ಕಂಪ್ಲೀಟ್ ಕನ್ನಡಿಗನಾಗಲು ಸಾಧ್ಯವೆ?!

ಅರ್ಕ

ನವೆಂಬರ್ ತಿಂಗಳು ಬಂದಿದೆ. ಎಂದಿನಂತೆ ಕನ್ನಡ – ಅದರ ಅಸ್ಮಿತೆ – ಗತ ಕಾಲದ ವೈಭವದ ಮೆಲುಕುಗಳು – ಪ್ರಸಕ್ತದಲ್ಲಿ ತಲುಪಿರುವ ಭಾಷಾ ಬಳಕೆಯ ಅಧೋಗತಿ – ಮುಂದೆ ಎದುರಾಗಿರುವ ಅರೆ ಬರೆ ಬೆಳಕಿನ ಸುರಂಗ ರೂಪದ ಹಾದಿ, ಎಲ್ಲವೂ ವಾರ್ಷಿಕ ಸ್ಮರಣೋತ್ಸವದಂತೆ ನೆನಪಿಗೆ ಬಂದಿದೆ. ಸುರಂಗದ ಆ ಬದಿ ಬೆಳಕಿದೆಯಾ ? ಇಂದು ಬದುಕಿರುವ ಕನ್ನಡ ಮುತ್ಸದ್ಧಿಗಳಿಗೂ ಊಹಿಸಲಾಗುತ್ತಿಲ್ಲ. 

ಇಂತಹ ಕಾಲಘಟ್ಟದಲ್ಲಿ, ದೇಶದ ಬಹು ಭಾಷಿಕರ ತವರೂರಾಗಲು ಸಜ್ಜಾಗಿ ನಿಂತಿರುವ ಬೆಂಗಳೂರು. ಇಂಗ್ಲಿಷ್ ಮಾತಾಡುವವನು ಉತ್ತಮ – ಕನ್ನಡಕ್ಕೆ ಇಂಗ್ಲೀಷ್ ಬೆರೆಸಿ ಮಾತಾಡುವವನು ಮಧ್ಯಮ – ಕೇವಲ ಕನ್ನಡ ಮಾತಾಡುವವನು ಅಧಮ ಎಂಬಂತೆ ಬಲವಾಗುತ್ತಿರುವ ಸಾರ್ವತ್ರಿಕ ನಂಬಿಕೆ (ನಗರಗಳಲ್ಲಿ ಮಾತ್ರ). ಇಂಥ ಸಂದಿಗ್ಧತೆಯಲ್ಲಿರುವ ಬೆಂಗಳೂರನ್ನೇ ರಾಜ್ಯ ಎಂದುಕೊಂಡಿರುವ ಸುದ್ದಿ ಮತ್ತು ಚಲನಚಿತ್ರ ಒಳಗೊಂಡ ದೃಶ್ಯ ಮಾಧ್ಯಮಗಳು. ಇವೆರಡರಿಂದಲೇ ಬಹುತರ ಪ್ರಭಾವಕ್ಕೊಳಗಾಗುತ್ತಿರುವ ಯುವಪೀಳಿಗೆ. ಕನ್ನಡದ ಭವಿಷ್ಯ ಹೇಗೆ ಎಂದು ತಮ್ಮ ಸಂಜೆ ಚಹಾದ ಜೊತೆ ಚಿಂತಿಸುವ ಚಿಂತಕರಿಗೆ, ಇವೆಲ್ಲ ಬಿಡಿಸಲು ತಡಕಾಡಿಸುವ ಪದಬಂಧದಂತಾಗಿವೆ. 

ಇಂತಹ ಯುವ ಪೀಳಿಗೆಯ ಯುವಕ / ಯುವತಿಯರು ನಮ್ಮದೇ ಕೊಡಗಿನ ೨೫ ರೂಪಾಯಿಯ ಕಾಫಿಯನ್ನು ಸ್ಟಾರ್ ಬಕ್ಸ್ ಎಂಬ ವಿದೇಶಿ ಕೆಫೆ ಯಲ್ಲಿ ೨೫೦ ಬಕ್ಸ್ (ಹಣ) ನೀಡಿ ಕುಡಿದರೆ, ತಾನು ಜಾಗತೀಕರಣದ ಪ್ರವರ್ತಕನಾಗಬಲ್ಲೆ ಎಂದು ತಿಳಿದು, ಲೋಕಲ್ ಭಾಷೆಯನ್ನು ಗ್ಲೋಕಲ್ ಮಾಡಬೇಕೆಂದರೆ ಕನ್ನಡಕ್ಕೆ ಇಂಗ್ಲೀಷ್ ಬೆರೆಸಲೇಬೇಕು ಎಂದು ನಂಬುತ್ತಿದ್ದಾರೆ ಅಥವಾ ಕಾಣದ ಕೈಗಳಿಂದ ನಂಬಿಸಲ್ಪಡುತ್ತಿದ್ದಾರೆ. 

ಭಾಷೆ ಎಂಬುದು ಸಂವಹನ ಮಾಧ್ಯಮ ಮಾತ್ರ. ಕನ್ನಡವಾದರೇನು, ಇಂಗ್ಲೀಷಾದರೇನು ಅಥವಾ ಕನ್ನಡಾಂಗ್ಲವಾದರೇನು ? ಎಂದು ವಾದ ಮಾಡುವ ಕಮಂಗಿಗಳಿಗೆ, ಪ್ರಶ್ನೆ ಇರುವುದು ಸಂವಹನದ್ದಲ್ಲ, ತಾಯಿ ಸಮಾನ ಮಾತೃ ಭಾಷೆಯ ಋಣದ್ದು ಅಂತ ತಿಳಿಹೇಳುವ ಅನಿವಾರ್ಯತೆ ಎದುರಾಗಿರುವುದು ವಿಪರ್ಯಾಸ. ಆದರೆ, ಇಂತಹ ಋಣಕ್ಕೇ ಅವಕಾಶ ಕೊಡದಂತೆ, ಕೆಲ ಮಮ್ಮಿ ಡ್ಯಾಡಿಗಳು ಹುಟ್ಟಿದಾರಭ್ಯ ಇಂಗ್ಲೀಷಲ್ಲೇ ಮುದ್ದಾಡಿ, ಮಾತಾಡಿ, ಆಡಿಸಿ ಬೆಳೆಸುತ್ತಿದ್ದಾರೆ. ೩ನೆ ವಯಸ್ಸಿಗೆ ಮಗುವಿನ ಇಂಗ್ಲೀಷ್ ಸಂವಹನ ಸಾಮರ್ಥ್ಯ ಅರಿಯುವ ಸಂದರ್ಶನದ ಸಿದ್ಧತೆಗೋಸ್ಕರ ಕನ್ನಡ ಮಾತೃ ಭಾಷೆಯಾಗುವ ಪ್ರಮೇಯವೂ ಇಲ್ಲದಂತೆ, ಋಣಕ್ಕೂ ಅವಕಾಶವಿಲ್ಲದಂತೆ ಬೆಳೆಸುತ್ತಿರುವುದನ್ನು ದುರ್ವಿಧಿ ಎಂತಲೇ ಹೇಳಬೇಕು. 

ಆಂಗ್ಲ ಮಾಧ್ಯಮ ಅಪ್ಪಿಕೊಳ್ಳುವ ಇಂಥವರ ಜೀವನ ಒಂದೆಡೆಯಾದರೆ, ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಆದರೆ, ದಿನ ದಿನದ ಜೀವನದಲ್ಲಿ ಸರಳ – ನೇರ ಅರ್ಥ ಕೊಡುವ ಕನ್ನಡ ಪದಗಳಿಗೂ ಸಹ  ಇಂಗ್ಲಿಷ್ ಪದಗಳ ಆಸರೆ ಪಡೆಯುತ್ತಿರುವ ಉಳಿದವರ ಭಾಷಾ ಶೈಲಿ ಇನ್ನೊಂದು ಕಳವಳಕಾರಿ ಬೆಳವಣಿಗೆ. ಈ ಬೆಳವಣಿಗೆಯೇ ಈ ಬರಹದ ಹೂರಣ. ಅಲ್ಲಲ್ಲಿ ಸಣ್ಣದಾಗಿ ಹೊಲಿಗೆ ಬಿಟ್ಟಿರುವ ಬಟ್ಟೆಯನ್ನು, ಅದೇನು ದೊಡ್ಡದಲ್ಲ ಎಂದು ಉಪೇಕ್ಷೆ ಮಾಡುತ್ತಾ, ದಿನವೂ ಧರಿಸುತ್ತ ಹೋದರೆ, ಕೆಲವೇ ದಿನಗಳಲ್ಲಿ ಆ ಬಟ್ಟೆ ಉಡಲು ಯೋಗ್ಯವಲ್ಲದ ರೀತಿಯಲ್ಲಿ ಹರಿದು ಹೋಗುವ ಹಾಗೆ, ಪರ – ಪದ ಬಳಕೆ / ಕನ್ನಡ ಪದಗಳ ಅನ್ನವನ್ನು ಪದ ಬಿರಿಯಾನಿ ಮಾಡಿ ಸವಿಯುವ ಸಾಹಸ, ಸಹನೀಯವಾಗಿ ಕಂಡರೂ ಹತ್ತಿರದ ಭವಿಷ್ಯತ್ತಿನಲ್ಲಿ, ದಿನವೂ ಬಿರಿಯಾನಿ ತಿನ್ನುವ ನಮ್ಮೀ ಹವ್ಯಾಸ ನಮ್ಮ ಆರೋಗ್ಯ ಹಾಳು ಮಾಡದೆ ಇರದು. 

ಇಂತಹ ಸನ್ನಿವೇಶದಲ್ಲಿ, ಕನ್ನಡದ ಭವ್ಯ ಸೌಧ ಕಟ್ಟಿ, ಮೆರೆಸುವ ಕಸುವು ನಮಗೆ ಕಷ್ಟ ಸಾಧ್ಯ. ಆದರೆ ರಾಮನ ಸೇವೆಗೈದ ಪುಟ್ಟ ಅಳಿಲಿಗೂ ಮಹಾಗ್ರಂಥಗಳಲ್ಲಿ ಸ್ಮರಣೆ ಸಿಕ್ಕ ಹಾಗೆ, ದೈನಂದಿನ ಕನ್ನಡ ಬಳಸುವ ನಮ್ಮ ಅಪ್ರಯತ್ನಪೂರ್ವಕ ಸಣ್ಣ ಸಣ್ಣ ಪ್ರಯತ್ನಗಳಿಗೂ ಮುಂದಿನ ಪೀಳಿಗೆಗಳು ನಮಗೆ ಕೃತಜ್ಞತೆ ಸೂಚಿಸಿಯೇ ಸೂಚಿಸುತ್ತವೆ.

ಇತ್ತೀಚೆಗೆ ನಿಧನರಾದ ಶ್ರೀ ಪುನೀತ್ ರಾಜಕುಮಾರ್ ರವರು ಒಂದು ಸಂದರ್ಶನದಲ್ಲಿ, ಒಂದು ಸದೃಢ – ಸಮರ್ಥ ಪೀಳಿಗೆಯನ್ನು ಸೃಷ್ಟಿಸಬೇಕಾದಲ್ಲಿ, ಹಿಂದಿನ ಒಂದಿಡೀ ಪೀಳಿಗೆ ಅದಕ್ಕೋಸ್ಕರ ತನ್ನ ಇಡೀ ಜೀವಮಾನ ಮೀಸಲಿಡಬೇಕಾಗಬಹುದು ಅಂತ ಹೇಳಿದ್ದರು. ಕನ್ನಡ ಬಳಕೆಯ ಪ್ರಸಕ್ತ ಸ್ಥಿತಿ ನೋಡಿದರೆ, ನಮ್ಮ ಪೀಳಿಗೆ, ಈ ಒಂದು ಪುಟ್ಟ ಪ್ರಯತ್ನಕ್ಕೆ ಜೀವಮಾನ ಮೀಸಲಿಟ್ಟಲ್ಲಿ, ಮುಂದಿನ ಪೀಳಿಗೆಗೆ ಕನ್ನಡ ಬ್ಯಾಂಕಿನಲ್ಲಿ ಅಗಾಧ ಠೇವಣಿ ಉಳಿಸಿ ಹೋಗಬಹುದು. 

ಹೀಗಿರುವಾಗ, ನಾನು ನಮ್ಮ ಊರಿನ ಕೆಲವು ಸ್ನೇಹಿತರೊಂದಿಗೆ ಹರಟುವಾಗ ಅವರು ಬಳಸುವ ಕನ್ನಡ ಪದಗಳಿಗೂ ನನ್ನ ಕನ್ನಡ ಪದಗಳಿಗೂ ಇರುವ ವ್ಯತ್ಯಾಸದ ಅರಿವು ನನಗೆ ಇತ್ತೀಚೆಗೆ ಆಯಿತು. ದಿನ ದಿನದ ಆಡುಭಾಷೆಯಲ್ಲಿ ಹೇರಳ ಹಾಗೂ ಸಂಪೂರ್ಣವಾಗಿ ವರ್ಜಿಸಲು ಸಾಧ್ಯವಿರುವ ಆಂಗ್ಲ ಪದಗಳ ಬಳಕೆಯೇ ಆ ವ್ಯತ್ಯಾಸ. 

OK – ಆಯ್ತು / Correct – ಸರಿ / But – ಆದರೆ / Actually – ನಿಜವಾಗಲೂ / First – ಮೊದಲಿಗೆ / Decide – ನಿರ್ಧರಿಸು / Yes – ಹೌದು / Done – ಆಯ್ತು / Words – ಶಬ್ದ / Difference – ವ್ಯತ್ಯಾಸ / Bag – ಚೀಲ / Paper – ಹಾಳೆ / Chair – ಕುರ್ಚಿ / Box – ಡಬ್ಬಿ / Spoon – ಚಮಚ / Table – ಮೇಜು / Ready – ತಯಾರು / Use – ಉಪಯೋಗ / Regular – ಯಾವಾಗಲೂ / Rice – ಅಕ್ಕಿ. ಹೀಗೆ, ಟೆನಿಸ್ ಆಟದಲ್ಲಿ ಎದುರಾಳಿಯ ಶ್ರಮ – ಚಾಣಾಕ್ಷತನ ಯಾವುದೂ ಇಲ್ಲದೆ, ನಾವೇ ಮಾಡುವ ಸ್ವಯಂ ಕೃತ ತಪ್ಪುಗಳಂತೆ (Unforced Errors) ಹೇರಿಕೊಂಡಿರುವ ಇಂತಹ ನೂರಾರು ಪದಗಳನ್ನು ನೀವೂ ಜೋಡಿಸಿಕೊಳ್ಳಬಹುದು. 

ನಾನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ೧೯ ವರ್ಷಗಳ ಹಿಂದೆ, ನಮ್ಮ ಊರನ್ನ ಬಿಡುವ ಮುಂಚೆ ಇಂತಹ ಪದಗಳ ಬಳಕೆ ವಿರಳವಿದ್ದದ್ದು, ಕಾಲಾಂತರದಲ್ಲಿ ನನ್ನ ಅರಿವಿಲ್ಲದೆ ಹೇರಳ ಆಗಿ ಹೋಗಿದೆ ಎಂಬುದನ್ನು ಗಮನಿಸಿದ್ದೇನೆ. ಇದು ನನ್ನೊಬ್ಬನ ಕಥೆಯಲ್ಲ, ಇಂದಿನ ಬಹುತೇಕ ಮೆಟ್ರೋ ಕನ್ನಡಿಗರ ಕಥೆಯಾಗಿದೆ. 

ಇಂತಹ ದಿನಬಳಕೆಯ ಅತ್ಯಂತ ಸರಳ, ಯಾವುದೇ ದ್ವಂದ್ವಕ್ಕೆ ಅವಕಾಶ ಇಲ್ಲದ ಕನ್ನಡ ಪದಗಳ ಲಭ್ಯತೆ ಇದ್ದಾಗಲೂ ನಾವುಗಳು ಸಮಾನಾರ್ಥಕ ಆಂಗ್ಲ ಪದ ಬಳಕೆಗೆ ಯಾರ ಒತ್ತಾಯವೂ ಇಲ್ಲದೆ ಶರಣಾಗಿದ್ದೇವೆ. 

ಆಂಗ್ಲ ಭಾಷೆಯ ಮೇಲಿನ ನಮ್ಮ ಮೋಹ – ನಮ್ಮನ್ನು ಗುಗ್ಗು ಎಂದಾರು ಎಂಬ ಭಾವ – ಇವೆರಡರಿಂದುಂಟಾದ ಕೀಳರಿಮೆ ಇವೇ ಭಾಷಾತ್ಮಾಹುತಿಗೆ ಸಮನಾದ ಇಂತಹ ಅಕ್ಷಮ್ಯ ನಡವಳಿಕೆಗೆ  ಕಾರಣಗಳು ಅಂತ ನನ್ನ ಭಾವನೆ. 

ಇಂಥ ಪದಗಳ ಬಳಕೆಯಿಂದ ನಾವುಗಳು ಆಂಗ್ಲ ಭಾಷೆಯ ಮೇಲೆ ಹಿಡಿತ ಸಾಧಿಸುವುದು ಅಷ್ಟರಲ್ಲೇ ಇದೆ. ಇಂಥ ಅನಾವಶ್ಯಕ ಪದ ಬಳಕೆ, ಮುಂಬೈ ಸ್ಲಂ ಮಕ್ಕಳಿಗೆ ಡ್ರಗ್ಸ್ ನಶೆ ತೋರಿಸಿ, ನಂತರ ಅವುಗಳಿಗೆ ತೆರಬೇಕಾದ ಬೆಲೆ ಕೈಗೆಟುಕಲ್ಲ ಅಂತ ಗೊತ್ತಾದ ಮೇಲೆ ಆ ಮಕ್ಕಳು 10 ರೂಪಾಯಿಯ – ಬಣ್ಣಕ್ಕೆ ಬಳಸುವ ಥಿನ್ನರ್ ಶೀಷೆಯ ನಶೆ ಏರಿಸಿದಂತಿದೆ. 

ಬಹುಭಾಷೆಯ ಭಾರತದ ಮೇಲೆ ಇಂಗ್ಲೀಷ್ ಎಂಬ ಒಂದೇ ಭಾಷೆ, ಬ್ರಿಟಿಷರ ೨೦೦ ವರ್ಷಗಳ ನಿರಂತರ ಪ್ರಯತ್ನದ ನಂತರ, ಕೇವಲ ನಗರಗಳಲ್ಲಿ ಮಾತ್ರ ಪ್ರಭಾವ ಬೀರಲು ಸಾಧ್ಯವಾಯಿತು ಎಂದರೆ, ಅನಕ್ಷರತೆಯ ಹೊರತಾಗಿ, ನಮ್ಮ ಹಳ್ಳಿಗರ ಮಾತೃ ಭಾಷೆ ಅಭಿಮಾನ ಸಹ ಒಂದಂಶ ಕಾರಣ. ಆದರೆ, ಇಂದು ಪರಕೀಯರು ದೇಶ ಬಿಟ್ಟು ಹೋದ ಅಮೃತ ಘಳಿಗೆ ಕಳೆದು, ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ, ನಮ್ಮ ಇಂಗ್ಲೀಷ್ ದಾಸ್ಯದ ದ್ಯೋತಕದಂತೆ , ಹಳ್ಳಿಗಳೂ ಇಂಗ್ಲೀಷಿನತ್ತ ವಾಲುತ್ತಿವೆ. ಈ ಋಣಾತ್ಮಕ ಬೆಳವಣಿಗೆಗೆ ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ಮಾಧ್ಯಮಗಳು ಅರ್ಧದಷ್ಟು ಹೊಣೆ ಹೊರಬೇಕಿದೆ. ಮುಂದೊಮ್ಮೆ ಅವರ ದೆಶೆಯಿಂದ ದೇಶದ ಮಾತೃ ಭಾಷೆಯ ಭವಿಷ್ಯ ಧನಾತ್ಮಕವಾಗಿ ಬದಲಾದರೂ ಅದರ ಶ್ರೇಯ ಅವರಿಗೇ ಸಲ್ಲಬೇಕು. ಹಾಗಿದೆ ಅವರುಗಳ ಪ್ರಭಾವಳಿ. 

ಇಂತಹ ಪ್ರಭಾವಳಿ ಹೊಂದಿರುವ ಮಾಧ್ಯಮಗಳು ಯಾವುವು ಎಂದರೆ, 24X7 ಸುದ್ದಿ ಮಾಧ್ಯಮ ಮತ್ತು ಕಿರು – ಹಿರಿ ತೆರೆ ಮನರಂಜನೋದ್ಯಮ. ನಮ್ಮ ರಾಜ್ಯದಲ್ಲಿ ಹಳ್ಳಿ – ನಗರ ಭೇದವಿಲ್ಲದೆ, ಹಿಂದಿ ಅರ್ಥವಾಗದ – ಇಂಗ್ಲೀಷ್ ಅಷ್ಟೇನೂ ಬರದ ಯುವಕ – ಮುದುಕರಾದಿಯಾಗಿ ಎಲ್ಲರೂ ವಾರದ ಮನರಂಜನೆಗೆ ಅವಲಂಬಿಸುತ್ತಿರುವುದು ಕನ್ನಡ ಸುದ್ದಿ ಮಾಧ್ಯಮಗಳನ್ನು ಹಾಗೂ ವಾರಾಂತ್ಯದ ಮನರಂಜನೆಗೆ ಅವಲಂಬಿಸಿರುವುದು ಕನ್ನಡ ಚಲನಚಿತ್ರಗಳನ್ನು. ಈ ರೀತಿ ಇಡೀ ರಾಜ್ಯದ ಬಹುತರ ಜನಸಮೂಹವನ್ನು ಸಮೂಹ ಸನ್ನಿಗೆ ಒಳಪಡಿಸುವ ಅಗಾಧ ಅವಕಾಶ ಹೊಂದಿರುವ ಈ ಎರಡು ಸಂಸ್ಥೆಗಳು, ನಾನು ತೋರಿಸಿದ್ದನ್ನು ನೀನು ನೋಡಬೇಕು ಎಂಬಂತೆ ವರ್ತಿಸುತ್ತಾ,  ‘ನೋಡಿ ಸ್ವಾಮಿ ನಾವಿರೋದು ಹೀಗೆ’ ಎನ್ನುತ್ತಿವೆ. ನಮ್ಮ ಅಭಿಪ್ರಾಯದ ಚೌಕಾಶಿಗೆ ಅವಕಾಶ ಕೊಡದೆ, ನೀ ಹೋದರೆ ಇನ್ನೊಬ್ಬ ಗಿರಾಕಿ ಬರುತ್ತಾನೆ ಎಂಬ ಅವಿವೇಕಿ ವ್ಯಾಪಾರಿಯಷ್ಟು ಹುಂಬತನ ತೋರಿಸುತ್ತಿವೆ. 

ಇವರು ತೋರಿಸಿದ್ದನ್ನು ನಾವು ನೋಡಿದಾಗ, ಅದನ್ನೇ ಟಿ.ಆರ್.ಪಿ. ಅಂತ ನಂಬಿ, ಟಿ.ಆರ್.ಪಿ. ಆಧರಿತ ಬೇಡಿಕೆಯ ಸುದ್ದಿ ಮಾರುವುದು ಸುದ್ದಿ ಮಾಧ್ಯಮ ಅಲ್ಲಲ್ಲ ಸುದ್ದಿ ಉದ್ಯಮದ ಕಥೆಯಾದರೆ, ಪ್ರತಿ ವಾರ ಹೊಸ ಸಿನೆಮಾ ಬಂದರೂ ಬೇಸರಿಸದೆ ಹೋಗುವ ಯುವ ಪೀಳಿಗೆಯ  ವಯೋಸಹಜ ಆಸೆಗಳಿಗೆ ಆಮಿಷ ಒಡ್ಡುವ – ಟೀನೇಜ್ ಅಡ್ರಿನಾಲಿನ್ ರಶ್ (Teenage Adrenaline Rush)ನ್ನು ತಣಿಸುವಂಥ ಚಿತ್ರಗಳನ್ನು ವಾರಕ್ಕೊಂದರಂತೆ ಸರಬರಾಜು ಮಾಡುತ್ತಿರುವುದು ಚಿತ್ರೋದ್ಯಮದ ಕಥೆ. ಎರಡೂ ಉದ್ಯಮಗಳಿಗೂ ಹಣ ಗಳಿಸುವ ವಿದ್ಯೆ ಸಿದ್ಧಿಸಿರಬಹುದು ಆದರೆ ಕನ್ನಡಮ್ಮನ ಮನ ಗಳಿಕೆಯ ವಿದ್ಯೆ ಒಲಿದಿದೆಯೇ ಎಂಬ ಪ್ರಶ್ನೆಯ ಜೊತೆಗೆ ‘ ಕನ್ನಡ ಉಳಿಸಿ ‘ ಹೋರಾಟಕ್ಕೂ, ಇವರಿಗೂ ಏನು ಸಂಬಂಧ ಅಂತ ನಿಮ್ಮ ಪ್ರಶ್ನೆಯಾದರೆ. ಉತ್ತರ ಸರಳ. 

ಮನರಂಜನೆ ಮಾತ್ರ ಉದ್ದೇಶವಾಗಿದ್ದ ಹಾಗೂ ಅಂದಿನ ಕಾಲದಲ್ಲೂ ಕೆಟ್ಟದ್ದು ನೀಡಿದರೆ ಬಾಚಿ ತಬ್ಬಿಕೊಳ್ಳುವ ಜನ ಇದ್ದಾಗ್ಯೂ, ಕನ್ನಡ ಚಿತ್ರರಂಗವನ್ನು ಕನ್ನಡ ಅಸ್ಮಿತೆಯ ಅಂಬಾರಿಯಾಗಿ ಮೆರೆಸಿದ, ೪ ನೇ ತರಗತಿ ಓದಿ ಡಾಕ್ಟರೇಟ್ ಪಡೆಯುವ ಮಟ್ಟಕ್ಕೆ ಬೆಳೆದ ರಾಜ್ ಕುಮಾರ್ ರವರ ಕನ್ನಡ ಬದ್ಧತೆಯನ್ನು ನಾವಿಂದು ಸುದ್ದಿ ಉದ್ಯಮಿಗಳಿಂದ ಹಾಗೂ ಚಿತ್ರದ ಉದ್ಯಮಿಗಳಿಂದ ಬಯಸಬೇಕಿದೆ. ಈ ಎರಡೂ ಸಂಸ್ಥೆಗಳ ಹೆಸರಲ್ಲೇ ಉದ್ಯಮ ಎಂಬ ಪದ ಇರುವುದರಿಂದ, ಅವರ ಉದ್ಯೋಗದ ಆತ್ಮ ಹಣ ಗಳಿಕೆಯಲ್ಲಿ ತೊಡಗಿದೆ ಎಂಬ ಸತ್ಯದ ಅರಿವಿದ್ದಾಗ್ಯೂ, ಕನ್ನಡದ ಮೇಲಿನ ಮಮಕಾರ ಅವರಲ್ಲೂ ಕಡಿಮೆಯಾಗಿಲ್ಲ ಎಂಬ ನಂಬಿಕೆಯಿಂದ ಅವರಿಂದ ನಿರೀಕ್ಷೆ ಇಟ್ಟುಕೊಳ್ಳಲೇಬೇಕಿದೆ. 

ಹೀಗಿರುವಾಗ, ಕನ್ನಡ ಇತಿಹಾಸ – ಭೂಗೋಳವನ್ನು ಅರೆ ಬರೆ ತಿಳಿದ, ಸುದ್ದಿ ಪ್ರಸಾರಣೆಯನ್ನು ಬೆಳಿಗ್ಗೆ ಐದಕ್ಕೆ ಸೈಕಲ್ ನಲ್ಲಿ ಮನೆಗೆ ಮನೆಗೆ ಸುದ್ದಿ ಪತ್ರಿಕೆ ಹಂಚಿದಷ್ಟೆ ಯಾಂತ್ರಿಕ ಅಂದುಕೊಂಡಿರುವ, ಹೊಸ ಪ್ರಯೋಗಗಳಿಲ್ಲದ, ಕನ್ನಡ ಪದ ಬಳಕೆಯ ಪ್ರಾಮುಖ್ಯತೆ ಅರಿಯದ, ಪತ್ರಿಕೋದ್ಯಮವನ್ನು ಉದ್ಯಮವೆಂದು ತಿಳಿದು ಓದಿದ ವಿದ್ಯಾರ್ಥಿಗಳು ನಮ್ಮೆದುರು ಇಡೀ ದಿನ ಹಕ್ಕಿ ಬೆಳೆಯುವ ಹನ್ನದಾತನ ಗೋಳಿನ ಕಥೆ ಹೇಳುತ್ತಿದ್ದಾರೆ ಅಲ್ಲಲ್ಲ ಓದುತ್ತಿದ್ದಾರೆ. ಎಲ್ಲ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೇ ಅಂತ ಹೇಳುವುದಿಲ್ಲ. ಆದರೆ, ಪ್ರತಿ ಸುದ್ದಿ ವಾಹಿನಿಯಲ್ಲಿ ಮುಖ ವಾಣಿಯಂತೆ ಇರುವ ಒಬ್ಬೊಬ್ಬರನ್ನು ಬಿಟ್ಟರೆ ಉಳಿದವರ ಜ್ಞಾನ ಭಂಡಾರ, ಕುಂಕುಮ ಬಟ್ಟಲಷ್ಟೆ ಅಗಾಧ. 

ಇಂತಹ ಸುದ್ದಿ ಮಾಧ್ಯಮಗಳು ದಿನಕ್ಕೆ ಕನಿಷ್ಠ ೪-೫ ಬಾರಿ ಸ್ಫೋಟಕ ಸುದ್ದಿ (Breaking News) ಬಂದಿದೆ ಬನ್ರಪ್ಪೋ ಬನ್ರಿ ಎಂದು ಇಡೀ ಟಿ.ವಿ. ಪರದೆಗೆ ಬೆಂಕಿ ಹಚ್ಚಿ ಮಧ್ಯದಲ್ಲಿ ಕನ್ನಡಾಂಗ್ಲ ಪದಗಳ ಕುಣಿತ ಮಾಡಿಸುತ್ತವೆ. ಜೊತೆಗೆ ಅಸಂಬದ್ಧ ಪ್ರಾಸ ಪದಗಳ ಬಳಕೆ. ಜನರ ಗಮನ ಸೆಳೆಯುವ ಒಂದೇ ಉದ್ದೇಶಕ್ಕೆ, ಮತ್ತು ನಮ್ಮಲ್ಲೇ ಮೊದಲು ಎಂದು ಗೆದ್ದು ಬೀಗಲು, ಆ ಕ್ಷಣಕ್ಕೆ ಹೊಳೆಯುವ ಮಸಾಲೆ ಭರಿತ ಕನ್ನಡ ವಾಕ್ಯ ರಚನೆ. ಈ ಪದಗಳ ಬಳಕೆ ಹಾಗೂ ವಾಕ್ಯ ರಚನೆಯ ಧಾಟಿ ಕರ್ನಾಟಕ ರಾಜ್ಯದ ಯಾವ ಭಾಗದಲ್ಲೂ ಬಳಕೆಯಲ್ಲಿಲ್ಲ. ಪ್ರತಿ ೧೦೦ ಕಿಮೀ ಗೆ ಭಾಷೆಯ ಶೈಲಿ ಬದಲಾಗುತ್ತದೆ ಎಂಬ ಸಾಂಸ್ಕೃತಿಕ ಸತ್ಯ ನಂಬುವುದಾದರೂ ಸಹ, ಇಂತಹ ಭಾಷೆ ಬಳಸುವ ಅರೆವಾಸಿ ಕನ್ನಡಿಗರು ರಾಜ್ಯದ ಅದ್ಯಾವ ಭಾಗದಲ್ಲಿ ವಾಸಿಸುತ್ತಿದ್ದಾರೆ ಅಂತ ಇವತ್ತಿನವರೆಗೂ ತಿಳಿಯದಾಗಿದೆ. 

ಇನ್ನು ಚಿತ್ರೋದ್ಯಮ ಸಹ ಸುದ್ದಿ ಉದ್ಯಮದ ಎಲ್ಲ ಬೇಜವಾಬ್ದಾರಿ ವರ್ತನೆಗಳ ಕನ್ನಡಿ ಎಂಬಂತಿದೆ. ರಾಜ್ ಕುಮಾರ್ – ಪುಟ್ಟಣ್ಣ ಕಣಗಾಲ್ ರಂತಹ ಪರ್ವತ ಸ್ವರೂಪಿ ಮೇರು ವ್ಯಕ್ತಿಗಳು ನಾಲ್ಕು ಜನರಿಗೆ ಮಾದರಿಯಾಗುವ ಎಲ್ಲ ವೇದಿಕೆ – ಅವಕಾಶ ಕಲ್ಪಿಸಿ ಕೊಟ್ಟಾಗಲೂ, ಅವರ ಎತ್ತರಕ್ಕೆ ಬೆಳೆದು ಗುರುವನ್ನು ಮೀರಿಸಿದ ಶಿಷ್ಯರೆಷ್ಟು ಜನ ?! ಮತ್ತೆ ಹೊಸ ಶಿಷ್ಯ ಪರಂಪರೆಯನ್ನು ಬೆಳೆಸಿದವರೆಷ್ಟು ಜನ ?! ಇತ್ತೀಚೆಗೆ ಕೆಲ ಸದಭಿರುಚಿಯ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಎನ್ನಬಹುದು.

ಹಿಂದಿ – ಮಲಯಾಳಿ – ಇಂಗ್ಲೀಷ್ ಚಿತ್ರಗಳ ಗುಣಮಟ್ಟಕ್ಕೆ ಹೋಲಿಸಿಕೊಂಡು, ಅದರಲ್ಲಿಯೂ ಕೊಂಕು ಹುಡುಕುವುದು ಬೇಡ. ಲಾಭದ ಉದ್ದೇಶಕ್ಕೆ ಪ್ಯಾನ್ ಇಂಡಿಯಾ (ಅಖಿಲ ಭಾರತ) ಚಿತ್ರ ನಿರ್ಮಾಣ ಸಹ ಇನ್ನೊಂದು ಹೊಸ ಬೆಳವಣಿಗೆ. ಒಂದು ರಾಜ್ಯದ ಪ್ರೇಕ್ಷಕರ ಅಭಿಲಾಷೆ ಪೂರೈಸಲು ಹೋಗಿ ಇಷ್ಟೆಲ್ಲಾ ಅಧ್ವಾನಗಳಾಗಿರುವಾಗ, ೪-೬ ರಾಜ್ಯಗಳ ಪ್ರೇಕ್ಷಕರನ್ನು ತಣಿಸಲು ಹೋಗಿ, ಚಂದನವನಕ್ಕೆ ಇನ್ನೇನು ಕಾದಿದೆ ಕಾದು ನೋಡಬೇಕು. 

ಕನ್ನಡ ಚಲನ ಚಿತ್ರಗಳ ವ್ಯಾಪ್ತಿ ಹಾಗೂ ಪ್ರಭಾವ ಅರಿತಿದ್ದ ಅಂದಿನ ನಟ – ನಿರ್ದೇಶಕ – ನಿರ್ಮಾಪಕ – ವಸ್ತ್ರ ವಿನ್ಯಾಸಕ – ನೃತ್ಯ ನಿರ್ದೇಶಕ ಹೀಗೆ ಪ್ರತಿಯೊಬ್ಬರೂ ರಾಜ್ಯದ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು, ತಾವು ತಯಾರಿಸುವ ವಸ್ತು ಬೀರಬಹುದಾದ ಪರಿಣಾಮಗಳ ಅರಿವಿನಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ಜನ ಬಳಕೆ – ಜನ ಪ್ರಿಯತೆ ಆಧರಿಸಿ ಅವನ ಮೇಲೆ ಸಾಮಾಜಿಕ ಜವಾಬ್ದಾರಿ ನಿಗದಿಯಾಗುತ್ತದೆ. ಹಸಿವಾದರೆ ಹೇಳಲೂ ಆಗದ ಮಗು, ಮುಂದೆ ಇಡೀ ಮನೆಯ ಜವಾಬ್ದಾರಿ ಹೊರುವ ಅಪ್ಪ/ ಅಮ್ಮನಾಗುವುದಿಲ್ಲವೆ ? ಹಾಗೆ, ತನ್ನ ಸ್ಥಾನ ಅರಿತು ಅದಕ್ಕೆ ತಕ್ಕುದಾದ ವರ್ತನೆ ಮಾಡುವವನು ಮಾತ್ರ ಮನುಷ್ಯ ಜಾತಿಯೊಂದಿಗೆ ಗುರುತಿಸಿಕೊಳ್ಳಲು ಸಾಧ್ಯ. 

ಇಂತಹ ಇಲ್ಲಗಳ ಮಧ್ಯೆ ಹೌದು ಎಂಬ ಸಾಧ್ಯತೆಯನ್ನು ಉಳಿಸಿಕೊಂಡು ಬಂದಿರುವುದು ಬರಹ ಮಾಧ್ಯಮ. ದೈನಿಕ – ಸಾಪ್ತಾಹಿಕ – ಮಾಸಿಕ – ಅಂತರ್ಜಾಲ ಬರಹ ಮಾಧ್ಯಮಗಳು, ಕನ್ನಡ ಪದಗಳಿಗೆ ದೈನಂದಿನ ಸಂಜೀವಿನಿಯ ಗುಟುಕು ನೀಡುತ್ತಿವೆ. ಆದರೆ, ಅವರಲ್ಲೂ ಸಹ ಅನೇಕರು ಬೇರೆ ಭಾಷೆಯ ಮಾಹಿತಿಯನ್ನು, ಅನುವಾದಿಸಿ ಉಣಬಡಿಸುವ ಕಾರ್ಯಕ್ಕೆ ಒತ್ತು ಕೊಟ್ಟು, ಸೃಜನಾತ್ಮಕ ಸ್ವಯಂ ಸೃಷ್ಟಿಗೆ ಪ್ರಯತ್ನ ಕಡಿಮೆ ಮಾಡಿರುವುದು ಕಳವಳಕಾರಿ ವಿಷಯ. 

ಮೇಲಿನ ಎಲ್ಲ ಕಂಡಿಕೆಗಳಲ್ಲಿ, ಕೇವಲ ಋಣಾತ್ಮಕ ಅಂಶಗಳ ಬಗ್ಗೆ ಮಾತ್ರ ಬರೆದು, ನಮ್ಮ ರಾಜ್ಯದಲ್ಲಿ ಕನ್ನಡ ಕುರಿತಾದ ಧನಾತ್ಮಕ ಅಂಶಗಳೇ ಇಲ್ಲ ಎಂಬಂತೆ ಮಾತಾಡುತ್ತಿರುವ ನನ್ನ ಬಗ್ಗೆ ನಿಮಗೆ ಮುನಿಸು ಬರಬಹುದು. ಆದರೆ, ಈ ಬರಹ ಕಹಿ ಔಷಧಿ ಎಂದು ಭಾವಿಸಿ ಬರೆದಿದ್ದೇನೆ. ಕಹಿ ಹೌದು, ಆದರೆ, ಬಾಧಿತ ರೋಗಿ ಕುಡಿದರೆ, ಸುಧಾರಿಸಿಯಾನು ಎಂಬ ಆಶಯ. ಕನ್ನಡದ ಸಿಹಿ ಖಾದ್ಯಗಳಿಗೆ ಕೊರತೆಯೇ ?! ಅಂತಹ ಸಿಹಿ ಕನ್ನಡ ಖಾದ್ಯವನ್ನೂ ಮುಂದೊಮ್ಮೆ ತಯಾರಿಸಿ ನಿಮಗೆ ಉಣಬಡಿಸುವ ಪ್ರಯತ್ನ ಮಾಡುವೆ, ಕಾಯಿರಿ. 

ಈ ರೀತಿ ನವೆಂಬರ್ ಬಂದಾಗ ಜಾಗೃತವಾಗುವ ನಮ್ಮೀ ಸ್ಮಶಾನ ವೈರಾಗ್ಯ ಸದ್ರೂಪಿ ಆಂಗ್ಲ ವೈರಾಗ್ಯ, ಡಿಸೆಂಬರ್ (ಮಾಗಿ) ಚಳಿಯ ಪ್ರಾರಂಭದ ದಿನಗಳಲ್ಲೇ ಉದುರಿ ಹೋಗುವುದು ಗೊತ್ತಿರುವ ಸತ್ಯ. ಆದಾಗ್ಯೂ ಮತ್ತೆ ಮತ್ತೆ ಪ್ರಯತ್ನಿಸೋಣ ! ಅಂತಹ ಸರಳ ಪ್ರಯತ್ನಗಳಿಗೆ ಕೆಲ ಸಲಹೆಗಳನ್ನು ಪಟ್ಟಿ ಮಾಡುವ ಪುಟ್ಟ ಪ್ರಯತ್ನ ಇಲ್ಲಿದೆ. 

ನಮ್ಮ ದಿನಬಳಕೆ ಭಾಷೆಯನ್ನು ಜಾಗೃತವಾಗಿ ಆಗಾಗ ಪರಿಶೀಲಿಸುವುದು. ಅದರಲ್ಲಿ ಬಳಸುವ ಆಂಗ್ಲ ಪದಗಳಿಗೆ ಸಮ ಅರ್ಥದ – ದ್ವಂದ್ವಕ್ಕೆ ಅವಕಾಶ ನೀಡದ ಕನ್ನಡ ಪದಗಳನ್ನು ಹುಡುಕಿ ಬಳಸುವುದು. 

ಕನ್ನಡ ಪದ ಬಳಕೆ ಬಗ್ಗೆ ತುಂಬಾ ಕಟ್ಟು ನಿಟ್ಟು ಮಾಡಲು ಹೋದರೆ, ಜನವರಿ ಜಿಮ್ ರೆಸಲ್ಯೂಶನ್ (Gym Resolution) ಗಳಂತೆ ನವೆಂಬರ್ ಮೊದಲ  ವಾರದಲ್ಲೇ ನಮ್ಮ ಕನ್ನಡ ಬಲೂನು ಠುಸ್ ಆದೀತು ಜೋಕೆ ! ಹೀಗಾಗಿ ನಿಮ್ಮ ಪ್ರಯತ್ನ ನಿಧಾನ ಮತ್ತು ನಿರಂತರವಾಗಿರಲಿ. 

ಆಗಾಗ ಯಾವುದಾದರೂ ವಿಷಯದ ಬಗ್ಗೆ ಏನಾದರೂ ಮನ ತೋಚಿದ್ದನ್ನು ಕನ್ನಡದಲ್ಲಿ ಬರೆಯುವ ರೂಢಿ ಮಾಡಿಕೊಳ್ಳುವುದು. 

ಓದಿಗೆ ದಿನದ ಒಕ್ಕಾಲಾದರೂ ಮೀಸಲಿಡುವುದು ಸೂಕ್ತ. ನವ ಕಾಲದ ನಾವುಗಳು ನವ್ಯ – ನವೋದಯವನ್ನೂ ಸಹ ಓದದಿದ್ದಲ್ಲಿ, ನಮ್ಮನ್ನು ನಾವು ನಿಯೋ (Neo) ಕನ್ನಡಿಗರು ಎಂದುಕೊಳ್ಳುವುದಾದರೂ ಹೇಗೆ ? ನಿಯೋಗನ್ನಡ ಸಾಹಿತ್ಯ ಸೃಷ್ಟಿಸುವುದಾದರೂ ಹೇಗೆ ?! ಹಳೆಗನ್ನಡವಂತೂ ಈಗಾಗಲೇ ವಯೋಸಹಜವಾಗಿ ಕಳೆತಿದೆ. ಆದರೆ, ಕಳೆತ ಬಾಳೆಯಷ್ಟೇ ಹಳೆಗನ್ನಡ ಸವಿಯಾಗಿದೆ ಎಂದರಿತು, ಕೊಳೆಯುವ ಮುನ್ನ ಎಲ್ಲರೂ ಇಷ್ಟಪಟ್ಟು ಸವಿಯುವ ಖಾದ್ಯವಾಗಿ ಪರಿವರ್ತಿಸುವ ಜವಾಬ್ದಾರಿ, ಹಳಗನ್ನಡ ಮತ್ತು ಹೊಸಗನ್ನಡ ಎರಡನ್ನೂ ಬಲ್ಲ ಭಾಷಾ ಬಾಣಸಿಗರ ಮೇಲಿದೆ. ಈ ರೀತಿಯ ವಿವಿಧ ಸ್ವಾದದ ಭಾಷಾ ಖಾದ್ಯಗಳು ಮಾತ್ರ ಅಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಓದಿನ ಕಡೆ ಸೆಳೆಯುವ ಸಾಮರ್ಥ್ಯ ಹೊಂದಿವೆ. 

ಮನೆಯವರ ಜೊತೆ – ಸ್ನೇಹಿತರ ಜೊತೆ ತಿಂಗಳಿಗೊಮ್ಮೆಯಾದರೂ ಬಹುತರ ಕನ್ನಡದಲ್ಲಿ ಹರಟುವ ಸ್ಪರ್ಧೆ ರೂಪದ ಚಟುವಟಿಕೆ ಮಾಡುವುದು. 

ಮಕ್ಕಳೊಂದಿಗೆ ಕನ್ನಡ ಪದಗಳ ಸಮಾನಾರ್ಥಕ ಪದಗಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು. 

ಆಂಗ್ಲ ಪದಗಳ ಸಮ ಅರ್ಥದ ಕನ್ನಡ ಪದ ಹುಡುಕುವ ಸ್ಪರ್ಧೆ ಮಾಡುವುದು. 

ಮುಖ್ಯವಾಗಿ ಬೆಂಗಳೂರಿನಲ್ಲಿ ಅಂಗಡಿ – ಬಸ್ಸು – ಆಟೋ – ಮೆಟ್ರೋ – ಮಾಲು (ಬಹುಮಹಡಿ ಅಂಗಡಿಗಳು) ಎಲ್ಲ ಕಡೆ ಕನ್ನಡದಿಂದ ಮಾತು ಪ್ರಾರಂಭಿಸುವ ಕನಿಷ್ಠ ಆತ್ಮಾಭಿಮಾನ ರೂಢಿಸಿಕೊಳ್ಳೋಣ. ಕನ್ನಡದ್ದೇ ನೆಲದಲ್ಲಿ ಇನ್ನೊಬ್ಬ ವ್ಯಕ್ತಿಯ ಜೊತೆ ಕನ್ನಡದಲ್ಲಿ ಮಾತು ಪ್ರಾರಂಭಿಸಿದರೆ, ನನ್ನನ್ನು ಭಾಷಾ ಉಗ್ರಗಾಮಿ (Language Extremist) ಅಂತ ತಿಳಿದು , ನನ್ನ ಬಗ್ಗೆ ಅಪಾರ್ಥ ಮಾಡಿಕೊಂಡಾನು ಎಂಬುದು ನಿಮ್ಮ ಒಳ್ಳೆಯತನ ಅಥವಾ ಭಾಷಾ ಸಹಿಷ್ಣುತೆಗೆ ಉದಾಹರಣೆಯಲ್ಲ. ಬದಲಿಗೆ ಅಭಿಮಾನ ಶೂನ್ಯತೆಯ ಪರಾಕಾಷ್ಠೆ. ನಿಮಗೆ ಇಂಗ್ಲಿಷ್ ತಿಳಿದಿರುವುದಕ್ಕೂ, ಕನ್ನಡ ಮಾತಾಡದೆ ಇರುವುದಕ್ಕೂ ಯಾಕೆ ಸಂಬಂಧ ಕಲ್ಪಿಸುವುದು ? ನಮ್ಮ ರಾಜ್ಯ, ನಮ್ಮ ಊರು. ನಾನು ಕನ್ನಡದಲ್ಲಿ ಮಾತ್ರ ಮಾತು ಪ್ರಾರಂಭಿಸುತ್ತೇನೆ. ನಿನಗೆ ಕನ್ನಡ ಬರದಿದ್ದರೆ, ನಿನಗೆ ಅರ್ಥವಾಗುವ ಭಾಷೆಯಲ್ಲಿ ಮಾತಾಡುವ ಬಹು ಭಾಷಾ ಪಾಂಡಿತ್ಯ ನನ್ನಲ್ಲಿದೆ ಎಂದು ನಂತರ ತೋರಿಸೋಣ. ಆದರೆ, ಕನ್ನಡ ನೆಲ ಜಲ ಆಹಾರ ಬಳಕೆಯಲ್ಲಿರುವ ವ್ಯಕ್ತಿಗೆ, ಒಂದೆರಡು ಕನ್ನಡ ಪದಗಳನ್ನು ಸಹ ಕಿವಿಗೆ ಹಾಕದೆ ಇರುವಷ್ಟೂ ಉದಾರತೆ ಬೇಡ. 

# ಬೆಂಗಳೂರು ದೇಶದ ತಂತ್ರಜ್ಞಾನ ನಗರಿಯಾಗಿ ಬೆಳೆದ ಒಂದು ಅನುಕೂಲವೆಂದರೆ, ಸ್ಥಳೀಯ ಭಾಷೆಗಳನ್ನು ಕಂಪ್ಯೂಟರ್ ಗೆ ಅಳವಡಿಸಲು ಅನುವಾಗುವಂತೆ ನಡೆಸಿದ ಭಾರತೀಯ ಭಾಷೆಗಳ ಯುನಿಕೋಡ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ದೊರೆತದ್ದು. ಅಂತಹ ಕನ್ನಡ ಮನಸ್ಸಿನ ತಂತ್ರಜ್ಞರು , ಕನ್ನಡ ಭಾಷೆಯ ಋಣ ತೀರಿಸಲು , ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯನ್ನು ಸರಳಗೊಳಿಸಲು ಪಟ್ಟ ಪರಿಶ್ರಮ ಈಗ ಫಲ ನೀಡುತ್ತಿದೆ. ಜಗತ್ತಿನ ಎಲ್ಲ ಜಾಲತಾಣ / ವೇದಿಕೆಗಳಲ್ಲಿ ಕನ್ನಡ ಅಧಿಸ್ಥಾಪಿಸಲು (Install) ಅನುವಾಗುವ ಯುನಿಕೋಡ್ ಕನ್ನಡ ಲಿಪಿ, ನಿಮ್ಮ ಮಾತನ್ನು ಲಿಪಿಗಳಾಗಿ ಬರೆಯುವ (Speech to Text) ತಂತ್ರಜ್ಞಾನ, ದೇಶದಲ್ಲಿ ಯಾವುದೇ ಹೊಸ ತಂತ್ರಜ್ಞಾನದ ಆ್ಯಪ್ ಬಂದರೂ ಸ್ಥಳೀಯ ಭಾಷೆಯಲ್ಲಿ ಹೊರತರಲು ಯೋಜಿಸಿದಲ್ಲಿ ಕನ್ನಡ ಪ್ರಥಮ ಆಯ್ಕೆಯಾಗಲು ಎಲ್ಲ ಅನುಕೂಲಗಳು… ಇಷ್ಟೆಲ್ಲವೂ ಸಾಧ್ಯವಾಗಿದೆ. ಈ ಸೌಲಭ್ಯವನ್ನು ಹೇರಳವಾಗಿ ಹಾಗೂ ಜವಾಬ್ದಾರಿಯುತವಾಗಿ ಬಳಸಿ, ಬೆಳೆಸಿ ಸಂಪದ್ಭರಿತಗೊಳಿಸುವ ಜವಾಬ್ದಾರಿ ನಮ್ಮಗಳ ಮೇಲಿದೆ.  

ಸಾಮಾಜಿಕ ಮಾಧ್ಯಮ ಎಲ್ಲೆಡೆ ಹಾಸು ಹೊಕ್ಕಾಗಿರುವ ಈ ದಿನಗಳಲ್ಲಿ, ಈ ಮಾಧ್ಯಮದಲ್ಲಿ ಸಾಧ್ಯವಾದಷ್ಟು ಕನ್ನಡ ಬಳಕೆ ನಮ್ಮ ಮೂಲಭೂತ ಜವಾಬ್ದಾರಿಯಂತಾಗಬೇಕಿದೆ. ಇಂಗ್ಲೀಷು ಅಕ್ಷರ ಬಳಸಿ ಕನ್ನಡ ವಾಕ್ಯ ರಚನೆ ಮಾಡಿ ಬಳಸುವುದು, ಗುಲಾಬ್ ಜಾಮೂನನ್ನು ನೀರಲ್ಲಿ ಅದ್ದಿ ತಿಂದಂತೆ. ನೀರಸ – ಪೇಲವ. ಎಷ್ಟೋ ಬಾರಿ ನೀವು ಬರೆದ ಕಂಗ್ಲೀಶು ಪದವನ್ನು ಆ ಬದಿಯವರು ಬೇರೇನೋ ಅರ್ಥ ಮಾಡಿಕೊಂಡಿರುತ್ತಾರೆ. eshtu : ಇಷ್ಟು / ಎಷ್ಟು, pakka : ಪಕ್ಕ / ಪಕ್ಕಾ ?. ಆದ ಅಪಾರ್ಥವನ್ನು, ಗೋಲ್ ಮಾಲ್ ರಾಧಾಕೃಷ್ಣ ಚಿತ್ರದ ನಟ ಉಮೇಶ್ ರಂತೆ ಪರಿಹರಿಸುವ ಪಾಡು ನಿಮಗೇಕೆ ಹೇಳಿ ? 

ಕೊನೆಯದಾಗಿ, ಒಂದು ಕಹಿ ಗುಳಿಗೆಯನ್ನು ನಾವು ನುಂಗಲೇಬೇಕಿದೆ. ಅದೆಂದರೆ, ಹೊರ ದೇಶದಿಂದ ನಮಗೆ ಪರಿಚಯಿಸಲಾದ ವಸ್ತುಗಳ ಹೆಸರು ಅವುಗಳ ಮೂಲ ಹೆಸರಿಂದ ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಮೊಬೈಲ್, ಕಂಪ್ಯೂಟರ್, ಲ್ಯಾಂಡ್ ಲೈನ್, ಸ್ಕ್ರೀನ್ ..ಇತ್ಯಾದಿ. ಇಂತಹ ಪದಗಳನ್ನು ಕನ್ನಡಕ್ಕೆ ಅನುವಾದಿಸಿ, ಮಾತಾಡಲು ಹೋದರೆ ಜೀವನ ಸ್ವಲ್ಪ ದುಸ್ತರವಾದೀತು. ಇಷ್ಟೆಲ್ಲಾ ಇಂಗ್ಲೀಷ್ ವ್ಯಾಮೋಹದ ಮಧ್ಯೆಯೂ, ನಮ್ಮದೇ ದೇಶದಲ್ಲಿ ಸೃಷ್ಟಿಯಾದ ವಸ್ತುಗಳನ್ನು ನಾವು ಏನೇ ಮಾಡಿದರೂ ಬೇರೆ ಭಾಷೆಯಲ್ಲಿ ಬಳಸಲ್ಲ ಎಂದು ನಿಮಗೆ ತಿಳಿದಿದೆಯೇ ?! ಎತ್ತಿನ ಗಾಡಿಯನ್ನು ನೀವು ಎಂದಾದರೂ ಬುಲ್ಲಕ್ ಕಾರ್ಟ್ ಎಂದು ಕರೆದಿದ್ದೀರಾ ?! ಪದ – ‘ ಪದಾರ್ಥ ‘ ನಿಷ್ಪತ್ತಿಯ ಗಮ್ಮತ್ತೇ ಅದು. ಈ ಸರಳ ಸಮೀಕರಣ ಅರ್ಥ ಮಾಡಿಕೊಂಡರೆ, ಯಾವುದಕ್ಕೆ ಕನ್ನಡ – ಯಾವುದಕ್ಕೆ ಇಂಗ್ಲೀಷು ಬಳಸಬೇಕು ಎಂಬ ಗೊಂದಲ ತಾನಾಗಿಯೇ ಕಡಿಮೆಯಾಗುತ್ತದೆ. ಇನ್ನು ಕಾರು, ಬಸ್ಸು, ರೈಲುಗಳು ನಮ್ಮ ಪದಕೋಶ ಸೇರುವಷ್ಟು ಅರ್ಹತೆ ಪಡೆದಿವೆ. ಇಂತಹ ವಿದೇಶೀ ಮೂಲದ ಪದಗಳು ನಮ್ಮ ಭಾಷೆಯ ಭಾಗವಾಗುವುದು ಅನಿವಾರ್ಯ ಕರ್ಮವಿದ್ದಂತೆ. ಒಪ್ಪಿಕೊಳ್ಳದೆ ವಿಧಿಯಿಲ್ಲ. ಅತಿ ಮಡಿವಂತಿಕೆ ಭಾಷೆ ಮಡಿಯಲು ಕಾರಣವಾಗೋದು ಬೇಡ. 

ಇವು ನಾವು ಪಾಲಿಸಬಹುದಾದ ಹಲವಾರು ಸಲಹೆಗಳಲ್ಲಿ ಕೆಲವಾರು. ಇವಿಷ್ಟನ್ನು ನಾವು ಕಡಿಮೆ ಪ್ರಯತ್ನದಿಂದ ಸಹ ರೂಢಿಸಿಕೊಳ್ಳಬಹುದು ಅಂತ ನನ್ನ ಭಾವನೆ. ಕನ್ನಡದೆಡೆಗಿನ ನಮ್ಮ ಭಾವನೆ – ಪ್ರೀತಿ, ನಮ್ಮ ಮಗುವಿನ ಕಡೆಯಿರುವಷ್ಟೆ ನವಿರು ಹಾಗೂ ನಿಷ್ಕಲ್ಮಶವಾಗಿರಲಿ. 

ಇಂತಿಪ್ಪ ಮೇಲಿನ ಸಲಹೆಗಳು ಕೆಲವರಿಗೆ ಬಾಲಿಶ ಅನ್ನಿಸಬಹುದು. ಆದರೆ ಅಮ್ಮ ಅಡುಗೆ ಮಾಡುವಾಗ ಹೊಟ್ಟೆ ತುಂಬಾ ತಿಂದು ಕೈ ತೊಳೆದು ತಟ್ಟೆ ಅಲ್ಲೇ ಬಿಟ್ಟು ಎದ್ದು ಹೋಗಿ ಉಡಾಫೆ ಮಾಡಿದ ಹುಡುಗ – ಹುಡುಗಿಯರು, ಕೆಲವೇ ವರ್ಷಗಳಲ್ಲಿ ವಿದ್ಯಾರ್ಥಿ ನಿಲಯ ಸೇರಿದ ಅಥವಾ ಮದುವೆ ಆದ ಒಂದೇ ವಾರಕ್ಕೆ, ಅಡುಗೆ ಸವಿಯುವುದಕ್ಕಿಂತ, ಅಡುಗೆ ತಯಾರಿಸುವ ವಿದ್ಯೆಯ ಅವಶ್ಯಕತೆ ಎಷ್ಟಿತ್ತು ಎಂದು ಜ್ಞಾನೋದಯ ಮಾಡಿಕೊಳ್ಳುವ ಹಾಗೆ, ಆಂಗ್ಲ ಮಾಧ್ಯಮ ಶಿಕ್ಷಣದಲ್ಲೇ ಮಿಂದು – ತಿಂದು – ಹೊದ್ದು ಮಲಗುತ್ತಿರುವ ನಮ್ಮ ಕಂದಮ್ಮಗಳು ಕನ್ನಡಮ್ಮನ ಕೈ ರುಚಿ ಮರೆಯುತ್ತಿವೆ. ಇಲ್ಲಿ ಕಂದಮ್ಮಗಳು ಅಂದರೆ ೫ ವರ್ಷದ ಒಳಗಿನ ಮಕ್ಕಳೇ ಆಗಬೇಕೆಂದಿಲ್ಲ, ೧೫-೨೦ ವರ್ಷದವರೆಗಿನ ಮಕ್ಕಳೂ ಸಹ ಕನ್ನಡ ಕಲಿಕೆಯಲ್ಲಿ ಕೈ ತುತ್ತಿಗೆ ಆಶ್ರಯ ಪಡೆಯುವಷ್ಟು, ಅಸಹಾಯಕ ಸ್ಥಿತಿಯಲ್ಲಿವೆ. ಆ ಮಕ್ಕಳಿಗೆ ಆ ಕೈ ರುಚಿಯ ಸವಿ ಹಾಗೂ ಸವಿಯ ಹಿಂದಿನ ಪರಿಶ್ರಮ ಎರಡನ್ನೂ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎಷ್ಟು ದಿನ ಸ್ವಿಗ್ಗಿ ಅಂಕಲ್ ಕೈ ಹಿಡಿದಾನು ?! 

ಇಂತಹ ಹತ್ತು ಹಲವು ಖರ್ಚಿಲ್ಲದ ಚಟುವಟಿಕೆಗಳು ನಮನ್ನು – ನಮ್ಮ ಭಾಷೆಯನ್ನು ಜೀವಂತವಾಗಿಡಲು ಸಹಾಯ ಮಾಡಬಲ್ಲವು ಅಂತ ನನ್ನ ಅನಿಸಿಕೆ. 

ನನ್ನ ಕಚೇರಿಯಲ್ಲಿ ನನ್ನ ಪಕ್ಕ ಕೂರುವ ಬಿಹಾರ ಮೂಲದ, ಆಂಗ್ಲ ಮಾಧ್ಯಮ ಓದಿದ – ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ – ರಾಷ್ಟ್ರ ಮಟ್ಟದ ಪ್ರತಿಷ್ಠಿತ ಶಾಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ – ತಿಂಗಳಿಗೆ ೩ ಲಕ್ಷ ಸಂಬಳ ಪಡೆಯುವ ಹುಡುಗ, ತನ್ನ ಮಾತೃ ಭಾಷೆ ಭೋಜಪುರಿಯಲ್ಲಿ ತಾನು ಪದಗಳ ಅಂತಾಕ್ಷರಿ ರೂಪದ ಸ್ಪರ್ಧೆ ಆಡುವಷ್ಟು ಮಾತೃ ಭಾಷಾ ಪ್ರವೀಣ ಅಂತ ತೋರಿಸಿಕೊಟ್ಟಾಗ, ನನಗೆ ನನ್ನ ಮಾತೃ ಭಾಷೆಯೆಡೆಗಿನ ಪೊಳ್ಳು ಅಭಿಮಾನದ ಬಗ್ಗೆ ಖೇದವಾಯಿತು ಮತ್ತು ಈ ಬರಹಕ್ಕೆ ಪ್ರೇರಣೆಯಾಯಿತು. ಮುಂದೊಮ್ಮೆ ನಾನೂ ಅವನಂತೆ ನನ್ನ ಮಾತೃ ಭಾಷೆಯ ಮೇಲೆ ಹಿಡಿತ ಸಾಧಿಸುವೆನೆಂದು ಆಶಿಸುತ್ತಾ, ‘ಕಂಪ್ಲೀಟ್’ ಕನ್ನಡಿಗನಾಗುವ ಭರವಸೆಯೊಂದಿಗೆ ಈ ಬರಹಕ್ಕೆ ವಿರಾಮ ನೀಡುತ್ತಿದ್ದೇನೆ. 

‍ಲೇಖಕರು Admin

November 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This