (ಪೈಜಾಮಾ ಬಿಲ್ಡಿಂಗ್) ಎಂದೇ ಚಿರಪರಿಚಿತ. ಮಧ್ಯಭಾಗದಲ್ಲಿ ದೊಡ್ಡ ಕಂಬವೊಂದಿದ್ದು ಪಾಶ್ರ್ವದಲ್ಲಿರುವ ಎರಡು ವಿಂಗ್ ಗಳು, ಪೈಜಾಮಾದ ಎರಡು ಕಾಲುಗಳಂತೆ ಕಾಣುವುದರಿಂದ ಇದಕ್ಕೆ ಈ ಅಡ್ಡಹೆಸರಂತೆ. 

ಇತ್ತ ದಿಲ್ಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿ ಇಂದು ಕಾಣಸಿಗುವ ಅಂಬಾದೀಪ್ ಟವರ್ ಕಟ್ಟಡ ನಿರ್ಮಾಣದ ಯೋಜನೆಯ ಬೀಜವನ್ನು ಎಂಭತ್ತೇಳರ ದಶಕದಲ್ಲೇ ಬಿತ್ತಲಾಗಿತ್ತು. ಮುಂದೆ 1992 ರಲ್ಲಿ ತಲೆಯೆತ್ತಿದ ಈ ಸುಂದರ ಕಟ್ಟಡವು ಇಪ್ಪತ್ತಮೂರು ಮಹಡಿಗಳನ್ನು ಹೊಂದಿದ್ದಲ್ಲದೆ, ಇಡೀ ದೆಹಲಿಯಲ್ಲಿ ಮೊಟ್ಟಮೊದಲಬಾರಿಗೆ ಗಾಜಿನ ಇಲವೇಟರುಗಳನ್ನೂ ಹೊಂದಿದ ಕಟ್ಟಡವೂ ಆಗಿತ್ತು. ಭಾರತೀಯ, ಪರ್ಷಿಯನ್, ನಿಯೋ-ಕ್ಲಾಸಿಕಲ್ ಮತ್ತು ಮಾಡರ್ನ್ ಆರ್ಕಿಟೆಕ್ಚರ್ ಗಳ ಅದ್ಭುತ ಮಿಶ್ರಣವೆಂದು ಕರೆಯಲಾಗುವ ಅಂಬಾದೀಪ್ ಟವರ್ ಇಂದು ದಿಲ್ಲಿಯಲ್ಲಿರುವ ಪ್ರಮುಖ ಬಹುಮಹಡಿ ಕಟ್ಟಡಗಳಲ್ಲೊಂದು. 

ದಿಲ್ಲಿಯಲ್ಲಿರುವ ಹಲವು ದೇಶಗಳ ರಾಯಭಾರ ಕಚೇರಿಗಳು ತಮ್ಮ ಇರುವಿಕೆಯ ಸೀಮಿತ ಮಟ್ಟಿನಲ್ಲಿ ತಮ್ಮ ಗರಿಮೆಯನ್ನೂ ಇಲ್ಲಿ ಸಾರುವಷ್ಟು ಶಕ್ತಿಯುಳ್ಳಂಥವುಗಳು. ಈ ನಿಟ್ಟಿನಲ್ಲಿ ದಿಲ್ಲಿಯಲ್ಲಿ ನಿರ್ಮಿಸಲಾಗಿರುವ ಹಲವು ಪ್ರಮುಖ ದೇಶಗಳ ರಾಯಭಾರ ಕಚೇರಿಗಳ ಸೌಂದರ್ಯವು ಒಂದಕ್ಕೊಂದು ಪೈಪೋಟಿ ನೀಡುವಷ್ಟು ಅದ್ಭುತವಾಗಿವೆ. ರಾಯಭಾರ ಕಚೇರಿಗಳು ವ್ಯಾಪಿಸಿಕೊಂಡಿರುವ ಪ್ರದೇಶದ ವಿಸ್ತೀರ್ಣ, ಒಳಾಂಗಣ-ಹೊರಾಂಗಣಗಳ ವಿನ್ಯಾಸಗಳು, ಇತರೆ ಚಟುವಟಿಕೆಗಳಿಗೆ ಮೀಸಲಿಟ್ಟಿರುವ ಸ್ಥಳಾವಕಾಶ… ಹೀಗೆ ಹತ್ತಾರು ಸಂಗತಿಗಳು ಸಾಮಾನ್ಯವಾಗಿ ಈ ವ್ಯಾಪ್ತಿಯಲ್ಲಿ ಬರುತ್ತವೆ. ವಿವಿಧ ದೇಶಗಳ ರಾಯಭಾರ ಕಚೇರಿಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ದಿಲ್ಲಿಯ ಚಾಣಕ್ಯಪುರಿಯು ಇಂದು ಮಹಾನಗರಿಯ ಅತ್ಯಂತ ಸುಂದರ ಭಾಗಗಳಲ್ಲೊಂದು. 

ಹಾಗೆ ನೋಡಿದರೆ ದಿಲ್ಲಿಯಲ್ಲಿರುವ ಆಯಾ ರಾಜ್ಯಗಳ ಭವನಗಳೂ ಕೂಡ ಇದಕ್ಕೆ ಹೊರತಲ್ಲ. ಗುಜರಾತ್ ರಾಜ್ಯವನ್ನು ಪ್ರತಿನಿಧಿಸುವ “ಗರ್ವಿ ಗುಜರಾತ್ ಭವನ್” ಥೇಟು ಸಿನಿಮೀಯ ಶೈಲಿಯ ಭವ್ಯ ಹವೇಲಿಯಂತಿದೆ. ಮಾನ್ಯ ಪ್ರಧಾನಮಂತ್ರಿಗಳು 2019 ರಲ್ಲಿ ಈ ಕಟ್ಟಡವನ್ನು ಅಧಿಕೃತವಾಗಿ ಉದ್ಘಾಟಿಸಿ, ತಮ್ಮ ಗುಜರಾತ್ ದಿನಗಳ ಆಡಳಿತದ ನೆನಪುಗಳನ್ನು ಹಂಚಿಕೊಂಡಿದ್ದರು. ಮಹಾರಾಷ್ಟ್ರ ಸದನ್ ಅದ್ದೂರಿ ಅರಮನೆಯಂತಿದ್ದರೆ, ಆಂಧ್ರಪ್ರದೇಶ ಭವನವೂ ಕೂಡ ಇದಕ್ಕೆ ಸರಿಸಮಾನವಾಗಿರುವಂತಿದೆ. ಇತ್ತ ತಮಿಳುನಾಡು ಭವನ ಮತ್ತು ಕೇರಳ ಹೌಸ್ ಗಳಂತೂ ಹೊಸಬರಿಗೂ ಪಕ್ಕಾ ರಾಜನೀತಿಯ ತರಂಗಗಳನ್ನು ಹೊರಹೊಮ್ಮಿಸುವ ರಾಜಕೀಯ ಶಕ್ತಿಕೇಂದ್ರಗಳಂತೆ ಗತ್ತಿನಿಂದ ನಿಂತಿವೆ. 

ಹೀಗೆ ಆಯಾ ದೇಶಗಳ, ಆಯಾ ರಾಜ್ಯಗಳ, ಆಯಾ ಸಂಸ್ಕøತಿಗಳ ಪ್ರತೀಕದಂತಿರುವ ಇಲ್ಲಿಯ ಹಲವು ಕಟ್ಟಡಗಳು, ತಮ್ಮದೇ ನೆಲೆಯಲ್ಲಿ ಟ್ರೇಡ್ ಮಾರ್ಕಿನಂತೆ ತಮ್ಮ ಇರುವಿಕೆಯನ್ನು ಸಾಬೀತುಪಡಿಸಿ ದಿಲ್ಲಿಯಲ್ಲಿ ಭದ್ರವಾಗಿ ಬೇರುಬಿಟ್ಟಿವೆ. ಇಂದು ಈ ಕಟ್ಟಡಗಳು ಎಲ್ಲರೂ ಸಾಮಾನ್ಯವಾಗಿ ಭಾವಿಸುವಂತೆ ಜುಜುಬಿ ಲ್ಯಾಂಡ್ ಮಾರ್ಕ್‍ಗಳೇನಲ್ಲ. ಬದಲಾಗಿ ವಿವಿಧ ಆಯಾಮಗಳಲ್ಲಿ ತಮ್ಮ ಪ್ರಾಮುಖ್ಯತೆಯನ್ನು ರಾಷ್ಟ್ರರಾಜಧಾನಿಯಲ್ಲಿ ಸಾರುವ ರಾಯಭಾರಿಗಳು; ಶಹರದ ಸ್ವಾತಂತ್ರ್ಯೋತ್ತರ ಮತ್ತು ಆಧುನಿಕ ವಾಸ್ತುಶಿಲ್ಪ ಶ್ರೀಮಂತಿಕೆಗೆ ಅಪ್ಪಟ ಜೀವಂತಿಕೆಯನ್ನು ತಂದಿರುವ ಕಟ್ಟಡ ಕಾಶಿಗಳು. 

“ದಿಲ್ಲಿಯ ಬೀದಿಗಳು ಸಾಮಾನ್ಯ ಬೀದಿಗಳಲ್ಲ. ಬದಲಾಗಿ ಮಹಾನ್ ಕಲಾವಿದನೊಬ್ಬನ ಅದ್ಭುತ ಚಿತ್ರಪಟಗಳ ಸಂಗ್ರಹಗಳು”, ಎಂದು ಖ್ಯಾತ ಉರ್ದು ಕವಿ ಮಹಮ್ಮದ್ ತಾಕಿ ಮೀರ್ (ಮೀರ್ ತಾಕಿ ಮೀರ್) ಹದಿನೆಂಟನೆಯ ಶತಮಾನದಲ್ಲೇ ಭವಿಷ್ಯ ನುಡಿದಂತೆ ಹೇಳಿದ್ದ. ದಿಲ್ಲಿಯ ಸೌಂದರ್ಯವು ಆಗಿನ ಕವಿಗಳಿಗೂ ಸ್ಫೂರ್ತಿಯಾಗಿತ್ತು. ಈಗಲೂ ದಿಲ್ಲಿಯೆಂದರೆ ಕಾವ್ಯಪ್ರೀತಿಗೊಂದು ಕಾರಣ. ಇದು ದಿಲ್ಲಿಯೆಂಬ ಐತಿಹಾಸಿಕ ನಗರಿಯ ಗರಿಮೆಯಲ್ಲದೆ ಇನ್ನೇನು?

ಇನ್ನು ಮೀರ್ ಹೇಳಿದ್ದ ಭವಿಷ್ಯದಂತಿರುವ ಕವಿವಾಣಿಯು ನಮಗೀಗ ವರ್ತಮಾನವಾಗಿದೆ. ಇಂಥದ್ದೊಂದು ಕಾಲಮಾನದಲ್ಲಿ ದಿಲ್ಲಿಯನ್ನು ಹೀಗೆ ನೋಡುವುದೇ ನಮ್ಮ ಹೆಮ್ಮೆ.

‍ಲೇಖಕರು Admin

August 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: